ನಾನೇನೋ ಹೇಳ್ತಾಹೇಳ್ತಾ ಹೋಗ್ಬಿಡ್ತೇನೆ, ಆದರೆ ಯಾವುದಾದರೊಂದುದಿನ ನಾನು ನೆನಪಿಗೆ ಬರ್ತೇನೆ, ಒಬ್ಬ ದೀನ ಮನುಷ್ಯ ಹೇಳ್ತಾ ಇದ್ನಲ್ಲ, ಅದು ಸರಿನೇ ಇತ್ತು ಅಂತ. (ಗಾಂಧಿ, ೧೬ ಅಕ್ಟೋಬರ್ ೧೯೪೭) ದೇಶ ಸ್ವಾತಂತ್ರ್ಯವನ್ನು ಪಡೆದ ಎರಡೇ ತಿಂಗಳಲ್ಲಿ ರಾಷ್ಟ್ರಪಿತನು ಆಡಿದ ಮಾತುಗಳು ಇವು. ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಖಚಿತವಾಗುತ್ತಿದ್ದಂತೆಯೇ ಅವರ ನೆಚ್ಚಿನ ಭಂಟರೇ ಗಾಂಧಿ ಇನ್ನು ಅಪ್ರಸ್ತುತ, ಗಾಂಧಿಯ ಸಿದ್ಧಾಂತಗಳು ಸ್ವತಂತ್ರ ಭಾರತಕ್ಕೆ ಅಗತ್ಯವಿಲ್ಲ, ಹಿಂದ್ ಸ್ವರಾಜ್ ಎಂಬುದು ಬಹಳ ಹಳೆಯ ಕಲ್ಪನೆ, ಈಗ ಜಾಗತಿಕವಾಗಿ ಅದೆಷ್ಟೋ ಬದಲಾವಣೆಗಲಾಗಿವೆ, ಗಾಂಧಿ ಮಾತ್ರ ಬದಲಾಗಿಲ್ಲ ಎಂಬಂಥ ಮನೋಭಾವವನ್ನು ಬೆಳೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿಯೇ ಗಾಂಧೀಜಿ ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ಹೇಳಿದ್ದು- ವಯಸ್ಸಿನಿಂದ ಮುದುಕನಾಗಿದ್ದರೂ ನನಗೇನು ನನ್ನ ಆಂತರಿಕ ವಿಕಾಸ ನಿಂತುಹೋಗಿದೆ ಅನಿಸೋದಿಲ್ಲ ಅಥವಾ ಶರೀರದ ವಿಸರ್ಜನೆಯ ನಂತರ ಕೂಡ ನಿಂತುಹೋಗ್ತದೆ ಅಂತ ಅನಿಸುವುದಿಲ್ಲ. ತಮ್ಮ ಬೆಂಬಲಿಗರು ತಮ್ಮನ್ನು ದೂರಮಾಡುತ್ತಿದ್ದಾರೆ ಎಂದು ಅನ್ನಿಸಿದಾಗಲೆಲ್ಲ ಅವರು ತಮ್ಮನ್ನು ತಾವೇ ವಿಶ್ಲೇಷಣೆಗೆ ಒಳಪಡಿಸಿಕೊಳ್ಳುತ್ತಿದ್ದರು. ೨೭ ನವೆಂಬರ್ ೧೯೪೭ರ ಪ್ರಾರ್ಥನಾ ಪ್ರವಚನದ ಕೊನೆಯಲ್ಲಿ ಗಾಂಧಿ ತಮ್ಮ ನೋವನ್ನು ಹೀಗೆ ತೋಡಿಕೊಂಡರು- ಯಾವನು ಮನುಷ್ಯನಿದ್ದಾನೋ ಮತ್ತು ತಿಳಿವಳಿಕೆಯುಳ್ಳವನಾಗಿದ್ದಾನೋ ಅವನು ಈ ರೀತಿಯ ವಾತಾವರಣದಲ್ಲಿ ದೃಢವಾಗಿ ಇರಲಾರ. ನಾನು ನಿಮ್ಮ ಎದುರಿಗೆ ಇಟ್ಟಿದ್ದೇನಲ್ಲ, ಇದು ನನ್ನ ದುಃಖದ ಕತೆ ಅಥವಾ ಇಡೀ ಹಿಂದೂಸ್ಥಾನದ ದುಃಖದ ಕತೆ ಎಂದು ಬೇಕಾದರೂ ಹೇಳಿ ಎಂದು ಅಲವತ್ತುಕೊಂಡರು. ೧೨೫ ವರ್ಷಗಳ ವರೆಗೆ ಬದುಕಿರಬೇಕು ಮತ್ತು ಸೇವೆ ಮಾಡಬೇಕು ಎಂಬ ಗಾಂಧಿಯವರ ಇಚ್ಛೆ ಎಲ್ಲರಿಗೂ ಗೊತ್ತಿರುವುದೇ. ಆದರೆ ಕೊನೆಕೊನೆಗೆ ಗಾಂಧಿಯವರಿಗೆ ಜೀವನವೇ ಬೇಜಾರಾಗಿಬಿಟ್ಟಿತ್ತು. ಅವರು ಸಾವನ್ನು ಬಯಸುತ್ತಿದ್ದರು. ಸ್ವತಂತ್ರ ಭಾರತ ತನ್ನ ರಾಷ್ಟ್ರಪಿತನನ್ನು ಕೇವಲ ಐದೂವರೆ ತಿಂಗಳು ಅಂದರೆ ಕೇವಲ ೧೬೯ ದಿನ ಸುರಕ್ಷಿತವಾಗಿಟ್ಟುಕೊಳ್ಳಲಷ್ಟೇ ಸಾಧ್ಯವಾಯಿತು. ಆ ಸಂದರ್ಭದಲ್ಲಿಯೇ ಅವರ ಜನ್ಮದಿನ ಬಂದಿತ್ತು. ೨ ಅಕ್ಟೋಬರ್ ೧೯೪೭. ಆ ದಿನ ಅವರು ಹೀಗೆ ಹೇಳಿದರು- ಇಂದಂತೂ ನನ್ನ ಜನ್ಮದಿನ… ನನ್ನ ಪಾಲಿಗಂತೂ ಇಂದು ಸತ್ತ ಶೋಕವನ್ನು ಆಚರಿಸೋ ದಿನ ಆಗಿದೆ. ನಾನು ಇವತ್ತಿನವರೆಗೆ ಜೀವಂತ ಬಿದ್ದುಕೊಂಡಿದ್ದೇನೆ. ಇದರ ಬಗೆಗೆ ನನಗೆ ಸ್ವಯಂ ಆಶ್ಚರ್ಯ ಆಗ್ತಿದೆ. ನಾಚಿಕೆಯಾಗ್ತಿದೆ. ಹೀಗೆ ಮಾಡಿ ಅಂತ ಯಾರ ಬಾಯಿಂದ ಒಂದು ಮಾತು ಹೊರಟಿದ್ದರೆ ಕೋಟ್ಯಂತ ಜನ ಅದನ್ನು ಮಾನ್ಯ ಮಾಡ್ತಿದ್ದರು. ಅದೇ ವ್ಯಕ್ತಿನಾ ನಾನು? ಆದರೆ ಇಂದು ಯಾರೂ ನನ್ನನ್ನು ಕೇಳೋರೇ ಇಲ್ಲ . ಹೀಗೆ ಮಾಡಿ ಅಂತ ನಾನು ಹೇಳಿದರೆ, ಇಲ್ಲ, ನಾವು ಹಾಗೆ ಮಾಡೋದಿಲ್ಲ ಅಂತ ಹೇಳ್ತಾರೆ… ಇಂತಹ ಪರಿಸ್ಥಿತಿಯಲ್ಲಿ ಹಿಂದೂಸ್ಥಾನದಲ್ಲಿ ನನಗೆ ಜಾಗ ಎಲ್ಲಿದೆ ಮತ್ತು ನಾನು ಇಲ್ಲಿ ಜೀವಂತ ಇದ್ದು ಏನು ಮಾಡಲಿ? ಇಂದು ನನ್ನಿಂದ ೧೨೫ ವರ್ಷ ಬದುಕೋ ಮಾತು ಹೊರಟು ಹೋಗಿದೆ. ೧೦೦ ವರ್ಷದ್ದೂ ಹೊರಟು ಹೋಗಿದೆ. ೯೦ ವರ್ಷದ್ದು ಕೂಡ. ಇಂದು ನಾನು ೭೯ನೆ ವರ್ಷಕ್ಕೆ ಬರ್ತಿದ್ದೇನೆ. ಆದರೆ ಅದೂ ಕೂಡ ನನಗೆ ಚುಚ್ತಾ ಇದೆ. ಗಾಂಧೀಜಿಯವರನ್ನು ಪ್ರಶ್ನಿಸದೆಯೇ ಒಪ್ಪಿಕೊಳ್ಳಬೇಕು ಎಂಬ ಆಗ್ರಹ ಇದಲ್ಲ. ಒಪ್ಪಿಕೊಳ್ಳುವ ಮುಂಚೆ ಚೆನ್ನಾಗಿ ಅರಿತುಕೊಳ್ಳಲಿ, ತಿರಸ್ಕರಿಸುವುದಕ್ಕೂ ಒಂದು ಪ್ರಬಲ ಕಾರಣ ಇರಲಿ. ಆ ಕಾರಣ ತಮಗೆ ಗೊತ್ತಾಗಲಿ ಎಂದು ಅವರು ಬಯಸುತ್ತಾರೆ. ಸ್ವಾತಂತ್ರ್ಯಕ್ಕೆ ನಾಲ್ಕು ತಿಂಗಳು ಮುಂಚೆ, ೧ ಏಪ್ರಿಲ್ ೧೯೪೭ರ ಪ್ರಾರ್ಥನಾ ಸಭೆಯಲ್ಲಿ ಗಾಂಧಿ ಹೇಳಿದರು- ಆದರೆ ಆಗೋದೇನು? ನಾನು ಹೇಳಿದ್ದರ ಹಾಗೆ ಏನೂ ಆಗೋದಿಲ್ಲ. ಆಗೋದು ಅದೇ ಕಾಂಗ್ರೆಸ್ ಮಾಡಿದ್ದು. ನನ್ನದು ಈಗ ಎಲ್ಲಿ ನಡೆಯುತ್ತದೆ? ನನ್ನದು ನಡೆದಿದ್ದರೆ ಪಂಜಾಬ ಆಗ್ತಿರಲಿಲ್ಲ, ಬಿಹಾರ ಆಗ್ತಿರಲಿಲ್ಲ, ನೌಖಾಲಿಯೂ ಆಗ್ತಿರಲಿಲ್ಲ. ಈಗ ನಾನು ಹೇಳಿದ್ದನ್ನು ಯಾರೂ ಒಪ್ಪುವುದಿಲ್ಲ. ನಾನು ತುಂಬಾ ಸಣ್ಣ ಮನುಷ್ಯ, ಹೌದು. ಒಂದು ಕಾಲದಲ್ಲಿ ನಾನು ಹಿಂದೂಸ್ಥಾನದಲ್ಲಿ ದೊಡ್ಡ ಮನುಷ್ಯ ಆಗಿದ್ದೆ. ಆಗ ಎಲ್ಲರೂ ನನ್ನ ಮಾತನ್ನು ಕೇಳುತ್ತಿದ್ದರು. ಈಗ ಕಾಂಗ್ರೆಸೂ ನನ್ನನ್ನು ಒಪ್ಪುವುದಿಲ್ಲ. ಹಿಂದೂ ಮತ್ತು ಮುಸಲ್ಮಾನರೂ ಒಪ್ಪುವುದಿಲ್ಲ….. ನನ್ನದು ಅರಣ್ಯ ರೋದನ ನಡೆದಿದೆ. ಈಗ ಎಲ್ಲರೂ ನನ್ನನ್ನು ಬಿಡಬಲ್ಲರು. ದೇವರು ನನ್ನನ್ನು ಬಿಡೋದಿಲ್ಲ. ಕಾಂಗ್ರೆಸ್ ಗಾಂಧೀಯವರನ್ನು ಕೇಳದೆ ಇರುವುದು ಇದೇ ಮೊದಲ ಬಾರಿ ಏನಲ್ಲ. ಯಾವಾಗಲೂ ಕಾಂಗ್ರೆಸ್ ಜೊತೆ ಅವರ ಸಂಬಂಧ ಬರುವುದು ಹೋಗುವುದು ಆಗುತ್ತ ಇತ್ತು. ಮೂವತ್ತು ವರ್ಷಗಳ ಅವಧಿಯಲ್ಲಿ ಎಷ್ಟು ಕಾಂಗ್ರೆಸ್ಸಿನಲ್ಲಿ ಇದ್ದರೋ ಅಷ್ಟೇ ಹೊರಗೂ ಇದ್ದರು. ಗಾಂಧೀಜಿಯವರು ಹಮ್ಮಿಕೊಂಡಿದ್ದ ಅಸಹಕಾರ ಚಳವಳಿಯ ಕೊನೆಯಲ್ಲಿ ಚೌರಿಚೌರಾದಲ್ಲಿ ಚಳವಳಿಕಾರರು ಭಯಾನಕ ಹಿಂಸೆಯನ್ನು ಎಸಗಿದರು. ಇದರಿಂದ ನೊಂದ ಗಾಂಧೀಜಿ ಚಳವಳಿಯನ್ನು ಹಿಂದಕ್ಕೆ ಪಡೆದರು. ಗಾಂಧೀಜಿ ನಡೆಯ ಸರಿ ತಪ್ಪುಗಳ ವಿಮರ್ಶೆ ಕಾಂಗ್ರೆಸ್ಸಿನಲ್ಲಿ ತೀವ್ರವಾಗಿ ನಡೆಯಿತು. ಗಾಂಧೀಜಿಯವರನ್ನು ಯಾಮಾರಿಸಲು ಕಾಂಗ್ರೆಸ್ನ ಇತರ ಮುಖಂಡರು ಸ್ವರಾಜ್ ಪಾರ್ಟಿಯ ಮುಸುಕು ಧರಿಸುತ್ತಿದ್ದರು. ೧೯೨೨ರಿಂದ ಆರಂಭವಾದ ಈ ಮುಸುಕಿನ ಗುದ್ದಾಟ ಸ್ವಾತಂತ್ರ್ಯ ಪಡೆಯುವ ವರೆಗೂ ನಡೆಯಿತು. ಗಾಂಧೀಜಿಯವರನ್ನು ಬದಿಗೆ ಸರಿಸಲು ಕಾಂಗ್ರೆಸ್ ಆಗಲೇ ಸಿದ್ಧವಾಗಿತ್ತು. ೧೯೪೨ರಲ್ಲಿ ಲಂಡನ್ನಿನಿಂದ ಪ್ರಕಟವಾದ ನೆಹರು ಅವರ ಆತ್ಮಕತೆಯ ಪುಟ ೭೩ರಲ್ಲಿ ಇರುವ ಈ ಭಾಗವನ್ನು ನೋಡಬೇಕು- ಗಾಂಧಿಯವರ ಪ್ರಶ್ನೆಯನ್ನು ಕುರಿತು ಹೇಳುವುದಾದರೆ, ಅವರನ್ನು ತಿಳಿದುಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಒಮ್ಮೊಮ್ಮೆ ಅವರ ಭಾಷೆ ಒಂದು ಪ್ರಮಾಣದಲ್ಲಿ ಆಧುನಿಕರಿಗೆ ಬಹುಮಟ್ಟಿಗೆ ಅರ್ಥವಾಗುತ್ತಲೇ ಇರಲಿಲ್ಲ. ಆದರೂ ನನಗೆ ಅನಿಸುತ್ತಿತ್ತು, ನಾವು ಅವರನ್ನು ಇಷ್ಟೊಂದು ಚೆನ್ನಾಗಿ ಅರಿತುಕೊಳ್ಳಬಲ್ಲೆವು. ಅವರು ಒಬ್ಬ ಮಹಾನ್ ಹಾಗೂ ಅದ್ಭುತ ಮನುಷ್ಯ ಮತ್ತು ಯಶಸ್ವಿ ಮುಂದಾಳು ಆಗಿದ್ದಾರೆ. ನಾವು, ಕನಿಷ್ಠಪಕ್ಷ ಸದ್ಯಕ್ಕೆ, ಅವರಿಗೆ ಖಾಲಿ ಚೆಕ್ ಕೊಟ್ಟುಬಿಟ್ಟಿದ್ದೆವು. ನಾವು ನಮ್ಮೊಳಗೆ ಒಮ್ಮೊಮ್ಮೆ ಅವರ ಹುಚ್ಚುತನಗಳ ಮತ್ತು ವಿಚಿತ್ರಗಳ ಚರ್ಚೆ ಮಾಡುತ್ತಿದ್ದೆವು. ಮತ್ತು ತುಸು ನಗುತ್ತಾ, ಸ್ವರಾಜ್ಯದ ನಂತರ ಈ ಹುಚ್ಚುತನಗಳನ್ನು ಮುಂದುವರಿಸಲು ಬಿಡಬಾರದು ಎಂದು ಹೇಳುತ್ತಿದ್ದೆವು. ಅದರ ಮರುವರ್ಷವೇ ನೆಹರು ಅವರ ಜೈಲ್ ಡಾಯರಿಯಲ್ಲಿ ಉಲ್ಲೇಖಗೊಂಡಿರುವುದು- ೨೬ ಜನವರಿಗೆ ಅವರು ಸ್ವತಂತ್ರತಾ ದಿವಸ ಶಿರೋನಾಮೆ ಕೊಟ್ಟು ಬರೆದಿದ್ದಾರೆ- ನಾನು ಗಾಂಧಿಯವರನ್ನು ನೆನಪುಮಾಡಿಕೊಂಡೆ. ಎಷ್ಟೊಂದು ಪಾರದರ್ಶಕ ಮತ್ತು ಅಷ್ಟೇ ರಹಸ್ಯಮಯ…. ಪ್ರತಿಯೊಂದು ಸಂಗತಿಯ ನಂತರವೂ ಮತ್ತು ಏನೇ ಆಗಲಿ ಭವಿಷ್ಯದಲ್ಲಿ, ಎಷ್ಟೊಂದು ದೊಡ್ಡ ಮನುಷ್ಯರಿದ್ದಾರೆ ಅವರು, ಅವರ ಜೊತೆ ಕೆಲಸ ಮಾಡೋದು ಒಂದು ದುರ್ಲಭ ಗಳಿಗೆಯೇ ಆಗಿದೆ. ಭವಿಷ್ಯ ಇಣಿಕಿದೆ ಇಲ್ಲಿ. ಸ್ವರಾಜ್ಯ ಪ್ರಾಪ್ತಿಯ ಭವಿಷ್ಯ. ಈಗ ೧೯೪೧-೪೨ರಲ್ಲಿ ದೂರವಿದೆ ಅನಿಸೋದಿಲ್ಲ. ಈ ಭವಿಷ್ಯವನ್ನು ಪಡೆದುಕೊಳ್ಳಲು ಆಗಿರುವ, ಆಗುತ್ತಿರುವ, ಹೋರಾಟದಲ್ಲಿ ಗಾಂಧಿಯವರ ಉಪಸ್ಥಿತಿ ಇತ್ತು. ತಮ್ಮ ಹುಚ್ಚುತನ ಹಾಗೂ ವಿಚಿತ್ರತೆಗಳೆಲ್ಲದರ ಹೊರತಾಗಿ, ಮೇಲಾಗಿ ಅದರ ಕಾರಣ ಕೂಡ. ಎಲ್ಲಿ ಒಂದು ಪ್ರಮಾಣದ ಆಧುನಿಕರ ತಾರ್ಕಿಕ ತಿಳಿವಳಿಕೆ ನಿಂತುಹೋಗುತ್ತಿತ್ತೋ, ಅಲ್ಲಿಂದ ಹುಚ್ಚು ಗಾಂಧಿಯವರ ರಹಸ್ಯಮಯೀ ಅರಿವು ಶುರುವಾಗುತ್ತಿತ್ತು. ನೆಹರೂ ಅವರದೇ ಮಾತು ಹೇಳುವುದಾದರೆ ಅವರು ಪದೇಪದೇ ಹೇಳಿದರು- ಗಾಂಧಿಯವರ ಕೆಲವು ನಿರ್ಣಯಗಳು ತಿಳಿವಳಿಕೆಯ ಆಚೆಗೇ ಇರುತ್ತಿದ್ದವು. ಆದರೆ ನಂತರ ಅರಿವಿಗೆ ಬರುತ್ತಿತ್ತು, ಗಾಂಧೀನೇ ಸರಿ ಅಂತ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗಾಂಧೀಯವರ ಚಮತ್ಕಾರೀ ನೇತೃತ್ವದ ಪ್ರಭಾವವನ್ನು ಒಪ್ಪಿದ ನಂತರವೂ ನೆಹರೂ ಮತ್ತು ಅವರ ಸಹಕಾರಿಗಳ ವಿಶ್ವಾಸ ಬೇರೆಯೇ ಆಗಿತ್ತು. ಸ್ವರಾಜ್ಯದ ನಂತರದ ಅವಶ್ಯಕತೆಗಳು, ಅಂದರೆ ಸ್ವತಂತ್ರಭಾರತದ ರಾಜಕೀಯ, ಆಡಳಿತಾತ್ಮಕ ಅವಶ್ಯಕತೆಗಳು ಬೇರೆಯದೇ ಆಗುವುದಿತ್ತು. ಆ ಅವಶ್ಯಕತೆಗಳಿಗಾಗಿ ಗಾಂಧಿಯವರಿಗಿಂತ ಬೇರೆಯದೇ ಆದ ನೇತೃತ್ವ ಅವಶ್ಯವಾಗಲಿತ್ತು. ಸ್ವಾಂತಂತ್ರ್ಯದ ಬಳಿಕ ಏನಾಗಬಹುದು ಎಂಬುದನ್ನು ಗಾಂಧೀಜಿ ೧೯೪೫ರ ವೇಳೆಗೇ ಊಹಿಸಿದ್ದರು. ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ತೀರ್ಮಾನಿಸಿದ್ದ ನೆಹರೂ ಜೊತೆ ಸ್ವತಂತ್ರ ಭಾರತ ಹೇಗಿರಬೇಕು ಎಂಬುದರ ನೀಲನಕ್ಷೆಯ ಬಗ್ಗೆ ಚರ್ಚಿಸಲು ಅವರು ಬಯಸಿದ್ದರು. ಹಿಂದ್ ಸ್ವರಾಜ್ ಬಗ್ಗೆ ಭಿನ್ನಮತ ಇರುವುದಾದರೆ ಅದನ್ನು ಜನರ ಮುಂದೆ ಇಡಬೇಕು. ಅವರನ್ನು ಕತ್ತಲೆಯಲ್ಲಿ ಇಡುವುದರಿಂದ ನಮ್ಮ ಸ್ವರಾಜ್ಯದ ಕೆಲಸ ನಿಲ್ಲುತ್ತದೆ ಎಂದು ಅವರು ಭಾವಿಸಿದ್ದರು. ೧೪ ಜನವರಿ ೧೯೪೮ರಂದು ಗಾಂಧಿ ಹೇಳಿದರು- ನಾನಂತೂ ಹೇಳ್ತೇನೆ, ಏಳು ಲಕ್ಷ ಹಳ್ಳಿಗಳಿವೆ, ಅಂದರೆ ಏಳು ಲಕ್ಷ ಪ್ರಭುತ್ವಗಳು ಆದವು ಅಂತಾ ತಿಳಕೊಳ್ಳಿ. ಇದು ಗಾಂಧೀಜಿಯವರ ಗ್ರಾಮಸ್ವರಾಜ್ನ ಕನಸು. ಪ್ರತಿ ಹಳ್ಳಿಯು ಸ್ವಯಂ ಆಡಳಿತ ವ್ಯವಸ್ಥೆ ಹೊಂದಬೇಕು, ತನ್ನ ಅಗತ್ಯಗಳನ್ನು ತಾನೇ ಸೃಷ್ಟಿಸಿಕೊಳ್ಳಬೇಕು ಎಂಬುದು ಅವರ ಆಶಯ. ಆದರೆ ನೆಹರೂ ಸಮಾಜವಾದೀ ನೆಲೆಯಲ್ಲಿ ದೇಶವನ್ನು ಕಟ್ಟುವುದನ್ನು ಮೊದಲು ಪ್ರತಿಪಾದಿಸುತ್ತಿದ್ದರು. ಎಲ್ಲರೂ ಸಮಾನತೆಯ ಬದುಕನ್ನು ಬದುಕಬೇಕು ಎಂದು ಬಯಸುತ್ತಿದ್ದರು. ಯಾವಾಗ ಸ್ವಾತಂತ್ರ್ಯ ಬರುವುದು ಖಚಿತವಾಯಿತೋ ಆಗ ದೊಡ್ಡದೊಡ್ಡ ಯಂತ್ರಗಳ ಮೂಲಕ ಭಾರೀ ಪ್ರಮಾಣದಲ್ಲಿ ವಸ್ತುಗಳನ್ನು ತಯಾರಿಸಬೇಕು. ಆ ದಿಶೆಯಲ್ಲಿ ದೇಶವನ್ನು ಕಟ್ಟಬೇಕು ಎಂಬ ನಿಲವು ತಳೆದಿದ್ದರು. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯಾನಂತರದ ಭಾರತದ ಬಗ್ಗೆ ಗಾಂಧೀಜಿಯವರೊಂದಿಗೆ ಚರ್ಚಿಸುವುದಕ್ಕೆ ನೆಹರು ಹಿಂದೆಮುಂದೆ ನೋಡುತ್ತಿದ್ದರು. ಸ್ವತಂತ್ರ ಭಾರತದ ಚುನಾಯಿತ ಪ್ರತಿನಿಧಿಗಳು ದೇಶದ ಹಣೆಬರೆಹವನ್ನು ನಿರ್ಧರಿಸುತ್ತಾರೆ. ಅದರಲ್ಲಿ ನಿಮ್ಮ ಅಗತ್ಯವಿಲ್ಲ ಎಂದು ಅವರು ಗಾಂಧೀಜಿಗೆ ಪರೋಕ್ಷವಾಗಿ ಹೇಳುತ್ತಿದ್ದರು. ಗಾಂಧೀಜಿಗೆ ಅದು ಅರ್ಥವಾಗಿ ತಮ್ಮ ನಡುವಿನ ಭಿನ್ನಮತವನ್ನು ದೂರಮಾಡಿಕೊಳ್ಳುವುದಕ್ಕೆ ಬಯಸುತ್ತಿದ್ದರು. ಗಾಂಧೀಜಿಯವರು ಜವಾಹರಲಾಲ್ ನೆಹರೂ ಅವರಿಗೆ ಬರೆದ ಪತ್ರವೊಂದರಲ್ಲಿ, …. ಸತ್ಯ ಮತ್ತು ಅಹಿಂಸೆಯ ದರ್ಶನವನ್ನು ನಾವು ಹಳ್ಳಿಗಳ ಸರಳತೆಯಲ್ಲಷ್ಟೇ ಕಾಣಬಲ್ಲೆವು. ಈ ಸರಳತೆ ಚರಖಾದಲ್ಲಿ ಮತ್ತು ಚರಖವನ್ನವಲಂಬಿಸಿದ ವಸ್ತುಗಳ ಮೇಲಷ್ಟೇ ಅವಲಂಬಿತವಾಗಿದೆ. ಜಗತ್ತು ವಿರುದ್ಧ ದಿಕ್ಕಿಗೆ ಹೋಗುತ್ತ ಇರುವ ಹಾಗೆ ಕಾಣುತ್ತಿದೆ. ಆದರೂ ನನಗೆ ಭಯವಿಲ್ಲ. ಚಿಟ್ಟೆ ಯಾವಾಗಲೂ ತನ್ನ ನಾಶದ ಕಡೆಗೆ ಹೋಗುತ್ತದಲ್ಲ, ಆಗ ಅದು ವೇಗವಾಗಿ ದೀಪದ ಸುತ್ತ ತಿರುಗುತ್ತದೆ. ಮತ್ತು ಹಾಗೆ ಸುತ್ತುತ್ತ ಸುತ್ತುತ್ತ ಅದು ಸುಟ್ಟಿಕೊಂಡು ಸಾಯುತ್ತದೆ. ಹಿಂದುಸ್ಥಾನವೂ ಈ ಚಿಟ್ಟೆಯ ಹಾಗೆ ಸುತ್ತುವರಿದು ಸುಟ್ಟುಕೊಳ್ಳುವುದರಿಂದ ತಪ್ಪಿಸಿಕೊಳ್ಳಲಾರದು ಅನಿಸುತ್ತದೆ. ಕೊನೆಯ ಉಸಿರು ಇರುವ ವರೆಗೆ ಅದರಿಂದ ಭಾರತವನ್ನು ಮತ್ತು ಅದರ ಮೂಲಕ ಜಗತ್ತನ್ನು ಉಳಿಸುವ ಪ್ರಯತ್ನ ಮಾಡುವುದು ನನ್ನ ಕರ್ತವ್ಯವಾಗಿದೆ…. ೧೯೨೮ರ ನವೆಂಬರ್ ೫ರ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಗಾಂಧೀಜಿ, ‘‘ನಾನು ದೇಶಕ್ಕೆ ಶಾಂತಿಪೂರ್ಣ, ಮಾನವೀಯ ಹಾಗೂ ಉದಾತ್ತವಾದ ದಾರಿಯನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ಇದನ್ನು ತಿರಸ್ಕರಿಸಲೂ ಸಾಧ್ಯವಿದೆ. ಒಮ್ಮೆ ಹಾಗೇನಾದರೂ ಆದರೆ ಅದರ ಪರಿಣಾಮವಾಗಿ ತಿಕ್ಕಾಟವಾಗುತ್ತದೆ. ಒಬ್ಬರು ಇನ್ನೊಬ್ಬರನ್ನು ಕೆಡಹುವ ಪ್ರಯತ್ನ ಮಾಡುತ್ತಾರೆ.’’ ಅದೇ ಈಗ ನಡೆದಿರುವುದು. ಇದು ಹೀಗೇ ಮುಂದುವರಿಯುತ್ತದೆ. ‘ನಾನು ನನ್ನ ದನಿ ಎತ್ತಿದರೂ ಯಾರು ಕೇಳುತ್ತಾರೆ?’ ಈ ನೋವನ್ನು ಗಾಂಧೀಜಿ ತೋಡಿಕೊಂಡಿದ್ದು ೧೯೪೭ರ ಡಿಸೆಂಬರ್ ೨೮ರಂದು. ಹೀಗೆ ಹೇಳಿದ ತಿಂಗಳಲ್ಲಿ ಅವರಿಗೆ ಪರಲೋಕದ ದಾರಿಯನ್ನು ತೋರಿಸಲಾಯಿತು. (ಗಾಂಧಿ ಕುರಿತು ಹಿಂದಿಯಲ್ಲಿ ಬಂದ ಎರಡು ಕೃತಿಗಳನ್ನು ಆರ್.ಪಿ.ಹೆಗಡೆಯವರು ಕನ್ನಡಕ್ಕೆ ತಂದಿದ್ದಾರೆ. ಶ್ರೀಭಗವಾನ್ ಸಿಂಗ್ ಅವರ ಕೃತಿಯನ್ನು ಗಾಂಧಿ ಒಂದು ಶೋಧ ಹೆಸರಿನಲ್ಲೂ ಸುಧೀರಚಂದ್ರ ಅವರ ಕೃತಿಯನ್ನು ಗಾಂಧಿ ಒಂದು ಅಸಂಭವ ಸಂಭವ ಎಂಬ ಹೆಸರಿನಲ್ಲೂ ಪ್ರಕಟಿಸಿದ್ದಾರೆ. ಇಲ್ಲಿರುವ ವಿಚಾರಗಳೆಲ್ಲ ಈ ಕೃತಿಯಲ್ಲಿರುವವೇ ಆಗಿವೆ.)
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.