*ಬಲಿಗೆ ಆಯ್ಕೆ ಇರುವುದಿಲ್ಲ

ಕೋಳಿ ಕೇಳಿ ಮಸಾಲೆ ಅರೆಯುತ್ತಾರಾ ಎಂದೋ, ಕುರಿ ಕೇಳಿ ಮಸಾಲೆ ರುಬ್ಬುತ್ತಾರಾ ಎಂದೋ ಹೇಳುವುದನ್ನು ಹಲವು ಬಾರಿ ನಾವು ಕೇಳಿದ್ದೇವೆ. ಕೋಳಿ ತಿನ್ನುವವನು ಕೋಳಿಯ ಹತ್ತಿರ ಹೋಗಿ `ಇವತ್ತು ನಿನ್ನನ್ನು ಕೊಂದು ಸಾರು ಮಾಡಿ ತಿನ್ನುತ್ತೇನೆ, ಆಗಬಹುದೆ?’ ಎಂದು ಕೇಳಿದರೆ ಕೋಳಿ ಹೂಂ ಅನ್ನಬಹುದೆ? ಇದೇ ಮಾತು ಕುರಿಗೂ ಅನ್ವಯಿಸುತ್ತದೆ.
ಯಾವ ಕೋಳಿಯನ್ನು ಕತ್ತರಿಸಬೇಕು, ಹೇಗೆ ಕತ್ತರಿಸಬೇಕು, ಎಷ್ಟು ಕೋಳಿಗಳನ್ನು ಕತ್ತರಿಸಬೇಕು ಎಂದು ನಿರ್ಧರಿಸುವವನು ಕೋಳಿಯನ್ನು ತಿನ್ನುವವನೋ ಅಡುಗೆಯನ್ನು ಮಾಡುವವನೋ ಆಗಿರುತ್ತಾರೆ. ಕೋಳಿಯ ಅಭಿಪ್ರಾಯವನ್ನು ಕೇಳುತ್ತ ಕುಳಿತರೆ ಕೋಳಿಯನ್ನು ತಿಂದಹಾಗೆಯೇ.
ಅಡುಗೆಯವನ ನಿರ್ಧಾರ ಎಂದೂ ಕೋಳಿಗೆ ಪ್ರಿಯವಾಗಲಿಕ್ಕೆ ಸಾಧ್ಯವೇ ಇಲ್ಲ. ಅದೇ ರೀತಿ ನಾಯಕನ ಸ್ಥಾನದಲ್ಲಿ ಇದ್ದವನು ತನ್ನ ಅನುಯಾಯಿಗಳ ಬಳಿ ಹಾಗೆ ಮಾಡಲೆ ಹೀಗೆ ಮಾಡಲೇ ಎಂದು ಕೇಳುತ್ತ ಕುಳಿತರೆ ಒಮ್ಮತ ಮೂಡುವುದಂತೂ ದೂರವೇ ಉಳಿಯಿತು. ಕಾರ್ಯ ಆರಂಭವೇ ಆಗುವುದಿಲ್ಲ. ಪ್ರಿಯವೋ ಅಪ್ರಿಯವೋ ತನ್ನ ನಿರ್ಧಾರವನ್ನು ಆತ ನಿರ್ದಾಕ್ಷಿಣ್ಯವಾಗಿ ಹೇರಲೇ ಬೇಕು. ಹಾಗೆ ಹೇರಿದಾಗಲೇ ಆತನ ಉದ್ದೇಶಿತ ಕಾರ್ಯ ಸಿದ್ಧಿಸುತ್ತದೆ.
ಹಾಗೆಂದು ಅಭಿಪ್ರಾಯ ಪಡೆಯುವುದು ತಪ್ಪೆಂದಲ್ಲ. ಅಭಿಪ್ರಾಯ ಪಡೆದ ಬಳಿಕ ನಾಯಕ ತನ್ನದೇ ಒಂದು ನಿಲವು ರೂಪಿಸಿಕೊಂಡು ಅದನ್ನು ಜಾರಿಗೆ ತರುತ್ತಾನೆ, ಯಶಸ್ವಿಯಾಗುತ್ತಾನೆ.