*ಮಾರ್ಗಪ್ರವರ್ತಕರಿಗೆ ಹೀಗೆನ್ನುತ್ತಾರೆ

ಹೇಳಿಕೇಳಿ ಆನೆ ದೊಡ್ಡ ಪ್ರಾಣಿ. ದೊಡ್ಡದನ್ನು ವರ್ಣಿಸುವಾಗಲೆಲ್ಲ ಗಜಗಾತ್ರ ಎಂದು ಹೇಳುವುದು ರೂಢಿ. ಇಂಥ ಆನೆಗೆ ನಡೆಯುವುದಕ್ಕೆ ಯಾರೂ ದಾರಿಯನ್ನು ನಿರ್ಮಿಸಿಕೊಡಬೇಕಾಗಿಲ್ಲ. ಅದು ಯಾವ ದಿಸೆಯಲ್ಲಿ ಹೋಗುತ್ತದೋ ಅಲ್ಲೊಂದು ಹೊಸ ಮಾರ್ಗ ನಿರ್ಮಾಣವಾಗಿಬಿಡುತ್ತದೆ. ಮುಂದೆ ಉಳಿದವರು ಆ ಮಾರ್ಗದಲ್ಲಿಯೇ ನಡೆಯಲು ಆರಂಭಿಸುತ್ತಾರೆ. ಹೀಗಾಗಿ ಆನೆ ನಡೆದುದೇ ಮಾರ್ಗ ಎಂಬ ಮಾತು ಚಾಲನೆಗೆ ಬಂತು.
ಯಾವುದಾದರೂ ಕ್ಷೇತ್ರದಲ್ಲಿ ಬಹು ದೊಡ್ಡ ಸಾಧನೆ ಮಾಡಿದವರು ಯಾರನ್ನೂ ಅನುಕರಿಸುವುದಿಲ್ಲ. ತಮ್ಮ ಮಾರ್ಗವನ್ನು ತಾವೇ ನಿರ್ಮಿಸಿಕೊಂಡು ಮಾರ್ಗಪ್ರವರ್ತಕರು ಎನ್ನಿಸಿಕೊಂಡುಬಿಡುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ಪಂಪ ಚಂಪೂ ಮಾರ್ಗವನ್ನು ನಿರ್ಮಿಸಿಕೊಟ್ಟ. ಗಳಗನಾಥರು ಕಾದಂಬರಿಗೆ ಮಾರ್ಗ ಹಾಕಿಕೊಟ್ಟರು. ಪ್ರಾಸ ತೊರೆದು ಗೋವಿಂದ ಪೈಗಳು ಮಾರ್ಗದರ್ಶಕರಾದರು. ನವ್ಯ ಕವಿತೆಗಳಿಗೆ ಗೋಕಾಕರು, ಅಡಿಗರು ಮಾರ್ಗದರ್ಶಕರಾದರು.
ಅಹಿಂಸಾ ಮಾರ್ಗದ ಹೋರಾಟಕ್ಕೆ ಗಾಂಧೀಜಿ ಮಾರ್ಗಪ್ರವರ್ತಕರಾದರು. ಧರ್ಮಗಳನ್ನು ಹುಟ್ಟುಹಾಕಿದ ಬುದ್ಧ, ಮಹಾವೀರ, ಏಸು ಮೊದಲಾದವರೆಲ್ಲ ಮಾರ್ಗಪ್ರವರ್ತಕರೇ. ಇವರೆಲ್ಲ ತಮ್ಮದೇ ದಾರಿಯಲ್ಲಿ ನಡೆದರು. ಅವರು ನಿರ್ಮಿಸಿದ ದಾರಿಯಲ್ಲಿ ಉಳಿದವರು ನಡೆದರು. ಇಂಥವರಿಗೆಲ್ಲ ಆನೆ ನಡೆದುದೇ ಮಾರ್ಗ ಎಂಬ ಮಾತು ಅಕ್ಷರಶಃ ಅನ್ವಯವಾಗುತ್ತದೆ.
ಆನೆಯ ಪದಾಘಾತದಲ್ಲಿ ಹಳೆಯದೆಲ್ಲ ನಿರ್ನಾಮವಾಗಿ ಹೋಗುತ್ತವೆ ಎಂಬ ಅಂಶವೂ ಮಹತ್ವದ್ದೇ.