ನನ್ನ ಕವನಗಳನ್ನೆಲ್ಲ ಕಾಡು
ಆಗಿಸುವ ಬಯಕೆ ನನ್ನದು
ವ್ಯಾಘ್ರ ಕೇಸರಿಗಳು, ಜೊತೆಗೆ ಚಿರತೆ
ಚಿಗರೆಗಳಿಹುದು. ಮತ್ತೆ
ಆಡು- ಆನೆ, ಮೊಲಗಳಿಗೆ ಆಡುಂಬೊಲವು

ಆಲಸಿಗಳ ಬೀಡಲ್ಲ, ನಿತ್ಯ
ಕರ್ಮಯೋಗಿಗಳ ತಾಣವದು
ಬದುಕು ಹೆರರ ಹೆಗಲ ಮೇಲಿನ
ಹೊರೆಯಲ್ಲ

ನಿತ್ಯ ಹಸುರಿನ ಮರವು, ಬಳಲಿದವರಿಗೆ
ನೆರಳು, ಕೂರುವವೆ ಕಣ್ಣು?
ಕೇಳಿ, ಹಕ್ಕಿಗಳ ನಿನದ

ಒತ್ತೊತ್ತಿ ಹೇರಿಟ್ಟ ಬಂಡೆಗಳ ತೇರುಂಟು
ಅದನೆ ಒಡೆದು ಹರಿಯುವ ಹಳ್ಳ
ಸುತ್ತು ಬಳಸಿಹೆ ಮುಳ್ಳು ನಡುವೆ
ಬಿರಿದೊಗೆದ ಸುಮವು
ಸೂಸಿಹುದು ಗಂಧ ತೀಡಿ ತೀಡಿ

ಗಿಳಿ ಗೊರವಂಕ ಕೋಗಿಲೆಗಳ
ಮಂದ್ರ-ತಾರಕ ಸ್ವರವೆ ಎಲ್ಲೆಲ್ಲೂ
ಮೌನದಾಸ್ವಾದನೆಯೆ ರಸದ ಹೊನಲು

ಕಾಡಿಗೂ ಊರಿಗೂ ದೂರ ಬಲು ಕಿರಿದು
ಒಂದರ ಮೇಲಿನ್ನೊಂದು ಪ್ರತಿಫಲಿಸಿ ಇಹುದು
೧೫-೬-೮೮