ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಕೆ.ಸತ್ಯನಾರಾಯಯಣ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದವರು. ಸೃಜನ ಶಕ್ತಿಯ ಜೊತೆಯಲ್ಲಿ ವಿಮರ್ಶನ ಶಕ್ತಿಯನ್ನೂ ಮೇಳೈಸಿಕೊಂಡವರು. ಅವರ ಹೊಸ ಕೃತಿ `ಅವರವರ ಭವಕ್ಕೆ ಓದುಗರ ಭಕುತಿಗೆ' ಅವರ ಸೃಷ್ಟಿಕ್ರಿಯೆಯ ಹೊಸ ಸಾಮರ್ಥ್ಯದ ಕಡೆಗೆ ಬೆರಳು ತೋರಿಸುತ್ತದೆ. ಈ ಕೃತಿಯಲ್ಲಿ ಅವರು ಕನ್ನಡದ ಏಳು ಜನ ಹೆಸರಾಂತ ಸಾಹಿತಿಗಳು ರಚಿಸಿರುವ ಆತ್ಮಚರಿತ್ರೆಗಳನ್ನು ಪರಿಶೀಲನೆಗೆ ಎತ್ತಿಕೊಂಡಿದ್ದಾರೆ. ಅದರ ಮೂಲಕ ಅವರು ಆತ್ಮಚರಿತ್ರೆ ಪ್ರಕಾರಕ್ಕೆ ಒಂದು ವ್ಯಾಖ್ಯೆಯನ್ನು ನೀಡುವ ಪ್ರಯತ್ನ ಮಾಡಿರುವುದನ್ನು ಗಮನಿಸಬಹುದು.
ಈ ಕೃತಿಗೆ ಬಸವರಾಜ ಕಲ್ಗುಡಿಯವರು ಪಾಂಡಿತ್ಯಪೂರ್ಣವಾದ ಮುನ್ನುಡಿಯನ್ನು ಬರೆದಿರುವರು. ಈ ಕೃತಿಯನ್ನು ಹಲವು ರೀತಿಯಲ್ಲಿ ಅನುಸಂಧಾನ ಮಾಡಿರುವ ಅವರು ಕೃತಿಯ ಆಚೆಗಿನ ಸಾಧ್ಯತೆಗಳ ಕುರಿತೂ ಬೆಲೆಯುಳ್ಳ ಮಾತುಗಳನ್ನು ಬರೆದಿರುವರು. ಅದನ್ನು ಓದಿದ ಮೇಲೆ ಬೇರೇನೂ ಹೇಳುವುದಕ್ಕೆ ಇಲ್ಲ ಅನಿಸಿತು. ಕೆ.ಸತ್ಯನಾರಾಯಣ ಅವರು ಈ ಕೃತಿಯಲ್ಲಿ ಆತ್ಮಕಥನದ ಮೀಮಾಂಸೆಯನ್ನು ಮಾಡಿರುವ ಕುರಿತು ಕೆಲವು ಮಾತುಗಳನ್ನು ದಾಖಲಿಸುವ ಪ್ರಯತ್ನ ಇಲ್ಲಿ ನಾನು ಮಾಡಿದ್ದೇನೆ. ಸ್ವತಃ ನಾಲ್ಕು ಸಂಪುಟಗಳಲ್ಲಿ ಹೊಸದೆನ್ನುವ ರೀತಿಯಲ್ಲಿ ಆತ್ಮಚರಿತ್ರೆಗಳನ್ನು ಬರೆದಿರುವ ಸತ್ಯನಾರಾಯಣ ಅವರು ಇಲ್ಲಿ ಸಮೀಕ್ಷೆಗೆ ಆರಿಸಿಕೊಂಡಿರುವ ಲೇಖಕರು ಗೋಪಾಲಕೃಷ್ಣ ಅಡಿಗ, ಪಿ.ಲಂಕೇಶ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಯು.ಆರ್.ಅನಂತಮೂರ್ತಿ, ಎಸ್.ಎಲ್. ಭೈರಪ್ಪ, ಡಿ.ಸಿದ್ದಲಿಂಗಯ್ಯ ಮತ್ತು ಗಿರೀಶ ಕಾರ್ನಾಡರು. ಇವರಲ್ಲಿ ಅನಂತಮೂರ್ತಿ ಮತ್ತು ಕಾರ್ನಾಡರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಅಡಿಗರು ಕಬೀರ ಸಮ್ಮಾನ ಪಡೆದವರು ಮತ್ತು ಭೈರಪ್ಪ ಸರಸ್ವತಿ ಸಮ್ಮಾನ ಪುರಸ್ಕೃತರು.
ಇವರ ಆತ್ಮಚರಿತ್ರೆಗಳನ್ನೇ ಇಲ್ಲಿ ಸಮೀಕ್ಷೆಗೆ ಏಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದಕ್ಕೆ ಲೇಖಕರು ನೀಡುವ ಕಾರಣ, ಇವರೆಲ್ಲ ಸಾರ್ವಜನಿಕ ಜೀವನದಲ್ಲಿರುವವರು, ಬೇರೆಬೇರೆ ಸ್ತರಗಳಲ್ಲಿ ಆ್ಯಕ್ಟಿವಿಸ್ಟ್ ಪಾತ್ರವನ್ನೂ ನಿರ್ವಹಿಸಿದವರು ಎಂಬುದು. ಇನ್ನೂ ಹೆಚ್ಚಿನ ಕಾರಣವೆಂದರೆ ಇವರೆಲ್ಲ ನಮ್ಮ ಕಾಲದಲ್ಲಿಯೇ ಬದುಕಿದವರು, ನಮ್ಮನ್ನು ರೂಪಿಸಿದವರು ಮಾತ್ರವಲ್ಲ, ನಮ್ಮಿಂದ ರೂಪುಗೊಂಡವರೂ ಕೂಡ. ಇವರೆಲ್ಲ ನಮ್ಮ ಕಾಲವನ್ನು ಹೇಗೆ ನೋಡಿದರು, ಯಾವ ಅಂಶಗಳನ್ನು ಗಮನಿಸಿದರು, ಗಮನಿಸಲಿಲ್ಲ, ಇವರ ಬರವಣಿಗೆಯ ಪ್ರೇರಣೆಗಳೇನು, ಕಾರಣಗಳೇನು, ಇದನ್ನೆಲ್ಲ ಗಮನಿಸುವುದು, ನಮ್ಮ ಕಾಲವನ್ನು, ಈ ಪ್ರಕಾರದ ಬರಹಗಾರರನ್ನು, ಹಾಗೆಯೇ ಅವರ ಬರವಣಿಗೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ನೆರವಾಗಬಹುದು ಎಂಬ ಭಾವನೆ. ಈ ಎಲ್ಲ ಆತ್ಮಚರಿತ್ರೆಗಳನ್ನು ಪರಿಶೀಲನೆಗೆ ಎತ್ತಿಕೊಳ್ಳುವಾಗ ಲೇಖಕರಲ್ಲಿ ಒಂದು ಮಾತು ಸ್ಪಷ್ಟವಾಗಿದೆ, ಆತ್ಮಚರಿತ್ರೆಗಳನ್ನು ಯಾರೇ ಬರೆಯಲಿ, ನಮ್ಮೊಳಗೆ ಇರುವ ಅನೇಕ ಆತ್ಮಚರಿತ್ರೆಗಳಲ್ಲಿ ಒಂದನ್ನು ಅಥವಾ ಒಂದು ಆತ್ಮಚರಿತ್ರೆಯ ಕೆಲವು ಭಾಗಗಳನ್ನು ನಾವು/ನಾನು ಬರೆದಿರುತ್ತೇವೆ.
ಅಸಲಿಗೆ ಆತ್ಮಚರಿತ್ರೆಯು ಸೃಜನಶೀಲ ಸಾಹಿತ್ಯದ ಸ್ಥಾನವನ್ನು ಪಡೆಯುವುದಕ್ಕೆ ಅರ್ಹವಾಗಿದೆಯೇ ಎನ್ನುವ ಕುರಿತೇ ಲೇಖಕರಿಗೆ ಅನುಮಾನಗಳಿವೆ. ನಿರ್ದಿಷ್ಟ ಉದ್ದೇಶದ, ನಿರ್ದಿಷ್ಟ ಓದುಗರಿಗಾಗಿ, ನಿರ್ದಿಷ್ಟ ಪರಿಣಾಮಕ್ಕಾಗಿ ಮಾಡಿದ ಬರವಣಿಗೆಯು ಆತ್ಮಚರಿತ್ರೆಯಾದರೂ ಸಾಹಿತ್ಯದ ಪ್ರಕಾರವಲ್ಲ, ಕೇವಲ ಅದೊಂದು ಬರವಣಿಗೆಯ ಕ್ರಮ ಎಂಬ ಮಾತನ್ನು ಉಲ್ಲೇಖಿಸುತ್ತಾರೆ. ಆತ್ಮಚರಿತ್ರೆಗಳನ್ನು ಮೊದಲು ಬರೆಯಲು ಆರಂಭಿಸಿದವರು ಗಂಡಸರು ಎಂಬ ಮಾತನ್ನು ಲೇಖಕರು ಹೇಳುತ್ತಾರೆ. ಮನುಷ್ಯ ತನ್ನನ್ನು ತಾನೇ ನೋಡಿಕೊಳ್ಳುವ, ಕಟ್ಟಿಕೊಳ್ಳುವ ಬರವಣಿಗೆ ಪ್ರಾರಂಭವಾಯಿತು. ಈ ರೀತಿಯ ಬರವಣಿಗೆ ಕೂಡ ಮೊದಲು ಆಕರ್ಷಿಸಿದ್ದು ಗಂಡಸರದ್ದು ಎಂಬ ಹೊಸ ಮಾತನ್ನು ಅವರು ಹೇಳುತ್ತಾರೆ, ಆತ್ಮಚರಿತ್ರೆಗೆ ಗದ್ಯವೇ ಸೂಕ್ತ. ಏಕೆಂದರೆ ಗದ್ಯದ ಬರವಣಿಗೆಯಲ್ಲೇ ಒಂದು ರೀತಿಯ ಕಾರ್ಯ- ಕಾರಣ ಸಂಬಂಧವನ್ನು ಅಪೇಕ್ಷಿಸುತ್ತೆ, ಹಾಗಾಗಿ ಗದ್ಯದಲ್ಲಿ ಆತ್ಮಚರಿತ್ರೆ ಬರೆಯುವುದೆಂದರೆ ಒಂದು ರೀತಿಯ ಬರವಣಿಗೆಯನ್ನು ಮಾಡಲು ಒಪ್ಪಿದ ಹಾಗೆ ಎನ್ನುವದು ಅವರ ನಿಲವು.
ಬರೆಯಲಿ ಬರೆಯದೇ ಇರಲಿ, ಪ್ರತಿಯೊಬ್ಬ ಮನುಷ್ಯನೂ ತನ್ನ ಬದುಕಿನುದ್ದಕ್ಕೂ ಆತ್ಮಚರಿತ್ರೆಗಳನ್ನು ಹೇಳಿಕೊಳ್ಳುತ್ತಿರುತ್ತಾನೆ, ನಟಿಸುತ್ತಿರುತ್ತಾನೆ, ಸ್ಥಾಪಿಸುತ್ತಿರುತ್ತಾನೆ ಎನ್ನುವ ಲೇಖಕರು
“ನಾವು' ಮತ್ತು
ನಮ್ಮ' ಬರವಣಿಗೆಯ ಸಾಂಸ್ಕೃತಿಕ ಸಂದರ್ಭ, ನಮ್ಮ ಎದುರಿಗಿರುವ ಓದುಗರ ಸ್ವರೂಪವನ್ನು ನಿರ್ಧರಿಸುತ್ತದೆ, ನಿಯಂತ್ರಿಸುತ್ತದೆ ಎನ್ನುವ ಮೂಲಕ ಕೃತಿಯೊಂದರ ಲೇಖಕ ಕೃತಿಯ ಮೂಲಕವೇ ಆವಿರ್ಭವಿಸುತ್ತಾನೆ ಎನ್ನುವ ನಿಲವು ತಳೆಯುತ್ತಾರೆ. ತಾನು ಮಾಡುತ್ತಿರುವ ಬರವಣಿಗೆ ತನಗೋ ಇಲ್ಲ ಓದುಗರಿಗೆ ಮಾತ್ರವೋ ಎಂಬ ಪ್ರಶ್ನೆಯನ್ನು ಆತ್ಮಚರಿತ್ರಕಾರ ಎದುರಿಸಲೇಬೇಕು. ತೀರ ಲೋಕಮುಖವಾಗಿಬಿಟ್ಟರೆ ಆತ್ಮಚರಿತ್ರೆಯ ಬರವಣಿಗೆಯಲ್ಲಿ ಸಾಕ್ಷಾತ್ಕಾರದ ಅಂಶವೇ ಇರುವುದಿಲ್ಲ. ಆತ್ಮಚರಿತ್ರೆ ಮತ್ತು ಜೀವನಚರಿತ್ರೆಗಳನ್ನು ಬರೆಯುವವರ ಒಂದು ಅಘೋಷಿತ ಉದ್ದೇಶವೆಂದರೆ, ಒಂದು ಜೀವನಶೈಲಿಯನ್ನು ಮಾದರಿಯಾಗಿ ಒದಗಿಸಿ ಶಿಫಾರಸ್ ಮಾಡುವುದು ಎಂದು ಅವರು ಹೇಳುತ್ತಾರೆ. ನೀವು ನಿಮ್ಮ ಜೀವನದ ಯಾವ ಘಟ್ಟದಲ್ಲಿ ಯಾವ ಸಂದರ್ಭದಲ್ಲಿ ಬರೆಯುತ್ತೀರಿ ಎನ್ನುವುದರ ಮೇಲೆ ನಿಮ್ಮ ಆತ್ಮಚರಿತ್ರೆಯ ವಿವರಗಳು ನಿರ್ಧಾರವಾಗುತ್ತವೆ ಎನ್ನುವುದು ಅವರ ಇನ್ನೊಂದು ಮಾತು. ದಲಿತ ಆತ್ಮಚರಿತ್ರೆಗಳಲ್ಲಿ
ನಾನು' ಎಂಬ ಪದವನ್ನು ಬಳಸಿ ಲೇಖಕ ಬರೆಯುತ್ತಿದ್ದರೂ, ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ದಲಿತರ
`”ನಾನು'
“ನಾವೇ’ ಆಗಿರುತ್ತದೆ. ಸಮುದಾಯದ ಧ್ವನಿಯೇ ಆಗಿರುತ್ತದೆ ಎನ್ನುವುದನ್ನು ಅವರು ಗುರುತಿಸುತ್ತಾರೆ.
ತಾನು ಬರೆಯುತ್ತಿರುವ ಚರಿತ್ರೆಯಲ್ಲಿ ಎಲ್ಲ ಕಾಲದ ಮನುಷ್ಯರಿಗೂ ಅನ್ವಯವಾಗುವಂತಹ ಸಂಗತಿಗಳು ಪ್ರಶ್ನೆಗಳು ಇವೆಯೇ ಎಂಬುದು ಚರಿತ್ರೆಕಾರನ ಗಮನದಲ್ಲಿದ್ದರೆ, ಬರವಣಿಗೆಗೆ ಇನ್ನೊಂದು ಮಜಲು ಸಿಗುತ್ತದೆ, ಇಲ್ಲದಿದ್ದರೆ ಇಲ್ಲ.
ಆತ್ಮ ಚರಿತ್ರೆಗಳನ್ನು ಬರೆಯುವವರು ವ್ಯಕ್ತಿ ಕೇಂದ್ರಿತವಾಗಿ ಪ್ರಾರಂಭಿಸಿ, ಸಮಾಜಕೇಂದ್ರೀತವಾಗಿ ಬಲವಂತದಿಂದ ವಿಸ್ತರಿಸಿಕೊಳ್ಳುತ್ತಾರೆ. ಹಾಗಾಗಿ ಪ್ರಕೃತಿಯ ದಿನನಿತ್ಯದ, ಕ್ಷಣಕ್ಷಣದ ಪಲ್ಲಟಗಳನ್ನು ಆತ್ಮಚರಿತ್ರೆಕಾರರು ಗಮನಿಸುವುದಿಲ್ಲ ಎನ್ನವ ಲೇಖಕರು ಪ್ರಕೃತಿ ಎಂದರೆ ಕಾಡು, ಕಡಲು, ನದಿ ಮಾತ್ರವಲ್ಲ. ಸ್ಥೂಲವಾಗಿ ಈ ಪರಿಕಲ್ಪನೆ ಸರಿ. ಗಾಳಿ ಬೀಸುವ ರೀತಿ. ಮೋಡ ಚಲಿಸುವ ವಿಧಾನ, ಸೂರ್ಯೋದಯದ ಸೌಂದರ್ಯ, ಸೂರ್ಯಾಸ್ತದ ಘನತೆ, ಋತುಗಳ ಬದಲಾವಣೆ, ಹವಾಮಾನದ ಸ್ಥಿತ್ಯಂತರ ಎಲ್ಲವೂ ಸೇರಿಕೊಳ್ಳುತ್ತದೆ. ಇವೆಲ್ಲವೂ ಮನುಷ್ಯನ ಪ್ರತಿನಿತ್ಯದ ಜೀವನವನ್ನು ಪ್ರಭಾವಿಸುತ್ತಿರುತ್ತವೆ ಎನ್ನುವ ಮೂಲಕ ಆತ್ಮಚರಿತ್ರಕಾರರಿಗೆ ಒಂದು ಚೌಕಟ್ಟನ್ನು ಒದಗಿಸಲು ಯತ್ನಿಸುತ್ತಾರೆ. ಹಾಗೆಯೇ ಆತ್ಮಚರಿತ್ರಕಾರರು ತಾವು ಪ್ರಸ್ತಾಪಿಸುವ ವ್ಯಕ್ತಿಗಳ ಘನತೆಯ ಕಡೆಗೆ ಗೌರವದ ದೃಷ್ಟಿಯನ್ನು ಇಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ. ಇದರಲ್ಲಿ ಗಂಡು ಹೆಣ್ಣುಗಳ ಸಂಬಂಧವನ್ನು ಈ ಲೇಖಕರು ಹೇಗೆ ನೋಡಿದ್ದಾರೆ ಎಂಬುದನ್ನೂ ವಿಶ್ಲೇಷಿಸಿದ್ದಾರೆ. ಆತ್ಮಚರಿತ್ರೆಕಾರರು ತಮಗೆ ಇಷ್ಟವಿಲ್ಲದ ಸಂಗತಿಗಳನ್ನು ಸರಿಯಾಗಿ ನೆನಪಿಗೆ ಬರುತ್ತಿಲ್ಲ, ಎಲ್ಲವೂ ಅಸ್ಪಷ್ಟವಾಗಿದೆ, ಹಾ ಮರೆತಿದ್ದೆ ಎಂದು ನಾನಾ ರೀತಿಯ ಭಂಗಿಗಳನ್ನು ಹೂಡುತ್ತಾರೆ ಎನ್ನುವ ಅವರು, ಓದುಗರಿಗೆ ಇದು ಗೊತ್ತಾಗಿಬಿಡುತ್ತದೆ. ಆದರೆ ಇದು ಆತ್ಮಚರಿತ್ರೆ ಬರೆದುಕೊಳ್ಳುವವರ ತಂತ್ರಗಾರಿಕೆ ಎನ್ನುತ್ತಾರೆ. ಈ ಸ್ಮೃತಿನಾಶದ ತಂತ್ರವನ್ನು ಪ್ರಭುತ್ವ ಕೂಡ ಚೆನ್ನಾಗಿ ಬಳಸಿಕೊಳ್ಳುತ್ತವೆ ಎಂದು ಹೇಳುತ್ತಾರೆ. ಬೇರೆಬೇರೆ ಪ್ರಭುತ್ವಗಳು ಇತಿಹಾಸದ ಪಠ್ಯಗಳನ್ನು ಏಕೆ ಬದಲಿಸಲು ಮುಂದಾಗುತ್ತವೆ ಎನ್ನುವುದರ ವಿಶ್ಲೇಷಣೆಗೆ ಇದನ್ನು ನಾವು ವಿಸ್ತರಿಸಿಕೊಳ್ಳಬಹುದು.
ಆತ್ಮಚರಿತ್ರೆಗಳ ಕುರಿತು ಸತ್ಯನಾರಾಯಣ ಅವರು ಬೀಜರೂಪದ ಒಂದು ಮಾತನ್ನು ಹೇಳುತ್ತಾರೆ- ““ಆತ್ಮಚರಿತ್ರೆ ಬರೆದುಕೊಳ್ಳುವವನು ಕೃತಿಯ ಕೇಂದ್ರದಲ್ಲಿ ಸದಾ ಇರುತ್ತಾನೆ. ಏಕೆಂದರೆ ಅದು ಅವನ ಜೀವನ ಪ್ರವಾಹದ ಕತೆಯೇ… ಇಲ್ಲಿ ಲೇಖಕನೇ ದೂರು ಕೊಡುವವನು, ತನಿಖೆ ಮಾಡುವವನು ಮತ್ತು ನ್ಯಾಯಾಧೀಶನೂ ಕೂಡ ಆಗಿರುತ್ತಾನೆ. ಅವನು ನೀಡುವ ನಿರ್ಣಯಗಳಿಗೆ ಮೇಲ್ಮನಿ ಕೂಡ ಇರುವುದಿಲ್ಲ.”
ಸತ್ಯನಾರಾಯಣ ಅವರು ಇಲ್ಲಿ ತಾವು ಆಯ್ದುಕೊಂಡ ಲೇಖಕರು ತಮ್ಮ ಸಮಕಾಲೀನ ಸಂದರ್ಭದ ತಲ್ಲಣಗೊಳಿಸುವ ಪರಿಸ್ಥಿತಿಗಳಲ್ಲಿ ಹೇಗೆ ಪ್ರತಿಕ್ರಿಯಿಸಿದರು ಎಂಬುದರ ಕಡೆ ಸೂಕ್ಷ್ಮ ನೋಟವನ್ನು ಹರಿಸುತ್ತಾರೆ. ಇದಕ್ಕಾಗಿ ಅವರು ಬಸವಲಿಂಗಪ್ಪನವರ ಬೂಸಾ ಪ್ರಕರಣ, ಬರಹಗಾರರ ಒಕ್ಕೂಟ, ತುರ್ತುಪರಿಸ್ಥಿತಿ ಮೊದಲಾದವುಗಳನ್ನು ಆಯ್ದುಕೊಂಡಿದ್ದಾರೆ. ಹಾಗೆಯೇ ಬಾಬ್ರಿ ಮಸೀದಿಯ ಧ್ವಂಸ ಪ್ರಕರಣವನ್ನೂ ಸೇರಿಸಿಕೊಳ್ಳಬಹುದಿತ್ತು. ಬಹುಶಃ ಅಡಿಗರು ಮತ್ತು ಭೈರಪ್ಪನವರ ಆತ್ಮಚರಿತ್ರೆಯ ಬರವಣಿಗೆ ಅದಕ್ಕೂ ಮೊದಲಿನದು ಎನ್ನುವ ಕಾರಣಕ್ಕೆ ಬಿಟ್ಟಿರಬಹುದೇನೋ.
ಆತ್ಮಚರಿತ್ರಕಾರ ಯಾವಾಗ ತನ್ನ ಆತ್ಮಚರಿತ್ರೆಯನ್ನು ಬರೆಯಲು ಆರಂಭಿಸಿದ ಎನ್ನುವುದ ಮೇಲೆ ಆತ್ಮಚರಿತ್ರೆಯ ಶೈಲಿ ನಿರ್ಧಾರವಾಗುತ್ತದೆ ಎನ್ನುವ ಲೇಖಕರು, ಬರಹಗಾರನ ಆರೋಗ್ಯ, ಕೌಟುಂಬಿಕ ಸ್ಥಿತಿ-ಗತಿಗಳನ್ನು ಕೂಡ ಗಣನೆಗೆ ತೆಗೆದುಕೊಂಡು ಓದುಗ ಗಮನಿಸಬೇಕಾದ ಅಂಶವೆಂದರೆ ಸಾವಿನ ತಿಳಿವಳಿಕೆ, ಆತ್ಮಚರಿತ್ರೆಯ ಅಂತ್ಯದಲ್ಲಿ ಬರವಣಿಗೆಯನ್ನು ಹೇಗೆ ಪ್ರಭಾವಿಸಿದೆ ಎಂಬುದು ಎಂದು ಹೇಳುತ್ತಾರೆ.
ಆತ್ಮಚರಿತ್ರೆಗಳನ್ನು ಬರೆದುಕೊಳ್ಳುವವರೆಲ್ಲ ತಮ್ಮ ಸಮಕಾಲೀನ ಇತಿಹಾಸದ ಭಾಗವಾಗಿರುತ್ತಾರೆ. ಇವರು ಉಲ್ಲೇಖಿಸುವ ಮತ್ತು ಇವರ ಬದುಕನ್ನೂ ಒಳಗೊಂಡ ಘಟನೆಗಳ ಕುರಿತು ಇನ್ನೂ ಯಾರುಯಾರೋ ಬರೆದಿರುತ್ತಾರೆ. ಅವೆಲ್ಲ ತೌಲನಿಕ ಅಧ್ಯಯನಕ್ಕೆ ಒಳಪಟ್ಟು ಜರಡಿ ಹಿಡಿಯುವ ಕೆಲಸವಾಗಬೇಕು, ಅದು ಆ ಆತ್ಮಚರಿತ್ರೆಕಾರ ಮಹತ್ವದ ವ್ಯಕ್ತಿಯಾಗಿದ್ದಾಗ ಮಾತ್ರ.
ಒಟ್ಟಾರೆ ಈ ಕೃತಿಯಲ್ಲಿ ಸತ್ಯನಾರಾಯಣ ಅವರ ತೌಲನಿಕ ದೃಷ್ಟಿಕೋನ, ವಿಮರ್ಶನ ಪ್ರಜ್ಞೆ, ಅವರ ವ್ಯಾಪಕ ಓದನ್ನು ನಾವು ಗುರುತಿಸಬಹುದು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.