ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ವರ್ಷಗಳು ಉರುಳುತ್ತ ಹೋದಂತೆ ಆ ಹೋರಾಟದಲ್ಲಿ ಧೈರ್ಯವನ್ನು ಮೆರೆದು ತ್ಯಾಗ ಬಲಿದಾನ ಮಾಡಿದ ಹಲವರ ನೆನಪುಗಳು ಜನಮಾನಸದಿಂದ ಮರೆಯಾಗುತ್ತಿವೆ. ಬರೆಹಗಾರರು, ಇತಿಹಾಸಕಾರರು ಯಾವ ಪ್ರಮಾಣದಲ್ಲಿ ಮಹತ್ವವನ್ನು ನೀಡಬೇಕಿತ್ತೋ ಅಷ್ಟು ಪ್ರಮಾಣದಲ್ಲಿ ಮಹತ್ವವನ್ನು ನೀಡಿಲ್ಲ. ಕೆಲವರಿಗಷ್ಟೇ ಗೊತ್ತಿರುವ ಅಂಥ ಮಹಾನುಭಾವರಲ್ಲಿ ಒಬ್ಬಳು ಸುಭಾಷ್‌ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಶನಲ್ ಆರ್ಮಿ(ಐಎನ್‌ಎ)ಯಲ್ಲಿ ಗೂಢಚಾರಿಣಿಯಾಗಿ ಕೆಲಸವನ್ನು ಮಾಡಿದ ಸರಸ್ವತಿ ರಾಜಮಣಿಯೂ ಒಬ್ಬಳು.
ಸರಸ್ವತಿ ರಾಜಮಮಣಿಯು 1927ರಲ್ಲಿ ಬರ್ಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದಳು. ಅವಳ ತಂದೆ ತಿರುಚಿಯವರು. ಅಲ್ಲಿ ಚಿನ್ನದ ಗಣಿಗಾರಿಕೆ ಅವರ ಉದ್ಯಮವಾಗಿತ್ತು. ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಕಟ್ಟಾ ಬೆಂಬಲಿಗರಾಗಿದ್ದರು. ಬ್ರಿಟಿಷ್ ಅಧಿಕಾರಿಗಳು ಬಂಧಿಸುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅವರು ಬರ್ಮಾದಲ್ಲಿ ನೆಲೆಯಾಗಿದ್ದರು. ರಾಜಮಣಿಯ ಕುಟುಂಬ ತುಂಬ ಉದಾರವಾದಿಯಾದುದಾಗಿತ್ತು. ಅಲ್ಲಿ ಹೆಣ್ಣುಮಕ್ಕಳ ಮೇಲೆ ಯಾವುದೇ ನಿರ್ಬಂಧ ಇರಲಿಲ್ಲ. ಸರಸ್ವತಿಯು ಕೇವಲ ಹತ್ತು ವರ್ಷದವಳಿದ್ದಾಗ ಮಹಾತ್ಮ ಗಾಂಧೀಜಿಯರು ಅವಳ ರಂಗೂನಿನಲ್ಲಿದ್ದ ಮನೆಗೆ ಬಂದಿದ್ದರು. ಅವಳ ಮನೆಯವರೆಲ್ಲರೂ ಗಾಂಧೀಜಿಯವರನ್ನು ಭೇಟಿ ಮಾಡಲು ಅಲ್ಲಿ ನೆರೆದಿದ್ದರು. ಆ ವೇಳೆಗಾಗಲೇ ಗಾಂಧೀಜಿಯವರು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ರೂಪವನ್ನು ನೀಡಿದ್ದರು. ಸರಸ್ವತಿಯ ಕುಟುಂಬದವರೆಲ್ಲ ಉತ್ಸಾಹದಿಂದ ಗಾಂಧೀಜಿಗೆ ತಮ್ಮನ್ನು ಪರಿಚಯಿಸಿಕೊಳ್ಳುತ್ತಿದ್ದರು. ಆದರೆ ಪುಟ್ಟ ಸರಸ್ವತಿ ಮಾತ್ರ ಎಲ್ಲೂ ಕಾಣುತ್ತಿರಲಿಲ್ಲ. ಗಾಂಧೀಜಿ ಸೇರಿದಂತೆ ಎಲ್ಲರೂ ಅವಳಿಗಾಗಿ ಹುಡುಕಾಡುತ್ತಾರೆ. ಅವಳು ಉದ್ಯಾನದಲ್ಲಿ ಬಂದೂಕು ಹಿಡಿದು ತನ್ನ ಗುರಿಯನ್ನು ಪರೀಕ್ಷಿಸುತ್ತಿರುವುದು ಕಾಣುತ್ತದೆ.
ಪುಟ್ಟ ಬಾಲಕಿಯ ಕೈಯಲ್ಲಿ ಬಂದೂಕನ್ನು ನೋಡಿದ ಅಹಿಂಸೆಯ ಪೂಜಾರಿ ಗಾಂಧೀಜಿಯವರು ಒಂದು ಕ್ಷಣ ದಂಗಾಗುತ್ತಾರೆ. ಗಾಂಧೀಜಿ ಅವಳನ್ನು ಪ್ರಶ್ನಿಸುತ್ತಾರೆ, ಮಗು ನಿನಗೇಗೆ ಈ ಬಂದೂಕು? ಎಂದು.
ಸರಸ್ವತಿ ತಡಮಾಡದೇ ಹೇಳುತ್ತಾಳೆ, ಬ್ರಿಟಿಷರನ್ನು ಹೊಡೆದು ಸಾಯಿಸುವುದಕ್ಕೆ ಎಂದು. ಯಾರು ಪ್ರಶ್ನೆ ಕೇಳಿದವರು ಎಂಬುದನ್ನೂ ಅವಳು ತಿರುಗಿ ನೋಡುವುದಿಲ್ಲ.
ಇದಕ್ಕೆ ಹಿಂಸೆ ಉತ್ತರವಲ್ಲ ಮಗು. ನಾವು ಬ್ರಿಟಿಷರ ವಿರುದ್ಧ ಅಹಿಂಸೆ. ಮಾರ್ಗದಿಂದ ಹೋರಾಟ ನಡೆಸುತ್ತಿದ್ದೇವೆ. ನೀನು ಕೂಡ ಆ ಮಾರ್ಗದಲ್ಲಿಯೇ ಸಾಗಬೇಕು ಎಂದು ಗಾಂಧೀಜಿ ಹೇಳುತ್ತಾರೆ.
ನಾವು ನಮ್ಮನ್ನು ಯಾರಾದರು ಕೊಳ್ಳೆ ಹೊಡೆಯುವುದಕ್ಕೆ ಬಂದರೆ ಅವರ ಮೇಲೆ ಗುಡುಹಾರಿಸುವುದಿಲ್ಲವೆ? ಅವರನ್ನು ಕೊಲ್ಲುವುದಿಲ್ಲವೆ? ಬ್ರಿಟಿಷರು ಭಾರತವನ್ನು ಕೊಳ್ಳೆಹೊಡೆಯುತ್ತಿದ್ದಾರೆ. ನಾನು ದೊಡ್ಡವಳಾದ ಮೇಲೆ ಕನಿಷ್ಠ ಒಬ್ಬನಾದರೂ ಬ್ರಿಟಿಷರವನನ್ನು ಗುಂಡಿಟ್ಟು ಕೊಲ್ಲುವೆ ಎಂದು ಸರಸ್ವತಿ ನಿರ್ಧಾರದ ಧ್ವನಿಯಲ್ಲಿ ಹೇಳುತ್ತಾಳಂತೆ.
ರಾಜಮಣಿ ದೊಡ್ಡವಳಾಗುತ್ತಿದ್ದಂತೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಮತ್ತು ಅವರ ಇಂಡಿಯನ್ ನ್ಯಾಶನಲ್ ಆರ್ಮಿಯ ಬಗ್ಗೆ ಬಹಳಷ್ಟು ಕೇಳಿರುತ್ತಾಳೆ. ಅವಳ ಹೃದಯದಲ್ಲಿ ದೇಶಭಕ್ತಿಯು ತುಂಬಿಕೊಂಡಿದ್ದರಿಂದ ರಾಷ್ಟ್ರೀಯವಾದಿ ಚಳವಳಿಯನ್ನು ಅವಳು ಸದಾ ಬೆಂಬಲಿಸುತ್ತ ಬಂದಳು. ನೇತಾಜಿಯವರ ಬೆಂಕಿಯಂಥ ಮಾತುಗಳು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯಳಾಗಿ ದುಮುಕಬೇಕೆಂಬ ಅವಳ ತುಡಿತವನ್ನು ಹೆಚ್ಚಿಸಿತು. ಬೋಸ್ ಅವರು ರಂಗೂನಿಗೆ ಭೇಟಿ ನೀಡಿದಾಗ ಅವಳಿಗೆ ಕೇವಲ 16 ವರ್ಷ. ದ್ವಿತೀಯ ಮಹಾಯುದ್ಧ ತನ್ನ ತುರೀಯಾವಸ್ಥೆಯಲ್ಲಿದ್ದ ಆ ಕಾಲದಲ್ಲಿ ಅವರು ನಿಧಿ ಸಂಗ್ರಹಕ್ಕಾಗಿ ಮತ್ತು ಐಎನ್‌ಎಗೆ ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲು ಆಗಮಿಸಿದ್ದರು. ಬ್ರಿಟಿಷರಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಬ್ಬರೂ ಶಸ್ತ್ರವನ್ನು ಹಿಡಿಯಬೇಕು ಎಂದು ನೇತಾಜಿ ಕರೆ ನೀಡಿದರು. ಅವರ ಭಾಷಣದಿಂದ ಪ್ರಭಾವಿತಳಾದ ರಾಜಮಣಿ ತನ್ನ ಬೆಲೆಬಾಳುವ ಬಂಗಾರದ, ವಜ್ರದ ಎಲ್ಲ ಆಭರಣಗಳನ್ನು ತೆಗೆದು ಐಎನ್‌ಎಗೆ ಕೊಟ್ಟುಬಿಟ್ಟಳು.
ರಾಜಮಣಿಯ ಈ ಅಪರೂಪದ ಕೃತ್ಯವು ನೇತಾಜಿಯವರ ಗಮನವನ್ನು ಸೆಳೆಯದೆ ಇರಲಿಲ್ಲ. ಅವಳು ಯಾರೆಂದು ವಿಚಾರಿಸಿದಾಗ, ರಂಗೂನಿನ ಶ್ರೀಮಂತ ಭಾರತೀಯ ಕುಟುಂಬದ ಮಗಳು ಎಂಬುದು ಅವರಿಗೆ ತಿಳಿಯುತ್ತದೆ. ಮರುದಿನ ಅವರು ರಾಜಮಣಿಯ ಮನೆಗೆ ಅವಳು ನೀಡಿದ ಒಡವೆಗಳನ್ನು ಹಿಂತಿರುಗಿಸಲು ಬರುತ್ತಾರೆ. ಅವಳು ಬಾಲಕಿ. ಮುಗ್ಧತೆಯಿಂದ ತನ್ನೆಲ್ಲ ಆಭರಣಗಳನ್ನು ನೀಡಿದ್ದಾಳೆ. ಕಾರಣ ಅವುಗಳನ್ನು ಹಿಂತಿರುಗಿಸಲು ಬಂದಿದ್ದೇನೆ ಎಂದು ನೇತಾಜಿ ಅವಳ ತಂದೆಗೆ ಹೇಳುತ್ತಾರೆ. ಅವಳ ತಂದೆ ಕೂಡ ಸ್ವಾತಂತ್ರ್ಯ ಹೋರಾಟಗಾರರಾದುದರಿಂದ ಅವರು ನೇತಾಜಿಯವರಿಗೆ ದೊಡ್ಡ ಪ್ರಮಾಣದಲ್ಲಿ ನೆರವನ್ನು ನೀಡುತ್ತಾರೆ. ರಾಜಮಣಿಯು ಮುಗುಳ್ನಗುತ್ತ, ಇದು ನನ್ನ ತಂದೆಯದಲ್ಲ. ಅವೆಲ್ಲವೂ ನನ್ನವು. ಅವನ್ನು ನಾನು ಮರಳಿ ಪಡೆಯುವುದಿಲ್ಲ ಎಂದು ಹೇಳಿದಳು.
ಇದೇ ಭೇಟಿಯಲ್ಲಿ ಅವಳು ನೇತಾಜಿಯವರಿಗೆ ತನ್ನನ್ನು ಅವರ ಸೇನೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡುತ್ತಾಳೆ. ಅವಳ ಮನವೊಲಿಸುವ ಸಾಮರ್ಥ್ಯ ಎಷ್ಟು ಪರಿಣಾಮಕಾರಿಯಾಗಿತ್ತು ಎಂದರೆ ಮರುದಿನವೇ ಬೋಸ್ ಅವರು ಸರಸ್ವತಿ ಮತ್ತು ಅವಳ ನಾಲ್ವರು ಸ್ನೇಹಿತೆಯರನ್ನು ಐಎನ್‌ಎದ ಬೇಹುಗಾರಿಕೆ ವಿಭಾಗಕ್ಕೆ ನೇಮಕ ಮಾಡಿಕೊಂಡರು.
ಇವರೆಲ್ಲ ಹುಡುಗರ ವೇಷವನ್ನು ಧರಿಸಿಕೊಂಡು ಬ್ರಿಟಿಷರ ಸೇನಾ ಶಿಬಿರಗಳಲ್ಲಿ ಮತ್ತುಅಧಿಕಾರಿಗಳ ಮನೆಗಳಲ್ಲಿ ಓಲೆಕಾರನ ಕಲಸವನ್ನು ಗಿಟ್ಟಿಸಿಕೊಂಡರು. ಶತ್ರುನೆಲೆಯಲ್ಲಿ ವೇಷ ಮರೆಸಿಕೊಂಡ ಏಜೆಂಟರಾದ ಇವರು ಸರ್ಕಾರದಿಂದ ಬರುತ್ತಿದ್ದ ಆದೇಶಗಳು ಮತ್ತು ಅವರ ಮಿಲಿಟರಿ ಬೇಹುಗಾರಿಕೆಯ ಸಂದೇಶಗಳನ್ನು ಮಧ್ಯದಲ್ಲಿಯೇ ಒಡೆದು ಓದಿ ಅದರ ಮಾಹಿತಿಯನ್ನು ಐಎನ್‌ಎಗೆ ಒದಗಿಸುತ್ತಿದ್ದರು.
ಹೀಗೆ ಪುರುಷ ವೇಷ ಧರಿಸಿಕೊಂಡಿದ್ದ ಸರಸ್ವತಿಯ ಹೆಸರು ಮಣಿ ಎಂದಾಗಿತ್ತು. ಆಕೆ ಮತ್ತು ಆಕೆಯ ಸ್ನೇಹಿತೆಯರು ಹೆಚ್ಚೂಕಡಿಮೆ ಎರಡು ವರ್ಷಗಳ ವರೆಗೆ ಬ್ರಿಟಿಷರ ಚಲನವಲನದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು. ಏನೇ ಆಗಲಿ ಬ್ರಿಟಿಷರ ಕೈಗೆ ಸಿಕ್ಕಿಬೀಳಬಾರದು ಎಂದು ಅವರಿಗೆ ತಿಳಿಸಲಾಗಿತ್ತು. ಹೀಗಿರುವಾಗ ಅವಳ ಸ್ನೇಹಿತೆಯೊಬ್ಬಳನ್ನು ಒಬ್ಬ ಬ್ರಿಟಿಷರವನು ಹಿಡಿದುಬಿಟ್ಟನು. ಅದರ ಪರಿಣಾಮ ಗೊತ್ತಿದ್ದ ಸರಸ್ವತಿ ತನ್ನ ಗೆಳತಿಯನ್ನು ಹೇಗಾದರೂ ಮಾಡಿ ಬಚಾವು ಮಾಡಬೇಕು ಎಂದು ನಿರ್ಧರಿಸಿದಳು. ಅವಳು ಒಬ್ಬ ನೃತ್ಯಗಾತಿಯ ವೇಷ ಧರಿಸಿ ತನ್ನ ಸ್ನೇಹಿತೆಯನ್ನು ಬಂಧಿಸಿಟ್ಟಲ್ಲಿಗೆ ತೆರಳಿ ಅಲ್ಲಿಯ ಅಧಿಕಾರಿಗಳಿಗೆ ಮಂಕುಬೂದಿ ಎರಚಿ ಸ್ನೇಹಿತೆಯನ್ನು ಬಿಡಿಸಿಕೊಂಡು ಬಂದಳು. ಹೀಗೆ ತಪ್ಪಿಸಿಕೊಂಡು ಬರುವಾಗ ಬ್ರಿಟಿಷರು ಹಾರಿಸಿದ ಗುಂಡು ಸರಸ್ವತಿಯ ಬಲಗಾಲಿಗೆ ತಾಗಿತು. ಕಾಲಿನಿಂದ ರಕ್ತ ಸುರಿಯುತ್ತಿದ್ದರೂ ಸರಸ್ವತಿ ಸ್ನೇಹಿತೆಯರೊಂದಿಗೆ ತಪ್ಪಿಸಿಕೊಂಡಳು. ಬ್ರಿಟಿಷರು ಅವರನ್ನು ಹುಡುಕಲು ಎಲ್ಲ ಕಡೆ ಚದುರಿಕೊಂಡಾಗ ಇವರು ಮೂರು ದಿನ ಮರವೊಂದರ ಮೇಲೆ ತಂಗಿದ್ದರು.
ಈ ಗುಂಡೇಟು ಅವಳನ್ನು ಜೀವನಪೂರ್ತಿ ಕುಂಟುವ ಹಾಗೆ ಮಾಡಿತು. ಈ ಬಗ್ಗೆ ರಾಜಮಣಿಗೆ ಹೆಮ್ಮೆಯಿತ್ತು. ಐಎನ್‌ಎ ಗೂಢಚಾರಳಾಗಿ ಕಾರ್ಯನಿರ್ವಹಿಸಿದ ರೋಚಕ ದಿನಗಳ ನೆನಪನ್ನು ಇದು ಜೀವಂತವಾಗಿಟ್ಟಿತ್ತು. ಬ್ರಿಟಿಷರ ಕೈಯಿಂದ ಪಾರಾಗಿ ಬಂದ ಸಾಹಸ ನೇತಾಜಿಯವರ ಮೆಚ್ಚುಗೆಯನ್ನು ಗಳಿಸಿತ್ತು. ಜಪಾನಿನ ಚಕ್ರವರ್ತಿಯು ಅವಳಿಗೆ ತನ್ನ ಕೈಯಾರೆ ಪದಕವನ್ನು ನೀಡಿದ್ದನು. ಐಎನ್‌ಎದ ಝಾನ್ಸಿ ರಾಣಿ ಬ್ರಿಗೇಡ್‌ನಲ್ಲಿ ಅವಳಿಗೆ ಲೆಫ್ಟಿನಂಟ್ ಶ್ರೇಣಿಯ ಹುದ್ದೆಯನ್ನು ನೀಡಲಾಗಿತ್ತು. ಮಹಾಯುದ್ದ ಮುಗಿದ ಬಳಿಕ ಐಎನ್‌ಎ ವಿಸರ್ಜನೆಯಾಯಿತು. ಸರಸ್ವತಿ ಮತ್ತು ಇತರ ಐಎನ್‌ಎ ಸದಸ್ಯರು ಭಾರತಕ್ಕೆ ಮರಳಿದರು. ರಾಜಮಣಿ ಕುಟುಂಬವು ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗಮಾಡಿದ್ದರೂ ಸ್ವಾತಂತ್ರ್ಯದ ಬಳಿಕ ಅವರ ಸ್ಥಿತಿ ಉತ್ತಮವಾಗೇನು ಇರಲಿಲ್ಲ. ಈ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಚೆನ್ನೈನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಒಂದು ಕೋಣೆಯ ಅಪಾರ್ಟ್‌ಮೆಂಟಿನಲ್ಲಿ ವಾಸಿಸುತ್ತಿದ್ದಳು. ಆ ಕೋಣೆ ತುಂಬ ಸುಭಾಷ್‌ಚಂದ್ರ ಬೋಸ್ ಅವರ ಹಲವು ಫೋಟುಗಳು ಇದ್ದವು. ಕೆಲವು ವರ್ಷಗಳ ಹಿಂದೆ ತಮಿಳುನಾಡು ಸರ್ಕಾರವು ಅವಳಿಗೊಂದು ಮನೆಯನ್ನು ಹೌಸಿಂಗ್ ಕಾಲನಿಯಲ್ಲಿ ನೀಡಿತ್ತು. ತನ್ನ ವೃದ್ಧಾಪ್ಯದಲ್ಲೂ ರಾಜಮಣಿ ಹೊಲಿಗೆಯವರ ಬಳಿ ತೆರಳಿ ಚೂರುಪಾರು ಚಿಂದಿ ಬಟ್ಟೆಗಳನ್ನು ತಂದು ಅವರಿಂದ ಉಡುಪು ಸಿದ್ಧಮಾಡಿ ಅನಾಥರಿಗೆ, ವೃದ್ಧಾಶ್ರಮಗಳಲ್ಲಿದ್ದವರಿಗೆ ನೀಡುತ್ತಿದ್ದಳು. 2006ರ ಸುನಾಮಿಯ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನು ಪರಿಹಾರ ನಿಧಿಗೆ ಕೊಟ್ಟುಬಿಟ್ಟಳು. ಅವಳು ತನ್ನ ಬಿರುದು ಬಾವಲಿಗಳನ್ನು ಒಡಿಶಾದ ಕಟಕ್‌ನಲ್ಲಿರುವ ಸುಭಾಷ್‌ಚಂದ್ರ ಬೋಸ್ ಅವರ ಜನ್ಮಸ್ಥಳದ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ನೀಡಿದಳು.
91 ವರ್ಷಗಳ ತುಂಬು ಜೀವನವನ್ನು ನಡೆಸಿದ ಸರಸ್ವತಿ ರಾಜಮಣಿ 2018ರ ಜನವರಿ 13ರಂದು ಹೃದಯಾಘಾತದಿಂದ ನಿಧನಹೊಂದಿದಳು. 2016ರಲ್ಲಿ ಎಪಿಕ್ ವಾಹಿನಿಯ ಅದೃಶ್ಯ ಸರಣಿಯಲ್ಲಿ ರಾಜಮಣಿಯ ಜೀವನಚರಿತ್ರೆಯನ್ನು ಪ್ರಸಾರ ಮಾಡಲಾಗಿತ್ತು. ಯು ಟ್ಯೂಬ್‌ನಲ್ಲಿ ಇವಳ ಕುರಿತು ವೈಸ್ ಆಫ್ ಆ್ಯನ್ ಇಂಡಿಪೆಂಡೆಂಟ್ ಇಂಡಿಯಾ ಎಂಬ ಕಿರುಚಿತ್ರ ಲಭ್ಯವಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.