*ಅಸಹಜ ಶ್ರೀಮಂತಿಕೆ ಪ್ರದರ್ಶನಕ್ಕೆ ದಾರಿ

ಕೊಡೆ ಅಂದರೆ ಛತ್ರಿಗೆ ಸಂಸ್ಕೃತದಲ್ಲಿ ಆತಪತ್ರ ಎಂದು ಹೇಳುತ್ತಾರೆ. ಅಂದರೆ ಬಿಸಿಲಿಗೆ ನೆರಳನ್ನು ಒದಗಿಸುವಂಥದ್ದು ಎಂಬ ಅರ್ಥ. ಅಂದರೆ ಕೊಡೆಯನ್ನು ಬಿಸಿಲಿನಲ್ಲಿ ಮಾತ್ರ ಹಿಡಿಯುವಂಥದ್ದು. ಬಿಸಿಲಿನಲ್ಲಿ ಹಿಡಿಯಬೇಕಾದ ಕೊಡೆಯನ್ನು ನಡುರಾತ್ರಿಯಲ್ಲಿ ಹಿಡಿದರೆ ಏನೋ ಸರಿ ಇಲ್ಲ ಎಂದು ಅರ್ಥ.
ಅಲ್ಪನಿಗೆ ಐಶ್ವರ್ಯ ಬಂದಾಗ ನಡುರಾತ್ರೀಲಿ ಕೊಡೆ ಹಿಡಿದ ಎಂಬುದು ಲೋಕೋಕ್ತಿ. ಸಹಜ ಶ್ರೀಮಂತನಿದ್ದರೆ ಅವನು ಅದನ್ನು ತೋರಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ತುಂಬ ಬಡತನದಲ್ಲಿದ್ದವನಿಗೆ ಒಮ್ಮೆಲೇ ಶ್ರೀಮಂತಿಕೆ ಬಂದರೆ ನಾಲ್ಕು ಜನರಿಗೆ ತನ್ನ ಡೌಲು ತೋರಿಸಬೇಕು ಎಂಬ ಇಚ್ಛೆ ಆತನಲ್ಲಿ ಬಲಿಯುತ್ತದೆ. ಅಂಥ ಪ್ರದರ್ಶನಪ್ರಿಯರು ನಡುರಾತ್ರಿಯಲ್ಲಿ ಕೊಡೆ ಹಿಡಿಯುತ್ತಾರೆ. ಬಿಸಿಲಿಗೆ ಹಿಡಿಯಬೇಕಾದ ಕೊಡೆಯನ್ನು ನಡುರಾತ್ರಿಯಲ್ಲಿ ಏಕೆ ಹಿಡಿಯಬೇಕು?
ಇನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರಲ್ಲಿ ನಮ್ಮ ಋತುಮಾನದ ವಿವರಣೆಯನ್ನು ನೋಡಬಹುದು. ನಿಜವಾಗಿ ಇರುವುದು ಬೇಸಿಗೆ ಕಾಲ ಮತ್ತು ಚಳಿಗಾಲ ಮಾತ್ರ. ಮಳೆಗಾಲವು ಬೇಸಿಗೆಕಾಲದ ಒಂದು ಭಾಗ ಮಾತ್ರ. ಕೊಡೆ ಅಂದಾಕ್ಷಣ ಮಳೆಯ ನೆನಪು ಬರುತ್ತದೆಯಲ್ಲವೆ? ಮೂಲ ಸಂಸ್ಕೃತದ ಆತಪತ್ರವನ್ನು ನೋಡಿದಾಗ ಮಳೆಗೆ ಕೊಡೆ ಹಿಡಿಯುವ ಸೂಚನೆಯೇ ಇಲ್ಲ ಅಲ್ಲಿ. ಅಥವಾ ಆಗಿನ ಕಾಲದಲ್ಲಿ ಮಳೆಗೆ ಹಿಡಿಯುವಂಥ ಛತ್ರಿ ತಯಾರಾಗಿರಲಿಲ್ಲವೋ ಏನೋ?