*ಸೇವೆಯಲ್ಲಿ ಪಾಲ್ಗೊಳ್ಳಬೇಕೆಂಬ ಮನೋಭಾವ ಮುಖ್ಯ
ಅಳಿಲು ಯಾರಿಗೆ ಗೊತ್ತಿಲ್ಲ ಹೇಳಿ? ಪುಟ್ಟದಾದ ಮುದ್ದುಮುದ್ದಾಗಿರುವ ಪ್ರಾಣಿ. ಈ ಪುಟ್ಟ ಪ್ರಾಣಿಯು ಏನಾದರೂ ಸೇವೆ ಮಾಡುವುದು ಸಾಧ್ಯವೆ?
ಯಾರಾದರೂ ದೊಡ್ಡ ಕಾರ್ಯ ನಡೆಯುತ್ತಿರುವಲ್ಲಿ ಹೋಗಿ ಏನಾದರೂ ಚಿಕ್ಕಪುಟ್ಟ ಕೆಲಸ ಮಾಡಿಕೊಟ್ಟು ತಮ್ಮ ಅಳಿಲು ಸೇವೆ ಸಂದಿತು ಎಂದು ಸಮಾಧಾನಪಟ್ಟುಕೊಳ್ಳುವುದು ಇದೆ. `ನಿಮ್ಮದೂ ನಡೆಯಲಿ ಅಳಿಲು ಸೇವೆ’ ಎಂದು ಕರೆ ಕೊಡುವುದನ್ನು ಕೇಳಿದ್ದೇವೆ. ಏನಿದು ಅಳಿಲು ಸೇವೆ ಎಂದು ಕೇಳಿದರೆ ಹಲವರಿಗೆ ಅದು ಗೊತ್ತಿರುವುದಿಲ್ಲ.
ರಾಮಾಯಣ ಗೊತ್ತಲ್ಲವೆ? ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗಿದ್ದು, ಹನುಮಂತ ಸೀತೆಯನ್ನು ಹುಡುಕಿದ್ದು, ಕಪಿಸೇನೆಯನ್ನು ಕೊಂಡೊಯ್ದದ್ದು ಎಲ್ಲ ಗೊತ್ತಿದೆ. ಲಂಕೆಗೆ ಹೋಗುವುದಕ್ಕೆ ಸಮುದ್ರದ ಅಡ್ಡಿ. ಈ ಅಡ್ಡಿಯನ್ನು ದಾಟಲು ಶ್ರೀರಾಮ ಕಪಿಸೇನೆಗೆ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ಹೇಳುತ್ತಾನೆ. ಕಪಿಗಳು, ಕರಡಿಗಳು ದೊಡ್ಡ ದೊಡ್ಡ ಕಲ್ಲು ಬಂಡೆ ಮರಗಳನ್ನೆಲ್ಲ ತಂದು ಸೇತುವೆಯ ಕೆಲಸ ಭರದಿಂದ ನಡೆಯುವಂತೆ ಮಾಡಿದರು. ಆ ಗದ್ದಲದಲ್ಲಿ ಚಿಕ್ಕ ಅಳಿಲು ಸಣ್ಣ ಸಣ್ಣ ಕಲ್ಲುಗಳನ್ನು ತಾನೂ ಹೊತ್ತು ತರುತ್ತಿತ್ತು.
ಇದು ಶ್ರೀರಾಮನ ಗಮನ ಸೆಳೆಯಿತು. ಶ್ರೀರಾಮ ಪ್ರೀತಿಯಿಂದ ಅಳಿಲನ್ನು ಮಾತನಾಡಿಸಿದ. ಸ್ವಾಮಿ ನಿಮ್ಮ ಈ ಮಹಾನ್ ಕಾರ್ಯದಲ್ಲಿ ನನ್ನದೂ ಅಲ್ಪ ಸೇವೆ ಸಲ್ಲಲಿ ಎಂದು ಅಳಿಲು ಹೇಳಿತು. ಶ್ರೀರಾಮ ಆಶೀರ್ವಾದ ರೂಪದಲ್ಲಿ ತನ್ನ ಬಾಣದಿಂದ ಅಳಿಲಿನ ಬೆನ್ನ ಮೇಲೆ ಮೂರು ಗೆರೆಗಳನ್ನು ಎಳೆದನಂತೆ. ಅದು ಅಳಿಲು ಸಂತತಿಗೆಲ್ಲ ಬಂದಿದೆಯಂತೆ.
ಸಾವಿರ ಅಳಿಲುಗಳ ಸಣ್ಣಸಣ್ಣ ಸೇವೆಗಳು ಒಟ್ಟುಗೂಡಿದರೆ ಒಂದು ಆನೆಯ ಸೇವೆಯೂ ಆಗಬಹುದಲ್ಲವೆ? ಸೇವೆಯಿಂದಾಗುವ ಪರಿಣಾಮಕ್ಕಿಂತ ಅದರಲ್ಲಿ ಪಾಲ್ಗೊಳ್ಳಬೇಕೆಂಬ ಮನೋಭಾವ ಇದೆಯಲ್ಲ, ಅದು ಮುಖ್ಯ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.