*ಹಗುರವಾಗಿದ್ದಾಗ ಹಾರುವುದು ಸುಲಭ

ನೊಣ ಗಂಜಿಯಲ್ಲಿ ಬಿದ್ದರೆ ಏನಾಗುತ್ತದೆ? ರೆಕ್ಕೆಗಳೆಲ್ಲ ಒದ್ದೆಯಾಗಿ ಮೇಲೆದ್ದು ಹಾರಾಡಲಾಗದೆ ಒದ್ದಾಡುತ್ತಿರುತ್ತದೆ.
ಚಟುವಟಿಕೆ ಇಲ್ಲದ ವ್ಯಕ್ತಿಯನ್ನು ಕಂಡಾಗ ಈ ರೀತಿ ಫಾರ್ಸು ಮಾಡುವುದು ಇದೆ. ಎಲ್ಲ ಕೆಲಸದಲ್ಲೂ ನಿಧಾನವೇ ಪ್ರಧಾನ ಎಂದುಕೊಂಡು ನಿಷ್ಕ್ರಿಯತೆಯನ್ನು ತೋರಿಸುವವರು ಇದ್ದಾರೆ. ಅದು ಉದ್ದೇಶಪೂರ್ವಕವಾಗಿ ಅವರು ನಿಧಾನವನ್ನು ಅನುಸರಿಸುವುದಲ್ಲ. ಅವರ ಸ್ವಭಾವ, ಅವರ ವ್ಯಕ್ತಿತ್ವದಲ್ಲೇ ಜಡತೆ ತುಂಬಿದೆ. ಇವರು ಜಡಭರತರು. ಇಂಥವರನ್ನು ಕಂಡಾಗ ಗಂಜಿಯಲ್ಲಿ ಬಿದ್ದ ನೊಣ ಎಂದೋ ಬೆಲ್ಲದಲ್ಲಿ ಬಿದ್ದ ನೊಣ ಎಂದೋ ಹೆಸರಿಡುತ್ತಾರೆ.
ಇನ್ನು, ತುಂಬ ಚುರುಕಾಗಿದ್ದವನನ್ನು ಕಂಡಾಗ ಕರಾವಳಿಯ ಕಡೆ ಹೇಳುವ ಮಾತೊಂದು ನೆನಪಿಗೆ ಬರುತ್ತದೆ. ಅದು `ಶಟ್ಲಿ ಮರಿ ಹಾರಿದಂತೆ ಹಾರ್ತ ಅವ್ನೆ ನೋಡು’ ಎಂಬ ಮಾತು. ಶಟ್ಲಿ ಅಂದರೆ ಸೀಗಡಿ. (ಇಂಗ್ಲಿಷಿನಲ್ಲಿ ಫ್ರಾನ್‌). ಇದನ್ನು ಹಿಡಿಯಲೆಂದು ಹೋದರೆ ಪಟಪಟನೆಂದು ಹಾರಿ ತಪ್ಪಿಸಿಕೊಂಡು ಹೋಗುತ್ತದೆ.
ಹಾರುವುದು ಯಾವಾಗ ಸಾಧ್ಯ? ಹಗುರವಾಗಿದ್ದಾಗ ಹಾರಬಹುದು. ಜಡತೆ ಆಲಸ್ಯವನ್ನು ತರುತ್ತದೆ. ಚುರುಕುತನವನ್ನು ಕಳೆಯತ್ತದೆ.