ಪೀಠಿಕೆ

ಒಂ

ದು ರಾಷ್ಟ್ರದ ಸುರಕ್ಷತೆಯ ವಿಷಯದಲ್ಲಿ ಬೇಹುಗಾರಿಕೆ ಅರ್ಥಾತ್‌ ಗೂಢಚರ್ಯ ಅತ್ಯಂತ ಮಹತ್ವದ್ದು. ರಾಷ್ಟ್ರದ ರಕ್ಷಣಾ ವ್ಯವಸ್ಥೆಯ ಅವಿಭಾಜ್ಯ ಅಂಗ ಗೂಢಚರ್ಯ. ಒಂದು ದೇಶ ತನ್ನ ಸೈನ್ಯವನ್ನು, ವ್ಯೂಹಾತ್ಮಕ ತಂತ್ರಗಳನ್ನು, ಶಸ್ತ್ರಸಂಗ್ರಹಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ ತನಗೆ ಸವಾಲೆಸೆಯಬಲ್ಲ ದೇಶ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿದೆ ಎಂದು ಅರಿಯುವುದೂ ಅಷ್ಟೇ ಮುಖ್ಯ. ಇದನ್ನು ಅರಿಯುವುದಕ್ಕೆ ಬೇಹುಗಾರಿಕೆ ಅತ್ಯಗತ್ಯ. ಪುರಾತನ ಕಾಲದಲ್ಲಿ ಸಾಂದ್ರದಾಯಿಕ ರೀತಿಯಲ್ಲಿ ಬೇಹುಗಾರಿಕೆಯನ್ನು ನಡೆಸಲಾಗುತ್ತಿತ್ತು. ಇಂದು ವಿಜ್ಞಾನ ತಂತ್ರಜ್ಞಾನಗಳಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು ಅದರ ಲಾಭವು ಬೇಹುಗಾರಿಕೆ ಕ್ಷೇತ್ರಕ್ಕೂ ಆಗಿದೆ. ಹೊಸ ತಂತ್ರಜ್ಞಾನಗಳಿಂದ ಬೇಹುಗಾರಿಕೆ ನಡೆಸುವ ತಂತ್ರವೂ ಬದಲಾಗಿದೆ. ಹಿಂದೆ ರಾಜಮಹಾರಾಜರುಗಳು ಶತ್ರುದೇಶವು ಏನು ಮಾಡುತ್ತಿದೆ ಎಂಬುದನ್ನು ಅರಿಯುವುದಕ್ಕಾಗಿ ಬೇಹುಗಾರಿಕೆಯನ್ನು ನಡೆಸುತ್ತಿದ್ದರು. ಜೊತೆಯಲ್ಲಿ ರಾಜ್ಯದಲ್ಲಿಯೇ, ಅರಮನೆಯಲ್ಲಿಯೇ ತಮ್ಮ ವಿರುದ್ಧ ಏನೇನು ಷಡ್ಯಂತ್ರಗಳು ನಡೆಯುತ್ತಿವೆ ಎಂಬುದನ್ನು ಅರಿಯುವುದಕ್ಕೂ ಪರಿಣತ ಬೇಹುಗಾರರನ್ನು ಇಟ್ಟುಕೊಳ್ಳುತ್ತಿದ್ದರು. ಬೇಹುಗಾರಿಕೆ ನಡೆಸಿ ಸಿಕ್ಕಿಬಿದ್ದವರಿಗೆ ಆಗಿನಿಂದ ಈಗಿನ ವರೆಗೂ ಒಂದೇ ಶಿಕ್ಷೆ, ಅದು ಮರಣ ದಂಡನೆ. ಈ ಮರಣ ದಂಡನೆ ಬೇರೆಬೇರೆ ರೀತಿಯದು. ಹಿಂದೆ ರಾಜರುಗಳು ಆನೆಯಿಂದ ತುಳಿಸಿ ಸಾಯಿಸುತ್ತಿದ್ದರು, ಸಾರ್ವಜನಿಕವಾಗಿ ಗಲ್ಲಿಗೆ ಏರಿಸುತ್ತಿದ್ದರು, ಗುಂಡಿಟ್ಟು ಸಾಯಿಸುತ್ತಿದ್ದರು. ಅವರಿಗೆ ನೀಡುವ ಸಾವಿನ ಶಿಕ್ಷೆ ಎಷ್ಟು ಕ್ರೂರವಾಗಿರುತ್ತದೋ, ಭಯಾನಕವಾಗಿರುತ್ತದೋ ಅಷ್ಟೂ ಇತರರು ಮುಂದೆ ಆ ರೀತಿ ಮಾಡುವುದಕ್ಕೆ ಭಯಪಡಬೇಕು ಎನ್ನುವುದು ಇದರ ಆಂತರ್ಯದ ಉದ್ದೇಶ.
ರಾಜ್ಯಗಳು, ಸಾಮ್ರಾಜ್ಯಗಳು, ದೇಶಗಳು ಒಂದು ರೀತಿಯಲ್ಲಿ ಗೂಢಚರ್ಯೆಯಲ್ಲಿ ತೊಡಗಿಕೊಂಡಿದ್ದರೆ ಉದ್ಯಮ ಸಾಮ್ರಾಜ್ಯಗಳು ಬೇರೊಂದು ರೀತಿಯ ಗೂಢಚರ್ಯೆಯಲ್ಲಿ ತೊಡಗಿಕೊಂಡಿರುತ್ತವೆ. ಎದುರಾಳಿಯ ಉದ್ಯಮಕ್ಕೆ ವಿಘ್ನ ತರುವುದಕ್ಕೆ, ಆತನಿಗೆ ಸಿಗಬೇಕಾದ ಗುತ್ತಿಗೆಗಳು ತಪ್ಪಿ ಹೋಗುವುದಕ್ಕೆ, ಆತನ ಕಂಪನಿಯ ಅತ್ಯುತ್ತಮ ಕೆಲಸಗಾರರನ್ನು, ಕಾರ್ಯತಂತ್ರ ನಿಪುಣರನ್ನು ತನ್ನೆಡೆಗೆ ಸೆಳೆದುಕೊಳ್ಳುವುದಕ್ಕೆ ಬೇಹುಗಾರಿಕೆಯ ನೆರವನ್ನು ಪಡೆದುಕೊಳ್ಳುತ್ತವೆ. ಒಂದು ಕಂಪನಿಯು ಯಾವುದೋ ಒಂದು ಯಂತ್ರದ ಆವಿಷ್ಕಾರ ಮಾಡಿದ್ದರೆ, ಹೊಸದೊಂದು ಕಾರಿನ ವಿನ್ಯಾಸ ರೂಪಿಸಿದ್ದರೆ, ಹೊಸದೊಂದು ಔಷಧದ ಸೂತ್ರವನ್ನು ಕಂಡುಹಿಡಿದಿದ್ದರೆ ಅದನ್ನು ನಕಲು ಮಾಡುವುದಕ್ಕೆ, ಅದಕ್ಕಿಂತ ಮೊದಲೇ ಮಾರುಕಟ್ಟೆಗೆ ತರುವುದಕ್ಕೆ ಎದುರಾಳಿ ಕಂಪನಿ ಹೊಂಚುಹಾಕುತ್ತಿರುತ್ತದೆ. ಇಲ್ಲೆಲ್ಲ ಉದ್ಯಮಪತಿಗಳು ಗೂಢಚಾರರನ್ನು ಬಳಸಿಕೊಳ್ಳುತ್ತಾರೆ.
ಇನ್ನು ರಾಜಕೀಯ ಪಕ್ಷಗಳು ತಮ್ಮಎದುರಾಳಿ ಪಕ್ಷದ ತಂತ್ರಗಳನ್ನು ಮುಂದಾಗಿಯೇ ಅರಿತು ಅದಕ್ಕೆ ಪ್ರತಿತಂತ್ರಗಳನ್ನು ರೂಪಿಸಲು ಬೇಹುಗಾರಿಕೆಯನ್ನು ಅವಲಂಬಿಸುತ್ತವೆ. ಚುನಾವಣೆ ಸಮಯದಲ್ಲಿ ಇವು ತುಂಬಾ ಅನುಕೂಲಕ್ಕೆ ಬರುತ್ತವೆ. ತೀರ ಇತ್ತೀಚಿನ ಉದಾಹರಣೆ, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಾಗ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಸೋತು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಗೆಲ್ಲುವುದಕ್ಕೆ ರಷ್ಯಾ ದೇಶವು ಕಾರ್ಯತಂತ್ರ ರೂಪಿಸಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಇವೆಲ್ಲ ತುಂಬ ವ್ಯವಸ್ಥಿತವಾಗಿ, ತುಂಬ ರಹಸ್ಯವಾಗಿ ಯೋಜಿಸುವ ಕಾರ್ಯತಂತ್ರಗಳು. ಬಹಿರಂಗವಾದಮೇಲೂ ಅವನ್ನು ಸಿದ್ಧಪಡಿಸುವುದಕ್ಕೆ ಯಾವುದೇ ಪುರಾವೆಗಳು ಸಿಗದಂಥವು.
ಭೂಗತ ಜಗತ್ತಿನ ಮಾಫಿಯಾಗಳೂ ತಮ್ಮದೇ ಒಂದು ಬೇಹುಗಾರಿಕೆಯ ಜಾಲವನ್ನು ಹೊಂದಿರುತ್ತಾರೆ. ಒಬ್ಬೊಬ್ಬ ಡಾನ್‌ಗಳು ತಮ್ಮದೇ ಸರ್ಕಾರವನ್ನು ಚಲಾಯಿಸುತ್ತಿರುತ್ತಾರೆ. ಎದುರಾಳಿ ಗುಂಪಿನವನ ಸಂಪರ್ಕ ಯಾವುದು, ಅದನ್ನು ಹೇಗೆ ತಪ್ಪಿಸುವುದು, ಆತನ ವಸ್ತುಗಳನ್ನು ದಾರಿಯ ಮಧ್ಯದಲ್ಲಿಯೇ ಎಗರಿಸುವುದು ಹೇಗೆ ಇವನ್ನೆಲ್ಲ ಅವರು ಬೇಹುಗಾರಿಕೆಯ ಮೂಲಕವೇ ಅರಿಯುತ್ತಾರೆ, ತಮ್ಮ ಪ್ರತಿ ತಂತ್ರವನ್ನು ರೂಪಿಸುತ್ತಾರೆ. ಈ ಭೂಗತಲೋಕದವರು ಪೊಲೀಸರನ್ನು, ಸರ್ಕಾರದ ಬೇಹುಗಾರಿಕೆ ಪಡೆಯವರನ್ನು ತಮ್ಮ ಶತ್ರುಗಳೆಂದು ಪರಿಗಣಿಸುತ್ತಾರೆ. ಹಾಗೆಯೇ ಕಸ್ಟಮ್ಸ್‌ ಅಧಿಕಾರಿಗಳೂ ಅವರ ಶತ್ರುಗಳೇ. ಈ ಶತ್ರುಗಳನ್ನು ನಿವಾರಿಸಿಕೊಳ್ಳಲು ಅವರು ಸಾಮ, ದಾನ, ದಂಡ, ಭೇದ ನೀತಿಗಳನ್ನು ಅನುಸರಿಸುತ್ತಾರೆ. ಶತ್ರುಗಳಲ್ಲೇ ಒಬ್ಬ ಮಾಹಿತಿದಾರನನ್ನು ಇಟ್ಟುಕೊಂಡಿರುತ್ತಾರೆ. ರಾಜಕೀಯ ಮುಖಂಡರಿಗೆ ಸಂಪರ್ಕಕೊಂಡಿಯಾಗಿ ಯಾರನ್ನೋ ಇರಿಸಿಕೊಂಡಿರುತ್ತಾರೆ.
ರಾಷ್ಟ್ರಗಳೇ ಇರಲಿ, ಪಕ್ಷಗಳೇ ಇರಲಿ, ಉದ್ಯಮ, ಭೂಗತ ಮಾಫಿಯಾ ಹೀಗೆ ಯಾವುದೇ ಇದ್ದರೂ ಅವರ ಪರವಾಗಿ ಕೆಲಸ ಮಾಡುವ ಗೂಢಚಾರರ ಕಾರ್ಯಶೈಲಿ ಒಂದೇ ಆಗಿರುತ್ತದೆ. ಅದು ಎದುರಾಳಿಯ ರಂಧ್ರಾನ್ವೇಷಣೆ. ಎದುರಾಳಿ ತಂಡದಲ್ಲಿ ಅತೃಪ್ತರು ಯಾರಿದ್ದಾರೆ ಎಂಬುದನ್ನು ಗಮನಿಸುವುದು, ಅವರಿಗೆ ಆಮಿಷವನ್ನು ಒಡ್ಡುವುದು, ಭವಿಷ್ಯದಲ್ಲಿ ಅವರಿಗೆ ಅನುಕೂಲವಾಗುವುದೆಂಬ ಬಣ್ಣದ ಲೋಕವನ್ನು ತೋರಿಸುವುದು, ಇಲ್ಲವೆ ಅಧಿಕಾರ, ಹಣದ ಆಸೆ ಹುಟ್ಟಿಸುವುದು, ಎದುರಾಳಿಯ ದೌರ್ಬಲ್ಯಗಳನ್ನು ಅರಿಯುವುದು, ಕೊನೆಯ ಅಸ್ತ್ರವಾಗಿ ಎದುರಾಳಿಯ ಜೀವ ತೆಗೆಯುವ ಸಂಚನ್ನು ರೂಪಿಸುವುದು. ಜಗತ್ತಿನ ಕುವಿಖ್ಯಾತ ಬೇಹುಗಾರರೆಂದು ಹೆಸರಾದವರು ಇಂಥ ದುಸ್ಸಾಹಸಗಳನ್ನು ನಡೆಸಿದ್ದಾರೆ.
ನಮ್ಮ ಪುರಾಣಗಳಲ್ಲಿಯೂ ಬೇಹುಗಾರಿಕೆಯ ಪ್ರಯೋಗ ನಡೆದ ಕತೆಗಳಿವೆ ಎಂದರೆ ಆಶ್ಚರ್ಯವಾಗಬಹುದು. ದೇವತೆಗಳಿಗೂ ದೈತ್ಯರಿಗೂ ವೈರತ್ವ ಎಲ್ಲರಿಗೂ ಗೊತ್ತಿರುವುದೇ. ಆಗಿನ್ನೂ ಅಮೃತವನ್ನು ದೇವತೆಗಳು ಪಡೆದಿರಲಿಲ್ಲ. ದೈತ್ಯರ ಗುರು ಶುಕ್ರಾಚಾರ್ಯ. ಅವರು ಅದೇನೋ ಸಾಧನೆ ಮಾಡಿ ಸಂಜೀವಿನಿ ವಿದ್ಯೆಯನ್ನು ಸಿದ್ಧಿಸಿಕೊಂಡಿರುತ್ತಾರೆ. ಆ ವಿದ್ಯೆಯ ಮೂಲಕ ಅವರು ಸತ್ತ ದೈತ್ಯರನ್ನು ಬದುಕಿಸುತ್ತಿದ್ದರು. ಇದು ದೇವತೆಗಳಿಗೆ ತಲೆನೋವಾಗಿತ್ತು. ಶುಕ್ರಾಚಾರ್ಯರ ಆ ವಿದ್ಯೆಯನ್ನು ತಾವು ಪಡೆದುಕೊಳ್ಳಬೇಕು ಮತ್ತು ಅವರ ವಿದ್ಯೆಯನ್ನು ನಿಷ್ಫಲಗೊಳಿಸಬೇಕು ಎಂದು ದೇವತೆಗಳು ಸಂಚು ರೂಪಿಸುತ್ತಾರೆ. ಇದಕ್ಕಾಗಿ ದೇವತೆಗಳ ಗುರು ಬೃಹಷ್ಪತಿಯ ಮಗ ಕಚನನ್ನು ಶುಕ್ರಾಚಾರ್ಯನಲ್ಲಿಗೆ ಕಳುಹಿಸುತ್ತಾರೆ. ಕಚ ಅಲ್ಲಿ ಹೋಗಿ ಅವರ ಶಿಷ್ಯವೃತ್ತಿ ಸ್ವೀಕರಿಸುತ್ತಾನೆ. ಜೊತೆಗೆ ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು ಪ್ರೀತಿಸುತ್ತಾನೆ. ಶುಕ್ರಾಚಾರ್ಯರ ಇತರ ದೈತ್ಯ ಶಿಷ್ಯರಿಗೆ ಕಚನ ಮೇಲೆ ಅಸೂಯೆ. ಒಮ್ಮೆ ಅವರೆಲ್ಲ ಕಚನೊಂದಿಗೆ ಕಾಡಿಗೆ ಹೋದಾಗ ಅವನನ್ನು ಕೊಂದು, ಶವವನ್ನು ಸುಟ್ಟು ಅದರ ಬೂದಿಯನ್ನು ತಂದು ಶುಕ್ರಾಚಾರ್ಯರಿಗೆ ಹಾಲಿನಲ್ಲಿ ಬೆರೆಸಿ ಕುಡಿಯಲು ಕೊಡುತ್ತಾರೆ. ಇದೆಲ್ಲ ತಿಳಿದ ಬಳಿಕ ದೇವಯಾನಿ ತನ್ನ ತಂದೆಗೆ ಕಚನನ್ನು ಬದುಕಿಸಿಕೊಡಲು ಹೇಳುತ್ತಾಳೆ. ತನ್ನ ಶರೀರದಲ್ಲಿ ಸೇರಿಹೋಗಿರುವ ಕಚನನ್ನು ಬದುಕಿಸಲು ಮಂತ್ರ ಪಠಿಸಿದರೆ ತಾನು ಸಾಯುತ್ತೇನೆ. ಕೊನೆಗೆ ತನ್ನನ್ನು ಬದುಕಿಸುವವರು ಯಾರು ಎಂದು ಶುಕ್ರಾಚಾರ್ಯರಿಗೆ ದಿಕ್ಕುತೋಚಲಿಲ್ಲ. ಇತರ ರಾಕ್ಷಸರ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ಕಾರಣ ಅವರು ತಮ್ಮ ಮಗಳಿಗೆ ಸಂಜೀವಿನಿ ವಿದ್ಯೆ ಬೋಧಿಸುತ್ತಾರೆ. ಶುಕ್ರಾಚಾರ್ಯರು ಮಂತ್ರ ಪಠಿಸಿದಾಗ ಕಚ ಅವರ ಹೊಟ್ಟೆಯನ್ನು ಸೀಳಿಕೊಂಡು ಹೊರಗೆ ಬರುತ್ತಾನೆ. ದೇವಯಾನಿ ಮಂತ್ರ ಪಠಿಸಿ ತನ್ನ ತಂದೆಯನ್ನು ಬದುಕಿಸಿಕೊಳ್ಳುತ್ತಾಳೆ. ಮಹಿಳೆಗೆ ಆ ಮಂತ್ರ ಬೋಧಿಸಿದ್ದರಿಂದ ಅವರ ವಿದ್ಯೆ ನಷ್ಟವಾಗುತ್ತದೆ. ಗುರುಪುತ್ರಿಯಾದ ದೇವಯಾನಿ ತನ್ನ ಸಹೋರಿಗೆ ಸಮ ಎಂದು ಕಚ ಅವಳನ್ನು ಮದುವೆಯಾಗಲು ನಿರಾಕರಿಸುತ್ತಾನೆ. ಹೀಗೆ ವಿದ್ಯೆಯ ನಷ್ಟ, ಜೊತೆಗೆ ಪ್ರೇಮಭಂಗ ಎರಡೂ ಆಗುತ್ತದೆ. ದೇವತೆಗಳು ಗೆಲವಿನ ನಗೆ ಬೀರುತ್ತಾರೆ. ಇದು ಪುರಾಣದ ಮಾತು. ಇನ್ನು ಇತಿಹಾಸದಲ್ಲಿ…..
ಬೇಹುಗಾರಿಕೆಗೆ ಮೂಲ ಪುರುಷ ಯಾರು ಎಂದು ಕೆದಕುತ್ತ ಹೋದರೆ ಚೀನಾದ ಸೇನಾಪತಿ ಸೂನ್ ಸೂ ಎಂದು ಹೇಳುತ್ತಾರೆ. ಈತನ ಐತಿಹಾಸಿಕತೆಯ ಬಗ್ಗೆ ಚರ್ಚೆಗಳು ಇವೆ. ಆದರೆ ಈತ ಕ್ರಿ.ಪೂ. ಆರನೆ ಶತಮಾನದಲ್ಲಿದ್ದ ವು ವಂಶದ ದೊರೆ ಹೇಳು ಎಂಬಾತನ ಆಸ್ಥಾನದಲ್ಲಿದ್ದ. ಈತನ ಕಾಲ ಕ್ರಿ.ಪೂ. 544- 496 ಎಂದು ಹೇಳುತ್ತಾರೆ. ಈತನ ಐತಿಹಾಸಿಕತೆಯನ್ನು ಆಧುನಿಕ ವಿದ್ವಾಂಸರು ಒಪ್ಪಿಕೊಳ್ಳುತ್ತಾರೆ. ಈತನ ಪ್ರಸಿದ್ಧವಾದ ಕೃತಿ ದಿ ಆರ್ಟ್‌ ಆಫ್‌ ವಾರ್‌. ಯಾರು ತನ್ನ ಶತ್ರುವಿನ ಬಗ್ಗೆ ತಿಳಿದಿರುತ್ತಾನೋ ಮತ್ತು ತನ್ನ ಬಗ್ಗೆಯೇ ತಿಳಿದುಕೊಂಡಿರುತ್ತಾನೋ ಆತನಿಗೆ ಸಾವಿರ ತಾಪತ್ರಯಗಳಿದ್ದರೂ ಅಪಾಯವೆನ್ನುವುದು ಇರುವುದಿಲ್ಲ ಎಬುದು ಆತನ ಸುಪ್ರಸಿದ್ಧವಾದ ಸಲಹೆ. ಇಂದಿನ ಮಿಲಿಟರಿ ಇಂಟೆಲಿಜೆನ್ಸ್‌ ಎನ್ನುವುದರ ಬೀಜ ಸೂತ್ರ ಇದು. ಪ್ರಾಚೀನ ಏಷ್ಯಾದಲ್ಲಿ, ಪಶ್ಚಿಮ ದೇಶಗಳಲ್ಲಿ ಜಗದ್ವಿಖ್ಯಾತ ದಾಳಿಗಾರರು ಎಂದು ಹೆಸರು ಮಾಡಿದ ಬಹುತೇಕರು ಈತನ ಈ ಕೃತಿಯನ್ನು ಆಧರಿಸಿಯೇ ತಮ್ಮ ಯುದ್ಧತಂತ್ರಗಳನ್ನು ರೂಪಿಸಿದ್ದರು ಎಂದು ಹೇಳುತ್ತಾರೆ.
ಸೂನ್‌ ಸೂ ಬೇಹುಗಾರಿಕೆಯ ವಿವಿಧ ಪಾತ್ರಗಳನ್ನು ಪ್ರತ್ಯೇಕಿಸುತ್ತಾನೆ. ಆಧುನಿಕ ಕಾಲದ ರೀತಿಯಲ್ಲಿ ಹೇಳಬೇಕೆಂದರೆ, ಒಬ್ಬ ಗೂಢಚಾರ ಶತ್ರುವಿನ ಬಗ್ಗೆ ರಹಸ್ಯವಾದ ಮಾಹಿತಿಗಳನ್ನು ಕಲೆಹಾಕಿ ಅದನ್ನು ತನ್ನ ದಣಿಗೆ ಕಳುಹಿಸಿಕೊಡುವವನು. ಈತ ಮಾಹಿತಿದಾರ ಏಜೆಂಟ್‌. ಎರಡನೆ ಹಂತದವನು ಸ್ವಲ್ಪ ಕುಶಾಗ್ರಮತಿ, ಮುನ್ನುಗ್ಗುವವನಾಗಿರಬೇಕು. ಶತ್ರುಪಾಳಯದಲ್ಲಿ ಪ್ರಮುಖರೊಂದಿಗೆ ಸಂಬಂಧಗಳನ್ನು ಸಾಧಿಸುವವನಾಗಿರಬೇಕು. ಮೂರನೆ ಹಂತದಲ್ಲಿಯ ಏಜೆಂಟನು ತಪ್ಪು ಮಾಹಿತಿಗಳು ಶತ್ರುವಿನ ನೆಲೆಗೆ ತಲುಪಿಸುವವನಾಗಿರುತ್ತಾನೆ. ಇದರಲ್ಲಿ ಅರೆಬರೆ ಸತ್ಯ ಸಂಗತಿಗಳಿರುತ್ತವೆ. ಇದರಿಂದ ಶತ್ರುವಿನ ದಾರಿತಪ್ಪಿಸುವ ಕೆಲಸ ಈತ ಮಾಡುತ್ತಾನೆ. ಶತ್ರುಪಾಳಯದ ಬೇಹುಗಾರಿಕೆಯನ್ನು ಹೇಗೆ ನಿಷ್ಕ್ರಿಯಗೊಳಿಸಬೇಕು, ಶತ್ರುಪಾಳಯದವರನ್ನು ತಮಗಾಗಿ ಕೆಲಸ ಮಾಡುವಂತೆ ಮಾಡಿ ಅವರನ್ನು ಡಬ್ಬಲ್‌ ಏಜೆಂಟರನ್ನಾಗಿ ಮಾಡಿಕೊಳ್ಳುವುದು ಹೇಗೆ, ಶತ್ರುವಿನ ಮಾನಸಿಕ ಸ್ಥಿತಿಯ ಮೇಲೆ ಹೇಗೆ ಮೇಲುಗೈ ಸಾಧಿಸುವುದು ಎಂಬುದನ್ನೆಲ್ಲ ವಿವಿರವಾಗಿ ಹೇಳಿದ್ದಾನೆ.
ನಂತರ, ಭಾರತದಲ್ಲಿ ಕ್ರಿ.ಪೂ. ನಾಲ್ಕನೆ ಶತಮಾನದಲ್ಲಿದ್ದ ಜೀವಿಸಿದ್ದ ಕೌಟಿಲ್ಯ ಅಥವಾ ಚಾಣಕ್ಯ ಒಬ್ಬ ಅಸಾಧಾರಣ ವ್ಯಕ್ತಿ. ಈತನ ಅರ್ಥಶಾಸ್ತ್ರವು ಪ್ರಖ್ಯಾತವಾದದ್ದು. ಒಂದು ರಾಜ್ಯವನ್ನು ಕಟ್ಟುವುದು ಹೇಗೆ, ರಾಜ್ಯಾಡಳಿತವನ್ನು ನಡೆಸುವುದು ಹೇಗೆ, ರಾಜ್ಯದ ಅರ್ಥವ್ಯವಸ್ಥೆಯನ್ನು ರೂಪಿಸುವುದು ಹೇಗೆ ಮೊದಲಾದ ವಿಚಾರಗಳನ್ನು ವಿಸ್ತಾರವಾಗಿ ಈತ ಹೇಳಿದ್ದಾನೆ. ಬೇಹುಗಾರಿಕೆಯಲ್ಲಿ ಹೇಗೆ ಮಾಹಿತಿಯನ್ನು ಕಲೆಹಾಕುವುದು, ಅವುಗಳ ಸಂಸ್ಕರಣೆ ಹೇಗೆ, ಅವುಗಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು, ರಹಸ್ಯ ಕಾರ್ಯಾಚರಣೆಗಳನ್ನು ಹೇಗೆ ನಡೆಸಬೇಕು ಇತ್ಯಾದಿ ವಿವರಗಳನ್ನು ಚಾಣಕ್ಯನು ನೀಡಿದ್ದಾನೆ.
ಪ್ರಾಚೀನ ಇಜಿಪ್ತಿನಲ್ಲಿ ಬೇಹುಗಾರಿಕೆಯ ಒಂದು ವ್ಯವಸ್ಥೆಯು ಚೆನ್ನಾಗಿಯೇ ಬೆಳೆದು ಬಂದಿತ್ತು. ಹೀಬ್ರೂಗಳು ಅಂದರೆ ಪ್ರಾಚೀನ ಇಸ್ರೇಲಿಗಳು ಬೇಹುಗಾರರನ್ನು ಬಳಸುತ್ತಿದ್ದರು. ಬೈಬಲ್ಲಿನ ಹಳೆ ಒಡಂಬಡಿಕೆಯಲ್ಲಿ ರಹಾಬ್‌ನ ಕತೆಯಲ್ಲಿ ಬೇಹುಗಾರಿಕೆಯ ಪ್ರಸ್ತಾಪ ಬರುತ್ತದೆ. ಜೆರಿಕೋ ಮೇಲೆ ದಾಳಿ ಮಾಡುವುದಕ್ಕೆ ಪೂರ್ವದಲ್ಲಿ ಆ ನಗರದ ಸ್ಥಿತಿಗತಿಯನ್ನು ಅರಿಯುವುದಕ್ಕೆ ಇಬ್ಬರು ಬೇಹುಗಾರರನ್ನು ಹೀಬ್ರುಗಳು ಅಲ್ಲಿಗೆ ಕಳುಹಿಸಿದ ವಿವರ ಅದರಲ್ಲಿದೆ. ಗ್ರೀಕ್, ರೋಮನ್‌ ಸಾಮ್ರಾಜ್ಯಗಳಲ್ಲಿ ಬೇಹುಗಾರಿಕೆ ಇದ್ದೇ ಇತ್ತು. ಮಂಗೋಲರು 13, 14ನೆ ಶತಮಾನಗಳಲ್ಲಿ ಏಷ್ಯಾ ಮತ್ತು ಯೋರೋಪಿನ ಮೇಲೆ ದಾಳಿಗಳನ್ನು ನಡೆಸುವಾಗ ಬೇಹುಗಾರಿಕೆಯ ಮೇಲೆ ತುಂಬ ಅವಲಂಬಿತರಾಗಿದ್ದರು. ಸಾಮ್ರಾಜ್ಯಶಾಹಿ ಜಪಾನಿನಲ್ಲಿ ಅಸಾಂಪ್ರದಾಯಿಕ ಯುದ್ಧವೀರರಾದ ಶಿನೋಬಿಗಳನ್ನು ಬೇಹುಗಾರಿಕೆಗೆ ಬಳಸುತ್ತಿದ್ದರು.
ಬೇಹುಗಾರಿಕೆಗೆ ಸಾಂಸ್ಥಿಕ ರೂಪವನ್ನು ನೀಡಿದ ಮಹತ್ವದ ಬೆಳವಣಿಗೆಯು 12ನೆ ಶತಮಾನದ ಸುಮಾರಿಗೆ ನಡೆಯಿತು. ಜಾರ್ಜಿಯಾದ ದೊರೆ 4ನೆ ಡೇವಿಡ್‌ನು ಎಂತ್ಸೋವಾರಿಸ್‌ ಎಂಬ ಬೇಹುಗಾರಿಕೆ ಸಂಸ್ಥೆಯನ್ನು ಸ್ಥಾಪಿಸಿದನು. ಇದು ನಿರಂತರವಾಗಿ ಸಂಘಟಿತ ಬೇಹುಗಾರಿಕೆ ಕೆಲಸಗಳನ್ನು ಮಾಡುತ್ತಿತ್ತು. ಶತ್ರುಗಳ ಬೇಹುಗಾರಿಕೆಯನ್ನು ಬಯಲುಮಾಡುವುದು, ಶತ್ರು ಬೇಹುಗಾರರ ಮೇಲೆ ಪ್ರತಿ ಬೇಹುಗಾರಿಕೆ ನಡೆಸುವುದು, ಆಯಕಟ್ಟಿನ ತಾಣಗಳಲ್ಲಿ ತೂರಿಕೊಳ್ಳುವುದು ಮೊದಲಾದ ಕೆಲಸಗಳನ್ನು ಇದು ನಿರ್ವಹಿಸುತ್ತಿತ್ತು.
ಎಲಿಜಾಬೆಥ್ ಇಂಗ್ಲೆಂಡಿನ ರಾಣಿಯಾಗಿದ್ದ ಸಮಯದಲ್ಲಿ ಫ್ರಾನ್ಸಿಸ್‌ ವಾಲ್ಸಿಂಗ್ಹಾಮ್ ಎಂಬಾತ ಹಲವು ಆಧುನಿಕ ಬೇಹುಗಾರಿಕೆ ಪದ್ಧತಿಗಳನ್ನು ಜಾರಿಗೆ ತಂದನು. ಇವನ ತಂಡದಲ್ಲಿ ಗೂಢಲಿಪಿಕಾರ ಥಾಮಸ್‌ ಫೆಲಿಪ್ಪೆಸ್‌ ಎಂಬಾತ ಇದ್ದನು. ಈತ ಗೂಢ ಲಿಪಿಯಲ್ಲಿದ್ದ ಪತ್ರಗಳನ್ನು ಓದಿ ನಕಲು ಮಾಡುವುದರಲ್ಲಿ ಸಿದ್ಧಹಸ್ತನಾಗಿದ್ದನು. ಇನ್ನೊಬ್ಬನು ಅರ್ಥರ್‌ ಗ್ರೆಗೊರಿ. ಈತ ಮುದ್ರೆಗಳನ್ನು ಅವು ಒಡೆಯದಂತೆ ತೆಗೆಯಬಲ್ಲವನಾಗಿದ್ದನು. ಎಲಿಜಾಬೆಥ್‌ ವಿರುದ್ಧ ಸ್ಕಾಟ್ಲೆಂಟಡಿನ ಮೇರಿ ನಡೆಸಿದ ಒಳಸಂಚನ್ನು ಬಹಿರಂಗ ಪಡಿಸಿ ಎಲಿಜಾಬೆಥ್‌ ಪದಚ್ಯುತಿಯನ್ನು ವಾಲ್ಸಿಂಗ್ಹಾಮ್‌ ತಪ್ಪಿಸುತ್ತಾನೆ.
ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಅದರ ಸೇನಾಪಡೆ ಮುಖ್ಯಸ್ಥ ಜನರಲ್‌ ಜಾರ್ಜ್‌ ವಾಷಿಂಗ್ಟನ್‌ ಯಶಸ್ವಿಯಾದ ಬೇಹುಗಾರಿಕೆ ವ್ಯವಸ್ಥೆಯನ್ನು ರೂಪಿಸಿದನು. ಅದರ ಮೂಲಕ ಬ್ರಿಟಿಷ್‌ ಸೇನೆಯ ಚಲನವಲನ ಮತ್ತು ಅವರ ಯೋಜನೆಗಳನ್ನು ಅರಿತು ಯುದ್ಧದಲ್ಲಿ ತಕ್ಕ ಪ್ರತ್ಯುತ್ತರ ನೀಡುವುದು ಅದರಿಂದ ಸಾಧ್ಯವಾಯಿತು. ಆತ ಬೆಂಜಾಮಿನ್‌ ಟಾಲ್ಲಮಡಗೆ ಎಂಬಾತನಿಗೆ ಬ್ರಿಟಿಷರ ವಶದಲ್ಲಿದ್ದ ನ್ಯೂಯಾರ್ಕಿನ ಕುರಿತು ಮಾಹಿತಿಯನ್ನು ಕಲೆಹಾಕಲು ಕುಪ್ಲರ್‌ ರಿಂಗ್‌ ಎಂಬ ಬೇಹುಗಾರರ ಪಡೆಯನ್ನು ಸಿದ್ಧಪಡಿಸಲು ಆದೇಶಿಸುತ್ತಾನೆ. ವಾಷಿಂಗ್ಟನ್‌ನನ್ನು ಅಮೆರಿಕದ ಮೊದಲ ಸ್ಪೈ ಮಾಸ್ಟರ್‌ ಎಂದು ಹೇಳುತ್ತಾರೆ.
ಮಿಲಿಟರಿ ಬೇಹುಗಾರಿಕೆಯು ಅಭಿವೃದ್ಧಿಹೊಂದಿ ಶಾಶ್ವತವಾದ ಒಂದು ಸೇವೆಯಾಗಿ ಅಸ್ತಿತ್ವಕ್ಕೆ ಬಂದದ್ದು 19ನೆ ಶತಮಾನದ ಮಧ್ಯಭಾಗದಲ್ಲಿ ಆಸ್ಟ್ರಿಯಾದಲ್ಲಿ. 1848-49ರ ಕ್ರಾಂತಿಯಿಂದ ಕಂಗೆಟ್ಟ ಆಸ್ಟ್ರಿಯಾದ ಸಾಮ್ರಾಟ ಫ್ರಾಂಜ್‌ ಜೊಸೆಫ್‌ನು ಎವಿಡೆಂಜ್‌ಬ್ಯೂರೋವನ್ನು 1850ರಲ್ಲಿ ಸ್ಥಾಪಿಸುತ್ತಾನೆ. ಇದು ಮೊಟ್ಟಮೊದಲ ಶಾಶ್ವತ ಮಿಲಿಟರಿ ಇಂಟೆಲಿಜೆನ್ಸ್‌ ಸರ್ವಿಸ್‌ ಆಗಿರುತ್ತದೆ. ಇದನ್ನು ಮೊದಲ ಬಾರಿಗೆ ಆಸ್ಟ್ರೋ-ಸಾರ್ಡಿನಿಯನ್‌ ವಾರ್‌ ಸಮಯದಲ್ಲಿ 1859ರಲ್ಲಿ ಬಳಸಲಾಯಿತು.
ಮೊದಲ ಮತ್ತು ಎರಡನೆ ಮಹಾಯುದ್ದದ ಕಾಲದಲ್ಲಿ, ಆ ಬಳಿತ ಶೀತಲಯುದ್ಧದ ಸಮಯದಲ್ಲಿ ಬೇಹುಗಾರಿಕೆ ಮಹತ್ವದ ಪಾತ್ರ ವಹಿಸಿತ್ತು. ಹಾಗೆಯೇ ಈಗ ಭಯೋತ್ಪಾದನೆ ಕೃತ್ಯಗಳ ನಿಗ್ರಹದಲ್ಲೂ ಬೇಹುಗಾರಿಕೆ ಪ್ರಮುಖವಾಗಿದೆ. ಭಾರತದ ರಿಸರ್ಚ್‌ ಆ್ಯಂಡ್‌ ಅನಲಿಸಿಸ್‌ ವಿಂಗ್‌ (ರಾ), ಅಮೆರಿಕದ ಸಿಐಎ, ರಷ್ಯಾದ ಕೆಜಿಬಿ, ಪಾಕಿಸ್ತಾನದ ಐಎಸ್‌ಐ, ಇಸ್ರೇಲಿನ ಮೊಸ್ಸಾದ್‌, ಬ್ರಿಟನ್ನಿನ ಎಂಐ5, ಜರ್ಮನಿಯ ಬಿಎನ್‌ಡಿ, ಚೀನಾದ ಎಂಎಸ್‌ಎಸ್‌ ಪ್ರಮುಖವಾದ ಬೇಹುಗಾರಿಕೆ ಪಡೆಗಳಾಗಿವೆ.