*ಸುಗ್ರೀವನ ರಾಜ್ಯ ಇಕ್ಕಟ್ಟಿನ ದಟ್ಟಣೆಗೆ ರೂಪಕ

ಹಳ ಇಕ್ಕಟ್ಟಾದ ಪ್ರದೇಶವನ್ನು ಕಿಷ್ಕಿಂದೆ ಎಂದು ಕರೆಯುವುದಿದೆ. ಚಿಕ್ಕ ಹಾಲ್‌, ಒಂದೇ ಬೆಡ್‌ರೂಂ, ಅಲ್ಲೇ ಬಾತ್‌ರೂಂ, ಸಂಡಾಸ್‌ ಎಲ್ಲವೂ. ಒಬ್ಬರು ಒಳಗೆ ಬಂದರೆ ಇಬ್ಬರು ಹೊರಗೆ ಹೋಗಬೇಕು ಎಂಬಂಥ ಸ್ಥಿತಿ ಇರುವ ಮನೆಯನ್ನು ಕಂಡಾಗಲೂ ಅದೊಂದು ಕಿಷ್ಕಿಂದೆ, ಹೇಗೆ ಉಳಿಯುತ್ತಾರೋ ಅದರಲ್ಲಿ ಎಂದು ಮೂಗೆಳೆಯುವವರು ಇದ್ದಾರೆ.
ಏನಿದು ಕಿಷ್ಕಿಂದೆ? ರಾಮಾಯಣದಲ್ಲಿ ವಾಲಿ ಸುಗ್ರೀವರ ಕತೆ ಗೊತ್ತಲ್ಲವೆ? ಅವರ ರಾಜಧಾನಿಯೇ ಈ ಕಿಷ್ಕಿಂದೆ. ಇಕ್ಕಟ್ಟಾದ ಕಣಿವೆಗಳು, ಏರಲಸಾಧ್ಯವಾದ ಇಳಿಜಾರಿನ ಗುಡ್ಡಗಳು, ಗುಹೆಗಳು, ಭಾರೀ ಗಾತ್ರದ ಶಿಲೆಗಳು ಹೀಗೆ ಮನುಷ್ಯ ಮಾತ್ರದವರಿಗೆ ಸಹ್ಯವಾಗದ ತಾಣ.
ಕಪಿಗಳ ವಾಸಕ್ಕೆ ಸೂಕ್ತವಾದ ಪ್ರದೇಶ ಅದು. ಏಕೆಂದರೆ ಜನರು ಅಲ್ಲಿಗೆ ಬರುವುದು ವಿರಳ. ಶತ್ರು ದಾಳಿಯಾದರೆ ಮರದಿಂದ ಮರಕ್ಕೆ ಜಿಗಿದು, ಶಿಲೆಯಿಂದ ಶಿಲೆಗೆ ಕುಪ್ಪಳಿಸಿ ತಪ್ಪಿಸಿಕೊಳ್ಳಬಹುದು. ಕಿಷ್ಕಿಂದೆಯ ವರ್ಣನೆಯನ್ನು ಮಹಾಕವಿ ವಾಲ್ಮೀಕಿ ತುಂಬ ಸುಂದರವಾಗಿ ಮಾಡಿದ್ದಾರೆ. ರಾಮಾಯಣದ ಪ್ರಭಾವದಿಂದ ಜನಸಾಮಾನ್ಯರ ಬಾಯಲ್ಲೂ ಉಪಮೆಯ ರೂಪದಲ್ಲಿ ಕಿಷ್ಕಿಂದೆ ಚಲಾವಣೆಗೆ ಬಂದಿದೆ.