ತನ ಹೆಸರು ರವೀಂದ್ರ ಕೌಶಿಕ್‌. ಸ್ಪುರದ್ರೂಪಿ ತರುಣ. ಕಾಲೇಜಿನಲ್ಲಿ ಆತನ ಸ್ನೇಹಿತರೆಲ್ಲ ಅವನನ್ನು ದೇವಾನಂದ ಎಂದೋ ವಿನೋದ ಖನ್ನಾ ಎಂದೋ ಪ್ರೀತಿಯಿಂದ ಕರೆಯುತ್ತಿದ್ದರು. ಸಾಲದ್ದಕ್ಕೆ ಆತ ಶಾಲೆಯ ಕಾರ್ಯಕ್ರಮಗಳಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದ. ಅವನೊಳಗೊಬ್ಬ ನಟನಿದ್ದ. ಅವನಿಗೆ ಏನಾದರೂ ಅವಕಾಶಗಳು ಒದಗಿ ಬಂದಿದ್ದರೆ ಬಾಲಿವುಡ್‌ನಲ್ಲಿ ಒಬ್ಬ ಉತ್ತಮ ನಟನಾಗಿ ಆತ ಮಿಂಚುತ್ತಿದ್ದ. ಮಾನವ ಒಂದು ಬಗೆದರೆ ದೈವ ಇನ್ನೊಂದು ಬಗೆಯಿತಂತೆ.
ರವೀಂದ್ರ ಕೌಶಿಕ್‌ ಅಲಿಯಾಸ್‌ ನಬಿ ಅಹ್ಮದ್‌ ಶಕೀರ್‌ ರಾಜಸ್ಥಾನದ ಪಂಜಾಬ್‌ ಗಡಿ ಭಾಗದ ಶ್ರೀ ಗಂಗಾನಗರ ಎಂಬಲ್ಲಿ 1952ರ ಏಪ್ರಿಲ್‌11ರಂದು ಜನಿಸಿದನು. ಈತನ ತಂದೆ ಜೆ.ಎಂ.ಕೌಶಿಕ್‌ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಅವರು ಸ್ಥಳೀಯ ಬಟ್ಟೆ ಮಿಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ರವೀಂದ್ರ ಹುಟ್ಟಿದ ಊರಲ್ಲಿಯೇ ತನ್ನ ಕಾಲೇಜು ಶಿಕ್ಷಣವನ್ನು ಪೂರೈಸಿದ್ದನು. ಎಸ್‌.ಡಿ. ಬಿಹಾನಿ ಕಾಲೇಜಿನಿಂದ ಬಿಕಾಂ ಪದವಿ ಪಡೆದಿದ್ದ. 1971ರಲ್ಲಿ ಆತನ ತಂದೆಗೆ ದೆಹಲಿಯಲ್ಲಿ ಕೆಲಸ ಸಿಕ್ಕಿತು. ಹೀಗಾಗಿ ಅವನ ಕುಟುಂಬದವರು ತಮ್ಮ ವಾಸವನ್ನು ದೆಹಲಿಗೆ ವರ್ಗಾಯಿಸಿದರು.
ಒಂದು ಬಾರಿ ಅವನು ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ರಾಷ್ಟ್ರಮಟ್ಟದ ನಾಟಕ ಸ್ಫರ್ಧೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದನು. ಅದರಲ್ಲಿ ಆತ ಒಬ್ಬ ಸೇನೆಯ ಅಧಿಕಾರಿಯ ಏಕಪಾತ್ರಾಭಿನಯ ಮಾಡಿದ್ದನು. ಚೀನಾ ಸೈನಿಕರ ಕೈಗೆ ಸಿಕ್ಕಿ ಬೀಳುವ ಆತ ಎಷ್ಟೇ ಹಿಂಸೆ ನೀಡಿದರೂ ಯಾವುದೇ ರಹಸ್ಯವನ್ನು ಬಾಯ್ಬಿಡದ ಪಾತ್ರ ಅದಾಗಿತ್ತು. ಆ ಕಾರ್ಯಕ್ರಮ ನೋಡುವುದಕ್ಕೆ ರಿಸರ್ಚ್‌ ಆ್ಯಂಡ್‌ ಅನಲಿಲಿಸ್‌ ವಿಂಗ್‌(ರಾ)ನ ಅಧಿಕಾರಿಗಳು ಆಗಮಿಸಿದ್ದರು. ಇದು ಭಾರತದ ಹೊರಗೆ ಬೇಹುಗಾರಿಕೆಯನ್ನು ನಡೆಸುವ ಸಂಸ್ಥೆ. ಈತನ ನಟನಾ ಸಾಮರ್ಥ್ಯ ಮತ್ತು ಸ್ಪುರದ್ರೂಪವು ರಾ ಅಧಿಕಾರಿಗಳನ್ನು ಆಕರ್ಷಿಸಿತು. ಅವರು ಆತನಿಗೆ ಒಂದು ನೌಕರಿಯನ್ನು ಕೊಡುವ ಪ್ರಸ್ತಾವವನ್ನು ಮುಂದಿಡುತ್ತಾರೆ. ಆತ ಮಾರುವೇಷದಲ್ಲಿ ಭಾರತದ ಏಜೆಂಟ್‌ ಆಗಿ ಪಾಕಿಸ್ತಾನದಲ್ಲಿ ಕೆಲಸ ಮಾಡುವುದು ಆ ನೌಕರಿಯಾಗಿತ್ತು. ಅದನ್ನು ಆತ ಒಪ್ಪಿಕೊಳ್ಳುತ್ತಾನೆ. ರವೀಂದ್ರ ಕೌಶಿಕನ ಹದಿಹರೆಯದ ದಿನಗಳಲ್ಲಿಯೇ 1965 ಮತ್ತು 1971ರಲ್ಲಿ ಪಾಕಿಸ್ತಾನವು ಭಾರತದ ಮೇಲೆ ಯುದ್ಧವನ್ನು ಮಾಡಿರುತ್ತದೆ. ಹೀಗಾಗಿ ಸಹಜವಾಗಿಯೇ ಯುವಕ ರವೀಂದ್ರನ ಮನಸ್ಸಿನಲ್ಲಿ ಪಾಕಿಸ್ತಾನದ ಬಗ್ಗೆ ದ್ವೇಷ ಮತ್ತು ಭಾರತದ ಬಗ್ಗೆ ದೇಶಭಕ್ತಿ ಮೊಳೆತಿರುತ್ತದೆ. ಈ ಕಾರಣಕ್ಕಾಗಿಯೇ ಅವನು ರಾ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದು. ಅವನ 23ನೆ ವಯಸ್ಸಿನಲ್ಲಿ 1975ರಲ್ಲಿ ಅವನನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತದೆ.
ಭಾರತವು ಅದುವರೆಗೆ ಪಾಕಿಸ್ತಾನ ಮತ್ತು ಚೀನಾದ ಮೇಲೆ ಯುದ್ಧವನ್ನು ಮಾಡಿಯಾಗಿತ್ತು. ಪಾಕಿಸ್ತಾನ ಭಾರತದ ಮೇಲೆ ಇನ್ನೊಂದು ಯುದ್ಧವನ್ನು ಮಾಡುವ ಸನ್ನಾಹದಲ್ಲಿದೆ ಎಂಬ ವದಂತಿಗಳು ಇದ್ದವು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸೇನೆಯೊಳಗೆ ಒಬ್ಬ ಗೂಢಚಾರನನ್ನು ತೂರಿಸುವುದು ಸೇನೆಯ ಉದ್ದೇಶವಾಗಿತ್ತು. ಈ ಕೆಲಸಕ್ಕೆ ರವೀಂದ್ರ ಕೌಶಿಕನನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಆತನಿಗೆ ಬೇಹುಗಾರಿಕೆಯ ಕುರಿತು ವ್ಯಾಪಕವಾದ ತರಬೇತಿಯನ್ನು ಕೊಡುತ್ತಾರೆ. ಪಾಕಿಸ್ತಾನದ ಸಾಂಸ್ಕೃತಿಕ ಚರಿತ್ರೆಯ ಬಗ್ಗೆ ಪರಿಚಯ ಮಾಡಿಸುತ್ತಾರೆ. ಉರ್ದು ಭಾಷೆಯನ್ನು ಅವನಿಗೆ ಕಲಿಸುತ್ತಾರೆ. ಮುಸ್ಲಿಂ ಧರ್ಮಗ್ರಂಥಗಳ ಅಧ್ಯಯನ ಮಾಡಿಸುತ್ತಾರೆ. ಪಂಜಾಬದ ಗಡಿ ಭಾಗದ ರಾಜಸ್ಥಾನಿಯಾದುದರಿಂದ ಅವನಿಗೆ ಪಂಜಾಬಿಯೂ ಬರುತ್ತಿತ್ತು. ಅದು ಪಾಕಿಸ್ತಾನದ ಪಂಜಾಬ್‌ ಭಾಗದಲ್ಲಿ ಚಲಾವಣೆಯಲ್ಲಿತ್ತು. ಹಾಗೆಯೇ ಆತ ಒಬ್ಬ ಮುಸ್ಲಿಮನಂತೆ ಇರುವುದಕ್ಕೆ ಏನೇನು ಬೇಕೋ ಅದನ್ನೆಲ್ಲ ಮಾಡಿಸುತ್ತಾರೆ. ಆತ ಮುಸ್ಲಿಂ ಧರ್ಮ ಸ್ವೀಕರಿಸುತ್ತಾನೆ. ಆತನಿಗೆ ಸುನ್ನತ್‌ ಕೂಡ ಮಾಡಿಸಿರುತ್ತಾರೆ. ಈಗ ರವೀಂದ್ರ ಕೌಶಿಕನಿಗೆ ನಬಿ ಅಹ್ಮದ್‌ ಶಕೀರ್‌ ಎಂದು ನಾಮಕರಣ ಮಾಡಿ ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ. ಭಾರತದ ಯಾವ ದಾಖಲೆಗಳಲ್ಲಿಯೂ ಅರವಿಂದ ಕೌಶಿಕನ ಹೆಸರಿಲ್ಲದಂತೆ ಅಳಿಸಿಹಾಕಲಾಗುತ್ತದೆ.
ಪಾಕಿಸ್ತಾನಕ್ಕೆ ತೆರಳಿದ ಅರವಿಂದ ಅಲಿಯಾಸ್‌ ನಬಿ ಕರಾಚಿ ಯುನಿವರ್ಸಿಟಿಯ ಲಾ ಕಾಲೇಜಿನಲ್ಲಿ ಪ್ರವೇಶ ಪಡೆದು ಎಲ್‌ಎಲ್‌ಬಿ ಪದವಿಯನ್ನು ಪಡೆಯುತ್ತಾನೆ. ಬಳಿಕ ಪಾಕಿಸ್ತಾನದ ಸೇನೆಯಲ್ಲಿ ನೇಮಕಗೊಳ್ಳುತ್ತಾನೆ. ಕಮಿಶನ್ಡ್‌ ಆಫೀಸರ್‌ ಆಗಿದ್ದ ಅವನು ಬಹುಬೇಗನೆ ಮೇಜರ್‌ ಪದವಿಗೆ ಬಡ್ತಿ ಪಡೆಯುತ್ತಾನೆ. ಆತ ಪಾಕಿಸ್ತಾನ ಸೇನೆಯನ್ನು ಒಬ್ಬ ಲಾಂಡ್ರಿಯವನಾಗಿ ಸೇರಿದ್ದ ಎಂಬ ಇನ್ನೊಂದು ವರದಿಯೂ ಇದೆ. ಮತ್ತೊಂದು ವರದಿಯ ಪ್ರಕಾರ ಆತ ಮಿಲಿಟರಿ ಅಕೌಂಟ್ಸ್‌ ವಿಭಾಗಲ್ಲಿ ಆಡಿಟರ್‌ ಆಗಿ ನೇಮಕ ಗೊಂಡಿದ್ದನು. ಬಹುಶಃ ಇದೇ ನಿಜವಿರಬಹುದು. ಏಕೆಂದರೆ ಆತ ಮೂಲತಃ ಬಿಕಾಂ ಪದವೀಧರನಾಗಿದ್ದ. ತಮ್ಮೊಳಗೊಬ್ಬ ಭಾರತೀಯ ಗೂಢಚಾರ ನುಸುಳಿದ್ದಾನೆ ಎನ್ನುವ ಬಗ್ಗೆ ಪಾಕಿಸ್ತಾನ ಸೇನೆಗೆ ಲವಲೇಶವೂ ಅನುಮಾನ ಬಂದಿರಲಿಲ್ಲ. ಆ ಸಮಯದಲ್ಲಿಯೇ ಅವನು ಪಾಕಿಸ್ತಾನದ ಯುವತಿಯೊಬ್ಬಳೊಂದಿಗೆ ಪ್ರೇಮಪಾಶಕ್ಕೆ ಸಿಲುಕುತ್ತಾನೆ. ಅವಳ ಹೆಸರು ಅಮಾನತ್‌ ಆಗಿರುತ್ತದೆ. ಅವಳ ತಂದೆ ಕೂಡ ಸೇನೆಯಲ್ಲಿ ಟೇಲರಿಂಗ್‌ ಕೆಲಸದಲ್ಲಿರುತ್ತಾನೆ. ಅವರಿಗೆ ಒಬ್ಬ ಮಗಳೂ ಆಗುತ್ತಾಳೆ. 1975ರಿಂದ 1983ರ ನಡುವಿನ ಅವಧಿಯಲ್ಲಿ ನಬಿ ಭಾರತಕ್ಕೆ ಅತ್ಯಮೂಲ್ಯವಾದ ಮಾಹಿತಿಗಳನ್ನು ಕಳುಹಿಸುತ್ತಾನೆ. ಆತ ಪಾಕಿಸ್ತಾನದಲ್ಲಿದ್ದಾಗ ಮೂರ್ನಾಲ್ಕು ಬಾರಿ ದುಬೈ ಮೂಲಕ ಭಾರತಕ್ಕೆ ಬಂದುಹೋಗಿದ್ದನು.
ಎಲ್ಲವೂ ಸಹಜ ಎಂಬಂತೆ ನಡೆಯುತ್ತಿರುತ್ತದೆ. ಆದರೆ ಈ ರಹಸ್ಯ ದೇಶಭಕ್ತನ ಮುಖವಾಡ ಕಳಚಿಬೀಳುವ ದುರದೃಷ್ಟದ ದಿನ ಬಂದೇ ಬಿಡುತ್ತದೆ. 1983ರಲ್ಲಿ ರಾ ಇನ್ನೊಬ್ಬ ಏಜೆಂಟನನ್ನು ರವೀಂದ್ರ ಕೌಶಿಕನನ್ನು ಭೇಟಿ ಮಾಡುವುದಕ್ಕೆ ಕಳುಹಿಸುತ್ತದೆ. ಆದರೆ ಇನ್ಯಾತ್‌ ಮಸಿಹಾ ಎಂಬ ಆ ಇನ್ನೊಬ್ಬ ಏಜೆಂಟ್‌ ಪಾಕಿಸ್ತಾನದ ಬೇಹುಗಾರಿಕೆ ಪಡೆಗೆ ಸಿಕ್ಕಿಬೀಳುತ್ತಾನೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ಬಾಯಿಬಿಡುತ್ತಾನೆ. ಆತ ರವೀಂದ್ರ ಕೌಶಿಕನ ಹೆಸರನ್ನು ಹೇಳುವುದಲ್ಲದೆ ಆತನನ್ನು ಗುರುತಿಸುತ್ತಾನೆ ಕೂಡ. ಆಗ ರವೀದ್ರನ ವಯಸ್ಸು ಕೇವಲ 29 ವರ್ಷ.
ಅಲ್ಲಿಂದ ರವೀಂದ್ರನಿಗೆ ರಾಹು ಮುಸುಕುತ್ತಾನೆ. ತನ್ನನ್ನು ಕಾಪಾಡುವಂತೆ ಭಾರತ ಸರ್ಕಾರಕ್ಕೆ ಮೊರೆಯಿಡುತ್ತಾನೆ. ಪಾಕಿಸ್ತಾನದಲ್ಲಿ ಏನೇನು ನಡೆಯಿತು ಎಂಬುದು ಎಲ್ಲವೂ ತಿಳಿದಿದ್ದರೂ ಭಾರತ ಸರ್ಕಾರವು ಆತನನ್ನು ಮರಳಿ ಕರೆಯಿಸಿಕೊಳ್ಳುವುದಕ್ಕೆ ಯಾವುದೇ ಆಸಕ್ತಿಯನ್ನು ತೋರಿಸಲಿಲ್ಲ. ರವೀಂದ್ರನನ್ನು ಸಿಯಾಲ್ಕೋಟ್‌ ಜೈಲಿನಲ್ಲಿ ಇಡಲಾಯಿತು. ಅಲ್ಲಿ ಆತನಿಗೆ ಎರಡು ವರ್ಷಗಳ ಕಾಲ ಚಿತ್ರಹಿಂಸೆಯನ್ನು ನೀಡಲಾಯಿತು. ಆತನ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸಲಾಯಿತು. ಭಾರತ ಸರ್ಕಾರದ ಬಗ್ಗೆ ತಿಳಿದಿರುವ ರಹಸ್ಯಗಳನ್ನು ಬಾಯಿಬಿಟ್ಟರೆ ಎಲ್ಲ ಆರೋಪಗಳಿಂದ ಮುಕ್ತಗೊಳಿಸಿ ಬಿಟ್ಟುಬಿಡುವುದಾಗಿ ಆಮಿಷವನ್ನೂ ಒಡ್ಡಲಾಯಿತು. ದೇಶಭಕ್ತ ರವೀಂದ್ರ ಅದ್ಯಾವುದಕ್ಕೂ ಬಗ್ಗಲಿಲ್ಲ. ಪಾಕಿಸ್ತಾನ ಸೇನೆಗೆ ಏನನ್ನೂ ಹೇಳಲಿಲ್ಲ. 1985ರಲ್ಲಿ ಪಾಕಿಸ್ತಾನದ ನ್ಯಾಯಾಲಯವು ಆತನಿಗೆ ಮರಣದಂಡನೆಯನ್ನು ವಿಧಿಸಿತು. ನಂತರ ಇದನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು. ನಂತರ ಅವನನ್ನು ಮಿಯನ್‌ವಾಲಿ ಜೈಲಿನಲ್ಲಿ 16 ವರ್ಷ ಕಾಲ ಇರಿಸಲಾಯಿತು. ಅಲ್ಲಿ ಅವನಿಗೆ ಕ್ಷಯರೋಗ ಕಾಣಿಸಿಕೊಂಡಿತು. ಜೊತೆಗೆ ಹೃದಯಬೇನೆ. 2001ರ ನವೆಂಬರ್‌ 21ರಂದು ನ್ಯೂ ಸೆಂಟ್ರಲ್‌ ಮುಲ್ತಾನ್‌ ಜೈಲಿನಲ್ಲಿ ಆತ ಕೊನೆಯುಸಿರೆಳೆದನು. ಜೈಲಿನ ಹಿಂಭಾಗಲ್ಲಿಯೇ ಅವನನ್ನು ಹೂತುಹಾಕುತ್ತಾರೆ.
ರವೀಂದ್ರ ಕೌಶಿಕ್‌ ತನ್ನ ಮನೆಯಿಂದ ದೂರವಾಗಿ 30 ವರ್ಷಗಳನ್ನು ಅಜ್ಞಾತವಾಗಿ ಕಳೆಯುತ್ತಾನೆ. ಇವನು ಕಳುಹಿಸಿದ ಅಮೂಲ್ಯ ಮಾಹಿತಿಗಳಿಂದಾಗಿಯೇ ಭಾರತವು ಪಾಕಿಸ್ತಾನದ ಹಲವು ಪ್ರಯತ್ನಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಅವುಗಳಲ್ಲಿ ಒಂದು ಪೆಹಲ್ಗಾಂವ್‌ನಲ್ಲಿ ನಡೆದ ಹೋರಾಟದಲ್ಲಿ ಭಾರತವು ಪಾಕಿಸ್ತಾನದ 50ಕ್ಕೂ ಅಧಿಕ ಸೈನಿಕರನ್ನು ಕೊಂದುಹಾಕಿತ್ತು. ಆಗ ಭಾರತದ ಗೃಹಸಚಿವರಾಗಿದ್ದ ಎಸ್‌.ಬಿ.ಚವ್ಹಾಣ ಅವರು ರವೀಂದ್ರಗೆ ಬ್ಲ್ಯಾಕ್‌ ಟೈಗರ್‌ ಎಂಬ ಬಿರುದನ್ನು ನೀಡಿದ್ದರು.
ತಾನು ಸೆರೆಯಲ್ಲಿದ್ದಾಗ ರವೀಂದ್ರನು ರಹಸ್ಯವಾಗಿ ಹತ್ತಾರು ಪತ್ರಗಳನ್ನು ತನ್ನ ಕುಟುಂಬಕ್ಕೆ ಕಳುಹಿಸಿದ್ದನು. ಪಾಕಿಸ್ತಾನದ ಜೈಲಿನಲ್ಲಿ ತನಗೆ ನೀಡಿದ ಚಿತ್ರಹಿಂಸೆಯನ್ನು ವಿವರಿಸಿದ್ದನು. ಈ ಪತ್ರಗಳನ್ನು ಓದಿದ ಆತನ ತಂದೆಗೆ ಹೃದಯಾಘಾತವಾಯಿತು. ಒಂದು ಪತ್ರದಲ್ಲಿ ಆತನು, ಕ್ಯಾ ಭಾರತ್‌ ಜೈಸೆ ಬಡೇ ದೇಶ್‌ ಕೆ ಲಿಯೆ ಕುರ್ಬಾನಿ ದೇನೆ ವಾಲೋ ಕೋ ಯಹಿ ಮಿಲ್ತಾ ಹೈ? (ಭಾರತದಂಥ ದೊಡ್ಡ ದೇಶಕ್ಕೆ ತನ್ನ ಜೀವವನ್ನೇ ಅರ್ಪಿಸಿದವರಿಗೆ ಸಿಗುವ ಬಹುಮಾನ ಇದೇನಾ?) ಎಂದು ಆತ ತನ್ನ ತಂದೆಯನ್ನು ಪ್ರಶ್ನಿಸಿದ್ದನು. ಇನ್ನೊಂದು ಪತ್ರದಲ್ಲಿ, ನಾನೇನಾದರೂ ಅಮೆರಿಕದವನಾಗಿದ್ದರೆ ಮೂರೇ ದಿನಗಳಲ್ಲಿ ನನ್ನ ಬಿಡುಗಡೆಯಾಗುತ್ತಿತ್ತು ಎಂದು ಹೇಳಿದ್ದ. ಆತನ ಕುಟುಂಬದವರು ಮಾಡಿದ ಮನವಿಗಳಿಗೆ ಭಾರತ ಸರ್ಕಾರ ಕಿವಿಗೊಡಲಿಲ್ಲ. ರವೀಂದ್ರನ ಸಾವಿನ ಬಳಿಕ ಆತನ ತಾಯಿಗೆ ಭಾರತೀಯ ಸೇನೆಯು 500 ರುಪಾಯಿಗಳನ್ನು ನಂತರ 2000 ರುಪಾಯಿಗಳನ್ನು ಅವಳು ಬದುಕಿರುವರೆಗೂ (2006) ಕಳುಹಿಸುತ್ತಿತ್ತು.
ರವೀಂದ್ರನ ತಮ್ಮ ಆರ್‌.ಎನ್‌.ಕೌಶಿಕ್‌ ಹೇಳುವುದು ಇಷ್ಟೇ, ನಮಗೆ ಹಣ ಬೇಕಾಗಿಲ್ಲ. ಸುರಕ್ಷಾ ವ್ಯವಸ್ಥೆಯ ಬಲವಾದ ಬುನಾದಿಯಾಗಿರುವ ಏಜೆಂಟ್‌ಗಳು ನೀಡಿರುವ ಕೊಡುಗೆಯನ್ನು ಸರ್ಕಾರ ಗುರುತಿಸುವಂತಾಗಲಿ. ನಿಜ. ಅದಾಗಬೇಕು.
2012ರಲ್ಲಿ ಬಿಡುಗಡೆಯಾದ ಸಲ್ಮಾನ್‌ ಖಾನ್‌ ಅಭಿನಯದ ಏಕ್‌ ಥಾ ಟೈಗರ್‌ ಸಿನಿಮಾ ರವೀಂದ್ರ ಕೌಶಿಕನ ಕತೆಯನ್ನು ಆಧರಿಸಿದ್ದು, ಅದಕ್ಕಾಗಿಯೇ ಸಿನಿಮಾಕ್ಕೆ ಆ ಹೆಸರು ಇಟ್ಟಿದ್ದು ಎಂದು ಆತನ ಕುಟುಂಬದವರು ಹೇಳುತ್ತಾರೆ. ಹಾಗೆಯೇ 2019ರಲ್ಲಿ ಬಂದ ಜಾನ್‌ ಅಬ್ರಹಾಂ ಅಭಿನಯದ ರೋಮಿಯೋ ಅಕ್ಬರ್‌ ವಾಲ್ಟರ್‌ ಸಿನಿಮಾ ಕೂಡ ರವೀಂದ್ರ ಕೌಶಿಕ ಬದುಕಿನ ವಿವರಗಳನ್ನು ಅಲ್ಲಲ್ಲಿ ಅನುಕರಿಸಿದೆ ಎಂದು ಹೇಳುತ್ತಾರೆ.