ಪ್ರೇಮದ ಪರಿಕಲ್ಪನೆ ವಿಭಿನ್ನವಾದದ್ದು. ಗ್ರಹಿಸುವವರ ಮನಸ್ಥಿತಿಯನ್ನು ಇದು ಅವಲಂಬಿಸಿರುತ್ತದೆ. ಸಖ ಮತ್ತು ಸಖಿಯನ್ನು ನಾವು ಲೌಖಿಕದ ನೆಲೆಯಲ್ಲೂ ನೋಡಬಹುದು ಅಧ್ಯಾತ್ಮದ ನೆಲೆಯಲ್ಲೂ ನೋಡಬಹುದು. ಪರಮಾತ್ಮನನ್ನೇ ತಮ್ಮ ಪತಿಯೆಂದು ಬಗೆದು ಆರಾಧಿಸುವ ಶರಣ ಪರಂಪರೆ ದಾಸ ಪರಂಪರೆ ನಮ್ಮಲ್ಲಿದೆ. ಪುರುಷರೂ ಭಗವಂತನನ್ನು ಪತಿಯೆಂದು ಬಗೆದು ತಮ್ಮನ್ನು ಸತೀತ್ವದಲ್ಲಿರಿಸಿಕೊಂಡು ಆರಾಧಿಸಿದವರಿದ್ದಾರೆ. ಬೇಂದ್ರೆಯವರ ‘ಸಖೀಗೀತ’ ಲೌಖಿಕದ ಪ್ರೇಮಪ್ರಪಂಚದಿಂದ ಅಧ್ಯಾತ್ಮದ ಭಕ್ತಿಪ್ರಪಂಚದ ವರೆಗೆ ಭಾವವನ್ನು ಬೆಳಗಿದೆ. ಅಕ್ಕಮಹಾದೇವಿಯ ಹರ ಪ್ರೇಮ, ಸಂತ ಮೀರಾಳ ಹರಿ ಪ್ರೇಮ ಕಾವ್ಯ ಮಾಧ್ಯಮದಲ್ಲಿ ಅಭಿವ್ಯಕ್ತಿ ಪಡೆದುದನ್ನು ಗಮನಿಸಬಹುದು. ಈಗಾಗಲೆ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿರುವ ವಾಸುದೇವ ನಾಡಿಗ್ ಅವರ ಐದನೆಯ ಕವನ ಸಂಕಲನ ‘ನಿನ್ನ ಧ್ಯಾನದ ಹಣತೆ’ ೪೪ ಹಣತೆಗಳನ್ನು ಬೆಳಗಿದೆ. ರಾಧೆ ಮತ್ತು ಕೃಷ್ಣನ ಗೋಕುಲದ ಬದುಕಿನ ಹಿನ್ನೆಲೆಯಲ್ಲಿ ವೇದನೆ ನಿವೇದನೆಗಳನ್ನು ಒಳಗೊಂಡ ಈ ಸಂಕಲನ ೨೦೧೪ರ ಕಡೆಂಗೋಡ್ಲು ಕಾವ್ಯ ಪುರಸ್ಕಾರವನ್ನು ಪಡೆದುಕೊಂಡಿದೆ. ‘ಏಕಾಂತದಲಿ ಹುಟ್ಟಿದ/ ಕವಿತೆ ನೀನು/ ಸಖಿ/ ಲೋಕಾಂತದಲ್ಲಿ/ ಹಾಡಿಕೊಳ್ಳಲಿ ಜನ/ ನನ್ನ ಒಳಕೋಣೆಯಲಿ/ ಹಚ್ಚಿದ ಹಣತೆ/ ಬಯಲುದಾರಿಯಲೂ/ ಬಲಿಯಲಿ/….’ ಇಲ್ಲಿ ಕಾವ್ಯ ಕೂಡ ಸಖಿ. ನೀನೆಂಬ ಹಣತೆ ನೀನೆಂಬ ಕವಿತೆ ನಾನೆಂಬ ಭ್ರಮೆಯ ಕಿತ್ತುಹಾಕಿತು ಎಂದು ಕವಿ ಹೇಳುತ್ತಾರೆ. ಹಣತೆ ಬೆಳಗಿನ ಸಂಕೇತ. ಜಗತ್ತಿಗೆ ಬೆಳಕು ಸಿಗಲೆಂಬುದು ಕವಿಯ ಆಶಯ. ವಾಸುದೇವ ನಾಡಿಗ್ ಅವರ ಪ್ರತಿಮಾ ಶಕ್ತಿಯನ್ನು ನೋಡಬೇಕೆಂದರೆ ಈ ಸಾಲುಗಳನ್ನು ನೋಡಿ- ಸಖೀ ನನ್ನಾತ್ಮ ಕತ್ತರಿಸಿಬಿದ್ದಿಲಿಬಾಲ, ಇಹಕ್ಕೂ ಸಲ್ಲದು ಪರವೊಲ್ಲದು- ಇಂಥ ಉಪಮೆಗಳ ಮೂಲಕ ಕವಿ ಹೃದಯಕ್ಕೆ ಹತ್ತಿರವಾಗುತ್ತಾರೆ. ದ್ವಾಪರ ಯುಗದ ಕೃಷ್ಣ- ರಾಧೆಯರ ಪ್ರಜ್ಞೆಯ ಮೂಲಕ ಸಮಕಾಲೀನ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವ ಪ್ರಯತ್ನವನ್ನು ಇಲ್ಲಿ ಕವಿ ಮಾಡುತ್ತಾರೆ. ಇಲ್ಲಿ ಧ್ಯಾನವೆಂಬುದು ಬೆಳಕನ್ನು ಸೃಷ್ಟಿಸಿಕೊಳ್ಳುವ ಮಾರ್ಗದಲ್ಲಿ ಒಂದು ಸಾಧನ. ಅದಕ್ಕೇ ಅವರು ‘ಬಾ ಹಚ್ಚಿಡು ಹಣತೆಗಳ ಈ ಗೋಡೆಗಳ ಮೇಲೆ’ ಎಂದು ಸಖಿಗೆ ಆಹ್ವಾನವನ್ನು ನೀಡುತ್ತಾರೆ. ‘ಬೆಳಕಿನ ಕೂಡ ಕತ್ತಲೆ ಮಾತನಾಡಲಿ’ ಎಂಬ ಸಾಲು ಹಲವು ಅರ್ಥಗಳನ್ನು ಧ್ವನಿಸುತ್ತದೆ. ಕೃಷ್ಣನ ಹುಟ್ಟು ಸೆರೆಮನೆಯಲ್ಲಿ ಆದದ್ದು. ಅದೇ ರೀತಿ ಈ ಜಗತ್ತಿನ ಸಕಲ ಜೀವಗಳೂ ಬಂಧನದಲ್ಲಿಯೇ ಹುಟ್ಟಿದವರು. ಈ ಭವಬಂಧನದಲ್ಲಿಯೇ ತೊಳಲಾಡಿ ಅಲ್ಲಿಯೇ ಕೊನೆಯನ್ನೂ ಅಪ್ಪಿಬಿಡುತ್ತಾರೆ. ಈ ಭವದ ಜೀವಿಗಳಿಗೆ ಸೆರೆಯಲ್ಲಿ ಹುಟ್ಟಿದ ಕೃಷ್ಣ ಹೇಗೆ ಜಗದ ಬಂಧನಗಳನ್ನು ಕಳಚಿ ಒಗೆದ ಎಂಬುದು ಸಂದೇಶವಾಗಬೇಕು. ವಾಗರ್ಥ ಶಿವಪಾರ್ವತಿಯರಂತೆ. ಅರ್ಧನಾರೀಶ್ವರ ಶಿವ. ಅದಕ್ಕೇ ಕವಿ ಇಲ್ಲಿ ಸಖಿಗೆ ಸಂಬೋಧಿಸುತ್ತಾರೆ- ಸಖಿ ಪಲ್ಲವಿಯ ಸೋಕಿಸು, ಬಾ ಬಿಡಿಸು ಪದವ ಅರ್ಥದ ಹಂಗಿನಿಂದ- ಎಂದು. ಇಲ್ಲಿಯ ಎಲ್ಲ ಕವನಗಳಲ್ಲೂ ಆರಾಧನೆಯ ಭಾವವಿದೆ. ಪುರುಷನೊಬ್ಬನ ಪ್ರಕೃತಿಯಾರಾಧನೆಯಂತೆ. ಸಖಿ ಕವಿಗೆ ಇಲ್ಲಿ ಸರ್ವಾಂತರ್ಯಾಮಿ. ಸಾವಿರ ತೊರೆಗಳಿಗೆ ದಾರಿಕೊಟ್ಟ ಅಂತರಗಂಗೆ ನೀನು ಎಂದು ಅವರು ಸಖಿಗೆ ಹೇಳುವರು. ಒಲವನ್ನು ಹಂಚಿಕೊಳ್ಳುವ ಪ್ರೇರಣೆಯನ್ನು ಕವಿ ಬಹುಶಃ ಬೇಂದ್ರೆಯವರಿಂದಲೇ ಪಡೆದಿರಬಹುದು. ಇಲ್ಲಿ ಸಂಘರ್ಷವಿಲ್ಲ, ಬರೀ ಮನವೊಲಿಕೆ ಮಾತ್ರ. ಅದಕ್ಕೇ ಕೃಷ್ಣ ಹೇಳುವುದು, ಚಕ್ರವ ಗೋಡೆಗೆ ಸಿಕ್ಕಿಸಿದ್ದೇನೆ, ಬತ್ತಳಿಕೆಯ ಬಿಸುಟಿದ್ದೇನೆ, ಖಡ್ಗವ ತುಕ್ಕುಹಿಡಿಸಿದ್ದೇನೆ, ನಿಶ್ಶಸ್ತ್ರನಾಗಿದ್ದೇನೆ ಸಖಿ… ಎಂದು. ರಾಮಗಿರಿಯಾಶ್ರಮದ ವಿರಹಿ ಯಕ್ಷನ ಹಾಗೆ ಇಲ್ಲಿಯ ಕೃಷ್ಣ ತನ್ನ ವಿರಹವನ್ನು ಬಗೆಬಗೆಯಾಗಿ ಹೇಳಿಕೊಳ್ಳುತ್ತಾನೆ. ಕೊಳಲಿನಿಂದಲೇ ಕೃಷ್ಣನ ಗುರುತು. ಆದರೆ ನೀನು ನುಡಿಸಿದ ಕೊಳಲು ನಾನು ನೋಡು ಎಂದು ಆತ ರಾಧೆಗೆ ಹೇಳುತ್ತಾನೆ. ಎಷ್ಟೊಂದು ಶಬ್ದಗಳು ನಿನ್ನ ಪರ ನಿಲ್ಲುತಿವೆ! ಅರ್ಥಗಳು ಪರದಲ್ಲಿ ತೆರೆದುಕೊಳ್ಳುತ್ತಿವೆ! ಎಂದು ವಿಸ್ಮಯಪಡುತ್ತಾನೆ. ಇಲ್ಲಿಯದು ಪುರುಷ ಸಂವೇದನೆ. ಪ್ರಕೃತಿಯ ಸಾಮೀಪ್ಯಕ್ಕೆ ಇಲ್ಲಿಯ ಪುರುಷ ಹಂಬಲಿಸುತ್ತಾನೆ. ತನ್ನೆಲ್ಲ ಅಹಂ ಬಿಟ್ಟು ಗೋಗರೆಯುತ್ತಾನೆ. ಪರಿಪರಿಯಾಗಿ ವಿನಂತಿಸಿಕೊಳ್ಳುತ್ತಾನೆ. ಇಲ್ಲಿಯ ಕವಿತೆಗಳೆಲ್ಲವೂ ಒಂದನ್ನೇ ಹೇಳುವುದರಿಂದ ಒಂದೇ ನೀಳ್ಗವಿತೆ ಇದು ಎಂದು ಅನ್ನಿಸಿದರೆ ಆಶ್ಚರ್ಯವಿಲ್ಲ, ಅದಕ್ಕೇ ಇರಬಹುದು ಎಲ್ಲ ಕವಿತೆಗಳೂ ಇಲ್ಲಿ ಹಣತೆ ಎಂಬ ಹೆಸರನ್ನೇ ಹೊಂದಿರುವುದು. ವಾಸುದೇವ ನಾಡಿಗ ಅವರು ಇಲ್ಲಿಯ ಕವಿತೆಗಳನ್ನು ತುಂಬ ಧ್ಯಾನಿಸಿ ಬರೆದಿದ್ದಾರೆ. ಇಲ್ಲಿ ಸಖಿ ಎಂದರೆ ಕೃಷ್ಣನ ರಾಧೆ ಮಾತ್ರವಲ್ಲ ಈ ಲೋಕದ ಅರಿವೂ ಹೌದು. ಅದು ಎಲ್ಲರೂ ಸಾಧಿಸಿಕೊಳ್ಳಬೇಕಾದ ಗಮ್ಯ ಕೂಡ. ಎಲ್ಲರ ನಡೆಯೂ ಅತ್ತಕಡೆಯೇ ಇರಬೇಕು. ಸಖ ಮತ್ತು ಸಖಿಯ ಸಂಬಂಧದಲ್ಲಿ ಯಾವುದೇ ಅಹಂಕಾರವಿರುವುದಿಲ್ಲ. ಮುಚ್ಚುಮರೆ ಇರುವುದಿಲ್ಲ. ಕೊಟ್ಟಿದ್ದನ್ನು ತಿರುಗಿ ಪಡೆಯಬೇಕೆಂಬ ಆಸೆ ಇರುವುದಿಲ್ಲ. ಕೇವಲ ಕೊಡುವುದರಲ್ಲಿಯೇ ಇಲ್ಲಿಯ ಸಂತೋಷ. ಇದನ್ನೇ ಸಮಕಾಲೀನ ಸಮಾಜದ ಪ್ರಲೋಭನೆಗೆ ಒಳಗಾದ ಸಮುದಾಯಕ್ಕೂ ಅನ್ವಯಿಸಬಹುದು. ಸ್ವಾರ್ಥ ತ್ಯಜಿಸಿ ಎಂಬ ಸಂದೇಶವನ್ನು ಕವಿ ಇಲ್ಲಿ ನೀಡುತ್ತಿರಬಹುದೆ ಎನ್ನಿಸುವುದು. ಹಾಗಲ್ಲದಿದ್ದರೆ ಇಲ್ಲಿಯ ಕವಿತೆಗಳಿಗೆ ಯಾವುದೇ ಸಾಮಾಜಿಕ ಆಯಾಮವೂ ಸಿಗುವುದಿಲ್ಲ. ವೀಸಿಯವರ ‘ಶಬರಿ’ ಕವಿತೆ ಇಲ್ಲಿ ನೆನಪಾಗುವುದು. ಆ ಕವಿತೆಯ ಉತ್ತರಾರ್ಧದ ಸಾಮಾಜಿಕ ನೆಲೆಯನ್ನು ಇಲ್ಲಿಯ ಕವಿತೆಗಳಲ್ಲಿ ನಾಡಿಗರು ದಕ್ಕಿಸಿಕೊಂಡಿದ್ದಾರೆಯೇ ಎಂಬುದನ್ನು ನೋಡಬೇಕು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.