*ಬಹಳ ಅವಸರ ಮಾಡುವ ವ್ಯಕ್ತಿ

ಹಳ ಅವಸರ ಮಾಡುವ, ದರ್ಪ ತೋರುವ ವ್ಯಕ್ತಿಯನ್ನು ನೋಡಿದಾಗ, `ಏನು, ಕುದುರೆ ಮೇಲೆ ಬಂದವನ ಹಾಗೆ ಮಾಡ್ತಾ ಇದ್ದೀಯಲ್ಲೋ, ಸ್ವಲ್ಪ ತಡ್ಕೋ' ಎಂದು ಹೇಳುವುದನ್ನು ಕೇಳಿದ್ದೇವೆ. ನಾವೇ ಎಷ್ಟೋ ಸಲ ಇದನ್ನು ಬಳಸಿರಬಹುದು. ಮಾವನ ಮನೆಗೆ ಬಂದ ಅಳಿಯ ತಿರುಗಿ ಹೋಗಲು ಗಡಿಬಿಡಿ ಮಾಡತೊಡಗಿದರೆ,ಕುದುರೆ ಕಟ್ಟಿಹಾಕಿ ಬಂದೆಯೋ ಇಲ್ಲ ಹಾಗೇ ಬಿಟ್ಟು ಇಟ್ಟಿದ್ದೀಯೋ’ ಎಂದು ಹೇಳುವುದನ್ನೂ ಕೇಳಿರಬಹುದು.
ಬಸ್ಸು, ಕಾರುಗಳು ಇಲ್ಲದ ಕಾಲದಲ್ಲಿ ಕುದುರೆಯೇ ಬಹಳ ವೇಗದ ಸಂಚಾರ ವ್ಯವಸ್ಥೆಯಾಗಿತ್ತು. ಕುದುರೆಯ ಮೇಲೆ ಬರುವವರು ಸಾಮಾನ್ಯರಂತೂ ಅಲ್ಲವೇ ಅಲ್ಲ. ರಾಜನ ದೂತರೋ ಅಮಲು ಜಾರಿ ಮಾಡುವವರೋ ಬರುತ್ತಾರೆ. ಕುದುರೆ ಮೇಲೆ ಬಂದವರು ಎಂದ ಮೇಲೆ ಅದಕ್ಕೆ ತಕ್ಕಾಗಿ ದರ್ಪವನ್ನೂ ಅವರು ತೋರಿಸುತ್ತಾರೆ. ದಂಡನೆಯ ಅಧಿಕಾರ ತಮ್ಮಲ್ಲೇ ಇದೆ ಎನ್ನುವಂತೆ ವರ್ತಿಸುತ್ತಾರೆ ಅವರು.
ಸಾಮಾನ್ಯ ಜನರು ದಂಡನೆಯ ಅಧಿಕಾರ ತಮ್ಮಲ್ಲೇ ಇದೆ ಎಂದು ತೋರಿಸಿದಾಗ ಅಂಥವರಿಗೆ ಕುದುರೆ ಮೇಲೆ ಬಂದವನಂತೆ ಮಾಡುತ್ತಾನೆ ಎಂದು ಹೇಳುತ್ತಾರೆ.
ಕುದುರೆ ಸಂಚಾರದ ಸಾಧನವಾಗಿ ಇಂದು ಇಲ್ಲದಿದ್ದರೂ, ರಾಜಾಧಿರಾಜರ ಕಾಲ ಮುಗಿದು ಹೋಗಿದ್ದರೂ ಆ ಕಾಲದ ನುಡಿಗಟ್ಟು ಮಾತ್ರ ಇಂದಿಗೂ ಉಳಿದುಕೊಂಡು ಬಂದಿದೆ.