*ಹಳೆಯದಕ್ಕೇ ಜೋತುಬೀಳುವವನು
ಅವನ್ಯಾವನಪ್ಪ ಓಬಿರಾಯನ ಕಾಲದವನು- ಎಂದು ಸಾಮಾನ್ಯವಾಗಿ ಅಂದು ಬಿಡುತ್ತಾರೆ. ಹೊಸತು ಬಂದು ಹಳೆಯದನ್ನೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದರೂ ಹಳೆಯದಕ್ಕೇ ಜೋತುಬೀಳುವವರಿಗೆ, ಬದಲಾವಣೆಯನ್ನು ಜಪ್ಪಯ್ಯ ಎಂದರೂ ಒಪ್ಪಿಕೊಳ್ಳದವರಿಗೆ ಓಬಿರಾಯನ ಪಟ್ಟ ಕಟ್ಟಿಟ್ಟ ಬುತ್ತಿ.
ಓಬಿರಾಯ ಎನ್ನುವವನು ಇದ್ದನೋ ಇಲ್ಲವೋ ಗೊತ್ತಿಲ್ಲ. ಇದ್ದಿದ್ದರೆ ಅವನಂತೂ ಸಂಪ್ರದಾಯದಿಂದ ಒಂದಿಂಚೂ ಈಚೆಗೆ ಬರುವುದಕ್ಕೆ ಒಲ್ಲೆ ಎಂದು ಪಟ್ಟು ಹಿಡಿದಿದ್ದಂತೂ ನಿಜವಿರಬೇಕು. ಆಡುಮಾತಿನಲ್ಲಿ ಅಲ್ಲದೆ ಗ್ರಂಥಗಳಲ್ಲಿ, ಪತ್ರಿಕೆಗಳಲ್ಲಿ ಓಬಿರಾಯ, ಓಬೀರಾಯನ ಪ್ರಸ್ತಾಪವಿದೆ. `ಓಬಿರಾಯನ ಕಥೆ ನಮಗೆ ಹೇಳಬೇಡ’ ಎಂಬ ಉಲ್ಲೇಖವನ್ನು ಹಳೆಯ ಗ್ರಂಥಗಳಲ್ಲಿ ನೋಡಿದಾಗ, ಹಳೆಯ ಕಾಲದವನು ಎಂದು ಮೂದಲಿಸುವುದಕ್ಕೆ ಮಾತ್ರ ಇದು ಬಳಕೆಯಾಗುತ್ತಿತ್ತು ಎಂದು ತೋರುವುದು. ಪ್ರಗತಿ ವಿರೋಧಿ, ಪ್ರತಿಗಾಮಿ ಎನ್ನುವಂಥ ಅರ್ಥದಲ್ಲಿ ಇತ್ತೀಚಿನ ದಿನಗಳಲ್ಲಿ ಓಬಿರಾಯ ಬಳಕೆಯಾಗುತ್ತಿದ್ದಾನೆ.
ಈ ಓಬಿರಾಯನಿಗೂ ತಾರಾ ಹೋಟೆಲ್‌ಗಳ ಮಾಲೀಕ ಒಬೇರಾಯ್‌ಗೂ ಸಂಬಂಧವಿಲ್ಲ. ಮೂಲ ಓಬಿರಾಯನ ಪರಿಚಯವಿಲ್ಲದ, ಒಬೇರಾಯ್ ಹೊಟೇಲ್ ಸಂಸ್ಕೃತಿಯಲ್ಲಿ ಬೆಳೆದವರು ನಮ್ಮ ಓಬಿರಾಯನಿಗೆ ಹೊಸ ಅರ್ಥವನ್ನು ಹಚ್ಚಬಹುದು. ಏನೂ ಇಲ್ಲದವನು ಏನೆಲ್ಲವನ್ನೂ ಸಾಧಿಸಬಹುದು ಎನ್ನುವುದಕ್ಕೆ ಒಬೇರಾಯ್ ಸಂಕೇತವಾಗಿ ಬಳಕೆಗೆ ಬರಬಹುದು.
ಒಬೇರಾಯ್‌ನಲ್ಲಿ ಓಬಿರಾಯ ಹೊಸ ಹುಟ್ಟನ್ನು ಪಡೆದರೆ ಯಾರೂ ಆಶ್ಚರ್ಯಪಡಬೇಕಾಗಿಲ್ಲ.
ಓಬಿರಾಯನಿಗೆ ಇನ್ನೊಂದು ಅರ್ಥವೂ ಇದೆ. ಇದೇ ಸರಿಯಾದದ್ದೂ ಇರಬಹುದು. Old British Roy (O.B.Roy) ಎಂಬುದು ಓಬಿರಾಯ ಆಗಿದೆ ಎಂಬ ವಿವರಣೆ ಇಲ್ಲಿದೆ. ನ್ಯಾಯಾಲಯಗಳಲ್ಲಿ ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿರುವ ಕಾನೂನನ್ನು ಉಲ್ಲೇಖಿಸುವಾಗ ಓ.ಬಿ.ರಾಯ್ ಕಾಲದ ಕಾಯಿದೆ ಎಂದು ಉಲ್ಲೇಖಿಸುತ್ತಾರಂತೆ. ಅಂದರೆ ತುಂಬ ಹಳೆಯ ಕಾಯಿದೆ ಎಂಬ ಭಾವಾರ್ಥ ಇಲ್ಲಿಯದು. ಈ ಹಳೆಯದು ಎಂಬುದೇ ಓಬಿರಾಯಕ್ಕೆ ಅರ್ಥವಾಗಿ ಅಂಟಿಕೊಂಡಿತು. ಕಾರಣ ಹಳೆಯದನ್ನು ಹೇಳುವಾಗಲೆಲ್ಲ ಓಬಿರಾಯ ಬಂದುಬಿಡುತ್ತಾನೆ. ಇದೇ ಬಹುಶಃ ಸರಿಯಾದ ವಿವರಣೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.