ಸಾವೆಂಬುದು ಅನಿವಾರ್ಯದ ಸತ್ಯ. ಸಾಹಿತಿಗಳು ತಮ್ಮ ಕೃತಿಗಳಲ್ಲಿ ಸಾವನ್ನು ಹಲವು ರೀತಿಯಲ್ಲಿ ಚಿತ್ರಿಸಿದ್ದಾರೆ. ಮಹಾಕವಿ ಕುವೆಂಪು ಅವರು ತಮ್ಮ ಸಮಗ್ರ ಸಾಹಿತ್ಯದಲ್ಲಿ ಸಾವನ್ನು ವರ್ಣಿಸಿದ ರೀತಿಯನ್ನು ಡಾ.ಟಿ.ಸಿ.ಪೂರ್ಣಿಮಾ ಮತ್ತು ಡಾ.ಮಂಜುಳಾ ಹುಲ್ಲಹಳ್ಳಿ ಸಂಶೋಧನೆ ಮಾಡಿ ‘ದಿಟದ ಮನೆ’ ಎಂಬ ಕೃತಿಯನ್ನು ರಚಿಸಿದ್ದಾರೆ. ‘ಕಾಲದೇವನ ಮನೆ ದಲ್ ದಿಟಂ ದಿಟದ ಮನೆ’ ಎಂದು ಕುವೆಂಪು ಅವರೇ ಒಂದೆಡೆ ಹೇಳಿದ್ದಾರೆ. ಈ ಇಬ್ಬರು ಸಂಶೋಧಕಿಯರು ಆಯ್ಕೆ ಮಾಡಿಕೊಂಡ ವಿಷಯವೇ ಬೆರಗನ್ನು ಮೂಡಿಸುತ್ತದೆ. ಕುವೆಂಪು ಅವರ ಸಾಹಿತ್ಯವೇ ಸಾಗರದಷ್ಟು ಅಪಾರವಾದದ್ದು. ಅಂಥದ್ದರಲ್ಲಿ ಅವೆಲ್ಲವನ್ನು ಓದಿ ಕೃತಿ ರಚಿಸುವುದೆಂದರೆ ಅದೊಂದು ಸಾಹಸವೇ. ಈ ಕೃತಿಗೊಂದು ಅರ್ಥಪೂರ್ಣವಾದ ಮುನ್ನುಡಿಯನ್ನು ಬರೆದಿರುವ ದೇಜಗೌ ಅವರು ‘‘ಕುವೆಂಪು ತಮ್ಮ ಜೀವನ ಕಾಲದಲ್ಲಿ ಹೆಚ್ಚು ಸಾವುಗಳನ್ನು ಕಂಡವರಲ್ಲ. ತಂದೆ ಸತ್ತಾಗ, ಸಾವೆಂದರೇನೆಂಬುದು ಅರ್ಥವಾದ ವಯಸ್ಸು ಅವರಿಗೆ. ತಾಯಿ ಸತ್ತಾಗ ಅವರು ವೇದಾಂತಿಯಾಗಿದ್ದರು. ಪತ್ನಿಯ ನಿಧನವೇ ತಾವು ಪ್ರಜ್ಞಾವಿಷ್ಟರಾಗಿ ಸಮೀಪದಿಂದ ಕಂಡ ಏಕೈಕ ಸಾವಿನನುಭವ. ನಾನೇ ಶಿವ ನೀನೇ ಶಿವೆ ಎಂದುಕೊಂಡಿದ್ದ ಕುವೆಂಪು ಕಾರಯಿತ್ರೀ ಪ್ರತಿಭೆ ಮಡದಿ ತೀರಿಕೊಂಡ ನಂತರ ಬರಿದಾಗುತ್ತದೆ. ಸಾಧನಾರಹಿತವಾದ ಬದುಕು ಸಾವಿಗೆ ಸಮನೆಂದೇ ಅವರ ನಂಬಿಕೆ. ಆದರೆ ಕುವೆಂಪು ಅನೇಕ ಸಂದರ್ಭಗಳಲ್ಲಿ ಸಾವನ್ನು ಅದ್ಭುತವಾಗಿ ಬಣ್ಣಿಸುತ್ತಾರೆ…..’’ ಎಂದಿದ್ದಾರೆ. ಸಾವು ಹೇಗಿರಬಹುದು? ಅದನ್ನು ಅನುಭವಿಸಿ ಹೇಳುವುದು ಸಾಧ್ಯವಿಲ್ಲ. ಸಾಯುವವರ ಬಾಹ್ಯ ಯಾತನೆಯನ್ನು ಬಣ್ಣಿಸಬಹುದು. ಸಾವಿನ ಕುರಿತು ಯಾವುದೇ ಬಣ್ಣನೆ ಇದ್ದರೂ ಅದು ಕಲ್ಪನೆಯದು ಮತ್ತು ಪ್ರತಿಮಾರೂಪದ್ದು. ಸಾವೆಂದರೆ ಪಾತಾಳದ ಬಿಲಕ್ಕೆ ಬಾಗಿಲಿನಂತೆ ಎಂದು ಪಂಪ ಹೇಳಿದ್ದಾನೆ. ಆಧುನಿಕ ಕಾಲದವರು ಪಾತಾಳ ಎಂದರೇನು ಎಂದು ಪ್ರಶ್ನಿಸಬಹುದು. ಹೇಳದೆ ಕೇಳದೆ ಬಂದೆರಗುವ ಸಾವಿನ ರೀತಿಯಿಂದಲೇ ಅದರ ಬಗ್ಗೆ ಎಲ್ಲರಿಗೂ ಒಂದು ಅಳುಕು ಇರುತ್ತದೆ. ಹಾಗಾದರೆ ಲೇಖಕಿಯರ ಪ್ರಕಾರ ಸಾವೆಂದರೆ ಏನು? ಗತಿಶೀಲವಾದ ದೇಹಕ್ಕೆ ತಟಕ್ಕನೆ ತಟಸ್ಥ ಸ್ಥಿತಿಯೊಂದನ್ನು ಕಲ್ಪಿಸಿಕೊಡುವ ಪ್ರಗತಿಶೀಲ ಅದು…. ಆತ್ಮ, ದೇಹಗಳ ಪ್ರತ್ಯೇಕತೆಯೇ ಜೀವಿಯ ಸಾವು, ಅಳಿವು, ಕೊನೆ, ಅಂತ್ಯ ಎಂದು ಅವರು ಹೇಳಿದ್ದಾರೆ. ವಿವಿಧ ಧರ್ಮಗಳಲ್ಲಿ ಸಾವಿನ ಬಗೆಗೆ ಏನು ಹೇಳಿದ್ದಾರೆ ಎಂಬುದನ್ನೂ ಅವರು ಗಮನಿಸಿದ್ದಾರೆ. ಎಲ್ಲಾ ಧರ್ಮಗಳೂ ಹೇಳುವುದೊಂದೇ ಆತ್ಮ ದೇಹಗಳು ಒಂದಾಗಿದ್ದರೆ ಜೀವ. ಅವೆರಡೂ ಬೇರೆಯಾದರೆ ಸಾವು. ಅನೈಕ್ಯತೆಯೇ ನಾಶ ಎಂಬ ಮಾತನ್ನು ದಾಖಲಿಸಿದ್ದಾರೆ. ಶರೀರದ ನಶ್ವರತೆಯನ್ನು ಆತ್ಮದ ಅಮರತ್ವವನ್ನು ಕುರಿತು ನಮ್ಮ ಕಾವ್ಯದಲ್ಲಿ, ನಮ್ಮ ಜಾನಪದರಲ್ಲಿ ಏನೇನು ಕಲ್ಪನೆಗಳಿವೆ, ಆಲೋಚನೆಗಳಿವೆ ಎಂಬುದನ್ನು ‘ನೀರ ಮೇಲಣ ಗುಳ್ಳೆ’ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಬರೀ ಸಾವಷ್ಟೇ ಅಲ್ಲ, ಜನಪದ ನಂಬಿದ ಸಾವಿನ ಸಂಕೇತಗಳು ಕೂಡ ಕಾವ್ಯಕೃತಿಗಳಲ್ಲಿ ಪ್ರತಿಮೆಗಳಾಗಿ ಮೆರೆಯುತ್ತವೆ. ಕೋಣ, ಯಮರಾಜ, ಪಾಶ, ಚಿತ್ರಗುಪ್ತ, ಪಂಚಭೂತ, ಮಸಣ, ಚಟ್ಟ, ಮಡಿಕೆ, ಚಿತೆ, ಅಸ್ಥಿ… ಹೀಗೆ ಸಾವಿನ ಸುತ್ತಾ ಹೆಣೆದುಕೊಳ್ಳುವ ಪರಿಕರಗಳೆಲ್ಲ ಕಾವ್ಯದಲ್ಲಿ ಅನಾವರಣಗೊಳ್ಳುತ್ತವೆ. ಸಾವು ಎಂದರೆ ನಾಶ, ಲಯ, ವಿಲಯ, ಪ್ರಳಯ, ವಿಚ್ಛಿದ್ರ, ನಶ್ವರ, ಶೂನ್ಯ… ಮೊದಲಾದ ಕಳಕೊಂಡ ಭಾವಗಳನ್ನು ಚಿತ್ರಿಸುತ್ತವೆ ಎನ್ನುವ ಕೃತಿಕಾರರು ಸಾವನ್ನು ಗೆಲ್ಲುವ ಹುಚ್ಚುತನ ಜೀವರಲ್ಲಿ ಮೊಳಕೆಯೊಡೆಯುವ ಪರಿಯನ್ನು ಗುರುತಿಸುತ್ತಾರೆ. ಸಾವಿನ ಬಗೆಗೆ ದಾಸರು, ಶರಣರು, ಆಧುನಿಕ ಕವಿಗಳು ಯಾವಯಾವ ರೀತಿಯ ಅಭಿವ್ಯಕ್ತಿಯನ್ನು ನೀಡಿದ್ದಾರೆ ಎಂಬುದರ ಕಡೆಗೂ ಅವರು ಗಮನ ನೀಡಿದ್ದಾರೆ. ಸಾವೆಂದರೆ ಜಡ, ಸ್ಥಾವರ, ಜಂಗಮತ್ವ ಅಳಿದುದು, ಅಚಲ, ಸ್ಥಿರ… ಹೀಗೆ ಚೇತನ ಕಳೆದುಕೊಂಡದ್ದು ಎಂದು ಕುವೆಂಪು ತಮ್ಮ ಕಲ್ಪನೆಯಿಂದ ಬಣ್ಣಿಸುತ್ತಾರೆ. ಅವರ ‘ಶ್ರೀ ರಾಮಾಯಣ ದರ್ಶನಂ’ದಲ್ಲಿ ಬರುವ ದಶರಥನ ಸಾವು, ವಾಲಿಯ ಸಾವು, ರಾವಣನ ಸಾವು ಮೊದಲಾದವುಗಳಲ್ಲಿಯ ವರ್ಣನೆಗಳಲ್ಲಿರುವ ವಿಶೇಷಗಳನ್ನು ಕೃತಿಕಾರರು ಕಾಣಿಸಿದ್ದಾರೆ. ಸ್ವಾಮಿ ರಾಮಕೃಷ್ಣರು ಮಹಾಸಮಾಧಿ ಹೊಂದಿದ್ದನ್ನು ಕುವೆಂಪು ನಿರೂಪಿಸಿದ ರೀತಿಯನ್ನು ಅವತಾರದ ಕೊನೆಯನ್ನು ಶರೀರದ ನೆಲೆಯಲ್ಲಿ ಬಣ್ಣಿಸಿದ್ದಾರೆಂದು ಹೇಳುತ್ತಾರೆ. ಸಾವನ್ನು ಕಣ್ಣಾರೆ ಕಾಣದ ಕುವೆಂಪು ಸಾವಿನ ಬಗೆಯನ್ನು ವರ್ಣಿಸಿದ ಪರಿಯನ್ನು ಕಾಲನರಮನೆಗೆ ಪರಕಾಯ ಪ್ರವೇಶವೆಂದು ಹೇಳುತ್ತಾರೆ. ಕುವೆಂಪು ತಮ್ಮ ಸಾಹಿತ್ಯದಲ್ಲಿ ಸಾವನ್ನು ಕಲ್ಪಿಸಿಕೊಂಡ ರೀತಿಯಲ್ಲೇ ಕಳೇಬರದ ಸಂಸ್ಕಾರವನ್ನೂ ಹಲವಿಧವಾಗಿ ಬಣ್ಣಿಸುತ್ತಾರೆ. ಕುವೆಂಪು ಸಾಹಿತ್ಯದಲ್ಲಿಯ ಸಾವಿನ ಪರಿಕಲ್ಪನೆಯನ್ನು ಲೇಖಕಿಯರು ಕಂಡಿದ್ದು ಹೀಗೆ: ೧.ಕುವೆಂಪು ಮೂಢನಂಬಿಕೆಗಳಿಗೆ, ಪುರೋಹಿತವರ್ಗ ಹೇರಿದ ಶಾಸ್ತ್ರಗೀಸ್ತ್ರಗಳಿಗೆ ಮಣಿದವರಲ್ಲ. ಅದೂ ಸಹ ಕುವೆಂಪು ವಿರಚಿತ ಸಾಹಿತ್ಯದಲ್ಲಿ ಕಾಣಬರುವ ಮೃತ್ಯು ಸಂದರ್ಭದಲ್ಲಿ ಪ್ರಖರವಾಗಿ ಗೋಚರಗೊಂಡಿದೆ. ಹೇಗೆಂದರೆ, ಬಹುತೇಕ ಎಲ್ಲ ಸಂದರ್ಭಗಳಲ್ಲೂ ಶವವನ್ನು ಬೆಂಕಿಗರ್ಪಿಸುವುದೇ ಸಂಸ್ಕಾರದ ಕೊನೆಯಾಗಿಸಿಬಿಡುತ್ತದೆ. ಅದಕ್ಕಂಟಿದ ಯಾವ ಆಚಾರ ಆಚರಣೆಗಳನ್ನು ಪ್ರತಿಪಾದಿಸುವುದಿಲ್ಲ. ೨.ಒಂದು ಜನ್ಮ ಗತಿಸಿದ ಮೇಲೆ ಆತ್ಮ ಏನಾಗುತ್ತದೆ ಎಂಬುದಕ್ಕೆ ಕುವೆಂಪು ಮರುಹುಟ್ಟನ್ನು ಒಂದು ಮಾರ್ಗವಾಗಿ ತೋರಿಸುತ್ತಾರೆ. ಅವರ ಬದುಕಿನಲ್ಲಿಯೇ ಅವರ ಮಗನಾಗಿಯೇ ಹುಟ್ಟಿಬಂದೊಂದು ಜೀವಕ್ಕೆ ಪೂರ್ವಜನ್ಮದ ನೆನಪಿನ ಶಕ್ತಿ ಇದ್ದುದನ್ನು ಗುರುತಿಸುವ, ಶ್ರದ್ಧೆ ವಿಶ್ವಾಸಗಳಿಂದ ನಂಬುವ ಅವರ ಧೋರಣೆ ಅವರನ್ನು ಪುನರ್ಜನ್ಮದ ಪ್ರತಿಪಾದಕರಂತೆ ತೋರಿಸುತ್ತದೆ. ತಮ್ಮ ತಂದೆ ತಮ್ಮ ಎರಡನೆ ಮಗನಾಗಿ ಹುಟ್ಟಿದ್ದಾನೆ. ಆತನ ಪತ್ನಿ ತಮ್ಮ ತಾಯಿಯ ಮರುಜನ್ಮ ಎಂದು ಅವರು ನಂಬಿದ್ದರು. ೩.ಹೊಸ ಜನ್ಮವೆನ್ನುವುದು ಹಳೇ ಜನ್ಮದ ಕರ್ಮಫಲ ಅಥವಾ ಪುಣ್ಯಫಲ. ೪.ಕುವೆಂಪು ತಾವು ವಿವೇಕಾನಂದರ ಮರುಹುಟ್ಟು ಎಂದುಕೊಂಡಿದ್ದರು. ಒಂದು ಕಾಲಘಟ್ಟದಲ್ಲಿ ಅವರ ಹೆಸರು ಹಿಡಿದು ಕೂಗಿದರೆ ಅದನ್ನು ಅಲ್ಲಗಳೆವಂತೆ, ಪುಟ್ಟಪ್ಪ ಸತ್ತ, ಅವನಿಲ್ಲ. ನಾನು ವಿವೇಕಾನಂದ ಎನ್ನುತ್ತಿದ್ದರಂತೆ. ೫.ಕುವೆಂಪು ನಾಕ ನರಕವನ್ನು ಮಾತ್ರ ಜೀವಂತ ದೇಹದ ಮಟ್ಟದಲ್ಲೇ, ಅದು ಅನುಭವಿಸುವ ಕಷ್ಟ ಸುಖಗಳ ಮಟ್ಟದಲ್ಲೇ ನೋಡುತ್ತಾರೇ ಹೊರತು ಅಗೋಚರ ಸ್ವರ್ಗವೊಂದಿದೆ, ನರಕವೊಂದಿದೆ ಎಂದು ನಂಬುವುದಿಲ್ಲ. ೬.ಸಾವು ಇದ್ದಕ್ಕಿದ್ದ ಹಾಗೆ ಬಂದು ಅಮರಿಕೊಳ್ಳುವುದಿಲ್ಲ. ಒಂದಲ್ಲಾ ಒಂದು ರೀತಿಯ ಸೂಚನೆಯನ್ನು ಕೊಟ್ಟೇ ಅದು ಸಮೀಪಿಸುವುದು ಎಂಬುದು ಕುವೆಂಪು ಅವರ ದೃಢ ನಂಬಿಕೆ. ಇದಕ್ಕೆ ಅವರ ಸ್ವಾನುಭವದ ಮಾತುಗಳು ಇಂಬು ಕೊಟ್ಟರೆ ಅವರ ಕೃತಿಗಳಲ್ಲಿ ಬರುವ ಹಲವಾರು ಘಟನೆಗಳು ಸಮರ್ಥನೆ ನೀಡುತ್ತವೆ. ೭.ಕುವೆಂಪು ನಂಬುತ್ತಿದ್ದ ಮತ್ತೊಂದು ತತ್ವ ಆತ್ಮ ಸಮಾಧಿ. ಇಂಥ ಸಮಾಧಿ ಎಂದರೆ ಸಾವಲ್ಲ, ನಿಜ. ಆದರೆ ದೇಹದಿಂದ ತಾತ್ಕಾಲಿಕವಾಗಿ ಆತ್ಮದ ಪ್ರತ್ಯೇಕತೆ. ಆಲಿಸುವವರಲ್ಲಿ ವಿಶ್ವಾಸವಿದ್ದರೆ ಮೃತದಲ್ಲಿಯೂ ಶ್ವಾಸವಾಡುತ್ತದೆ ಎಂದು ಮೃತತ್ವದಲ್ಲೂ ಅಮೃತವನ್ನು ಗುರುತಿಸಬಲ್ಲ ದಿವ್ಯಾನುಭೂತಿ ಈ ಭಾವಕವಿಗಿತ್ತು. ೮.ಇನ್ನೊಂದು ಅಲೌಕಿಕ ವಿಶೇಷ ಕುವೆಂಪು ಸಾಹಿತ್ಯದಲ್ಲೇ ವಿಶೇಷವೆನ್ನುವಂತೆ ಮೃತ್ಯುಂಜಯತ್ವ ಮತ್ತು ಚಿರಂಜೀವತ್ವ. ಇಂಥ ಪ್ರಕರಣಗಳಲ್ಲಿ ಸಾವು ಸಂಭವಿಸುತ್ತದೇನೋ ನಿಜ. ಆದರೆ ಆ ವ್ಯಕ್ತಿತ್ವ ನಮ್ಮ ಜತೆಗೇ ಇದೆ ಎಂಬಂಥ ಭಾವ ನಾಶವಾಗಿರುವುದಿಲ್ಲ ಎನ್ನುವುದು ಗಮನಾರ್ಹ. ಕುವೆಂಪು ಸಾಹಿತ್ಯದ ಅಧ್ಯಯನದ ಹೊಸ ದಿಕ್ಕೊಂದನ್ನು ತೋರಿಸಿದ ಇಬ್ಬರೂ ಲೇಖಕಿಯರು ಅಭಿನಂದನೆಗೆ ಅರ್ಹರು. ಪ್ರ: ಪ್ರಭೆ, ಬೆಂಗಳೂರು, ಪುಟಗಳು ೨೧೨, ಬೆಲೆ ₹ ೧೫೦.