*ವಿಷಯಕ್ಕಿಂತ ಪೀಠಿಕೆಯೇ ಉದ್ದವಾಗಿರುತ್ತದೆ

ಮೈಲಾರಕ್ಕೆ ಹೋಗುವುದಕ್ಕೆ ನೇರವಾದ ಹತ್ತಿರದ ದಾರಿಯಿದೆ. ಆದರೆ ನಮ್ಮೂರ ಗಣೇಶ ಯಾವತ್ತೂ ಆ ಹತ್ತಿರದ ದಾರಿಯಿಂದ ಹೋದವನೇ ಅಲ್ಲ. ದೂರದ ಕೊಂಕಣವನ್ನು ಸುತ್ತಿಯೇ ಮೈಲಾರಕ್ಕೆ ಹೋಗುವುದು ಅವನು ರೂಢಿ.
ಗಣೇಶನಂಥವರು ಎಲ್ಲ ಕಡೆಯೂ ನಮಗೆ ಎದುರಾಗುತ್ತಾರೆ, ಬಸ್ಸಿನಲ್ಲಿ, ಕಛೇರಿಯಲ್ಲಿ, ಮಾರುಕಟ್ಟೆಯಲ್ಲಿ ಎಲ್ಲೆಂದರೆ ಅಲ್ಲಿ. ಹೇಳುವುದನ್ನು ನೇರವಾಗಿ ಹೇಳದೆ ಸುತ್ತಿ ಬಳಸಿ ಹೇಳುತ್ತಾರೆ ಇವರು. ವಿಷಯಕ್ಕಿಂತ ಪೀಠಿಕೆಯೇ ಉದ್ದವಾಗಿರುತ್ತದೆ. ಕೆಲವರ ಬರೆವಣಿಗೆಯೂ ಹಾಗೆಯೇ ಇರುತ್ತದೆ. ಹೇಳಬೇಕಾಗಿರುವುದನ್ನು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿಬಿಡಬಹುದು. ಆದರೆ ಅದಕ್ಕೆ ಪೀಠಿಕೆಯಾಗಿ ಐವತ್ತು ಮಾತು ಅನಗತ್ಯವಾಗಿ ಹೇಳಿರುತ್ತಾರೆ. ಇಂಥವರನ್ನು ಕಂಡಾಗಲೆಲ್ಲ `ಕೊಂಕಣ ಸುತ್ತಿ ಮೈಲಾರಕ್ಕೆ ಬಂದ’ ಎಂದು ಟೀಕಿಸುತ್ತಾರೆ.
ಹೇಳುವುದನ್ನು ಸ್ಪಷ್ಟವಾಗಿ ನೇರವಾಗಿ ಸಂವಹನಗೊಳಿಸುವುದೂ ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಮಾತಿನಲ್ಲಾಗಲೀ ಬರೆಹದಲ್ಲಾಗಲೀ ಅದನ್ನು ಸಿದ್ಧಿಸಿಕೊಂಡರೆ ಆತ ಯಶಸ್ವಿ ವ್ಯಕ್ತಿ. ಅದಕ್ಕಾಗಿಯೇ ಮಾತು ಮುತ್ತು, ಮಾತು ಮಾಣಿಕ್ಯ, ಮಾತೆಂಬುದು ಜ್ಯೋತಿರ್ಲಿಂಗ ಎಂಬ ಮಾತು ಚಲಾವಣೆಗೆ ಬಂದುದು.
ಸುತ್ತಿ ಬಳಸಿ ಮಾತನಾಡುವುದು ಕೆಲವರ ಸ್ವಭಾವ ಇರಬಹುದು. ಇಲ್ಲವೆ ದಾರಿ ತಪ್ಪಿಸುವ ಉದ್ದೇಶಪೂರ್ವಕ ಕ್ರಿಯೆಯೂ ಇರಬಹುದು. ಆದರೆ ಇದು ಕೇಳುವವರ, ಓದುವವರ ಸಹನೆಯನ್ನು ಪರೀಕ್ಷಿಸುತ್ತದೆ. ವಿಷಯ ಇಲ್ಲದೆಯೂ ತಾಸು ತಾಸು ಕಾಲ ಮಾತನಾಡುವವರು ಇರುತ್ತಾರಲ್ಲ, ಇವರು ಕೊಂಕಣದಲ್ಲಿಯೇ ಸುತ್ತಾಡುತ್ತಿರುತ್ತಾರೆ. ಮೈಲಾರ ತಲುಪುವುದೇ ಇಲ್ಲ.