ಪುರಾಣವನ್ನು ಇತಿಹಾಸದಂತೆ ನೋಡುವ, ಆ ಇತಿಹಾಸವನ್ನು ಜನಸಾಮಾನ್ಯರ ಬದುಕಿನ ರೀತಿ ನೀತಿಯಂತೆ ಕಾಣುವ ಅರ್ಥೈಸುವ ಸಾಹಿತ್ಯದ ಅನುಸಂಧಾನ ಪರಂಪರೆ ನಮ್ಮಲ್ಲಿ ಬಹು ಹಿಂದಿನಿಂದಲೂ ಇದೆ. ಮಹಾಭಾರತ, ಭಾಗವತಗಳ ಪ್ರಸಂಗಗಳನ್ನು ಹೀಗೆ ನೋಡಿದ ಕಥಾಪ್ರಪಂಚವನ್ನು ಹಿಂದಿಯಲ್ಲಿ ನಾವು ಮೊದಲು ನೋಡಿದ್ದು ಕೆ.ಎಂ.ಮುನ್ಷಿಯವರ ಕೃಷ್ಣಾವತಾರ ಸರಣಿ ಬರೆಹಗಳಲ್ಲಿ. ಅದೇ ರೀತಿ ಎಸ್.ಎಲ್.ಭೈರಪ್ಪನವರು ‘ಪರ್ವ’ ಕಾದಂಬರಿಯಲ್ಲಿ ಕೃಷ್ಣ ಸಹಿತವಾಗಿ ವ್ಯಾಸನ ಪಾತ್ರ ಪ್ರಪಂಚದ ಪೌರಾಣಿಕ ಕವಚವನ್ನು ಕಳಚಿಹಾಕಿ ಸಾಮಾಜಿಕ ನೆಲೆಯಲ್ಲಿ ಚಿತ್ರಿಸಿದರು. ಅಮೀಶ್ ಅವರು ಇಂಗ್ಲಿಷಿನಲ್ಲಿ ಶಿವನನ್ನು ಒಬ್ಬ ಸಾಮಾನ್ಯ ನರನಂತೆ ನೋಡಿ ಆತ ದೈವತ್ವಕ್ಕೆ ಏರಿದ ಬಗೆಯನ್ನು ಕಾದಂಬರಿ ರೂಪದಲ್ಲಿ ನೀಡಿದ್ದಾರೆ. ಅವರ ಮೊದಲ ಪುಸ್ತಕ ‘ಮೆಲೂಹದ ಮೃತ್ಯುಂಜಯ’ ಲೇಖಕರಿಗೆ ಅಪಾರವಾದ ಓದುಗರನ್ನು ಒದಗಿಸಿಕೊಟ್ಟಿತು. ಹಲವು ಭಾಷೆಗಳಿಗೆ ಅದು ಅನುವಾದವೂ ಆಯಿತು. ಅದರ ಮುಂದುವರಿದ ಭಾಗವೆಂಬಂತೆ ಅಮೀಶ್ ‘ನಾಗಾ ರಹಸ್ಯ’ ಎಂಬ ತಮ್ಮ ಎರಡನೆಯ ಕಾದಂಬರಿಯನ್ನು ಬರೆದರು. ೨೦೧೧ರಲ್ಲಿ ಪ್ರಕಟವಾದ ಅತ್ಯುತ್ತಮ ಐದು ಕೃತಿಗಳಲ್ಲಿ ಇದು ಒಂದೆಂದು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದಿದೆ. ಎಸ್. ಉಮೇಶ್ ಅವರು ಇದನ್ನು ಕನ್ನಡಕ್ಕೆ ತಂದಿರುವರು. ದಕ್ಷ ಪ್ರಜಾಪತಿ ಅಖಿಲಭಾರತ ಮಹಾರಾಜ. ಸೂರ್ಯವಂಶಿಗಳು ಮತ್ತು ಚಂದ್ರವಂಶಿಗಳು ಬೇರೆಬೇರೆ ಭಾಗಗಳಲ್ಲಿ ಆಡಳಿತವನ್ನು ನಡೆಸುತ್ತಿದ್ದರು. ಅವರೆಲ್ಲ ದಕ್ಷನಿಗೆ ಅಧೀನರಾಗಿದ್ದರು. ಸತಿ ದಕ್ಷನ ಮಗಳು. ಆಕೆಗೆ ಚಂದನಧ್ವಜ ಎಂಬವನೊಂದಿಗೆ ಮದುವೆಯಾಗಿತ್ತು. ಅವರಿಗೆ ಜನಿಸಿದ ಪುತ್ರನೇ ಗಣೇಶ. ಗಣೇಶ ನಾಗವಂಶಜನಾಗಿ ಜನಿಸುತ್ತಾನೆ. ಕುರೂಪಿಯಾಗಿರುತ್ತಾನೆ. ದಕ್ಷನ ರಾಜ್ಯದಲ್ಲಿ ನಾಗಾಗಳು ಇರುವಂತಿರಲಿಲ್ಲ. ಈ ಕಾರಣಕ್ಕಾಗಿ ಗಣೇಶ ಹುಟ್ಟುತ್ತಲೇ ಅವನನ್ನು ದಕ್ಷ ಗಡಿಪಾರು ಮಾಡುತ್ತಾನೆ. ಈ ವಿಷಯ ಸತಿಗೆ ಗೊತ್ತಿರುವುದಿಲ್ಲ. ನಿನ್ನ ಮಗು ಹುಟ್ಟುತ್ತಲೇ ಸತ್ತುಹೋಗಿದೆ ಎಂದು ದಕ್ಷ ಸುಳ್ಳುಹೇಳಿರುತ್ತಾನೆ. ಮಗು ಹುಟ್ಟಿದ ದಿನವೇ ಚಂದನಧ್ವಜ ನಿಗೂಢವಾಗಿ ಸಾವನ್ನಪ್ಪುತ್ತಾನೆ. ಬಳಿಕ ದಕ್ಷನು ತನ್ನ ಸಾಮ್ರಾಜ್ಯವನ್ನು ಬಲವಾಗಿ ಇಟ್ಟುಕೊಳ್ಳಲು ಶಿವನನ್ನು ತನ್ನಬಳಿಗೆ ಕರೆಯಿಸಿಕೊಳ್ಳುತ್ತಾನೆ. ಆತನಿಗೆ ಸತಿಯನ್ನು ಕೊಟ್ಟು ವಿವಾಹ ಮಾಡುತ್ತಾನೆ. ತನ್ನ ಸ್ನೇಹಿತನೂ ಸಹೋದರ ಸಮಾನನೂ ಆದ ಬೃಹಸ್ಪತಿಯನ್ನು ನಾಗಾಗಳು ಕೊಂದಿದ್ದಾರೆ ಎಂದು ಶಿವ ತಿಳಿಯುತ್ತಾನೆ. ಹೀಗಾಗಿ ನಾಗಾಗಳ ಮೇಲೆ ಶಿವನಿಗೆ ಅಗಾಧವಾದ ಕೋಪ. ನಾಗಾಗಳ ರಹಸ್ಯವನ್ನು ಭೇದಿಸಲು ಆತ ಹೊರಡುತ್ತಾನೆ. ಕೊನೆಯಲ್ಲಿ ಗಣೇಶ ಮತ್ತು ಕಾಳಿಯ ಭೇಟಿಯಾಗುತ್ತದೆ. ಗಣೇಶನಿಗೆ ತನ್ನ ಜನ್ಮರಹಸ್ಯ ತಿಳಿದಿರುತ್ತದೆ. ಹೀಗಾಗಿ ಆತ ಸತಿಯನ್ನು ಅಪಾಯದಿಂದ ಪಾರುಮಾಡುತ್ತಾನೆ. ಅಲ್ಲದೆ ಸತಿ ಮತ್ತು ಶಿವನ ಪುತ್ರ ಕಾರ್ತಿಕನನ್ನು ಸಿಂಹದಿಂದ ರಕ್ಷಿಸುತ್ತಾನೆ. ಗಣೇಶನ ರಹಸ್ಯ ಶಿವನಿಗೂ ಗೊತ್ತಾಗಿ ಅನಿರೀಕ್ಷಿತವಾಗಿ ಕಾಶಿಗೆ ಬಂದ ದಕ್ಷನಿಗೆ ನೇರವಾಗಿ ಸತ್ಯದ ಮುಖಾಮುಖಿ ಮಾಡಿಸುತ್ತಾನೆ. ಸತಿ ತಂದೆಯ ಮೇಲೆ ಕೋಪಗೊಳ್ಳುತ್ತಾಳೆ. ತನ್ನ ಗಂಡನ ಹಂತಕ ತನ್ನ ತಂದೆಯೇ ಎಂಬುದು ಅವಳಿಗೆ ಗೊತ್ತಾಗುತ್ತದೆ. ದಕ್ಷ ಅಪಮಾನಿತನಾಗಿ ತನ್ನ ರಾಜ್ಯ ದೇವಗಿರಿಗೆ ಮರಳುತ್ತಾನೆ. ಕಾಳಿ ಮತ್ತು ಗಣೇಶ ಶಿವನನ್ನು ತಮ್ಮ ನೆಲೆಯಾದ ಪಂಚವಟಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಶತ್ರುಗಳ ಅನಿರೀಕ್ಷಿತ ಆಕ್ರಮಣದಿಂದ ಗಣೇಶ ಎಲ್ಲರನ್ನೂ ರಕ್ಷಿಸುತ್ತಾನೆ. ಅಲ್ಲಿ ಶಿವನ ಮಿತ್ರ ಬೃಹಸ್ಪತಿ ಇರುತ್ತಾನೆ. ಈ ರಹಸ್ಯ ಸ್ಫೋಟದೊಂದಿಗೆ ಕಾದಂಬರಿ ಮುಗಿಯುತ್ತದೆ. ಈ ಕೃತಿಯಲ್ಲಿ ಪರಶುರಾಮ ಕಾಡುಗಳ್ಳರ ನಾಯಕ ಎಂಬಂತೆ ಚಿತ್ರಿತನಾಗಿದ್ದಾನೆ. ನಮ್ಮ ಮೂಲ ಪುರಾಣ ಮತ್ತು ಮಹಾಕಾವ್ಯಗಳ ಪಾತ್ರ ಸಂಬಂಧಗಳು ಈ ಕೃತಿಯಲ್ಲಿ ಸ್ವಲ್ಪ ಹಿಂದುಮುಂದು ಆಗಿರುವುದರಿಂದ ಅವುಗಳನ್ನೆಲ್ಲ ಮರೆತುಬಿಟ್ಟು ಇದನ್ನೊಂದು ಸ್ವತಂತ್ರ ಕೃತಿಯೆಂಬಂತೆ ಓದುವುದು ಒಳಿತು. ಏಕೆಂದರೆ ನಮ್ಮ ರಾಮಾಯಣ ಮಹಾಭಾರತಗಳಲ್ಲಿ ಬರುವಂತೆ ಅಯೋಧ್ಯೆಯ ಅರಸರು ಸೂರ್ಯವಂಶದವರು, ಯಯಾತಿ – ಪುರು ಮೊದಲಾದವರಿಂದ ಬಂದ ವಂಶ ಚಂದ್ರವಂಶ. ಆದರೆ ಈ ಕೃತಿಯಲ್ಲಿ ಅಯೋಧ್ಯೆಯ ಅರಸರೂ ಚಂದ್ರವಂಶದವರು ಎಂದು ಹೇಳಲಾಗಿದೆ. ಕೆಲವು ಬದಲಾವಣೆಗಳನ್ನು ಉಲ್ಲೇಖಿಸುವುದಕ್ಕಾಗಿ ಮಾತ್ರ ಇವನ್ನು ಇಲ್ಲಿ ಎತ್ತಿ ಹೇಳಿರುವುದು. ಪುರಾಣದಲ್ಲಿಯ ಪಾತ್ರಗಳೇ ಇಲ್ಲಿರುವ ಕಾರಣ ಮೂಲ ಮತ್ತು ಈ ಕೃತಿಯ ಬದಲಾವಣೆಗಳು ಗೊಂದಲ ಮೂಡಿಸಬಹುದು. ಈ ಕೃತಿಯಲ್ಲಿ ದಿಲೀಪನ ಮಗ ಭಗೀರಥ. ಆದರೆ ಮೂಲ ಪುರಾಣದಲ್ಲಿ ಭಗೀರಥನ ಮಗ ದಿಲೀಪ. ದಿಲೀಪನ ಮಗ ಅಜ, ಇವನ ಮಗ ದಶರಥ, ಇವನ ಮಗ ಶ್ರೀರಾಮ. ನಮಗೆ ಗೊತ್ತಿರುವ ಹರಿವಂಶದ ಪುರಾಣದಂತೆ ದಿಲೀಪನು ರಾಮನಿಗಿಂತ ಮೊದಲು ಹುಟ್ಟಿದವನು. ಆದರೆ ಇಲ್ಲಿಯ ಒಂದು ಉಲ್ಲೇಖ ನೋಡಿ- ‘‘ದೇವಗಿರಿ ಮತ್ತು ಅಯೋಧ್ಯೆಗಳಲ್ಲಿ ದಕ್ಷನ ನಂತರದ ಸ್ಥಾನ ದಿಲೀಪನಿಗೆ ದೊರೆಯುವಂತೆ ಮಾಡಿದ. ದಿಲೀಪನಿಗೆ ಸ್ವದ್ವೀಪದ ಬೊಕ್ಕಸದಿಂದ ಒಂದು ಲಕ್ಷ ಚಿನ್ನದ ನಾಣ್ಯಗಳನ್ನು ಮೆಲೂಹಕ್ಕೆ ನೀಡುವಂತೆ ಆದೇಶಿಸಿದ. ಆದರೆ ದಕ್ಷ ಆ ಒಂದು ಲಕ್ಷ ಚಿನ್ನದ ನಾಣ್ಯವನ್ನು ಸ್ವದ್ವೀಪದಲ್ಲಿದ್ದ ಅಯೋಧ್ಯೆಯ ರಾಮಜನ್ಮಭೂಮಿ ಮಂದಿರಕ್ಕೆ ದಾನವಾಗಿ ಕೊಟ್ಟುಬಿಟ್ಟ.’’ ಆದರೆ ಆಗಲೇ ರಾಮಜನ್ಮಭೂಮಿ ಎಲ್ಲಿತ್ತು ಎಂಬ ಪ್ರಶ್ನೆ ಓದುಗನಲ್ಲಿ ಮೂಡುವುದು ಸಹಜ. ಕೃತಿಯು ಆ ಕಾಲದ ರಾಜಕೀಯ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ. ಒಕ್ಕೂಟ ವ್ಯವಸ್ಥೆಯೊಳಗೆ ಒಂದು ಸಾಮ್ರಾಜ್ಯ ಹೇಗೆ ಬೆಳೆಯಬಲ್ಲುದು ಎಂಬುದನ್ನು ಅದು ಹೇಳುತ್ತದೆ. ಆ ಕಾಲದಲ್ಲಿ ರಾಜರು ತಮ್ಮ ಪ್ರಭುತ್ವವನ್ನು ಸಿದ್ಧಪಡಿಸಲು ಅಶ್ವಮೇಧ ಯಾಗವನ್ನು ಮಾಡುತ್ತಿದ್ದರು. ಕುದುರೆಯನ್ನು ಕಟ್ಟುವವರ ವಿರುದ್ಧ ಅವರು ಯುದ್ಧವನ್ನು ಮಾಡಬೇಕಿತ್ತು. ಯುದ್ಧದಲ್ಲಿ ಗೆದ್ದಮೇಲೆ ಅವರ ರಾಜ್ಯವನ್ನು ಅವರಿಗೇ ಮರಳಿಸಿ ಅಪರಿಂದ ಕಪ್ಪವನ್ನು ಪಡೆಯುತ್ತಿದ್ದ ಒಂದು ವ್ಯವಸ್ಥೆ ಆಗ ಇತ್ತು. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವನ್ನು ನೀಡುವ ಉದ್ದೇಶದಿಂದ ಈ ಸಾಮ್ರಾಜ್ಯದಲ್ಲಿ ಹತ್ತಾರು ಪ್ರಾಂತ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ ಎಂದು ದಿಲೀಪ ಹೇಳುತ್ತಾನೆ. ದೇವತೆಗಳು ಸುರಾಪಾನ ಮಾಡುತ್ತಾರೆ ಎಂದು ಪುರಾಣಗಳಲ್ಲಿ ಇದೆ. ಆದರೆ ಇಲ್ಲಿ ಶಿವ ಭಂಗಿಯನ್ನು ಹೀರುತ್ತಾನೆ. ‘‘ಆಹಾ! ಬಲು ಸೊಗಸಾಗಿದೆ’’ ಹುಕ್ಕದಲ್ಲಿದ್ದ ಭಂಗಿಯನ್ನು ಹೀರಿ ಅದನ್ನು ವೀರಭದ್ರನ ಕೈಗಿಡುತ್ತ ಶಿವ ಉದ್ಗರಿಸಿದ. ಅದಕ್ಕೆ ವೀರಭದ್ರ ‘‘ಹೌದು! ಚಂದ್ರವಂಶಿಗಳು ನಿಜಕ್ಕೂ ಮಹಾರಸಿಕರು. ಈ ವಿಚಾರದಲ್ಲಿ ಬದುಕನ್ನು ಸಂಪೂರ್ಣವಾಗಿ ಆಸ್ವಾದಿಸುತ್ತಾರೆ’’ ಎಂದ. ಶಿವ ಸುಮ್ಮನೆ ನಸುನಕ್ಕ. ಭಂಗಿ ಆತನಿಗೆ ನಶೆಯೇರಿಸಿತ್ತು…. (ಪುಟ ೧೨) ಇನ್ನು ಅನುವಾದಕ್ಕೆ ಸಂಬಂಧಿಸಿದಂತೆ ಎರಡು ಮಾತು: ನಾವು ಮೆಲೂಹನ್ನರಂತೆ ದುರಭಿಮಾನಿಗಳಲ್ಲ- ದಿಲೀಪ ಹೇಳಿದ (ಪುಟ ೧೦) ಅದೇ ಸಮಯಕ್ಕೆ ಸರಿಯಾಗಿ ಮೆಲೂಹನ್ನರು ನಮ್ಮಮೇಲೆ ಯುದ್ಧ ಸಾರಿ ಗೆಲುವು ಸಾಧಿಸಿಬಿಟ್ಟರು. ನನ್ನ ತಾತ ಯುದ್ಧದಲ್ಲಿ ಸೋತು ಸೂರ್ಯವಂಶಿಗಳಿಗೆ ಶರಣಾದರು. ಮುಂದೆ ಮೆಲೂಹನ್ನರು ಯಮುನಾನದಿಗೆ ಅಡ್ಡಲಾಗಿ ಅಣೆಕಟ್ಟೆಯೊಂದನ್ನು ಕಟ್ಟಿದರು. ಪರಿಣಾಮ ಯಮುನಾ ಪ್ರಯಾಗದತ್ತ ಹರಿಯುವುದು ನಿಂತಿತು. ಇದರಿಂದ ಪ್ರಯಾಗಕ್ಕೆ ಭಾರಿ ಹೊಡೆತ ಬಿತ್ತು. ಪ್ರಯಾಗದ ರಾಜರು ನಾವು ಬೇಕಂತಲೇ ಯುದ್ಧದಲ್ಲಿ ಸೋತು ಮೆಲೂಹನ್ನರೊಂದಿಗೆ ಸೇರಿ ಅಣೆಕಟ್ಟು ನಿರ್ಮಿಸಿದೆವು ಎಂದು ಭಾವಿಸಿ ದ್ವೇಷ ಸಾಧಿಸಲಾರಂಭಿಸಿದರು. ಆದರೆ ವಾಸ್ತವದಲ್ಲಿ ನಮ್ಮ ತಾತ ಸರಿಯಾದ ಯುದ್ಧತಂತ್ರಗಳನ್ನು ಬಳಸದೆ ಮೆಲೂಹನ್ನರಿಗೆ ಶರಣಾಗಿದ್ದ. (ಪುಟ ೨೮). ಮೆಲೂಹನ್ನರು ಎಂಬುದನ್ನು ಮೆಲೂಹದವರು ಎಂದು ಅನುವಾದಿಸಿದ್ದರೆ ಸರಿಯಾಗುತ್ತಿತ್ತು. ಇಂಡಿಯನ್ಸ್ ಎಂಬುದನ್ನು ಇಂಡಿಯಾದವರು ಎನ್ನದೆ ಇಂಡಿಯನ್ನರು ಎಂದು ಬರೆದರೆ ಎಷ್ಟು ಆಭಾಸವೋ ಇದೂ ಹಾಗೇ. ನಾಗಾರಾಣಿ ಯುದ್ಧದಲ್ಲಿ ಗಾಯಗೊಂಡ ತನ್ನ ಸೋದರಳಿಯ ನಾಗಾನಾಯಕನನ್ನು ನೋಡಲು ಬರುತ್ತಾಳೆ.- ‘‘ನಾಗಾನಾಯಕ ಮೆಲ್ಲನೆ ಕಣ್ಣು ತೆರೆದ. ನಂತರ ನೋವಿನಲ್ಲೂ ನಗೆ ಬೀರುತ್ತಾ ‘ಹಾಗೇನೂ ಇಲ್ಲ ಚಿಕ್ಕಮ್ಮ’ ಎಂದ.’’ (ಪುಟ ೫೧). ಇಲ್ಲಿ ಸೋದರತ್ತೆಯನ್ನು ಚಿಕ್ಕಮ್ಮ ಎಂದು ಯಾರೂ ಕರೆಯುವುದಿಲ್ಲ. ಇಂಗ್ಲಿಷಿನಲ್ಲಿ ಬಹುಶಃ ಇದು ಆಂಟಿ ಎಂದಿರಬೇಕು. ಆಂಟಿಗೆ ಕನ್ನಡದಲ್ಲಿ ಅತ್ತೆ ಎಂಬ ಅರ್ಥವೂ ಇದೆ. ಅರೆ ಪೌರಾಣಿಕ ಪ್ರಸಂಗವನ್ನು ಹೇಳುವಾಗ ಆಸ್ಪತ್ರೆ ಎಂಬ ಪದದ ಬಳಕೆ ಆಗಂತುಕ ಎನ್ನಿಸಿಬಿಡುತ್ತದೆ. ಅದರ ಬದಲು ವೈದ್ಯಶಾಲೆ, ರುಗ್ಣಾಲಯ ಎಂಬಿತ್ಯಾದಿ ಪದದ ಬಳಕೆ ಸೂಕ್ತವಾಗುತ್ತಿತ್ತು. ಈ ಕಾದಂಬರಿಯ ಸಂದೇಶವೇನು? ಶಿವನ ಮಾತಿನಲ್ಲಿಯೇ ಹೇಳುವುದಾದರೆ, ಜಗತ್ತಿನಲ್ಲಿ ಯಾರೂ ಒಳ್ಳೆಯವರಲ್ಲ. ಹಾಗೆ ಯಾರೂ ಕೆಟ್ಟವರಲ್ಲ. ಕೆಲವರು ಬಲಿಷ್ಠರಾಗಿರುತ್ತಾರೆ. ಮತ್ತೆ ಕೆಲವರು ಬಲಹೀನರಾಗಿರುತ್ತಾರೆ. ಬಲಿಷ್ಠರಾದವರು ಎಂತಹ ಸಂಕಟ ಸನ್ನಿವೇಶದಲ್ಲೂ ಧೈರ್ಯದಿಂದ ಇರುತ್ತಾರೆ. ಬದುಕಿನ ಅಗ್ನಿಪರೀಕ್ಷೆಯ ಕಾಲದಲ್ಲೂ ನ್ಯಾಯ, ನೀತಿ, ಧರ್ಮವನ್ನು ಪಾಲಿಸುತ್ತಾ ನೈತಿಕತೆಗೆ ಬದ್ಧವಾಗಿರುತ್ತಾರೆ. ಆದರೆ ಬಲಹೀನರು ಅನೇಕ ಬಾರಿ ನೈತಿಕತೆಯನ್ನು ಮರೆತುಬಿಡುತ್ತಾರೆ. ಒಟ್ಟಾರೆಯಾಗಿ ಓದುಗರಿಗೆ ಪ್ರತಿಪುರಾಣದ ರೋಚಕ ಸೃಷ್ಟಿಯ ಅನುಭವದ ಧನ್ಯತೆಯಂತೂ ಲಭಿಸುವುದು. ಪ್ರ: ಧಾತ್ರಿ ಪ್ರಕಾಶನ, ಮೈಸೂರು, ಪುಟಗಳು ೩೯೮ ಬೆಲೆ ₹ ೨೫೦