ಮರಾಠಿ ಸಾಹಿತ್ಯದಲ್ಲಿ ಆತ್ಮಕಥನವು ಅತ್ಯಂತ ಪ್ರಬಲವಾದ ಅಭಿವ್ಯಕ್ತಿಯಾಗಿದೆ. ಅಲ್ಲಿಯ ಸತ್ವಶಾಲಿ ಮತ್ತು ಬೆಂಕಿಯುಂಡೆಯಂಥ ಬರೆಹಗಳು ಅವತರಿಸಿದ್ದು ಆತ್ಮಕಥನದ ರೂಪದಲ್ಲಿಯೇ. ಅದರಲ್ಲಿಯೂ ದಲಿತ ವರ್ಗದವರು ಬರೆದಿರುವ ಆತ್ಮಕಥನಗಳು ಅದರಲ್ಲಿಯ ಹಸಿಹಸಿಯಾದ ಮತ್ತು ಅಕ್ಷರಲೋಕಕ್ಕೆ ಮುಖಾಮುಖಿಯಾದವರ ತಾಜಾತನದಿಂದಾಗಿ ಉತ್ಕೃಷ್ಟ ಸಾಹಿತ್ಯವಾಗಿಯೂ ಮನ್ನಣೆ ಗಳಿಸಿದವು. ಆ ಸಾಲಿನಲ್ಲಿ ನಿಲ್ಲುವ ಆತ್ಮಕಥನ ಪ್ರಸಿದ್ಧ ವಿಜ್ಞಾನಿ ನಾಮದೇವ ನಿಮ್ಗಾಡೆಯವರ ‘ಹುಲಿಯ ನೆರಳಿನೊಳಗೆ’. ಇದಕ್ಕೊಂದು ಉಪಶೀರ್ಷಿಕೆ ‘ಅಂಬೇಡ್ಕರ್‌ವಾದಿಯ ಆತ್ಮಕಥೆ’ ಎಂದು. ಇದನ್ನು ಬಿ.ಶ್ರೀಪಾದ ಅವರು ಭಾವಾನುವಾದ ಮಾಡಿದ್ದಾರೆ. ಮೂಲ ಆತ್ಮಕತೆಯನ್ನು ಓದುವಾಗ ತಮಗೆ ಮುಖ್ಯವೆನಿಸಿದ್ದು ಕನ್ನಡದ ಓದುಗರಿಗೂ ಮುಖ್ಯವೆನಿಸಬಹುದು ಎಂಬ ಆಶಯದೊಂದಿಗೆ ಈ ಭಾವಾನುವಾದ ನಡೆದಿದೆ. ಅಂಬೇಡ್ಕರ್ ಅವರನ್ನು ಧಗಧಗಿಸುವ , ಪ್ರಜ್ವಲವಾಗಿ ಸುಡುತ್ತಿರುವ ಹುಲಿಯೆಂದು ನಿಮ್ಗಾಡೆ ವರ್ಣಿಸುತ್ತಾರೆ. ಈ ಆತ್ಮಕತೆಯು ನಿಮ್ಗಾಡೆಯವರ ಜೀವನ ವೃತ್ತಾಂತದ ಜೊತೆಜೊತೆಗೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕಿನ ವಿವರಗಳೂ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅಂಬೇಡ್ಕರ್ ಅವರ ಬಳಿಕ ಅಮೆರಿಕದ ವಿಶ್ವವಿದ್ಯಾನಿಲಯವೊಂದರಿಂದ ಪಿಎಚ್.ಡಿ ಪದವಿ ಪಡೆದ ಎರಡನೆಯ ದಲಿತ ಎಂಬ ಪ್ರಸಿದ್ಧಿ ನಿಮ್ಗಾಡೆಯವರದು. ನಿಮ್ಗಾಡೆ ಎನ್ನುವುದು ಅವರ ಮನೆತನದ ಹೆಸರು. ದಲಿತರಲ್ಲಿ ಅವರ ಮನೆತನದ ಹೆಸರುಗಳು ಪ್ರಕೃತಿಯ ಸಸ್ಯಗಳ ಹೆಸರನ್ನು ಹೊಂದಿರುವವು. ನಿಮ್ಗಾಡೆ ಎನ್ನುವುದು ಬೇವಿನ ಮರದಿಂದ ಬಂದದ್ದು. ಬೇವು ನೋವು ಉಪಶಮನಕಾರಿ ಗುಣವನ್ನು ಹೊಂದಿರುವಂಥದ್ದು. ಕೋಬ್ರಗಾಡೆ ಎಂದರೆ ತೆಂಗಿನ ಮರ, ಅಂಬಗಾಡೆ ಎಂದರೆ ಮಾವಿನ ಮರ, ಜಮಗಾಡೆ ಎಂದರೆ ಸೀಬೆಮರ ಎನ್ನುವ ಅವರು ಕುಟುಂಬ ನಾಮವಾಗಿ ಸಸ್ಯಗಳ ಹೆಸರನ್ನು ಹೊಂದಿರುವ ಮಾದರಿ ಬುದ್ಧನ ಕಾಲದಿಂದಲೂ ಇದೆ. ಭಾರತದ ಅಸ್ಪಶ್ಯರು ಮೂಲಭೂತವಾಗಿ ಬೌದ್ಧರು ಎಂಬ ತರ್ಕವನ್ನು ಮಂಡಿಸುತ್ತಾರೆ. ಎಲ್ಲ ದಲಿತರ ಹಾಗೆ ನಿಮ್ಗಾಡೆಯವರ ಬಾಲ್ಯವೂ ತೀವ್ರವಾದ ಅಪಮಾನ, ಆಕ್ರೋಶಗಳಿಂದ ಕೂಡಿತ್ತು. ತಡವಾಗಿಯೇ ಅವರು ಶಾಲೆಯನ್ನು ಸೇರಿದ್ದು. ಇದನ್ನು ಅವರ ಮಾತುಗಳಲ್ಲಿಯೇ ಓದಿ. ‘‘೧೯೩೪ರಲ್ಲಿ ನನ್ನ ೧೪ನೆ ವಯಸ್ಸಿನಲ್ಲಿ ನಾನು ಶಾಲೆ ಸೇರಿಕೊಂಡೆ. ನನ್ನ ಹೆಸರನ್ನು ನೊಂದಾಯಿಸಿಕೊಳ್ಳುವ ದಿನದಂದು ಶಾಲೆಯ ಮುಖ್ಯೋಪಾಧ್ಯಾಯರು ನಾನು ಅಸ್ಪಶ್ಯನಾಗಿದ್ದಕ್ಕಾಗಿ ನಾನು ತರಗತಿಯೊಳಗೆ ಪ್ರವೇಶಿಸಬಾರದೆಂದು ಕಟ್ಟಪ್ಪಣೆಯನ್ನು ಕೊಟ್ಟಿದ್ದರು. ನಾನು ಶಾಲೆಯ ಹೊರಗಿನ ಬಿಸಿಲಿನ ವರಾಂಡದಲ್ಲಿ ನಿಂತು ಕಿಟಕಿಯ ಮೂಲಕ ಪಾಠವನ್ನು ಕಲಿಯಬೇಕಾಯಿತು.’’ ತನ್ನ ಸಹಪಾಠಿ ಹುಡುಗಿಯು ಓದುತ್ತಿದ್ದ ತುಳಸಿ ರಾಮಾಯಣವನ್ನು ಮುಟ್ಟಿದ್ದಕ್ಕೆ ಹೊಲೆಯ ಮುಂಡೇದೆ ಈ ರಾಮಾಯಣವನ್ನು ಮುಟ್ಟಲು ನಿನಗೆಷ್ಟು ಧೈರ್ಯ ಎಂದು ಬೈಯಿಸಿಕೊಳ್ಳಬೇಕಾಗುತ್ತದೆ. ಈ ತುಳಸಿ ರಾಮಾಯಣ ಜಾತೀಯ ವ್ಯವಸ್ಥೆಯಾದ ವರ್ಣಾಶ್ರಮವನ್ನು ತೀವ್ರವಾಗಿ ಸಮರ್ಥಿಸುತ್ತದೆ ಎಂದು ಹೇಳುವ ನಿಮ್ಗಾಡೆ, ಈ ಅವಮಾನಗಳು, ಬೈಗುಳಗಳು ತಲೆಯೆತ್ತಿ ಬದುಕಲು ನನಗೆ ಮತ್ತಷ್ಟು ದೃಢತೆಯನ್ನು, ಆತ್ಮವಿಶ್ವಾಸವನ್ನು ತಂದಕೊಟ್ಟವು ಎಂದು ಹೇಳುತ್ತಾರೆ. ಈ ಕೃತಿಯಲ್ಲಿ ನಿಮ್ಗಾಡೆಯವರು ಅಂಬೇಡ್ಕರ್ ಜೊತೆಯಲ್ಲಿ ಅವರ ರಾಜಕೀಯ ಎದುರಾಳಿಯಾದ ಮಹಾತ್ಮ ಗಾಂಧೀಜಿಯವರನ್ನೂ ವಿಮರ್ಶೆಗೆ ಒಳಗುಮಾಡುತ್ತಾರೆ. ಅವರ ದೃಷ್ಟಿಯಲ್ಲಿ ಗಾಂಧೀಜಿ ಜಾತೀಯತೆಯನ್ನು ವಿರೋಧಿಸುತ್ತಿದ್ದರೂ ಅದೇ ಶ್ರೇಣಿಕೃತ ಜಾತಿ ಪದ್ಧತಿಯ ಮೇಲೆ ಕಟ್ಟಲ್ಪಟ್ಟ ವರ್ಣಾಶ್ರಮವನ್ನು ಸಮರ್ಥಿಸುತ್ತಿದ್ದರು. ನಿಮ್ಗಾಡೆಯವರ ಈ ಬರೆಹದಲ್ಲಿ ಅಂಬೇಡ್ಕರ್ ಅವರ ಬದುಕಿನ ಹಲವು ಅಪರಿಚಿತ ಮುಖಗಳ ಅನಾವರಣವಿದೆ. ಅಂಬೇಡ್ಕರ್ ಅವರ ಓದಿನ ವ್ಯಾಪಕತೆ ಎಷ್ಟಿತ್ತು ಎಂಬುದನ್ನು ಹೇಳುವುದಕ್ಕೆ ಇದರಲ್ಲಿ ಒಂದು ಘಟನೆಯನ್ನು ಉಲ್ಲೇಖಿಸಲಾಗಿದೆ. ‘‘ಸಂಸತ್ತಿನಲ್ಲಿ ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿಯ ಕಮಿಷನ್‌ನ ವರದಿಯನ್ನು ತಿರಸ್ಕರಿಸುತ್ತ ಕೋಪದಿಂದ ‘ಇದು ಕಮಿಷನರ್ ಅವರ ವರದಿಯಲ್ಲ, ಇದು ಸೇವಕನ ವರದಿ ಅಷ್ಟೇ’ ಎಂದು ನುಡಿದರು. ಆ ಘಟ್ಟದಲ್ಲಿ ಸ್ವತಃ ಕಾನೂನಿನಲ್ಲಿ ಬ್ಯಾರಿಸ್ಟರ್ ಆಗಿದ್ದ ಮತ್ತು ಗೃಹಮಂತ್ರಿಗಳೂ ಆಗಿದ್ದ ಕೆ.ಎನ್.ಕುಟ್ಜು ಅವರು ಎದ್ದು ನಿಂತು, ‘ಬಹುಶಃ ಅಂಬೇಡ್ಕರ್ ಅವರು ವರದಿಯನ್ನು ಆಮೂಲಾಗ್ರವಾಗಿ ಓದಿದಂತಿಲ್ಲ’ ಎಂದು ಪ್ರತಿಕ್ರಿಯಿಸಿದರು. ಅದಕ್ಕೆ ಅಂಬೇಡ್ಕರ್ ಅವರು ನೆಹರೂ ಅವರ ಸಮ್ಮುಖದಲ್ಲಿಯೇ ಪ್ರತಿಕ್ರಿಯಿಸುತ್ತ, ‘ನಾನು ಕೇವಲ ಕುರುಡಾಗಿ ಟೀಕಿಸುತ್ತಿಲ್ಲ. ನೀವು ಆ ವರದಿಯಲ್ಲಿನ ಪ್ರತಿಯೊಂದು ಪುಟದ ವಿವರಗಳನ್ನು ಕೇಳಿ, ನಾನು ಕರಾರುವಾಕ್ಕಾಗಿ ಉತ್ತರಿಸುತ್ತೇನೆ. ನಿಮಗೆ ನನ್ನ ಅಧ್ಯಯನದ ಕುರಿತಾಗಿ ಅಷ್ಟೊಂದು ತಿಳಿವಳಿಕೆ ಇದ್ದಂತಿಲ್ಲ. ನಾನು ಓದಿದ ಪುಸ್ತಕಗಳ ಸಂಖ್ಯೆ ನಿಮ್ಮ ಹಿಂದಿನ ತಲೆಮಾರು, ಅದರ ಹಿಂದಿನ ತಲೆಮಾರು ಮತ್ತು ನಿಮ್ಮ ಮುಂದಿನ ತಲೆಮಾರಿನ ಒಟ್ಟು ಓದಿನ ಸಂಖ್ಯೆಯನ್ನು ಮೀರಿಸುತ್ತದೆ’ ಎಂದು ತೀಕ್ಷ್ಣವಾಗಿ ಉತ್ತರಿಸಿದರು. ಮರುದಿನ ‘ಶಂಕರ್ಸ್ ವೀಕ್ಲಿ’ ಎನ್ನುವ ರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟವಾದ ಕಾರ್ಟೂನಿನ ವಿವರ ಹೀಗಿತ್ತು. ಅಲ್ಲಿ ಗೃಹ ಮಂತ್ರಿ ಕೆ.ಎನ್.ಕುಟ್ಜು ಅವರು ಬೀದಿಯಲ್ಲಿ ಕಸ ಗುಡಿಸುತ್ತಿರುತ್ತಾರೆ. ಅವರ ಮುಂದೆ ಜನಿವಾರವನ್ನು ತೊಟ್ಟ ಅಂಬೇಡ್ಕರ್ ಅವರು ಬ್ರಾಹ್ಮಣನಂತೆ ಕುಳಿತಿರುತ್ತಾರೆ.’’ ಅಂಬೇಡ್ಕರ್ ಅವರು ನಿಮ್ಗಾಡೆಯವರಿಗೆ, ನೀವು ವಿದ್ಯಾವಂತರು ನಡೆದು ಬಂದ ದಾರಿಯನ್ನು ಮರೆತುಬಿಡುತ್ತೀರಿ ಎಂದು ಎಚ್ಚರಿಸುತ್ತಿದ್ದರು. ಇದು ಈಗಲೂ ದಲಿತ ಪ್ರಮುಖರಿಗೆ ಎಚ್ಚರಿಕೆಯ ಮಾತಿನಂತಿದೆ. ನಿಮ್ಗಾಡೆ ಒಮ್ಮೆ ಮುಗ್ಧವಾಗಿ, ಬಾಬಾ ಸಾಹೇಬ್ ನೀವು ಏಕಾಂಗಿಯಾಗಿ ಅದು ಹೇಗೆ ನಿಮ್ಮ ಬಹುಸಂಖ್ಯೆಯಲ್ಲಿರುವ ನಿಮ್ಮ ಎದುರಾಳಿಗಳನ್ನು ಎದುರಿಸುತ್ತೀರಿ? ನಿಮಗೆ ಭಯವಾಗುವುದಿಲ್ಲವೆ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅಂಬೇಡ್ಕರ್, ನಾನು ಬುದ್ಧನ ಅನುಯಾಯಿ. ಆತನ ಮೇಲಿನ ನಂಬಿಕೆ ನನಗೆ ಆತ್ಮಸ್ಥೈರ್ಯವನ್ನು ಕೊಡುತ್ತದೆ. ಈ ನನ್ನ ನಂಬಿಕೆಯೇ ನನಗೆ ಹೊಸ ದಾರಿಯನ್ನು ಕಂಡುಕೊಳ್ಳಲು ನೆರವಾಗುತ್ತದೆ ಎನ್ನುತ್ತಾರೆ. ದಲಿತರು ಹೆಚ್ಚು ಹೆಚ್ಚು ಓದಿ ದೊಡ್ಡದೊಡ್ಡ ಪದವಿಗಳನ್ನು ಸಂಪಾದಿಸಬೇಕು ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು. ಅದಕ್ಕಾಗಿಯೇ ಅವರು ನಿಮ್ಗಾಡೆಯವರಿಗೆ, ರಾಜಕಾರಣ ಮತ್ತು ಅಧಿಕಾರದ ಆಮಿಷಕ್ಕೆ ಬಲಿಯಾಗಬೇಡ. ಏನೋ ಸ್ವಲ್ಪ ಓದಿ, ಒಂದು ಸಣ್ಣ ಸಂಬಳದ ಉದ್ಯೋಗ ಪಡೆಯುವುದಕ್ಕೆ ತೃಪ್ತನಾಗದೇ, ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ಓದು. ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ. ಎಲ್ಲ ಮಾಡಬೇಕು ನೀನು. ಪದವಿಗಳು ನಮ್ಮ ಮೆಟ್ಟಿಲುಗಳು… ಎಂದು ಹೇಳುತ್ತಾರೆ. ಶಿಕ್ಷಣ ಮಾತ್ರ ದಲಿತರನ್ನು ಮೇಲಕ್ಕೆ ತರಬಲ್ಲುದು ಎಂಬುದೇ ಈ ಆತ್ಮಕಥನದ ತಿರುಳಾಗಿದೆ. ನಿಮ್ಗಾಡೆಯವರಿಗೆ ತಮ್ಮ ಆತ್ಮಕತೆಯನ್ನು ಬರೆಯುವುದರ ಉದ್ದೇಶ ತಮ್ಮ ಬದುಕನ್ನು ಅನಾವರಣ ಮಾಡುವುದಕ್ಕಿಂತ ಮಿಗಿಲಾಗಿ ತಮ್ಮ ಬದುಕಿನ ಅಸ್ತಿತ್ವಕ್ಕೆ ಕಾರಣರಾದ, ತಮ್ಮ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಪ್ರಭಾವಿಸಿದ ಬಾಬಾ ಸಾಹೇಬ ಅವರ ಬದುಕು- ವ್ಯಕ್ತಿತ್ವ- ಹೋರಾಟವನ್ನು ಅನಾವರಣ ಮಾಡುವುದೇ ಆಗಿದೆ ಎಂದು ಪ್ರಸ್ತಾವನೆಯಲ್ಲಿ ಡಾ.ಅಪ್ಪಗೆರೆ ಸೋಮಶೇಖರ್ ಹೇಳಿರುವ ಮಾತು ಸರಿಯಾಗಿಯೇ ಇದೆ. ಡಾ.ಎಚ್.ಎಸ್.ಅನುಪಮಾ ಅವರು ಇದಕ್ಕೊಂದು ಅಧ್ಯಯನಪೂರ್ಣ ಪ್ರವೇಶವನ್ನು ಒದಗಿಸಿದ್ದಾರೆ. ಕನ್ನಡ ದಲಿತ ಆತ್ಮಕಥನಗಳೊಂದಿಗೆ ಮರಾಠಿಯ ದಲಿತ ಆತ್ಮಕಥನಗಳ ತೌಲನಿಕ ಅಧ್ಯಯನಕ್ಕೆ ಈ ಕೃತಿ ಪ್ರೇರಣೆಯಾಗಬಹುದು. ಜೊತೆಗೆ ಇದರ ಮೂಲ ಕೃತಿಯಾದ ‘ಇನ್ ದಿ ಟೈಗರ್ಸ್ ಶ್ಯಾಡೋ: ದಿ ಅಟೋಬಯೋಗ್ರಫಿ ಆಫ್ ಆ್ಯನ್ ಅಂಬೇಡ್ಕರೈಟ್’ ಓದುವುದಕ್ಕೂ ಪ್ರೇರಿಸಬಹುದು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.