*ಅಲ್ಪ ಅರಿವನ್ನೇ ಎಲ್ಲೆಡೆಗೂ ಬಳಸುವವನು

ಳ್ಳಿಗಳಲ್ಲಿ ನಾಟಿ ವೈದ್ಯರು ಇರುತ್ತಾರೆ. ಚಿಕ್ಕಪುಟ್ಟ ಕಾಯಿಲೆಗಳಿಗೆಲ್ಲ ಅವರೇ ಔಷಧವನ್ನು ನೀಡುವವರು. ತರಾವರಿ ಕಾಯಿಲೆಗಳಿಗೆ ಅವರಲ್ಲಿರುವುದು ಎರಡು ಮೂರು ಗಿಡಮೂಲಿಕೆಗಳ ಔಷಧ ಮಾತ್ರ. ಅವರ ಜ್ಞಾನ ಸೀಮಿತವಾದದ್ದು. ಆದರೆ ಏನು ಮಾಡುವುದು? ಅವರನ್ನು ಬಿಟ್ಟರೆ ಹಳ್ಳಿಯಲ್ಲಿ ಅನ್ಯರ ಗತಿ ಇಲ್ಲ.
ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಅಳಲೆಕಾಯಿಯ ಔಷಧೀಯ ಗುಣ. ಅದು ಬಹು ರೋಗಗಳಿಗೆ ಔಷಧವಾಗುತ್ತದೆ. ಈ ಕಾರಣಕ್ಕಾಗಿಯೇ ಹಳ್ಳಿಯ ವೈದ್ಯರನ್ನು ಅಳಲೆಕಾಯಿ ಪಂಡಿತರು ಎಂದು ಕರೆಯುವುದು.
ಅದೇ ರೀತಿ ಹಳ್ಳಿಯಲ್ಲಿ ಅಕ್ಷರ ಕಲಿತ ಕೆಲವರೇ ಇರುತ್ತಾರೆ. ಅನಕ್ಷರಸ್ಥರು ಎಲ್ಲದಕ್ಕೂ ಅವರನ್ನೇ ಅವಲಂಬಿಸುತ್ತಾರೆ. ಅವರ ಜ್ಞಾನವೇ ಎಲ್ಲರ ಜ್ಞಾನದ ಎಲ್ಲೆಯಾಗುತ್ತದೆ.
ಕೆಲವು ಜನ ಇರುತ್ತಾರೆ. ಅಲ್ಪಸ್ವಲ್ಪ ಓದಿಕೊಂಡಿರುತ್ತಾರೆ. ಆದರೆ ತಮಗೆ ಎಲ್ಲವೂ ಗೊತ್ತಿದೆ ಎನ್ನುವ ಹಾಗೆ ವರ್ತಿಸುತ್ತಾರೆ. ತಮ್ಮ ಅಲ್ಪ ಅರಿವನ್ನೇ ಎಲ್ಲದಕ್ಕೂ ಅನ್ವಯಿಸುವ ಇಂಥ ಜನರನ್ನು ಕಂಡಾಗ ಅವರನ್ನು ಅಳಲೆಕಾಯಿ ಪಂಡಿತರು ಎಂದು ಕರೆಯುವುದು ರೂಢಿಗೆ ಬಂದಿದೆ.