*ಷಡ್ಯಂತ್ರಗಳಿಗೆ ಭಗವಂತನ ಸಂಬಂಧ

ಬ್ಬರು ಏನನ್ನೋ ಗುಟ್ಟಾಗಿ ಮಾತನಾಡುತ್ತಿದ್ದರೆ ಅದೇನು ಕಾರಸ್ಥಾನ ನಡೆಸುತ್ತಿದ್ದೀರಿ ಎಂದು ಕೇಳುತ್ತೇವೆ. ಕಾರಸ್ಥಾನ ಎಂದರೆ ಒಳಸಂಚು, ಕುಟಿಲ ನೀತಿ ಎಂಬ ಅರ್ಥ. ನಮ್ಮ ಪುರಾಣಪುರುಷ ಶ್ರೀಕೃಷ್ಣ ಇಂಥ ಕುಟಿಲ ನೀತಿಯಲ್ಲಿ ಎತ್ತಿದ ಕೈ. ರಾಜಕಾರಣದಲ್ಲಿ ಶ್ರೀಕೃಷ್ಣನಂಥ ಚಾಣಾಕ್ಷ ಮತ್ತೊಬ್ಬನನ್ನು ನಾವು ಕಾಣುವುದಿಲ್ಲ. ಭೂಮಿಯ ಮೇಲೆ ಜನಿಸುವಾಗಲೇ ತನ್ನ ಕಾರಸ್ಥಾನ ತೋರಿಸಿದ್ದಾನೆ. ಎಷ್ಟೆಂದರೂ ಭಗವಂತನಲ್ಲವೆ ಆತ.
ಜರಾಸಂಧನ ವಿರುದ್ಧ ಯುದ್ಧ ಮಾಡುವಾಗ, ಪಾಂಡವರ ಪಕ್ಷವನ್ನು ವಹಿಸಿದಾಗ ಹೀಗೆ ಎಲ್ಲಿ ನೋಡಿದರೂ ಕೃಷ್ಣನ ರಾಜಕೀಯ ಮುತ್ಸದ್ಧಿತನ ಎದ್ದುತೋರುತ್ತದೆ. ಇಡೀ ದ್ವಾಪರ ಯುಗದ ರಾಜಕೀಯವೇ ಕೃಷ್ಣ ನೀತಿಯಿಂದ ತುಂಬಿ ತುಳುಕಿದೆ.
ಸಾಮ ದಾನ ಭೇದ ದಂಡ ನೀತಿಗಳನ್ನೆಲ್ಲ ಪರಿಣಾಮಕಾರಿಯಾಗಿ ಬಳಸಿ ಯಶಸ್ವಿಯಾದವನು ಕೃಷ್ಣ. ಕೃಷ್ಣ ಕಾರಸ್ಥಾನದ ಮುಂದೆ ಶಕುನಿ ತಂತ್ರಗಳೆಲ್ಲ ವಿಫಲವಾಗಿ ಹೋಯಿತು.
ಕೃಷ್ಣನ ಕಾರಸ್ಥಾನವೆಲ್ಲ ಧರ್ಮದ ವಿಜಯಕ್ಕೆ ದಾರಿ ಮಾಡುವುದಾಗಿತ್ತು. ಆದರೆ ಇಂದು ಕಾರಸ್ಥಾನ ಎಂದರೆ ಒಳ್ಳೆಯ ಅರ್ಥದಲ್ಲಿ ಬಳಕೆಯಾಗುತ್ತಿಲ್ಲ. ಯಾರನ್ನೋ ನಾಶಮಾಡುವ ದುಷ್ಟ ಪ್ರಯತ್ನ ನಡೆಸಿದ್ದಾರೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ.