ಈ ದೇಶದ ಕಾನೂನು ಯಾರಿಗೂ ತಮ್ಮ ಸಾವನ್ನು ತಾವೇ ತಂದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಿಲ್ಲ. ಬೇರೆಯವರ ಜೀವವನ್ನು ತೆಗೆಯುವುದು ಹೇಗೆ ಅಪರಾಧವೋ ತಮ್ಮ ಜೀವವನ್ನು ತೆಗೆದುಕೊಳ್ಳುವುದೂ ಅಪರಾಧವೇ. ಇಂಥ ಕಾನೂನಿನ ವ್ಯವಸ್ಥೆ ಇರುವ ದೇಶದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಎನ್ನುವ ಮಾತು ಅಪರಾಧವೇ. ಕಾನೂನಿನ ಪ್ರಕಾರ ಅದು ಶಿಕ್ಷಾರ್ಹ.
ಗಾಂಧೀಜಿಯ ನಾಡಿನಲ್ಲಿ ಉಪವಾಸ ಸತ್ಯಾಗ್ರಹ ಹಾದಿ ತಪ್ಪುತ್ತಿದೆಯೆ ಎಂಬ ಪ್ರಶ್ನೆ ಕಾಡುತ್ತಿದೆ. ಉಪವಾಸ ಸತ್ಯಾಗ್ರಹ ಗಾಂಧೀಜಿಯವರ ದೃಷ್ಟಿಯಲ್ಲಿ ಆತ್ಮಶುದ್ಧಿಯ ಸಾಧನವಾಗಿತ್ತು. ಅವರು ಯಾವುದೇ ಬೇಡಿಕೆ ಇಲ್ಲದೆಯೂ, ಕೆಲವೊಮ್ಮೆ ಪ್ರಾಯಶ್ಚಿತ್ತ ರೂಪದಲ್ಲಿ ಸತ್ಯಾಗ್ರಹವನ್ನು ನಡೆಸುತ್ತಿದ್ದರು. ಗಾಂಧೀಜಿಯ ಮಾರ್ಗದಲ್ಲಿಯೇ ವಿನೋಬಾರವರೂ ಉಪವಾಸವನ್ನು ಮಾಡುತ್ತಿದ್ದರು. ಇದೂ ಕೂಡ ಆತ್ಮಶುದ್ಧಿಯ ಹೇತುವನ್ನು ಹೊಂದಿತ್ತು.
ಸತ್ಯಾಗ್ರಹದ ಮೂಲ ಕಲ್ಪನೆ ಗಾಂಧೀಜಿಯವರಿಗೆ ಹೊಳೆದದ್ದು ದಕ್ಷಿಣ ಆಫ್ರಿಕದಲ್ಲಿ ಅವರು ಇದ್ದಾಗ. ಅದೂ ಅವರ ಮಗ ಹರಿಲಾಲನ ಮೂಲಕ. ಸತ್ಯಾಗ್ರಹಕ್ಕೆ ಹರಿಲಾಲನೇ ಗಾಂಧೀಜಿಯ ಗುರು. ಒಮ್ಮೆ ದಕ್ಷಿಣ ಆಫ್ರಿಕದಲ್ಲಿಯ ಪೊಲೀಸರು ಹರಿಲಾಲನನ್ನು ಬಂಧಿಸುತ್ತಾರೆ. ಹರಿಲಾಲ ಪ್ರತಿಭಟನೆ ಸಾಧನವಾಗಿ ಉಪವಾಸವನ್ನು ಮಾಡುತ್ತಾನೆ. ಆತನ ಉಪವಾಸಕ್ಕೆ ಅಂಜಿದ ಅಲ್ಲಿಯ ಪೊಲೀಸರು ಆತನನ್ನು ಬಿಡುಗಡೆ ಮಾಡುತ್ತಾರೆ. ಇದು ಗಾಂಧೀಜಿಗೆ ಗೊತ್ತಾಗುತ್ತಿದ್ದಂತೆ ಬ್ರಿಟಿಷರ ವಿರುದ್ಧ ಹೋರಾಡುವುದಕ್ಕೆ ಬಲವಾದ ಅಸ್ತ್ರವೊಂದು ಅವರಿಗೆ ಗೋಚರಿಸುತ್ತದೆ. ಅದನ್ನೇ ಅವರು ಮುಂದೆ ದಕ್ಷಿಣ ಆಫ್ರಿಕದಲ್ಲಿ ಯಶಸ್ವಿಯಾಗಿ ಅನುಸರಿಸುತ್ತಾರೆ. ಭಾರತಕ್ಕೆ ಮರಳಿದಾಗ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಅವರು ಅದನ್ನು ಬಳಸುತ್ತಾರೆ. ಹಾಗೆಂದು ಗಾಂಧೀಜಿಯವರು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡಿ ಬ್ರಿಟಿಷರನ್ನು ಮಣಿಸಲು ನೋಡಲಿಲ್ಲ. ಅವರು ಉಪವಾಸವನ್ನು ಆರಂಭಿಸುವ ಮೊದಲೇ ಎಂಟು ದಿನಗಳ ಉಪವಾಸವೋ, 21 ದಿನಗಳ ಉಪವಾಸವೋ ಎಂಬುದನ್ನು ಪ್ರಕಟಿಸಿಬಿಡುತ್ತಿದ್ದರು. ಉಪವಾಸ ಮಾಡಿ ಪ್ರಾಣ ಬಿಡುವುದು ಅವರ ಅಜೆಂಡಾದಲ್ಲಿ ಇರಲಿಲ್ಲ.
ಬ್ರಿಟಿಷ್ ಆಡಳಿತದ ಭಾರತದಲ್ಲಿ ಗಾಂಧೀಜಿ ಬೇಡಿಕೆ ಈಡೇರಿಕೆಗಾಗಿ ಸತ್ಯಾಗ್ರಹವನ್ನು ಮಾತ್ರವೇ ಬಳಸಿಕೊಳ್ಳಲಿಲ್ಲ. ಬ್ರಿಟಿಷರ ವಿರುದ್ಧ ಅವರು ವಿವಿಧ ರೀತಿಯ ಹೋರಾಟಗಳನ್ನು ಮಾಡಿದರು. ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಹೀಗೆ ಅನೇಕ. ಉಪವಾಸ ಸತ್ಯಾಗ್ರಹವನ್ನು ಅವರು ಪ್ರಾಯಶ್ಚಿತ್ತಕ್ಕಾಗಿ ಮಾಡಿದ್ದೇ ಹೆಚ್ಚು. ಸ್ವಾತಂತ್ರ್ಯ ಸಿಕ್ಕ ಬಳಿಕವೂ ಅವರು ಹಿಂದೂ ಮುಸ್ಲಿಂ ಹತ್ಯೆಗಳನ್ನು ಕಂಡು ಮನನೊಂದು ಉಪವಾಸ ಮಾಡಿದ್ದರು. ಇದು ಆತ್ಮಶುದ್ಧಿಗಾಗಿ ಎಂದು ಹೇಳಿದ್ದರು.
ಗಾಂಧಿ ನಂತರದ ದಿನಗಳಲ್ಲಿ ಉಪವಾಸವು ಸರ್ಕಾರವನ್ನು ಮಣಿಸುವ ಸಾಧನವಾಗಿ ರಾಜಕೀಯ ಅಸ್ತ್ರವಾಗಿ ಬಳಕೆಯಾಗತೊಡಗಿತು. ಸತ್ಯಾಗ್ರಹ ನಡೆಸಿ ತಮ್ಮ ಜೀವವನ್ನು ಬಿಟ್ಟವರಲ್ಲಿ ಪ್ರಮುಖರು ತೆಲುಗು ಭಾಷಿಕರಿಗಾಗಿ ಪ್ರತ್ಯೇಕ ರಾಜ್ಯವನ್ನು ಕೋರಿ ಉಪವಾಸ ನಡೆಸಿದ ಪೊಟ್ಟಿ ಶ್ರೀರಾಮುಲು. ಮದ್ರಾಸ್ ರಾಜ್ಯದಿಂದ ತೆಲುಗು ರಾಜ್ಯವನ್ನು ಬೇರೆ ಮಾಡಬೇಕು, ಆಂಧ್ರ ಕರಾವಳಿ ಮತ್ತು ರಾಯಲ್್ಸೀಮಾ ಪ್ರದೇಶವನ್ನು ಸೇರಿಸಿಕೊಂಡು ಪ್ರತ್ಯೇಕ ಆಂಧ್ರಪ್ರದೇಶವನ್ನು ರಚಿಸಬೇಕು ಎಂದು ಆಂಧ್ರ ಚಳವಳಿಯ ನೇತೃತ್ವವನ್ನು ವಹಿಸಿದ್ದ ಪೊಟ್ಟಿ ಶ್ರೀರಾಮುಲು 1952ರ ಅಕ್ಟೋಬರ್ 19ರಂದು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಡಿಸೆಂಬರ್ 15ರಂದು ಅವರು ಕೊನೆಯುಸಿರೆಳೆದರು. ಇವರ ಸಾವಿನ ಬೆನ್ನಹಿಂದೆಯೇ ಆಂಧ್ರಪ್ರದೇಶವು ಹೊತ್ತಿ ಉರಿಯಲಾರಂಭಿಸಿತು. ಭಾಷಾವಾರು ಪ್ರಾಂತ ರಚನೆಗೆ ಪೊಟ್ಟಿ ಶ್ರೀರಾಮುಲು ಅವರ ಪ್ರಾಣಾರ್ಪಣೆಯು ಕಾರಣವಾಯಿತು. ಬಳಿಕ ಜವಾಹರಲಾಲ್ ನೆಹರು ಅವರು ಕರಾವಳಿ ಆಂಧ್ರ ಮತ್ತು ರಾಯಲ್ ಸೀಮೆಯ 11 ಜಿಲ್ಲೆಗಳನ್ನು ಒಳಗೊಂಡ ಆಂಧ್ರ ರಾಜ್ಯವನ್ನು 1953ರ ಅಕ್ಟೋಬರ್ 1ರಂದು ಘೋಷಿಸಿದರು. ಭಾರತೀಯ ದಂಡಸಂಹಿತೆಯ ಅಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆತ್ಮಹತ್ಯೆಯ ಪ್ರಯತ್ನವೆಂಬ ಅಪರಾಧವಾಗುತ್ತದೆ. ಸತ್ಯಾಗ್ರಹಿಯ ಆರೋಗ್ಯ ವಿಷಮಿಸಿದಾಗ ಸರ್ಕಾರ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಿ ಜೀವರಕ್ಷಕ ಔಷಧಗಳನ್ನು ನೀಡಿ ಅವರ ಪ್ರಾಣವನ್ನು ಉಳಿಸುತ್ತದೆ.
ಉಪವಾಸ ಮಾಡಿ ಪ್ರಾಣತ್ಯಾಗ ಮಾಡಿದವರ ಇನ್ನೊಂದು ಉದಾಹರಣೆ ಐರಿಶ್ ರಿಪಬ್ಲಿಕ್ ಆರ್ಮಿಯವರದು. 1981ರ ಸಮಯ. ಇಂಗ್ಲೆಂಡಿನಲ್ಲಿ ಮಾರ್ಗರೆಟ್ ಥ್ಯಾಚರ್ ಪ್ರಧಾನಿಯಾಗಿದ್ದರು. ಬ್ರಿಟಿಷ್ ಪಡೆಗಳಿಂದ ಬಂಧನಕ್ಕೆ ಒಳಗಾಗಿದ್ದ ಹತ್ತು ಜನ ಕ್ರಾಂತಿಕಾರಿಗಳು ಐದು ಮೂಲಭೂತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಮ್ಮ ಉಪವಾಸವನ್ನು ಆರಂಭಿಸಿದ್ದರು. ತಮಗೆ ರಾಜಕೀಯ ಕೈದಿಗಳ ಸ್ಥಾನಮಾನವನ್ನು ನೀಡಬೇಕು, ತಾವು ಕೈದಿಗಳ ಸಮವಸ್ತ್ರವನ್ನು ಧರಿಸದೆ ಇರುವುದಕ್ಕೆ ಅವಕಾಶ ಇರಬೇಕು, ಕಾರಾಗೃಹದ ಕೆಲಸದಿಂದ ನಮಗೆ ವಿನಾಯ್ತಿ ಇರಬೇಕು, ಇತರ ರಾಜಕೀಯ ಕೈದಿಗಳ ಜೊತೆ ಮುಕ್ತವಾಗಿ ಬೆರೆಯುವುದಕ್ಕೆ ಅವಕಾಶ ಇರಬೇಕು, ತಮ್ಮದೇ ಸ್ವಂತ ಸಂಘಟನೆ ಮಾಡಿಕೊಳ್ಳಲು ಅವಕಾಶ ಇರಬೇಕು,
ಮನರಂಜನೆಗೆ ಅವಕಾಶ ಇರಬೇಕು; ಪ್ರತಿ ವಾರ ಪತ್ರ ಮತ್ತು ಪಾರ್ಸಲ್ ಪಡೆಯುವುದಕ್ಕೆ ಅವಕಾಶ ಬೇಕು ಎಂಬ ಸಾಮಾನ್ಯ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಉಕ್ಕಿನ ಮಹಿಳೆ ಎಂದೇ ಹೆಸರಾದ ಮಾರ್ಗರೆಟ್ ಥ್ಯಾಚರ್ ಈ ಬೇಡಿಕೆಗಳಿಗೆ ಸೊಪ್ಪುಹಾಕಲಿಲ್ಲ. ಹತ್ತೂ ಜನ ಸತ್ಯಾಗ್ರಹಿಗಳು ಸಾವನ್ನಪ್ಪಿದರು. ಜಗತ್ತಿನಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾದರೂ ಥ್ಯಾಚರ್ ಈ ಬೇಡಿಕೆಗಳನ್ನು ಒಪ್ಪಲೇ ಇಲ್ಲ. ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಬೇಡಿಕೆ ಈಡೇರಿಕೆಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಎಷ್ಟು ಸರಿ? ನಮ್ಮದೇ ಸರ್ಕಾರ, ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳೇ ನಮ್ಮ ಸಂವಿಧಾನಕ್ಕೆ ಅನುಗುಣವಾಗಿ ನಡೆಸುವ ಆಡಳಿತ. ಹೀಗಿರುವಾಗ ಸಂಸತ್ತಿನ ಹೊರಗೆ ಬೇಡಿಕೆ ಈಡೇರಿಕೆಗೆ ನಡೆಸುವ ಆಮರಣಾಂತ ಉಪವಾಸ ಎಷ್ಟರಮಟ್ಟಿಗೆ ನೈತಿಕವಾಗಿ ಸರಿ? ಸಮಸ್ಯೆ ತೀರ ಗಂಭೀರವಾಗಿದ್ದರೆ ಸರ್ಕಾರ ಅದರ ಕಡೆಗೆ ತೀವ್ರವಾಗಿ ಗಮನ ಹರಿಸುವಂತೆ ಮಾಡುವುದಕ್ಕೆ ಉಪವಾಸವನ್ನು ಸಾಧನವನ್ನಾಗಿ ಬಳಸಿಕೊಳ್ಳಬಹುದು. ಉಪವಾಸ ಮಾಡಿ ಸಾಯುತ್ತೇನೆನ್ನುವುದು ನಮ್ಮ ಸಂವಿಧಾನಕ್ಕೆ ನಾವೇ ಅಗೌರವ ತೋರಿಸಿದಂತೆ. ಹಗ್ಗವನ್ನು ಹರಿಯುವ ವರೆಗೆ ಜಗ್ಗಬಾರದು, ಕೋಲನ್ನು ಮುರಿಯುವ ವರೆಗೆ ಬಗ್ಗಿಸಬಾರದು. ಇದು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವವರೆಲ್ಲ ಅರಿಯಬೇಕು. ಇಷ್ಟೆಲ್ಲ ಏಕೆ ಹೇಳಬೇಕಾಯಿತು ಎಂದರೆ ಸ್ವಾಮಿ ನಿಗಮಾನಂದರ ಸಾವು. ಗಂಗಾ ನದಿಕಣಿವೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ನಡೆಸುವುದನ್ನು ನಿಲ್ಲಿಸಬೇಕು, ಗಂಗೆಯ ಒಡಲು ಶುದ್ಧವಾಗಿರಬೇಕು ಎಂದು ಒತ್ತಾಯಿಸಿ ಅವರು ಉಪವಾಸ ಮಾಡಿದ್ದರು.
ಸ್ವಾಮಿ ನಿಗಮಾನಂದರ ಹೆಸರು ಅವರು ಸಾಯುವುದಕ್ಕೆ ಮೊದಲು ಉತ್ತರಾಖಂಡದ ಈಚೆ ಕೇಳಿರಲಿಲ್ಲ. ಬಿಹಾರದ ಪಾಟ್ನಾದಿಂದ 200 ಕಿ.ಮೀ. ದೂರದಲ್ಲಿರುವ ದರ್ಬಾಂಗ್ ಜಿಲ್ಲೆಯ ಲಡಾರಿ ಗ್ರಾಮದಲ್ಲಿ ಹುಟ್ಟಿದ ನಿಗಮಾನಂದ ದ್ವಿತೀಯ ಪಿಯುಸಿ ವರೆಗೆ ಓದಿದ್ದರು. ಆಗಲೇ ಅವರಿಗೆ ಸನ್ಯಾಸದ ಕಡೆ ಒಲವು ಉಂಟಾಗಿ 17ನೆ ವಯಸ್ಸಿಗೇ ಸನ್ಯಾಸವನ್ನು ಸ್ವೀಕರಿಸಲು ಮನೆ ಬಿಟ್ಟು ತೆರಳುತ್ತಾರೆ. ಶಾಂತಿ ಮತ್ತು ಸತ್ಯದ ಶೋಧಕ್ಕಾಗಿ ಹೊರಟಿದ್ದೇನೆ ಎಂದುಅವರು ಮನೆಯಲ್ಲಿ ಪತ್ರಬರೆದಿಟ್ಟು ಹೋಗಿದ್ದರು. ಇದು 1995ರ ಅಕ್ಟೋಬರ್್ನಲ್ಲಿ ನಡೆದ ಘಟನೆ. ಮೊನ್ನೆ ಅವರು ನಿಧನರಾದಾಗ ಅವರ ವಯಸ್ಸು ಕೇವಲ 36 ವರ್ಷ. ನಿಗಮಾನಂದರು ಈ ಮೊದಲೂ ಸುದೀರ್ಘ ಅವಧಿಯ ವರೆಗೆ ಉಪವಾಸವನ್ನು ಮಾಡಿದ್ದರು. ಅದು ಕೂಡ ಗಂಗೆಯ ಶುದ್ಧಿಗಾಗಿಯೇ. ಆಗ ಉತ್ತರಾಖಂಡ ಸರ್ಕಾರ ಮಣಿದಿತ್ತು. ಅಕ್ರಮ ಗಣಿಗಾರಿಕೆಯನ್ನು ಗಂಗೆಯ ತಟದಲ್ಲಿ ನಿಷೇಧಿಸಿತ್ತು. ನಿಗಮಾನಂದರಲ್ಲದೆ ಅವರದೇ ಆಶ್ರಮದ ಇನ್ನೊಬ್ಬ ಸ್ವಾಮೀಜಿ ದಯಾನಂದರೂ ಎರಡು ಬಾರಿ ಉಪವಾಸ ಮಾಡಿ ಸರ್ಕಾರ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಗಂಗೆಯ ಶುದ್ಧಿಯಂಥ ಉದಾತ್ತ ಉದ್ದೇಶವನ್ನು ಇಟ್ಟುಕೊಂಡು ಆಮರಣಾಂತ ಉಪವಾಸವನ್ನು ಒಬ್ಬ ಸನ್ಯಾಸಿ ಮಾಡುತ್ತಿದ್ದಾರೆ ಎಂದಾಗ ಅದು ಮಾಧ್ಯಮದವರ ಕಣ್ಣು ತಪ್ಪಿಸಿ ಹೇಗೆ ಉಳಿಯಿತು? ಸುದ್ದಿಗಾಗಿ ಹಪಹಪಿಸುತ್ತಿರುವ ಇಂದಿನ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್್ಗಾಗಿ ಏನೇನೋ ಕಸರತ್ತನ್ನು ಮಾಡುತ್ತವೆ. ತಾವೇ ವ್ಯಕ್ತಿಗೆ ಬೆಂಕಿ ಹಚ್ಚಿಸುವುದಕ್ಕೂ, ಹತ್ತಾರು ಮಹಡಿಯ ಮೇಲೆ ಏರಿಸುವುದಕ್ಕೂ ಹಿಂದೆಮುಂದೆ ನೋಡುವುದಿಲ್ಲ. ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ್ ಹಿಂದೆ ಬಿದ್ದ ಮಾಧ್ಯಮದವರ ಕಣ್ಣಿಂದ ನಿಗಮಾನಂದರು ಮರೆಯಾದದ್ದು ಹೇಗೆ? ಇದು ಮಾಧ್ಯಮ ವೈಫಲ್ಯ ಎಂದೇ ಹೇಳಬೇಕು. ಆಳುವ ಪಕ್ಷದವರಾಗಲಿ ಪ್ರತಿಪಕ್ಷದವರಾಗಲಿ ನಿಗಮಾನಂದರು ಸಾಯುವ ವರೆಗೂ ಎಚ್ಚೆತ್ತುಕೊಳ್ಳಲಿಲ್ಲ. ರಾಮ್್ದೇವ್ ಚಿಕಿತ್ಸೆಗೆ ದಾಖಲಾದ ಆಸ್ಪತ್ರೆಯಲ್ಲಿಯೇ ನಿಗಮಾನಂದರು ದಾಖಲಾಗಿದ್ದರೂ ಅವರು ಬದುಕುಳಿಯಲಿಲ್ಲ, ಏಕೆ?
ಎಲ್ಲ ಸತ್ಯಾಗ್ರಹಿಗಳೂ ಒಂದು ಮಾತನ್ನು ಗಮನದಲ್ಲಿಟ್ಟುಕೊಳ್ಳಬೇಕು, ನಾವಿರುವುದು ಗಣತಂತ್ರ ವ್ಯವಸ್ಥೆಯಲ್ಲಿ. ಸಂವಿಧಾನ ಬದ್ಧ ನಿಯಮಗಳಿಗೆ ಅನುಗುಣವಾಗಿಯೇ ಕಾರ್ಯಕ್ರಮಗಳು ಜಾರಿಯಾಗಬೇಕು. ಪ್ರತಿಯೊಂದು ಸಮಸ್ಯೆಗೂ ಅನ್ಯಮುಖಗಳೂ ಇರುತ್ತವೆ. ಪ್ರತಿವಾದವನ್ನು ಆಲಿಸುವ, ಎದುರಾಳಿಯನ್ನು ಗೌರವಿಸುವ ಮನಸ್ಥಿತಿಯಲ್ಲಿ ಸತ್ಯಾಗ್ರಹಿ ಇರಬೇಕು. ಜೀವ ಅಮೂಲ್ಯ. ಜೀವವನ್ನು ಉಳಿಸಿಕೊಂಡರೆ ಅನ್ಯಾಯದ ವಿರುದ್ಧ ದನಿ ಎತ್ತುವ ಇನ್ನೂ ಹಲವು ಅವಕಾಶಗಳನ್ನು ಉಳಿಸಿಕೊಂಡಂತೆ. ಕಾರಣ ಸತ್ಯಾಗ್ರಹಿಗಳು ಆಮರಣ ಉಪವಾಸ ಎನ್ನುವ ಬದಲು ತಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಐದು ದಿನವೋ, ಒಂದು ವಾರವೋ, ಇಪ್ಪತ್ತೊಂದು ದಿನವೋ ಉಪವಾಸವನ್ನು ಘೋಷಿಸುವುದು ಒಳ್ಳೆಯದು. ಇಂದಿನ ಪ್ರಬಲ ಮಾಧ್ಯಮ ಪ್ರಚಾರದಿಂದ ಸರ್ಕಾರದ ಮೇಲೆ ಒತ್ತಡವನ್ನು ತರುವುದು ಇದರಿಂದ ಖಂಡಿತ ಸಾಧ್ಯವಾಗುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.