*ಶಾಶ್ವತ ಕೀರ್ತಿವಂತನಾಗು

ದೇಶದ ಇತಿಹಾಸದಲ್ಲಿ ಅವರು ಧ್ರುವತಾರೆಯಾದರು ಎಂದು ವಿಶೇಷ ಸಾಧನೆ ಮಾಡಿದವರನ್ನು ವರ್ಣಿಸುವುದನ್ನು ಕೇಳಿದ್ದೇವೆ. ಧ್ರುವ ಎಂದರೆ ಸ್ಥಿರವಾದದ್ದು ಎಂಬ ಅರ್ಥವಿದೆ.
ನಮ್ಮ ಪುರಾಣದಲ್ಲಿ ಧ್ರುವ ಎಂಬ ಬಾಲಕನ ಕತೆ ಬರುತ್ತದೆ. ಈತ ಉತ್ತಾನಪಾದರಾಯನ ಮಗ. ತಾಯಿ ಸುನೀತಿ. ಮಲತಾಯಿ ಸುರುಚಿ. ಮಲತಾಯಿಯ ಹಿಂಸೆಯಿಂದ ನೊಂದು ಕಾಡಿಗೆ ತೆರಳಿ ಶ್ರೀಹರಿಯನ್ನು ಕುರಿತು ತಪಸ್ಸನ್ನು ಮಾಡಿ ನಕ್ಷತ್ರ ಪದವಿಗೆ ಏರುತ್ತಾನೆ ಧ್ರುವ. ಆಗಸದಲ್ಲಿ ಧ್ರುವ ನಕ್ಷತ್ರ ದಿಕ್ಸೂಚಿಯಾಗಿ ಇಂದಿಗೂ ಇದೆ. ದಿಕ್ಕನ್ನು ತಿಳಿಯಬೇಕೆಂದರೆ ಧ್ರುವ ನಕ್ಷತ್ರವನ್ನು ನೋಡಿ ನಿರ್ಧರಿಸುತ್ತಾರೆ.
ಧ್ರುವ ಇಷ್ಟಪಟ್ಟಿದ್ದರೆ ದೇವರಿಂದ ಎಲ್ಲ ಸುಖವನ್ನು ಪಡೆಯಬಹುದಿತ್ತು. ಆದರೆ ಸುಖಗಳು ಯಾವವೂ ಶಾಶ್ವತವಲ್ಲ. ಹರಿಪಾದವೊಂದೇ ಶಾಶ್ವತ ಎಂದು ಆತ ತಿಳಿಯುತ್ತಾನೆ ಮತ್ತು ಅದನ್ನು ಕೇಳಿ ಪಡೆಯುತ್ತಾನೆ. ಈ ಕಾರಣಕ್ಕಾಗಿಯೇ ಧ್ರುವ ಶಾಶ್ವತವಾಗಿ ಸ್ಮರಣೀಯ ವ್ಯಕ್ತಿಯಾಗಿದ್ದಾನೆ.
ಅದೇ ರೀತಿಯಲ್ಲಿ ಶಾಶ್ವತ ಕೀರ್ತಿಯನ್ನು ಅವರು ಸಂಪಾದಿಸಿದ್ದಾರೆ ಎಂದು ಹೇಳುವುದಕ್ಕೆ ಧ್ರುವತಾರೆ ಎಂದು ಹೇಳುವುದು ರೂಢಿಗೆ ಬಂದಿದೆ.
ಭೂಗೋಳದ ಎರಡು ತುದಿಗಳನ್ನೂ ಧ್ರುವಗಳೆಂದು ಕರೆಯುತ್ತಾರೆ. ಚುಂಬಕದ ಎರಡು ತುದಿಗಳನ್ನೂ ಧ್ರುವಗಳೆಂದು ಕರೆಯುತ್ತಾರೆ. ಈ ಧ್ರುವಗಳಿಗೂ ಧ್ರುವತಾರೆಗೂ ಸಂಬಂಧವಿಲ್ಲ.