‘ದಾದಾಗಿರಿಯ ದಿನಗಳು’ ಮೂಲಕ ಭೂಗತ ಜಗತ್ತಿನ ಹತ್ತಿರದ ಚಿತ್ರಣವನ್ನು ಕನ್ನಡ ಸಾಹಿತ್ಯ ರಸಿಕರಿಗೆ ಉಣಬಡಿಸಿರುವ ಅಗ್ನಿ ಶ್ರೀಧರ ಅವರ ಹೊಸ ಕಾದಂಬರಿ ‘ತೊಟ್ಟಿಕ್ಕುತ್ತಲೇ ಇದೆ ನೆತ್ತರು’. ಇದು ಕೂಡ ಭೂಗತ ಜಗತ್ತಿನ ವಸ್ತುವನ್ನೇ ಹೊಂದಿದೆ. ಒಬ್ಬ ಮಜೂರ್ (ಕಿಸೆಗಳ್ಳ) ಆಗಿದ್ದ ಆಸೀಫ್‌ನನ್ನು ಇಬ್ಬರು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗುವುದರೊಂದಿಗೆ ಈ ಕಾದಂಬರಿ ಆರಂಭವಾಗುತ್ತದೆ. ನಿರಪರಾಧಿಗಳೂ, ಅವಕಾಶಕೊಟ್ಟರೆ ಸುಧಾರಣೆಯ ಬದುಕನ್ನು ಬದುಕಬಲ್ಲ ಪುಡಿ ಅಪರಾಧಿಗಳು ಪೊಲೀಸರ ತಂತ್ರ ಕುತಂತ್ರಗಳಿಂದಾಗಿ ಹೇಗೆ ಸಮಾಜಘಾತಕರಾಗಬಹುದು ಎಂಬುದನ್ನ ಆಸೀಫ್, ವರದ ಮೊದಲಾದವರ ಪಾತ್ರಗಳಿಂದ ಶ್ರೀಧರ ನಮಗೆ ರೋಚಕವಾಗಿ ಕಟ್ಟಿಕೊಡುತ್ತಾರೆ. ಅಪಹರಣದ ಪ್ರಕರಣವೊಂದರಲ್ಲಿ ಅನುಮಾನದ ಮೇಲೆ ವಶಕ್ಕೆ ಪಡೆದ ಸುಧಾಕರ ಎಂಬ ವ್ಯಕ್ತಿ ಪೊಲೀಸರ ‘ವರ್ಕ್’ನಲ್ಲಿ ಸಾವನ್ನಪ್ಪಿದಾಗ ಅದನ್ನು ಅಪಘಾತದ ಸಾವು ಎಂದು ಬದಲಾಯಿಸಲು ನಡೆಸುವ ನಾಟಕಗಳು, ಅದನ್ನೇ ಪೊಲೀಸರ ವಿರುದ್ಧ ಬಳಸುವ ಭೂಗತ ಜಗತ್ತಿನ ಡಾನ್ ಹೀಗೆ ಕತೆಯು ತಿರುವುಗಳನ್ನು ಪಡೆಯುತ್ತ ಹೋಗುತ್ತದೆ. ಶ್ರೀಧರ ಅವರು ಪೊಲೀಸ್ ವ್ಯವಸ್ಥೆಯ ಒಳಪದರಗಳನ್ನು ಬಿಚ್ಚಿಡುತ್ತ ಹೋಗುತ್ತಾರೆ. ವ್ಯವಸ್ಥೆಯ ಒಳಗೇ ಒಬ್ಬರ ಕಾಲನ್ನು ಒಬ್ಬರು ಎಳೆಯುವುದು, ಇವರು ಕೇಡಿಗಳ ಬೆನ್ನುಬಿದ್ದರೆ ಕೇಡಿಗಳು ಇವರನ್ನು ಹೇಗೆ ಬೇಟೆಯಾಡುತ್ತಾರೆ, ರಾಜಕಾರಣಿಗಳು ಇವರಿಬ್ಬರನ್ನೂ ಹೇಗೆ ಬಳಸಿಕೊಳ್ಳುತ್ತಾರೆ, ಈ ಮೂರೂ ವರ್ಗದವರು ಮಾಧ್ಯಮದವರನ್ನು ಹೇಗೆ ಬಳಸಿಕೊಳ್ಳುತ್ತಾರೆ, ನ್ಯಾಯಾಂಗ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ಕ್ರಿಮಿನಲ್ ವಕೀಲರಾದವರು ಡಾನ್‌ಗಳಿಗಿಂತ ಏನೂ ಕಡಿಮೆಯವರಲ್ಲ ಎಂಬುದನ್ನೆಲ್ಲ ತುಂಬ ಹತ್ತಿರದಿಂದ ಬಲ್ಲವರಂತೆ ಹೇಳುವುದರಿಂದ ಎಲ್ಲಿಯೂ ಕೃತಕತೆ ಕಾಣುವುದಿಲ್ಲ. ಅವರ ಬರೆವಣಿಗೆಯ ಶೈಲಿಯಿಂದಾಗಿ ಪತ್ರಿಕಾ ವರದಿಯಾಗಿ ಮಾರ್ಪಡಬಹುದಾಗಿದ್ದ ಕತೆಯು ಕುತೂಹಲಭರಿತ ಕಾದಂಬರಿಯಾಗಿ ನಿಂತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಯನ್ ಇನ್ಸ್‌ಪೆಕ್ಟರ್ ಕುಮಾರ್ ವಿರುದ್ಧ ಒಳಸಂಚಿನ ಬಲೆಯನ್ನು ಹೆಣೆಯುತ್ತಿದ್ದಾಗ ಆಸೀಫ್ ಕುಮಾರ್ ಒಳ್ಳೆಯ ವ್ಯಕ್ತಿ ಎಂದು ತಾಯಿಯ ಆಣೆ ಮಾಡಿ ಹೇಳುತ್ತಾನೆ. ಅದಕ್ಕೆ ಡಾನ್ ವರದ, ನಿನ್ನ ಕಣ್ಣಿಗೆ ಮಣ್ಣೆರಚಲು ಹಾಗೆ ನಾಟಕ ಮಾಡಿದ್ದಾರೆ. ಅವರೆಲ್ಲರೂ ಒಂದೇ ಎಂದು ಹೇಳುತ್ತಾನೆ. ‘ಅಷ್ಟು ಒಳ್ಳೆಯವರಾಗಿದ್ರೆ, ಸ್ಟೇಷನ್ನಿನಲ್ಲಿ ಇರೋ ಬದಲು ಸಿ.ಓ.ಡಿ.ಲೋ ಇಲ್ಲ ಡಿ.ಜಿ. ಆಫೀಸ್ನಲ್ಲೋ ಇರ್ಬೇಕಾಗಿತ್ತು’ ಎಂಬ ವರದನ ಮಾತು ವ್ಯವಸ್ಥೆಯ ಬಗ್ಗೆ ಹೇಳುತ್ತದೆ. ಕತೆಯ ವಿವರಗಳನ್ನು ಓದುತ್ತ ಹೋದಂತೆ ನಮ್ಮ ಸಮಕಾಲೀನ ರಾಜಕಾರಣಿಗಳ, ಅಧಿಕಾರಿಗಳ ನೆರಳುಗಳನ್ನು ಕಾಣಬಹುದಾಗಿದೆ. ಕೆಲವು ಪಾತ್ರಗಳ ಹೆಸರುಗಳನ್ನು ನೋಡಿ- ಪಿ.ಕೆ.ಶಿವಪ್ರಸಾದ್, ಪಿ.ಕೆ.ಶಿವರಾಜ್, ಸಾಫ್ಟ್‌ವೇರ್ ಓನರ್ ಲೆದಾನಿ, ಇಂಡಸ್ಟ್ರಿಯಲ್ ಮಿನಿಸ್ಟರ್ ಶೇಷಪಾಂಡೆ ಇತ್ಯಾದಿ ಇತ್ಯಾದಿ. ಈ ಕಾದಂಬರಿಯಲ್ಲಿ ಕನ್ನಡ ಶಬ್ದಕೋಶಕ್ಕೆ ಸೇರಬೇಕಾದ ಹಲವು ಹೊಸ ಪದಗಳು ಇವೆ. ರೌಡಿಗಳ ಭಾಷೆ, ಪೊಲೀಸ್ ಭಾಷೆ, ರಾಜಕಾರಣಿಗಳ ಭಾಷೆಯಲ್ಲಿ ಬಳಕೆಯಾಗುವ ಹಲವು ವಿಶಿಷ್ಟ ಪದಗಳನ್ನು ಶ್ರೀಧರ್ ಇಲ್ಲಿ ಹೆಕ್ಕಿ ಬಳಸಿದ್ದಾರೆ. ಡಾಲಿ ಎಂದರೆ ಪೊಲೀಸ್, ತಾನ್ ಅಂದರೆ ಪಟ್ಟುಗಳು, ವರ್ಕ್ ಮಾಡು ಎಂದರೆ ಸ್ಟೇಶನ್ನಿಲ್ಲಿ ಆರೋಪಿಗಳಿಂದ ಸತ್ಯ ಹೇಳಿಸುವುದಕ್ಕೆ ಬಳಸುವ ಮಾರ್ಗ, ಕಾಂಪೋಲ್ ಎಂದರೆ ಕಮಿಶನರ್, ಮಜೂರ್ ಅಂದರೆ ಕಿಸೆಗಳ್ಳ…. ಹೀಗೆ ಅನೇಕ ಪದಗಳು ಗಮನಸೆಳೆಯುತ್ತವೆ. ಕಾದಂಬರಿಯ ಒಂದೆಡೆ ಕನ್ನಡದ ಸಮಸ್ಯೆಯನ್ನೂ ಅವರು ಚರ್ಚಿಸುತ್ತದೆ. ಇನ್ಸ್‌ಪೆಕ್ಟರ್ ಎಲ್.ಎನ್.ಕುಮಾರ್ ಮತ್ತು ವಸಂತ್ ಬೌರಿಂಗ್ ಇನ್ಸ್‌ಟಿಟ್ಯೂಟ್‌ನಲ್ಲಿ ಲಾಕ್‌ಅಪ್ ಡೆತ್ ಪ್ರಕರಣದ ಬಗ್ಗೆ ಚರ್ಚಿಸುತ್ತಿದ್ದಾಗ ಪಕ್ಕದ ಟೇಬಲ್ಲಿಗೆ ಒಂದು ದೊಡ್ಡ ಗುಂಪೇ ಬಂದು ಕುಳಿತಿತು. ಅವರು ಜೋರಾಗಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅರಚಾಡುತ್ತಿದ್ದರು. ಕುಮಾರ್‌ಗೆ ಕಿರಿಕಿರಿಯಾಗುತ್ತದೆ. ವಸಂತ್ ಕಡೆ ತಿರುಗಿ ಕುಮಾರ್ ಅವರು, ‘ನೀವು ಯಾವುದೇ ಕ್ಲಬ್ ಹೋಗಿ, ಕನ್ನಡದ ಅಟ್ಮಾಸ್ಪಿಯ್ ಕಾಣೋದೇ ಇಲ್ಲ… ಇನ್ನು ಸ್ವಲ್ಪ ದಿನ ಕಳೆದರೆ ನಾವು ಕನ್ನಡ ನಾಡಿನಲ್ಲೆ ಪರಕೀಯರಾಗಿಬಿಡ್ತೀವಿ… ಹಳ್ಳಿಗಳಲ್ಲಿ ರೈತರ ಸಮಸ್ಯೆ ಎಷ್ಟು ಸೀರಿಯಸ್ ಆಗಿದೆಯೊ ಇಲ್ಲಿ ಭಾಷೆಯ ಸಮಸ್ಯೆಯೂ ಅಷ್ಟೆ… ಒಂದು ದಿನ ರೈತರ ಸಮಸ್ಯೆಯನ್ನು ಬಗೆಹರಿಸಬಹುದು, ಆದರೆ ಬೆಂಗಳೂರಿನಲ್ಲಿ ಪರಭಾಷಾ ಸಮಸ್ಯೆ ಬಗೆಹರಿಸೋದಕ್ಕೆ ಆಗುತ್ತೆ ಅಂತಾನೆ ನನಗೆ ಕಾಣಿಸ್ತಿಲ್ಲ…’ ಇದು ಲೇಖಕರ ಕನ್ನಡದ ಬಗೆಗಿನ ಕಾಳಜಿಯನ್ನು ತೋರಿಸುತ್ತಿದೆ. ಈ ಕಾದಂಬರಿಯ ಒಂದು ವಿಶೇಷ ಪಾತ್ರ ಕ್ರಿಮಿನಲ್ ಲಾಯರ್ ದೇವದಾಸ್. ಅವರ ವಿವಿಧ ರೀತಿಯ ಹವ್ಯಾಸಗಳು, ಇತರರಿಗೆ ವಿಶೇಷವೆಂದು ತೋರುವ ಅವರ ವೈಶಿಷ್ಟ್ಯಗಳು ಕಾದಂಬರಿಯಲ್ಲಿ ಅವರಿಗೆ ಪ್ರತ್ಯೇಕ ಸ್ಥಾನವನ್ನು ನೀಡುತ್ತದೆ. ಅವರ ತಮ್ಮ ಸಾವನ್ನು ತಾವೇ ತಂದುಕೊಳ್ಳುವ ರೀತಿಯಂತೂ ಅವರ ವೃತ್ತಿಗೆ ಅನುಗುಣವಾಗಿಯೇ ಇದೆ. ಸಾವನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಹೇಳುವ ಅವರು ಸಾವಿನ ಭೀತಿಗಿಂತ ಬದುಕನ್ನು ನಿರ್ವಹಿಸುವಲ್ಲಿ ಎದುರಾಗುವ ತೊಡಕುಗಳನ್ನು ದಾಟುವಾಗ ಆಗುವ ಭಯವೇ ಭೀಕರ ಎಂಬುದಕ್ಕೆ ಉದಾಹರಣೆಯಂತಿದ್ದಾರೆ. ಈ ಕಾದಂಬರಿಯಲ್ಲಿ ನಾಯಕ ಯಾರು, ನಾಯಕಿ ಯಾರು ಎಂದೆಲ್ಲ ಹುಡುಕಾಡಿದರೆ ಉತ್ತರ ಸಿಗದು. ಇದರಲ್ಲಿ ವಸ್ತುವೇ ನಾಯಕ. ಕ್ರೌರ್ಯ ಇಲ್ಲಿ ರಂಜನೆಯಲ್ಲ, ಅದು ಮರುಕ ಮತ್ತು ಅಸಹ್ಯವನ್ನು ಹುಟ್ಟಿಸುತ್ತದೆ. ವಿರಕ್ತಿಯನ್ನು ಮೂಡಿಸುತ್ತದೆ. ಇದು ಕಾದಂಬರಿಯ ಹೆಚ್ಚಳ. ಕಾದಂಬರಿಯ ಹಿನ್ನುಡಿಯಲ್ಲಿ ಮೊಗಳ್ಳಿ ಗಣೇಶ್ ಅವರು ಹೇಳುವ ಮಾತನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವೆನ್ನಿಸುತ್ತದೆ: -ಇಡೀ ಕಾದಂಬರಿ ಅಪರಾಧಗಳ ಆತ್ಮಕಥನದಂತೆ ಭಾಸವಾಗುತ್ತದೆ. ಕಾದಂಬರಿ ನಿರುಮ್ಮಳವಾಗಿ ಮನುಷ್ಯ ಮನುಷ್ಯನ್ನೇ ಬೇಟೆ ಆಡುವ, ಮಿಕವಾಗಿಸಿಕೊಂಡು ನರಕ ಯಾತನೆ ನೀಡುವ ಬಲೆಯನ್ನು ನೇಯುವ ಪರಿಯನ್ನು ನಿರೂಪಿಸುತ್ತದೆ. ಪ್ರ: ಅಂಕಿತ ಪುಸ್ತಕ, ಬೆಂಗಳೂರು. ಪುಟಗಳು ೪೯೬, ಬೆಲೆ ₹ ೩೫೦