ಸಂಶೋಧನೆಯನ್ನು ಗಂಭೀರವಾಗಿ ಸ್ವೀಕರಿಸಿದ ಹೊಸ ತಲೆಮಾರಿನವರಲ್ಲಿ ಡಾ.ಎಫ್.ಟಿ.ಹಳ್ಳಿಕೇರಿಯವರ ಹೆಸರು ಮೊದಲ ಸಾಲಿನಲ್ಲಿಯೇ ಬರುವುದು. ಡಾ.ವಿವೇಕ ರೈ ಅವರು ಹೇಳಿರುವಂತೆ ಕರ್ನಾಟಕದಲ್ಲಿ ಹಸ್ತಪ್ರತಿ ಮತ್ತು ಗ್ರಂಥಸಂಪಾದನ ಅಧ್ಯಯನಗಳು ಅವಗಣಿತವಾದ ಆಧುನಿಕ ಕಾಲಘಟ್ಟದಲ್ಲಿ ತಮ್ಮ ತಾರುಣ್ಯದ ಕಾಲದಲ್ಲೇ ‘ಜನಪ್ರಿಯತೆ ಇಲ್ಲದ’ ಈ ಕ್ಷೇತ್ರಗಳಿಗೆ ತಮ್ಮನ್ನು ತೆತ್ತುಕೊಂಡು ನೋಂಪಿಯಂತೆ ಕಾಯಕದಲ್ಲಿ ತೊಡಗಿ, ನಲುವತ್ತಕ್ಕೂ ಹೆಚ್ಚು ವಿದ್ವತ್ ಹೊತ್ತಗೆಗಳಿಗೆ ತಮ್ಮ ಅಂಕಿತವನ್ನು ಹಾಕಿದವರು ಹಳ್ಳಿಕೇರಿ. ಇದೀಗ ಅವರ ಎರಡು ಕೃತಿಗಳು ಬಂದಿವೆ. ‘ಕಂಠ ಪತ್ರ ೩’ ಅವರ ಬಹುಶಿಸ್ತೀಯ ಅಧ್ಯಯನ ಲೇಖನಗಳ ಸಂಕಲನವಾದರೆ ‘ಕನಕ ವಿಜಯ ಪುರಾಣ’ವು ಪ್ರಭಾನಂದ ಪಂಡಿತ ಕವಿಯ ಕಾವ್ಯದ ಸಂಪಾದನೆಯಾಗಿದೆ. ಕಂಠಪತ್ರವು ಈ ಹಿಂದೆ ಅವರು ಪ್ರಕಟಿಸಿದ ಅದೇ ಶೀರ್ಷಿಕೆಯ ಎರಡು ಕೃತಿಗಳ ಮುಂದುವರಿಕೆಯಾಗಿದೆ. ಇದರಲ್ಲಿ ೩೨ ಸಂಪ್ರಬಂಧಗಳಿವೆ. ಇವನ್ನು ಹಳ್ಳಿಕೇರಿಯವರು ನಾಲ್ಕು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಹಸ್ತಪ್ರತಿ ಗ್ರಂಥಸಂಪಾದನಶಾಸ್ತ್ರಕ್ಕೆ ಸಂಬಂಧಿಸಿದ ಹತ್ತೊಂಬತ್ತು ಲೇಖನಗಳು ಮೊದಲ ಭಾಗದಲ್ಲಿವೆ, ಹಸ್ತಪ್ರತಿಗಳನ್ನು ಕಲೆಯ ಅಧ್ಯಯನಕ್ಕೆ, ಇತಿಹಾಸದ ಪೂರಕ ದಾಖಲೆಯಾಗಿ, ಸ್ಥಳನಾಮಗಳನ್ನು ಗುರುತಿಸಲು ಹೇಗೆ ಬಳಕೆಮಾಡಿಕೊಳ್ಳಬಹುದು ಎಂಬುದನ್ನು ಅವರು ಉದಾಹರಣೆಗಳೊಂದಿಗೆ ಇಲ್ಲಿ ಚರ್ಚಿಸಿದ್ದಾರೆ. ಮುದ್ರಣಯಂತ್ರವಿಲ್ಲದ ಹಿಂದಿನ ಕಾಲದಲ್ಲಿ ಹಸ್ತಪ್ರತಿ ತಯಾರಿಸಿಕೊಡುವವರದೇ ಒಂದು ಶ್ರಮಜೀವಿ ವರ್ಗವಿತ್ತು. ಅವರ ಇತಿಹಾಸದ ಕುರಿತೂ ಇಲ್ಲಿ ಅರ್ಥಪೂರ್ಣವಾಗಿರುವ ಲೇಖನಗಳಿವೆ. ಗ್ರಂಥಸಂಪಾದಕನ ಮನೋಭಾವದ ಬಗ್ಗೆ ಇಲ್ಲಿ ತಮ್ಮ ಅಭಿಪ್ರಾಯವನ್ನು ಹಳ್ಳಿಕೇರಿಯವರು ದಾಖಲಿಸಿದ್ದಾರೆ. ಕನ್ನಡ ಗ್ರಂಥಸಂಪಾದನಶಾಸ್ತ್ರದ ಇತಿಹಾಸವನ್ನು ಕೆದಕಿದ್ದಾರೆ. ಕರ್ನಾಟಕದ ಕವಿಚರಿತೆಯನ್ನು ಮರುಪರಿಷ್ಕರಣೆ ಮಾಡಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ. ಕೈಫಿಯತ್ತುಗಳ ಮೂಲಕ ವ್ಯಕ್ತಿಯೊಬ್ಬರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಅಪರೂಪದ ಒಂದು ಲೇಖನ ‘ಕೈಫಿಯತ್ತು ಮತ್ತು ಇತರ ದಾಖಲೆಗಳಲ್ಲಿ ದಿವಾನ್ ಪೂರ್ಣಯ್ಯನವರು’. ಹಸ್ತಪ್ರತಿಗಳಲ್ಲಿ ದೊರೆಯುವ ಚಿತ್ರಕಲೆಯು ಹೇಗೆ ಮತಾತೀತವಾಗಿದ್ದವು ಎಂಬುದನ್ನು ಉದಾಹರಣೆಗಳ ಮೂಲಕ ಹೇಳಿದ್ದಾರೆ. ಮಹಿಳೆಯರೂ ಹಸ್ತಪ್ರತಿಗಳನ್ನು ನಕಲು ಮಾಡುತ್ತಿದ್ದರು ಎಂಬುದನ್ನೂ ಇಲ್ಲಿ ದಾಖಲಿಸಿದ್ದಾರೆ. ಎರಡನೆ ಭಾಗದಲ್ಲಿ ಲೌಕಿಕಶಾಸ್ತ್ರದ ಹಸ್ತಪ್ರತಿಗಳನ್ನು ಪರಿಚಯಿಸುವರು. ಇದರಲ್ಲಿ ಕನ್ನಡ ವೈದ್ಯಶಾಸ್ತ್ರದ ಹಸ್ತಪ್ರತಿಗಳು, ಕಾಮಶಾಸ್ತ್ರದ ಹಸ್ತಪ್ರತಿಗಳು, ಸಮಾಧಿಕ್ರಿಯಾಶಾಸ್ತ್ರದ ಹಸ್ತಪ್ರತಿಗಳು, ಯೋಗಶಾಸ್ತ್ರ ಕುರಿತ ಹಸ್ತಪ್ರತಿಗಳು ಹಾಗೂ ಶಕುನಶಾಸ್ತ್ರದ ಹಸ್ತಪ್ರತಿಗಳ ಬಗ್ಗೆ ಅಮೂಲ್ಯ ವಿಚಾರಗಳನ್ನು ಹೇಳಿದ್ದಾರೆ. ಕನ್ನಡ ವೈದ್ಯ ಹಸ್ತಪ್ರತಿಗಳನ್ನು ಅವರು ನರವೈದ್ಯ ಮತ್ತು ಪ್ರಾಣಿ ವೈದ್ಯ ಎಂದು ವಿಂಗಡಿಸುತ್ತಾರೆ. ನರವೈದ್ಯದಲ್ಲಿ ಬಾಲವೈದ್ಯ ಮತ್ತು ಸ್ತ್ರೀವೈದ್ಯ ಎಂದೂ, ಪ್ರಾಣಿ ವೈದ್ಯದಲ್ಲಿ ಗೋವೈದ್ಯ ಅಶ್ವವೈದ್ಯ ಮತ್ತು ಗಜ ವೈದ್ಯ ಎಂದೂ ವಿಂಗಡಿಸುತ್ತಾರೆ. ಮೂರನೆ ಭಾಗದಲ್ಲಿ ನಾಲ್ವರು ಹಸ್ತಪ್ರತಿ-ಗ್ರಂಥಸಂಪಾದನ ವಿದ್ವಾಂಸರ ಬಗ್ಗೆ ಪರಿಚಯಿಸಿರುವರು. ಈ ವಿದ್ವಾಂಸರ ಗ್ರಂಥಸಂಪಾದನ ಶೈಲಿಯನ್ನು ತಿಳಿಸುವರು. ತಮಿಳು ಹಸ್ತಪ್ರತಿ ತಜ್ಞ ಉ.ವೇ.ಶಾಮಿನಾಥೈಯರ್, ಎಚ್.ದೇವೀರಪ್ಪ, ಎನ್.ಬಸವಾರಾಧ್ಯ, ಗೌ.ಮ.ಉಮಾಪತಿಶಾಸ್ತ್ರಿ ಅವರನ್ನು ನೆನೆಯಲೇ ಬೇಕು. ಹಿಂದಿನ ಜ್ಞಾನವನ್ನು ಇಂದಿನ ಪೀಳಿಗೆಗೆ ಉಳಿಕೊಟ್ಟ ಈ ಪ್ರಾಜ್ಞರು ಎಲ್ಲ ರೀತಿಯ ಸಮ್ಮಾನಕ್ಕೆ ಯೋಗ್ಯರೇ ಹೌದು. ಅವರನ್ನು ಇಂದಿನ ಪೀಳಿಗೆ ಪರಿಚಯಿಸಿದ ಹಳ್ಳಿಕೇರಿಯವರು ಅಭಿನಂದನಾರ್ಹರು. ನಾಲ್ಕನೆ ಭಾಗದಲ್ಲಿ ಹಸ್ತಪ್ರತಿ ಕ್ಷೇತ್ರದಲ್ಲಿ ಈಗಾಗಲೆ ಸಾಧನೆ ಮಾಡಿರುವ ಹಿರಿಯರಾದ ಬಿ.ಎಸ್.ಸಣ್ಣಯ್ಯ, ಸಿ.ಮಹಾದೇವಪ್ಪ, ಜಿ.ಜಿ.ಮಂಜುನಾಥನ್ ಮತ್ತು ಟಿ.ಎನ್.ನಾಗರತ್ನ ಅವರ ಸಂದರ್ಶನಗಳಿವೆ. ಹಸ್ತಪ್ರತಿ ಸಂಪಾದನೆಯ ಹೊಸ ಹೊಳಹುಗಳು ಈ ಸಂದರ್ಶನಗಳಲ್ಲಿ ಓದುಗರಿಗೆ ದೊರೆಯುತ್ತವೆ. ಇಲ್ಲಿಯ ಬರೆಹಗಳನ್ನು ನೋಡಿದಾಗ ಹಳ್ಳಿಕೇರಿಯವರ ಅಧ್ಯಯನ ಬಹುಶಿಸ್ತಿನಿಂದ ಕೂಡಿರುವುದು ಅರಿವಿಗೆ ಬರುತ್ತದೆ. ಅಪರೂಪದ ಲೌಕಿಕ ಹಸ್ತಪ್ರತಿಗಳು ಈ ಆಧುನಿಕ ಯುಗದ ಜ್ಞಾನವರ್ಧನೆಗೆ ನೆರವಾಗುವುದರಲ್ಲಿ ಸಂದೇಹವೇ ಇಲ್ಲ. ಹಳ್ಳಿಕೇರಿಯವರ ಅಧ್ಯಯನ ಸಮಾಜಕ್ಕೂ ಉಪಯುಕ್ತವಾದ್ದು. ಅವರ ಎರಡನೆಯ ಕೃತಿ ಕನಕ ವಿಜಯ ಪುರಾಣವು ಪ್ರಭಾನಂದ ಪಂಡಿತ ಕವಿಯದು. ಇವರು ಕಳೆದ ಶತಮಾನದಲ್ಲಿಯೇ ಇದ್ದವರು. ಕನಕದಾಸರ ಬದುಕಿನ ಬಗ್ಗೆ ಹದಿನೆಂಟು ಸಂಧಿಗಳಲ್ಲಿ ಭಾಮಿನಿ ಷಟ್ಪದಿಯಲ್ಲಿ ಅವರು ಈ ಕೃತಿಯನ್ನು ರಚಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಈ ಕವಿಯ ಮೂಲ ಹೆಸರು ಬಸವಲಿಂಗ ಎಂದು. ಈ ಕೃತಿ ರಚನೆಯಾಗಿದ್ದು ೧೯೮೭ರಲ್ಲಿ. ಹಳೆಯ ಛಂದಸ್ಸಿನಲ್ಲಿ ಹೊಸ ಕಾಲದಲ್ಲಿ ಕಾವ್ಯವನ್ನು ರಚಿಸಿದ್ದು ಕವಿಯ ಅಗ್ಗಳಿಕೆ. ತುಂಬ ಸರಳವಾದ ಶೈಲಿಯಲ್ಲಿ ಅಷ್ಟಾದಶ ವರ್ಣನೆಗಳನ್ನು ಇಟ್ಟುಕೊಂಡೂ ಯಾವುದೂ ಭಾರವಾಗದಂತೆ ಕಥನದ ನಿರ್ವಣೆಯನ್ನು ಕವಿ ಮಾಡಿದ್ದಾರೆ. ಕನಕದಾಸರ ಅಧ್ಯಯನಕ್ಕೆ ಈ ಕೃತಿ ಒಂದು ಪೂರಕ ದಾಖಲೆಯಾಗಲಿದೆ. ಈ ಎರಡೂ ಕೃತಿಗಳ ಮೂಲಕ ಹಳ್ಳಿಕೇರಿಯವರುವಿದ್ವಾಂಸ ಪರಂಪರೆಯ ಮುಂದುವರಿದ ಕೊಂಡಿಯಾಗಿ ತಮ್ಮನ್ನು ಸ್ಥಾಪಿಸಿಕೊಂಡಿದ್ದಾರೆ. ಪ್ರ: ವಿಕಾಸ ಪ್ರಕಾಶನ, ಹೊಸಪೇಟೆ, ಪುಟಗಳು ೪೧೮/೩೦೮ ಬೆಲೆ ₹ ೪೦೦/೨೫೦