*ಕತ್ತಿ ಅಲಗಿನೊಂದಿಗೆ ಸರಸವಾಡಿದಂತೆ ಇದು

ಠಿಣವಾದ ಯಾವುದಾದರೂ ಕೆಲಸವನ್ನು ಸಾಧಿಸುವುದಿದ್ದರೆ ಅದರ ಅಸಾಧ್ಯತೆಯನ್ನು ಹೇಳುವುದಕ್ಕೆ ಅದೊಂದು `ಅಸಿಧಾರಾವ್ರತ ಕಣಯ್ಯ’ ಎಂದು ಹೇಳುವುದಿದೆ.
ಅಸಿಧಾರಾ ಎಂದರೆ ಖಡ್ಗದ ಅಲಗು ಎಂದರ್ಥ. ಇದೇನು ಖಡ್ಗದ ಅಲಗಿನ ವ್ರತ? ಯವ್ವನವತಿಯಾದ ಪತ್ನಿ ಹಾಸುಗೆಯಲ್ಲಿ ಪಕ್ಕದಲ್ಲಿ ಮಲಗಿರುತ್ತಾರೆ. ಗಂಡ ಹೆಂಡತಿಯ ನಡುವೆ ಒರೆಯನ್ನು ತೆಗೆದ ಹರಿತವಾದ ಖಡ್ಗವನ್ನು ಇಟ್ಟು ರಾತ್ರಿಯನ್ನು ಕಳೆಯುವುದೇ ಈ ಅಸಿಧಾರಾ ವ್ರತ.
ಮನಸ್ಸು ಚಂಚಲವಾದರೆ ಖಡ್ಗದ ಮೇಲೆ ಶರೀರ ಬಿದ್ದು ಗಾಯವಾಗುವುದು ಖಂಡಿತ. ಯವ್ವನವತಿ ಹೆಂಡತಿಯ ಪಕ್ಕದಲ್ಲಿ ಮನಸ್ಸನ್ನು ನಿಗ್ರಹದಲ್ಲಿ ಇಟ್ಟುಕೊಂಡು ರಾತ್ರಿಯನ್ನು ಕಳೆಯುವುದೆಂದರೆ ಅದೊಂದು ಕಠಿಣ ವ್ರತವೇ ಸರಿ.
ಇಂಥ ವ್ರತವನ್ನು ಯಶಸ್ವಿಯಾಗಿ ಮುಗಿಸಬೇಕೆಂದರೆ ಮನಸ್ಸಿನ ಮೇಲೆ ನಿಗ್ರಹ ಇರಬೇಕು. ಚಪಲಚಿತ್ತದವರಿಂದ ಇದು ಸಾಧ್ಯವಾಗುವುದಿಲ್ಲ. ಗಟ್ಟಿಯಾದ ಮನಸ್ಸಿದ್ದರೆ ಮಾತ್ರ ಯಾವುದೇ ಕೆಲಸವನ್ನು ಸಾಧಿಸಬಹುದು.
ಯಾವುದನ್ನಾದರೂ ನಿಗ್ರಹಿಸಬಹುದು. ಆದರೆ ಕಾಮವನ್ನು ನಿಗ್ರಹಿಸುವುದು ಬಹು ಕಷ್ಟ ಎಂಬ ಎಚ್ಚರಿಕೆಯೂ ಇದರಲ್ಲಿದೆ. ಜಿತೇಂದ್ರಿಯತ್ವ ಎಲ್ಲರಿಗೂ ಸಾಧ್ಯವಲ್ಲ. ಚಾಪಲ್ಯ ಕೇವಲ ಲೈಂಗಿಕವಾದುದು ಆಗಿರಬೇಕಿಲ್ಲ, ಪಂಚೇಂದ್ರಿಯಗಳಲ್ಲಿ ಯಾವುದರ ದಾಸನಾದರೂ ಅದರಿಂದ ಕಷ್ಟ ಕಟ್ಟಿಟ್ಟ ಬುತ್ತಿ.
ಕೆಲವರಿಗೆ ನಾಲಿಗೆಯ ಚಪಲ, ಕೆಲವರಿಗೆ ನೋಡುವ ಚಪಲ, ಕೆಲವರಿಗೆ ಕೇಳುವ ಚಪಲ, ಇನ್ನೂ ಕೆಲವರಿಗೆ ಮಾತಿನ ಚಪಲ. ಮನಸ್ಸನ್ನು ಲಗಾಮಿಲ್ಲದ ಹುಚ್ಚು ಕುದುರೆಗೆ ಹೋಲಿಸಿದ್ದಾರೆ ಹಿರಿಯರು. ಅದಕ್ಕೆ ಲಗಾಮು ಹಾಕಿ ಸವಾರಿ ಮಾಡಬಲ್ಲವನೇ ಸಂಸಾರ ಸಾಗರವನ್ನು ಸುಲಭವಾಗಿ ದಾಟಬಲ್ಲ.