*ವ್ರತಸ್ಥನಾಗಿ ಕಾರ್ಯ ಆರಂಭಿಸು

ಕಂಕಣ ಎಂದರೆ ಬಳೆ ಎಂಬ ಅರ್ಥವಿದೆ. ಬಳೆಯನ್ನು ತೊಡುವುದು ಹೆಂಗಸರು ಮಾತ್ರವಲ್ಲವೆ? ಗಂಡಸರಿಗೆ ಬಳೆ ತೊಡು ಎಂದು ಹೇಳಿದರೆ ಅಪಮಾನ ಮಾಡಿದಂತೆ. `ಬಳೆ ಹಾಕಿಕೊಂಡಿದ್ದೀನಾ ನಾನು?’ ಎಂದು ಅಬ್ಬರಿಸುವುದನ್ನು ಕೇಳಿದ್ದೇವೆ.
ಕಂಕಣಕ್ಕೆ ಬಳೆ ಅಲ್ಲದೆ ಇನ್ನೂ ಬೇರೆ ಅರ್ಥಗಳಿವೆ. ಮಂಗಳ ಕಾರ್ಯಗಳಲ್ಲಿ ಅರಿಶಿಣದ ತುಂಡಿಗೆ ಕೆಂಪು ದಾರವನ್ನು ಕಟ್ಟಿ ಅದನ್ನು ಬಲಗೈ ಮಣಿಕಟ್ಟಿಗೆ ಕಟ್ಟಿಕೊಳ್ಳುತ್ತಾರೆ. ಶುಭಕಾರ್ಯದ ಆರಂಭದಲ್ಲಿ ಸಂಕಲ್ಪವನ್ನು ತೊಡುವುದರ ಸಂಕೇತ ಈ ಕಂಕಣ ತೊಡುವಿಕೆ. ಬಳೆಯನ್ನು ತೊಡುವ ಸ್ಥಳದಲ್ಲಿಯೇ ಇದನ್ನು ಕಟ್ಟಿಕೊಳ್ಳುವುದರಿಂದ ಇದೂ ಕಂಕಣವಾಗಿರಬಹುದು.
ಒಮ್ಮೆ ಕಂಕಣ ತೊಟ್ಟ ಮೇಲೆ ಯಾವುದೇ ಸೂತಕ ಮೈಲಿಗೆ ಬಂದರೂ ಅದು ಆತನಿಗೆ ಬಾಧಿಸುವುದಿಲ್ಲವಂತೆ. ಇದೊಂದು ರೀತಿಯಲ್ಲಿ ರಕ್ಷಣಾ ಕವಚ ಇದ್ದಂತೆ.
ಇವರು ಈ ಕೆಲಸವನ್ನು ಮಾಡಲು ಕಂಕಣ ತೊಟ್ಟಿದ್ದಾರೆ ಎಂದು ರಾಜಕಾರಣಿಗಳನ್ನು ಹೊಗಳಿ ಭಾಷಣ ಮಾಡುವಾಗ ಹೇಳುವುದನ್ನು ಕೇಳಿದ್ದೇವೆ. ಅಂದರೆ ಈ ಕೆಲಸವನ್ನು ಅವರು ಮಾಡಿಯೇ ಮಾಡುತ್ತಾರೆ ಎಂಬ ನಿರ್ಧಾರ ಅಲ್ಲಿರುತ್ತದೆ.