ಇತ್ತೀಚಿನ ಹದಿನೈದು ವರ್ಷಗಳಲ್ಲಿ ಡಿಂಗೀ ಇಲ್ಲದೆ ಹೊಳೆಸಾಲಿನವರಿಗೆ ಬದುಕೇ ಇಲ್ಲ ಅನ್ನಿಸಿಬಿಟ್ಟಿದೆ. ಅವರ ಬದುಕಿನ ಹಾಸುಹೊಕ್ಕುಗಳಲ್ಲಿ ಯಾವುದೋ ಒಂದು ಎಳೆಯಾಗಿ ಅದು ನೇಯ್ದುಕೊಂಡುಬಿಟ್ಟಿದೆ. ನಿಶ್ಶಬ್ದ ನದಿ ಕೊಳ್ಳದಲ್ಲಿ ಒಂದು ದಿನ ಡಿಂಗೀಯ ಸದ್ದು ಕೇಳಲಿಲ್ಲವೆಂದರೆ ಅದೇನೋ ಕಳೆದುಕೊಂಡ ಹಾಗೆ ಜನರು ಚಡಪಡಿಸುವರು. ಅವರ ಬದುಕಿನ ವೇಳಾಪಟ್ಟಿಯಲ್ಲಿ ಏರುಪೇರು ಸಂಭವಿಸಿ ಬಿಡುವುದು.
ಪ್ರಶಾಂತವಾದ ಶರಾವತಿ ಕೊಳ್ಳದಲ್ಲಿ ಡಿಂಗೀಯಲ್ಲಿ ಪ್ರಯಾಣಿಸುವುದೇ ಒಂದು ವಿಶಿಷ್ಟವಾದ ಅನುಭವ. ಗೇರುಸೊಪ್ಪೆಯಿಂದ ಹೊನ್ನಾವರದ ವರೆಗಿನ ಹೊಳೆಸಾಲಿನ ಜನರಿಗೆ ಜಲಸಂಚಾರದ ಸಾಧನವಾಗಿ ಡಿಂಗೀ ಬಳಕೆಯಾಗುತ್ತಿದೆ. ಏನಿದು ಡಿಂಗೀ? ಹೆಸರು ವಿಚಿತ್ರ ಅನ್ನಿಸುವುದಿಲ್ಲವೆ? ಇಂಗ್ಲಿಷ್ ನಿಘಂಟುವನ್ನು ತೆರೆದು ನೋಡಿದರೆ ಈ ಶಬ್ದ ಅಲ್ಲಿ ದೊರೆಯುತ್ತದೆ. ಆಟಿರಥಿ, ಆಟಿರಜಥಿ ಇಂಡಿಯಾದಲ್ಲಿ ಬಳಸುವ ಒಂದು ಪ್ರಕಾರದ ದೋಣಿ ಎಂಬ ಅರ್ಥವಿದೆ. ಆಟಿರ ಅಂದರೆ ಶಬ್ದ ಎಂಬ ಅರ್ಥವಿದೆ. ಬಹುಶಃ ಎಂಜಿನ್ ಹಚ್ಚಿದ ಕಾರಣ ಶಬ್ದ ಮಾಡುತ್ತ ಸಾಗುವ ದೋಣಿಯಾದ್ದರಿಂದ ಅದಕ್ಕೆ ಡಿಂಗೀ ಎಂಬ ಹೆಸರು ಬಂದಿರಬಹುದು.
ಬಹಳ ಮೊದಲು ಅರಣ್ಯ ಇಲಾಖೆಯವರ ಬಳಿ ಒಂದು ಡಿಂಗೀ ಇತ್ತು. ಇವತ್ತು ಸುಮಾರು ಹದಿನೈದರಿಂದ ಇಪ್ಪತ್ತು ಡಿಂಗೀಗಳು ಶರಾವತಿಯಲ್ಲಿಓಡಾಡುತ್ತಿವೆ. ಎಲ್ಲ ಡಿಂಗೀಗಳೂ ಒಂದೇ ಕಡೆಯಿಂದ ಹೊರಡುವುದಿಲ್ಲ. ಮಾಗೋಡು, ಮಣ್ಣಿಗೆ, ಬಳಕೂರು, ಕೊಡಾಣಿ, ಜಲವಳ್ಳಿ, ಕರಿಕುರುವ, ಮೋಳ್ಕೋಡು ಹೀಗೆ ಬೇರೆ ಬೇರೆ ಊರಿನಿಂದ ಹೊರಡುವ ಈ ಡಿಂಗೀಗಳು ಕೊನೆಗೆ ಸೇರುವುದು ಹೊನ್ನಾವರದ ಬಂದರವನ್ನೇ. ಅದೆಷ್ಟೋ ಜನರ ಬದುಕುಕಿನ ಹೊರೆಗಳನ್ನು ತಂದು ಅವರವರ ಊರುಗಳಲ್ಲಿ ಬಿಟ್ಟು ಮುಗಮ್ಮಾಗಿ ಸ್ವಸ್ಥಾನಕ್ಕೆ ತೆರಳಿ ಲಂಗರು ಇಳಿಸುವ ಡಿಂಗೀಗಳು ಒಂದು ರೀತಿಯಲ್ಲಿ ಸ್ಥಿತಪ್ರಜ್ಞ, ಮತ್ತೊಂದು ರೀತಿಯಲ್ಲಿ ರಾಯಭಾರಿ, ದೂತ, ಸೇವಕ, ಸ್ನೇಹಿತ ಎಲ್ಲವೂ ಹೌದು.
ಯಂತ್ರ ನಾಗರಿಕತೆ ಮನುಷ್ಯನನ್ನು ಎಲ್ಲ ಸ್ತರಗಳಲ್ಲೂ ತಟ್ಟುತ್ತಿರುವಾಗ ಈ ಹೊಳೆ ಸಾಲಿನ ಯಾವನೋ ಒಬ್ಬ ದೋಣಿಕಾರನ ತಲೆಯಲ್ಲಿ ಈ ಡಿಂಗೀಯ ವಿಚಾರ ರಿಂಗು ಹೊಡೆದಿರಬಹುದು. ಅವನು ಮಾಡಿದ್ದು ಇಷ್ಟೇ, ತನ್ನ ದೋಣಿಯ ಹೊಟ್ಟೆ ಬಗೆದು ನಡುವೆ ಅಡಿ ಅಗಲದ ಹಲಗೆ ಸೇರಿಸಿ ಹೊಲಿದು ಇಡೀ ದೋಣಿಯ ಅಗಲವನ್ನೇ ಹೆಚ್ಚಿಸಿದ. ಹೇಗೋ ಏನೋ ಮಾಡಿ ಒಂದು ಹಳೆಯ ಡೀಸೆಲ್ ಎಂಜಿನ್ ಸಂಪಾದಿಸಿದ. ಅದನ್ನು ತಂದು ದೋಣಿಯಲ್ಲಿ ಪ್ರತಿಷ್ಠಾಪಿಸಿದ. ಯಂತ್ರಜ್ಞರ ಸಹಾಯವನ್ನೂ ಪಡೆದ. ಅಲ್ಲಿಗೆ ದೋಣಿ ಇದ್ದದ್ದು ಡಿಂಗೀಯಾಗಿ ರೂಪಾಂತರ ಹೊಂದಿತು. ಕಂಬಳಿ ಹುಳುವು ಚಿಟ್ಟೆಯಾಗಿ ಪರಿವರ್ತನೆ ಹೊಂದಿ ರೆಕ್ಕೆ ಬಡಿದು ಗಗನಕ್ಕೆ ಚಿಮ್ಮಿದ ಹಾಗಿನ ಪವಾಡ ಇದು.
ಈ ಮೊದಲ ಡಿಂಗೀ ಹೊಳೆಸಾಲಿನ ಪ್ರಶಾಂತ ನೀರಿನ ಮೇಲೆ ಗಾಸುಗಳನ್ನು ಎಬ್ಬಿಸುತ್ತ ಬಂದಾಗ ಅದೆಂಥದ್ದೋ ಪುಳಕ, ಶಬ್ದಕ್ಕೆ ನಿಲುಕದ್ದು. ಡಿಂಗೀ ಹತ್ತಬೇಕು ಎಂದೇ ಕೆಲವರು ಹತ್ತಿ ಹೊನ್ನಾವರಕ್ಕೆ ಹೋಗಿ ಬಂದರು. ಒಂದಿದ್ದ ಡಿಂಗೀ ಹತ್ತಾಗಿ ಇಪ್ಪತ್ತಾಗಿ ಹೊಳೆ ತುಂಬ ಹರಡಿಕೊಂಡಾಗ ಅದು ನಿತ್ಯದ ಮಾತಾಯಿತು. ಬೇಕಿರಲಿ ಬೇಡವಿರಲಿ ಅದರಲ್ಲಿ ಹತ್ತಿ ಹೊನ್ನಾವರಕ್ಕೋ ಮತ್ತೆಲ್ಲಿಗೋ ಹೋಗಲೇ ಬೇಕಾಯಿತು.
ಇವತ್ತು ಡಿಂಗೀ ತಮ್ಮ ಹೊಳೆಬಾಗಿಲಲ್ಲಿ ಬಂದಾಗ ಡಿಂಗೀಯವನಿಗೆ ಅದೇನೋ ಹೇಳಿ ಒಂದಿಷ್ಟು ಹಣವನ್ನು ಕೊಡುವರು. ಅವರು ಬರುವುದಿಲ್ಲ. ಡಿಂಗೀಯವನೇ ಅವರಿಗಾಗಿ ಹೊನ್ನಾವರದಲ್ಲಿ ಸಂತೆ ಮಾಡಿಕೊಂಡು ಬಂದು ಅವರಿಗೆ ಒಪ್ಪಿಸುವನು. ಕೆಲವರು ತರಕಾರಿ ತರಿಸಿದರೆ ಇನ್ನು ಕೆಲವರು ಆಸ್ಪತ್ರೆಗೆ ಹೋಗಿ ಔಷಧ ತಂದುಕೊಡಲೂ ಹೇಳುವರು. ಕೆಲವರು ತಮ್ಮ ಖಾಲಿಯಾದ ಸಿಲಿಂಡರ್ ಕೊಟ್ಟು ತುಂಬಿದ ಗ್ಯಾಸ್ ಸಿಲಿಂಡರ್ ತರಲು ಹೇಳುವರು. ಕೆಲವರು ತಮ್ಮ ಮನೆಯ ಹಾಲನ್ನು ಹೊನ್ನಾವರದ ಬಂದರದ ಮೇಲಿನ ಚಾದಂಗಡಿಗೆ ನಿತ್ಯವೂ ಕಳುಹಿಸುವರು. ಇನ್ನು ಕೆಲವರು ಬಂದರದ ಮೇಲೆ ಸಿಗುವ ನಂದಿನಿ ಹಾಲಿನ ಪ್ಯಾಕೆಟ್ ತಂದುಕೊಡಲು ಹೇಳುವರು. ಇನ್ಯಾರೋ ಸಿಯಾಳ, ಮತ್ಯಾರೋ ಬಾಳೆಗೊನೆ, ಅಡಕೆ, ಹುಲ್ಲುಹೊರೆ, ಬೆಲ್ಲ ತುಂಬಿದ ಚಡಕೆ ಎಲ್ಲವನದನೂ ಹೊನ್ನಾವರಕ್ಕೆ ಕಳುಹಿಸುವರು. ಕೆಲವೊಮ್ಮೆ ತಾವೇ ಹೋಗುವರು. ಇಲ್ಲದಿದ್ದರೆ ಡಿಂಗೀಯವನಿಗೇ ಅದನ್ನೆಲ್ಲ ಮಾರಿ ಹಣ ತಂದುಕೊಡಲು ಹೇಳುವರು. ಇಷ್ಟೆಲ್ಲ ಮಾಡುವ ಡಿಂಗೀಯವ ನಾಲ್ಕಾರು ದಿನ ಇಲ್ಲದಿದ್ದರೆ ಆಗುವ ಪರಿಣಾಮವನ್ನು ಊಹಿಸಿಕೊಳ್ಳಿ.
ಡಿಂಗೀಗಳು ಹೊಳೆಸಾಲಿನವರ ಬದುಕನ್ನು ಇಷ್ಟೊಂದು ತೀವ್ರವಾಗಿ ಆಕ್ರಮಿಸಿದ್ದರಿಂದಲೇ ನದಿಯ ಎರಡೂ ದಡದಲ್ಲಿ ಬಸ್ ಸೌಕರ್ಯ ಸರಿಯಾಗಿ ಇಲ್ಲ. ಪ್ರಾರಂಭವಾದ ಬಸ್ಸುಗಳು ಜನರಿಲ್ಲ ಜನರಿಲ್ಲ ಎಂಬ ಕಾರಣಕ್ಕಾಗಿ ಬಂದಾಗಿದ್ದೂ ಇದೆ. ಡಿಂಗೀ ಪ್ರಯಾಣದಲ್ಲಿ ಸಿಗುವ ಮಜ ಬಸ್ ಪ್ರಯಾಣದಲ್ಲಿ ಎಲ್ಲಿ ಸಿಗಬೇಕು. ಹೇಗೆಬೇಕೋ ಹಾಗೆ ಆರಾಮವಾಗಿ ಡಿಂಗೀಯಲ್ಲಿ ಕುಳಿತುಕೊಳ್ಳಬಹುದು. ಮನೆಯಲ್ಲಿ ಕುಳಿತ ಹಾಗೇ ಅನ್ನಿ. ಯಾರೋ ತಂದ ಕವಳದ ಸಂಚಿ ಇಡೀ ಡಿಂಗೀಯಲ್ಲಿ ಓಡಾಡಿ ಎಲ್ಲರ ಬಾಯನ್ನೂ ಕೆಂಪು ಮಾಡುವುದು. ಕವಳ ಅಗಿದು ಮುಗಿದ ಮೇಲೆ ಪಕ್ಕದ ನೀರಿನಲ್ಲೇ ಪುರುಕ್ ಎಂದು ಉಗುಳಿ, ಬೊಗಸೆಯಲ್ಲಿ ನೀರನ್ನು ತೆಗೆದು ಬಾಯಿ ಮುಕ್ಕಳಿಸಿ ನಿರುಂಬಳವಾಗಿ ಕುಳಿತುಕೊಳ್ಳಬಹುದು. ಮನೆಯಲ್ಲಿ ಗಡಿಬಿಡಿಯಲ್ಲಿ ತಲೆಬಾಚಲು ಮರೆತು ಬಂದ ನಾಗುನೋ, ಶುಕ್ರಿಯೋ, ಪಾರ್ವತಿಯೋ, ಮರಬಳ್ಳಿಯೋ, ಅಳ್ಳಂಕಿಯೋ ಡಿಂಗೀಯಲ್ಲಿ ಆರಾಮವಾಗಿ ತಲೆಬಾಚುತ್ತ ಕೂಡುವುದನ್ನು ಕಾಣಬಹುದು. ಮಕ್ಕಳ ಮೂಗಿನಿಂದ ಸೋರುತ್ತಿದ್ದ ಸಿಂಬಳವನ್ನು ಅವ್ವ ಅನ್ನಿಸಿಕೊಂಡವಳು ಸೀದಿ ಪಕ್ಕದ ನೀರಿನಲ್ಲಿ ಕೈ ಅದ್ದಿ ಮಗುವಿನ ಮುಖವನ್ನು ಒರಿಸಿ ಸೆರಗಿನಲ್ಲಿ ಒರಗಿಸಿಕೋಳ್ಳುವ ತಾಯ್ತನದ ಪ್ರೀತಿಯನ್ನು ಅಲ್ಲಿ ನಾವು ಕಾಣಬಹುದು. ಹೊಳೆಸಾಲಿನ ಅದ್ಯಾವುದೋ ಹಳ್ಳಿಯಲ್ಲಿ ಮನೆಯ ಮುಂದೆ ಕಸಗುಡಿಸುತ್ತಲೋ, ಕೊಟ್ಟಿಗೆಯಲ್ಲಿ ಸಗಣಿ ಬಾಚುತ್ತಲೋ ಇದ್ದ ಹುಡುಗಿಯ ನೆಂಟಸ್ಥಿಕೆ ಗೋವಾದಲ್ಲೋ ರತ್ನಾಗಿರಿಯಲ್ಲೋ ಮೀನು ಲಾಂಚಿನಲ್ಲಿ ಕೆಲಸಕ್ಕೆ ಹೋಗಿದ್ದ ಅಥವಾ ಹುಬ್ಬಳ್ಳಿ, ಬೆಳಗಾವಿ ಕಡೆ ಹೊಟೇಲಿನಲ್ಲಿ ಕೆಲಸ ಮಾಡುವ ಹುಡುಗನೊಂದಿಗೆ ಕುದುರಿಸುವ ಬಗ್ಗೆ ಈ ಡಿಂಗೀಯಲ್ಲಿ ಮಾತುಕತೆ ನಡೆದಿರುತ್ತದೆ. ಇನ್ಯಾರದೋ ಮನೆಯ ಪಾಲು ಪಟ್ಟಿಯ ವಿಚಾರ ಅಂತಿಮ ರೂಪ ಪಡೆಯುವುದು ಕೆಲವೊಮ್ಮೆ ಈ ಡಿಂಗೀಯಲ್ಲಿಯೇ. ಸಾಯುವರೆಗೆ ಪರಸ್ಪರ ಮುಖ ನೋಡುವುದಿಲ್ಲ ಎಂದು ಪಣ ತೊಟ್ಟವರು ಈ ಡಿಂಗೀಯಲ್ಲಿಯೇ ರಾಜಿಯಾಗಿದ್ದಾರೆ.
ಇಂಥ ಒಂದು ಡಿಂಗೀತನವನ್ನು ಬದುಕಬೇಕು ಎಂದು ಹೇಳುವುದಕ್ಕೆ ಬೇರೆ ವೇದ ಪುರಾಣಗಳನ್ನು ಓದಬೇಕೆ? ಡಿಂಗೀಯ ಸಹವಾಸವೇ ಡಿಂಗೀತನವನ್ನು ಮೈಗೂಡಿಸಿಬಿಡುತ್ತದೆ. ಹೀಗಾಗಿ ಹೊಳೆಸಾಲಿನಲ್ಲಿ ಯಾರಾದರೂ ಏನಾದರೂ ಹೇಳಿದರೆ ಆಗುವುದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಸಾಯುವ ತನಕ ಹಗೆ ಸಾಧಿಸುವ ಛಲ ಇವರದಲ್ಲ. ಏದುರು ಪಕ್ಷದವರು ಅದೆಷ್ಟೇ ದೊಡ್ಡ ತಪ್ಪು ಮಾಡಿದರೂ ಅವರು ಜೋಲು ಮೋರೆಯೊಂದಿಗೆ ಎದುರಿಗೆ ಬಂದರೆ ಪ್ರೀತಿಯಿಂದ ಅಪ್ಪಿಕೊಂಡುಬಿಡುವಂಥವರು.
ಅದೊಂದು ಅನಾದಿಯ ಕಾಲವಿತ್ತು. ಹೊಳೆಸಾಲಿನಲ್ಲಿ ಮುಂಗೋಳಿ ಕೂಗುವ ಹೊತ್ತಿನಲ್ಲಿಯೇ ಶರಾವತಿಯ ಕೊಳ್ಳದಲ್ಲಿ ಹೊನ್ನಾವರದ ಕಡೆಗೆ ಹೋಗುವ ದೋಣಿಯವರು ಗಂಟಲು ಹರಿಯುವ ಹಾಗೆ ದೊಡ್ಡದಾಗಿ ಪ್ರಯಾಣಿಕರಿಗಾಗಿ `ಕೂ’ ಹಾಕುತ್ತಿದ್ದರು. ಅವರ `ಕೂ’ಗೆ ಪ್ರಯಾಣಿಕರು ಮರು `ಕೂ’ ಕೊಡುತ್ತಿದ್ದರು. ಈ `ಕೂ’ಗಳ ಧ್ವನಿ ಪ್ರತಿಧ್ವನಿ ನೀರವತೆಯ ಮುಂಜಾವಿನಲ್ಲಿ ಬೆಳಗನ್ನು ಸಾರಬೇಕಿದ್ದ ಕಾಗೆ, ಕೋಗಿಲೆ, ಗಿಳಿ, ಗೊರವಂಕಗಳ ಗೂಡುಗಳ ಮೇಲೆ ಕಲ್ಲು ಒಗೆದಂತೆ ಮಾಡಿ ಅವು ಗಡಬಡಿಸಿ ಏಳುವ ಹಾಗೆ ಮಾಡುತಿತ್ತು. ಬೆಳಗಿನ ಮಂದಾನಿಲಕ್ಕೆ ದೋಣಿಯನ್ನು ಎಳೆಯುವ ಶಕ್ತಿ ಸಾಲದೆ ದೋಣಿಯವನು ಜಲ್ಲದಿಂದ ಸಳಪಳ ಮಾಡುತ್ತ ಒತ್ತಬೇಕಾಗುತ್ತಿತ್ತು. ಬೆಳ್ಳಿ ಕಂತುವ ಹೊತ್ತಿಗೆ ಗುಡಿಸಲಿನಲ್ಲಿ ಗಂಜಿ ಉಂಡು ಹೊರಬಿದ್ದ ಅವನ ತೋಳುಗಳಲ್ಲಿ ಅದೇನೋ ಶಕ್ತಿ. ಸಣ್ಣ ಧ್ವನಿಯಲ್ಲಿ ಹೋ ಹೈಲೇಸಾ… ಹೇಳುತ್ತ `ಕೂ’ ಬಂದ ದಿಕ್ಕಿಗೆ ಚುಕ್ಕಾಣಿ ತಿರುಗಿಸಿ ಬರುವವರನ್ನು ಅವರ ಸಾಮಾನುಗಳನ್ನು ತುಂಬಿಕೊಂಡು ಹೊನ್ನಾವರದ ಬಂದರಕ್ಕೆ ತಂದು ಇಳಿಸಿದ ಅಂದರೆ ಅವನು ಧನ್ಯ.
ಹಾಯಿದೋಣಿಯವರ ಹೊಟ್ಟೆಗೆ ಹೊಡೆತ ಕೊಟ್ಟಿದ್ದು ದೇಶ ಸ್ವತಂತ್ರವಾಗುವುದಕ್ಕೆ ಸ್ವಲ್ಪ ಮೊದಲು ಬಂದ ಲಾಂಚು. ಕೇರಳ ಕಡೆಯವರೊಬ್ಬರು ಎರಡು ಲಾಂಚುಗಳನ್ನು ಶರಾವತಿಯಲ್ಲಿ ತಮದುಬಿಟ್ಟರು. ದಿನದಲ್ಲಿ ಮೂರು ಬಾರಿ ಗೇರುಸಪ್ಪೆಗೆ ಮೂರುಬಾರಿ ಹೊನ್ನಾವರಕ್ಕೆ ಸಾರಿಗೆ ಹೊಡೆದ ಲಾಂಚಿನ ವೈಭವದ ದಿನಗಳು ಅನನ್ಯ. ಅದಕ್ಕೆ ಅದೇ ಸಾಟಿ. ಐದಾರು ನೂರು ಜನರನ್ನು ಒಂದೇ ಸಲಕ್ಕೆ ಕರೆದೊಯ್ಯುವ ಸಾಮಥ್ರ್ಯದ ಲಾಂಚು ಹೊಳೆಸಾಲಿನಲ್ಲಿ ಎಬ್ಬಿಸಿದ ಅಲೆಗಳಿಗೆ ಲೆಕ್ಕವೇ ಇಲ್ಲ. ಇಷ್ಟಾಗಿಯೂ ಹಾಯಿದೋಣಿಗಳು ಹೊನ್ನಾವರಕ್ಕೆ ಹೋಗುವುದು ತಪ್ಪಲಿಲ್ಲ. ಅವಕ್ಕೆ ಅವುಗಳದೇ ಆದ ಗಿರಾಕಿಗಳಿದ್ದರು. ಅವುಗಳದೇ ಬಾಡಿಗೆಗಳು ಇದ್ದವು. ಲಾಂಚಿಗೆಂದರೆ ನಿದರ್ಿಷ್ಟ ಬಂದರುಗಳು ಇರುತ್ತಿದ್ದವು. ನೀರು ಕಡಿಮೆ ಇರುವಲ್ಲಿ ಅವು ಹೋಗುತ್ತಿರಲಿಲ್ಲ. ಪ್ರಯಾಣಿಕ ಬರುವನೆಂದು ಕಾಯ್ದು ನಿಲ್ಲುತ್ತಿರಲಿಲ್ಲ. ಅದಕ್ಕೆ ಅದರದೇ ಆದ ಸಮಯ ಇರುತ್ತಿತ್ತು. ಆ ಸಮಯಕ್ಕೆ ಬಂದರದಲ್ಲಿ ಬಂದು ನಿಂತವರನ್ನು ಮಾತ್ರ ಅದು ಕರೆದೊಯ್ಯುತ್ತಿತ್ತು. ದೋಣಿಯವರಿಗಾದರೆ ಅದೆಲ್ಲ ಇರಲಿಲ್ಲ. ಒಬ್ಬರು ಬರುತ್ತಾರೆಂದು ಹೇಳಿದರೆ ಹತ್ತು ನಿಮಿಷ ನಿಲ್ಲುತ್ತಿದ್ದರು. ಮನೆಯ ಮುಂದೆ ಹೊಳೆಬಾಗಿಲಿನಲ್ಲಿ ಬಂದು ಕೂ ಹಾಕುತ್ತಿದ್ದರು. ಕೊಡಬೇಕಾದ ದುಡ್ಡು ಲಾಂಚಿನವರಿಗೆ ಕೊಡುವುದರ ಅರ್ಧ ಮಾತ್ರ ಆಗಿತ್ತು. ಕೈಯಲ್ಲಿ ಕಾಸಿಲ್ಲದಿದ್ದರೆ ನಾಳೆ ಕೊಡುತ್ತೇನೆ ಎಂದರೂ ನಡೆಯುತ್ತಿತ್ತು. ಲಾಂಚಿನಲ್ಲಿ ಟಿಕೆಟು ಹರಿದ ಮೇಲೆ ಉದ್ರಿ ಇರಲೇ ಇಲ್ಲ.
ಇದೀಗ ಡಿಂಗೀಗಳು ಬಂದ ಮೇಲೆ ಲಾಂಚು ದೋಣಿ ಎರಡನ್ನೂ ಮೂಲೆಗುಂಪು ಮಾಡಿಬಿಟ್ಟಿವೆ. ಲಾಂಚುಗಳು ಹೋಗುವ ವೇಗದಲ್ಲೇ ಅವು ಹೋಗುತ್ತವೆ. ಕಡಿಮೆ ನೀರು ಇರುವ ಜಾಗದಲ್ಲೂ ಅವು ಚಲಿಸುತ್ತವೆ. ದೋಣಿಗಳ ಹಾಗೆ ಅವುಗಳಿಗೂ ನಿದರ್ಿಷ್` ಬಂದರುಗಳಿಲ್ಲ. ಕೈಬೀಸಿ ಕರೆದಲ್ಲೆಲ್ಲ ನಿಲ್ಲುತ್ತವೆ. ಊರುಕಡೆಯ ಜನರೇ ಆಗಿರುವುದರಿಂದ ಹಣವಿಲ್ಲದೆ ನಾಳೆ ಕೊಡುತ್ತೇನೆ ಅಂದರೂ ನಡೆಯುತ್ತದೆ. ಹೀಗಾಗಿ ದೋಣಿಗಳು ಮತ್ತು ಲಾಂಚು ಎರಡನ್ನೂ ಈ ಡಿಂಗೀಗಳು ದಡ ಸೇರುವ ಹಾಗೆ ಮಾಡಿದವು.
ಇವತ್ತು ಹೊಳೆಸಾಲಿನಲ್ಲಿ ಹಾಯಿ ಕಟ್ಟಿದ ದೋಣಿ ಕಾಣುವುದಕ್ಕೆ ಸಿಗುವುದೇ ಇಲ್ಲ. ಹೊತ್ತು ಮೂಡುವ ಮೊದಲಿನ ಮುಂಬೆಳಗಿನಲ್ಲಿ `ಕೂ’ ಕೇಳಿ ಬರುವುದಿಲ್ಲ. ನೀರಿನ ಮೇಲೆ ತೇರು ಬಂದಹಾಗೆ ಬರುತ್ತಿದ್ದ ಲಾಂಚು ಹಳೆಯ ನೆನಹಾಗಿದೆ.
ಅಂದು ಎರಡು ಲಾಂಚುಗಳು ಮಾತ್ರ ಶರಾವತಿಯ ಒಡಲಲ್ಲಿ ಹೊಗೆ ಉಗುಳುತ್ತಿದ್ದವು. ಇವತ್ತು ಸುಮಾರು ಇಪ್ಪತ್ತರಷ್ಟು ಡಿಂಗೀಗಳು ಉಗುಳುವ ಹೊಗೆಯಿಂದ ಪ್ರಶಾಂತ ಪರಿಶುದ್ಧ ಕಣಿವೆಯ ಒಡಲು ಕಲುಷಿತಗೊಳ್ಳುತ್ತಿದೆ. ನನ್ನ ಇನ್ನೊಂದು ಆತಂಕ ಸ್ವಲ್ಪ ಗಂಬೀರವಾದದ್ದೇ: ಈವತ್ತು ಡಿಂಗೀಗಳ ಒತ್ತುವರಿಯಿಂದ ಅಸ್ತಿತ್ವ ಕಳೆದುಕೊಂಡಿರುವ ಹಾಯಿದೋಣಿಗಳು ದಡ ಸೇರಿಬಿಟ್ಟವು ಸರಿ. ಅದಕ್ಕೆ ಸಂಬಂಧಿಸಿದಂತೆ ಚಲಾವಣೆಯಲ್ಲಿದ್ದ ಶಬ್ದಗಳೆಲ್ಲ ಜನರ ಮನಸ್ಸಿನಿಂದ ಮರೆಯಾಗಿಬಿಡುತ್ತವೆಯಲ್ಲ. ಇನ್ನೊಂದು ತಲೆಮಾರು ಕಳೆದ ಮೇಲೆ ಕಾಟಿ ಕಂಬ ಅಂದರೇನು, ಹಾಯಿ ಅಂದರೇನು, ಬರಾಸಿನ ಹಗ್ಗ ಎಂದರೇನು, ಅಡಗ, ಬಾಣಿಗೆ, ಮೆಟ್ಟುಹಲಗೆ, ನಾಳಿ, ಸೌಟಿ, ಕಡ್ತಾನ, ಬೆದರಿಗೆ ಅಂದರೇನು ಎಂದು ಕೇಳಿದರೆ ಅಸಹಾಯಕರಾಗಿ ಕೈ ತಿರುಗಿಸುವ ಪ್ರಸಂಗ ಬಂದೇ ಬರುತ್ತದೆ. ಯಾಂತ್ರಿಕತೆ ಯಾವ ರೀತಿಯಲ್ಲಿ ಸಾಂಸ್ಕೃತಿಕವಾಗಿ ದಿವಾಳಿ ಎಬ್ಬಿಸುತ್ತವೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ. ಈ ಕಳೆದುಕೊಳ್ಳುವುದರ ಜೊತೆಯಲ್ಲಿಯೇ ಡಿಂಗೀಗೆ ಸಂಬಂಧಿಸಿದಂತೆ ಏನೆನೋ ಹೊಸ ಶಬ್ದಗಳು ಬಾಷೆಗೆ ಸೇರ್ಪಡೆಗೊಳ್ಳುವ ಕ್ರಿಯೆಯೂ ನಡೆಯುತ್ತದೆ. ಈ ಕಳೆಯುವುದು ಸೇರಿಸಿಕೊಳ್ಳುವುದು ನಿರಂತರ ಇರುವುದರಿಂದಲೇ ಎಲ್ಲಿಯೂ ನಿವರ್ಾತವಿಲ್ಲದೆ ಜನಜೀವನ ಮುಂದುವರಿದಿರುವುದು.
ಇಷ್ಟಾಗಿಯೂ ಡಿಂಗೀ ಇಲ್ಲದ ಹೊಳೆಸಾಲಿನ ಜನರ ಬದುಕನ್ನು ಇವತ್ತು ಊಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಪುರುಸೊತ್ತು ಮಾಡಿಕೊಂಡು ನೀವೂ ಒಮ್ಮೆ ಇತ್ತಕಡೆ ಬನ್ನಿ. ಡಿಮಗೀಯಲ್ಲಿ ಕುಳಿತು ಹೊಳೆಸಾಲಿನ ಪ್ರವಾಸ ಮಾಡಿದರೆ ಮುಂದೆ ಮೊಮ್ಮಕ್ಕಳಿಗೆ ಹೇಳಲು ನಿಮ್ಮ ನೆನಪಿನ ಬುತ್ತಿ ಇನ್ನಷ್ಟು ಉಬ್ಬೀತು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.