*ನಂಬಿದವರಿಗೆ ದ್ರೋಹ ಬಗೆಯುವುದು

ಮಕ್‌ ಅಂದರೆ ಹಿಂದಿಯಲ್ಲಿ ಉಪ್ಪು ಎಂಬ ಅರ್ಥ. ನಮಕ್‌ ಹರಾಮ್‌ ಎಂದರೆ ನಂಬಿಕೆ ದ್ರೋಹಿ ಎಂಬ ಅರ್ಥ. ಹಿಂದಿಯಲ್ಲಿ ಇದೊಂದು ಸಾಮಾನ್ಯ ಬೈಗುಳ. ಹಿಂದಿ ಭಾಷೆಯ, ಹಿಂದಿ ಸಿನಿಮಾಗಳ ಪ್ರಭಾವದಿಂದ ಕನ್ನಡದಲ್ಲೂ ಇದು ಇಂದು ವ್ಯಾಪಕವಾಗಿ ಬಳಕೆಯಾಗುತ್ತಿದೆ.
ಉಂಡ ಮನೆಗೆ ದ್ರೋಹ ಬಗೆದ, ಉಂಡ ಮನೆ ಗಳ ಎಣಿಸಿದ, ಬೆನ್ನಲ್ಲಿ ಚೂರಿ ಹಾಕಿದ ಎನ್ನುವುದೂ ಇದೇ ಅರ್ಥವನ್ನು ನೀಡುತ್ತದೆ.
ನಮಕ್‌ ಹಲಾಲ್‌ ಎಂಬ ಮಾತೂ ಇದೆ. ಹಲಾಲ್‌ ಎಂದರೆ ಮುಸ್ಲಿಂ ಧರ್ಮದಲ್ಲಿ ಸೇವಿಸಬಹುದು ಎಂದು ಸೂಚಿಸಿರುವ ಆಹಾರಗಳು. ಹರಾಮ್‌ ಎಂದರೆ ಈ ಸೂಚಿತ ಆಹಾರವನ್ನು ಬಿಟ್ಟು ನಿಯಮ ಉಲ್ಲಂಘಿಸಿ ತಿನ್ನುವುದು. ಅಂದರೆ ಧರ್ಮಭ್ರಷ್ಟ ಎಂದರ್ಥ.
ಉಪ್ಪಿಲ್ಲದ ಅಡುಗೆ ಇಲ್ಲ. ಉಪ್ಪು ಹಾಕದಿದ್ದರೆ ಅಡುಗೆಗೆ ರುಚಿಯೇ ಇರುವುದಿಲ್ಲ. ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವುದು ಎಂದರೆ ಮಹಾ ಅಪರಾಧ ಎನ್ನುವ ಭಾವನೆ ನಮ್ಮ ಸಂಸ್ಕೃತಿಯಲ್ಲಿದೆ. ಅನ್ನವಿಟ್ಟ ದಣಿಗೆ ದ್ರೋಹ ಬಗೆಯಬಾರದು ಎಂಬ ಅರಿವು ಬಹು ದೊಡ್ಡದು. ಅನ್ನದ ಋಣಕ್ಕೆ ಮಿಗಿಲಾದ ಋಣ ಬೇರೊಂದಿಲ್ಲ ಎಂದು ಹೇಳುತ್ತಾರೆ.
ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂಬ ಮಾತಿದೆ. ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇ ಬೇಕು ಎಂಬ ತಾತ್ಪರ್ಯ ಇಲ್ಲಿದೆ.