ಹೆಮ್ಮರವೊಂದು ಹೂ ತಳೆದಿರಲು
ಪುಂಕೇಶರ ಸ್ತ್ರೀ ಕೇಶರಗಳ ಸಾಮೀಪ್ಯಕ್ಕಾಗಲಿ
ಸಹಜ ಪರಾಗಸ್ಪರ್ಶ ಕ್ರಿಯೆಗಾಗಲಿ
ನಾ ಕಾರಣನಲ್ಲ.

ನಾ ಜವಾಬುದಾರನಾಗದೆ ಅಂಡದೊಳಗೆ
ಅಂಕುರಿಸಿ ಬಿಟ್ಟೆ
ಮರದ ತುತ್ತತುದಿಯ ಹೆಣೆಯಲ್ಲಿ
ಮಿಜರಾದೆ, ಮಿಡಿಯಾಗಿ ಬೆಳೆದೆ
ದೋರಗಾಯಾಗಿ ಕೆಂಪಡರುವ ಹೊತ್ತಿಗೆ
ನನ್ನ ಹೊತ್ತ ಮರಕ್ಕೆ ಹೆಮ್ಮೆಯೋ ಹೆಮ್ಮೆ
ನಾಲ್ಕು ಜನ ಕಾಣುವ ಹಾಗೆ ಹೆಣೆಯನ್ನು
ಜೀಕಿದ್ದೇ ಜೀಕಿದ್ದು

ಜೀಕಿದ್ದು ಹೆಚ್ಚಾಗಿಯೋ ಏನೋ
ಒಂದು ದಿನ ನಾನು ತೊಟ್ಟು
ಹರಿದುಕೊಂಡು ಕೆಳಕ್ಕೆ ಬಿದ್ದೆ
ಅಲ್ಲಿಗೇ ನನ್ನದೆಲ್ಲ ಮುಗಿಯಿತು
ಅಂದುಕೊಂಡರೆ ಆಗತಾನೆ
ಬದುಕು ಆರಂಭ

ನನ್ನ ಹೊತ್ತವರು ಮತ್ತೆ
ತೊಟ್ಟು ಕಳಚಿ ಕೆಳಗಿಟ್ಟವರು
ಬೇರಿಳಿಸಿದಲ್ಲೇ ನನ್ನದೂ ಬೇರಿಳಿಯಿತು
ಹೊತ್ತವರ ಅಕ್ಕರೆಯೆ ಚಪ್ಪರವಾದಂತೆ
ಬಿಸಿಲು ನನ್ನತ್ತ ಮುಖ ಮಾಡಲೇ ಇಲ್ಲ

ತೆಪ್ಪನೆ ಬಿಗಿದು ಕುಳಿತರೂ
ಕುಂಡೆ ಚಿವುಟುವ, ತಿನ್ನಲೆಂದು
ಕೈಗೆತ್ತಿಕೊಂಡದ್ದನ್ನು ಕಸಿದುಣ್ಣುವ ನನ್ನಂಥವರೆ,
ಬಂಧುಗಳು. ಸಾಕಪ್ಪಾ ಸಾಕು
ಯಾರಾದರೂ ಒಯ್ದು ಈ ಚಕ್ರ ವ್ಯೂಹದಿಂದ
ಪಾರುಮಾಡಬಾರದೆ ನನ್ನನ್ನು
ಎಂದು ಹಂಬಲಿಸಿದ್ದೇ ಹಂಬಲಿಸಿದ್ದು.

ಇಚ್ಛೆಯ ಉತ್ಕಟತೆ ಯಾರಿಗೋ
ತಟ್ಟಿತು. ನನ್ನ ಒಯ್ದರು.
ನನ್ನದೇ ಜಾತಿಯ ಇನ್ನೊಂದು
ಮರದ ಹೆಣೆಗೆ ನನ್ನ ಕಸಿ ಮಾಡಿದರು
ಬಿಸಿಲ ಮುತ್ತಿಗೆ ಪುಳಕಗೊಂಡೆ
ಕೆಂಪ ಚಿಗುರಿಸಲು ಹಳದಿ
ಹೂವಿಸಲು ಕನಸ ಕಂಡೆ

ಹೊಸ ಬದುಕಿಗೆ ಸಂತಸಗೊಳ್ಳುತ್ತಿರುವಾಗಲೆ
ನನ್ನ ಶಿರಃಛೇದನ ನಡೆದೇ ಹೋಯಿತು.
‘ಹಯವದನನ’ ಅಪರಾವತಾರದೊಂದಿಗೆ
ನನ್ನ ಬೇರು ಮತ್ತೆ ಮಣ್ಣೊಳಗೆ ಇಳಿಯತೊಡಗಿತು.

ನಾನು ನಾನೇ ಆಗಬಯಸಿದರೆ
ಇನ್ನೇನೋ ಆಗಿ ಬಿಟ್ಟೆ.
ಇದೀಗ ಈ ನನ್ನದಲ್ಲದ ಬದುಕಿಗೆ
ವಿದಾಯ ಹೇಳ ಬಯಸುತ್ತಿದ್ದೇನೆ.
೧೧-೧೦-೮೯