*ಸ್ಪಷ್ಟ ನಿರ್ಧಾರ ಇಲ್ಲದವರ ಪರಿ ಇದು

ಪ್ರತಿಯೊಬ್ಬರ ಬದುಕಿನಲ್ಲೂ ನಿರ್ಧಾರವನ್ನು ಕೈಗೊಳ್ಳಬೇಕಾದ ಕಾಲ ಬಂದೇ ಬರುತ್ತದೆ. ಆಗ ಯಾವುದು ಸರಿ ಯಾವುದು ಸರಿಯಲ್ಲ ಎಂಬ ದ್ವಂದ್ವ ಎದುರಾಗುತ್ತದೆ. ಯಾವುದನ್ನು ಒಪ್ಪುವುದು ಯಾವುದನ್ನು ಬಿಡುವುದು? ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೂ ಪ್ರೀತಿ ಎನ್ನುವ ಸ್ಥಿತಿ.
ಅದೂ ಇರಲಿ ಇದೂ ಇರಲಿ ಎಂಬ ಡೋಲಾಯಮಾನ ಸ್ಥಿತಿ. ಮನೆಯವರ ಒತ್ತಾಯಕ್ಕೆ ಒಂದು ಮದುವೆ, ಮನಸ್ಸಿನ ಒತ್ತಾಯಕ್ಕೆ ಒಂದು ಮದುವೆ ಮಾಡಿಕೊಂಡ ಇಬ್ಬರು ಹೆಂಡಿರ ಮುದ್ದಿನ ಗಂಡನ ಗೋಳಾಟ ಇದು.
ಆಯ್ಕೆ ಎಲ್ಲರಿಗೂ ಸುಲಭವಾಗಿ ಕರಗತವಾಗುವಂಥದ್ದಲ್ಲ. ಅದಕ್ಕೂ ಒಂದು ಅರ್ಹತೆ ಇರಬೇಕು. ಸರಿಯಾದ ಕಾಲದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ವೈದ್ಯ ರೋಗ ಪತ್ತೆ ಹಚ್ಚಿ ಸರಿಯಾದ ಔಷಧ ನೀಡುವುದಿಲ್ಲವೆ ಅಂಥ ನಿಖರತೆ ಇಲ್ಲಿ ಬೇಕಾಗುತ್ತದೆ.
ಎರಡು ಕುದುರೆ ಸವಾರಿ ಎನ್ನುವುದನ್ನೇ ಹೊಳೆಸಾಲಿನಲ್ಲಿ ಎರಡು ದೋಣಿಯಲ್ಲಿ ಕಾಲಿಡಬೇಡ ಎಂದು ಎಚ್ಚರಿಕೆ ಹೇಳುತ್ತಾರೆ. ಎರಡೂ ದೋಣಿಯಲ್ಲಿ ಕಾಲಿಟ್ಟವನು ನೀರಿನಲ್ಲಿ ಮುಳುಗಿ ಸಾಯುವುದು ಖಂಡಿತ.