ಆರಂಭ ಕಾಲದ ಪತ್ರಿಕೆ ಮತ್ತು ಸಾಹಿತ್ಯ


ತ್ತೊಂಬತ್ತನೆ ಶತಮಾನದ ಆರಂಭ ಕಾಲದ ಸಾಹಿತ್ಯ ಕೃತಿಗಳನ್ನು ಗಮನಿಸಿದಾಗ ಭಾಷೆ ನಡುಗನ್ನಡದಿಂದ ಹೊಸಗನ್ನಡದತ್ತ ಹೊರಳುತ್ತಿರುವುದನ್ನು ಕಾಣಬಹುದು. ಕನ್ನಡ ಸಾಹಿತ್ಯವು ಆಧುನಿಕ ರೂಪವನ್ನು ಪಡೆದುಕೊಳ್ಳತೊಡಗಿದ್ದು ಹಾಗೂ ಕನ್ನಡದಲ್ಲಿ ಪತ್ರಿಕೆಗಳು ಹುಟ್ಟಿಕೊಂಡಿದ್ದು ಸರಿಸುಮಾರು ಒಂದೇ ಕಾಲದಲ್ಲಿ. ಇದು ಹತ್ತೊಂಬತ್ತನೆ ಶತಮಾನದ
ಮಧ್ಯಭಾಗ. ೧೮೪೨ರ ಮಂಗಳೂರು ಸಮಾಚಾರ'ದ ವೇಳೆಗೆ ಕನ್ನಡ ಸಾಹಿತ್ಯ ಹಲವು ಬಗೆಗಳಲ್ಲಿ ಬೆಳೆದಿತ್ತು. ಆಧುನಿಕ ವಿದ್ಯಾಭ್ಯಾಸ, ಕ್ರೈಸ್ತ ಪಾದ್ರಿಗಳ ಧರ್ಮ ಪ್ರಚಾರ, ಅದಕ್ಕಾಗಿ ಅವರು ಮಾಡಿದ ಬೈಬಲ್ ಅನುವಾದ, ಹಿಂದೂ ಧರ್ಮವನ್ನು ಟೀಕಿಸುವ ಉದ್ದೇಶದಿಂದ ಪ್ರಾಚೀನ ಪುರಾಣ, ಶಾಸ್ತ್ರ, ಸಾಹಿತ್ಯಗಳನ್ನು ಅವರು ಹುಡುಕಿ ಪ್ರಕಟಿಸಿದ್ದು, ಕನ್ನಡಕ್ಕೆ ನಿಘಂಟುವೊಂದನ್ನು ನೀಡಲು ಅವರು ಮಾಡಿದ ಪ್ರಯತ್ನ ಇವೆಲ್ಲ ಈಗಾಗಲೆ ಬೇರೆ ಬೇರೆ ಗ್ರಂಥಗಳಲ್ಲಿ ಉಲ್ಲೇಖವಾಗಿವೆ. ಈ ರೀತಿಯಲ್ಲಿ ವಿಭಿನ್ನ ನೆಲೆಗಳಲ್ಲಿ ಅರಳುತ್ತಿದ್ದ ಕನ್ನಡ ಸಾಹಿತ್ಯ ಪುಷ್ಟಗೊಳ್ಳುವಲ್ಲಿ ಪತ್ರಿಕೆಗಳು ಯಾವ ರೀತಿಯಲ್ಲಿ ನೆರವಾದವು ಅನ್ನುವುದು ಪ್ರಸ್ತುತ ವಿವೇಚನೆಯ ವಿಷಯವಾಗಿದೆ. ಭಾರತೀಯ ಪರಿಸರದಲ್ಲಿ ಪತ್ರಿಕೆಗಳು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿಯೇ ಜನ್ಮ ತಳೆದಿದ್ದವು. ಕೆಲವೊಮ್ಮೆ ಧರ್ಮ ಪ್ರಸಾರ, ಇನ್ನು ಕೆಲಮೊಮ್ಮೆ ಸಮಾಜ ಸುಧಾರಣೆ ಮತ್ತು ಕೆಲವೊಮ್ಮೆ ರಾಜಕೀಯ ಬೇಡಿಕೆಯ ಮಂಡನೆಗಾಗಿ ಜನಾಭಿಪ್ರಾಯ ರೂಪಿಸಲು ಒಂದು ವೇದಿಕೆಯಾಗಿ ಹುಟ್ಟಿಕೊಂಡ ಪತ್ರಿಕೆಗಳು ಹಲವು. ಇನ್ನು ಕೆಲವು ಪತ್ರಿಕೆಗಳು ಸಾಹಿತ್ಯಪತ್ರಿಕೆಗಳಾಗಿ ಹುಟ್ಟಿ ಬೆಳೆದವು. ಸಾಹಿತ್ಯವು ಹೇಗಿರಬೇಕು, ಹೇಗಿದ್ದರೆ ಚೆನ್ನ, ಹೇಗಿರಬಾರದು ಎಂಬುದರ ಜೊತೆಯಲ್ಲಿ ಹಿಂದಿನ ಸಾಹಿತ್ಯಗಳನ್ನು ವಿಮರ್ಶೆಗೆ ಒಳಪಡಿಸಿ ಅವುಗಳಲ್ಲಿ ಟೊಳ್ಳೆಷ್ಟು ಗಟ್ಟಿ ಎಷ್ಟು ಎಂಬುದನ್ನು ವಿಮರ್ಶಿಸಿದವು. ಕೆಲವು ಪತ್ರಿಕೆಗಳು ಸಾಹಿತ್ಯ ಪ್ರಕಟಣೆಗಾಗಿಯೇ ಉಳಿದವು. ಇವುಗಳ ಮೂಲಕ ಹೊಸ ಲೇಖಕರ ಪಡೆಯೇ ಹುಟ್ಟಿಕೊಂಡಿತು. ಹೊಸ ಪ್ರತಿಭೆಗಳು ಪ್ರೋತ್ಸಾಹ ಇಲ್ಲದೆ ಸೊರಗುವುದನ್ನು ತಪ್ಪಿಸಿ ಅವನ್ನು ಪೋಷಿಸಿದ ಹಿರಿಮೆ ಸಾಹಿತ್ಯಪತ್ರಿಕೆಗಳಿಗಿದೆ. ೧೯ನೆಯ ಶತಮಾನದಲ್ಲಿ ಪತ್ರಿಕೆಯಾಗಲಿ ಸಾಹಿತ್ಯವಾಗಲಿ ಹಿಂದಿನ ಶತಮಾನಗಳಿಗಿಂತ ಸಮೃದ್ಧವಾಗಿ ಬೆಳೆದುದಕ್ಕೆ ಕಾರಣ ಮುದ್ರಣ ಯಂತ್ರ. ಮುದ್ರಣ ಯಂತ್ರವನ್ನು ಕಂಡು ಹಿಡಿಯುವ ಪೂರ್ವದಲ್ಲಿಯ ಸಾಹಿತ್ಯ ಸೃಷ್ಟಿಗೂ ಮುದ್ರಣ ಯಂತ್ರವನ್ನು ಕಂಡು ಹಿಡಿದ ಮೇಲಿನ ಸಾಹಿತ್ಯ ಸೃಷ್ಟಿಗೂ ವ್ಯತ್ಯಾಸ ಇರುವುದನ್ನು ಗಮನಿಸಬಹುದು. ಮೊದಲು ಕೇವಲ ರಾಜ ಸಭೆಗಳಲ್ಲಿ ಪಂಡಿತರನ್ನು ಮೆಚ್ಚಿಸುವುದಕ್ಕಾಗಿ ಆಗುತ್ತಿದ್ದ ಸಾಹಿತ್ಯ ಸೃಷ್ಟಿ ಈಗ ಜನಸಾಮಾನ್ಯರನ್ನು ಗಮನದಲ್ಲಿಟ್ಟು ಆಗತೊಡಗಿತು. ಮೊದಲು ಒಂದೋ ಎರಡೋ ತಾಡೋಲೆಯ ಹಸ್ತಪ್ರತಿಗಳಲ್ಲಿ ಇರುತ್ತಿದ್ದ ಗ್ರಂಥಗಳು ಮುದ್ರಣ ಯಂತ್ರದ ಸಹಾಯದಿಂದ ಸಾವಿರ ಸಂಖ್ಯೆಯಲ್ಲಿ ಪ್ರಕಟವಾಗತೊಡಗಿದವು. ಇದು ಹೊಸ ಶಿಕ್ಪಣವನ್ನು ಪಡೆದ ವಿದ್ಯಾವಂತರಿಗೆ ಬಿಡುವಿನ ಕಾಲದಲ್ಲಿ ಓದುವ ಹವ್ಯಾಸವನ್ನು ಅಂಟಿಸಿತು. ಬ್ರಿಟಿಷರು ತಮ್ಮ ಅಧಿಕಾರದಲ್ಲಿ ಆಡಳಿತ ನಿರ್ವಹಣೆಗೆ ಸ್ಥಳೀಯರನ್ನು ನೌಕರಿಗೆ ತೆಗೆದುಕೊಳ್ಳುತ್ತಿದ್ದರು. ಅದಕ್ಕೆ ಅಗತ್ಯವಾದ ಶಿಕ್ಷಣವನ್ನು ನೀಡುತ್ತಿದ್ದರು. ಈ ಹೊಸ ಪೀಳಿಗೆಯ ನೌಕರಶಾಹಿಗೆ ಕಾಲಯಾಪನೆಗಾಗಿ ಪುಸ್ತಕಗಳು ಹೊರಡ ತೊಡಗಿದವು. ರಾಜರ ಆಸ್ಥಾನದಲ್ಲಿದ್ದ ಪಂಡಿತರನ್ನು ಗಮನದಲ್ಲಿಟ್ಟು ಕ್ಲಿಷ್ಟ ಕಾವ್ಯ ರಚಿಸುತ್ತಿದ್ದ ಸಾಹಿತಿಗಳು ಈಗ ಜನಸಾಮಾನ್ಯರನ್ನು ಗಮನದಲ್ಲಿಟ್ಟು ಗದ್ಯದಲ್ಲಿ ಸರಳವಾಗಿ ಸಾಹಿತ್ಯ ರಚಿಸಬೇಕಾಯಿತು. ಹೀಗೆ ಸಾಹಿತ್ಯವು ರಾಜಾಶ್ರಯದಿಂದ ಜನಾಶ್ರಯದ ಕಡೆಗೆ ಹೊರಳುವಾಗ ಸಾಹಿತ್ಯ ಮತ್ತು ಸಹೃದಯನ ನಡುವಿನ ವಾಹಕವಾಗಿ ಪತ್ರಿಕೆಗಳು ಕೆಲಸ ಮಾಡಿದವು. ಕಾಗದದ ವ್ಯಾಪಕ ಬಳಕೆ, ಮುದ್ರಣ ಯಂತ್ರದ ಉಪಯೋಗ ಇವೆಲ್ಲಇದಕ್ಕೆ ಪೂರಕವಾದವು. ಇದು ಗದ್ಯದ ವಿಕಾಸಕ್ಕೆ ಕಾರಣವಾಯಿತು. ಬ್ರಿಟಿಷರ ಸತ್ತೆಯಿಂದ ಕನ್ನಡ ನಾಡಿನಲ್ಲಿ ಆಡಳಿತಾತ್ಮಕವಾಗಿ ಮಹತ್ವದ ಪರಿಣಾಮಗಳಾದವು. ವಿಜಯನಗರದ ಬಳಿಕ ಪ್ರಬಲ ಸಾಮ್ರಾಜ್ಯವನ್ನೇ ಕನ್ನಡಿಗರು ಕಂಡಿರಲಿಲ್ಲ. ದಕ್ಪಿಣದಲ್ಲಿ ಮೈಸೂರರಸರು ದೊಡ್ಡ ಭಾಗವನ್ನು ಆಳುತ್ತಿದ್ದರೂ ಉಳಿದಂತೆ ಅಲ್ಲಲ್ಲಿ ಪಾಳೆಪಟ್ಟುಗಳು ಇದ್ದವು. ಆ ಪಾಳೆಗಾರರ ಇಷ್ಟಾನಿಷ್ಟಕ್ಕೆ ಅನುಗುಣವಾಗಿ ಪ್ರಜೆಗಳ ಬದುಕು ಇರುತ್ತಿತ್ತು.ಆಳುವವನು ಆರು ಬಂದರೇನು ತಮ್ಮ ಶೋಷಣೆ ತಪ್ಪಿದ್ದಲ್ಲ’ ಎಂಬ ಭಾವದಲ್ಲಿ ಭಾರತದ, ಹಾಗೆಯೇ ಕನ್ನಡ ನಾಡಿನ ಜನರೂ ಇದ್ದಾಗ ಬ್ರಿಟಿಷರು ರಾಜಕೀಯವಾಗಿ ನಮ್ಮನ್ನು ಆಳಹತ್ತಿದರು. ಬ್ರಿಟಿಷರ ಆಡಳಿತ ಪಾಳೆಗಾರರ ದಬ್ಬಾಳಿಕೆಗಿಂತ ಮಿಗಿಲು ಎಂಬ ಭಾವನೆ ಜನಸಾಮಾನ್ಯರಲ್ಲಿ ಬರತೊಡಗಿತ್ತು. ಆದರೆ ಕನ್ನಡ ನೆಲ ಇತ್ತ ಮೈಸೂರು ಸಂಸ್ಥಾನದಲ್ಲಿ, ಕೆಲವು ಭಾಗ ಮುಂಬೈ ಪ್ರಾಂತದಲ್ಲಿ, ಕೆಲವು ಭಾಗ ಮದ್ರಾಸ್ ಪ್ರಾಂತದಲ್ಲಿ, ಇನ್ನು ಕೆಲವು ಭಾಗ ಹೈದ್ರಾಬಾದ ನಿಜಾಮನ ಆಳ್ವಿಕೆಯಲ್ಲಿ ಇದ್ದವು. ಈ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಮೇರೆಯನ್ನು ಗುರುತಿಸಿ ತಾವೆಲ್ಲ ಒಂದು ಕನ್ನಡ ತಾಯಿಯ ಮಕ್ಕಳು ಎಂಬ ಭಾವನೆ ನಾಡವರಲ್ಲಿ ಮೂಡುವ ಹಾಗೆ ಮಾಡುವುದು ಅಗತ್ಯವಾಗಿತ್ತು. ಈ ನಾಡು- ನುಡಿಯ ಐಕ್ಯತೆಯನ್ನು ನಮ್ಮ ಆದ್ಯ
ಪತ್ರಕರ್ತರೆ ಮನಗಂಡಿದ್ದರು.
ಮೈಸೂರಿನಲ್ಲಿ ಸಾಹಿತ್ಯ ಸೃಷ್ಟಿಗೆ ರಾಜಾಶ್ರಯವೇನೋ ಇತ್ತು. ಅದೇ ಪರಿಸ್ಥಿತಿ ಉಳಿದ ಭಾಗದಲ್ಲಿ ಇರಲಿಲ್ಲ. ಅಲ್ಲಿಯ ಸಾಹಿತ್ಯ ರಚನೆ ಹೊಸ ವಿದ್ಯಾಭ್ಯಾಸ ಮಾಡಿದ ಜನರನ್ನು ಒಳಗೊಂಡಿತ್ತು. ಜೊತೆಯಲ್ಲಿ ಸಾಹಿತ್ಯ ರಚನಾಕಾರರು ಹೊಸ ಶಿಕ್ಷಣ ಪದ್ಧತಿ ಯಲ್ಲಿ ಪಠ್ಯಗಳನ್ನು ರಚಿಸಬೇಕಾಗಿ ಬಂತು. ಪಠ್ಯಗಳಿಗಾಗಿಯೇ ಕೆಲವು ಪುಸ್ತಕಗಳು ರಚನೆಗೊಂಡಿರುವುದನ್ನು ಕಾಣುತ್ತೇವೆ. ಹೀಗೆಯೇ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹೊರಟ ಪತ್ರಿಕೆಗಳೂ ಇವೆ. ಸೂರಿ ವೆಂಕಟರಮಣ ಶಾಸ್ತ್ರಿಯ (೧೮೮೮- ಜನವರಿ) ಹಿತೋಪದೇಶ', ಇದೇ ವರ್ಷ ಮೈಸೂರಿನಿಂದ ಹೊರಟಕರ್ನಾಟಕ ವಾಣೀ ವಿಲಾಸ’ ಇಂಥವುಗಳಲ್ಲಿ ಸೇರಿವೆ. ವಿದ್ವತ್ ಪತ್ರಿಕೆಗಳಲ್ಲಿ ನಾಡಿನ ಇತಿಹಾಸದ ಬಗ್ಗೆ ಬಂದ ಲೇಖನಗಳ ಆಧಾರದ ಮೇಲೆಯೇ ಪಠ್ಯಗಳು ರಚನೆಗೊಂಡವು.
ಮುದ್ರಣ ಯಂತ್ರ, ಹೊಸ ಶಿಕ್ಷಣ, ರಾಜ ಪ್ರಭುತ್ವ ಶಿಥಿಲಗೊಳ್ಳುತ್ತಿದ್ದ ಸನ್ನಿವೇಶ ಇವೆಲ್ಲವುಗಳಿಂದ ಪ್ರಭಾವಿತವಾದ ಸಮಾಜದಿಂದ ಸಾಹಿತ್ಯ ಹೊಸ ರೂಪವನ್ನು ಪಡೆದುಕೊಳ್ಳಲು ಹವಣಿಸುತ್ತಿದ್ದಾಗಲೇ ಕನ್ನಡದಲ್ಲಿ ಪತ್ರಿಕೆಗಳು ಹುಟ್ಟಿದ್ದು. ಹೀಗಾಗಿ ಪತ್ರಿಕೆ ಮತ್ತು ಸಾಹಿತ್ಯ ಎರಡೂ ಏಕಕಾಲದಲ್ಲಿ ಹೊಸತನ್ನು ರೂಢಿಸಿಕೊಳ್ಳುವ, ಹದಗೊಳಿಸಿಕೊಳ್ಳುವ' ಜವಾಬ್ದಾರಿಯಲ್ಲಿದ್ದವು. ಹೊಸ ಸಾಹಿತ್ಯಕ್ಕೆ ಒಂದು ಪರಂಪರೆ ಸಿದ್ಧ ಳ್ಳಬೇಕಿತ್ತು. ಅದೇ ರೀತಿ ಪತ್ರಿಕೆಯೂ ಕನ್ನಡದಲ್ಲಿ ತನ್ನ ಮಾರ್ಗವನ್ನು ಕಂಡುಕೊಳ್ಳಬೇಕಿತ್ತು. ಈ ಅನುಸಂಧಾನ ಮಾರ್ಗ ಸಹಜವಾಗಿಯೇ ಪ್ರಾಯೋಗಿಕವಾಗಿತ್ತು. ಕನ್ನಡದ ಮೊದಲ ಪತ್ರಿಕೆಯೇ ಸಾಹಿತ್ಯವನ್ನು ಪೋಷಿಸುವ, ಪ್ರಚಾರಪಡಿಸುವ ಕಾರ್ಯವನ್ನು ನಡೆಸಿತು. ಪತ್ರಿಕೆ ಒಂದು ಉದ್ಯಮದ ಸ್ವರೂಪವನ್ನು ಪಡೆಯದೆ ಇದ್ದ ಆರಂಭದ ಕಾಲದಲ್ಲಿ ಪತ್ರಿಕೆಗಳೆಲ್ಲ ಒಂದು ನಿರ್ದಿಷ್ಟ ಉದ್ದೇಶವನ್ನು ಇಟ್ಟುಕೊಂಡು ಜನ್ಮ ತಳೆದವು. ಪತ್ರಿಕೆ ನಡೆಸಿ ಹಣ ಮಾಡಬೇಕು ಎನ್ನುವುದು ಪತ್ರಿಕೆ ನಡೆಸುವವರ ಉದ್ದೇಶವಾಗಿರಲಿಲ್ಲ. ಕೆಲವರಿಗೆ, ಅಂದರೆ ಕ್ರೈಸ್ತ ಮಿಶನರಿಗಳು ತಮ್ಮ ಧರ್ಮದ ಪ್ರಚಾರ ಮಾಡುತ್ತ ಇನ್ನೊಂದು ಧರ್ಮವನ್ನು ಟೀಕಿಸತೊಡಗಿದಾಗ ಹಿಂದೂಗಳೂ ತಮ್ಮ ಧರ್ಮದ ಸಮರ್ಥನೆಗೆ ಪತ್ರಿಕೆ ನಡೆಸಲು ಮುಂದಾದರು. ಕ್ರೈಸ್ತ ಪಾದ್ರಿಗಳು ಹಿಂದೂ ಧರ್ಮವನ್ನು ಟೀಕಿಸಿದಷ್ಟೂ ಹಿಂದೂಗಳಿಗೆ ತಮ್ಮ ಧರ್ಮದಲ್ಲಿ ಅಭಿಮಾನ ಅಧಿಕಗೊಳ್ಳತೊಡಗಿತು. ವೇದೋಪನಿಷತ್ತುಗಳ ಜ್ಞಾನ ಸಂಪತ್ತು ಇವರಿಗೆ ಹೆಮ್ಮೆಯ ಅಂಶಗಳಾದವು. ಆರ್ಯ ಸಮಾಜ, ಬ್ರಹ್ಮ ಸಮಾಜಗಳು ಧಾರ್ಮಿಕ, ಸಾಮಾಜಿಕ ಸುಧಾರಣೆಗೆ ಮುಂದಾಗಿದ್ದವು. ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ, ಆಧುನಿಕ ಭಾರತದ ಸಾಮಾಜಿಕ ಸುಧಾರಣೆಯ ಹರಿಕಾರ ರಾಜಾರಾಮ ಮೋಹನರಾಯ, ಚಿಪಳೂಣಕರ, ಟಿಳಕ ಮೊದಲಾದವರ ನೇತೃತ್ವ ಇದಕ್ಕೆ ಇತ್ತು. ತಮ್ಮ ಧರ್ಮ ಸಂಸ್ಕೃತಿಯ ಮೇಲ್ಮೆಯನ್ನು ಹೇಳುತ್ತ ಅದನ್ನು ಹೆಮ್ಮೆಗೆ ಕಾರಣವಾಗಿಸಿಕೊಂಡರು. ಜೊತೆಯಲ್ಲಿ ಇವರಿಗೆ ಇಂಗ್ಲಿಷ್ ಶಿಕ್ಷಣ ದೊರೆಯಿತು. ಇದು ಹೊಸ ಚಿಂತನೆ, ದೃಷ್ಟಿಕೋನವನ್ನು ಒದಗಿಸಿತು. ತಮ್ಮಲ್ಲಿಯ ಕೆಡುಕನ್ನು ಒಪ್ಪಿಕೊಳ್ಳತ್ತಲೇ ಅದನ್ನು ಒಪ್ಪಗೊಳಿಸುವ ಪ್ರಯತ್ನ ನಡೆಯಿತು. ಕ್ರೈಸ್ತರು ತಮ್ಮ ಧರ್ಮದ ಪ್ರಚಾರಕ್ಕೆ ಗ್ರಂಥಗಳನ್ನು, ಪತ್ರಿಕೆಗಳನ್ನು ಹೊರಡಿಸತೊಡಗಿದಾಗ ಹಿಂದೂ ಧರ್ಮವನ್ನು ಸಮರ್ಥಿಸುವ ಗ್ರಂಥಗಳು, ಪತ್ರಿಕೆಗಳು ಬಂದವು. ಹಿಂದುಗಳಲ್ಲಿಯೇ ಶೈವ, ವೈಷ್ಣವ, ವೀರಶೈವ ಇತ್ಯಾದಿ ಶಾಖೆಗಳನ್ನು ಸಮರ್ಥಿಸುವ ಪತ್ರಿಕೆಗಳೂ, ಗ್ರಂಥಗಳೂ ಬಂದವು.ಆರ್ಯಮತ ಸಂಜೀವಿನಿ’, ವೀರಶೈವ ಗ್ರಂಥ ಪ್ರಕಾಶಿಕೆ',ಅರುಣೋದಯ’, ಸಭಾಪತ್ರ' ಮೊದಲಾದವು ಕ್ರಿಯೆ ಪ್ರತಿಕ್ರಿಯೆ ಕಾರಣವಾಗಿ ಹುಟ್ಟುಪಡೆದ ಪತ್ರಿಕೆಗಳು. ಇವುಗಳ ಮಥಿತ ಇಷ್ಟೇ, ಕ್ರಿಯೆಗೆ ಎಲ್ಲಿ ಪ್ರತಿಕ್ರಿಯೆ ಇರುತ್ತದೋ ಅದೊಂದು ಜೀವಂತ ಸಮಾಜವಾಗಿರುತ್ತದೆ. ಈ ಜೀವಂತಿಕೆ ಇದ್ದಾಗಲೇ ಆರೋಗ್ಯಕರ ವಾಗ್ವಾದ ಆರಂಭವಾಗುತ್ತದೆ. ಈ ವಾಗ್ವಾದದ ಅಭಿವ್ಯಕ್ತಿಗೆ ಪತ್ರಿಕೆಗಳೂ ಅಂದು ವಾಹಕವಾದವು. ಕ್ರೈಸ್ತ ಪ್ರಾಟೆಸ್ಟಂಟ್ ಪಾದ್ರಿಗಳು ತಮ್ಮ ಪ್ರಕಟಣೆಗಳಲ್ಲಿ ಪತ್ರಿಕೆಗಳಲ್ಲಿ ತಮ್ಮ ಧರ್ಮದ ಸಮರ್ಥನೆ, ಅನ್ಯ ಧರ್ಮದ ನಂಬಿಕೆಗಳನ್ನು ಪ್ರಶ್ನಿಸುವಾಗ ಬಳಕೆಯ ಭಾಷೆಯೊಂದಿಗೆ ಗುದ್ದಾಡಲೇ ಬೇಕಾಯಿತು. ಇದು ಭಾಷೆಗೆ ಹೊಸ ಕಸುವನ್ನು ಒದಗಿಸಿತು. ಎಷ್ಟು ಪರಿಣಾಮಕಾರಿಯಾಗಿ ಎದುರಾಳಿಗೆ ಮನವರಿಕೆ ಮಾಡಬಹುದು ಎಂಬ ಸವಾಲು ಎದುರಾದಾಗ ಭಾಷೆಯ ಜೊತೆ ಪ್ರಯೋಗ ಅನಿವಾರ್ಯವಾಗುತ್ತದೆ. ಈ ಪ್ರಾಟೆಸ್ಟಂಟ್ ಕಲ್ಚರ್ ಅಂದರೆ ಪ್ರತಿಭಟನೆ ಧ್ವನಿಯಿಂದಲೇ ಉತ್ತಮ ಗದ್ಯ ರೂಪಪಡೆಯುವುದು ಸಾಧ್ಯವಾಯಿತು. ಈ ಗದ್ಯದ ಕೃಷಿಯೇ ಮುಂದೆ ಬಂದ ಕಾದಂಬರಿ ಪ್ರಕಾರಕ್ಕೆ ಅಡಿಪಾಯವನ್ನು ಒದಗಿಸಿತು. ಮಂಗಳೂರು ಸಮಾಚಾರ’ದ ನಂತರ ಕಾಲು ಶತಮಾನದ ಅವಧಿಯಲ್ಲಿ ಹಲವು ಪತ್ರಿಕೆಗಳು ಹುಟ್ಟಿಕೊಂಡವು. ಪತ್ರಿಕೆ ನೆಲೆಗೊಳ್ಳಲು ಹಲವು ಪ್ರಯೋಗಗಳು ನಡೆದವು. ಪತ್ರಿಕೆಯ ಉಪಯೋಗ ಜನರಿಗೆ ಮನದಟ್ಟಾಗುವ ಹಂತದಲ್ಲಿಯೇ ಪತ್ರಿಕೆ ನಡೆಸುವವರೂ ತಮ್ಮ ಉಪಯೋಗಕ್ಕೆ ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಚಿಂತಿಸಿ ಅದರಲ್ಲಿ ಪ್ರಯೋಗಶೀಲರಾದರು. ಅದರ ಜೊತೆಯಲ್ಲಿಯೇ ಅವರು ನಮ್ಮ ಪ್ರಾಚೀನ ಸಾಹಿತ್ಯವನ್ನು ಶೋಧಿಸಿ ಪ್ರಕಟಿಸಿದರು. ಆಧುನಿಕ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯ ಪ್ರಯೋಗ ನಡೆಸಿದರು. ಸಾಹಿತ್ಯದಲ್ಲಿ ಬಳಕೆಯಾಗುವ ಗದ್ಯವನ್ನು ಅವರು ಪತ್ರಿಕೆಗಳಲ್ಲಿ ರೂಢಿಸಿದರು. ಬಂಗಾಳ ವಿಭಜನೆಯ ವರೆಗೆ ಅಂದರೆ ೧೯೦೫ರ ವರೆಗೂ ಕನ್ನಡದ ಪತ್ರಿಕೆಗಳು ಮತ್ತು ಸಾಹಿತ್ಯ ಎರಡೂ ಒಂದೇ ನೆಲೆಯಲ್ಲಿ ಮುಂದುವರಿದವು. ಸಾಹಿತ್ಯ ಇದೇ ರೀತಿಯಲ್ಲಿ ಸೃಷ್ಟಿಯಾಗಬೇಕು ಎಂದು ನಿರ್ದೇಶನ ನೀಡುವ ಮಟ್ಟದ ವರೆಗೆ ಪತ್ರಿಕೆಗಳು ಪ್ರಭಾವಿಯಾಗಿದ್ದವು. ಪತ್ರಿಕೆಗಳು ರೂಪಿಸಿದ ಜನಾಭಿಪ್ರಾಯಕ್ಕೆ ಅನುಗುಣವಾಗಿಯೇ ಸಾಹಿತ್ಯ ಸೃಷ್ಟಿಯಾದ ಉದಾಹರಣೆ ಸಾಕಷ್ಟು ದೊರೆಯುತ್ತದೆ. ಈ ಅವಧಿಯಲ್ಲಿ ನಾಡು ಛಿದ್ರವಾದ ಬಗ್ಗೆ ದುಃಖವಿದೆ. ನಾಡು ಒಂದಾಗಿದ್ದರೆ ನುಡಿಯೂ
ಶ್ರೀಮಂತವಾಗಿರುತ್ತದೆ ಎಂಬ ಕಳಕಳಿ ಇದೆ. ಸಮಾಜದಲ್ಲಿಯ ಅನಿಷ್ಟಗಳ ಬಗೆಗೆ ಕೋಪವಿದೆ. ಅದನ್ನು ದೂರಮಾಡುವ ಬಗೆಗೆ ವಿಧಾಯಕ ಕ್ರಮಗಳ ಆಲೋಚನೆಗಳಿವೆ. ಆದರೆ ನಾಡು ಮತ್ತು ದೇಶ ಇವುಗಳ ನಡುವಿನ ಅಂತರ ಸ್ಪಷ್ಟವಾಗಿಲ್ಲ. ಬ್ರಿಟಿಷರ ಬಗ್ಗೆ ವಿರೋಧವೂ ಇಲ್ಲ. ಬದಲಿಗೆ ಅವರು ಜಾರಿಗೆ ತಂದ ಸಮಾಜ ಸುಧಾರಣೆಯ ಬಗ್ಗೆ ಮೆಚ್ಚುಗೆ ಇದೆ. ಆದರೆ ಬಂಗಾಳ ವಿಭಜನೆಯು ರಾಷ್ಟ್ರೀಯ ಭಾವನೆಯನ್ನು ಬೆಳೆಸುತ್ತದೆ. ಆ ನಂತರದ ಪತ್ರಿಕೆಗಳ ಕಾಳಜಿಯಲ್ಲಿ ಬದಲಾವಣೆ ಕಾಣುತ್ತದೆ. ಅದೇ ರೀತಿ ಸಾಹಿತ್ಯದಲ್ಲೂ. ಕಾರಣ ೧೯೦೫ರ ವರೆಗಿನ ಕಾಲಘಟ್ಟದ ಸಾಹಿತ್ಯ ಮತ್ತು ಪತ್ರಿಕೆಯನ್ನು ಈ ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ.
ನಾಡು ನುಡಿಯ ಬಗ್ಗೆ ಪ್ರಿತಿ: ಸಾಹಿತ್ಯದ ಜೀವಸೆಲೆ ನುಡಿ. ಒಂದು ನುಡಿ ಸತ್ವಯುತವಾಗಿ ಶ್ರೀಮಂತವಾಗಿ ಇರಬೇಕು ಎಂದರೆ ಆ ನುಡಿಯನ್ನು ಆಡುವವರ ಒಂದು ನಾಡು ಇರಬೇಕು. ದುರ್ದೈವವಶಾತ್ ಕನ್ನಡ ನುಡಿಯ ಪ್ರದೇಶ ಬೇರೆ ಬೇರೆ ಆಡಳಿತಗಳಲ್ಲಿ ಹರಿದು ಹಂಚಿಹೋಗಿತ್ತು. ಆದರೆ ನಮ್ಮ ಆರಂಭ ಕಾಲದ ಪತ್ರಕರ್ತರಿಗೆ ನಾಡಿನ ವ್ಯಾಪ್ತಿಯ ಪರಿಕಲ್ಪನೆ ಇತ್ತು. ಪ್ರಬಲವಾದ ಒಂದು ಆಡಳಿತಕ್ಕೆ ಒಳಪಟ್ಟ ನಾಡು ಇಲ್ಲದಿದ್ದರೆ ನುಡಿಗೆ ತೇಜಸ್ಸು ಇರುವುದಿಲ್ಲ. ತೇಜಸ್ಸನ್ನು ಕಳೆದುಕೊಂಡ ನುಡಿಯಿಂದ ಉತ್ತಮ ಸಾಹಿತ್ಯ ಕೃತಿಯೂ ಬರುವುದಿಲ್ಲ. ನುಡಿಗೆ ರಾಜ ಪೋಷಣೆ ದೊರೆತಾಗಲೇ ಉತ್ತಮ ಗ್ರಂಥಗಳು ಬಂದಿದ್ದನ್ನು ಕನ್ನಡ ಸಾಹಿತ್ಯ ಚರಿತ್ರೆ ಹೇಳುತ್ತದೆ. ರಾಜಕೀಯವಾಗಿ ಹರಿದು ಹಂಚಿಹೋಗಿದ್ದರೂ ಕನ್ನಡ ಭಾಷಿಕರಿಗೆ ಕರ್ನಾಟಕತ್ವದ ಕಲ್ಪನೆ ಇತ್ತು.
ನಮ್ಮ ಮೊದಲ ಪತ್ರಕರ್ತರಿಗೂ ಕನ್ನಡ ನಾಡಿನ ಸಮಗ್ರ ಕಲ್ಪನೆ ಇತ್ತು. ಕಾವೇರಿಯಿಂದ ಮಾ ಗೋದಾವರಿ ವರೆಗಿರ್ಪ.. .. ..' ನೃಪತುಂಗನ ಕನ್ನಡ ನಾಡು ಗೊತ್ತಿಲ್ಲದಿದ್ದರೂ ಕನ್ನಡ ನುಡಿಯನ್ನು ಆಡುವ ಜನರು ಎಲ್ಲೆಲ್ಲಿ ಇದ್ದಾರೆ, ಕನ್ನಡಿಗರ ಪ್ರಾದೇಶಿಕ ವ್ಯಾಪ್ತಿಯ ಅರಿವು ಪಶ್ಚಿಮದಿಂದ ಬಂದವರಿಗೂ ಇದ್ದಿತ್ತು. ಹಿಂದೆ ಕನ್ನಡಿಗರು ದೊಡ್ಡ ಸಾಮ್ರಾಜ್ಯ ಕಟ್ಟಿದ್ದರು. ಇಂದು ಅವರು ರಾಜಕೀಯವಾಗಿ ಹರಿದು ಹಂಚಿಹೋಗಿದ್ದಾರೆ ಎಂಬ ಸತ್ಯವನ್ನು ಅವರು ಬಲ್ಲವರಾಗಿದ್ದರು. ಇದಕ್ಕೆ ಪುರಾವೆ ಕನ್ನಡದ ಮೊದಲ ಪತ್ರಿಕೆಮಂಗಳೂರು ಸಮಾಚಾರ’ದಲ್ಲಿಯೇ ದೊರೆಯುವುದು. ಪತ್ರಿಕೆಯ ಪ್ರಕಟಣೆಯನ್ನು ಮಂಗಳೂರಿನಿಂದ ಬಳ್ಳಾರಿಗೆ ಸ್ಥಳಾಂತರಿಸುವಾಗ ಅದರ ಸಂಪಾದಕ ಹರ್ಮನ್ ಮೋಗ್ಲಿಂಗ್ ಆ ಪತ್ರಿಕೆಯಲ್ಲಿ ಬರೆದಿರುವ ಮಾತು ಗಮನಾರ್ಹವಾದುದು.
ಮಂಗಳೂರು, ಮೈಸೂರು, ತುಮ್ಕೂರು, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ, ಶಿರಸಿ, ಹೊಂನಾವರ ಮೊದಲಾದ ಸ್ಥಳಗಳಲ್ಲಿ ಕೆಲವು ನೂರು ಮಂದಿ ಈ ಕಾಗದವನ್ನು ಈ ವರೆಗೆ ತೆಗೆದುಕೊಳ್ಲುತ್ತಾ ಬಂದರು. ಮೊದಲಿನ ನಂಬ್ರದ ಕಾಗದಗಳನ್ನು ಛಾಪಿಸಿ ಪ್ರಕಟನ ಮಾಡುವಾಗ್ಗೆ ನಾವು ಮಾಡಿದ ಆಲೋಚನೆ ಈ ಕಾಲದಲ್ಲಿ ಈ ದೇಸಸ್ಥರೊಳಗೆ ನಡಿಯುವುದೋ ಏನೋ ಎಂದು ಸ್ವಲ್ಪ ಸಂದೇಹ ಪಡುತ್ತಿದ್ದೆವು. ಈಗ ಈ ದೇಶಸ್ಥರಲ್ಲಿ ಅನೇಕರಿಗೆ ಕನಡು ಭಾಷೆಯಲ್ಲಿ ಬರೆದ ಒಂದು ಸಮಾಚಾರ ಕಾಗದವನ್ನು ಓದುವುದರಲ್ಲಿ ಮತಿ ಆಗುವುದೆಂದು ನೋಡಿ ಸಂತೋಷದಿಂದ ಅದನ್ನು ವೃದ್ಧಿ ಮಾಡುವ ಪ್ರಯತ್ನದಿಂದ ಇನ್ನು ಮುಂದೆ ಅದನ್ನು ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿ ಇರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಲಿಕ್ಕೆ ನಿಶ್ಚೈಸಿದ್ದೇವೆ. ಆ ಮೇಲೆ ಕಂನಡ ಶೀಮೆಯ ನಾಲ್ಕು ದಿಕ್ಕುಗಳಲ್ಲಿಯಿರುವವರು ಶುದ್ಧವಾದ ಮೊಳೆ ಅಚ್ಚುಗಳಿಂದ ಆಗುವ ಬರಹವನ್ನು ಶುಲಭವಾಗಿ ಓದಬಹುದು, ಇದಲ್ಲದೆ.. .. .. ಹೆಚ್ಚು ವರ್ತಮಾನವಂನೂ ಚರಿತ್ರೆಗಳನ್ನು ವಿದ್ಯಾಪಾಠಘಲಂನೂ ಬುದ್ದಿಮಾತುಗಳನ್ನು ಬರಿಯುವುದಕ್ಕೆ ಸ್ಥಳ ಶಿಕ್ಕುವುದು.' ಮೋಗ್ಲಿಂಗ್ ಅವರಿಗೆ ಕನ್ನಡ ಜನರು ಇರುವ ಪ್ರದೇಶದ ವ್ಯಾಪ್ತಿಯ ಸ್ಪಷ್ಟ ಪರಿಚಯ ಇತ್ತು.ಮಂಗಳೂರು ಸಮಾಚಾರ’ ಬಳ್ಳಾರಿಗೆ ಹೋದಮೇಲೆ ಅದು ಕಂನಡ ಸಮಾಚಾರ'ವಾಗಿ ಪ್ರಕಟವಾಗತೊಡಗಿತು.ಕನ್ನಡ’ ಇಲ್ಲಿ ನುಡಿ ಮಾತ್ರವಲ್ಲ ನಾಡನ್ನೂ ಪ್ರತಿನಿಧಿಸುತ್ತಿತ್ತು. ಕೇವಲ ಮೋಗ್ಲಿಂಗ್ ಮಾತ್ರವಲ್ಲ ಆ ಕಾಲದ ಎಲ್ಲ ಪ್ರಮುಖರಲ್ಲೂ ಈ ಅರಿವಿತ್ತು. ಇದಕ್ಕೆ ಪುರಾವೆಯಾಗಿ ಆ ಕಾಲದ ಪತ್ರಿಕೆಗಳು, ಪ್ರಕಾಶನ ಸಂಸ್ಥೆಗಳು, ಮುದ್ರಣ ಯಂತ್ರಗಳ ಹೆಸರುಗಳನ್ನೇ ಗಮನಿಸಬಹುದು. ಮುಂಬಯಿಯಲ್ಲಿ ಕನ್ನಡಿಗರು ಸ್ಥಾಪಿಸಿದ ಮುದ್ರಣಾಲಯ ಕರ್ನಾಟಕ ಮುದ್ರಾಶಾಲೆ'- (೧೮೮೮), ಧಾರವಾಡದಿಂದ ಹೊರಡುತ್ತಿದ್ದ ಮರಾಠಿ ಪತ್ರಿಕೆಕರ್ನಾಟಕ ವಾರ್ತಿಕ’ (೧೮೭೯), ಬೆಳಗಾವಿಯಿಂದ ಹೊರಡುತ್ತಿದ್ದ ಕನ್ನಡ ವಾರ್ತಾ ಪತ್ರಿಕೆ ಕರ್ನಾಟಕ ಮಿತ್ರ'. ಹರ್ಮನ್ ಮೋಗ್ಲಿಂಗ್ ೧೮೫೭ರಲ್ಲಿ ಆರಂಭಿಸಿದ ಪತ್ರಿಕೆಕನ್ನಡ ವಾರ್ತಿಕ’. ಮೈಸೂರಿನಲ್ಲಿ ೧೮೬೫ರ ಜುಲೈ ತಿಂಗಳಿನಿಂದ ಪಾಕ್ಷಿಕ ಕರ್ನಾಟಕ ಪ್ರಕಾಶಿಕಾ' ಹೊರಟಿತು. ೧೮೭೪ರಲ್ಲಿ ಬೆಳಗಾವಿಯಿಂದಕರ್ನಾಟಕ ಜ್ಞಾನ ಮಂಜರಿ’ ಮಾಸಪತ್ರಿಕೆ ಹೊರಟಿತು. ೧೮೮೩ರಲ್ಲಿ ಹೊರಟ ವಾರ್ತಾಪತ್ರಿಕೆ ಕರ್ನಾಟಕ ಪತ್ರ'. ಬೆಳಗಾವಿಯಿಂದ ೧೮೮೬ರಲ್ಲಿಕರ್ನಾಟಕ ಹಿತೇಚ್ಛು’ ಹೊರಟಿತು. ಬಿಜಾಪುರದಿಂದ ೧೮೯೨ರಲ್ಲಿ ಹೊರಟ ವಾರ್ತಾ ಪತ್ರಿಕೆ ಕರ್ನಾಟಕ ವೈಭವ'.ಕರ್ನಾಟಕ ಕಾವ್ಯಮಂಜರಿ’/ ಕರ್ನಾಟಕ ಕಾವ್ಯಕಲಾನಿಧಿ' ಪ್ರಾಚೀನ ಕಾವ್ಯಗಳ ಪ್ರಕಟಣೆಗೆ ಮೀಸಲಾದ ಪತ್ರಿಕೆಗಳು. ಇದೇ ಉದ್ದೇಶದ ಇನ್ನೊಂದು ಪತ್ರಿಕೆ ೧೮೯೪ರಕರ್ನಾಟಕ ಭಾಷಾ ಸೇವಕ’. ಮೈಸೂರಿನಿಂದ ಕರ್ನಾಟಕ ಗ್ರಂಥಮಾಲೆ' (೧೮೯೩), ಧಾರವಾಡದಿಂದಕರ್ನಾಟಕ ವೃತ್ತ’ (೧೮೮೩), ಕರ್ನಾಟಕ ಪತ್ರ' (೧೮೮೩). ೨೦ನೆ ಶತಮಾನದಲ್ಲಿ ಬಂದ ಪತ್ರಿಕೆಗಳ ಹೆಸರನ್ನೂ ಇಲ್ಲಿ ಗಮನಿಸಬಹುದು.ಜಯ ಕರ್ನಾಟಕ’, ಪ್ರಬುದ್ಧ ಕರ್ನಾಟಕ',ಸಂಯುಕ್ತ ಕರ್ನಾಟಕ’, ವಿಶ್ವ ಕರ್ನಾಟಕ' ಇತ್ಯಾದಿ. ಹೀಗೆ ಆ ಕಾಲದ ಪತ್ರಿಕೆಗಳ ಹೆಸರುಗಳನ್ನು ಕಂಡಾಗ ನಾಡು ನುಡಿಯ ಬಗ್ಗೆ ಅವುಗಳಿಗೆ ಇರುವ ತುಡಿತ, ಪ್ರಜ್ಞೆ ತಿಳಿಯುತ್ತದೆ. ಕ್ರೈಸ್ತ ಪಾದ್ರಿಗಳಿಗೆ ಕನ್ನಡದ ಮೇರೆಗಳನ್ನು ಅರಿತುಕೊಳ್ಳುವುದು ಅನಿವಾರ್ಯವೂ ಇತ್ತು. ಏಕೆಂದರೆ ಅವರ ಧರ್ಮ ಪ್ರಸಾರಕ್ಕೆ ಸ್ಥಳೀಯ ಭಾಷೆಯು ಅಗತ್ಯವಾಗಿತ್ತು. ಆ ಭಾಷಿಕರು ಇರುವ ಮೇರೆಗಳನ್ನು ಅರಿತುಕೊಂಡರೆ ಧರ್ಮ ಪ್ರಸಾರ ಆಯಾ ಭಾಷೆಯಲ್ಲಿಯೇ ಮಾಡುವುದಕ್ಕೆ ಅನುಕೂಲವಾಗುತ್ತಿತ್ತು. ಅವರು ತಮ್ಮ ಬೈಬಲನ್ನು ಬಹಳ ಹಿಂದೆಯೇ ತುಳು ಮತ್ತು ಕೊಡವ ಭಾಷೆಗಳಲ್ಲಿ ಹೊರತಂದುದನ್ನು ಮೇಲಿನ ಮಾತಿಗೆ ಪೂರಕವಾಗಿ ಹೇಳಬಹುದು. ಕ್ರೈಸ್ತ ಪಾದ್ರಿಗಳ ಉದ್ದೇಶ ಏನೇ ಇರಲಿ ಆದರೆ ಕನ್ನಡ ಪತ್ರಿಕೋದ್ಯಮಿಗಳು ನಾಡು ನುಡಿಯ ಪ್ರಜ್ಞೆಯಿಂದಲೇ ಕರ್ನಾಟಕದ ಹೆಸರನ್ನು ಇಟ್ಟುಕೊಂಡಿದ್ದರು. ಕನ್ನಡಿಗರಿಗೆ ಸದ್ಯ ದೊಡ್ಡ ಸಾಮ್ರಾಜ್ಯದ ಆಸರೆ ಇಲ್ಲದಿದ್ದರೂ ವಿಜಯನಗರದಂಥ ಸಾಮ್ರಾಜ್ಯ ಹೊಂದಿದ್ದೆವೆಂಬ ಹೆಮ್ಮೆ ಅವರಲ್ಲಿತ್ತು. ವರ್ತಮಾನದಲ್ಲಿ ಹೆಮ್ಮೆಪಡುವುದಕ್ಕೆ ಏನೂ ಇಲ್ಲದಿದ್ದಾಗ ಭೂತವನ್ನು ಆರಾಧಿಸುವುದು ಸಹಜ. ಈ ಭೂತದ ಆರಾಧನೆಯೇ ೧೯೧೭ರಲ್ಲಿ ಆಲೂರ ವೆಂಕಟರಾಯರುಕರ್ನಾಟಕ ಗತ ವೈಭವ’
ಬರೆಯುವುದಕ್ಕೆ ಪ್ರೇರಣೆಯಾಯಿತು. ಇದರಲ್ಲಿಯೇ ಕರ್ನಾಟಕದ ಏಕೀಕರಣದ ಬೀಜವು ಹುದುಗಿತ್ತು.
ವೆಂಕಟರಂಗೋ ಕಟ್ಟಿಯವರು ೧೮೭೫ರಲ್ಲಿ ಶೋಧಕ' ಪತ್ರಿಕೆ ಹೊರಡಿಸಿದರು.ಶೋಧಕ’ದ ಪ್ರಥಮ ಸಂಪಾದಕೀಯ ಗಮನಿಸಿದಾಗ ನಾಡಿನ ಬಗೆಗ್ಗೆ ಅವರಿಗಿರುವ ಕಲ್ಪನೆ ತಿಳಿಯುವುದು. ಇಂಥ ಪ್ರಜ್ಞೆ ಏಕೀಕೃತ ಕರ್ನಾಟಕದಲ್ಲಿರುವವರ ಅಗತ್ಯವೂ ಆಗಿತ್ತು. ಕಟ್ಟಿಯ ಈ ಸಂಪಾದಕೀಯದಲ್ಲಿ ಕನ್ನಡ ನಾಡಿನ ಕೊರತೆ ಏನು ಎಂಬುದನ್ನು ವಿವೇಚಿಸಲಾಗಿದೆ. ಕರ್ನಾಟಕವನ್ನು ಮಹಾರಾಷ್ಟ್ರದೊಂದಿಗೆ ಇಟ್ಟು ತುಲನೆ ಮಾಡಿ ನಮ್ಮಲ್ಲಿ ಏನಿಲ್ಲ ಎಂಬುದನ್ನು ಹೇಳಿ ವಿಷಾದಿಸಲಾಗಿದೆ.
ಕೊಲ್ಲಾಪುರ, ಬೀದರ, ನೀಲಗಿರಿ, ಪಶ್ಚಿಮ ಸಮುದ್ರ ಈ ೪ ಮರ್ಯಾದೆಗಳ ಮಧ್ಯದಲ್ಲಿ ವಿಸ್ತಾರವಾಗಿ ಹಬ್ಬಿದ ಸೀಮೆಯು ಕರ್ನಾಟಕ. ಈ ದೇಶದ ಕ್ಪೇತ್ರಫಲವು ಸು.೬೬,೦೦೦ ಚೌಕು ಮೈಲು. ಜನಸಂಖ್ಯೆ ೭೭ ಲಕ್ಷ. ಆದರೆ ನಮ್ಮ ನೆರೆಯಲ್ಲಿದ್ದ ಮಹಾರಾಷ್ಟ್ರ ದೇಶವು ಇದಕ್ಕೂ ಚಿಕ್ಕದಿದ್ದಾಗ್ಯೂ ಇವೆರಡು ದೇಶಗಳ ಈಗಿನ ಸ್ಥಿತಿ ಗತಿಗಳನ್ನು ಸರಿ ನೋಡಲಾಗಿ ಅತಿ ಖೇದಕರವಾದ ವ್ಯತ್ಯಾಸವು ಕಂಡು ಬರುತ್ತದೆ. ಮಹಾರಾಷ್ಟ್ರದಲ್ಲಿನಾಲ್ಕೈದು ಕಾಲೇಜುಗಳೂ ಬಹುಶಃ ಜಿಲ್ಲೆಗೊಂದರಂತೆ ಹಾಯಸ್ಕೂಲುಗಳೂ, ೨೦೦೦ಕ್ಕಿಂತ ಹೆಚ್ಚು ಇತರ ಶಾಲೆಗಳೂ ಇರುತ್ತವೆ. ಕರ್ನಾಟಕದಲ್ಲಿ ಕಾಲೇಜು ಇಲ್ಲ. ಹಾಯಸ್ಕೂಲುಗಳು (ಮೈಸೂರು, ಮದ್ರಾಸಗಳಿಗೆ ಶೇರಿದ ಭಾಗಗಳು ಸಹಿತ)' ಐದಾರಕ್ಕಿಂತ ಹೆಚ್ಚಿಲ್ಲ. ಇತರ ಶಾಲೆಗಳು (ಪ್ರಾಥಮಿಕ)ಯೆಲ್ಲ ಕೂಡಿ ಆರೇಳು ನೂರರೊಳಗೇ ಎಂದು ಲೆಕ್ಕವನ್ನು ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ೩೦ಕ್ಕಿಂತ ಹೆಚ್ಚು ವರ್ತಮಾನ ಪತ್ರಗಳೂ ಸುಮಾರು ೨೦ ಮಾಸಿಕ ಪುಸ್ತಕಗಳೂ ಇದ್ದರೆ ಕರ್ನಾಟಕ ಭಾಷೆಯಲ್ಲಿ ಎರಡಕ್ಕಿಂತ ಹೆಚ್ಚು ವರ್ತಮಾನ ಪತ್ರಗಳಿಲ್ಲ. ಅವೂ ಬೆಂಗಳೂರು ಶೀಮೆಯ ಹೊರಗೆ ಯಾರಿಗೂ ಗೊತ್ತಿಲ್ಲ. ಮಾಸಿಕ ಪುಸ್ತಕವು ಮಾತ್ರ ಒಂದುಂಟು. ಅದೂ ಹುಟ್ಟಿ ಒಂದು ವರ್ಷವು ಇನ್ನೂ ಪೂರ್ಣವಾಗಿರುವುದಿಲ್ಲ. ಈ ಮಹದಂತರವ ಕಂಡು ಕರ್ನಾಟಕದ ಕೆಲವರು ಖೇದಪಟ್ಟರೆ ಮಹಾರಾಷ್ಟ್ರದವರು ಹೆಮ್ಮೆಯಿಂದ ಅವರನ್ನು ಧಿಕ್ಕರಿಸುತ್ತಾರೆ ಎಂಬ ಅಂಶವನ್ನು ಅವರು ದಾಖಲಿಸಿದ್ದಾರೆ. ಆದರೆ ಕರ್ನಾಟಕರು ಮಂದಮತಿಗಳೆಂಬುದಾಗಿ ಸಿದ್ಧವಾಗಲರಿಯದು ಎನ್ನುವ ಕಟ್ಟಿ ಈ ಅಂತರಕ್ಕೆ ಕರ್ನಾಟಕದಲ್ಲಿ ಇಂಗ್ಲಿಷ ವಿದ್ಯದ ಪ್ರಸಾರವು ಕಡಿಮೆಯಾಗಿರುವುದು ಕಾರಣ ಎನ್ನುವರು. ಹಾಗೆಂದು ಅವರಿಗೆ ಇಂಗ್ಲಿಷ್ ವಿದ್ಯದ ಬಗೆಗೆ ಅತೀವ ಮೋಹ ಇತ್ತು ಎಂದೇನಲ್ಲ. ಈ ನ್ಯೂನತೆಯಲ್ಲಿ ಸಹ ಕರ್ನಾಟಕರು ಸಂತೋಷ ಪಡತಕ್ಕಂಥ ಸಂಗತಿ ಎಂದರೆ ಇಂಗ್ಲಿಷ್ ವಿದ್ಯದ ದುರ್ವ್ಯಸನಗಳೂ ದುರಾಚಾರಗಳೂ ಕಡಿಮೆಯಾಗಿರುವುದು ಎಂಬ ಮಾತನ್ನು ಹೇಳಿದ್ದಾರೆ. ಆದರೆ ಸ್ವದೇಶದ ವಿದ್ಯಾಬುದ್ಧಿಗೆಲ್ಲ ಮಹಾರಾಷ್ಟ್ರರನ್ನು ಕರ್ನಾಟಕರನ್ನು ಯದುರುಬದುರು ಕುಳ್ಳಿರಿಸಿ ವಿಚಾರಿಸಲಾಗಿ ಕರ್ನಾಟಕರ ಗೌರವವು ಕಂಡುಬರುತ್ತದೆ ಎನ್ನುವ ಕಟ್ಟಿ ಈ ಬಗೆಗೆ ಕರ್ನಾಟಕದ ಮಹತ್ವವನ್ನು ಹೇಳುವ ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ. ಕಟ್ಟಿಯ ಕನ್ನಡ ನಾಡಿನ ಪ್ರೀತಿ ಇಲ್ಲಿ ವ್ಯಕ್ತವಾಗಿದೆ. ಇಲ್ಲಿ ಸೂಕ್ಪ್ಮವಾಗಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. ಅಂದು ಸಮಗ್ರ ಭಾರತ ದೇಶವನ್ನು ಗಮನದಲ್ಲಿರಿಸಿದ ರಾಷ್ಟ್ರೀಯತೆಯ ಭಾವನೆ ಕಟ್ಟಿಯ ಕಾಲದಲ್ಲಿ ಇನ್ನೂ ಜಾಗೃತವಾಗಿರಲಿಲ್ಲ.ದೇಶ’ ಎಂಬ ಪದವನ್ನು ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡಕ್ಕೂ ಬಳಸಿದ್ದಾರೆ. ಆದರೆ ಕನ್ನಡ ನಾಡನ್ನು ಮಾತ್ರ ಮೈಸೂರು, ಮದ್ರಾಸಗಳಿಗೆ ಶೇರಿದ ಭಾಗಗಳ ಸಹಿತ' ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ರಾಷ್ಟ್ರೀಯ ಕಾಂಗ್ರೆಸ್ಸು ಇನ್ನೂ ಹುಟ್ಟಿರಲಿಲ್ಲ. ಹೀಗಾಗಿ ಹೊಸಗನ್ನಡದ ಆರಂಭ ಕಾಲದ ಪತ್ರಿಕೆಗಳಿಗೆ ರಾಷ್ಟ್ರೀಯತೆ ಒಂದು ವಿಷಯವಾಗಿರಲಿಲ್ಲ. ಅದೇ ರೀತಿ ಸಾಹಿತ್ಯ ಕೃತಿಗಳಲ್ಲೂ ರಾಷ್ಟ್ರೀಯತೆಯ ವಿಷಯ ಪ್ರಮುಖವಾಗಿ ಪ್ರಸ್ತಾಪವಾಗಲಿಲ್ಲ. ಇಂಗ್ಲಿಷ್ ವಿದ್ಯೆ ಪಡೆದವರು ಆ ಮೂಲಕ ದುರ್ವ್ಯಸನಗಳಿಗೆ ಈಡಾಗುತ್ತಾರೆ ಎಂಬ ಅಭಿಪ್ರಾಯ ಕಟ್ಟಿಯವರ ಮಾತುಗಳಲ್ಲಿ ಇದೆ. ಇಂಗ್ಲಿಷ್ ವಿದ್ಯಾಭ್ಯಾಸದ ಕುರಿತು ಕಟ್ಟಿ ವ್ಯಕ್ತಪಡಿಸಿದ ವಿಚಾರಗಳಿಗೆ ಪೂರಕವಾದ ವಿಚಾರ ಸರಿಸುಮಾರು ಅದೇ ಕಾಲದಲ್ಲಿ ಜನಾಭಿಪ್ರಾಯವಾಗಿ ರೂಪುಗೊಂಡಿತ್ತು. ಮೈಸೂರು ಅರಮನೆ ಇಲಾಖೆ ಪ್ರಕಟಣೆಯಾದಹಿತಬೋಧಿನಿ’ ಪತ್ರಿಕೆಯಲ್ಲಿ ಆ ಕಾಲದ ಇಂಗ್ಲಿಷ್ ವಿದ್ಯಾಭ್ಯಾಸ ಪಡೆದವರ ಮನಃಸ್ಥಿತಿಯನ್ನು ಚಂದಾದಾರರೊಬ್ಬರು ಬರೆದು ಕಳುಹಿಸಿದ್ದನ್ನು ಪ್ರಕಟಿಸಲಾಗಿದೆ. ತಾವು ಇಂಗ್ಲಿಷ್ ಭಾಷೆಯೊಂದರಲ್ಲಿ ಪಾಂಡಿತ್ಯವನ್ನು ಸಂಪಾದಿಸಿಕೊಂಡರೆ ಸ್ವಭಾಷೆಯು ತನ್ನಷ್ಟಕ್ಕೆ ತಾನೇ ಬರುವುದೆಂದು ಯೋಚಿಸಿಕೊಂಡು ಇಂಗ್ಲಿಷ್ ಭಾಷಾಭ್ಯಾಸಕ್ಕಾಗಿ ತಮ್ಮ ಶಕ್ತಿಯನ್ನೆಲ್ಲ ವಿನಿಯೋಗಿಸಿ, ಕರ್ನಾಟಕ ಭಾಷೆಯಲ್ಲಿ ಕೇವಲ ಜುಗುಪ್ಸಿತರಾಗಿದ್ದು' ಇವರಿಗೆ ಜುಗುಪ್ಸೆ ತಂದಿದೆ. ಕಟ್ಟಿ ಅಭಿಪ್ರಾಯ ಪಟ್ಟಿರುವುದಕ್ಕೂ ಈ ಅಭಿಪ್ರಾಯಕ್ಕೂ ಹತ್ತು ವರ್ಷಗಳ ಅಂತರ ಇದೆ ಎಂಬುದನ್ನೂ ಇಲ್ಲಿ ಲಕ್ಷಿಸಬೇಕು. ಒಟ್ಟಾರೆ ಆಂಗ್ಲ ವಿದ್ಯೆ ಪಡೆಯುವುದು ಹೆಚ್ಚುಗಾರಿಕೆ ಎಂಬ ಭಾವನೆ ಅಂದು ಪ್ರಚಲಿತದಲ್ಲಿತ್ತು. ೧೮೯೯ರಲ್ಲಿ ಪ್ರಕಟವಾದ ಗುಲ್ವಾಡಿ ವೆಂಕಟರಾಯರಇಂದಿರಾಬಾಯಿ’ ಕಾದಂಬರಿಯ ಈ ಭಾಗವನ್ನು ನೋಡಬೇಕು: ಈ ಸಮಯದಲ್ಲಿ ಕಮಲಪುರದಲ್ಲಿ ಯೌವನಸ್ಥರೆಲ್ಲರೂ ಇಂಗ್ರೇಜಿ ಎಂಬ ಮ್ಲೇಂಛ ಭಾಷೆಯನ್ನು ಕಲಿತು ವರ್ಣಾಶ್ರಮ ಧರ್ಮ ಕರ್ಮಗಳನ್ನು ಕೈಗೊಳ್ಳದೆ ಕುಲಭ್ರಷ್ಟರಾಗಿ ವಿಲಾಯತಿಗೆ ಹೋಗುವುದು ಮುಂತಾದ ಅಧರ್ಮ ಕಾರ್ಯಗಳಲ್ಲಿ ಪ್ರವೃತ್ತರಾಗಿ, ವಿಧವಾ ವಿವಾಹ, ಯುವತಿ ವಿವಾಹ ಮುಂತಾದ ಅಘೋರ ಕರ್ಮಗಳನ್ನು ಮಾಡಲು ತೊಡಗಿ, ಗುರುದೇವರಲ್ಲಿ ಲೇಸಾಂಶವಾದರೂ ಭಯಭಕ್ತಿಯಿಲ್ಲದೆ, ಗುರುಮಠಕ್ಕೆ ಕೊಡಬೇಕಾದ ವರುಷಾಸನ ವಂತಿಗೆ ವರಾಡಗಳನ್ನು ಕೊಡದೆ, ಅಪಹರಿಸಿ ತಿಂದು, ಕರೆದು ಕೇಳಿದರೆ, ಇಂಗ್ರೇಜಿ ಶಬ್ದಗಳನ್ನು ಮಧ್ಯಮಧ್ಯದಲ್ಲಿ ಸೇರಿಸಿ, ಅರ್ಥವಿಲ್ಲದ ಹೊಲಸು ಮಾತುಗಳನ್ನಾಡಿ ನಿರ್ಭೀತರಾಗಿ ನಡೆದುಕೊಂಡು... .....'' (ಪುಟ ೬೩). ಆ ಕಾಲದ ಸಂಪ್ರದಾಯ ನಿಷ್ಠರು ಇಂಗ್ಲಿಷ್ ಬಗ್ಗೆ ಹೊಂದಿದ ಅಭಿಪ್ರಾಯವನ್ನು ಇದು ತೋರಿಸುತ್ತದೆ.ಇಂಗ್ರೇಜಿ ಕಲಿತ ಹುಡುಗರ ಹತ್ತಿರ ಮಾತನಾಡಿದರೆ, ಕುತರ್ಕಗಳನ್ನೇ ಮಾಡುತ್ತಾರೆ” (ಪುಟ ೧೦೦) ಇಂಗ್ರೇಜಿ ಕಲಿತವರು ಜಾತಿಕೆಡದೆ ಇರಲಾರರೆಂದು ನಮ್ಮಂತಹರು ಹೇಳಿದರೆ ಕೆಲವರೆಲ್ಲ ಕುಚೋದ್ಯ ಮಾಡುತ್ತಿದ್ದರಷ್ಟೆ. ಈಗ ಹೇಗೆ ನಮ್ಮ ಮಾತು! ಪಾದ್ರಿ ಪುಸ್ತಕಗಳನ್ನು ಓದುವುದು, ಇಂಗ್ರೇಜಿ ಕಲಿಯುವುದು. ...'' (ಪುಟ ೨೦೭) ಇಲ್ಲೆಲ್ಲ ಇಂಗ್ಲಿಷ್ ವಿರೋಧಿ ಭಾವನೆಯೇ ಇದೆ. ಆದರೆ ಕಾದಂಬರಿಯ ಒಟ್ಟೂ ಆಶಯ ಇಂಗ್ಲಿಷ್ ಓದಿನ ಕಡೆಯೇ ಇದೆ. ಇಂಗ್ಲಿಷ್ ಓದಿದವರೇ ಕಾದಂಬರಿಯ ಕೊನೆಯಲ್ಲಿ ಸಾಮಾಜಿಕ ಸುಧಾರಣೆಗೆ ಕಾರಣರಾಗುತ್ತಾರೆ. ಈ ಕಾದಂಬರಿಯಲ್ಲಿ ಮಠದ ಸ್ವಾಮಿಗಳು `ಹಿತಬೋಧಿನೀ' ಪತ್ರಿಕೆಯ ಪ್ರಬಂಧ ಓದಿದ ನಂತರವೇ ಸಮಾಜದ ಸುಧಾರಣೆಯತ್ತ ಮನಸ್ಸು ಮಾಡಿರುವುದನ್ನು ಚಿತ್ರಿಸಲಾಗಿದೆ. ಹೊಸ ವಿದ್ಯೆ ಕಲಿತ ಒಬ್ಬ ಬಿ.ಎ. ಪದವೀಧರನಿಗೆ ಅವರು ಧರ್ಮವಿಚಾರಕನ ಸ್ಥಾನವನ್ನು ವಹಿಸುವರು. ಇದೆಲ್ಲವೂ ಆಗುತ್ತಿರುವ ಬದಲಾವಣೆಯನ್ನು ಸೂಚಿಸುತ್ತದೆ. ವೆಂಕಟ ರಂಗೋ ಕಟ್ಟಿಯ ಹಾಗೆಯೇ ಕನ್ನಡದ ಬಗ್ಗೆ ಚಿಂತಿಸಿ ಕನ್ನಡದ ಬೆಳವಣಿಗೆಯ ಬಗ್ಗೆ ಅಪೂರ್ವ ಸಲಹೆಗಳನ್ನು ನೀಡಿದ ಇನ್ನೊಬ್ಬ ವ್ಯಕ್ತಿ ವಲ್ಲಭ ಮಹಾಲಿಂಗ ತಟ್ಟಿ ಮಾಸ್ತರು. ಇವರು ಬರೆದ `ಕನ್ನಡಿಗರ ಜನ್ಮ ಸಾರ್ಥಕತೆ' ಕೃತಿಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು ೧೮೯೯ರಲ್ಲಿ ಪ್ರಕಟಿಸಿತು. ಇದು ಮತ್ತು `ಇಂದಿರಾಬಾಯಿ' ಕಾದಂಬರಿ ಒಂದೇ ವರ್ಷ ಪ್ರಕಟಗೊಂಡವುಗಳು. ಒಂದು, ಉತ್ತರದ ಮುಂಬೈ ಸರಕಾರದ ಧಾರವಾಡದಿಂದ ಪ್ರಕಟವಾಗಿದ್ದರೆ ಇನ್ನೊಂದು, ದಕ್ಪಿಣದ ಮದ್ರಾಸ್ ಸರಕಾರದ ಮಂಗಳೂರಿನಿಂದ ಪ್ರಕಟವಾದದ್ದು. ತಟ್ಟಿ ಮಾಸ್ತರು ಕನ್ನಡದ ಏಳ್ಗೆಯ ಬಗ್ಗೆ ಕೆಲವು ನಿರ್ದಿಷ್ಟ ಸಲಹೆಗಳನ್ನು ನೀಡಿದ್ದಾರೆ. ಕನ್ನಡ ನುಡಿಯನ್ನು ಯಾರೋ ನಿಂದಿಸಿದ್ದುದನ್ನು ಸಹಿಸದೆ ಕನ್ನಡ ಹಾಗೂ ಕನ್ನಡ ನೆಲ-ಜಲ - ಜನರ ಬಗ್ಗೆ ತುಂಬ ಅಭಿಮಾನದಿಂದ ಇಲ್ಲಿಯ ಉತ್ತಮಾಂಶಗಳನ್ನು ಅಂಥ ನಿಂದಕ ಮಿತ್ರರಿಗೆ ಮತ್ತು ಮೌನವಾಗಿ ಸಹಿಸುತ್ತ ಕುಳಿತ ಕನ್ನಡಾಭಿಮಾನಿಗಳಿಗೆ ತಿಳಿಸುವುದಕ್ಕೆಂದು ತಟ್ಟಿ ಮಾಸ್ತರರು ರಚಿಸಿದ ಪುಟ್ಟ ಕೃತಿ ಇದು. ಪುಸ್ತಕದ ಅರಿಕೆಯಲ್ಲಿ ಲೇಖಕರು ಇದನ್ನು ಸ್ಪಷ್ಟಪಡಿಸಿದ್ದಾರೆ. ಕನ್ನಡ ನುಡಿಯ ಬಗ್ಗೆ ಒಬ್ಬಿಬ್ಬರು ಸ್ತುತಿ ರೂಪದ ನಿಂದೆಯನ್ನು ಪ್ರಕಟಿಸಿದರು. ಅವರಿಗೆ ಉತ್ತರ ಕೊಡುವ ಲವಲವಿಕೆಯು ಲೇಖಕರಿಗೆ ಉಂಟಾಗುತ್ತದೆ. ಅದರಂತೆ `ಕನ್ನಡಿಗರಿಗೆ ಸವಿನಯ ಸೂಚನೆ' ಎಂಬ ಚಿಕ್ಕ ಲೇಖನವನ್ನು ಅವರು `ಧನಂಜಯ'ದಲ್ಲಿ ಪ್ರಕಟಿಸಿದರು. ಅದು ಹಲಕೆಲವು ಕನ್ನಡ ಪಂಡಿತರಿಗೆ ಮಾನ್ಯವಾಯಿತು. ಅವರು ಅದನ್ನೇ ಹೆಚ್ಚಾಗಿ ಬೆಳಿಸಿ, ಪ್ರಕಟಿಸಬೇಕೆಂದು ಲೇಖಕರಿಗೆ ಸೂಚಿಸುತ್ತಾರೆ. ಇದು ಲೇಖಕರಿಗೆ ಪುಸ್ತಕ ಬರೆಯುವುದನ್ನು ಅನಿವಾರ್ಯವನ್ನಾಗಿ ಮಾಡುವುದು. ಈ ಪುಸ್ತಕ `ಧನಂಜಯ' ಪತ್ರಿಕೆಯಲ್ಲಿ ಲೇಖನ ರೂಪದಲ್ಲಿ ಪ್ರಕಟವಾಗಿತ್ತು. ಮತ್ತು ಇದನ್ನು ಬರೆಯಲು ಇವರಿಗೆ ಪ್ರಚೋದನೆ ನೀಡಿದ ಲೇಖನಗಳೂ ಪತ್ರಿಕೆಗಳಲ್ಲೇ ಬಂದವುಗಳು ಎಂಬುದನ್ನು ಇಲ್ಲಿ ಗಮನಿಸಬೇಕು. ಕನ್ನಡಿಗರಾದ ಪ್ರತಿಯೊಬ್ಬ ವಕೀಲರು ದಿನಾಲು ಒಂದು ತಾಸನ್ನಾದರೂ ಗ್ರಂಥ ರಚನೆಯಲ್ಲಿ ಕಳೆಯುತ್ತ ತಮ್ಮ ಆಯುಷ್ಯದಲ್ಲಿ ಕನಿಷ್ಠ ಪಕ್ಷಕ್ಕೆ ಎರಡು, ಮೂರು ನೂತನ ಗ್ರಂಥಗಳನ್ನು ಪ್ರಕಟಿಸುವ ಬಗ್ಗೆ ಪ್ರತಿಜ್ಞೆ ಮಾಡಲು ತಟ್ಟಿ ಮಾಸ್ತರು ಹೇಳುವರು.ಸಣ್ಣ ದೊಡ್ಡ ಪದವಿಗಳೂ ಅಧಿಕಾರವೂ ಉಳ್ಳ ಪ್ರತಿಯೊಬ್ಬ ರಾಜಸೇವಕರು, ತಮ್ಮ ಬೆಲೆಯುಳ್ಳ
ಅನುಭವಗಳಿಂದೊಡಗೂಡಿದ ಉಪಯುಕ್ತ ಗ್ರಂಥಗಳನ್ನು ಮೂರು ನಾಲ್ಕು ವರ್ಷಗಳಿಗೊಂದರಂತೆಯಾದರೂ ಪ್ರಕಟಿಸಹತ್ತಲು, ಪ್ರತಿಯೊಬ್ಬ ವಿದ್ಯ ಕಲಿತ ವ್ಯಾಪಾರಸ್ಥನು ತನ್ನ ಹೋರೆಯ ಜಾಣ್ಮೆಯನ್ನು ಬೆರೆಸಿ ಗ್ರಂಥ ರಚಿಸುವುದರಲ್ಲಿ ತೊಡಗಲು, ತಿಳುವಳಿಕೆಯುಳ್ಳ ಪ್ರತಿಯೊಬ್ಬ ಇನಾಮದಾರನು, ತನಗೆ ಉಂಬಳಿ ದೊರೆತ ಕಾರಣವನ್ನು ನೆನಪಿಟ್ಟು ತಕ್ಕ ಶೋಧಮಾಡಿ ತಮ್ಮ ಹಿರಿಯರ ಚರಿತ್ರೆಯನ್ನು ಜನರಲ್ಲಿ ಹಬ್ಬುಗೊಳಿಸಹತ್ತಲು, ಓದು ಬರಹವೇ ಉಪಜೀವನದ ಸಾಧನವೆಂದು ಬಗೆಯುತ್ತಿರುವ ಪಂಡಿತರು ತಮ್ಮ ಸಂಗ್ರಹದಲ್ಲಿಯೂ ಬೇರೆ ಎಡೆಗಳಲ್ಲಿಯೂ ದೊರೆಯುತ್ತಿರುವ ಹಳೆ ಗ್ರಂಥಗಳನ್ನು ಕಷ್ಟಬಟ್ಟು ಪ್ರಸಿದ್ಧ ಮಾಡಹತ್ತಲು, ವಿದ್ಯೆ ಕಲಿತ ಪ್ರತಿಯೊಬ್ಬರು, ಅಜ್ಞರಾದ ಉಳಿದ ಜನರ ಜ್ಞಾನವನ್ನು ಹೆಚ್ಚುಗೊಳಿಸುವುದಕ್ಕೆ ದ್ರವ್ಯ ಹಾನಿಯನ್ನು ಲೆಕ್ಕಿಸದೆ ಎತ್ತುಗಡೆ ಮಾಡಹತ್ತಲು, ಕನ್ನಡ ಭಾಷೆಯ ಬನವೂ ಸೊಬಗೂ ಬೆಡಗೂ ಅಂದಚೆಂದಗಳೂ ಅಳತೆ ಮೀರಿ ಕಂಗೊಳಿಸಹತ್ತುವವೆಂಬದರಲ್ಲಿ ಏನೂ ಸಂಶಯವಿಲ್ಲ ಎಂಬ ಅವರ ಆಶಯದಲ್ಲಿ ಕನ್ನಡ ಧರ್ಮ' ಪಾಲನೆಯ ಕಳಕಳಿಯನ್ನು ಗುರುತಿಸಬಹುದು. ಮರಾಠಿ ಮತ್ತು ಗುಜರಾಥಿ ಭಾಷೆಗಳಲ್ಲಿ ಪ್ರಕಟವಾಗುವ ಗ್ರಂಥಗಳಿಗಿಂತ ಕನ್ನಡ ಭಾಷೆಯಲ್ಲಿ ಪ್ರಕಟವಾಗುವ ಗ್ರಂಥಗಳು ಕಡಿಮೆ ಇರುವುದನ್ನು ಗಮನಿಸುವ ತಟ್ಟಿಯವರು, ಇದಕ್ಕೆ ಕಾರಣ ಕನ್ನಡಿಗರ ಕರ್ತವ್ಯ ಪರಾಙ್ಮುಖತೆ, ಅಜಾಗ್ರತೆ, ಸ್ವಭಾಷೆಯ ಬಗ್ಗೆ ದೃಢವಾಗಿರುವ ಉದಾಸೀನ ಬುದ್ಧಿ ಎನ್ನುವರು.ಈಗಿನ ಸ್ಥಿತಿಯು ಚಿರಕಾಲ ವುಳಿದರೆ, ಕನ್ನಡಿಗರೆಲ್ಲರು ಶುದ್ಧವಾದ ವಾಚಾ ಶಕ್ತಿಯನ್ನು ಕಳೆದುಕೊಂಡು, ಪಂಚತಂತ್ರದೊಳಗೆ ಹೇಳಿದ ರಾಜಪುತ್ರನಂತೆ ಸ,ಸೇ,ಮೀ,ರಾ ಎಂದು ಹುಚ್ಚರಂತೆ ಕೂಗುತ್ತ ತಿರುಗಾಡಬಹುದು’ ಎಂಬ ಎಚ್ಚರಿಕೆಯ ಮಾತನ್ನು ಹೇಳುವರು. ಆಂಗ್ಲ ವಿದ್ಯಾಭ್ಯಾಸ ಮಾಡಿದ ಭಾರತದ ಅನ್ಯಭಾಷಿಕರು ಆ ಭಾಷೆಯಲ್ಲಿಯ ಉತ್ತಮ ಗ್ರಂಥಗಳನ್ನು ಅನುವಾದ ಮಾಡಿ, ಸ್ವತಂತ್ರ ನಿಬಂಧಗಳನ್ನು ಬರೆದು ಸ್ವದೇಶ ಬಾಂಧವರಿಗೆ ಅನಂತೋಪಕಾರ ಮಾಡಿರುವರು. ಆದರೆ ಕನ್ನಡದಲ್ಲಿ ಆ ರೀತಿಯ ಪರಿಸ್ಥಿತಿ ಇಲ್ಲ ಎಂದು ಅವರು ಕಳವಳ ಪಟ್ಟಿದ್ದಾರೆ.
ಮೈಸೂರು ನಾಡಿನ ಹೊರತು ಉಳಿದ ಕನ್ನಡ ನಾಡು ವಿದ್ಯೆಯ ಸಂಬಂಧದಿಂದ ಹೇಗಿದ್ದರೂ, ಅದರಲ್ಲಿ ಭಾಷಾ ಸೇವೆಯನ್ನು ಮಾಡುವವರು ತೀರ ವಿರಳವಾಗಿದ್ದಾರೆ. ಕಯ್ವಿಡಿದು ಜಗ್ಗಿದರೆ ಮೆಯ್ಯು ತಾನೇ ಬರುವಂತೆ, ಭಾಷಾಸೇವೆಯನ್ನು ಮಾಡುವುದರಿಂದ ದೇಶೋನ್ನತಿಯಾಗುವುದೆಂಬ ಮಾತು ಬಹುಜನ ಕನ್ನಡಿಗರಿಗೆ ತಿಳಿಯಲೊಲ್ಲದು. ಸಮೀಪದ ಮಹಾರಾಷ್ಟ್ರ, ಗುಜರಾಥ, ತೆಲಗು ದೇಶಗಳವರು ಮಾಡುವ ಸ್ವಹಿತದ ಪ್ರಯತ್ನಗಳನ್ನು ನೋಡಿಯೂ ತಿಳುವಳಿಕೆಯುಂಟಾಗಲೊಲ್ಲದು. ಭಾಷೆಯನ್ನು ಊರ್ಜಿತ ಸ್ಥಿತಿಗೆ ತರುವದು ಪ್ರಯತ್ನ ಸಾಧ್ಯವೆಂಬ ವಿಚಾರವೇ ಹುಟ್ಟಲೊಲ್ಲದು ಎಂದು ತಟ್ಟಿಯವರು ಹೇಳಿದ್ದಾರೆ.
ಕನ್ನಡ ಭಾಷೆ ಬಾಲ್ಯಾವಸ್ಥೆಯಲ್ಲಿದೆ ಎಂಬ ಆಕ್ಷೇಪವನ್ನು ತಳ್ಳಿಹಾಕುವ ಅವರು, ಪ್ರಾಚೀನ ಕನ್ನಡದಲ್ಲಿಯ ಪ್ರಮುಖ ಗ್ರಂಥಗಳನ್ನು ಉಲ್ಲೇಖಿಸುವರು. ಕನ್ನಡದಲ್ಲಿ ಅದಿಲ್ಲ
ಅನ್ನುವವರು ಕೊಡಲಿಯ ಕಾವು ಕುಲಕ್ಕೆ ಮೃತ್ಯು' ಎಂಬ ಗಾದೆಯ ಹಾಗೆ ಇಡಿ ರಾಷ್ಟ್ರದ ಅನುಭವ ಜ್ಞಾನದ ಘಾತಕ್ಕೆ ಕಾರಣವಾಗುತ್ತಾರೆ ಎಂದಿದ್ದಾರೆ. ಕೆಲವರು ಕನ್ನಡವು, ನೀರಸವೂ ಅಪೂರ್ಣವೂ ಇರುತ್ತದೆಂತಲೂ ಅದರಲ್ಲಿ ತೊಡಕುಳ್ಳ ವಿಚಾರಗಳನ್ನು ಪ್ರಕಟಿಸಲಿಕ್ಕೆ ಬರುವದಿಲ್ಲೆಂತಲೂ ಆಕ್ಷೇಪಿಸುತ್ತಾರೆ. ಈ ಆಕ್ಷೇಪಗಳು ಎಲ್ಲ ನಿತ್ಯ ವ್ಯವಹಾರವನ್ನು ಶುದ್ಧ ಕನ್ನಡ ಭಾಷೆಯಿಂದಲೇ ಶಾಂತವಾಗಿ ಸಾಗಿಸುವ ಒಕ್ಕಲಿಗರಿಂದ ತೆಗೆದುಕೊಳ್ಳಲ್ಪಡುತ್ತವೆ. ಇಂತಹ ಜನರೇ ಮುಂದೆ ಸಮಾಜದ ನೊಗದ ಭಾರವನ್ನು ಹೊರಲಿಕ್ಕೆ ಹವಣಿಸುತ್ತಾರೆ. ದುರ್ದೈವದಿಂದ ಕನ್ನಡ ನುಡಿಯೊಳತು ಹೀನಗಳು ಈ ಬಗೆಯ ಜನರ ಮೇಲೆ ಅವಲಂಬಿಸಿರುವುದರಿಂದ, ಕನ್ನಡಕ್ಕೆ ಬಡಿಯುವ ಧಕ್ಕಿಯು ಮಿಗಿಲಾಗಿದೆ. ಈ ಬಗೆಯ ಜನರು ತಮ್ಮ ವಿಚಾರಗಳನ್ನು ಪರಭಾಷೆಗಳಲ್ಲಿಯೇ ಪ್ರಕಟಿಸಲಿಕ್ಕೆ ಹವಣಿಸುವರು ಎಂದು ತಟ್ಟಿ ಮಾಸ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಸಂಸ್ಕೃತಕ್ಕಿಂತ ಕನ್ನಡವು ಯಾವುದರಲ್ಲಿಯೂ ಕಡಿಮೆಯದಲ್ಲ ಎಂಬುದು ಅವರ ದೃಢವಾದ ಅಭಿಪ್ರಾಯ. ಭಾಷೆಯ ಬೆಳವಣಿಗೆಗೆ ಶಬ್ದಕೋಶ ಅಗತ್ಯ ಎಂಬ ಅರಿವಿರುವ ತಟ್ಟಿಯವರು ಶಬ್ದಕೋಶವನ್ನು ಯಾವ ರೀತಿ ರಚಿಸಿದರೆ ಉತ್ತಮ ಎಂಬ ಬಗ್ಗೆ ಸಲಹೆಯನ್ನು ನೀಡುವರು.….. ಪ್ರತಿಯೊಬ್ಬ ಜಾಣನಾದ ಕನ್ನಡಿಗನು ಬೌದ್ಧ ಧರ್ಮೋಪದೇಶಕನಂತೆ
ಸುಜ್ಞಾನರೊಳಗೆ ಬೆರೆತು, ಹಾಡುಗಳು, ಲಾವಣಿಗಳು, ಹರಿದಾಸರ ಕಥೆಗಳು, ಗೊಂದಲಿಗರ ಪದಗಳು, ಜೋಗಿ ಜಂಗಮರ ವಚನಗಳು, ಒಕ್ಕಲಿಗರ ನುಡಿಗಳು, ಸ್ತ್ರೀಯರ ಸಂಭಾಷಣೆಗಳು, ಗಾದೆಯ ಮಾತುಗಳು, ಹಳೆಯ ಗ್ರಂಥಗಳು ಮುಂತಾದವುಗಳಲ್ಲಿ ದೊರೆಯುವ ಎಲ್ಲ ಕನ್ನಡ ಶಬ್ದಗಳನ್ನು ಉಚ್ಚ ವೃತ್ತಿಯಿಂದ ಒಟ್ಟುಗೂಡಿಸುತ್ತ ನಡೆದರೆ ಕನ್ನಡ ಕೋಶ ರಚನೆಯ ಕೆಲಸವು ಅತ್ಯಂತ ಸುಲಭವಾಗುವುದು. ಈ ಬಗ್ಯೆ ಶಬ್ದ ಸಂಗ್ರಹವಾದ ಮೇಲೆ, ಕನ್ನಡದ ಮೂಲ ಧಾತುಗಳನ್ನೂ ಸಿದ್ಧ ಶಬ್ದಗಳನ್ನೂ ಗೊತ್ತುಪಡಿಸಬೇಕು. ಬಳಿಕ ಹಳೆಯ ಗ್ರಂಥಗಳೊಳಗಿರುವ ಮತ್ತು ಈಗ ರೂಢಿಯಲ್ಲಿರುವ ಎಲ್ಲ ಕೃತ್ತದ್ಧಿತ ಪ್ರತ್ಯಯಗಳಿಂದ ಸಾಧಿತ ಶಬ್ದಗಳನ್ನುಂಟುಮಾಡಬೇಕು. ಈ ಸಾಧಿತ ಶಬ್ದಗಳನ್ನೂ ಸಮಸ್ತ ಶಬ್ದಗಳನ್ನೂ ಇಂತಿಂತಹ ತತ್ಸಮ- ತದ್ಭವ- ಅನ್ಯದೇಶ್ಯ ಶಬ್ದಗಳ ಬದಲು ಉಪಯೋಗಿಸಬಹುದೆಂದು ರೂಢಿಯನ್ನೂ ಅರ್ಥವನ್ನೂ ಅನುಲಕ್ಷಿಸಿ ಗೊತ್ತುಪಡಿಸಬೇಕು. ಇವೆಲ್ಲ ಶಬ್ದಗಳನ್ನು ಕನ್ನಡ ಕೋಶದಲ್ಲಿ ಸೇರಿಸಬೇಕೆಂದು ಬೇರೆ ಹೇಳಲಿಕ್ಕೆ ಬೇಡ ಎಂದು
ಹೇಳುತ್ತಾರೆ. ಶತಮಾನದ ಹಿಂದಿನ ಕನ್ನಡ ಪರ ಕಾಳಜಿ ಇರುವ ವ್ಯಕ್ತಿಯೊಬ್ಬರ ಅಭಿಪ್ರಾಯ ಇದು ಎಂಬುದು ಮಹತ್ವದ ಸಂಗತಿ.
ಕನ್ನಡ ಭಾಷೆಯ ಉದ್ಧಾರಕ್ಕೆ ತಟ್ಟಿಯವರು ಕೆಲವು ಸಲಹೆಗಳನ್ನು ನೀಡುವರು.
೧)ನಾಶವಾಗುತ್ತಿರುವ ಗ್ರಂಥಗಳನ್ನು ಶೋಧಿಸಿ ಪ್ರಕಟಿಸುವುದು, ಭಾಷಾ ಸೇವಕರ ಮೊದಲನೆಯ ಕೆಲಸವು. ಕನ್ನಡ ಗ್ರಂಥಗಳನ್ನು ವೈದಿಕರ ಮನೆಗಳು, ಲಿಂಗವಂತ ಮಠಗಳು,
ಬಸ್ತಿಗಳು, ವಿದ್ವಾಂಸರ ನಿವಾಸ ಸ್ಥಾನಗಳು, ಹಳೆಯ ರಾಜಧಾನಿಗಳು, ದೇಸಾಯಿ ದೇಶಪಾಂಡೆ ಮುಂತಾದ ಇನಾಮದಾರರ ಕಾಗದ ಪತ್ರಗಳ ಗಂಟುಗಳು ಮುಂತಾದವುಗಳಲ್ಲಿ ಆಸ್ಥೆಯಿಂದಲೂ ಎಚ್ಚರದಿಂದಲೂ ಶೋಧಿಸಿ, ದೊರೆತವುಗಳನ್ನು ಪಂಡಿತರಿಂದ ಪರಿಷ್ಕರಿಸಿ, ಅಚ್ಚುಹಾಕಿಸಿ, ಪ್ರಕಟಿಸಿದರೆ ಇನ್ನೂ ಎಷ್ಟೋ ಹಳೆಯ ಗ್ರಂಥಗಳು ಕಣ್ಣಿಗೆ ಬೀಳುವವು ಎಂದು ಅವರು ಹೇಳುವರು. ಈ ಸಂಬಂಧದಲ್ಲಿ ಮೈಸೂರು ಪ್ರಾಂತದಲ್ಲಿ ಕರ್ನಾಟಕ ಕಾವ್ಯಮಂಜರಿ'ಯು ಹಳೆಯ ಗ್ರಂಥಗಳನ್ನು ಪ್ರಕಟಿಸುತ್ತಿರುವ ಕಾರ್ಯವನ್ನು ಅವರು ಶ್ಲಾಘಿಸುವರು. ತಟ್ಟಿಯವರ ಈ ಸಲಹೆ ಮುಂದೆ ಗ್ರಂಥ ಶೋಧನೆ ಪ್ರಕಟಣೆ ಕಾರ್ಯಗಳನ್ನು ಕೈಗೊಂಡವರಿಗೆ ಪ್ರೇರಣೆ ನೀಡಿರಬಹುದು. ಗೆಳೆಯರ ಗುಂಪಿನವರು, ಹಲಸಂಗಿ ಗೆಳೆಯರು ಜಾನಪದ ಸಂಗ್ರಹದಲ್ಲಿ ತೊಡಗುವರು. ಇದು ನವೋದಯ ಕಾವ್ಯದ ಮೇಲೆ ನಿಶ್ಚಿತವಾದ ಪರಿಣಾಮವನ್ನು ಉಂಟುಮಾಡಿದೆ. ೨)ಬಹುಜನ ಕನ್ನಡಿಗರು ಗ್ರಂಥಕರ್ತೃತ್ವವನ್ನು ಪಡೆಯುವುದೇ ಭಾಷಾ ಸೇವೆಯ ೨ನೆಯ ಕೆಲಸವು ಎಂದು ತಟ್ಟಿ ಹೇಳುವರು. ೩)ಇಂಗ್ಲಿಷದಲ್ಲಿರುವ ಉಪಯುಕ್ತ ಗ್ರಂಥಗಳನ್ನು ಭಾಷಾಂತರಿಸುವುದು ೩ನೆಯ ಕೆಲಸವು. ಪಾಶ್ಚಿಮಾತ್ಯರ ಸಹವಾಸದಿಂದ ಆದ ಹಲವು ಲಾಭಗಳಲ್ಲಿ, ಪ್ರತಿಯೊಂದು ವಿಷಯದಲ್ಲಿ ಪೂರ್ಣತೆ ಪಡೆದ ಉಪಯುಕ್ತ ಗ್ರಂಥ ಸಂಗ್ರಹವು ಕನ್ನಡಿಗರ ಕಯ್ಗೆ ಅನಾಯಾಸವಾಗಿ ಸಿಕ್ಕಿರುವದೊಂದಾಗಿದೆ. ಆ ಗ್ರಂಥಗಳಲ್ಲಿ ಕನ್ನಡ ನಾಡಿಗೆ ಪ್ರಯೋಜನಕರವಾದವುಗಳನ್ನು ಭಾಷಾಂತರಿಸುವ ಕೆಲಸವು ಕನ್ನಡಿಗರ ಕಡೆಗುಂಟು ಎಂದು ಹೇಳುವ ತಟ್ಟಿಯವರು, ಒಕ್ಕಲುತನದ ವಿಷಯಗಳು, ಪದಾರ್ಥ ವಿಜ್ಞಾನದ ವಿಷಗಳು, ರಸಾಯನ ವಿಷಯವು, ಕೈಗಾರಿಕೆಯ ವಿಷಯ ಕುರಿತ ಇಂಗ್ಲಿಷ್ ಗ್ರಂಥಗಳನ್ನು ಭಾಷಾಂತರಿಸಲು ಸಲಹೆ ಮಾಡುವರು. ೪)ಐತಿಹಾಸಿಕ ಗ್ರಂಥಗಳನ್ನು ಪ್ರಕಟಿಸುವುದೇ ಭಾಷಾ ಸೇವಕರ ೪ನೆಯ ಕೆಲಸ. ೫)ನೂತನ ವಿದ್ಯೆಯಿಂದ ಆಗುವ ಪ್ರಯೋಜನಕ್ಕಿಂತ ಅತ್ಯಂತ ಭಿನ್ನತರದ ಸುಧಾರಣೆಯನ್ನುಂಟು ಮಾಡುವ ಸಂಸ್ಕೃತ ಗ್ರಂಥಗಳನ್ನು ಭಾಷಾಂತರಿಸುವುದು ಕನ್ನಡಿಗರ ೫ನೆಯ ಕೆಲಸವು ಎಂದು ತಟ್ಟಿ ಹೇಳುವರು. ಕನ್ನಡ ಸೇವೆ ಮಾಡುವುದರಲ್ಲಿಯೇ ಕನ್ನಡಿಗರ ಜನ್ಮಸಾರ್ಥಕತೆ ಇದೆ ಎನ್ನುವುದು ಅವರ ದೃಢ ವಿಶ್ವಾಸ. ವೆಂಕಟ ರಂಗೋ ಕಟ್ಟಿ ಹಾಗೂ ವಲ್ಲಭ ಮಹಾಲಿಂಗ ತಟ್ಟಿಯವರ ಹಾಗೆಯೇ ಕನ್ನಡಕ್ಕಾಗಿ ಕೊರಳೆತ್ತಿದ ಮತ್ತೊಬ್ಬರು ಶಾಂತ ಕವಿಗಳು. ಕನ್ನಡದ ಮೇಲೆ ಮರಾಠಿಯ ಆಕ್ರಮಣವನ್ನು ಅವರು ಖಂಡಿಸುತ್ತಾರೆ. ೧೮೮೬ರ ಸುಮಾರಿಗೇ ಅವರು ಕನ್ನಡದಲ್ಲಿ ಕೀರ್ತನೆ, ನಾಟಕ, ಕಥನ ಕವನ, ಲಾವಣಿ ಮೊದಲಾದವುಗಳನ್ನು ರಚಿಸಿದ್ದರು. ೧೮೮೬ರಲ್ಲಿ ತಾವು ರಚಿಸಿದಸೀತಾರಣ್ಯ ಪ್ರವೇಶ’ ನಾಟಕದ ಪ್ರಸ್ತಾವನೆಯಲ್ಲಿ ಕನ್ನಡ ಭಾಷೆಯ ಸ್ಥಿತಿ ಗತಿಗಳನ್ನು ವಿವರಿಸುವುದು ಹೀಗೆ: .... ನಂಮ ಕನ್ನಡ ಭಾಷೆಯ ವಿಷಯದಲ್ಲಿ ಪ್ರಯತ್ನ ಮಾಡದ್ದರಿಂದ ಈಗ ಅದು ತೀರ ಕೀಳ ಸ್ಥಿತಿಯಲ್ಲಿರುವುದು. ಇದು ನಮಗೆ ಬಹಳೇ ದೊಡ್ಡ ಕುಂದು. ಈ ಕುಂದನ್ನು ದೂರಮಾಡಿಕೊಳ್ಳದಿದ್ದರೆ ನಾವೆಲ್ಲರೂ ಸಜೀವ ಶವಗಳಾಗಿ ಭೂಮಿಗೆ ಮಾತ್ರ ಭಾರ. ನಂಮ ಹಿರಿಯರಂತೆ ಈಗಿನ ನಮ್ಮ ಕನ್ನಡ ಪಂಡಿತರು ಪ್ರಯತ್ನ ಮಾಡಿದರೆ ಇವರಿಗಾದರೂ ಹಿರಿಯರಂಥ ಕೀರ್ತಿಯೂ ಅಮರತ್ವವೂ ಜಗತ್ತನ್ನು ಎಚ್ಚರಿಸುವ ಶಕ್ತಿಯೂ ಕೆಲವು ಕಾಲಾಂತರದಿಂದಲಾದರೂ ಬರುವ ಸಂಭವ ಉಂಟು. ಈ ಸಂಗತಿಯು ಯಃಕಶ್ಚಿತರೂ ಅಲ್ಪಮತಿಗಳೂ ದರಿದ್ರರೂ ಉದರದಾಸರೂ ಆಗಿರುವ ನಂಮಂಥವರಿಗೆ ಸುದ್ಧಾ ತಿಳಿಯುತ್ತದೆ'' ಎಂದು ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಹಳೆಯ ಗ್ರಂಥಗಳ ಪುನರ್ ಮುದ್ರಣ: ಆರಂಭ ಕಾಲದ ಪತ್ರಕರ್ತರಿಗೆ ನಾಡಿನ ವ್ಯಾಪ್ತಿಯ ಪರಿಕಲ್ಪನೆ ಇದ್ದಹಾಗೆಯೇ ನುಡಿಯ ಶ್ರೀಮಂತಿಕೆಯ ಅರಿವೂ ಇತ್ತು. ನುಡಿ ಶ್ರೀಮಂತಿಕೆ ಕಾಲಗರ್ಭದಲ್ಲಿ ಅಜ್ಞಾತವಾಗಿ ಉಳಿದು ಅವಜ್ಞೆಗೆ ಈಡಾಗಿ ನಾಶವಾಗಬಹುದು ಎಂಬ ಭಯವೂ ಅವರನ್ನು ಕಾಡುತ್ತಿತ್ತು. ಆ ಭಯ ಕನ್ನಡದ ಪ್ರಥಮ ಪತ್ರಿಕೆ `ಮಂಗಳೂರು ಸಮಾಚಾರ'ದಲ್ಲಿಯೇ ವ್ಯಕ್ತವಾಗಿದೆ. ಮುದ್ರಣ ಯಂತ್ರ ಬರುವ ಪೂರ್ವದಲ್ಲಿ ತಾಡೋಲೆಯ ಮೇಲೋ ಇಲ್ಲ ದಪ್ಪ ಕಾಗದದ ಮೇಲೆಯೋ ಬರೆದು ಇಡುತ್ತಿದ್ದರು. ಗ್ರಂಥದ ಪ್ರತಿಗಳು ಒಂದೆರಡು ಮಾತ್ರ ಇರುತ್ತಿದ್ದವು. ಹಿಂದಿನ ಕಾಲದಲ್ಲಿ ದಾನಗಳಲ್ಲಿ ಗ್ರಂಥ ದಾನವೂ ಸೇರಿ ಪುಸ್ತಕಗಳು ಉಳಿದುಬರುವುದಕ್ಕೆ ಕೆಲಮಟ್ಟಿಗೆ ನೆರವಾಗಿದ್ದವು. ಆದರೂ ಈ ದಾನ ಸೌಭಾಗ್ಯ ಎಲ್ಲ ಗ್ರಂಥಗಳಿಗೂ ಲಭ್ಯವಾಗುತ್ತಿರಲಿಲ್ಲ. ಆಗ ಪುಸ್ತಕಗಳು ಹೇಗೋ ನಾಶವಾಗುವ ಅಪಾಯ ಇರುತ್ತಿದ್ದವು. ಪ್ರಾಚೀನ ಗ್ರಂಥಗಳ ಸಂರಕ್ಪಣೆ ಪುನರ್‌ಮುದ್ರಣದ ಬಗ್ಗೆ `ಮಂಗಳೂರು ಸಮಾಚಾರ'ದಲ್ಲಿ ಬಂದ ಈ ಭಾಗ ಹೀಗಿದೆ:- `ಬೆಂಗಳೂರು ಸದರು ಮುನಶಿಪರು ಹೋದ ವರ್ಷದಲ್ಲಿ ವೊಂದು ಮೊಳೆ (sic) ಛಾಪಖಾನೆ ಯಾನೆ ವರ್ಣಯಿಟ್ಟು ಅದರಲ್ಲಿ ಕೆಲಉ ಕನಡು ಪುಸ್ತಕಗಳಂನು ಸರ್ವರ ವುಪಕಾರಕ್ಕಾಗಿ ಛಾಪಿಸಲಿಕ್ಕೆಆರಂಭ ಮಾಡಿದ್ದಾರೆ. ಯಿದು ಬಹಳ ವುತ್ತಮವಾದ ಕೆಲಸ. ಯಾತಕ್ಕೆಂದರೆ ಹಿಂದು ಜನರಲ್ಲಿ ವೊಬ್ಬನ ಹತ್ತಿರವೊಂದು ವಿಧದ ಪುಸ್ತಕಯಿದ್ದರೆ ಮತ್ತೊಬ್ಬನಲ್ಲಿ ಯಿಂನೊಂದು ಪ್ರಕಾರದ ಪುಸ್ತಕಯಿರುತ್ತದೆ. ಹೀಗಾಗಿ ಬೇಕಾದ ಪುಸ್ತಕಗಳು ವೊಂದೆ ಕಡೆಯಲ್ಲಿ ಯಿಲ್ಲದೆ ಅವುಗಳು ಸತ್ಯವೋ ಸುಳ್ಲೊ ಯೆಂಬುದು ವಿಚಾರಿಸಲಿಕ್ಕೆ ಅನುಕೂಲವಿಲ್ಲವಾಗಿದೆ. ಯಿದೇ ಮೇರೆಗೆ ಯಾರಾದರೂ ಛಾಪಖಾನೆಯಿಟ್ಟು ಹಿಂದು ಶಾಸ್ತ್ರವಂನು ಛಾಪಿಸಿದರೆ ಬೇಕಾದ ಪುಸ್ತಕಗಳು ಸುಲಭವಾಗಿ ಯಲ್ಲರ ಕೈಯಲೂ ಸೇರಬಹುದಾಗಿ ರುತ್ತದೆ. ಪೂರ್ವದಲ್ಲಿದ್ದ ಪುರಂದರದಾಸ ಮುಂತಾದವರು ಮಾಡಿದ ಪದಗಳೂ ಯಾ ಅಚ್ಚು ಕನಡ ಕಾವ್ಯಗಳೂ ದಿವಸ ಹೋದ್ದಷ್ಟು ಕಡಿಮೆಯಾಗಿ ಕಡೆಗೆ ಪೂರ್ಣವಾಗಿ ಕಾಣದೆ ಹೋದಾವು. ಆದ ಕಾರಣ ಅವರು ಯಿಂನು ಮುಂದೆ ವೊಳ್ಲೆ ವೊಳ್ಲೆ ಪುಸ್ತಕಗಳು ಛಾಪಸ್ಯಾರು ಯೆಂದು ತಿಳಿದು ಕೊಳ್ಲುತ್ತೇವೆ. ಮತ್ತು ಯಾವರೆಗೆ ನಂಮ್ಮ ಹತ್ತರ ಬಂದ ಪುಸ್ತಕಗಳ ಹೆಸರುಗಳನ್ನು ಯಿ ಕೆಳಗೆ ಬರೆದಿರುತ್ತದೆ' ಎಂದು ಪುಸ್ತಕಗಳ ಹೆಸರು ಕೊಟ್ಟಿದ್ದಾರೆ. ಪ್ರಾಚೀನ ಗ್ರಂಥಗಳ ಪುನರ್ ಮುದ್ರಣ ವಿಷಯದಲ್ಲಿ `ಮಂಗಳೂರು ಸಮಾಚಾರ'ದಲ್ಲಿ ವ್ಯಕ್ತವಾದ ಈ ಆಸ್ಥೆ ಗಮನಾರ್ಹವಾದದ್ದು.ಇಲ್ಲಿ ಉಲ್ಲೇಖಿತವಾದ ಮುದ್ರಣ ಯಂತ್ರ ಬೆಂಗಳೂರಿನಲ್ಲಿ ಕ್ರಿ.ಶ. ೧೮೪೨-೪೩ರಲ್ಲಿ ಓರ್ವ ಮೆಜಿಸ್ಟ್ರೇಟ'ನು ಸರಕಾರದ ವತಿಯಿಂದ ಸ್ಥಾಪಿಸಿದ ಕಲ್ಲಚ್ಚಿನ ಮುದ್ರಣ ಯಂತ್ರ.''1 ಒಂದು ಸಾಹಿತ್ಯದ ಬೆಳವಣಿಗೆಯಲ್ಲಿ ಹೊಸ ಹೊಸ ಗ್ರಂಥಗಳ ರಚನೆ ಎಷ್ಟು ಮಹತ್ವದ್ದೋ ಅಷ್ಟೇ ಮಹತ್ವದ್ದು ಆ ಪರಂಪರೆಯ ಪ್ರಾಚೀನ ಅಮೂಲ್ಯ ಗ್ರಂಥಗಳನ್ನು ರಕ್ಪಿಸಿಟ್ಟುಕೊಳ್ಳುವುದು. ಆ ಅರಿವುಮಂಗಳೂರು ಸಮಾಚಾರಕಾರ’ನಿಗೆ ಚೆನ್ನಾಗಿ ಇದ್ದುದನ್ನು ಇಲ್ಲಿ ಗಮನಿಸಬಹುದು.
ಇಂಥ ಒಂದು ಕಾರ್ಯದಲ್ಲಿ ಹೆಜ್ಜೆ ಇಟ್ಟವರಿಗೆ ಉತ್ತಮ ಮುದ್ರಣ ಎಲ್ಲ ಕಡೆಯೂ ದೊರೆಯುತ್ತಿರಲಿಲ್ಲ. ಬೆಂಗಳೂರು, ಮಂಗಳೂರುಗಳಲ್ಲಿ ಮುದ್ರಣವು ಸಾಕಷ್ಟು ಸುಧಾರಿಸಿದ್ದರೂ ಧಾರವಾಡದ ಕಡೆ ಮುದ್ರಣ ಮಾಡಿಸಿಕೊಳ್ಳುವವರಿಗೆ ಗೋಳು ತಪ್ಪಿರಲಿಲ್ಲ. ವೆಂಕಟರಂಗೋ ಕಟ್ಟಿ, ರಾ.ಹ. ದೇಶಪಾಂಡೆ ಮೊದಲಾದವರು ಮಂಗಳೂರು, ಬೆಂಗಳೂರು ಕಡೆ ಅಲೆದಾಡಬೇಕಿತ್ತು. ಸಂಪರ್ಕ ವ್ಯವಸ್ಥೆ ಚೆನ್ನಾಗಿ ಇರದ ಅಂದಿನ ಕಾಲದಲ್ಲಿ ಸಂಚಾರ ಸುಲಭವಾಗಿರಲಿಲ್ಲ. ಇವರ ಕಷ್ಟ ವಾಗ್ಭೂಷಣ'ದಲ್ಲಿ (೧೯೧೯) ವರ್ಣಿತವಾಗಿದೆ. ಇಲ್ಲಿಯ ಮುದ್ರಣಾಲಯಗಳಿಗೆ ಕೆಲಸವೂ ಇದ್ದು ದುಡ್ಡೂ ಬರುತ್ತಿದ್ದರೂ ಅಕ್ಕಸಾಲಿ ಶಿಂಪಿಗರಂತೆ ಎಡತಾಕಿಸುತ್ತಾರೆ. ಇಷ್ಟಾದರೂ ಅಭಿವೃದ್ಧಿ ಇಲ್ಲ. ಮೈಸೂರು, ಮಂಗಳೂರು, ಬೆಂಗಳೂರು ಕಡೆಯ ಅಭಿವೃದ್ಧಿ ಇಲ್ಲ. ಮೈಸೂರು, ಮಂಗಳೂರು, ಬೆಂಗಳೂರು ಕಡೆಯ ಅಭಿವೃದ್ಧಿ ಇಲ್ಲೇಕೆ ಇಲ್ಲ’ ಎಂಬ ಚಿಂತೆ ಆ ಲೇಖಕರಿಗೆ. ಉತ್ತಮವಾಗಿ ಪುಸ್ತಕ ಪ್ರಕಟಿಸುವ ವಿಚಾರ ಬಂದಾಗಲೆಲ್ಲ ಮಂಗಳೂರಿಗೆ ಹೋಗಬೇಕು ಎನ್ನುವ ಮನಸ್ಸು ಉಂಟಾಗುವುದು ಇನ್ನು ಎಷ್ಟು ಕಾಲ? ಎಂಬ ಪ್ರಶ್ನೆ ಉತ್ತಮ ಮುದ್ರಣ ಅಪೇಕ್ಷಿಸುವ ಎಲ್ಲರದೂ ಆಗಿತ್ತು.
ದೋಷ ರಹಿತ ಮುದ್ರಣ ಕಾಳಜಿ: ತಾವು ಮುದ್ರಿಸಿದ ಪುಸ್ತಕ ಅಚ್ಚಿನ ದೋಷವಿಲ್ಲದೆ ಬರಬೇಕು ಎನ್ನುವುದು ಅಂದಿನವರ ಅಪೇಕ್ಷೆಯಾಗಿತ್ತು. ಇಂದು ಮುದ್ರಣವು ಅತ್ಯಾಧುನಿಕ ರೂಪ ತಾಳಿ ಸುಲಭ ಅನ್ನಿಸಿರುವಾಗಲೂ ಮುದ್ರಣ ದೋಷವು ಉಳಿದಿರುತ್ತದೆ. ಹೀಗಿರುವಾಗ ಶತಮಾನದ ಹಿಂದಿನವರ ಈ ಕಾಳಜಿ ಗಮನಾರ್ಹ. ಪುಸ್ತಕಗಳಲ್ಲಿ ಒಪ್ಪೋಲೆ ಕೊಡುತ್ತಿದ್ದರು. ವಾಚಕರು ಸುಧಾರಿಸಿಕೊಂಡು ಓದಬೇಕು' ಎಂಬ ವಿನಂತಿ ಇರುತ್ತಿದ್ದವು. ಇಂಥ ತಪ್ಪುಗಳು ಇರಬಾರದು ಎನ್ನುವ ಸದುದ್ದೇಶದಿಂದ ಧಾರಾವಾಹಿಯಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಕರ್ನಾಟಕ ಗ್ರಂಥಮಾಲಾ’ ಪತ್ರಿಕೆಯವರು ಹೊಸ ತಂತ್ರವೊಂದನ್ನು ರೂಪಿಸಿ ಜಾರಿಗೆ ತಂದರು. ಧಾರಾವಾಹಿಯಾಗಿ ಬಂದ ಕೃತಿ ಪುಸ್ತಕ ರೂಪದಲ್ಲಿ ಬರುವಾಗ ಆ ದೋಷಗಳನ್ನು ನಿವಾರಿಸಿಕೊಳ್ಳಲು ಇದು
ಸಹಾಯ ಮಾಡಿತು. ಜೊತೆಗೆ ಪ್ರಕಾಶಕರ ಶ್ರಮವೂ ಉಳಿಯಿತು. ತಮ್ಮ ಪತ್ರಿಕೆಯ ಮೊದಲ ವರ್ಷದ ೩ನೆಯ ಸಂಚಿಕೆ (ಸೆಪ್ಟೆಂಬರ್ ೧೮೯೩)ಯಲ್ಲಿ ಅವರು ನೀಡಿರುವ ಪ್ರಕಟಣೆ ಗಮನಾರ್ಹವಾದದ್ದು:
ಕರ್ನಾಟಕ ಗ್ರಂಥಮಾಲೆ + ಪ್ರೈಜ್ ಕೂಪನ್- ಈ ಸಂಚಿಕೆಯಲ್ಲಿರುವ ಅಕ್ಷರ ತಪ್ಪುಗಳನ್ನು ಯಾರು ತೋರಿಸುತ್ತಾರೋ ಅವರಿಗೆ ೨ ರುಪಾಯಿ ಬಹುಮಾನವನ್ನು ಕೊಡಲು ನಿಶ್ಚೈಸಿರುತ್ತೇವೆ. ಅಂಥಾ ತಪ್ಪುಗಳನ್ನು ಈ ಕೆಳಗಿನ ಫಾರಮಿನಲ್ಲಿ ಬರೆದು, ಅದನ್ನು ಕತ್ತರಿಸಿ, ಕವರಿನ ಮೇಲೆ `ಪ್ರೈಜ್' ಎಂದು ಬರೆದು, ಗ್ರಂಥ ಮಾಲೆಯ ಮ್ಯಾನೇಜರರಿಗೆ ಅಕ್ಟೋಬರ್ ೫ನೆ ತಾರೀಖಿನ ಒಳಗಾಗಿ ಕಳುಹಿಸಬೇಕು. ೬ನೆ ತಾರೀಖಿನ ದಿವಸ ನಮ್ಮಲ್ಲಿಗೆ ಬಂದ ಕವರುಗಳನ್ನೆಲ್ಲ ಸೇರಿಸಿ, ಯಾರ ಕವರನ್ನು ಮೊದಲು ಒಡೆಯುತ್ತೇವೆಯೋ ಅವರಿಗೆ ಮೇಲೆ ಹೇಳಿದ ಬಹುಮಾನವನ್ನು ಕಳುಹಿಸುತ್ತೇವೆ. ತಪ್ಪುಗಳನ್ನು ಕೆಳಗಿರುವ ಫಾರಮಿನಲ್ಲಿ ಬರೆಯಬೇಕು.''2 ಈ ರೀತಿ ತಪ್ಪಿಲ್ಲದೆ ಪುಸ್ತಕ ಹೊರ ತರುವ ಕಾಳಜಿ ಇಂದಿನ ಲೇಖಕರಿಗೆ/ ಪ್ರಕಾಶಕರಿಗೆ ಮಾದರಿಯಾಗಿದೆ. ಆರಂಭ ಕಾಲದ ಪತ್ರಿಕೆಗಳಲ್ಲಿ ಕೆಲವು ಸಾಹಿತ್ಯವನ್ನೇ ಪ್ರಕಟಿಸುವ ಉದ್ದೇಶದಿಂದ ಹೊರಬರುತ್ತಿದ್ದವು. `ಗ್ರಂಥಮಾಲಾ', `ಐತಿಹಾಸಿಕ ಲೇಖ ಸಂಗ್ರಹ' ಮುಂತಾದ ಪತ್ರಿಕೆಗಳು ಪ್ರಾಚೀನ ಕೃತಿಗಳ ಪ್ರಕಟಣೆಗೆ ಮೀಸಲಾಗಿದ್ದವು. ಉಳಿದ ಪತ್ರಿಕೆಗಳೂ ಇತರ ವಿಷಯಗಳ ಜೊತೆಯಲ್ಲಿ ಸಾಹಿತ್ಯ ಕೃತಿಗಳು, ಸಾಹಿತ್ಯಕ ವಿಚಾರಗಳನ್ನು ಪ್ರಕಟಿಸುತ್ತಿದ್ದವು. ಹಳೆಯ ಗ್ರಂಥಗಳನ್ನು ಪ್ರಕಟಿಸಲು ಕರೆ ನೀಡಿದ್ದ ವಲ್ಲಭ ಮಹಾಲಿಂಗ ತಟ್ಟಿಯವರು ಈ ದಿಸೆಯಲ್ಲಿ ಕರ್ನಾಟಕ ಕಾವ್ಯ ಮಂಜರಿಯು ಮಾಡುತ್ತಿದ್ದ ಕಾರ್ಯದ ಬಗೆಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಹಿಂದೆಯೇ ಉಲ್ಲೇಖಿಸಲಾಗಿದೆ. ಪತ್ರಿಕೆಗಳ ವಿಷಯಗಳು ಶೈಕ್ಪಣಿಕ, ರಾಜಕೀಯ, ಧಾರ್ಮಿಕ ಹಾಗೂ ಸಾಹಿತ್ಯಕ ಆಗಿದ್ದವು. ಲಲಿತ ಸಾಹಿತ್ಯ ರಚನೆಗಿಂತ ಹಳೆಯ ಕಾವ್ಯಗಳನ್ನು ಪರಿಷ್ಕರಿಸಿ ಪತ್ರಿಕೆಗಳ ಮೂಲಕ ಪ್ರಕಟಿಸುವ ಕಾರ್ಯ ಆದ್ಯತೆಯನ್ನು ಪಡೆದುಕೊಂಡಿತ್ತು. ಅಂದಿನ ಸಂಕ್ರಮಣ ಕಾಲದಲ್ಲಿ ಹೊಸದನ್ನು ಕೊಡಬೇಕು ಎಂಬ ಪ್ರಯತ್ನ ನಡೆದದ್ದು ವಿರಳ.ಹೊಸ ವಿಷಯಗಳನ್ನು ಕುರಿತು ಗ್ರಂಥಗಳನ್ನು ಬರೆಯಬೇಕೆಂಬ ಉತ್ಸಾಹ” ಬರಹಗಾರರಿಗೆ ಇದ್ದಿರಲಿಲ್ಲ ಎಂಬ ಮಾತು ಶ್ರೀಕೃಷ್ಣ ಸೂಕ್ತಿ'3 ಯಲ್ಲಿ ಬಂದಿದೆ. ``ಹಿಂದೆ ಇದ್ದವುಗಳನ್ನೇ, ಗದ್ಯರೂಪವಾದುದನ್ನು ಪದ್ಯರೂಪವಾಗಿಯೂ ಪದ್ಯವನ್ನು ವಚನವಾಗಿಯೂ ಷಟ್ಪದಿಯನ್ನು ಚಂಪುವಾಗಿಯೂ, ಚಂಪುವನ್ನು ಷಟ್ಪದಿಯಾಗಿಯೂ ಬದಲಾಯಿಸಿ ಬರೆಯುತ್ತ ಬರುವುದೇ ರೂಢಿಯಲ್ಲಿ ಬಂದಿರುವದಲ್ಲದೆ ಹೊಸ ವಿಷಯಗಳನ್ನು ತಿಳಿಸತಕ್ಕ ಗ್ರಂಥ ರಚನೆಯು ಕಡಿಮೆ'' ಎಂದು ಆಗಿನ ಸಾಹಿತ್ಯದ ವಸ್ತು ಸ್ಥಿತಿಯ ವರ್ಣನೆಯನ್ನು ಅಲ್ಲಿ ನೀಡಲಾಗಿದೆ. ``..... ಉದರ ಪೋಷಣೆಯ ಕೆಲಸವು ಪ್ರತಿಯೊಂದು ವ್ಯಕ್ತಿಯ ಬೆನ್ನಿಗೆ ಹತ್ತಿದೆ. ಆದುದರಿಂದ ಅನುಭವ ಜನ್ಯ ಜ್ಞಾನವನ್ನು ಪಡೆಯಲಿಕ್ಕೆ ಅವಕಾಶವುಳಿದಿಲ್ಲ. ಹೀಗಾಗಿ ಹೊಸ ಕಲ್ಪನೆಗಳು ದೊರೆಯದಂತಾದುದರಿಂದ, ಹಳೆಯ ಗ್ರಂಥಗಳೊಳಗಿನ ಉಪಮಾನೋಪಮೇಯಗಳನ್ನೂ ಕವಿಸಂಕೇತಗಳನ್ನೂ ಯೋಜಿಸುವುದ ಬಹಳವಾಗಿದೆ. ಅದರಿಂದ ಹೊಸ ಕವಿತೆಗಳು ಎಂಜಲದಂತೆ ಭಾಸವಾಗುವ ಸಂಭವ ಹೆಚ್ಚುಂಟು''4 ಎಂಬ ವಲ್ಲಭ ಮಹಾಲಿಂಗ ತಟ್ಟಿಯವರ ಮಾತು ಮೇಲಿನ ಹೇಳಿಕೆಯನ್ನು ಸಮರ್ಥಿಸುತ್ತದೆ. ಸಾಹಿತ್ಯ ಪೋಷಣೆ: ಇಂಥ ಸನ್ನಿವೇಶದಲ್ಲಿ ಸಾಹಿತ್ಯದ ಪ್ರಮುಖ ವಾಹಕವಾಗಿ ದ್ದ ಪತ್ರಿಕೆಗಳು ಸಾಹಿತ್ಯವನ್ನು ಯಾವ ರೀತಿಯಲ್ಲಿ ಪೋಷಿಸಿದವು? ಕನ್ನಡದ ಆದ್ಯ ಪತ್ರಿಕೆಮಂಗಳೂರು ಸಮಾಚಾರ’ದ ಸಂಪಾದಕ ಹರ್ಮನ್ ಮೊಗ್ಲಿಂಗ್ ತನ್ನ ಪತ್ರಿಕೆಯಲ್ಲಿ ಕೊಡಬೇಕೆಂದಿದ್ದ ವಿಷಯ ಸ್ವರೂಪವನ್ನು ಹೀಗೆ ಪಟ್ಟಿ ಮಾಡುತ್ತಾನೆ. ೧. ವೂರ ವರ್ತಮಾನಗಳು ೨. ಸರಕಾರಿ ನಿರೂಪಗಳು/ ಕಾನೂನು, ೩. ಸುಬುದ್ಧಿಯನ್ನು ಹೇಳುವ ಸಾಮತಿಗಳು, ಹಾಡುಗಳು, ೪. ಕತೆಗಳು, ೫.ಸರ್ವರಾಜ್ಯ ವರ್ತಮಾನಗಳು. ಸಾಮತಿಗಳು, ಹಾಡುಗಳು, ಕತೆಗಳು ಎಲ್ಲ ಸಾಹಿತ್ಯದ ವ್ಯಾಪ್ತಿಯಲ್ಲಿಯೇ ಬರುತ್ತವೆ. ಕ್ರೈಸ್ತ ಧರ್ಮದ ಪ್ರಚಾರವೂ ಈ ಪತ್ರಿಕೆಯ ಆಂತರ್ಯದ ಸಂಗತಿಯಾದ್ದರಿಂದ ಬೈಬಲ್ ಭಾಗಗಳೂ ಇದರಲ್ಲಿ ಪ್ರಕಟವಾಗಿವೆ.
ಕ್ರೈಸ್ತಮತ ಪ್ರಚಾರದ ಉದ್ದೇಶದಿಂದಲೇ ೧೮೬೧ರಲ್ಲಿ ಬೆಂಗಳೂರಿನಿಂದ ಅರುಣೋದಯ' ಪತ್ರಿಕೆ ಪ್ರಕಟವಾಯಿತು. ಇದರಲ್ಲಿ ಕೆಲವು ಕ್ರೈಸ್ತ ಗೀತೆಗಳು ಪ್ರಕಟವಾಗಿವೆ. ಇದು ಧಾರ್ಮಿಕ ಸ್ವರೂಪದವಾಗಿದ್ದರೂ ಭಾಷೆಯ ದೃಷ್ಟಿಯಿಂದ ಹೊಸ ಸಾಹಿತ್ಯದ ಲಕ್ಷಣಗಳನ್ನು ಅದು ಹೊಂದಿದೆ. (ರಾಗ- ಪಂತುವರಾಳಿ; ಆದಿ ತಾಳ) ಅನಂತ ಭಾಗ್ಯ ಹೊಂದಬಹುದಣ್ಣಾ; ಕ್ರಿಸ್ತ ಯೇಸುವಿನಿಂದ ಅನಂತ ಭಾಗ್ಯ ಹೊಂದಬಹುದಣ್ಣಾ- ದಾನದಿಂದ ಧರ್ಮದಿಂದ ಸ್ನಾನದಿಂದ ಪಾನದಿಂದ ಜ್ಞಾನದಿಂದ ಸಿಕ್ಕದಂಥ ಭಾಗ್ಯ ಯೇಸು ಕೊಡುವನಣ್ಣಾ ॥೧॥ ಇದೇ ಪತ್ರಿಕೆಯಲ್ಲಿ ಪ್ರಕಟವಾದ ‘None but jesus’ ಎಂಬ ಇಂಗ್ಲಿಷ್ ಪದ್ಯದ ಭಾವಾಂತರ ಹೀಗಿದೆ: (ರಾಗ- ಸಾರಾಷ್ಟಕ; ಆದಿತಾಳ) ಇಲ್ಲವಿಲ್ಲವಣ್ಣಾ, ನಿಮ್ಮಲ್ಲಿ ಮೋಕ್ಷ ॥ಪಲ್ಲ॥ ಕಲ್ಲನಿಟ್ಟಾರಾಧಿಸಿದಾಗ್ಯೂ ಇಲ್ಲದ ಪೂಜೆಯ ಸಲ್ಲಿಸಿದಾಗೂ॥ಇಲ್ಲ॥ ಕಾಂಚಿ ತಿರುಪತಿ ಕಾಶಿ ಯಾತ್ರೆ ಮಿಂಚಿ ಶ್ರಮೆಗಳೊಂದಿದಾಗೂ ॥ಇಲ್ಲ॥ ಭುಜವನು ಸುಟ್ಟು ತಲೆಯನು ಬೋಳಿಸಿ ಭಜ ಗೋವಿಂದನ ಹಾಡಿದಾಗೂ ॥ಇಲ್ಲ॥ ಅಂಗದ ಮೇಲೆ ಲಿಂಗವ ಕಟ್ಟಿ ಗಂಗಾಧರನನು ಸೇವಿಸಿದಾಗೂ ॥ಇಲ್ಲ॥ ಸುಳ್ಳು ಕಥೆಗಳ ಕಲ್ಪಿಸಿಕೊಂಡು ಕಳ್ಳ ಬೋಧನೆ ಬೋಧಿಸಿದಾಗೂ ॥ಇಲ್ಲ॥ ಮೋಸದ ಮಾರ್ಗ ಎಲ್ಲಾ ಬಿಟ್ಟು ಯೇಸುನ ಮಾರ್ಗ ಕಂಡರೆ ಹೊರತು ॥ಇಲ್ಲ॥ ಕ್ರೈಸ್ತ ಪಾದ್ರಿಗಳ ಕನ್ನಡ ಹೊಸತನದಿಂದ ಕೂಡಿರುವುದನ್ನು ಇಲ್ಲಿ ಕಾಣಬಹುದು. ಆದರೆ ದಾಸರ ಕೀರ್ತನೆಗಳ ದಾಟಿಯನ್ನು ಬಿಟ್ಟು ಈಚೆಗೆ ಬಂದಿಲ್ಲ ಅದು. ೧೮೬೮ರಿಂದ ೧೮೭೧ರ ವರೆಗೆ ಉಡುಪಿಯಿಂದ ಪ್ರಕಟವಾದ ಕ್ರೈಸ್ತಮತ ಪ್ರಚಾರಕ್ಕೆ ಬೈಬಲ್ ಸಾಹಿತ್ಯ ಪ್ರಕಟಿಸುತ್ತಿದ್ದಸಭಾ ಪತ್ರ’ ಪತ್ರಿಕೆಯಲ್ಲಿ ಉತ್ತಮ ಪದ್ಯಕ್ಕೆ ಉದಾಹರಣೆ ದೊರೆಯುತ್ತದೆ. ೧೮೬೮ರ ಡಿಸೆಂಬರ್ ಸಂಚಿಕೆಯಲ್ಲಿ Apostle Paulನನ್ನು ಈ ರೀತಿ ಭಾಷಾಂತರಿಸಲಾಗಿದೆ:
ಹೆಂಗಸರೇ, ಕರ್ತನಲ್ಲಿ ಯೋಗ್ಯವಾದ ಪ್ರಕಾರ ಸ್ವಂತ ಗಂಡಂದಿರಿಗೆ ಒಳಗಾಗಿ ಇರಿ. ಗಂಡಸರೇ, ಹೆಂಡಿರನ್ನು ಪ್ರೀತಿ ಮಾಡಿ, ಅವರಿಗೆ ಕಹಿಯಾಗಿರಬೇಡಿರಿ. ಮಕ್ಕಳೇ, ಎಲ್ಲಾದರಲ್ಲಿ ಹೆತ್ತವರಿಗೆ ವಿಧೇಯರಾಗಿ ಇರಿ. ಇದೇ ಕರ್ತನಿಗೆ ಆನಂದಕರವಾದದ್ದು. ತಂದೆಗಳೆ, ನಿಮ್ಮ ಮಕ್ಕಳು ಮನಗುಂದದ ಹಾಗೆ ಅವರಿಗೆ ಕೋಪವನ್ನೆಬ್ಬಿನಸಬೇಡಿರಿ.
ದಾಸರೇ, ಮನುಷ್ಯರನ್ನು ಮೆಚ್ಚಿಸುವವರಾಗಿ ಕಣ್ಣು ಸೇವೆಯನ್ನು ಮಾಡದೆ ದೇವರಿಗೆ ಭಯಪಟ್ಟು, ಮಾಂಸದ ಪ್ರಕಾರ ಯಜಮಾನರಾದವರಿಗೆ ಎಲ್ಲಾದರಲ್ಲೂ ಯತಾರ್ಥದಲ್ಲಿ ವಿಧೇಯರಾಗಿರಿ5 ಹೊಸಗನ್ನಡದ ಆರಂಭ ಕಾಲದ ಉತ್ತಮ ಗದ್ಯಕ್ಕೆ ಇದೊಂದು ಉದಾಹರಣೆ. ೧೮೭೪ರಿಂದ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ `ಕರ್ನಾಟಕ ಜ್ಞಾನ ಮಂಜರಿ' ಮಾಸಪತ್ರಿಕೆಯಲ್ಲಿ ಸಾಹಿತ್ಯಿಕ, ವೈಜ್ಞಾನಿಕ ಲೇಖನಗಳು ಪ್ರಕಟಗೊಂಡಿವೆ. ಅದರ ಒಂದು ಸಂಚಿಕೆಯಲ್ಲಿ ನಿದ್ರೆಯು; ಮಾಲವಿಕಾಗ್ನಿಮಿತ್ರ ನಾಟಕವು; ಅಮಲೇರುವ ಪದಾರ್ಥಗಳು; ವೇಳೆಯು (ಪುಸ್ತಕ೧. ಸಂಚಿಕೆ ೬) ಲೇಖನಗಳು ಪ್ರಕಟವಾಗಿವೆ. ಇದರ ಮೇಲಿಂದಲೇ ಈ ಪತ್ರಿಕೆಯ ಸ್ವರೂಪ ತಿಳಿಯುವುದು. ಸಾಹಿತ್ಯದ ಚರ್ಚೆ ಈ ಪತ್ರಿಕೆಯಲ್ಲಿ ನಡೆದಿದೆ. ಬೆಂಗಳೂರಿನಿಂದ ೧೮೮೩ರಲ್ಲಿ `ಹಿತಬೋಧಿನಿ' ಪತ್ರಿಕೆ ಹೊರಟಿತು. ಸುಮಾರು ೧೦-೧೨ ವರ್ಷ ನಡೆದ ಈ ಪತ್ರಿಕೆಯ ಆರಂಭದ ಸಂಪಾದಕರು ಎಂ.ಬಿ.ಶ್ರೀನಿವಾಸಂಯ್ಯಂಗಾರ್ ಮತ್ತು ಎಂ.ಎಸ್. ಪುಟ್ಟಣ್ಣ. ೭ನೆ ಸಂಚಿಕೆಯಿಂದ ಎಂ.ವೆಂಕಟಕೃಷ್ಣಯ್ಯನವರು ಇದರ ಸಂಪಾದಕರು.ಜನರಿಗೆ ತಿಳಿವಳಿಕೆ ಹೆಚ್ಚಿದಷ್ಟು ಸೌಖ್ಯ ಹೆಚ್ಚುವುದು. ಈ ಹಿತಬೋಧಿನಿ'ಯ ಮೂಲಕ ಜನಗಳಿಗೆ ಕೈಲಾದ ಮಟ್ಟಿಗೆ ತಿಳಿವಳಿಕೆಯನ್ನು ಹೆಚ್ಚಿಸ ಬೇಕೆಂದು ಯತ್ನಿಸಿದ್ದೇವೆ. ನಮ್ಮ ಶಾಸ್ತ್ರಗಳಲ್ಲಿರುವ ವಿಷಯಗಳನ್ನು ಹೇಳುವುದಲ್ಲದೆ ಇಂಗ್ಲಿಷರಲ್ಲಿರತಕ್ಕ ನೂತನವಾದ ಕುಶಲ ವಿದ್ಯದ, ಉಪಯುಕ್ತವಾದ ಶಾಸ್ತ್ರಗಳ ಸಂಗತಿಗಳನ್ನು ಆಗಾಗ್ಯೆ ಈ ಪತ್ರಿಕೆಯಲ್ಲಿ ಬರೆಯುತ್ತಾ ಬರುವೆವು. ವಿನೋದಕರವಾಗಿಯೂ ನೀತಿ ಪ್ರದರ್ಶಕವಾಗಿಯೂ ಇರುವ ಕೆಲವು ಕಥೆಗಳೂ ಇದರಲ್ಲಿ ಬರೆಯಲ್ಪಡುವವು.'' ಇದರಿಂದಲೂ ಸಾಕಷ್ಟು ಸಾಹಿತ್ಯ ಸೇವೆ ಆಗಿರುವುದು ಈ ಮಾತುಗಳಿಂದಲೇ ಸ್ಪಷ್ಟವಾಗುತ್ತದೆ. ಇದೇ ಸುಮಾರಿಗೆ ಉಡುಪಿಯ ಹಿಂದೂ ಪ್ರೆಸ್‌ನಿಂದಸುದರ್ಶನ’ ಪತ್ರಿಕೆ ಹೊರಡುತ್ತಿತ್ತು. ಇದರಲ್ಲಿ ಆರ್ಯಧರ್ಮ ಸಂಸ್ಕೃತಿ, ಸ್ತ್ರೀಶಿಕ್ಷಣ ಕುರಿತ ಲೇಖನಗಳು ಇರುತ್ತಿದ್ದವು. ಬಿಡಿಯಾದ ಪದ್ಯಗಳು, ಪುಸ್ತಕ ವಿಮರ್ಶೆ ಪ್ರತಿ ಸಂಚಿಕೆಯಲ್ಲೂ ನೋಡಸಿಗುತ್ತಿತ್ತು. ಜೊತೆಯಲ್ಲಿ ವಿವಿಧ ವಿಷಯ ಮಂಜರಿ. ಪದ್ಯಗಳಲ್ಲಿ ದಾಸರ ಪದಗಳು, ಸಮಕಾಲೀನರಾದ ಮೂಲ್ಕಿ ವೆಂಕಣ್ಣಯ್ಯ, ವರಹ ತಿಮ್ಮಪ್ಪದಾಸ, ಭಟ್ಕಳ ಅಪ್ಪಯ್ಯ ಮೊದಲಾದವರ ಪದ್ಯಗಳೂ ಇವೆ. ಅದರ ವಿಶೇಷವೆಂದರೆ ವಿವಿಧ ವಿಷಯಗಳನ್ನು ಕೊಡುವಾಗ ಅದಕ್ಕೆ ಸಂಬಂಧಿಸಿದ ಟೀಕೆ-ಟಿಪ್ಪಣಿಗಳನ್ನು ನೀಡುವುದು. ಕುಂಬಳೆ ಕೃಷ್ಣರಾಯರು ಆರಂಭದಲ್ಲಿ ಇದರ ಸಂಪಾದಕರಾಗಿದ್ದರು.
ಮೈಸೂರಿನ ಕೆಲವು ಪದವೀಧರರು ಸೇರಿಕೊಂಡು ೧೮೯೨ರಲ್ಲಿ ಗ್ರ್ಯಾಜುಯೇಟ್‌ ಟ್ರೇಡಿಂಗ್ ಅಸೋಸಿಯೇಶನ್' (ಜಿಟಿಎ) ಸ್ಥಾಪಿಸಿಕೊಂಡರು. ಇವರುಕರ್ನಾಟಕ ಗ್ರಂಥಮಾಲೆ’ ಪತ್ರಿಕೆಯನ್ನು ಆರಂಭಿಸಿದರು. ಈ ಪತ್ರಿಕೆಯ ಮೂಲಕ ಅವರು ಹಳೆಯ ಕೃತಿಗಳ ಸಾರವನ್ನು ನೀಡಿದರು. ಅಲ್ಲದೆ ಹೊಸ ಗದ್ಯ ಕೃತಿಗಳನ್ನೂ, ಇಂಗ್ಲಿಷ್ ಕೃತಿಗಳ ರೂಪಾಂತರವನ್ನೂ ನೀಡಿದರು. ಇದು ನಿಜವಾದ ಅರ್ಥದಲ್ಲಿ ಸಾಹಿತ್ಯಪತ್ರಿಕೆಯೇ ಹೌದು. ಇದರಲ್ಲಿಯ ಪ್ರಕಟಣೆಗಳು ಮುಂದೆ ಸ್ವತಂತ್ರ ಪುಸ್ತಕಗಳಾಗಿ ಹೊರಬಂದವು. ಇದರಿಂದ ಅನೇಕ ಹೊಸ ಲೇಖಕರು ಬೆಳಕಿಗೆ ಬಂದರು. ಈ ಜಿ.ಟಿ.ಎ.ಗೆ ಸೇರಿದ ಕೊಮಾಂಡೂರು ಶ್ರೀನಿವಾಸಯ್ಯಂಗಾರ ಇವರು ಸಂಸ್ಕೃತ ಕಾವ್ಯ, ಅವುಗಳ ಕನ್ನಡಾನುವಾದವನ್ನು ಕೊಡುವ ಅಪೇಕ್ಷೆಯಿಂದ ಕಾವ್ಯಕಲ್ಪ ದ್ರುಮಮ್‌'ವನ್ನು ಪ್ರಾರಂಭಿಸಿದರು. ಮೊದಲ ಸಂಚಿಕೆಯಲ್ಲಿ ಕುಮಾರ ಸಂಭವ, ಮೇಘದೂತ ಮತ್ತು ನೈಷಧಗಳ ಕಾವ್ಯಭಾಗಗಳು ಪ್ರಕಟಗೊಂಡಿವೆ. ಇದರ ಎರಡನೆ ಸಂಚಿಕೆ ಹೊರಬಂದಂತೆ ಇಲ್ಲ. ವಿದ್ಯಾವಂತರು ಪತ್ರಿಕೋದ್ಯಮಕ್ಕೆ ಆಗಮಿಸಿದ್ದರ ದ್ಯೋತಕ ಜಿ.ಟಿ.ಎ. ಇದರಕರ್ನಾಟಕ ಗ್ರಂಥಮಾಲೆ’ ಮತ್ತು ಕಾವ್ಯಮಂಜರಿ' ಬಗ್ಗೆ ಭಾರತದ ವಿವಿಧ ಭಾಷಾ ವಾಙ್ಮಯಗಳ ವಾರ್ಷಿಕ ಸಮೀಕ್ಷೆ (೧೮೯೩)ಯಲ್ಲಿ ಬಂದಿರುವ ಅಭಿಪ್ರಾಯ ಗಮನಾರ್ಹವಾಗಿದೆ.6 ಆಧುನಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಗ್ರಂಥಮಾಲಾ ಮತ್ತು ಕಾವ್ಯಮಂಜರಿ ಇಂಗ್ಲಿಷ್ ಮತ್ತು ಸಂಸ್ಕೃತಗಳಿಂದ ಅನುವಾದ ಮಾಡಿರುವುದು ಮಹತ್ವದ ಕಾಣಿಕೆ ಎಂದು ಮುಕ್ತಕಂಠದಿಂದ ಹೊಗಳಲಾಗಿದೆ. ಕರ್ನಾಟಕ ಕಾವ್ಯಮಂಜರಿಗೆನಾನಾವಿಧ ಪ್ರಾಚೀನ ಕಾವ್ಯ ನಾಟಕ ಚ್ಛಂದೋಲಂಕಾರ ವ್ಯಾಕರಣ, ನಿಘಂಟು, ವೈದ್ಯ, ಸ್ತೂಪ ಶಿಲ್ಪ ಗ್ರಂಥ ಸಂಗ್ರಹದ ಮಾಸಪತ್ರಿಕೆ’ ಎಂಬ ಅಭಿದಾನವಿತ್ತು.
ಜಿ.ಟಿ.ಎ. ಮತ್ತು ಕರ್ನಾಟಕ ಗ್ರಂಥಮಾಲೆ'ಯ ಆರಂಭದ ಹೊಣೆ ಹೊತ್ತವರು ಎಲ್.ಜಯರಾವ್, ಎಂ.ಶಾಮರಾವ, ಬಾಪು ಸುಬ್ಬರಾಯ ಮತ್ತು ಅಪ್ಪಣ್ಣ ಶೆಟ್ಟಿ. ಮೈಸೂರು ಸಂಸ್ಥಾನದಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ಎಂ.ಶಾಮರಾಯರು,ವಿದ್ಯಾದಾಯಿನೀ’ ಎಂಬ ಸಾಹಿತ್ಯ ಮತ್ತು ಶೈಕ್ಷಣಿಕ ಪತ್ರಿಕೆಯನ್ನೂ ಹೊರಡಿಸಿದ್ದಾರೆ. ಗ್ರಂಥಮಾಲೆ'ಯಲ್ಲಿ ಪ್ರಕಟವಾದ ಮೊದಲ ಪುಸ್ತಕಚಂಡಮಾರುತ’ ಇವರದೇ ಆಗಿತ್ತು.
ಕರ್ನಾಟಕ ಕಾವ್ಯ ಮಂಜರಿ'ಯ ಸಂಚಾಲಕರಾಗಿ ಎಂ.ಎ. ರಾಮಾನುಜಯ್ಯಂಗಾರ್ ಹಾಗೂ ಎಸ್.ಜಿ. ನರಸಿಂಹಾಚಾರ್ಯ ಪ್ರಾಚೀನ ಕಾವ್ಯಗಳನ್ನು ಪ್ರಕಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇವರಿಗೆ ಎಂ.ಕೆ. ತಿರುಮಲಾಚಾರ್ ಮತ್ತು ಇತರ ಮಿತ್ರರು ಸಹಕಾರ ನೀಡಿದ್ದಾರೆ.ಕರ್ನಾಟಕ ಕಾವ್ಯ ಮಂಜರಿ’ಯ ಹೆಗ್ಗಳಿಕೆ ಎಂದರೆ ಇದರಿಂದ ಒಂದೊಂದು ಗ್ರಂಥ ಹೊರಬೀಳುತ್ತಲೇ ಮುಂಬಯಿ, ಮದ್ರಾಸು, ಮೈಸೂರು ಭಾಗಗಳಲ್ಲಿಯ ಮೇಲ್ದರ್ಜೆಯ ಕನ್ನಡ ಪರೀಕ್ಷೆಗಳಿಗೆ ಇವು ಪಠ್ಯಗಳಾಗಿ ಆಯ್ಕೆಯಾಗುತ್ತಿತ್ತು. ಆ ಕಾಲದಲ್ಲಿ ಸಾಹಿತ್ಯ ರಚನೆಕಾರರು ಹೊಸ ಶಿಕ್ಷಣಕ್ಕೆ ಪಠ್ಯಗಳನ್ನು ಪೂರೈಸುವ ಹೊಣೆಯನ್ನು ಹೊರುವ ಅಗತ್ಯವೂ ಇತ್ತು. ಪಠ್ಯಗಳನ್ನು ಗಮನದಲ್ಲಿರಿಸಿ ಅನೇಕ ಕೃತಿಗಳು ರಚನೆಗೊಂಡವು. ಕ್ರಿ.ಶ. ೧೮೯೨ರಲ್ಲಿ ಆರಂಭವಾಗಿ ಆರು ವರ್ಷ ನಡೆದು ನಿಂತುಹೋದ ಈ ಗ್ರಂಥಮಾಲೆಯು ಒಂದೆರಡು ವರ್ಷಗಳಲ್ಲಿ ಮತ್ತೆ ಕರ್ನಾಟಕ ಕಾವ್ಯಕಲಾನಿಧಿ' ಎಂಬ ಹೆಸರಿನಲ್ಲಿ ಆರಂಭವಾಗಿ ಎರಡು ದಶಕಗಳ ವರೆಗೆ ಮುಂದುವರಿಯಿತು. ಉತ್ತರ ಕರ್ನಾಟಕದಲ್ಲಿ ಇದೇ ಬಗೆಯ ಉದ್ದೇಶಗಳನ್ನು ಇರಿಸಿಕೊಂಡುಕರ್ನಾಟಕ ಭಾಷಾ ಸೇವಕ'(೧೮೯೪) ಮತ್ತು ವಾಗ್ಭೂಷಣ' (೧೮೯೬) ಪ್ರಕಟಗೊಂಡವು. ಬಿಜಾಪುರದ ಹೈಸ್ಕೂಲೊಂದರಲ್ಲಿ ಶಿಕ್ಷಕರಾಗಿದ್ದ ಮೂವರು ಯುವ ಮಿತ್ರರು ಸಂಸ್ಕೃತ, ಇಂಗ್ಲಿಷ್ ಕೃತಿಗಳ ಸಾರವನ್ನು ಕನ್ನಡದಲ್ಲಿ ಸರಳ ಗದ್ಯದಲ್ಲಿ ಕೊಡಬೇಕು ಎಂದು ಯೋಜಿಸಿ ಅವುಗಳ ಪ್ರಕಟಣೆಗಾಗಿಭಾಷಾಸೇವಕ’ವನ್ನು ಆರಂಭಿಸುತ್ತಾರೆ. ಶೇಷಗಿರಿರಾವ್ ಕೊಣ್ಣೂರ ಬರೆದ ಕೇಡು ತಂದ ಉಂಗುರ' (ಶಾಕುಂತಲದ ಕಥೆ); ಹಣಮಂತರಾವ್ ಸಗರ ಇವರಅಂತಃಪುರದ ರಹಸ್ಯ’ (Lovers of Harem ಇದರ ಭಾಷಾಂತರ) ಮತ್ತು ಕೃಷ್ಣರಾವ್ ಹುನಗುಂದ ಇವರ ಕುರುಹಿನ ಬಕುಳಹಾರ' (ಮಾಲತೀ ಮಾಧವ’ದ ಕಥಾನುವಾದ) ಧಾರಾವಾಹಿಯಾಗಿ ಬಂದು ನಂತರ ಪುಸ್ತಕ ರೂಪದಲ್ಲಿ ಬಂದವು. ಕೃಷ್ಣರಾವ ಹುನಗುಂದ ಇವರು ಮುದ್ರಾರಾಕ್ಷಸ'ದ ಅನುವಾದ ಆರಂಭಿಸಿದ್ದರು. ಈ ಗೆಳೆಯರಲ್ಲಿ ಇಬ್ಬರಿಗೆ ಪರವೂರಿಗೆ ವರ್ಗವಾದ ಕಾರಣ ಅವರ ಯೋಜನೆ ಸ್ಥಗಿತಗೊಂಡಿತು. ಉತ್ತರ ಕರ್ನಾಟಕದ ಸಾಂಸ್ಕೃತಿಕ ಬದುಕಿನಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಿದ ಧಾರವಾಡದ ವಿದ್ಯಾವರ್ಧಕ ಸಂಘವು ೧೮೯೬ರಲ್ಲಿವಾಗ್ಭೂಷಣ’ವನ್ನು ಆರಂಭಿಸಿತು. ಹಲವು ರೀತಿಯ ಸಾಹಿತ್ಯಕ ಚರ್ಚೆಗಳು, ವಿಮರ್ಶೆಗಳು, ಹೊಸ ಬರೆಹಗಳು, ಗ್ರಂಥಾವಳಿಗಳು ಇದರಲ್ಲಿದ್ದವು. ಬಹುಮಾನ ಘೋಷಣೆ ಮಾಡಿ ಹೊಸ ಗ್ರಂಥಗಳನ್ನು ಬರೆಯಿಸುವ ಪರಿಪಾಠವನ್ನು ಇವರು ಆರಂಭಿಸಿದರು. ವಾಗ್ಭೂಷಣ'ದಲ್ಲಿ ಹಲವು ಸ್ವತಂತ್ರ ವಿಚಾರಧಾರೆಯ ಲೇಖನಗಳು ಪ್ರಕಟಗೊಂಡಿವೆ. ಗಳಗನಾಥರ ಮೊದಲ ಕಾದಂಬರಿಪದ್ಮನಯನಾ’ ಇದರಲ್ಲಿಯೇ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ವಿದ್ಯಾವರ್ಧಕ ಸಂಘವು ವಾಗ್ಭೂಷಣದ ಮೂಲಕ ೮೫ ಪುಸ್ತಕಗಳನ್ನು ಹಾಗೂ ಸ್ವತಂತ್ರವಾಗಿ ೧೧ ಪುಸ್ತಕಗಳನ್ನು ಪ್ರಕಟಿಸಿತು. ನವೋದಯ ಕಾವ್ಯಕ್ಕೆ ಹೊಸ ದಿಶೆಯನ್ನು ತೋರಿಸಿದ ಪ್ರಾಸ ಸಂಬಂಧಿ ವಾಗ್ವಾದದಲ್ಲಿ ಈ ಪತ್ರಿಕೆಯೂ ವೇದಿಕೆಯನ್ನು ಒದಗಿಸಿಕೊಟ್ಟಿತು. ಇದನ್ನು ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.
ಮಂಗಳೂರಿನಿಂದ ೧೮೯೬ರಲ್ಲಿ ಸತ್ಯದೀಪಿಕೆ' ಮೊದಲು ಮಾಸ ಪತ್ರಿಕೆಯಾಗಿ ಹೊರಟಿತು. ಮೂರು ವರ್ಷಗಳ ನಂತರ ಇದು ವಾರ ಪತ್ರಿಕೆಯಾಯಿತು. ಇದು ಸಚಿತ್ರ ಪತ್ರಿಕೆಯಾಗಿತ್ತು. ದೇಶ ವಿದೇಶಗಳ ಸುದ್ದಿಯ ಜೊತೆಯಲ್ಲಿ ಸಣ್ಣಕಥೆ, ಪ್ರಬಂಧ ಹಾಗೂ ಕವನಗಳು ಇದರಲ್ಲಿ ಪ್ರಕಟವಾಗುತ್ತಿದ್ದವು. ದಿವಂಗತ ಪಂಜೆ ಮಂಗೇಶರಾಯರು ಇದರಲ್ಲಿ ಅನೇಕ ಲೇಖನಗಳನ್ನು ಬರೆದಿರುವರು.ರಾಮಪಂ’ ಎಂಬ ಹೆಸರಿನಿಂದ ಸತ್ಯದೀಪಿಕೆ'ಯಲ್ಲಿ ಪಂಜೆಯವರು ಹಲವು ಇಂಗ್ಲಿಷ್ ಪದ್ಯಗಳನ್ನು ಅನುವಾದಿಸಿದ್ದಾರೆ. ಇದೇ ಕಾಲದ ಇನ್ನೊಂದು ಸಾಹಿತ್ಯಪತ್ರಿಕೆ ೧೯೦೦ರಸುವಾಸಿನಿ’. ಬೆನಗಲ್ ರಾಮರಾಯರು ಇದರ ಸಂಪಾದಕರು. ಪಂಜೆ ಮಂಗೇಶರಾಯರು, ಉಳ್ಳಾಲ, ಬಿ. ವೆಂಕಟಾಚಾರ್ಯ, ನರಹರಯ್ಯ, ಆರ್.ಶ್ರೀನಿವಾಸರಾವ್, ಎಂ.ಎಸ್. ಶ್ರೀನಿವಾಸರಾವ್ ರೊದ್ದ, ಇನಾಮತಿ, ಕೆ.ವಿ. ಶಾಸ್ತ್ರಿ ಸೇರಿದಂತೆ ಕನ್ನಡ ನಾಡಿನ ವಿವಿಧ ಭಾಗಗಳಿಂದ ಲೇಖಕರು ಈ ಪತ್ರಿಕೆಗೆ ಲೇಖನಗಳನ್ನು ಕಳುಹಿಸುತ್ತಿದ್ದರು. ಬೆನಗಲ್ ರಾಮರಾಯರ ರಮಾ ಮಾಧವ', ಬಿ. ವೆಂಕಟಾಚಾರ್ಯರಉನ್ಮಾದಿನಿ’ ಕಾದಂಬರಿಗಳು ಈ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಪಂಜೆಯವರ ಮರಳಿ ನೀ ತಮ್ಮನ ಕರೆಯಪ್ಪಾ' (oh, call my brother back to me)ಉತ್ತಮ ರಾಜ್ಯ’ (The better land) ಇತ್ಯಾದಿ ಅನುವಾದಿತ ಕವನಗಳು, ಪ್ರಥುಲಾ',ದುರ್ಗಾವತಿ’, ನನ್ನ ಚಿಕ್ಕ ತಂದೆ',ನನ್ನ ಚಿಕ್ಕ ತಾಯಿ’, ನನ್ನ ಹೆಂಡತಿ' ಮೊದಲಾದ ಕತೆ, ಕವನಗಳು ಇದರಲ್ಲಿಯೇ ಪ್ರಕಟವಾಗಿವೆ. ರಾ.ಕೃ. ಇನಾಮತಿ ಅವರ ಐತಿಹಾಸಿಕ ಕಾದಂಬರಿಆರ್ಯಾವರ್ತದ ಮೊದಲ ಚಕ್ರವರ್ತಿ’ ಇದರಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ಹಲವಾರು ಅಡಿ ಟಿಪ್ಪಣಿಗಳನ್ನು ಈ ಕಾದಂಬರಿಗೆ ಸಮರ್ಥನೆಗಾಗಿ ಕೊಡಲಾಗಿತ್ತು. ರಾವಬಹಾದ್ದೂರ',ವೀರೇಶಲಿಂಗಂ ಪಂತುಲು’, ರಾಜಾ ರವಿವರ್ಮ',ಎನ್ನಿ ಬೆಸೆಂಟ್’ ಮೊದಲಾದವರ ಚರಿತ್ರೆಯೂ ಇದರಲ್ಲಿದೆ. ಭೂಮಿ ಶಾಸ್ತ್ರ' ಎಂಬ ಶಾಸ್ತ್ರೀಯ ಗ್ರಂಥವೊಂದು ಸಚಿತ್ರವಾಗಿ ಧಾರಾವಾಹಿಯಾಗಿ ಪ್ರಕಟವಾಗಿದೆ.ಕಬ್ಬಿಣದ ಬುದ್ಧಿವಾದ’ ಎಂಬ ನೀತಿ ಹೇಳುವ ದೀರ್ಘ ಕವನ ಪ್ರಕಟವಾಗಿದೆ. ಸಾಹಿತ್ಯಕ ವಾಗ್ವಾದಗಳಿಗೂ ಸುವಾಸಿನಿ' ವೇದಿಕೆಯಾಗಿತ್ತು. ಕಾದಂಬರಿ ಪ್ರಕಾರ ಕನ್ನಡದಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾಗ ಆ ಪ್ರಕಾರಕ್ಕೆಕಾದಂಬರಿ’ ಹೆಸರು ಸೂಕ್ತವೇ ಎಂಬ ಜಿಜ್ಞಾಸೆ ನಡೆದದ್ದು ಈ ಪತ್ರಿಕೆಯಲ್ಲಿಯೇ. ಸುಮಾರು ಮೂರು ವರ್ಷಗಳ ಕಾಲ ನಡೆದು ನಿಂತುಹೋದ ಸುವಾಸಿನಿ' ಸುಮಾರು ಎರಡು ದಶಕಗಳ ನಂತರ ಪುನಃ ಆರಂಭಗೊಂಡಾಗ ಅದರಲ್ಲಿ ಅರ್ಧಕ್ಕೆ ನಿಂತ ಭಾಗಗಳು ಮುಂದುವರಿದಿದ್ದು ಮಹತ್ವದ ಅಂಶವಾಗಿದೆ.ಸುವಾಸಿನಿ’ಯು ಶ್ರೇಷ್ಠ ಸಾಹಿತ್ಯಪತ್ರಿಕೆಯಾಗಿತ್ತು ಎನ್ನುವುದಕ್ಕೆ ಅದರಲ್ಲಿ ಪ್ರಕಟವಾಗಿರುವ ಉತ್ತಮ ಲೇಖನಗಳೇ ಸಾಕ್ಪಿಯಾಗಿವೆ. ದುರ್ಗವತಿಯು ತನ್ನ ಖಡ್ಗಕ್ಕೆ ಉದರವನ್ನು ಒರೆಯಾಗಿ ಮಾಡಿ ಬಿಟ್ಟಳು',ಕೈಯಿಂದ ಉಂಡೆ ಕಟ್ಟಬಹುದಾದಷ್ಟು ದಪ್ಪವಾದ ಕಾಳಿಮೆಯ ರಾತ್ರಿ’, ಇತ್ಯಾದಿಗಳನ್ನು ಸಾಹಿತ್ಯದ ಸತ್ವಕ್ಕಾಗಿ ಉದಾಹರಣೆಯಾಗಿ ನೀಡಬಹುದು. ಗದ್ಯ ಸಾಹಿತ್ಯ ಒಂದು ಸ್ವರೂಪವನ್ನು ಪಡೆಯತೊಡಗಿತ್ತು; ಪರಂಪರೆಯನ್ನು ನಿರ್ಮಿಸಿಕೊಳ್ಳತೊಡಗಿತ್ತು ಎಂಬುದು ಈ ಪತ್ರಿಕೆಯ ಲೇಖನಗಳಿಂದ ಸ್ಪಷ್ಟವಾಗುವುದು''7 ಎಂದು ಶಂಕರ ಪಾಟೀಲರು ಸರಿಯಾಗಿಯೇ ಗುರುತಿಸಿದ್ದಾರೆ. ಕೆರೋಡಿ ಸುಬ್ಬರಾಯರು ಮತ್ತು ಕಡೇಕಾರು ರಾಜಗೋಪಾಲ ಕೃಷ್ಣರಾಯರ ಸಂಪಾದಕತ್ವದಲ್ಲಿ ಉಡುಪಿಯಿಂದ ೧೯೦೫ರಲ್ಲಿ `ಶ್ರೀಕೃಷ್ಣ ಸೂಕ್ತಿ' ಪ್ರಕಟವಾಯಿತು. ಇದು ಕೂಡ ನಾವು ಗಮನಿಸಬೇಕಾದ ಸಾಹಿತ್ಯಪತ್ರಿಕೆಯೇ. ಹುರುಳಿ ಭೀಮರಾವ್, ಆಲೂರ ವೆಂಕಟರಾಯರು, ಬಂಟ್ವಾಳ ಸೀತಾರಾಮರಾವ್, ಯಜ್ಞನಾರಾಯಣ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರರು, ಆರ್.ಶ್ರೀನಿವಾಸರಾವ್, ಬೆನಗಲ್ ರಾಮರಾವ್, ಹೊಸಕೆರೆ ಚಿದಂಬರಯ್ಯ, ಗುಡಿಬಂಡೆ ಕೇಶವಯ್ಯ ಮೊದಲಾದವರು ಇದರಲ್ಲಿ ಲೇಖನಗಳನ್ನು ಬರೆದಿರುವರು. `ಶ್ರೀಕೃಷ್ಣ ಸೂಕ್ತಿ' ವಿಷಯ ಕೊಟ್ಟು ಕಾವ್ಯ ಸ್ಪರ್ಧೆಗಳನ್ನು ನಡೆಸುತ್ತಿತ್ತು ಎಂಬುದನ್ನು ಈಗಾಗಲೆ ಗಮನಿಸಲಾಗಿದೆ. ಸಮಾಜ ಸುಧಾರಣೆ: ನೇರವಾಗಿ ಸಾಹಿತ್ಯದ ವಿಷಯವನ್ನು ಹೇಳದಿದ್ದರೂ ಪರೋಕ್ಷವಾಗಿ, ಅಂದಿನ ಇತರ ಕೆಲವು ಪತ್ರಿಕೆಗಳು ಅನೇಕ ಗ್ರಂಥಗಳ ರಚನೆಗೂ ಕಾರಣವಾಗಿದ್ದವು. ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆಗಳಿಂದ ಕೂಡಿದ ಲೇಖನಗಳನ್ನು ಪ್ರಕಟಿಸುತ್ತಿದ್ದ ಕೆಲವು ಪತ್ರಿಕೆಗಳು ಬಳಿಕ ಅದೇ ವಿಚಾರವನ್ನು ಹೊಂದಿದ ಗ್ರಂಥಗಳ ರಚನೆಗೂ ಕಾರಣವಾದುದನ್ನು ನಾವು ಗಮನಿಸಬಹುದು. ಸಾಮಾಜಿಕ ಸುಧಾರಣೆಯನ್ನು ಧ್ಯೇಯವನ್ನಾಗಿ ಸ್ವೀಕರಿಸಿದ್ದ ವೆಂಕಟರಂಗೋ ಕಟ್ಟಿಯು ೧೮೬೧ರಲ್ಲಿ ಆರಂಭವಾದ `ಜ್ಞಾನಬೋಧಕ'ದಲ್ಲಿ ಹಲವು ಲೇಖನಗಳನ್ನು ಬರೆದಿರುವರು. ಬಳಿಕ `ಶೋಧಕ' ಮತ್ತು `ಲೋಕ ಶಿಕ್ಪಕ' ಎಂಬ ಪತ್ರಿಕೆಗಳನ್ನು ಸ್ವತಃ ಹೊರಡಿಸಿದರು. ಕಟ್ಟಿಯ ಕನ್ನಡಾಭಿಮಾನವನ್ನು ಸ್ಮರಿಸುವಾಗ ಈ ಮೊದಲು `ಶೋಧಕ'ದ ಸಂಪಾದಕೀಯವನ್ನು ಗಮನಿಸಲಾಗಿದೆ. ಈ ಎರಡು ಪತ್ರಿಕೆಗಳಲ್ಲದೆ ಕಟ್ಟಿಯು `ಕರ್ನಾಟಕ ಪತ್ರ' ಮತ್ತು `ಚಂದ್ರೋದಯ' ಪತ್ರಿಕೆಗಳ ಹೊಣೆಯನ್ನು ಕೆಲವು ಕಾಲ ಹೊತ್ತಿದ್ದರು. ಸ್ತ್ರೀಯರ ಏಳ್ಗೆ ಕಟ್ಟಿಯ ಸಮಾಜ ಸುಧಾರಣೆಯ ಮೂಲ ಮಂತ್ರವಾಗಿತ್ತು. ಸ್ವತಃ ಕಟ್ಟಿಯೇ `ವಿಧವೆಯರ ಇತಿಹಾಸ' `ವಿಧವಾ ವಪನ ಅನಾಚಾರ; (೧೮೮೯) ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ಎರಡನೆಯದು ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿವೆ. `ಸುದರ್ಶನ' ಪತ್ರಿಕೆಯಲ್ಲಿಯೂ ಸ್ತ್ರೀಯರ ಉದ್ಧಾರ ಕುರಿತ ಲೇಖನಗಳಿವೆ. ೧೮೮೭ರ ಎಪ್ರಿಲ್ ಸಂಚಿಕೆಯಲ್ಲಿ ಹಟ್ಟಂಗಡಿ ನಾರಾಯಣರಾಯರು ಬರೆದ `ಪ್ರಸಿದ್ಧಪಟ್ಟ ಹಿಂದೂ ದೇಶದ ಸ್ತ್ರೀಯರು' ಎಂಬ ಲೇಖನ ಪ್ರಕಟವಾಗಿದೆ. `ಸುದರ್ಶನ'ದ ವೈಶಿಷ್ಟ್ಯವೆನಿಸಿದ `ಮಂಗೂ-ನಾಗೂ' ಸಂಭಾಷಣೆ ಸ್ತ್ರೀ ಶಿಕ್ಪಣದ ಬಗ್ಗೆ ವಕಾಲತ್ತು ವಹಿಸಿದೆ.ಸ್ತ್ರೀಯರು ವಿದ್ಯಾಲಂಕೃತರಾದರೆ ಅವರಿಗೂ ಅವರ ಒಡಹುಟ್ಟಿದವರಿಗೂ ಒಡಯಿರತಕ್ಕವರಿಗೂ ಆನಂದಕರ ಮತ್ತು ಶ್ರೇಯಸ್ಕರ. ಈ ಮಾತಿಗೆ ವಿರೋಧವಾಗಿ ಕನ್ನಡದಲ್ಲಿ ಒಂದು ಉಪನ್ಯಾಸವನ್ನು ತಯಾರಿಸಿ ಕಳುಹಿಸಿದವರಿಗೆ ಬರುವ ಎಪ್ರಿಲ್ ತಿಂಗಳಲ್ಲಿ ೫ ರು. ಉಚಿತವಾಗಿ ನಾವು ಕಳುಹಿಸಿಕೊಡುವೆವು. ಸ್ತ್ರೀಯರು ವಿದ್ಯೆ ಕಲಿಯಲಿಕ್ಕೆ ಏನೂ ಯೋಗ್ಯರಲ್ಲವೆಂತ ಕಾರಣಗಳೂ ಉದಾಹರಣೆಗಳೂ ಕೊಟ್ಟು ತೋರಿಸಬೇಕು”
(ಫೆಬ್ರವರಿ ೧೮೯೬ರ ಸಂಚಿಕೆ) ಎಂದು ಸವಾಲು ಎಸೆದಿರುವುದನ್ನು ಕಾಣಬಹುದು. ಇಲ್ಲಿ ಉಪನ್ಯಾಸವೆಂದರೆ ಲೇಖನವೋ ಕಾದಂಬರಿಯೋ ಎಂಬುದು ಸ್ಪಷ್ಟವಾಗಿಲ್ಲ. ಮುಂಬಯಿಯ ಕನ್ನಡ ಸುವಾರ್ತೆ'ಯಲ್ಲಿ ವಿಧವಾ ಪುನರ್ವಿವಾಹದ ಬಗ್ಗೆ ಸಾರಸ್ವತ ಸಮಾಜದವರು ಕೈಗೊಂಡ ನಿರ್ಣಯಗಳು ಬಂದಿವೆ. ಇವೆಲ್ಲ ಮುಂದೆ ಗುಲ್ವಾಡಿ ವೆಂಕಟರಾಯರುಇಂದಿರಾಬಾಯಿ’ ಕಾದಂಬರಿ ಬರೆಯುವುದಕ್ಕೆ ಪ್ರೇರಣೆ ಒದಗಿಸಿದವು.
ಸ್ವಧರ್ಮ ಸಮರ್ಥನೆ: ಕ್ರೈಸ್ತ ಧರ್ಮ ಪ್ರಚಾರಕ್ಕೆಂದು ಅರುಣೋದಯ',ಸಭಾಪತ್ರ’ ಪತ್ರಿಕೆಗಳು ಹೊರಟಂತೆ ಹಿಂದೂ ಧರ್ಮದ ಸಮರ್ಥನೆಗೂ ಕೆಲವು ಪತ್ರಿಕೆಗಳು ಹೊರಟವು. ತಮ್ಮ ತಮ್ಮ ಧರ್ಮಗಳನ್ನು ಸಮರ್ಥಿಸಿ ಅನ್ಯ ಧರ್ಮವನ್ನು ವಿಡಂಬಿಸಿ ಅನೇಕ ಲೇಖನಗಳು ಇವುಗಳಲ್ಲಿ ಪ್ರಕಟವಾಗಿವೆ. ಈ ಲೇಖನಗಳಲ್ಲಿಯೇ ಉತ್ತಮ ಸಾಹಿತ್ಯಕ ಗುಣಗಳಿವೆ. ಇವೆಲ್ಲ ಕ್ರಿಯೆಗೆ ಪ್ರತಿಕ್ರಿಯೆ ಎನ್ನುವ ರೀತಿಯಲ್ಲಿ ಬಂದುದು. ಹಿಂದೂ ಸನಾತನ ವಾದಿಗಳಿಗೆ ಕ್ರೈಸ್ತ ಧರ್ಮದ ಎದುರು ತಮ್ಮ ಧರ್ಮವನ್ನು ಸಮರ್ಥಿಸಿಕೊಳ್ಳುವುದರ ಜೊತೆಯಲ್ಲಿ ಆಂಗ್ಲ ಶಿಕ್ಪಣದಿಂದ ಹೊಸ ಪೀಳಿಗೆಯವರಲ್ಲಿ ಸ್ವಧರ್ಮದ ಮೇಲಿನ ಅಭಿಮಾನ ಕಡಿಮೆಯಾಗುತ್ತಿದ್ದುದನ್ನು ತಡೆಯುವುದೂ ಉದ್ದೇಶವಾಗಿತ್ತು. ಈ ಪತ್ರಿಕೆಗಳಲ್ಲಿ ಕ್ರೈಸ್ತರು ತಮ್ಮ ಬೈಬಲ್ ಅನುವಾದ, ಇತರ ಬೈಬಲ್ ಕತೆಗಳನ್ನು ಪ್ರಕಟಿಸಿದರೆ ಹಿಂದೂಗಳೂ ತಮ್ಮ ಧರ್ಮದ ವಿವಿಧ ಮತ ಪಂಥಗಳಿಗೆ ಸಂಬಂಧಿಸಿದ ಕೃತಿಗಳನ್ನು ಸುಲಭವಾದ ಕನ್ನಡದಲ್ಲಿ ನೀಡಬೇಕು ಎಂಬ ಉದ್ದೇಶ ಹೊಂದಿದ್ದರು.
ವೆಂಕಟಕೃಷ್ಣ ಸರಸ್ವತಿಯವರು ಬೆಂಗಳೂರಿನಿಂದ ೧೮೮೮ರಲ್ಲಿ ಹಿಂದೂ ಮತಾಭಿಮಾನಿ'ಯನ್ನು ಹೊರಡಿಸಿದರು. ಆಸ್ತಿಕ ಭಾವ, ಜನ್ಮಾಂತರ, ಧರ್ಮದ ವ್ಯಾಖ್ಯೆ ಇತ್ಯಾದಿ ಲೇಖನಗಳು ಅದರಲ್ಲಿವೆ. ಇದಾದ ಹತ್ತು ವರ್ಷಗಳ ಬಳಿಕ ರಾ.ಸೂ. ವೆಂಕಟಕೃಷ್ಣಯ್ಯ ಎಂಬವರು ಸದ್ಧರ್ಮ ಪ್ರಸಾರವನ್ನೇ ಉದ್ದೇಶವಾಗಿಟ್ಟುಕೊಂಡುವಿವೇಕಾನಂದ’ ಪತ್ರಿಕೆ ಹೊರಡಿಸಿದರು. ಧಾರ್ಮಿಕ ವಿಚಾರವು ಅತ್ಯಂತ ಗಹನವಾದುದರಿಂದ ಮತತ್ರಯ ಗುರುಗಳು ಲೇಖನ ಕೊಟ್ಟು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.
ಆಧುನಿಕ ಪಂಡಿತರನೇಕರು ವೇದಾರ್ಥವನ್ನು ಕೆಡಿಸಿ ವೇದಕ್ಕೆ ಕೆಟ್ಟ ಹೆಸರನ್ನು ತಂದಿರುವುದರಿಂದ.. .. .. ಐತರೇಯ, ಶತಪಥ, ಸಾಮ, ಗೋಪಥಗಳೆಂಬ ಎಲ್ಲಾ ಬ್ರಾಹ್ಮಣಗಳನ್ನೂ ಆರಣ್ಯಕಗಳನ್ನೂ ಪ್ರಟಿಸುತ್ತ ಪ್ರತಿವರ್ಷವೂ ತಮ್ಮ ಚಂದಾದಾರರ ಸನ್ನಿಧಿಗೆ ಒಂದೊಂದನ್ನು ಬಹುಮಾನವಾಗಿ ಕಳುಹಿಸಲು ನಿಶ್ಚೈಸಿರುವೆವು.. .. . `ವಿವೇಕಾನಂದ'ವೆಂಬ ಈ ಶಿಶುವನ್ನು ಪರಿಗ್ರಹಿಸಿ, ಆನಂದಿಸಿ ತಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಲು ಇದು ಸಕಾಲವಲ್ಲವೆ?'' ಎಂದು ವಾಚಕರನ್ನು ಪ್ರಶ್ನಿಸಿದ್ದಾರೆ. ಈ ಪತ್ರಿಕೆಯಲ್ಲಿ ಪ್ರಕಟವಾಗಿ ಮುಂದೆ ಪುಸ್ತಕ ರೂಪದಲ್ಲಿ ಹೊರಬಿದ್ದ ಗ್ರಂಥಗಳನ್ನು ಚಂದಾದಾರರಿಗೆ ಅದರಲ್ಲೂ ಹೊಸಬರಿಗೆ ಉಚಿತವಾಗಿ ಅವರು ನೀಡಿರುವುದು ಧಾರ್ಮಿಕ ವಿಷಯದಲ್ಲಿಯ ಅವರ ಶ್ರದ್ಧೆಯನ್ನು ತೋರಿಸುವುದು. ಸಂಸ್ಕೃತ ಭಾಷೆ, ಬ್ರಾಹ್ಮಣರ ಜೀವನೋಪಾಯ ಕುರಿತ ಲೇಖನಗಳ ಜೊತೆಯಲ್ಲಿ ಸ್ತ್ರೀಯರಿಗೆ ಸಂಬಂಧಿಸಿದ ಲೇಖನಗಳೂ ಅದರಲ್ಲಿದ್ದವು. ಪತ್ರಿಕೆಯ ಉತ್ತರಾರ್ಧವನ್ನು ಸ್ತ್ರೀಯರಿಗಾಗಿ ವಿನಿಯೋಗಿಸುವುದಾಗಿ ಅವರು ಪ್ರಕಟಿಸಿದ್ದರು. `ಯಾತಕ್ಕೆ ಸಂಧ್ಯಾವಂದನೆ' ಎಂಬ ಕುತರ್ಕಕ್ಕೆ ಪ್ರತಿಯಾಗಿ ಲೇಖನವನ್ನು ಬರೆದು ಕಳುಹಿಸಲು ಇದರಲ್ಲಿ ಕೋರಲಾಗಿತ್ತು. ಚಂದಾದಾರರನ್ನು ಹೆಚ್ಚಿಸಲು ಈಶಾವಾಸ್ಯೋಪನಿಷತ್ ಗ್ರಂಥವನ್ನು ಬಹುಮಾನವಾಗಿ ಕೊಡುವುದಾಗಿ ಅವರು ಪ್ರಕಟಿಸಿದ್ದರು. ವಾಸ್ತವದಲ್ಲಿ ಈ ಗ್ರಂಥದ ಬೆಲೆ ಚಂದಾ ಹಣಕ್ಕಿಂತ ಅಧಿಕವಾಗಿತ್ತು. ಇದಲ್ಲದೆ ಜೈನ, ವೀರಶೈವ, ಶ್ರೀವೈಷ್ಣವ ಮತಗಳ ಪೋಷಣೆಗೂ ಪತ್ರಿಕೆಗಳು ಜನ್ಮತಾಳಿವೆ. ೧೮೮೮ರಲ್ಲಿ ಮೈಸೂರಿನ ಶ್ರೀಕೃಷ್ಣರಾಜೇಂದ್ರ ಪ್ರೆಸ್‌ನಲ್ಲಿ ಮುದ್ರಣಗೊಳ್ಳುತ್ತಿದ್ದ `ಕರ್ಣಾಟಕ ವಾಣೀವಿಲಾಸದಲ್ಲಿ ಬಂದಿರುವ ಈ ಮಾತುಗಳು ಮನನೀಯವಾಗಿವೆ.ನೂತನವಾಗಿ ಗ್ರಂಥಗಳನ್ನು ಲೋಕೋಪಕಾರಾರ್ಥವಾಗಿ ರಚಿಸಿ ಪ್ರಸಿದ್ಧಿಪಡಿಸುವ ಮಹಾತ್ಮರು ಪರಮೋತ್ತಮರು. ಇಷ್ಟು ವಿಶೇಷ ಶಕ್ತಿಯಿಲ್ಲದವರು ತಮಗೆ ತಿಳಿದ ಮಟ್ಟಿಗೆ ಅಲ್ಲಲ್ಲಿರುವ ಸಾರವಾದ ಸಂಗತಿಗಳನ್ನು ಸಂಗ್ರಹಿಸಿ ಪರರ ತಿಳುವಳಿಕೆಗೆ ತರುವರು. ನಾವು ಈ ಎರಡನೆ ಮಾರ್ಗದಲ್ಲಿ ನಡೆಯುವವರಾಗಿದ್ದೇವೆ. ಇದರಿಂದ ದ್ರವ್ಯ ಸಂಪಾದನೆ ಮಾಡಬೇಕೆಂಬ ಅಭಿಲಾಷೆ ನಮಗಿಲ್ಲ.” ಸಾರವಾದ ಸಂಗತಿಗಳನ್ನು ಸಂಗ್ರಹಿಸುವುದು ಹಾಗೂ ಅದನ್ನು ಪರರಿಗೆ ತಿಳಿವಳಿಕೆ ಮಾಡಿಕೊಡುವ ಉದ್ದೇಶ ಘನವಾದದ್ದೇ. ರಾಮವರ್ಮ- ಲೀಲಾವತಿ' ನಾಟಕ,ಸುವರ್ಣಲತಾ’ ಕಾದಂಬರಿ ಈ ಪತ್ರಿಕೆಯಲ್ಲಿ ಬೆಳಕು ಕಂಡಿವೆ.
ಈ ಕಾಲದಲ್ಲಿ ಪತ್ರಿಕೆಗಳ ಮೂಲಕ ಗದ್ಯವು ಹಲವು ರೀತಿಯಲ್ಲಿ ಬಳಕೆಯಾಯಿತು. ಹಲವು ವಿಷಯಗಳಿಗೆ ಅಭಿವ್ಯಕ್ತಿ ನೀಡುವಾಗ ಭಾಷೆಗೆ ಹೊಸ ಕಸುವು ದೊರೆಯಿತು. ಪದ್ಯದಲ್ಲಿ ತಟ್ಟನೆ ಗೋಚರವಾಗುವ ಹೊಸತನ ಇದ್ದರೂ ರೂಪ ಮಾತ್ರ ಹಳೆಯದೇ ಇತ್ತು. ಹಳೆಯ ಸೀಸೆಯಲ್ಲಿ ಹೊಸ ಮದ್ಯ ಅನ್ನುವ ಹಾಗೆ. ಉದಾಹರಣೆಗೆ ೧೮೮೬ರ ಸೆಪ್ಟೆಂಬರ್ ತಿಂಗಳ ಹಿತಬೋಧಿನಿ'ಯಲ್ಲಿಮಂಗಳಾಭಿಮಾನಿ’ ಎನ್ನುವವರು ಬರೆದಿರುವ ಈ ಪದ್ಯವನ್ನು ನೋಡಬೇಕು:
ಉಕ್ಕುವ ಸಂತೋಷದಿ ತಾ|
ನಕ್ಕನ ಕಂಡೋಡಿ ಬಂದು ಪೇಳ್ದಳ್ ನೀನೇಂ॥
ದುಕ್ಕಿಪೆಯಕ್ಕಾ? ಭಾವನು|
ಧಿಕ್ಕರಿಸಿದನೇನು, ನಾನು ಕೇಳುವೆನವನಂ॥
ತಂಗಿ/ತಮ್ಮಗೆ ಅಕ್ಕನ ನೋಡಿದ ಸಂತೋಷ, ಆಕೆಯ ದುಃಖ ಕಂಡು ಆಗುವ ದುಗುಡ, ಭಾವನ ಮೇಲೆ ಅನುಮಾನ, ಅವನನ್ನು ತಾನು ವಿಚಾರಿಸುವೆನೆಂಬ ಸಮಾಧಾನದ ಭರವಸೆ ಇವೆಲ್ಲವನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಪದ್ಯದಲ್ಲಿ ಸೆರೆಹಿಡಿಯಲಾಗಿದೆ. ಆದರೆ ಬಳಸಿದ್ದು ಕಂದ ಪದ್ಯವನ್ನು. ಕಾವ್ಯದ ವಸ್ತು, ಭಾವಗಳೆಲ್ಲ ಬದಲಾದರೂ ರೂಪ ಮಾತ್ರ ಅದೇ.
ಇಷ್ಟೇ ಉತ್ತಮವಾದ ಪದ್ಯಗಳು ಎಲ್ಲ ಸಮಯದಲ್ಲೂ ಎಲ್ಲರಿಂದಲೂ ಬಂದವು ಎಂದಲ್ಲ; ಉತ್ತಮ ಪದ್ಯಗಳು ಬರದೆ ಇದ್ದಾಗ ಟೀಕೆಗಳೂ ಬಂದಿವೆ. ಸಾಹಿತ್ಯದ ಸಂಕ್ರಮಣದ ಕಾಲದಲ್ಲಿ ಉತ್ತಮ ಕೃತಿಗಳ ಜೊತೆಯಲ್ಲಿ ನಿಕೃಷ್ಟ ಕೃತಿಗಳೂ ಬರುವುದು ಸಹಜ. ಸಾಹಿತ್ಯಪತ್ರಿಕೆಗಳು ಇಂಥ ಕಳೆಯನ್ನು ಕೀಳುವ ಕೆಲಸ ಮಾಡಿವೆ. ಟೀಕೆ ಕೆಲವೊಮ್ಮೆ ಛಾಟಿ ಏಟಿನಂತೆ ಇದ್ದವು.
೧೮೮೬ರ ಸಪ್ತೆಂಬರ್ ತಿಂಗಳ ಹಿತಬೋಧಿನಿ' ಪತ್ರಿಕೆಯಲ್ಲಿ ಬಂದಿರುವ ಈ ಟೀಕೆ ಒಂದು ಉತ್ತಮ ಉದಾಹರಣೆ.ಕರ್ನಾಟಕ ಭಾಷಾಭಿಮಾನಿ’ ಎಂಬವರು ಬರೆದ ಕರ್ನಾಟಕ ಭಾಷೆ' ಹೆಸರಿನ ಈ ಲೇಖನದಲ್ಲಿ, ``ಪಾದಕ್ಕೆ ಇಷ್ಟು ಅಕ್ಷರ ಅಥವಾ ಮಾತ್ರೆಗಳಿದ್ದರೆ ಸರಿ ಎಂಬುವದನ್ನು ಮಾತ್ರ ತಿಳಿದುಕೊಂಡು ಕವಿತ್ವವನ್ನು ಮಾಡಿರುವವರು ತಮ್ಮ ಕವಿತ್ವದ ವಿಷಯದಲ್ಲಿ ಯಾರಾದರೂ ಪೂರ್ವಪಕ್ಷವನ್ನು ಮಾಡಿದರೆ ಏನು ಸಮಾಧಾನ ಹೇಳುವರೋ ತಿಳಿಯದು... ಯೋಗ್ಯತೆಯಿಲ್ಲದೆ ಬರೀ ಚಾಪಲ್ಯದಿಂದ ಛಂದಸ್ಸಿಗೆ ಸರಿಯಾಗಿ ಅಕ್ಷರಗಳನ್ನು ಕೂಡಿಸುವುದನ್ನು ಕಲಿತು ಶಬ್ದ ದೋಷ, ಅರ್ಥ ದೋಷ, ವಾಕ್ಯ ದೋಷಗಳಿಗೆ ಜನ್ಮಭೂಮಿಯೆನಿಸುವ ಶುಷ್ಕ ಕವಿತೆಯನ್ನು ಮಾಡಿ ವಿದ್ವಾಂಸರ ಹಾಸ್ಯಕ್ಕೆಪಾತ್ರರಾಗುವುದಕ್ಕಿಂತಲೂ ವಿಷ ಪಾನವನ್ನು ಮಾಡುವುದು ಉತ್ತಮವು.''8 ಹೊಸಗನ್ನಡ ಸಾಹಿತ್ಯ ರೂಪತಳೆಯುತ್ತಿದ್ದ ಸಂದರ್ಭದಲ್ಲಿ ಬಂದ ಈ ಮಾತುಗಳು ಶುಷ್ಕ ಕವಿತೆ ಬೇಡ ಎಂದು ಹೇಳಿರುವಲ್ಲಿಯ ಭಾಷಾಭಿಮಾನವನ್ನು ಗುರುತಿಸಬೇಕು. ಸಮಾಜ-ಪತ್ರಿಕೆ-ಸಾಹಿತ್ಯ: ಸಮಾಜದಲ್ಲಿ ಇಲ್ಲದ್ದು ಪತ್ರಿಕೆಗಳಲ್ಲಿ ಆಗಲಿ ಸಾಹಿತ್ಯದಲ್ಲಿ ಆಗಲಿ ಒಡಮೂಡುವುದು ಸಾಧ್ಯವಿಲ್ಲ. ಆದರೆಯುಟೋಪಿಯಾ’ ಆದರ್ಶವಾದುದೊಂದನ್ನು ಪತ್ರಿಕೆ ಹಾಗೂ ಸಾಹಿತ್ಯ ಪ್ರತಿಪಾದಿಸಬಹುದು. ಆ ಕೆಲಸವನ್ನು ಅವು ಮಾಡುತ್ತಲೂ ಬಂದಿವೆ. ಆರಂಭ ಕಾಲದ ಪತ್ರಿಕೆಗಳ ಮೂಲ ಸೆಲೆ ಧರ್ಮಪ್ರಸಾರ, ಜೊತೆಯಲ್ಲಿ ಸ್ವಧರ್ಮ ರಕ್ಷಣೆ ಎಂಬ ಮಾತನ್ನು ಗಮನಿಸಲಾಗಿದೆ. ಹಾಗೆಯೇ ಬಂಗಾಳದ ಮೂಲಕ ಹರಡಿದ ಸಮಾಜ ಸುಧಾರಣೆಯ ಗಾಳಿಯೂ ನಮ್ಮ ಪತ್ರಿಕೆಗಳನ್ನು ವ್ಯಾಪಿಸಿತು. ಆಗಿನ್ನೂ ಕನ್ನಡ ನಾಡು ರಾಜರುಗಳ, ಪಾಳೆಗಾರರುಗಳ, ಸಂಸ್ಥಾನಿಕರ ಆಳ್ವಿಕೆಯಲ್ಲಿ ಇದ್ದುದರಿಂದ ಸಿಪಾಯಿ ದಂಗೆಯ ಪರಿಣಾಮಗಳು ವ್ಯಾಪಕವಾಗಿ ಇನ್ನೂ ಆಗದೆ ಇದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯತೆಯ ಭಾವನೆಗಳು ಬೆಳೆದಿರಲಿಲ್ಲ. ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ೧೮೮೫ರಲ್ಲಿ ಎ.ಓ.ಹ್ಯೂಂನಿಂದ ಆಯಿತು. ಹ್ಯೂಂ ಒಬ್ಬ ವಿದೇಶಿ ಎಂಬುದನ್ನು ಇಲ್ಲಿ ಗಮನಿಸಬೇಕು. ಆ್ಯನಿಬೆಸೆಂಟ್ ಕೂಡ ವಿದೇಶಿ ಮಹಿಳೆ. ರಾಷ್ಟ್ರೀಯ ಕಾಂಗ್ರೆಸ್ ಮೂಲಕ ರಾಷ್ಟ್ರೀಯತೆ ಜಾಗೃತಿಗೊಳ್ಳಲು ಸ್ವಲ್ಪ ಕಾಲವೇ ಬೇಕಾಯಿತು.
ಹೊಸಗನ್ನಡ ಸಾಹಿತ್ಯದ ಆರಂಭಕಾಲವು ಅತ್ಯಂತ ಸಂಕೀರ್ಣವಾದದ್ದು. ಕ್ರಿ.ಶ. ೧೮೮೫ರಿಂದ ೧೯೦೫ರ ಎರಡು ದಶಕಗಳ ಅವಧಿ ಭಾರತೀಯ ಸಮಾಜದಲ್ಲಿ, ಜನರ ಬದುಕಿನ ದೃಷ್ಟಿಕೋನದಲ್ಲಿಆಶ್ಚರ್ಯವೆನಿಸುವಂಥ ಬದಲಾವಣೆಗಳನ್ನು ತಂದವು; ಒಮ್ಮೊಮ್ಮೆ ಇವನ್ನು ಬುಡಮೇಲು ಮಾಡಿ, ಜನರ ಮನಸ್ಸಿನಲ್ಲಿ ಅಭದ್ರತೆಯನ್ನು ಆತಂಕವನ್ನೂ ಸೃಷ್ಟಿಸುವುದರ ಜೊತೆಗೆ ಹೊಸ ಚೇತನದಿಂದ ಕೂಡಿದ ಸ್ವ-ಪ್ರಜ್ಞೆಯನ್ನು ಪ್ರಶ್ನಿಸುವ ಮನೋಭಾವವನ್ನೂ ಬೆಳೆಸಿದವು. ವಿಕ್ಟೋರಿಯಾ ಮಹಾರಾಣಿಯ ಘೋಷಣೆ ಹಾಗೂ ಲಾರ್ಡ್ ಮೆಕಾಲೆಯ ಶೈಕ್ಪಣಿಕ ಸುಧಾರಣೆಗಳು ನಮ್ಮ ದೇಶದ ಮೂಲೆ ಮೂಲೆಗೂ ತಲುಪಿ, ಧರ್ಮ ರಾಜಕಾರಣಗಳನ್ನು ಬೇರೆ ಮಾಡಿದವು. ಹಾಗೆಯೇ ಹಳೆಯ ಶೈಕ್ಷಣಿಕ ಪದ್ಧತಿಯನ್ನೂ ಅಪಹಾಸ್ಯಕ್ಕೆ ಗುರಿಮಾಡಿ, ಕಾಲಕ್ರಮೇಣ ಅದನ್ನು ಮೂಲೆಗುಂಪು ಮಾಡಿತು. ಪಾಶ್ಚಿಮಾತ್ಯ ಭಾಷೆ, ಸಾಹಿತ್ಯ ಅಮಲಿನಂತೆ ಇಡೀ ಭಾರತೀಯ ಮಧ್ಯಮ ವರ್ಗವನ್ನು ಒಲಿಸಿಕೊಂಡವು. ಈ ಎಲ್ಲದರ ಜೊತೆಗೆ ಬಂದ ಬೈಬಲ್, ಷೇಕ್ಸ್‌ಪಿಯರ್, ಹೆನ್ರಿ ಫೀಲ್ಡಿಂಗ್, ಸರ್ ವಾಲ್ಟರ್ ಸ್ಕಾಟ್ ಮೊದಲಾದವರ ಕೃತಿಗಳ ಅನುವಾದಗಳು, ರೂಪಾಂತರಗಳು ಬಂದು ನಮ್ಮ ಜೀವನ ಕಲ್ಪನೆಯನ್ನು ಬದಲಿಸಿದವು. ಈ ವರೆಗೆ
ಬರೆಹಗಾರರ ಗಮನವನ್ನೇ ಸೆಳೆಯದಿದ್ದ ಪ್ರಶ್ನೆಗಳು, ಸಾಹಿತ್ಯದ ವಸ್ತುಗಳಾದವು. ಚಿಂತನಶೀಲ ಬರಹಗಾರರೆಲ್ಲ ಈ ಸವಾಲನ್ನು ಸ್ವೀಕರಿಸುವುದು ಅನಿವಾರ್ಯವಾಯಿತು. ಹಳೆಯ ಹೊಸ ಮೌಲ್ಯಗಳು ಮುಖಾಮುಖಿಯಾದವು. ಲೇಖಕರು ಸಾಮಾಜಿಕ ಜವಾಬ್ದಾರಿಗೆ ಒಳಗಾದರು. ವೈಯಕ್ತಿಕ ಸ್ವಾತಂತ್ಯ್ರ, ಕೌಟುಂಬಿಕ ಸಮಸ್ಯೆಗಳು ನಮ್ಮ ಕೃತಿಗಳ ಕೇಂದ್ರಕ್ಪೇತ್ರವನ್ನು ಪ್ರವೇಶಿಸಿದವು. ಸಾಂಪ್ರದಾಯಿಕ ದೃಷ್ಟಿಕೋನ ಬದಲಾಗಿ ವಿಮರ್ಶಾತ್ಮಕ ಹಾಗೂ ಮಾನವೀಯತೆಯ ದೃಷ್ಟಿ ಬೆಳೆಯಲಾರಂಭಿಸಿತು. ಈ ಎಲ್ಲವೂ ಪಾಶ್ಚಿಮಾತ್ಯ ಸಂಪರ್ಕದ ಪ್ರಭಾವವೇ.
ಈ ಎಲ್ಲ ಕಾರಣಗಳಿಗಾಗಿಯೇ ಆರಂಭದ ಕಾಲದ ಲೇಖಕ ಹೊಸ ಹೊಸ ವಿಷಯಗಳನ್ನು ಆಯ್ದುಕೊಂಡ. ಹೊಸ ಅನುಭವದ ಹಿನ್ನೆಲೆಯಲ್ಲಿ ತನ್ನ ಹಿನ್ನೆಲೆಯನ್ನು ಒಮ್ಮೆ ಆತ ಸಿಂಹಾವಲೋಕನ ಮಾಡಿಕೊಂಡ. ಪ್ರಸ್ತುತದಲ್ಲಿ ಎಲ್ಲವೂ ಶೂನ್ಯವೆಂದು ಅವನ ಮನಸ್ಸು ಕುಗ್ಗಿತು. ಕನ್ನಡ ಭಾಷಿಕರ ಪ್ರದೇಶ ಏಕಾಧಿಪತ್ಯವಿಲ್ಲದೆ ಹರಿದು ಹಂಚಿಹೋಗಿತ್ತು. .. ಕನ್ನಡ ನಾಡು ಕಾಲಚಕ್ರಕ್ಕನುಸರಿಸಿ, ಮುಂಬಯಿ, ಮದ್ರಾಸ, ಮೈಸೂರ, ಹೈದ್ರಾಬಾದಗಳೆಂಬ ನಾಲ್ಕು ಸರಕಾರಗಳ ಆಡಳಿತೆಗೊಳಪಟ್ಟಿದೆ. ಆದುದರಿಂದ ಕನ್ನಡ ನಾಡಿನೊಳಗಿನ ಜನರಲ್ಲಿ ಪರಸ್ಪರ ವ್ಯವಹಾರವು ಕನ್ನಡ ನೂತನ ಗ್ರಂಥಗಳ ಬಗ್ಗೆ ಆಸ್ಥೆಯೂ ಕಡಿಮೆಯಾಗಿದೆ. ಮಹಾರಾಷ್ಟ್ರ ಗುಜರಾಥ ದೇಶಗಳವರು ಒಮ್ಮನಸ್ಸಿನಿಂದ ತಂತಮ್ಮ ಭಾಷೆಗಳ ಉತ್ಕರ್ಷವನ್ನು ಮಾಡುತ್ತಿರುವಂತೆ, ಕನ್ನಡಿಗರಲ್ಲಿ ಮಾಡುತ್ತಿರುವವರು ವಿರಳವಾಗುತ್ತಾರೆ....'' ಎಂಬ ತಟ್ಟಿ ಮಾಸ್ತರ ಮಾತು ಒಟ್ಟೂ ಪರಿಣಾಮವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಅಂದಿನ ಪತ್ರಿಕೆಗಳು ಮಾಡಿದ ಮೊದಲ ಕೆಲಸ ನಾಡು ನುಡಿಯ ಬಗ್ಗೆ ಪ್ರೇಮವನ್ನು ಉಂಟುಮಾಡುವ ಹಾಗೆ ಪ್ರಯತ್ನಿಸಿದ್ದು. ಪತ್ರಿಕೆಯ ಬರೆಹಗಳು ಹಾಗೂ ಅದರ ಪರಿಣಾಮವಾಗಿ ಬಂದ ಕೃತಿಗಳನ್ನು ಇದುವರೆಗಿನ ವಿವೇಚನೆಯಲ್ಲಿ ಪರಿಶೀಲಿಸಲಾಗಿದೆ. ಪುನರುಜ್ಜೀವನ ಕಾಲದ ಪ್ರೇರಣೆಯಿಂದ ಸಮಾಜ ಸುಧಾರಣೆಯ ಕಡೆಗೆ ಸಾಹಿತಿಗಳ ಮನಸ್ಸು ಹೊರಳಿತು. ಇದಕ್ಕೆ ಆ ಕಾಲದ ಪತ್ರಿಕೆಗಳೂ ವ್ಯಾಪಕವಾಗಿ ಸಮರ್ಥನೆಯನ್ನು ಒದಗಿಸಿದವು. ಬಾಲ್ಯ ವಿವಾಹ ನಿಷೇಧ, ವಿಧವೆಯರ ಮರು ವಿವಾಹ ಇತ್ಯಾದಿಗಳು ಅಂದಿನ ಸಮಾಜದ ಜ್ವಲಂತ ಸಮಸ್ಯೆಗಳಾಗಿದ್ದವು. ಇವುಗಳ ಬಗ್ಗೆ ವ್ಯಾಪಕ ಖಂಡನೆ ಮಂಡನೆಗಳು ಪತ್ರಿಕೆಗಳಲ್ಲಿ ಬಂದವು. ಹಿಂದೂ ಸಮಾಜದಲ್ಲಿ ಈ ಸಮಸ್ಯೆಗಳು ದೊಡ್ಡ ಊನವೆಂದು ಕ್ರೈಸ್ತ ಮತಪ್ರಚಾರಕರು ಪ್ರಚಾರಮಾಡುತ್ತಿದ್ದರು. ಅವರ ಪ್ರಹಾರದಿಂದ ತಪ್ಪಿಸಿಕೊಳ್ಳಲು ಹಿಂದೂ ಸಮಾಜದಲ್ಲಿಯೂ ಸುಧಾರಣೆ ಆಗಬೇಕು ಎಂದು ಸುಧಾರಕ ಮನಸ್ಸಿನವರು ಬಯಸಿದರು. ವೆಂಕಟರಂಗೋ ಕಟ್ಟಿಯ ಬಗೆಗೆ ಈಗಾಗಲೇ ವಿವರಿಸಲಾಗಿದೆ. ಇವೆಲ್ಲದರಿಂದಾಗಿ ಸೂರಿ ವೆಂಕಟರಣ ಶಾಸ್ತ್ರಿಯ `ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ', ಶಿವರಾಮ ನಾರಣಪ್ಪ ಧಾರೇಶ್ವರನ `ಕನ್ಯಾವಿಕ್ರಯ' ನಾಟಕಗಳು ಒಂದೇ ವರ್ಷದಲ್ಲಿ ಪ್ರಕಟವಾದುವು.(೧೮೮೭). ನಂತರ ಇದು ಗುಲ್ವಾಡಿ ವೆಂಕಟ ರಾಯರ `ಇಂದಿರಾಬಾಯಿ' ಕಾದಂಬರಿಯ ವಸ್ತುವೂ ಆಗಿದೆ. ಇವೆಲ್ಲ ಈಗಾಗಲೆ ಬೇರೆಬೇರೆ ಕಡೆಗಳಲ್ಲಿ ಬಹು ಚರ್ಚಿತ ಕೃತಿಗಳಾಗಿವೆ. ಆದರೆ ಇದುವರೆಗೆ ಬಹುಜನರ ಗಮನಕ್ಕೆ ಬಾರದೆ ಅಜ್ಞಾತವಾಗಿದ್ದ ಕೃತಿಯೊಂದರ ಬಗ್ಗೆ ಇಲ್ಲಿ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ಅದು ವ್ಯಾಸರಾವ ವೆಂಕಟರಾವ ರೊದ್ದ ಅವರ `ಚಂದ್ರಮುಖಿಯ ಘಾತವು' ಕೃತಿ. `ಇಂದಿರಾಬಾಯಿ' ಪ್ರಕಟವಾದ ಮರು ವರ್ಷ ಅಂದರೆ ೧೯೦೦ರಲ್ಲಿ ಪ್ರಕಟವಾದ ಈ ಕೃತಿ ಇದುವರೆಗೆ ಅಜ್ಞಾತವಾಗಿತ್ತು. ಡಿ.ಎ.ಶಂಕರ ಅವರು ಇದನ್ನು ಬ್ರಿಟನ್ನಿನ ಬ್ರಿಟಿಷ್ ಮ್ಯೂಜಿಯಂನಿಂದ ಪ್ರತಿ ಮಾಡಿ ತಂದು ವಿಸ್ತೃತ ಮುನ್ನುಡಿ ಬರೆದು ೧೯೯೮ರಲ್ಲಿ `ಮನೋಹರ ಗ್ರಂಥಮಾಲೆ'ಯ ಮೂಲಕ ಪ್ರಕಟಿಸಿದ್ದಾರೆ. ದೊಡ್ಡ ಅಕ್ಷರಗಳಲ್ಲಿ ಮೂಲದಲ್ಲಿ ಇದ್ದ ಹಾಗೆಯೇ ಇದನ್ನು ಪ್ರಕಟಿಸಲಾಗಿದೆ. ಕಾದಂಬರಿ ಒಟ್ಟೂ ೨೮ ಪುಟಗಳನ್ನು ಒಳಗೊಂಡಿದೆ. ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ನಾಲ್ಕು ಪ್ರಕರಣಗಳು, ಎರಡನೆ ಭಾಗದಲ್ಲಿ ಮೂರು ಪ್ರಕರಣಗಳು ಇವೆ. ಈ ಕೃತಿಯನ್ನು ಆಗಿನ ಸಮಾಜ ಸುಧಾರಕರಲ್ಲಿ ಒಬ್ಬರಾಗಿದ್ದ ಪುಣೆಯ ಫರ್ಗ್ಯೂಸನ್ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಗೋಪಾಲ ಗಣೇಶ ಅಗರ್ಕರ್ ಅವರಿಗೆ ಅರ್ಪಿಸಲಾಗಿದೆ. ಈ ಕಾದಂಬರಿಯ ವಿಜ್ಞಾಪನೆಯಲ್ಲಿ ಲೇಖಕ ವ್ಯಾಸರಾವ ಅವರು ತಮ್ಮ ಈ ಕೃತಿಗೆ `ಕಾದಂಬರಿ' ಎಂಬ ಹೆಸರನ್ನು ಬಳಸಿರುವುದೂ ಐತಿಹಾಸಿಕವಾಗಿ ಮಹತ್ವದ್ದು. `ಇಂದಿರಾಬಾಯಿ'ಯಲ್ಲಿ ಗುಲ್ವಾಡಿಯವರು ಅದನ್ನು `ಪುಸ್ತಕ' ಎಂದು ಕರೆದಿದ್ದಾರೆಯೇ ಹೊರತು ಕಾದಂಬರಿ ಎಂದು ಕರೆದಿಲ್ಲ. ಅದು ಅವರಿಗೆ `ಇಂದಿರಾಬಾಯಿ' ಎಂಬವಳ ಜನ್ಮಚರಿತ್ರೆಯಾಗಿರುತ್ತದೆ. ಈ ಪ್ರಕಾರಕ್ಕೆ `ಕಾದಂಬರಿ' ಎಂಬ ಹೆಸರು ಕೊಡುವ ಬಗ್ಗೆ ಮಂಗಳೂರು ಭಾಗಕ್ಕಿಂತ ಮೊದಲೇ ಧಾರವಾಡ ಭಾಗದವರು ಮುಂದಾಗಿದ್ದೂ ಇದರಿಂದ ತಿಳಿಯುವುದು. `ಚಂದ್ರಮುಖಿಯ ಘಾತವು' ವಿಜ್ಞಾಪನೆಯಲ್ಲಿ `ಕನ್ನಡ ಕಾದಂಬರಿಗಳ ಲೇಖದಲ್ಲಿ ಈ ಚಿಕ್ಕ ಹೊತ್ತಿಗೆಯು ಹೊಸ ಪದ್ಧತಿಯನ್ನು ಅನುಸರಿಸಿರುವದೆಂಬುವದರಲ್ಲಿ ಸಂದೇಹವಿಲ್ಲ' ಎಂದು ಹೇಳಿರುವರು. ಅದು ನಿಜವೂ ಹೌದು. `ನಾಟಕವೇ ಸಂಸಾರದ ಚಿತ್ರವಾಗಿರಬೇಕಾದ ಪಕ್ಷದಲ್ಲಿ ಕಾದಂಬರಿಯು ಹಾಗಿರಲೇಬೇಕು ಎಂದು ಹೇಳುವ ಲೇಖಕರು ಕಾದಂಬರಿಯ ವ್ಯಾಖ್ಯೆಯನ್ನು ಹೇಳಲು ಪ್ರಯತ್ನಿಸಿದಂತಿದೆ. `ಈ ಕಾದಂಬರಿಯಲ್ಲಿ ಅರಸು ಅರಸಿಯರಿಲ್ಲ. ಅಪ್ಸರೆಯರ ಸೌಂದರ್ಯವನ್ನು ಕೂಡ ಧಿಃಕ್ಕರಿಸುವ ಸುಂದರಿಯರಿಲ್ಲ. ಯಕ್ಷಸಿದ್ದ ಕಿನ್ನರ ಮತ್ತು ಗಂಧರ್ವ ಗಣಗಳಿಂದ ಬಾರಿಬಾರಿಗೂ ಹೊಗಳಿಸಿಕೊಳ್ಳತಕ್ಕ ಮನೋಹರಾಂಗರಾದ ರಾಜಪುತ್ರರಿಲ್ಲ. ಆದರೆ ಪ್ರತ್ಯಕ್ಷ ಸಂಸಾರದಲ್ಲಿ ಸಾಧಾರಣ ವ್ಯಕ್ತಿಗಳಿಗೆ ಕೂಡ ಕಂಡು ಬರುವ ಪಾತ್ರಗಳಿವೆ ಎಂದು ಹೇಳುತ್ತಾರೆ. ಒಟ್ಟಾರೆ ಅಂದಿನ ಹೊಸ ವಾತಾವರಣ ಸಾಹಿತ್ಯಕ್ಕೆ ಹೊಸ ವಸ್ತುವನ್ನು ಒದಗಿಸಿದೆ. ಈ ಕೃತಿಯ ವಸ್ತುವು ಶೋಷಣೆಗೊಳಗಾದ ಸ್ತ್ರೀ ಪಾತ್ರಗಳನ್ನು ಚಿತ್ರಿಸುವುದು. ಒಂದೊಂದು ಪ್ರಕರಣದಲ್ಲಿಯೂ ಒಂದೊಂದು ರೀತಿಯಲ್ಲಿ ಶೋಷಣೆಗೆ ಒಳಗಾದ ಸ್ತ್ರೀಪಾತ್ರವಿದೆ ಇದರಲ್ಲಿ. ಲಲಿತೆ ಕುಲೀನೆ, ಸಮಾಜದ ಕಟ್ಟುಪಾಡಿಗೆ ಸಿಕ್ಕಿಬಿದ್ದಿರುವ ಸಣ್ಣ ವಯಸ್ಸಿನ ವಿಧವೆ. ಮರುಮದುವೆಯಾಗುವ ಧೈರ್ಯವಿಲ್ಲದವಳು. ಮೂವತ್ತೆಂಟು ವರ್ಷಗಳ ಮೋಹಿನಿಯ ಪತಿ ವೃದ್ಧ. ಸಾಲದ್ದಕ್ಕೆ ಮುಂಗೋಪಿ ಹಾಗೂ ದರ್ಪಿಷ್ಟ; ಇವಳು ಗಂಡನ ಕಾಟವನ್ನು ತಾಳಲಾರದೆ ಮನೆ ಬಿಟ್ಟು ಓಡಿಹೋಗಿ ಈಗ ಬಿಲಾಸಪುರ ತಹಶೀಲದಾರನ `ರಖಾವ್' ಆಗಿದ್ದಾಳೆ. ಬಾಲ ಸರೋಜಿನಿ ಬಡತನದಿಂದಾಗಿ ರಾಮಪುರದ ಮುದಿ ಜಮೀನುದಾರನಿಗೆ ಮರಾಟವಾಗಿಹೋಗಿದ್ದಾಳೆ. ಸನುಮತಿ ಮನಸ್ಸಿಲ್ಲದಿದ್ದರೂ ವಿಧುರನೊಬ್ಬನನ್ನು ಮದುವೆಯಾಗಬೇಕಾಗುತ್ತದೆ. ಇಂಥ ಸಮಸ್ಯೆಗಳಿಗೆ ಪರಿಹಾರವನ್ನು ಕಾದಂಬರಿ ಹುಡುಕುತ್ತದೆ. ಒಟ್ಟಿನಲ್ಲಿ ಈ ಕೃತಿಯು ಆ ಕಾಲದ ಸಾಹಿತಿಗಳ ಧೋರಣೆಗೆ ಉದಾಹರಣೆಯಾಗಿ ನಿಲ್ಲುತ್ತದೆ. ಮಾರ್ಗಪ್ರವರ್ತಕರು : ಹೊಸಗನ್ನಡ ಸಾಹಿತ್ಯದ ಆರಂಭಕಾಲದ ಸಾಹಿತಿಗಳ ಪ್ರಮುಖ ಸಮಸ್ಯೆ ಎಂದರೆ ಹೊಸ ಸಾಹಿತ್ಯ ರೂಪಗಳನ್ನು ಅವರೇ ಕಂಡುಕೊಂಡು ಆರಂಭಿಸಿ ರೂಢಿಸಬೇಕಿತ್ತು. ಸಣ್ಣ ಕತೆ, ಭಾವಗೀತೆ, ಕಾದಂಬರಿ ಹೀಗೆ ಎಲ್ಲದರಲ್ಲೂ ಅವರು ಪ್ರಯೋಗಶೀಲರಾಗಬೇಕಿತ್ತು. ಹೊಸ ಸಾಹಿತ್ಯ ಮಾರ್ಗವನ್ನು ಸಾಹಿತಿಗಳು ಹಿಡಿದಾಗ ಸಾಹಿತ್ಯಪತ್ರಿಕೆಗಳು ಅವರಿಗೆ ಈ ಸಾಹಸದಲ್ಲಿ ನೆರವಾದವು. ಕಾದಂಬರಿ ಪ್ರಕಾರ ಕನ್ನಡದಲ್ಲಿ ಮೈತಳೆದಾಗ ಅದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕರೆದರು. ಅದಕ್ಕೆ `ಕಾದಂಬರಿ' ಎಂದೇ ಕರೆಯಬೇಕು ಎಂಬ ವಾದ `ಸುವಾಸಿನಿ' ಪತ್ರಿಕೆಯಲ್ಲಿ ೧೯೦೦ರಲ್ಲಿಯೇ ನಡೆಯಿತು. ಹೊಸಗನ್ನಡ ಸಾಹಿತ್ಯದಲ್ಲಿ ಇಂದು ಕಾದಂಬರಿಯದೇ ಅಗ್ರಪಾಲು. ಇದು ಹಳೆಗನ್ನಡದಲ್ಲಿ ಇಲ್ಲದ ಒಂದು ಸಾಹಿತ್ಯ ಪ್ರಕಾರ. ಹೀಗಾಗಿ ಈ ಸಾಹಿತ್ಯ ಪ್ರಕಾರವನ್ನು ಯಾವ ಹೆಸರಿನಿಂದ ಕರೆಯಬೇಕು ಎನ್ನುವುದರಿಂದ ಹಿಡಿದು ಈ ಪ್ರಕಾರದ ಲಕ್ಷಣಗಳನ್ನು ಕ್ರೋಡೀಕರಿಸುವ ವರೆಗೆ ಸಾಹಿತ್ಯಪತ್ರಿಕೆಗಳಲ್ಲಿ ಚರ್ಚೆ ನಡೆಯಿತು. ಮೈಸೂರಿನಲ್ಲಿ ಚಾಮರಾಜ ನಗರದ ವೆಂಕಟ್ರಮಣ ಶಾಸ್ತ್ರಿಗಳು `ಕಾದಂಬರೀ ಸಂಗ್ರಹ' ಎಂಬ ಒಂದು ಪತ್ರಿಕೆಯನ್ನೇ ಹೊರಡಿಸುತ್ತಿದ್ದುದನ್ನು ಈಗಾಗಲೆ ಗಮನಿಸಲಾಗಿದೆ. ಧಾರವಾಡದ `ವಿದ್ಯಾವರ್ಧಕ ಸಂಘ'ದವರು ಕಾದಂಬರಿ ರಚನೆ ಸ್ಪರ್ಧೆಯನ್ನು ೧೯ನೆ ಶತಮಾನದ ಕೊನೆಯಲ್ಲಿ ನಡೆಸಿದ್ದನ್ನೂ ಗಮನಿಸಲಾಗಿದೆ. ಕನ್ನಡವೂ ಒಳಗೊಂಡಂತೆ ಒಟ್ಟಾರೆ ಭಾರತೀಯ ಸಾಹಿತ್ಯಕ್ಕೆ `ಕಾದಂಬರಿ' ಪ್ರಕಾರ ಬಂದುದು ಬ್ರಿಟಿಷ್ ಮೂಲದಿಂದಲೇ. ಇದಕ್ಕೆ ಇಲ್ಲೊಂದು ಪುರಾವೆಯನ್ನು ನೋಡಬಹುದು. ತೆಲುಗಿನ `ಚಿಂತಾಮಣಿ' ಎಂಬ ಪತ್ರಿಕೆ ಕಾದಂಬರಿ ರಚನೆಗಾಗಿ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಅದರ ಕುರಿತು ನೀಡಿದ ಪ್ರಕಟಣೆಯಲ್ಲಿ, `ನೀವು ಕಾದಂಬರಿಯನ್ನು ಬರೆಯುವಾಗ ವಾಲ್ಟರ್ ಸ್ಕಾಟ್ ಮತ್ತು ಜೂಲ್ಸ್ ವರ್ನ್ ಇಂಥವರನ್ನು ಮಾದರಿಯಾಗಿ ಇಟ್ಟುಕೊಳ್ಳಿರಿ' ಎಂದು ಸಲಹೆ ನೀಡಲಾಗಿತ್ತು. ಪಾಶ್ಚಾತ್ಯರಲ್ಲಿದ್ದ ಕಾದಂಬರಿಯ ಸಿದ್ಧರೂಪವನ್ನು ನಾವು ಪಡೆದುಕೊಂಡೆವು. ಇಂದಿನ ಕಾದಂಬರಿಗೆ `ನವೆಲ್' ಎಂದೂ `ಕಲ್ಪನಾ ಪ್ರಬಂಧವೆಂದೂ' ಮರಾಠಿ, ಕನ್ನಡಗಳಲ್ಲಿ ಪ್ರಚಾರವಿತ್ತು. ಬಂಗಾಲಿಯಲ್ಲಿ `ಉಪನ್ಯಾಸ' ಎಂದು ಕರೆಯುತ್ತಿದ್ದರು. ಅಂಥ ಸಂದರ್ಭದಲ್ಲಿ ಈ ಪ್ರಕಾರಕ್ಕೆ `ಕಾದಂಬರಿ' ಎಂಬ ಹೆಸರೇ ಸೂಕ್ತವೆಂದು `ಕನ್ನಡ ಕೋಗಿಲೆ'ಯಲ್ಲಿ ಒಬ್ಬರು ವಾದಿಸುತ್ತಾರೆ. ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ೧೯೦೦ರ ಸಪ್ತೆಂಬರ್‌ದ `ಸುವಾಸಿನಿ' ಸಂಚಿಕೆಯಲ್ಲಿ `ಕಾದಂಬರಿ ಲೇಖನ' ಎಂಬ ಒಂದು ಲೇಖನ ಪ್ರಕಟವಾಗಿದೆ. ಅದುವರೆಗೆ ಕನ್ನಡದಲ್ಲಿ ಪ್ರಕಟವಾದ ಕಾದಂಬರಿಗಳ ಒಟ್ಟೂ ಸಂಖ್ಯೆ ೧೫ರೊಳಗೆ. ಆ ಕಾಲದಲ್ಲಿಯೇ ಒಂದು ಹೊಸ ಸಾಹಿತ್ಯ ಪ್ರಕಾರಕ್ಕೆ ಇದೇ ಹೆಸರನ್ನು ಇಡಬೇಕು ಎಂಬ ವಾದ ಮಂಡನೆಯಾಗಿತ್ತು. ಕಾದಂಬರಿಯನ್ನು ಓದುವುದರಿಂದ ಭಾಷೆಯ ಮೇಲೆ ಪ್ರೀತಿ ಹೆಚ್ಚುವುದು, ಅಭಿಮಾನ ತುಂಬುವುದು ಎಂಬ ಅಂಶವನ್ನು ಈ ಲೇಖನದಲ್ಲಿ ಗುರುತಿಸಲಾಗಿದೆ.ಕರ್ನಾಟಕ ಭಾಷೆಯಲ್ಲಿ ಗದ್ಯ ಲೇಖನವೇ ಅಪರೂಪ. ಅದರೊಳಗೂ ಯುಕ್ತಿಯಿಂದ ಊಹಿಸಿ, ಬರೆಯುವ ಕಲ್ಪನಾ ಪ್ರಬಂಧಗಳೇ ಇರಲಿಲ್ಲ. ಸಂಸ್ಕೃತದಲ್ಲಿ ಬಾಣಭಟ್ಟನೆಂಬ ಕವಿ ಕಾದಂಬರಿ' ಹೆಸರಿನ ಛಲೋ ಕಥೆಯನ್ನು ರಚಿಸಿದನು. ಅದರಿಂದೀಚೆಗೆ ಇಂತಹ ಕಥೆಗಳಿಗೆಲ್ಲಕಾದಂಬರಿ’ ಎಂಬುದು ರೂಢನಾಮವಾಯಿತು.
ದೇಶೋನ್ನತಿಗೆ ಬೇಕಾದ ಉಪಕರಣಗಳಲ್ಲಿ ಭಾಷೆಯ ಅಭಿವೃದ್ಧಿಯ ಸಫಲವಾದ ವ್ಯವಸಾಯವೂ ಮುಖ್ಯವಾದುದು” ಎಂದು ಲೇಖಕರು ಹೇಳುವರು. ಭಾಷೆಯ ಅಭಿವೃದ್ಧಿ ಆಗಬೇಕಾದರೆ ಸಾಧ್ಯವಾದಷ್ಟೂ ಜನಮಂಡಲಿಗೆ ವಿದ್ಯಾಪ್ರವೀಣತೆ ಉಂಟಾಗಲೇಬೇಕು. ಸುಲಭವಾಗಿ ಅವಗಾಹನ ಶಕ್ಯವಲ್ಲದ, ಪದ್ಯಾತ್ಮಕ ಮಹಾಕಾವ್ಯಗಳನ್ನು ಓದುವುದು ಎಂದರೆ ಆಕಾಶಕ್ಕೆ ಏಣಿ ಹಾಕುವುದೇ ಸೈ. ಉತ್ತಮ ನಾಯಕನನ್ನು ಹೊಗಳುವುದೇ ತಮ್ಮ ಕರ್ತವ್ಯವೆಂದು ತಿಳಿದ ಹಳೆಯ ಕವಿಗಳು ಎಲ್ಲ ಪದ್ಯ, ಕಥೆ, ಪುರಾಣಗಳನ್ನು ಅತಿಶಯೋಕ್ತಿ ತುಂಬಿದ ಒಂದೇ ಅಚ್ಚಿನಲ್ಲಿ ಕೆತ್ತಿದ ಒಡವೆಗಳಂತೆ ರಚಿಸಿದರು'' ಎಂದು ಹೇಳುವರು.ಐಹಿಕ ಸಾಧನವಾಗಿಯೂ, ಲೋಕದ ವಾಸ್ತವಗುಣ ವರ್ಣನ ಪರವಾಗಿಯೂ ಇರುವ ಇತಿಹಾಸದ, ಕಾದಂಬರಿ ಲೇಖನವು ಆಂಗ್ಲೇಯರಲ್ಲಿ ಅನಾದಿ ಕಾಲದಿಂದಲೂ ಉಂಟು. ಅಕ್ಷರಜ್ಞಾನವುಂಟಾದವರಲ್ಲಿ ಅನೇಕ ಮಂದಿ ಈ ತರದ ಪುಸ್ತಕಗಳನ್ನೋದಿ ಪಾಂಡಿತ್ಯವನ್ನು ಸಂಪಾದಿಸಿಕೊಳ್ಳುವರು… ಕಾದಂಬರಿಗಳು ಕವಿಯ ಬುದ್ಧಿ ಕೌಶಲ್ಯವಿದ್ದಷ್ಟು ಊಹಿಸಿ ಬರೆಯತಕ್ಕ ಪ್ರಮೇಯಗಳಾಗಿರುವವು…. ಈಚೆಗೆ ನಮ್ಮ ದೇಶದಲ್ಲಿ ಇಂಗ್ಲಿಷು ಭಾಷೆಯನ್ನಭ್ಯಾಸ ಮಾಡಿದ ಗೃಹಸ್ಥರನೇಕರು ದೇಶ ಭಾಷೆಯಲ್ಲಿ ಸ್ತೋತ್ರಾರ್ಹವಾದ ಕಾದಂಬರಿಗಳನ್ನು ರಚಿಸಿರುವರು. ಪ್ರಪಂಚಾನುಭವವೂ ಪೂರ್ವೋತ್ತರ ವಿಚಾರಗಳೂ, ಯುಕ್ತಿಚಾತುರ್ಯಗಳೂ, ಮನುಷ್ಯನಿಗೆ ಹುಟ್ಟಬೇಕಾದರೆ ಅನೇಕ ಪುಸ್ತಕಗಳನ್ನೋದಿಕೊಂಡ ಹೊರತು ಸಾಧ್ಯವಾಗಲಾರದು,” ಎಂದು ಇದರ ಲೇಖಕರು ಹೇಳಿದ್ದಾರೆ.
೧೯೦೦ರಲ್ಲಿಯೇ ಈ ಲೇಖನವನ್ನು ಬರೆದವರ ಹೆಸರು ಗೊತ್ತಾಗಿಲ್ಲ. ಆದರೆ ಕಾದಂಬರಿಯ ಬಗ್ಗೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಕಾದಂಬರಿಯ ವ್ಯಾಖ್ಯೆಯನ್ನು, ಕಾದಂಬರಿ ಮಾಡಬಹುದಾದ ಪ್ರಭಾವಗಳನ್ನು ಸ್ಪಷ್ಟ ಮಾತುಗಳಲ್ಲಿ ವಿವರಿಸುವುದು. ಕಾದಂಬರಿಗಳು ಯುಕ್ತಿಯಿಂದ ಊಹಿಸಿ ಬರೆಯುವ ಕಲ್ಪನಾ ಪ್ರಬಂಧಗಳು, ಕಾದಂಬರಿ ಎಂದರೆ ಉತ್ತಮ ನಾಯಕನನ್ನು ಹೊಗಳುವುದು ಮಾತ್ರವಲ್ಲ, ಅತಿಶಯೋಕ್ತಿಯ ಕಥೆಯಲ್ಲ. ಅಂದರೆ ವಾಸ್ತವಾಂಶ ಇರಬೇಕು. ಇದು ಊಹಿಸಿ ಬರೆಯುವಂಥದ್ದು. ಹೀಗಾಗಿ ಜೀವನ ಚರಿತ್ರೆಗಳಲ್ಲ. ಇದರ ಪ್ರಯೋಜನವೆಂದರೆ ಓದುವವರಿಗೆ ಪ್ರಪಂಚದ ಅನುಭವ, ಪೂರ್ವೋತ್ತರ ವಿಚಾರಗಳ ಅರಿವು, ಯುಕ್ತಿ ಚಾತುರ್ಯ ಲಭ್ಯ. ಭಾಷೆಯ ಅಭಿವೃದ್ಧಿ, ಜೊತೆಗೆ ಭಾಷೆಯ ಬಗ್ಗೆ ಪ್ರೀತಿ.
ಈ ಮಾತುಗಳನ್ನು ಚಂದ್ರಮುಖಿಯ ಘಾತವು' ಕೃತಿಯ ಲೇಖಕರು ಕಾದಂಬರಿಯ ಕುರಿತು ಬರೆದ ಮಾತುಗಳೊಂದಿಗೆ ಹೋಲಿಸಿ ನೋಡಬೇಕು. ಹೀಗೆ ಸಾಹಿತ್ಯ ಪ್ರಕಾರವೊಂದು ಹುಟ್ಟು ಪಡೆದ ಸಂದರ್ಭದಲ್ಲಿ ಅದಕ್ಕೆ ನಾಮಕರಣ ಮಾಡುವ ಈ ಚರ್ಚೆ ಅತ್ಯಂತ ಸಾಂದರ್ಭಿಕ, ಅಷ್ಟೇ ಸೂಕ್ತವಾದದ್ದೂ ಕೂಡ. ಕಾದಂಬರಿಯ ಬಗೆಗೆ ಬೇರೆಬೇರೆ ಸಾಹಿತ್ಯ ಚಳವಳಿಗಳ ಸಂದರ್ಭಗಳಲ್ಲಿ ಬೇರೆಬೇರೆ ರೀತಿಯ ಚರ್ಚೆಗಳು ವಿವಿಧ ಕೃತಿಗಳನ್ನು ಆಧರಿಸಿ ನಡೆದಿವೆ. ಕಾಲದ ದೃಷ್ಟಿಯಿಂದ ಮುಂದಿನ ಅಧ್ಯಾಯಕ್ಕೆ ಸೇರುವುದಾದರೂ ಸಣ್ಣ ಕತೆಯು ಹೊಸಗನ್ನಡದಲ್ಲಿ ಹುಟ್ಟುವಾಗ ಬಂದ ಟೀಕೆಯನ್ನು ಅದರ ಸಮರ್ಥನೆಯನ್ನು ಇಲ್ಲಿಯೇ ಗಮನಿಸುವುದು ಸೂಕ್ತ ಎನ್ನಿಸುವುದು. ಹೊಸಗನ್ನಡದಲ್ಲಿ ಸಣ್ಣ ಕತೆಯನ್ನು ಆರಂಭಿಸಿದವರಲ್ಲಿ ಪಂಜೆ ಮಂಗೇಶರಾಯರು, ಎಂ.ಎನ್.ಕಾಮತರು, ಮಾಸ್ತಿಯವರು, ಎ.ಆರ್.ಕೃಷ್ಣಶಾಸ್ತ್ರಿಗಳು, ಆನಂದರು ಪ್ರಮುಖರಾದವರು. ಭಾರತೀಯ ಪರಂಪರೆಯಲ್ಲಿ ಸಣ್ಣ ಕತೆಗಳು ಇದ್ದವು. ಪಂಚತಂತ್ರ, ಬೃಹತ್ಕಥೆ, ಜಾತಕ ಕತೆಗಳು ಇವೆಲ್ಲ ವಿಶಿಷ್ಟವಾದದ್ದು. ಕನ್ನಡದಲ್ಲಿಯೇ ವಡ್ಡಾರಾಧನೆಯ ಕತೆಗಳನ್ನು ಗಮನಿಸಬಹುದು. ಆದರೆ ಹೊಸಗನ್ನಡದ ಕತೆಗಳು ಇವುಗಳಿಂದ ಸಂಪೂರ್ಣ ಬೇರೆಯಾದದ್ದು. ಆಂಗ್ಲರ ಪ್ರಭಾವದಿಂದಾಗಿಯೇ ಅದು ಕನ್ನಡದಲ್ಲಿ ಕಾಣಿಸಿಕೊಂಡಿದ್ದು. ಸ್ವತಃ ಮಾಸ್ತಿಯವರೇ ತಾವು ಆಂಗ್ಲ ಮ್ಯಾಗ್ಝಿನ್ ಒಂದರಿಂದ ಪ್ರಭಾವಿತರಾಗಿ ಕತೆ ಬರೆಯಲು ಆರಂಭಿಸಿದ್ದಾಗಿ ಹೇಳಿದ್ದನ್ನು ಈಗಾಗಲೇ ಗಮನಿಸಲಾಗಿದೆ. ಹಳೆಯ ಪರಂಪರೆಯಿಂದ ಭಿನ್ನವಾದ ಈ ಕತೆಗಳಿಗೆ ಸುಲಭದಲ್ಲಿ ಸ್ವಾಗತವು ದೊರೆಯಲಿಲ್ಲ. ಮಾಸ್ತಿಯವರ ಮೊದಲ ಸಣ್ಣ ಕತೆಗಳು ಪ್ರಕಟವಾದಾಗಇದೇನು ಸಣ್ಣ ಕತ್ತೆ ಬಂದಪ್ಪ’ ಎಂದು ಟೀಕಿಸಿದವರಿದ್ದಾರೆ. ಮಧುರವಾಣಿ' ಪತ್ರಿಕೆಯಲ್ಲಿ ಬಂದ ಟೀಕೆಯನ್ನು ಇಲ್ಲಿ ಉಲ್ಲೇಖಿಸಿದರೆ ಪ್ರತಿಭಟನೆಯ ತೀವ್ರತೆ ವೇದ್ಯವಾಗುತ್ತದೆ. ``ಒಂದು ಕತೆಯಂತೆ, ಕತೆ. ಕತೆಯನ್ನು ಬರೆದಿದ್ದಾರೆ. ಅದರ ಹೆಸರುರಂಗಪ್ಪನ ದೀಪಾವಳಿ’. ಇನ್ನು ನಾಳೆ ನಾನು ಕೂತು ಉಗ್ರಪ್ಪನ ಉಗಾದಿ' ಎಂದು ಒಂದು ಕತೆಯನ್ನು ಬರೆಯಬೇಕೆಂದಿದ್ದೇನೆ. ಆಹಾ, ಏನು ಹೇಳಬೇಕೋ!''9 ಎಂಬ ಮೂದಲಿಕೆಯಲ್ಲಿರುವ ತೀವ್ರತೆಯನ್ನು ಗಮನಿಸಬೇಕು. ಇದಕ್ಕೆ ಮಾಸ್ತಿಯವರು ಬಹಳ ಸಮಾಧಾನದಿಂದಲೇ ಉತ್ತರವನ್ನು ಕೊಟ್ಟಿದ್ದಾರೆ. ತಮ್ಮ ಮೊದಲ ಕಥಾ ಸಂಕಲನಕೆಲವು ಸಣ್ಣ ಕತೆಗಳು’ದಲ್ಲಿ ಅವರು, ರಂಗಪ್ಪನ ದೀಪಾವಳಿಯೇ, ಸರಿ, ಉಗ್ರಪ್ಪನ ಉಗಾದಿ, ವೆಂಕಟರಾಯನ ಪಿಶಾಚವೋ, ಸರಿ, ಶ್ರೀಕಂಠ್ಯನ ಬೇತಾಳ ಎಂದು ಮೊದಲಾಗಿ ಧೋರಣೆಯಿಂದ ಮಾತನಾಡಿ ಈ ಕತೆಗಳನ್ನು ಎಸೆಯಬೇಡಿ. ನಾನು ರಂಗಪ್ಪನ ದೀಪಾವಳಿಯನ್ನು ಅಚ್ಚು ಹಾಕಿಸಿದ್ದೇನೆ; ಇದರಿಂದ ಕೆಲವರು ಸಂತೋಷಪಟ್ಟಿದ್ದಾರೆ.ಉಗ್ರಪ್ಪನ ಉಗಾದಿ’ ಎನ್ನುವ ನೀವು ಉಗ್ರಪ್ಪನ ಉಗಾದಿಯನ್ನು ಬರೆದು ಅಚ್ಚು ಹಾಕಿಸಿ; ನಾನು ಓದಿ ಸಂತೋಷ ಪಡುತ್ತೇನೆ. ಶ್ರೀಕಂಠಯ್ಯನ ಬೇತಾಳವನ್ನು ಅದು ಅಚ್ಚಾಗಿ ಬಂದಾಗ್ಗೆ ನನ್ನ ಒಡಹುಟ್ಟಿದವನಂತೆ ಪ್ರೀತಿಯಿಂದ ಆಲಂಗಿಸಿಕೊಳ್ಳುತ್ತೇನೆ. ಈ ಕತೆಗಳು ಸಾಮಾನ್ಯವಾದುವು; ಕೆಲವರು ಮಾತ್ರ ಓದಿ ಸಂತೋಷ ಪಡಬಹುದು. ನೀವು ಒಳ್ಳೆಯ ಕತೆಗಳನ್ನು ಬರೆಯಿರಿ; ಅಚ್ಚು ಹಾಕಿಸಿ; ಹೆಚ್ಚು ಜನ ಓದಿ ಸಂತೋಷ ಪಡಲಿ. ಈ ಹತ್ತು ಕತೆಗಳು ಇವುಗಳೆಲ್ಲಕ್ಕಿಂತ ನೂರು ಪಾಲು
ಹೆಚ್ಚಾದವುಗಳನ್ನು ನಮ್ಮ ನಾಡಿನ ನನ್ನ ಅಣ್ಣಂದಿರಾ, ತಮ್ಮಂದಿರಾ ನೀವು ಬರೆಯಬೇಕೆಂಬುದೇ ನನ್ನ ಮನಸ್ಸಿನ ಅಂತರಾಳದಲ್ಲಿರುವ ಅಧಿಕವಾದ ಆಸೆ- ಎಂದು ಬರೆದಿದ್ದಾರೆ. ಮಾಸ್ತಿಯವರ ಕತೆಯ ಶೈಲಿಯ ಹಾಗೆಯೇ ಅವರು ತಮ್ಮ ಟೀಕೆಗೆ ಉತ್ತರವನ್ನೂ ಅತ್ಯಂತ ಮೃದುವಾದ ರೀತಿಯಲ್ಲಿ ಕೊಟ್ಟಿರುವರು. ತಮ್ಮದು ಅತ್ಯುತ್ತಮ ಸೃಷ್ಟಿಯೆಂದು ಅವರು ಹೇಳಿಕೊಳ್ಳಲಿಲ್ಲ. ಆದರೆ ಇದಕ್ಕಿಂತ ಉತ್ತಮವಾದುದನ್ನು ಬರೆಯುವುದಕ್ಕೆ ಕರೆ ಕೊಡುತ್ತಾರೆ. ಒಟ್ಟಾರೆ ಭಾಷೆ ಆ ಮೂಲಕ ಶ್ರೀಮಂತವಾಗಬೇಕು ಎಂಬುದು ಅವರ ಉದ್ದೇಶ.
ಹೊಸದನ್ನು ಸುಲಭದಲ್ಲಿ ಯಾರೂ ಒಪ್ಪಿಕೊಳ್ಳುವುದಿಲ್ಲ ಎಂಬ ಮಾತು ಸಾಹಿತ್ಯ ಕ್ಷೇತ್ರಕ್ಕೂ ಅನ್ವಯಿಸುವಂಥದ್ದೇ. ಇದಕ್ಕೆ ಮುದ್ದಣನೇ ಉದಾಹರಣೆ. ಹೊಸ ಕೃತಿಗಳನ್ನು ಯಾರೂ ಪ್ರಕಟಿಸುವುದಿಲ್ಲ ಎಂದು ಆತ ಹಳೆಗನ್ನಡದಲ್ಲಿಯೇ ಬರೆಯುತ್ತಾನೆ. ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟ'ನ್ನು ನಿರ್ಮಿಸುತ್ತಾನೆ. ಆಧುನಿಕ ಮನಸ್ಸಿದ್ದರೂ ಪ್ರಾಚೀನತೆಯನ್ನೇ ಆತನು ಅಪ್ಪಿಕೊಳ್ಳಬೇಕಾಗುತ್ತದೆ. ಇಂಥ ಸವಾಲುಗಳಿಗೆ ಸೂಕ್ತ ಉತ್ತರ ನೀಡಲು ಪತ್ರಿಕೆಗಳು ಆಸರೆಯಾಗಿವೆ. ಆರಂಭ ಕಾಲದಲ್ಲಿ ಪತ್ರಿಕೆಗಳು ರಾಷ್ಟ್ರೀಯತೆಯ ಕಲ್ಪನೆಯಿಂದ ದೂರ ಇದ್ದವು. ಬ್ರಿಟಿಷರ ಆಳ್ವಿಕೆಯ ಬಗ್ಗೆ ದೇಶೀಯ ಆಳರಸರಲ್ಲಿ ಅತೃಪ್ತಿ ಇತ್ತು, ನಿಜ. ಆದರೆ ಏಕಪ್ರಕಾರವಾಗಿ ಶೋಷಣೆಗೆ ಒಳಗಾದ ಜನರಿಗೆ ಬ್ರಿಟಿಷರೂ ಅಷ್ಟೇ, ದೇಶೀಯ ಆಳರಸರೂ ಅಷ್ಟೇ ಎಂಬ ಭಾವನೆ ಮೂಡಿತ್ತು. ಇನ್ನೂ ಹೆಚ್ಚಿನ ಮಾತೆಂದರೆ ಬ್ರಿಟಿಷರು ಹೊಸ ಶಿಕ್ಷಣ ಪದ್ಧತಿ, ಕೈಗಾರಿಕೆ ಕ್ರಾಂತಿಯ ಫಲಗಳನ್ನು ಒಂದೊಂದಾಗಿ ಇಲ್ಲಿ ಪ್ರಯೋಗಿಸತೊಡಗಿದಾಗ ಅವರು ದೇಶೀಯ ದೊರೆಗಳಿಗಿಂತ ಏನೋ ಹೆಚ್ಚಿನವರು ಎನ್ನುವಂತೆ ಆಯಿತು. ಈ ಕಾರಣಕ್ಕಾಗಿಯೇಆನಂದ ಮಠ’ ಕಾದಂಬರಿಯಲ್ಲಿ `ವಿಧಿಯು ಹಿಂದೂತ್ವದ ಉದಯಕ್ಕಾಗಿಯೇ ಬ್ರಿಟಿಷರನ್ನು ಭಾರತಕ್ಕೆ ಕಳುಹಿಸಿದೆ’ ಎಂಬ ಮಾತು ಬಂದಿದೆ. ಇದು ಅಂದಿನ ಸಮಾಜದ ಮನೋಭಾವದ ಪ್ರತಿಬಿಂಬ. ೧೮೫೭ರ ಬಂಡಾಯದ ಸಮಯದಲ್ಲಿ ಬ್ರಿಟಿಷರ ವಿರುದ್ಧ ದೇಶೀಯ ಸಂಸ್ಥಾನಗಳ ಅರಸರು ಸಮರ ಸಾರಿದವರು ಕೊನೆಗೆ ಒಪ್ಪಿಕೊಂಡದ್ದು ಮೊಘಲ್ ಬಾದಶಾನನ್ನು. ಅದೂ ಒಂದು ರೀತಿಯಲ್ಲಿ ಗುಲಾಮತನವೇ. ಜನರೇ ದೇಶವನ್ನು ಆಳುವ ಕಲ್ಪನೆ ಅಂದು ಬಂದಿರಲಿಲ್ಲ. ಈ ರಾಷ್ಟ್ರೀಯತೆಯನ್ನು ಬಿಂಬಿಸುವ ಕಾರ್ಯ ಬಂಗಾಳ ವಿಭಜನೆಯ ನಂತರದ ಪತ್ರಿಕೆಗಳಿಗೆ ಮೀಸಲಾಗಿ ಉಳಿಯಿತು.
ಈ ರಾಷ್ಟ್ರೀಯತೆ ಉದ್ದೀಪನಗೊಳ್ಳಲು ಬಂಗಾಲ ವಿಭಜನೆ ಕಾರಣವಾಯಿತು. ೧೯೦೫ರ ವರೆಗಿನ ಪತ್ರಿಕೆಗಳು ಮತ್ತು ಸಾಹಿತ್ಯದ ಸ್ವರೂಪ ಒಂದು ರೀತಿ ಇದ್ದರೆ ಆನಂತರದ್ದು ಇನ್ನೊಂದು ಸ್ವರೂಪದ್ದು. ಸಾಹಿತ್ಯದ ಪ್ರಸಾರಕ್ಕಾಗಿಯೇ ಅನೇಕ ಪತ್ರಿಕೆಗಳು ಹೊರಟಿದ್ದು, ಅದರಲ್ಲಿ ಪ್ರಾಚೀನ ಸಾಹಿತ್ಯದ ಭಾಗಗಳನ್ನು ಧಾರಾವಾಹಿಯಾಗಿ ನೀಡಿದ್ದು, ಹೊಸದನ್ನು ಬರೆಯುವವರಿಗೆ ಪ್ರೋತ್ಸಾಹ ನೀಡಿದ್ದು ಎಲ್ಲವನ್ನೂ ಗಮನಿಸಿದ್ದಾಯಿತು. ನವೋದಯ ಸಾಹಿತ್ಯ ಹೊಳೆಯಾಗಿ ಹರಿಯುವುದಕ್ಕೆ ಆರಂಭ ಕಾಲದಲ್ಲಿ ವಿವಿಧ ಮೂಲಗಳಿಂದ ಜಿನುಗಿದ ಈ ತೊರೆಗಳೇ ಕಾರಣ ಎನ್ನುವುದನ್ನು ಮರೆಯಬಾರದು

ಅಡಿ ಟಿಪ್ಪಣಿ-

೧. ಹೊಸಗನ್ನಡದ ಅರುಣೋದಯ: ಶ್ರೀನಿವಾಸ ಹಾವನೂರ
೨. ಉದ್ಧೃತ- ಹೊಸಗನ್ನಡದ ಅರುಣೋದಯ
೩.ಶ್ರೀಕೃಷ್ಣ ಸೂಕ್ತಿ (ಅಕ್ಟೋಬರ್ ೧೯೦೭)- ಉದ್ಧೃತ- ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ
ಪ್ರಭಾವ- ಪುಟ- ೨೫
೪.ಕನ್ನಡಿಗರ ಜನ್ಮಸಾರ್ಥಕತೆ; ಪುಟ ೨೯
೫. ಉದ್ಧೃತ: ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ- ಐ.ಮಾ. ಮುತ್ತಣ್ಣ- ಪುಟ- ೩೧೩
6.The most gratifying features of the year’s publications are to be found in the attempts
made by young men who have received a high University education to publish old Kannada
works whose existence has hitherto not been known and translations of standard works of
English and Sanskrit literature. The promoters of the Granthamala and the Kavyamanjari are
doing excelent service by concentrating the efforts of modern educated men and pandiths desirous to improve and enrich modern Kannada Literature- (Report on publications Issued and
Registered, 1893, page- 107)
೭.ಚಿನ್ನದ ಗರಿ; ಪುಟ- ೨೮೦; ಕನ್ನಡ ಸಾಹಿತ್ಯದ ಬೆಳವಣಿಗೆ ಹಾಗೂ ಪತ್ರಿಕೋದ್ಯಮ
೮.ಹಿತಬೋಧಿನಿ- ಪುಟ ೪೫೮; ಕರ್ನಾಟಕ ಭಾಷಾಭಿಮಾನಿ; ಕರ್ನಾಟಕ ಭಾಷೆ
೯.ಮಾಸ್ತಿಯವರ ಸಮಗ್ರ ಕತೆಗಳು- ಮುನ್ನುಡಿ