ನಮ್ಮ ಕಾಲದಲ್ಲಿ ಓದುಗರನ್ನು ದೊಡ್ಡ ಸಂಖ್ಯೆಯಲ್ಲಿ ಹಿಡಿದಿಟ್ಟುಕೊಂಡಿರುವ ಲೇಖಕರಲ್ಲಿ ಎಸ್‌.ಎಲ್‌. ಭೈರಪ್ಪನವರು ಒಬ್ಬರು. ವಿಮರ್ಶಕರಿಂದ ಮೆಚ್ಚುಗೆ ಮತ್ತು ಟೀಕೆಗಳನ್ನು ಹೆಚ್ಚಾಗಿ ಪಡೆದ ಲೇಖಕರೂ ಹೌದು. ಅವರೊಬ್ಬ ಬಲಪಂಥೀಯ ಲೇಖಕ. ತಮ್ಮ ಸಿದ್ಧ ಸೂತ್ರಗಳಿಗೆ ಘಟನೆಗಳನ್ನು ಜೋಡಿಸುತ್ತ ಕತೆಯನ್ನು ಹೆಣೆಯುತ್ತಾರೆ ಎಂದು ಎಡಪಂಥೀಯ ಚಿಂತಕರು ದೂರುತ್ತಾರೆ. ಭೈರಪ್ಪನವರು ತಮ್ಮ ಸ್ತ್ರೀ ಪಾತ್ರಗಳಿಗೂ ಸರಿಯಾದ ನ್ಯಾಯವನ್ನು ಒದಗಿಸಿಲ್ಲ ಎಂಬ ಇನ್ನೊಂದು ಆರೋಪವೂ ಸ್ತ್ರೀವಾದಿ ಚಿಂತಕರಿಂದ ಕೇಳಿ ಬಂದಿದೆ. ಅದಕ್ಕೆ ಭೈರಪ್ಪನವರು ವಿವಿಧ ವೇದಿಕೆಗಳಲ್ಲಿ ತಮ್ಮ ಸಮಜಾಯಿಷಿಯನ್ನು ನೀಡಿದ್ದಾರೆ.
ಆದರೆ ಈ ಎಲ್ಲ ಟೀಕೆಗಳಿಗೂ ಸೃಜನಾತ್ಮಕ ಉತ್ತರವನ್ನು ನಾವು ಅವರ `ಗ್ರಹಣ’ ಕಾದಂಬರಿಯಲ್ಲಿ ನೋಡಬಹುದಾಗಿದೆ.

`ಗ್ರಹಣ’ದ ಕಥಾ ವಸ್ತು ಮೈತಳೆಯುವುದು ದಕ್ಷಿಣ ಕರ್ನಾಟಕದಲ್ಲಿ. ಹಿಮವತೀ ನದಿಯ ದಡದಲ್ಲಿರುವ ಹಿಮಗರಿ ಎನ್ನುವ ಊರಿನಲ್ಲಿ. ಗ್ರಹಣದ ವೈಜ್ಞಾನಿಕ ವಿವರಣೆಯ ಉಪನ್ಯಾಸದೊಂದಿಗೇ ಕಾದಂಬರಿ ಆರಂಭವಾಗುವುದು. ಅತ್ತ ಹಳ್ಳಿಯೂ ಅಲ್ಲದ ಇತ್ತ ದೊಡ್ಡ ಪಟ್ಟಣವೂ ಅಲ್ಲದ ಊರು ಹಿಮಗಿರಿ. ಅಲ್ಲೊಂದು ನದಿ ಹಿಮವತಿ. ಅಲ್ಲಿ ಹಿಮಗಿರೀಶ್ವರ ಎಂಬ ಒಂದು ಮಠವಿದೆ. ಹೈಸ್ಕೂಲು, ಕಾಲೇಜು, ಆಸ್ಪತ್ರೆ, ಪ್ರಸೂತಿಗೃಹ ಮೊದಲಾದವು ಅಲ್ಲಿವೆ. ಆ ಊರಲ್ಲಿಯ ಮಠ ಅನಾದಿ ಕಾಲದ್ದು. ಐದು ತಲೆಮಾರಿನ ಹಿಂದೆ ಅದರ ಸ್ವಾಮೀಜಿ ಇದ್ದಕ್ಕಿದ್ದ ಹಾಗೆ ಮಠವನ್ನು ಬಿಟ್ಟು ಹೋಗುತ್ತಾರೆ. ಅವರು ತಮ್ಮ ಉತ್ತರಾಧಿಕಾರಿಯನ್ನೂ ನೇಮಿಸದೇ ಹೋಗಿದ್ದರು. ಇದರಿಂದಾಗಿ ಮಠ ಹಾಳುಬಿದ್ದಿತ್ತು. ಇಪ್ಪತ್ತು ವರ್ಷಗಳ ಹಿಂದೆ ಈಗಿನ ಸ್ವಾಮಿಗಳು ಹಿಮಾಲಯದಿಂದ ಬಂದರು. ಊರಿನ ಹಿರಿಯರ ಅಪೇಕ್ಷೆಯ ಮೇರಗೆ, ತಾಮ್ಮದೇ ಕೆಲವು ಷರತ್ತುಗಳನ್ನು ವಿಧಿಸಿ ಈ ಊರಿನಲ್ಲಿ ಉಳಿಯುವುದಕ್ಕೆ ಅವರು ಒಪ್ಪುತ್ತಾರೆ. ಅವರು ಮಠಕ್ಕೆ ಕಟ್ಟಡ ಕಟ್ಟಿಸಲಿಲ್ಲ. ಬದಲಿಗೆ ಹಿಮಗಿರೀಶ್ವರ ಕಲ್ಯಾಣ ಸಮಿತಿಯನ್ನು ಸ್ಥಾಪಿಸಿದರು. ಈ ಸಮಿತಿಯ ಆಶ್ರಯದಲ್ಲಿಯೇ ಸುತ್ತ ಹತ್ತೂರಿನಲ್ಲಿ ಹೈಸ್ಕೂಲುಗಳು, ಈ ಊರಿನಲ್ಲಿ ಕಾಲೇಜು, ಪ್ರಸೂತಿಗೃಹ, ಆಸ್ಪತ್ರೆ ಎಲ್ಲವೂ ಬಂದವು. ಸ್ವಾಮೀಜಿ ಮಠಕ್ಕೆ ಹೋಗದೆ ಇದ್ದರೂ ಅವರ ಮೇಲೆ ಜನರಿಗೆ ಭಕ್ತಿ ಹುಟ್ಟಿತು. ಸಮಿತಿಯು ಅವರನ್ನು ಮುಂದೆ ಇಟ್ಟುಕೊಂಡು ಹಣ ಸಂಗ್ರಹ ಮಾಡಿತು. ಜನಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿತು.

ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರ ಕಾಲೇಜಿನ ಪ್ರಿನ್ಸಿಪಾಲರು. ತಮ್ಮ ಬಡತನದ ಆರಂಭಿಕ ಜೀವನ, ಕಾಲೇಜಿನ ಪ್ರಿನ್ಸಿಪಾಲರಾಗುವಲ್ಲಿ ಸಮಿತಿಯ ಮತ್ತು ಸ್ವಾಮೀಜಿಯ ಕೃಪೆಯಿಂದಾಗಿ ತುಂಬ ವಿನೀತ ಸ್ವಭಾವದವರು. ಯಾವುದೇ ಸ್ವಂತದ ದೃಢ ನಿರ್ಧಾರ ಇಲ್ಲದವರು. ಆದರೆ ನ್ಯಾಯಯುತವಾಗಿ ಬದುಕಬೇಕು ಎನ್ನುವವರು. ಭೌತ ವಿಜ್ಞಾನದ ಪ್ರೊಫೆಸರ್‌ ಆಗಿದ್ದರೂ ಅವರ ಒಲವು ವೇದಾಂತದ ಕಡೆ ಇತ್ತು. ಪ್ರಿನ್ಸಿಪಾಲರು ಕಾಲೇಜಿನಲ್ಲಿ ಗ್ರಹಣದ ವೈಜ್ಞಾನಿಕ ವಿವರಣೆಯನ್ನು ನೀಡಿದರೆ ಅವರ ಗರ್ಭಿಣಿ ಪತ್ನಿ ಎಂ.ಎಸ್ಸಿ. ಪದವೀಧರೆ ಲಲಿತಮ್ಮ ಮನೆಯಲ್ಲಿ ಗ್ರಹಣದ ಕುರಿತ ಸಾಂಪ್ರದಾಯಿಕ ನಂಬಿಕೆಯನ್ನು ಪಾಲಿಸಿದ್ದರು. ಅದೇ ಕಾಲೇಜಿನಲ್ಲೆ ರಸಾಯನ ಶಾಸ್ತ್ರದ ಲೆಕ್ಚರರ್‌ ಆಗಿದ್ದ ಅವರು ಪ್ರಿನ್ಸಿಪಾಲರನ್ನು ಪ್ರೀತಿಸಿ ಮದುವೆಯಾದ ಮೇಲೆ ಕೆಲಸವನ್ನು ಬಿಟ್ಟಿದ್ದರು.

ಸ್ವಾಮೀಜಿಯವರು ಅಧ್ಯಕ್ಷರಾಗಿದ್ದ ಸಮಿತಿಗೆ ಪ್ರಿನ್ಸಿಪಾಲರು ಕಾರ್ಯದರ್ಶಿಯಾಗಿದ್ದರು. ಕಾಲೇಜಿಗೆ ಹಣ ಕೂಡಿದ ಬಳಿಕ ಅದರ ಅಧ್ಯಕ್ಷತೆಯನ್ನು ಸ್ವಾಮೀಜಿ ಬಿಟ್ಟುಬಿಡುತ್ತಾರೆ. ತಾವಿಲ್ಲದೆ ಸಮಿತಿಯು ಮುಂದೆ ನಡೆಯುವುದನ್ನು ಕಲಿಯಬೇಕು ಎಂಬುದು ಅವರ ಇಚ್ಛೆಯಾಗಿತ್ತು. ಸ್ವಾಮೀಜಿಯವರ ಬಳಿಕ ಚಂದ್ರಣ್ಣ ಎಂಬ ಸ್ಥಳೀಯ ಎಂಎಲ್‌ಎ ಸಮಿತಿಯ ಅಧ್ಯಕ್ಷರಾಗುತ್ತಾರೆ.

ಈ ಕಾದಂಬರಿಯ ಮತ್ತೊಂದು ಪಾತ್ರ ಯಜ್ಞೇಶ್ವರ ಶಾಸ್ತ್ರಿ. ಪುರೋಹಿತ ಮನೆತನವಾದರೂ ಪೌರೋಹಿತ್ಯದಿಂದ ಜೀವನ ಸಾಗಿಸಬೇಕಾದ ರಿಕ್ತ ಸ್ಥಿತಿ ಅವರದಲ್ಲ. ಸಾಕಷ್ಟು ಆಸ್ತಿ ಇತ್ತು. ಶಾಸ್ತ್ರದಲ್ಲಿ ಸುತ್ತ ನಾಲ್ಕೂರಿಗೆ ಅವರು ಪ್ರಸಿದ್ಧರಾಗಿದ್ದರು. ಹಿಮಗಿರಿಯ ಕಲ್ಯಾಣ ಸಮಿತಿಯಲ್ಲಿ ಅವರೂ ಒಬ್ಬ ಸದಸ್ಯರಾಗಿದ್ದರು. ಸ್ವಾಮೀಜಿ ಊರಲ್ಲಿ ನೆಲೆಯಾಗುವುದಕ್ಕೆ ಅವರೂ ಒಬ್ಬ ಕಾರಣಪುರುಷ. ತಮ್ಮ ಮೂವತ್ತೊಂಬತ್ತನೆಯ ವಯಸ್ಸಿನ ತನಕ ಬ್ರಹ್ಮಚಾರಿಯೇ ಆಗಿದ್ದ ಪ್ರಿನ್ಸಿಪಾಲರು ಗೃಹಸ್ಥಾಶ್ರಮ ಪ್ರವೇಶಿಸುವುದಕ್ಕೆ ಶಾಸ್ತ್ರಿಗಳು ಮೊದಲು ವಿರೋಧಿಸಿದ್ದರು. ನಂತರ ಸ್ವಾಮಿಗಳೇ ಒಪ್ಪಿಗೆ ಕೊಟ್ಟಮೇಲೆ ಇವರು ಸುಮ್ಮನಾಗಿದ್ದರು. ನಂತರ ಪ್ರಿನ್ಸಿಪಾಲ್‌ ದಂಪತಿಯನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.

ಊರ ಯಜಮಾನ ಅಪ್ಪೇಗೌಡರು ದಾನ ಮಾಡುವುದರಲ್ಲಿ ಎತ್ತಿದ ಕೈ. ಅವರ ಮಾತಿಗೆ ಸುತ್ತ ಮೂವತ್ತು ಹಳ್ಳಿಯಲ್ಲಿ ಗೌರವವಿದೆ. ಎಪ್ಪತ್ತೈದು ವರ್ಷದ ಇವರ ದಾನ ಗುಣದಿಂದಲೇ ಊರಲ್ಲಿ ಹೈಸ್ಕೂಲು, ಕಾಲೇಜು, ಆಸ್ಪತ್ರೆ ಎಲ್ಲ ಬಂದದ್ದು. ಇವರ ಕನಸಿನಲ್ಲಿಯೇ ಮತ್ತೊಬ್ಬ ಸ್ವಾಮೀಜಿ ಬರುತ್ತಾರೆ ಎಂದು ಗೊತ್ತಾದದ್ದು ಮತ್ತು ಆ ಕಾರಣಕ್ಕಾಗಿಯೇ ಈಗಿನ ಸ್ವಾಮೀಜಿಯವರನ್ನು ಒತ್ತಾಯ ಮಾಡಿ ಉಳಿಸಿಕೊಂಡವರು ಅವರು.

ಊರಿನ ಸ್ವಾಮೀಜಿ ಮಠಕ್ಕೆ ಹೋಗದೆ ಇದ್ದರೂ ತಮ್ಮದೇ ಒಂದು ಗುಡಿಸಲು ಕಟ್ಟಿಕೊಂಡು, ಒಂದು ಆಕಳನ್ನು ಸಾಕಿಕೊಂಡು ತಮ್ಮ ಅಡುಗೆಯನ್ನು ತಾವೇ ಮಾಡಿಕೊಂಡು ಒಪ್ಪತ್ತು ಊಟ ಮಾಡಿ ಬದುಕುತ್ತಿದ್ದರು. ಈ ಸ್ವಾಮೀಜಿಯ ನಿಜವಾದ ಹೆಸರು ಯಾರಿಗೂ ಗೊತ್ತಿಲ್ಲ. ಅದನ್ನು ಕೇಳಿ ತಿಳಿಯುವ ಅಗತ್ಯವೂ ಊರವರಿಗೆ ಬಂದಿರಲಿಲ್ಲ.

ಆ ಊರಿನ ಆಸ್ಪತ್ರೆಯ ಡಾಕ್ಟರ್‌ ಸರೋಜಮ್ಮನನ್ನು ತಾವು ಮದುವೆಯಾಗುವುದಾಗಿ ಸ್ವಾಮೀಜಿ ಅಪ್ಪೇಗೌಡರ ಬಳಿ ಒಂದು ದಿನ ಹೇಳಿದಾಗ ಅದನ್ನು ತಡೆಯುವುದಕ್ಕೆ ನಡೆಯುವ ಹುನ್ನಾರಗಳೇ ಈ ಕಾದಂಬರಿಯ ವಸ್ತು. ಗ್ರಹಣದ ಕಾರಣದಿಂದಲೇ ಸ್ವಾಮೀಜಿಯವರ ಮನಸ್ಸು ಕಲುಷಿತಗೊಂಡಿದೆ ಎನ್ನುವುದು ಶಾಸ್ತ್ರಿಗಳ ಅಭಿಮತವಾಗಿತ್ತು. ಅದನ್ನೇ ಅವರು ಅಪ್ಪೇಗೌಡರಿಗೂ ಹೇಳುತ್ತಾರೆ. ಸ್ವಾಮೀಜಿಗಳು ಸನ್ಯಾಸವನ್ನು ತ್ಯಜಿಸಿ ಮದುವೆಯಾಗಿಬಿಟ್ಟರೆ ಇಡೀ ಊರಿನ ಅಧ್ಯಾತ್ಮಶಕ್ತಿ ಕುಸಿದುಬೀಳುತ್ತದೆ. ಅಧ್ಯಾತ್ಮ ಹೋದಮೇಲೆ ದಾನ ಹೇಗೆ ನಡೆದೀತು? ದಯೆ ಎಲ್ಲಿ ಉಳಿದೀತು? ಈ ಆತಂಕ ಅಪ್ಪೇಗೌಡರಿಗೆ ಮತ್ತು ಶಾಸ್ತ್ರಿಗಳಿಗೆ.

ಸ್ವಾಮೀಜಿಯನ್ನು ಮದುವೆಯಾಗುವುದರಿಂದ ವಿಮುಖಗೊಳಿಸಬೇಕು ಎಂದು ಅಪ್ಪೇಗೌಡರು, ಶಾಸ್ತ್ರಿಗಳು, ಎಂಎಲ್‌ಎ ಚಂದ್ರಣ್ಣ ಎಲ್ಲರೂ ಪ್ರಯತ್ನಿಸುತ್ತಾರೆ. ಅಲ್ಲದೇ ಡಾಕ್ಟರ್‌ ಸರೋಜಮ್ಮನ ಮನವೊಲಿಸಲೂ ನೋಡುತ್ತಾರೆ. ಯಾವುದೂ ನಡೆಯುವುದಿಲ್ಲ. ಈ ಸಂದಿಗ್ಧದ ಸಮಯದಲ್ಲಿಯೇ ಭಾರೀ ಮಳೆ ಸುರಿಯುತ್ತಿದ್ದ ಒಂದು ದಿನ ಸ್ವಾಮೀಜಿಯ ಗುಡಿಸಲಿನಲ್ಲಿ ಸರೋಜಮ್ಮ ಇದ್ದಾಗ ಇಬ್ಬರೂ ತಕ್ಷಣವೇ ಮದುವೆಯಾಗಿಬಿಡಬೇಕು. ಆ ಮೂಲಕ ಊರವರ ಒತ್ತಡದಿಂದ ತಪ್ಪಿಸಿಕೊಳ್ಳಬಹುದು. ಕೆಲವು ದಿನ ಆಡಿಕೊಳ್ಳುತ್ತಾರೆ, ನಂತರ ಸುಮ್ಮನಾಗಿ ಬಿಡುತ್ತಾರೆ ಎಂದು ನಿರ್ಧಾರ ಮಾಡುತ್ತಾರೆ. ಗಂಡು ಹೆಣ್ಣು ಪರಸ್ಪರ ಒಪ್ಪಿಕೊಂಡ ಮೇಲೆ ಮದುವೆ ಎನ್ನುವುದು ಕೇವಲ ಲೋಕಾರೂಢಿ. ಅದರ ಅಗತ್ಯವೂ ಇಲ್ಲ ಎಂಬ ಸ್ವಾಮೀಜಿಯ ಮಾತಿಗೆ ಡಾಕ್ಟರ್‌ ಸಮ್ಮತಿಸುತ್ತಾರೆ. ಅಲ್ಲಿ ಅವರಿಬ್ಬರ ದೈಹಿಕ ಮಿಲನವಾಗಿಬಿಡುತ್ತದೆ. ಅದೇ ಮಳೆಯಲ್ಲಿ ಗುಡಿಸಲು ಬಿದ್ದುಹೋಗುತ್ತಿರುತ್ತದೆ. ನಾಳೆ ನಿಮ್ಮ ಮನೆಗೇ ಬಂದುಬಿಡುತ್ತೇನೆ ಎಂದು ಡಾಕ್ಟರ್‌ಗೆ ಸ್ವಾಮೀಜಿ ಹೇಳುತ್ತಾರೆ. ಅದಕ್ಕೆ ಡಾಕ್ಟರ್‌ ಸಮ್ಮತಿಸುತ್ತಾರೆ.

ಸನ್ಯಾಸವನ್ನು ತೊರೆದುದಕ್ಕಾಗಿ ಬಿಳಿ ಬಟ್ಟೆಯನ್ನು ಧರಿಸಿಕೊಂಡು, ಒಂದು ಟ್ರಂಕು ಹಿಡಿದು, ಆಕಳನ್ನು ಕರೆದುಕೊಂಡು ಬಂದ ಸ್ವಾಮೀಜಿಗೆ ಡಾಕ್ಟರ್‌ ಮನೆಯ ಎದುರು ದೊಡ್ಡ ನಾಟಕವನ್ನು ಎದುರಿಸಬೇಕಾಗುತ್ತದೆ. ಸ್ವಾಮೀಜಿ ಗೃಹಸ್ಥರಾಗುವುದರಿಂದ ಮನೋರೋಗಕ್ಕೆ ಒಳಗಾದ ಅಪ್ಪೇಗೌಡರು ಸಾಯುವ ಸ್ಥಿತಿಯನ್ನು ಮುಟ್ಟಿದ್ದರಿಂದ ಅವರನ್ನು ಮಂಚದಮೇಲೆ ಮಲಗಿಸಿಕೊಂಡು ಅಲ್ಲಿಗೆ ತಂದಿರುತ್ತಾರೆ. ಊರವರೆಲ್ಲ ಅಲ್ಲಿ ಸೇರಿರುತ್ತಾರೆ. ಸ್ವಾಮೀಜಿ ಜನರಿಗೆ ತಮ್ಮದು ಮತ್ತು ಡಾಕ್ಟ್ರಮ್ಮನದು ನಿನ್ನೆಯೇ ಮದುವೆ ಆಯಿತೆಂದೂ, ಜೊತೆಗೆ ಶೋಭನವೂ ಆಗಿದೆ ಎಂದೂ ಹೇಳುತ್ತಾರೆ. ಸರೋಜಮ್ಮನಿಗೆ ಊರವರ ಮುಂದೆ ಇದನ್ನು ಒಪ್ಪಿಕೊಳ್ಳುವಂತೆ ಹೇಳುತ್ತಾರೆ. ಯಾರೂ ನೋಡದೆ ಇದ್ದಾಗ ಅದೆಂಥ ಮದುವೆ ಎಂದು ಶಾಸ್ತ್ರಿಗಳು ಪ್ರಶ್ನಿಸುತ್ತಾರೆ. ಡಾಕ್ಟರ್‌ಗೆ ಉಭಯ ಸಂಕಟ. ತಾನು ಹೌದೆಂದರೆ ಮನೋರೋಗದಿಂದ ಅಪ್ಪೇಗೌಡ ಸತ್ತುಹೋಗುತ್ತಾರೆ. ಸ್ವಾಮೀಜಿಯನ್ನು ಉಳಿಸಿಕೊಳ್ಳುವುದೋ ಸಾಯುತ್ತಿರುವ ರೋಗಿಯನ್ನು ಉಳಿಸಿಕೊಳ್ಳುವುದೋ ಎಂಬ ತೊಳಲಾಟದಲ್ಲಿ ತಮ್ಮ ವೃತ್ತಿಧರ್ಮವಾದ ರೋಗಿಯನ್ನು ಉಳಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಕೋಪಗೊಂಡ ಸ್ವಾಮೀಜಿಯು ಅವರ ಸೊಂಟಕ್ಕೆ ಒದೆದು ಇಲ್ಲೇ ಸಾಯಿ ಎಂದು ಹೇಳಿ ಊರು ಬಿಟ್ಟು ಹೊರಡುತ್ತಾರೆ.

ಅಕ್ಕಪಕ್ಕದ ಊರುಗಳಲ್ಲಿ ಸುತ್ತಾಡುತ್ತಿದ್ದಾಗ ತಾವೇ ಸ್ಥಾಪಿಸಿದ ಶಾಲೆಯ ಮಕ್ಕಳು ಎದುರಾದಾಗ ಅವರನ್ನು ಕೂಡಿಸಿಕೊಂಡು ತಮ್ಮ ಮನದ ತೊಳಲಾಟವನ್ನು ವಿವರಿಸುತ್ತಾರೆ. ಆ ಮೂಲಕ ತಮಗೇ ಒಂದು ಸ್ಪಷ್ಟತೆಯನ್ನು ತಂದುಕೊಳ್ಳಲು ಪ್ರಯತ್ನಿಸುತ್ತಾರೆ. ಈ ನಡುವೆ ಸ್ವಾಮೀಜಿಯವರೊಂದಿಗೆ ದೈಹಿಕ ಮಿಲನ ಸಾಧಿಸಿದ್ದರಿಂದ ಡಾಕ್ಟ್ರಮ್ಮ ಬಸುರಿಯಾಗುತ್ತಾಳೆ. ತನ್ನ ಗರ್ಭವನ್ನು ತೆಗೆಸಿಕೊಳ್ಳಬೇಕು ಎಂದು ಆಲೋಚಿಸಿದ್ದ ಅವರಿಗೆ ವಿದ್ಯಾರ್ಥಿಗಳೊಂದಿಗೆ ನಡೆದ ಮುಖಾಮುಖಿಯಲ್ಲಿ ಸ್ವಾಮೀಜಿಯದು ತಪ್ಪಿಲ್ಲ ಎನ್ನಿಸುತ್ತದೆ. ವಿದ್ಯಾರ್ಥಿಗಳ ಗುಂಪಿನ ಮುಂದೆ ತನಗೂ ಸ್ವಾಮೀಜಿಗೂ ಮದುವೆಯಾಗಿದೆ. ಅವರ ಮಗುವಿಗೆ ತಾನು ತಾಯಿಯಾಗುತ್ತಿದ್ದೇನೆ ಎಂದು ಕೂಗಿ ಹೇಳುತ್ತಾರೆ. ಗರ್ಭ ತೆಗೆಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ.

ಮಠ, ಪೀಠ, ಸ್ವಾಮೀಜಿ ಇವುಗಳ ಮೂಲಕ ಜನಸಾಮಾನ್ಯರ ಧಾರ್ಮಿಕ ನಂಬಿಕೆಯನ್ನು ಶೋಷಣೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆನ್ನುವ ಜನರು ಒಂದು ಕಡೆ, ಒಳ್ಳೆಯ ಕಾರ್ಯವನ್ನು ಮಾಡುವುದಕ್ಕೆ ಇವು ಯಾವುದರ ಅಗತ್ಯವೂ ಇಲ್ಲ, ಅಂಥ ಅಗತ್ಯ ಕಂಡು ಬಂದರೆ ಅದು ಯಶಸ್ವಿಯಾಗುವುದಿಲ್ಲ, ಅಂಥದ್ದು ಇರಬೇಕಾಗಿಯೇ ಇಲ್ಲ ಎಂದು ನಂಬುವ ಸ್ವಾಮೀಜಿ ಇನ್ನೊಂದು ಕಡೆ. ಸ್ವಾಮೀಜಿಯ ನಂಬಿಕೆಗೆ ಅಪ್ಪೇಗೌಡರು, ಶಾಸ್ತ್ರಿಗಳು, ಚಂದ್ರಣ್ಣ ಇವರೆಲ್ಲರೂ ಅಡ್ಡಿಯಾಗುತ್ತಾರೆ. `ನಿನ್ನನ್ನು ರಕ್ಷಿಸ್ತೀನಿ ಅನ್ನೂ ಅಹಂಕಾರ ನನಗಿಲ್ಲ. ಆದರೆ ಅಕಸ್ಮಾತ್‌ ಸಾಯಬೇಕಾಗಿ ಬಂದರೆ ನಿನ್ನನ್ನು ಬಿಟ್ಟುಕೊಟ್ಟು ನಾನು ಉಳಿಯೂದಿಲ್ಲ’ ಎಂಬ ಭರವಸೆಯನ್ನು ನೀಡಿದ್ದ ಸ್ವಾಮೀಜಿಗೆ ಮಹತ್ವದ ಕ್ಷಣದಲ್ಲಿ ಕೈಕೊಟ್ಟ ಸರೋಜಮ್ಮ, ಅವರನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ.

ಕಾದಂಬರಿಯಲ್ಲಿ ಸ್ವಾಮೀಜಿ ಮತ್ತು ಸರೋಜಮ್ಮನ ಪಾತ್ರವನ್ನು ಅತ್ಯಂತ ಗಟ್ಟಿಯಾಗಿ, ಜೀವಪರವಾಗಿ, ನ್ಯಾಯಪರವಾಗಿ ಭೈರಪ್ಪನವರು ಕಟ್ಟಿಕೊಟ್ಟಿದ್ದಾರೆ. ಮದುವೆಯೆಂಬ ತೋರಿಕೆಯ ಆಡಂಬರದ ಆಚರಣೆಗಿಂತಲೂ ಪರಸ್ಪರರ ನಂಬಿಕೆ ಮುಖ್ಯ ಎಂದು ಅವರು ಹೇಳುತ್ತಾರೆ. ಕೊನೆಯಲ್ಲಿ ಶಾಲೆಯ ಮಕ್ಕಳೇ ಸ್ವಾಮೀಜಿಗಳಿಗೆ ಭಾಸ್ಕರ ಎಂಬ ಹೆಸರನ್ನು ನೀಡುತ್ತಾರೆ. ಭಾಸ್ಕರ ಎಂಬುದು ಸೂರ್ಯನ ಪರ್ಯಾಯ ನಾಮ. ಸನ್ಯಾಸವೆಂಬ ಗ್ರಹಣದಿಂದ ಮುಕ್ತರಾದ ಸ್ವಾಮೀಜಿ ಭಾಸ್ಕರನಾಗಿ ಹೊಳೆಯುತ್ತಾರೆ ಎಂದು ಸಾಂಕೇತಿಕವಾಗಿ ಹೇಳುತ್ತಾರೆ.

`ಗ್ರಹಣ’ ಕಾದಂಬರಿ ಮೊದಲ ಮುದ್ರಣವನ್ನು ಕಂಡಿದ್ದು 1972ರ ಜುಲೈನಲ್ಲಿ. ಆದರೆ ಅದಕ್ಕಿಂತ ನಾಲ್ಕು ವರ್ಷ ಮೊದಲೇ ಈ ಕಾದಂಬರಿಯನ್ನು ಅವರು ಬರೆದದ್ದು. ಈ ಮಾಹಿತಿ ಅವರ ಆ ಕೃತಿಯಲ್ಲಿಯ ಕೃತಜ್ಞತೆ ಮಾತುಗಳಲ್ಲಿ ಇದೆ. ಈ ಕಾದಂಬರಿಯಲ್ಲಿ ಅವರು ಅಪ್ಪಟ ಪುರೋಗಾಮಿ, ಸ್ತ್ರೀಪರ ನಿಲವು ಹೊಂದಿದವರು ಮತ್ತು ವೈಜ್ಞಾನಿಕ ಮನೋಭಾವದವರು, ಸ್ಥಾಪಿತ ಮೌಲ್ಯಗಳ ವಿರುದ್ಧ ಜೀವಪರ ಧೋರಣೆ ಹೊಂದಿದವರು ಎನ್ನುವುದು ತಿಳಿಯುತ್ತದೆ. ನಂತರದ ದಿನಗಳಲ್ಲಿ ಅವರ ವೈಚಾರಿಕ ನಿಲವಿನಲ್ಲಿ ಆಗಿರುವ ಬದಲಾವಣೆಗೆ ಕಾರಣಗಳೇನು, ಪ್ರತಿಗಾಮಿ ಎನ್ನುವುದಾದರೆ ಯಾವ ಕಾರಣಗಳಿಗಾಗಿ ಎನ್ನುವುದು ಒಂದು ಅಧ್ಯಯನಯೋಗ್ಯ ವಿಷಯವಾಗಿದೆ.