ದೇಶದ್ರೋಹದ ಆಪಾದನೆಯ ಮೇಲೆ ಬಂಧಿತನಾಗಿ ನಂತರ ದೆಹಲಿ ಹೈ ಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿರುವ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯಕುಮಾರ್ ಮಾಡಿದ ಭಾಷಣವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಳಿಸಿಕೊಂಡಿದ್ದಾರೆ ಎಂದೇ ಭಾವಿಸೋಣ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣವನ್ನೂ ಮೀರಿಸುವ ಶೈಲಿಯಲ್ಲಿ ಅಂದು ಆತ ಆಡಿದ ಮಾತು ಈ ದೇಶವನ್ನು ಆಳಿದವರನ್ನು ಆಳುವವರನ್ನು ಚಿಂತನೆಗೆ ಹಚ್ಚುವಂತಿತ್ತು. ಅದ್ಯಾವ ರಾಜಕೀಯ ಸಿದ್ಧಾಂತದ ಹಿನ್ನೆಲೆಯಿಂದ ಬಂದವನಾದರೂ ಆತ ಮುಂದಿಟ್ಟ ಕಟು ವಾಸ್ತವ ಪಕ್ಷಗಳ ಎಲ್ಲೆಯನ್ನು ಮೀರಿ ಎದೆಯ ತಟಕ್ಕೆ ತಾಕುತ್ತಿತ್ತು. ಈ ದೇಶದಿಂದಲ್ಲ, ಈ ದೇಶದಲ್ಲಿಯೇ ನಮಗೆ ಸ್ವಾತಂತ್ರ್ಯ ಬೇಕಾಗಿದೆ ಎಂದು ಆತ ಹೇಳಿದ್ದ. ಯಾರಿಗೆ ಬಂತು ಸ್ವಾತಂತ್ರ್ಯ, ೪೭ರ ಸ್ವಾತಂತ್ರ್ಯ? ತಳಸಮುದಾದ ಕನ್ಹಯ್ಯನಂಥವರು ತಮ್ಮ ಆಜಾದಿಯ ಕೂಗು ಕೂಗಿದರೆ ಅದು ದೇಶದ್ರೋಹವಾಗುತ್ತದೆಯೆ? ಪೊಲೀಸರು ವಿವೇಚನೆಯಿಲ್ಲದೆ ದೇಶದ್ರೋಹದ ಆರೋಪವನ್ನು ಹೊರಿಸಿದರು. ಇದಕ್ಕೆ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ತೀವ್ರ ವಿರೋಧವನ್ನು ವ್ಯಕ್ತಪಡಿಸಿತು. ಸರ್ಕಾರ ಈ ಕಾಯ್ದೆಯ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಹೇಳಿತು. ಹಾಗಿದ್ದರೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಈ ದೇಶದಲ್ಲಿ ಎಲ್ಲಿಯೂ ದೇಶದ್ರೋಹದ ಆಪಾದನೆಯ ಮೇಲೆ ಪ್ರಕರಣಗಳು ದಾಖಲಾಗಿಲ್ಲವೆ? ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ಇದಿಂಥಕರೈ ಎಂಬುದು ಒಂದು ಪುಟ್ಟ ಹಳ್ಳಿ. ಇಲ್ಲಿಯ ಜನರು ಮೀನುಗಾರಿಕೆಯನ್ನು ತಮ್ಮ ಉಪಜೀವನದ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಇಲ್ಲಿಗೆ ಕೂಡಂಕುಲಂ ಅಣುವಿದ್ಯುತ್ ಸ್ಥಾವರ ಯೋಜನೆಯನ್ನು ಕೇಂದ್ರದ ಯುಪಿಎ ಸರ್ಕಾರ ದಯಪಾಲಿಸಿತು. ತಿಳಿ ನೀರಿನ ಕೆರೆಯಲ್ಲಿ ಕಲ್ಲೆಸೆದಂತೆ ಅವರ ಬದುಕಿನ ನೆಮ್ಮದಿ ಹಾಳಾಯಿತು. ಸುನಾಮಿ ಎರಗುವ ಆತಂಕವಿರುವ ಪ್ರದೇಶದಲ್ಲಿ ಅಣುವಿದ್ಯುತ್ ಸ್ಥಾವರ ನಿರ್ಮಿಸಿದರೆ ಅದರ ಸುರಕ್ಷತೆಯ ಭರವಸೆಯನ್ನು ನೀಡುವವರು ಯಾರು? ತಮ್ಮ ಭವಿಷ್ಯದ ಪೀಳಿಗೆಯ ಸುರಕ್ಷತೆ ದೃಷ್ಟಿಯಿಂದ ಇಲ್ಲಿಯ ಜನರು ಈ ಅಣುಸ್ಥಾವರದ ವಿರುದ್ಧ ದನಿ ಎತ್ತಿದರು. ಅದರ ಫಲ ಏನು ಗೊತ್ತೆ? ಕೂಡಂಕುಳಂ ಪೊಲೀಸ್ ಠಾಣೆಯ ರಜಿಸ್ಟರ್‌ನಲ್ಲಿ ಈ ಹಳ್ಳಿ ದೇಶದ ಅತ್ಯಂತ ಕುಖ್ಯಾತ ಪ್ರದೇಶ. ಇಲ್ಲಿಯ ಜನರು ದೇಶದ ವಿರುದ್ಧ ಯುದ್ಧ ಸಾರಿದವರು. ಅವರೆಲ್ಲ ದೇಶದ್ರೋಹಿಗಳು. ಈ ದೇಶದಲ್ಲಿಯೇ ಮೊದಲಬಾರಿ ಎನ್ನುವಂತೆ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ೮,೦೦೦ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ರಷ್ಯಾದ ಚೆರ್ನೋಬಿಲ್‌ನಲ್ಲಿ ಅಣುಸ್ಥಾವರದಲ್ಲಿ ಅನಾಹುತ ಸಂಭವಿಸಿತು. ಅದೇ ರಷ್ಯಾದ ಕೊಡುಗೆ ಇಲ್ಲಿಯ ಅಣುಸ್ಥಾವರ. ಅದರ ಸುರಕ್ಷತೆಯನ್ನು ನಂಬುವುದಾದರೂ ಹೇಗೆ? ಹೀಗಿರುವಾಗ ತಮ್ಮ ಬದುಕಿನ ಸುರಕ್ಷತೆಗಾಗಿ ಇಲ್ಲಿಯ ಜನರು ಹೋರಾಟಕ್ಕೆ ಇಳಿದರೆ ಅದು ದೇಶದ್ರೋಹವೆ? ನೀವು ನಂಬುತ್ತೀರೋ ಇಲ್ಲವೋ, ಈ ೮ ಸಾವಿರ ಜನರ ಮೇಲಿನ ದೇಶದ್ರೋಹದ ಪ್ರಕರಣವಲ್ಲದೆ ಇತರ ೬೬,೦೦೦ ಜನರ ಮೇಲೆ ಇತರೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಅದೇ ಯುಪಿಎದ ಪ್ರಧಾನ ಪಕ್ಷವಾದ ಕಾಂಗ್ರೆಸ್ ನ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗ ಎಲ್ಲಿದ್ದರು? ಅಧಿಕಾರಶಾಹಿಯೊಂದು ಜನರ ಪ್ರತಿಭಟನೆಯನ್ನು ಎಷ್ಟೊಂದು ದಾರುಣವಾಗಿ ಹತ್ತಿಕ್ಕಬಹುದು ಎನ್ನುವುದಕ್ಕೆ ಈ ಇದಿಂಥಕರೈ ಊರು ಒಂದು ಉದಾಹರಣೆ.ಇದೆಲ್ಲ ೨೦೧೧ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಜರುಗಿದ ಮೂರು ಪ್ರತಿಭಟನೆಗಳ ಕಾಲದಲ್ಲಿ ನಡೆದವು. ಅದರ ಫಲವನ್ನು ಅಲ್ಲಿಯ ಜನರು ಇನ್ನೂ ಉಣ್ಣುತ್ತಿದ್ದಾರೆ. ಬೇರೆ ದೇಶಕ್ಕೆ ಹೋಗೋಣವೆಂದರೆ ಹೊಸದಾಗಿ ಇಲ್ಲಿ ಯಾವುದೇ ಪಾಸ್‌ಪೋರ್ಟ್ ನೀಡುತ್ತಿಲ್ಲ. ಮೊದಲೇ ನೀಡಿರುವ ಪಾಸ್‌ಪೋರ್ಟ್‌ಗಳನ್ನು ರದ್ದುಪಡಿಸಲಾಗಿದೆ. ಸರ್ಕಾರಕ್ಕೆ ಯಾವುದೇ ಪ್ರತಿಭಟನೆಯನ್ನು ಶಾಂತಿಯುತವಾಗಿ ನಿಭಾಯಿಸಲು ಬರುವುದಿಲ್ಲ ಎಂಬ ಭಾವನೆ ಆಗ ಜನರಲ್ಲಿ ಮೂಡಿತ್ತು. ಕಾಶ್ಮೀರದಲ್ಲೇ ಆಗಲಿ, ಈಶಾನ್ಯ ಭಾರತದಲ್ಲಿಯೇ ಆಗಲಿ, ಕೂಡಂಕುಳಂನಲ್ಲಿಯೇ ಆಗಲಿ ಪ್ರತಿಭಟನೆಯ ಧ್ವನಿ ಎದ್ದಾಗ ಅದರ ಬಳಿ ಇದ್ದ ಅಸ್ತ್ರ ದೇಶದ್ರೋಹದ ಆರೋಪ. ತಾವು ಅಧಿಕಾರದಲ್ಲಿದ್ದಾಗ ಅದೇ ಕಾನೂನನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಈಗ ಅದರ ವಿರುದ್ಧ ದನಿ ಎತ್ತುವುದು ಕಾಂಗ್ರೆಸ್ ಪಕ್ಷದ ಆಷಾಢಭೂತಿತನವನ್ನು ತೋರಿಸುತ್ತದೆ ಅಷ್ಟೆ. ಅಥವಾ ಅದಕ್ಕೆ ಈಗ ಜ್ಞಾನೋದಯವಾಗಿದೆ ಎನ್ನೋಣವೆ? ವಿಚಿತ್ರವೆಂದರೆ ಜೆಎನ್‌ಯು ಪ್ರಕರಣದಲ್ಲಿ ರಾಹುಲ್ ಗಾಂಧಿಯ ಮೇಲೆಯೇ ಹೈದ್ರಾಬಾದಿನಲ್ಲಿ ಒಬ್ಬರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.ಅಭಿವೃದ್ಧಿಯ ಹೆಸರಿನಲ್ಲಿ ಪ್ರಜೆಗಳ ಜೀವದೊಂದಿಗೆ ಆಟವಾಡುವುದು ಯಾವ ಸರ್ಕಾರಕ್ಕೂ ಶೋಭೆಯನ್ನುಂಟುಮಾಡುವುದಿಲ್ಲ. ತಮ್ಮ ಪಕ್ಷದ ಆಡಳಿತವಿದ್ದಾಗ ಇಂಥದ್ದೊಂದು ಅನ್ಯಾಯ ನಡೆದಾಗ ರಾಹುಲ ಗಾಂಧಿ ಬಹುಶಃ ವಿದೇಶದಲ್ಲಿ ಪ್ರವಾಸದಲ್ಲಿದ್ದರೇನೋ? ಮಹಾರಾಷ್ಟ್ರದಲ್ಲಿ ವ್ಯಂಗ್ಯಚಿತ್ರಕಾರ ಅಸೀಮ್ ತ್ರಿವೇದಿಯವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಯಿತು. ಆಗಲೂ ಕೇಂದ್ರದಲ್ಲಿ ಯುಪಿಎ ಸರ್ಕಾರವೇ ಇತ್ತು. ಆಗ ರಾಹುಲ್ ಗಾಂಧಿ ಅವರ ಪರವಾಗಿ ಧ್ವನಿ ಎತ್ತಲಿಲ್ಲ. ಅವರು ಮಾಡಿದ್ದಾದರೂ ಏನು? ದೇಶದಲ್ಲಿ ನಡೆದಿರುವ ಭ್ರಷ್ಟಾಚಾರದ ವಿಶ್ವರೂಪವನ್ನು ತಮ್ಮ ವ್ಯಂಗ್ಯಚಿತ್ರಗಳ ಮೂಲಕ ಬಯಲಿಗಿಟ್ಟು ಖಂಡನೆ ವ್ಯಕ್ತಪಡಿಸಿದ್ದು. ಭ್ರಷ್ಟಾಚಾರ ಮಾಡುವುದಕ್ಕೆ ಸಂವಿಧಾನ ಅನುಮತಿಯನ್ನು ನೀಡುತ್ತದೆಯೆ? ಇಲ್ಲ. ಹಾಗಿದ್ದಮೇಲೆ ಭ್ರಷ್ಟಾಚಾರದಲ್ಲಿ ತೊಡಗುವುದೆಂದರೆ ದೇಶದ್ರೋಹವಾಗುವುದಿಲ್ಲವೆ? ಇದು ಸಂವಿಧಾನ ವಿರೋಧಿಯಾಗುವುದಿಲ್ಲವೆ? ಈ ದೇಶದಲ್ಲಿ ಎಷ್ಟು ಜನ ಭ್ರಷ್ಟಾಚಾರದಲ್ಲಿ ತೊಡಗಿದವರ ಮೇಲೆ ದೇಶದ್ರೋಹದ ಆಪಾದನೆ ಹೊರಿಸಲಾಗಿದೆ? ಸಂಸತ್ತಿನಲ್ಲಿ ಕಪ್ಪುಹಣದ ಚೀಲ ಪ್ರದರ್ಶನಗೊಂಡಿತು, ಜನಪ್ರತಿನಿಧಿಗಳು ಸದನದಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡಿದರು, ವಿವಿಧ ಹಗರಣಗಳಲ್ಲಿ ಕೋಟ್ಯಂತರ ರುಪಾಯಿಯ ಭಷ್ಟಾಚಾರ ನಡೆದದ್ದು ಹೊರಬಿತ್ತು. ಇವೆಲ್ಲ ಸಂವಿಧಾನ ವಿರೋಧಿಯಲ್ಲವೆ? ಒಬ್ಬರ ಮಾತನಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ದೇಶದ್ರೋಹದ ಆಪಾದನೆಯನ್ನು ಹೊರೆಸುವ ಕುಖ್ಯಾತ ಇತಿಹಾಸ ಈ ದೇಶದಲ್ಲಿದೆ. ಜೆಎನ್‌ಯು ಬೆಳವಣಿಗೆಗಳನ್ನು ಅಲ್ಲಿಯ ಕಾಶ್ಮೀರದ ಪ್ರತ್ಯೇಕತಾವಾದಿಗಳ ಕುರಿತು ಒಲವಿರುವ ವ್ಯಕ್ತಿಗಳಿಂದ ಹೊರಡುವ ಮಾತುಗಳ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಾಗಿದೆ. ಕಾಶ್ಮೀರದ ಹೋರಾಟಗಾರರ ಬಗ್ಗೆ, ನಕ್ಸಲರ ಬಗ್ಗೆ ಸಹಾನುಭೂತಿ ತೋರಿಸಿದ್ದಕ್ಕಾಗಿ ಅರುಂಧತಿ ರಾಯ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಯಿತು. ದೇಶವೆಂದರೇನು ಎಂಬ ಪರಿಕಲ್ಪನೆಯೇ ಇಲ್ಲದ ಗುಡ್ಡಗಾಡು ಜನರು ತಮ್ಮ ಅಗತ್ಯಗಳ ಬಗ್ಗೆ ಹೋರಾಟ ನಡೆಸಿದಾಗ ಅವರ ಪರವಾಗಿ ಮಾತನಾಡಿದ್ದಕ್ಕೆ ನಾಗರಿಕ ಹಕ್ಕುಗಳ ಹೋರಾಟಗಾರ ಬಿನಾಯಕ ಸೆನ್ ಮೇಲೆ ಈ ಪ್ರಕರಣ ದಾಖಲಿಸಲಾಯಿತು. ಆಗಲೂ ಕೇಂದ್ರದಲ್ಲಿ ಇದ್ದದ್ದು ಯುಪಿಎ ಸರ್ಕಾರವೇ. ಪಂಜಾಬಿನ ಸಿಮರಂಜಿತ್ ಮಾನ್ ಮತ್ತು ಆಂಧ್ರಪ್ರದೇಶದ ಅಕ್ಬರುದ್ದಿನ್ ಒವೈಸಿ ಮೇಲೆಯೂ ದೇಶದ್ರೋಹದ ಆಪಾದನೆ ಹೊರಿಸಲಾಗಿತ್ತು. ಒಬ್ಬ ನಿರಂಕುಶಾಧಿಕಾರಿಯು ಜನರು ಸದಾ ತನ್ನನ್ನು ಓಲೈಸುತ್ತಲೇ ಇರಬೇಕು, ತನ್ನ ವಿರುದ್ಧ ಧ್ವನಿ ಎತ್ತಬಾರದು ಎಂದು ಬಯಸುತ್ತಾನಲ್ಲ, ಆತ ಮಾತ್ರ ಇಂಥ ಕಾನೂನು ಜಾರಿಯಲ್ಲಿರಬೇಕು ಎಂದು ಬಯಸುತ್ತಾನೆ. ಪ್ರಜೆಗಳೆಲ್ಲ ಹೌದಪ್ಪಗಳಾಗಬೇಕು ಎಂದು ಬಯಸುವ ಪ್ರಭುಗಳು ಅವರು. ಸ್ವತಃ ಜವಾಹರಲಾಲ್ ನೆಹರು ಅವರೇ ೧೯೫೧ರಲ್ಲಿ ಸಂಸತ್ತಿನಲ್ಲಿ ಚರ್ಚೆಯಲ್ಲಿ ಭಾಗವಹಿಸಿ, ವ್ಯಕ್ತಿಯ ಮಾತನಾಡುವ ಸ್ವಾತಂತ್ರ್ಯದ ಮೇಲೆ ಮಾತನಾಡುತ್ತ, ‘ದೇಶದ್ರೋಹ’ಕ್ಕೆ ಸಂಬಂಧಿಸಿದ ಸೆಕ್ಷನ್ ತೀವ್ರ ಆಕ್ಷೇಪಣೀಯವಾದದ್ದು, ಹೇಸಿಗೆ ಹುಟ್ಟಿಸುವಂಥದ್ದು. ನಾವು ಅಂಗೀಕರಿಸುವ ಯಾವುದೇ ಕಾಯಿದೆಯಲ್ಲಿ ಇದಕ್ಕೆ ಯಾವುದೇ ಸ್ಥಾನವಿಲ್ಲ. ಶೀಘ್ರವೇ ನಾವು ಇದರಿಂದ ಬಿಡುಗಡೆ ಹೊಂದಿ ಉತ್ತಮ ಕಾಯ್ದೆಯನ್ನು ತರುವೆವು ಎಂದು ಹೇಳಿದ್ದರು. ಆದರೆ ಆ ಕಾನೂನೇ ಇನ್ನೂ ಇದೆ. ಅಷ್ಟೇ ಅಲ್ಲ ಅದನ್ನು ಆಗಾಗ ಮಾನವಹಕ್ಕುಗಳ ಹೋರಾಟಗಾರರು, ಪತ್ರಕರ್ತರು ಮತ್ತು ಬುದ್ಧಿಜೀವಿಗಳ ಮೇಲೆ ಪ್ರಯೋಗಿಸುತ್ತಲೇ ಬರಲಾಗಿದೆ. ಬಹುಶಃ ನೆಹರು ಆಗಲೇ ಐಪಿಸಿಯ ಈ ಸೆಕ್ಷನ್ ರದ್ದುಗೊಳಿಸಿದ್ದರೆ ಈಗ ರಾಹುಲ್ ಗಾಂಧಿಯಾಗಲಿ, ಕಾಂಗ್ರೆಸ್ ಪಕ್ಷದ ಇತರ ನಾಯಕರಾಗಲಿ ಕನ್ಹಯ್ಯನ ಪರವಾಗಿ ಇಷ್ಟೊಂದು ದೊಡ್ಡ ದನಿಯಲ್ಲಿ ವಾದ ಮಾಡಬೇಕಾದ ಅಗತ್ಯ ಬರುತ್ತಿರಲಿಲ್ಲ. ಈಗಂತೂ ಕಾಂಗ್ರೆಸ್ ಪಕ್ಷ ಈ ಬಂಧನ ವಿರೋಧಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಹೇಳುತ್ತಿದೆ. ಹಿಂದೆಲ್ಲ ಆ ಪಕ್ಷದ ಸರ್ಕಾರವೇ ಸುದೀರ್ಘ ಅವಧಿಯ ವರೆಗೆ ಅಧಿಕಾರದಲ್ಲಿ ಇತ್ತಲ್ಲವೆ? ಆಗ ಇದನ್ನು ಬದಲಿಸಬಹುದಿತ್ತವೆ? ಅಧಿಕಾರ ತಮ್ಮ ಕೈಯಿಂದ ತಪ್ಪಿ ಹೋಗುವುದಿಲ್ಲ ಎಂಬ ಭ್ರಮೆಯಲ್ಲಿ ಇದ್ದಾಗ ಇಂಥ ಆಲೋಚನೆಗಳು ಬರುವುದೇ ಇಲ್ಲ. ಕೇದಾರನಾಥ ಸಿಂಗ್ ವಿರುದ್ಧ ಬಿಹಾರ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದೇಶದ್ರೋಹದ ಕಾಯ್ದೆಯನ್ನೇನೋ ಎತ್ತಿಹಿಡಿದಿತ್ತು. ಆದರೆ ಸಾರ್ವಜನಿಕ ಶಾಂತಿಗೆ ಭಂಗ ತರುವ ಅಥವಾ ಹಿಂಸಾಚಾರವನ್ನು ಹುಟ್ಟುಹಾಕುವ ವ್ಯಕ್ತಿಗಳನ್ನು ಮಾತ್ರ ಈ ಕಾಯ್ದೆಯಡಿ ಬಂಧಿಸಬಹುದು ಎಂದು ಹೇಳಿತ್ತು. ಆದರೆ ಪೊಲೀಸರು ವಿವೇಚನೆ ಇಲ್ಲದೆ ಅದನ್ನು ಬಳಸುತ್ತಿದ್ದಾರೆ. ರಾಜಕೀಯ ನಾಯಕರೂ ಅದರ ಲಾಭವನ್ನು ಪಡೆಯುತ್ತಿದ್ದಾರೆ. ಬಿನಾಯಕ್ ಸೆನ್ ಬಂಧನವಾದಾಗ, ಕೋರ್ಟ್ ಅದರ ವಿರುದ್ಧ ತೀರ್ಪು ನೀಡಿದಾಗ ಆಗ ಕೇಂದ್ರದ ಕಾನೂನು ಸಚಿವರಾಗಿದ್ದ ವೀರಪ್ಪ ಮೊಯ್ಲಿಯವರು, ದೇಶದ್ರೋಹ ಕಾಯ್ದೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದರು. ಒಟ್ಟಾರೆ ಕಾನೂನನ್ನು ಮೊದಲು ರದ್ದುಮಾಡಬೇಕಾಗಿದೆ. ಬಳಿಕ ಪರ್ಯಾಯ ಕಾನೂನನ್ನು ರೂಪಿಸಬೇಕಾಗಿದೆ.