ಸಾಹಿತ್ಯಪತ್ರಿಕೆಗಳ ಸ್ವರೂಪ ಮತ್ತು ಇತಿಹಾಸ

೧. ಸ್ವರೂಪ: ಪತ್ರಿಕೆಗಳು ಹುಟ್ಟುವುದಕ್ಕೆ ಮುದ್ರಣ ಯಂತ್ರದ ಶೋಧ ಒಂದು ಪ್ರಬಲವಾದ ಕಾರಣವಾಗಿದೆ. ಅದೇ ರೀತಿ ಆಧುನಿಕ ಸಾಹಿತ್ಯದ ಬೆಳವಣಿಗೆಯಲ್ಲೂ ಮುದ್ರಣ ಯಂತ್ರದ ಪಾತ್ರವೂ ದೊಡ್ಡದೇ. ಐತಿಹಾಸಿಕವಾಗಿ ಗಮನಿಸಿದಾಗ ಗುಟನ್‌ಬರ್ಗ್ ಎಂಬಾತ ೧೪೪೦ರಲ್ಲಿ ಯುರೋಪಿನಲ್ಲಿ ಮೊದಲ ಮುದ್ರಣ ಯಂತ್ರವನ್ನು ಸ್ಥಾಪಿಸಿದ. ಚೀನ ದೇಶದಲ್ಲಿ ಕ್ರಿ.ಶ. ೮೬೮ರಲ್ಲಿಯೇ ಆ ದೇಶ ಭಾಷೆಯ ಅಕ್ಷರ ಮೊಳೆಗಳನ್ನು ತಯಾರಿಸಿ ಪುಸ್ತಕವೊಂದನ್ನು ಮುದ್ರಿಸಲಾಗಿತ್ತು. ಪ್ರಪಂಚದ ಮೊದಲ ಪತ್ರಿಕೆ ೧೬೧೫ರಲ್ಲಿ ಜರ್ಮನಿಯಲ್ಲಿ ಪ್ರಕಟವಾಯಿತು. ಇಂಗ್ಲಂಡಿನ ಮೊದಲ ಪತ್ರಿಕೆ ೧೬೨೨ರಲ್ಲಿ ಪ್ರಕಟವಾಯಿತು. ಇಂಗ್ಲಂಡಿನ ಕಾಕ್ಸಟನ್ ಎಂಬಾತ ೧೪೭೬ರಲ್ಲಿಯೇ ಮುದ್ರಣ ಯಂತ್ರವನ್ನು ಸ್ಥಾಪಿಸಿದ್ದ. ಮೊದಲ ಮುದ್ರಣಯಂತ್ರ ಸ್ಥಾಪನೆಯಾದ ೧೫೦ ವರ್ಷಗಳ ಬಳಿಕ ಮೊದಲ ಪತ್ರಿಕೆ ಆರಂಭವಾಯಿತು1. ಇದಕ್ಕೆ ಕಾರಣಗಳೂ ಇವೆ. ಆ ಕಾಲದಲ್ಲಿವಿದ್ಯಾವಂತರ ಸಂಖ್ಯೆ ಕಡಿಮೆಯಿತ್ತು. ನಾಣ್ಯಗಳನ್ನು ಅಚ್ಚುಮಾಡುವ ಟಂಕಶಾಲೆಗೂ ಮುದ್ರಣ ಯಂತ್ರಕ್ಕೂ ವ್ಯತ್ಯಾಸವಿರಲಿಲ್ಲ. ಇವೆರೆಡೂ ರಾಜರ ಸ್ವತ್ತಾಗಿದ್ದವು. ರಾಜರ ಅರಮನೆಯಿಂದ ಹೊರಬರುವ ಆದೇಶಗಳಿಗಷ್ಟೇ ಮಹತ್ವವಿದ್ದ ಕಾಲದಲ್ಲಿ ಜನಸಾಮಾನ್ಯನ ಗೋಳುಗಳನ್ನು ಓದುವುದಕ್ಕೆ ಯಾರಿಗೂ ಆಸಕ್ತಿಯಿರಲಿಲ್ಲ. ಸಂಚಾರ, ಸಂಪರ್ಕ ಸಾಧನಗಳು ಸುಸಜ್ಜಿತವಿಲ್ಲದ ಅಂದಿನ ಕಾಲದಲ್ಲಿ ಸುದ್ದಿಯನ್ನು ಪಡೆಯುವುದು, ಅದನ್ನು ಮುದ್ರಿಸಿ ಬೇರೆ ಬೇರೆ ಊರುಗಳಿಗೆ ಒಯ್ದು ಹಂಚುವುದು ಸುಲಭವಾಗಿರಲಿಲ್ಲ. ೧೬೬೦ರಲ್ಲಿ ಪ್ರಾರಂಭವಾದ ಇಂಗ್ಲಂಡಿನ ಮೊದಲ ದಿನಪತ್ರಿಕೆ ೨೪ ದಿನ ಬಾಳಿತು.
ಭಾರತದ ಮೊದಲ ಮುದ್ರಣ ಯಂತ್ರ ಗೋವಾದಲ್ಲಿ ೧೫೫೬ರಲ್ಲಿ ಸ್ಥಾಪನೆಯಾಯಿತು. ಇದಾದ ೨೨೪ ವರ್ಷಗಳ ನಂತರ ಅಂದರೆ ೧೭೮೦ರಲ್ಲಿ ಭಾರತದ ಮೊದಲ ಪತ್ರಿಕೆ ಹುಟ್ಟಿಕೊಂಡಿತು. ಇದನ್ನು ಜೇಮ್ಸ್ ಆಗಸ್ಟಸ್ ಹಿಕ್ಕಿ (James Agustus Hicky) ೧೭೮೦ರಲ್ಲಿ ಕಲ್ಕತ್ತಾದಿಂದ ಹೊರಡಿಸಿದ. ಇದನ್ನು ದಿ ಬೆಂಗಾಲ್ ಗೆಜೆಟ್' ಎಂದೂ (Hickie’s Gazette, Calcutta Advertiser) ಎಂದೂ ಕರೆಯಲಾಗುತ್ತಿತ್ತು. ಭಾರತೀಯ ಒಡೆತನದ ಮೊದಲ ಪತ್ರಿಕೆ ೧೮೧೯ರಲ್ಲಿ ಗಂಗಾಧರ ಭಟ್ಟಾಚಾರ್ಯ ಸ್ಥಾಪಿಸಿದರು. ಕನ್ನಡದ ನೆಲದಲ್ಲಿ ಮೊದಲ ಮುದ್ರಣ ಯಂತ್ರ ಬಳ್ಳಾರಿಯಲ್ಲಿ ೧೮೨೭ರಲ್ಲಿ ಪ್ರಾರಂಭವಾಯಿತು. ಕನ್ನಡದ ಮೊದಲ ಪತ್ರಿಕೆಮಂಗಳೂರು ಸಮಾಚಾರ’ವನ್ನು ಮಂಗಳೂರಿನಲ್ಲಿ ೧೮೪೨ರಲ್ಲಿ ರೆ.ಎಚ್. ಮೋಗ್ಲಿಂಗ್ (Rev. H. Moegling) ಸ್ಥಾಪಿಸಿದರು. (ಸಾಮಾನ್ಯವಾಗಿ ಕನ್ನಡದ ಮೊದಲ ಪತ್ರಿಕೆಯ ಹುಟ್ಟು ೧೮೪೩ ಎಂದು ಹೇಳುತ್ತಾರೆ. ಇದು ಕಲ್ಲಚ್ಚಿನಲ್ಲಿ ಮುದ್ರಣಗೊಂಡ ಪತ್ರಿಕೆಯ ಇಸ್ವಿ. ಆದರೆ ಇದಕ್ಕೂ ಮೊದಲೇ ೧೮೪೨ರಲ್ಲಿಯೇ ಈ ಪತ್ರಿಕೆಯನ್ನು ಕೈ ಬರೆಹದಲ್ಲಿ ಪ್ರಕಟಿಸಲಾಗುತ್ತಿತ್ತು ಎಂದು ಐ.ಮಾ. ಮುತ್ತಣ್ಣ ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ' ಕೃತಿಯಲ್ಲಿ ಹೇಳಿದ್ದಾರೆ. ಇಲ್ಲಿ ಅದನ್ನು ಅನುಮೋದಿಸಿ ಆ ಇಸ್ವಿಯನ್ನೇ ನೀಡಲಾಗಿದೆ.) ೧೮೪೪ರಲ್ಲಿ ಬಳ್ಳಾರಿಯಿಂದಕಂನಡ ಸಮಾಚಾರ’ ಪತ್ರಿಕೆ ಹೊರಟಿತು.
ಭಾರತದ ಮೊದಲ ಪತ್ರಿಕೆ ಇಂಗ್ಲಿಷ್ ಭಾಷೆಯದು. ಅದನ್ನು ಆರಂಭಿಸಿದವರು ಬ್ರಿಟಿಷರು. ಅದೇ ರೀತಿ ದೇಶೀಯ ಭಾಷೆಗಳಲ್ಲೂ ಪತ್ರಿಕೆಗಳನ್ನು ಮೊದಲು ಆರಂಭಿಸಿದವರು ವಿದೇಶೀಯರೇ. ಬಂಗಾಳಿಯಲ್ಲಿ ಮೊದಲ ಪತ್ರಿಕೆ ಸಮಾಚಾರ ಚಂದ್ರಿಕಾ'ಸಮಾಚಾರ ದರ್ಪಣ’ಗಳನ್ನು ಆರಂಭಿಸಿದವರು ರೆ.ಮಾರ್ಶಮನ್ (Rev. Marshman) ಮತ್ತು ರೆ.ಕೆರಿ (Rev.Cary).
ಈ ಒಂದು ಹಿನ್ನೆಲೆಯಲ್ಲಿ ಸಾಹಿತ್ಯಪತ್ರಿಕೆಗಳ ಸ್ವರೂಪ ಮತ್ತು ಇತಿಹಾಸವನ್ನು ಗಮನಿಸಬೇಕಾಗಿದೆ. ಜನರ ಸಮಸ್ಯೆಗಳನ್ನು ರಾಜ ಅರಿಯುವುದು ಹಾಗೂ ರಾಜಾದೇಶಗಳನ್ನು ಪ್ರಜೆಗಳೂ ತಿಳಿಯುವುದು ಅವಶ್ಯಕವೆಂಬ ಅರಿವಿದ್ದ ನಮ್ಮ ಪೂರ್ವಿಕರು ಅದಕ್ಕೆ ತಮ್ಮದೇ ಆದ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರು. ಇತಿಹಾಸ ಕಾಲದಲ್ಲಿ ಪ್ರಜೆಗಳ ಸುದ್ದಿ ಅರಿಯಲು ಬೇಹುಗಾರರು ರಾಜರಿಗೋಸ್ಕರ ಇರುತ್ತಿದ್ದರು. ರಾಜನ ಆದೇಶಗಳನ್ನು ಪ್ರಜೆಗಳಿಗೆ ತಲುಪಿಸಲು ಡಂಗುರಿಗರು ನೇಮಕವಾಗುತ್ತಿದ್ದರು. ರೋಮ್ ದೇಶದಲ್ಲಿ ಆಯಾ ದಿವಸದ ವಿಶೇಷ ಸಂಗತಿಗಳನ್ನು ದಿನವಾರ್ತೆ' ಎಂಬ ದಫ್ತರಿನಲ್ಲಿ ಬರೆಯಿಸಿ ಚಾವಡಿಯಲ್ಲಿ ಇಡುತ್ತಿದ್ದರು. ಆದರೆ ದೇಶ ವಿದೇಶಗಳ ವೃತ್ತಾಂತಗಳನ್ನು ಕಾಗದದಲ್ಲಿ ಮುದ್ರಿಸಿ ಜನರಿಗೆ ಹಂಚುವ ವ್ಯಾಪಾರ ಮುದ್ರಣ ಯಂತ್ರದ ಶೋಧದ ಬಳಿಕ ಆರಂಭವಾದ್ದು. ಪತ್ರಿಕೆಗಳು ಹೇಗೆ ಹುಟ್ಟು ಪಡೆದವು ಅದರ ಪ್ರಾಚೀನ ಸ್ವರೂಪ ಹೇಗಿತ್ತು ಎಂಬ ಬಗೆಗೆ ಡಿ.ವಿ.ಗುಂಡಪ್ಪನವರು ಹಲವು ವಿಶೇಷ ಸಂಗತಿಗಳನ್ನು ತಮ್ಮವೃತ್ತಪತ್ರಿಕೆ’ ಕೃತಿಯಲ್ಲಿ ಹೇಳಿದ್ದಾರೆ.2 ಈ ರೀತಿಯ ವಿಷಯವನ್ನು ಪ್ರಚಾರ ಪಡಿಸುವ ಹಿಂದಿನ ತುರ್ತು ಏನು? ಪ್ರಚಾರಪಡಿಸಿದ್ದನ್ನು ಇತರರು ಅರಿಯಲು ಮುಗಿಬೀಳುವುದು ಏತಕ್ಕೆ?
ಮನುಷ್ಯ ಸ್ವಭಾವತಃ ಪ್ರಚಾರಪ್ರಿಯ. ಎಲ್ಲರ ಲಕ್ಷ್ಯದ ಕೇಂದ್ರ ತಾನಾಗಬೇಕು ಎಂಬ ಇಚ್ಛೆ ಪ್ರತಿಯೊಬ್ಬನ ಅಂತರ್ಯದಲ್ಲಿ ಇರುತ್ತದೆ. ತಾನು ಮಾಡಿದ್ದನ್ನು ಇತರರು ನೋಡಿ, ಕೇಳಿ ಮೆಚ್ಚಬೇಕು, ಮೆಚ್ಚಿ ಹೊಗಳಬೇಕು ಎಂಬ ತುಡಿತ ಮನುಷ್ಯನನ್ನು ಸದಾ ಕ್ರಿಯಾಶೀಲನನ್ನಾಗಿ ಇಡುತ್ತದೆ. ಯಾವಾಗ ಆ ತುಡಿತ ಮಾಯವಾಗುವುದೋ ಅಂದು ಆ ಮನುಷ್ಯ ಜೀವಂತ ಶವ. ತಮ್ಮ ಪ್ರತಾಪಗಳನ್ನು ಹೇಳಿಕೊಳ್ಳುವ ಮೌಖಿಕ ರೂಪ ಹರಟೆ ಎಂದೆನ್ನಬಹುದು. ಹತ್ತಾರು ಜನ ಒಟ್ಟಿಗೆ ಕುಳಿತಾಗ ಬಿಚ್ಚಿಕೊಳ್ಳುವ ಹರಟೆಯು ಜಗ್ಗಿದಷ್ಟೂ ಉದ್ದವಾಗುತ್ತದೆ. ಕೇಳುಗರು ಹುಬ್ಬೇರಿಸುವಂತೆ ಮಾಡುವ ಈ ಹರಟೆ ಪ್ರಚಾರಪ್ರಿಯತೆಯ ಪ್ರತೀಕ. ಕೇವಲ ಜನಸಾಮಾನ್ಯರಲ್ಲೇ ಪ್ರಚಾರಪ್ರಿಯತೆ ಇರುವಾಗ ರಾಜ ಮಹಾರಾಜರಲ್ಲಿ ಇನ್ನಷ್ಟು ಅಧಿಕವಾಗಿಯೇ ಇದ್ದಿರಬಹುದು. ಸಂಪರ್ಕ ಮತ್ತು ಸಂವಹನ ಮಾಧ್ಯಮಗಳ ಕೊರತೆ ಇದ್ದ ಅಂದಿನ ಕಾಲದಲ್ಲಿ ರಾಜರುಗಳು ತಮ್ಮ ಪ್ರತಿನಿಧಿಗಳನ್ನು ಬೇರೆ ಬೇರೆ ಭಾಗಗಳಿಗೆ ಕಳುಹಿಸಿ ಸಂದೇಶ ತಲುಪಿಸುತ್ತಿದ್ದರು. ಸರಕಾರದ
ನೀತಿಗಳು ಘೋಷಣೆಗಳು ಇಂದು ಮರುದಿನದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಪ್ರಜೆಗಳನ್ನು ತಲುಪಿ ಬಿಡುತ್ತದೆ. ಪತ್ರಿಕೆಗಳು ಇಲ್ಲದ ಕಾಲದಲ್ಲಿ ರಾಜನ ಆದೇಶಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಕಲ್ಲುಗಳ ಮೇಲೆ ಶಾಸನಗಳನ್ನು ಬರೆಯಿಸುವ ಪದ್ಧತಿ ಬಂತು. ಇದು ರಾಜ್ಯಾಡಳಿತದ ದೃಷ್ಟಿಯಿಂದ ಮಾತ್ರ ಮಾಡಿಕೊಂಡ ವ್ಯವಸ್ಥೆ.
ಆದರೆ ಒಂದೂರಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅದೇ ಊರಿನ ಜನರಿಗೆ, ಬೇರೆ ಊರುಗಳ ಜನರಿಗೆ ತಿಳಿಸುವುದು ಹೇಗೆ? ರಾಜ- ಪ್ರಜೆ, ಪ್ರಜೆ-ರಾಜರ ಸಂಪರ್ಕ ಕೊಂಡಿಯನ್ನು ಜನರ ಜನರ ನಡುವಿನ ಸಂಪರ್ಕಕೊಂಡಿಯನ್ನಾಗಿ ಮಾಡಿದ್ದೇ ಪತ್ರಿಕೋದ್ಯಮದ ಸಮೂಹ ಸಂವಹನ. ತಿಳಿದುಕೊಳ್ಳಬೇಕೆಂಬ ಮಾನವನ ಸಹಜ ಕುತೂಹಲವೇ ಪತ್ರಿಕೆಯು ಕ್ರಮೇಣ ಒಂದು ಉದ್ಯಮದ ಸ್ವರೂಪವನ್ನು ಪಡೆಯುವುದಕ್ಕೆ ಕಾರಣವಾಯಿತು.
ಉದ್ಯಮದ ಸ್ವರೂಪವನ್ನು ಪಡೆದಿರುವ ಪತ್ರಿಕೆಯೂ ಒಳಗೊಂಡಂತೆ ಸಮೂಹ ಸಂಪರ್ಕ ಸಾಹಿತಿಯೂ ಒಂದು ಘಟಕವಾಗಿರುವ ಸಮಾಜದಲ್ಲಿ ನಡೆಸುವ ಕಾರ್ಯ ಮೂರು ರೀತಿಯಲ್ಲಿರುತ್ತದೆ. ಒಂದು ಕಾವಲುಗಾರನ ಕೆಲಸ, ಎರಡನೆಯದು ಪಂಚಾಯಿತಿ, ಮೂರನೆಯದು ಶಿಕ್ಪಕನ ಕರ್ತವ್ಯ. ಪತ್ರಿಕೆ ಕಾವಲುಗಾರನಂತೆ ಪರಿಸರದ ವೀಕ್ಷಣೆ ಮಾಡುತ್ತದೆ, ಪಂಚಾಯಿತಿಯಂತೆ ಆಗುತ್ತಿರುವ ಬದಲಾವಣೆಯ ಬಗೆಗೆ ಚರ್ಚಿಸುತ್ತದೆ, ಶಿಕ್ಷಕನಂತೆ ಸಮಾಜದ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ಮಂದುವರಿಸುತ್ತದೆ. ಕೆಲವು ಪತ್ರಿಕೆಗಳಲ್ಲಿ ಪಂಚಾಯಿತಿ ಕಟ್ಟೆ' ಎಂಬ ಶೀರ್ಷಿಕೆಯಲ್ಲಿಸಮಸ್ಯೆಯೊಂದನ್ನು ಮಂಡಿಸಿ ಸರಕಾರದ ಗಮನ ಸೆಳೆದು ಅದಕ್ಕೆ ಸರಕಾರದಿಂದ ಬಂದ ಪ್ರತಿಕ್ರಿಯೆ ಪ್ರಕಟಿಸಿದ್ದನ್ನು ಕಾಣಬಹುದು.3 ಸಾಹಿತ್ಯವನ್ನು ಸಂಸ್ಕೃತಿಯ ಒಂದು ಅಂಗ ಎಂದು ಪರಿಭಾವಿಸಿದಾಗ ಸಾಹಿತ್ಯ ತ್ರಿಕೆಗಳು ಸಮೂಹ ಮಾಧ್ಯಮಗಳಲ್ಲಿಯೇ ಸೇರಿ ಬಿಡುತ್ತವೆ. ಹೀಗಿರುವಾಗ ಸಾಹಿತ್ಯಪತ್ರಿಕೆಗಳು ಮತ್ತು ಉಳಿದ ಪತ್ರಿಕೆಗಳಿಗೆ ಇರುವ ವ್ಯತ್ಯಾಸವನ್ನು ಗಮನಿಸಬಹುದು. ಉಳಿದ ಪತ್ರಿಕೆಗಳು ಸಮೂಹ ಸಂಪರ್ಕದ ವ್ಯಾಪ್ತಿಯೊಳಗೆ ಸೇರಿ ಸಮೂಹ ಪ್ರಯೋಜನದ ಕಡೆಗೆ ಗಮನ ನೀಡುತ್ತವೆ. ಆದರೆ ಸಾಹಿತ್ಯಪತ್ರಿಕೆಗಳು ನಿರ್ದಿಷ್ಟ ವಲಯವನ್ನು ಉದ್ದೇಶಿಸಿರುತ್ತವೆ. ಸಮೂಹ ಮಾಧ್ಯಮ ಬೆಳೆದಂತೆ ಮನರಂಜನೆ ಇಂದು ಒಂದು ಉದ್ಯಮವಾಗಿದೆ. ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳು, ಮಾಸ ಪತ್ರಿಕೆಗಳು, ವಾರ ಪತ್ರಿಕೆಗಳ ಗುರಿಯೂ ಮನರಂಜನೆಯೇ ಆಗಿರುತ್ತದೆ. ಹೀಗಿರುವಾಗ ಗಂಭೀರವಾಗಿ ಚಿಂತಿಸುವ ಲೇಖಕ ಜನಪ್ರಿಯ ಪತ್ರಿಕೆಗಳಿಗೆ ಬರೆಯುವಾಗ ತನ್ನ ಮೂಲ ನೆಲೆಯಿಂದ ಈಚೆಗೆ ಸರಿದು ಪತ್ರಿಕೆಯ ಅಗತ್ಯವೇನು ಎಂದು ಅರಿತು ಬರೆಯುತ್ತಾನೆ. ಓದುಗರ ಬೇಡಿಕೆಗೆ ಅನುಗುಣವಾಗಿ ರಚನೆಗೊಳ್ಳುವ ಜನಪ್ರಿಯ ಸಾಹಿತ್ಯ ಓದುಗನಿಗೆ ತಾತ್ಕಾಲಿಕವಾಗಿ ಖುಷಿ ಕೊಟ್ಟರೂ ಓದುಗನ ವ್ಯಕ್ತಿತ್ವ ವಿಕಾಸಕ್ಕೆ, ಅಭಿರುಚಿ ನಿರ್ಮಾಣಕ್ಕೆ ಪೂರಕವಾಗಿ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಜನಪ್ರಿಯ ಪತ್ರಿಕೆಗಳು ಸಿಲೆಕ್ಟಿವ್ ಎನ್ನಿಸಿಕೊಳ್ಳುತ್ತವೆ. ಈ ಹಂತದಲ್ಲಿಯೇ ಜನಪ್ರಿಯ ಪತ್ರಿಕೆಗಳಿಂದ ಸಾಹಿತ್ಯಪತ್ರಿಕೆಗಳು ಬೇರೆಯಾಗಿ ತಮ್ಮನ್ನು ಗುರುತಿಸಿಕೊಳ್ಳುತ್ತವೆ. ಸುದ್ದಿ ಪತ್ರಿಕೆಗಳು ಸುದ್ದಿಯ ಜೊತೆಯಲ್ಲಿ ಕಾಮಿಕ್ಸ್, ಛೂ ಬಾಣ, ಚೇ!ಚೇ!, ಗುರುಶಿಷ್ಯ, ನುಡಿ ಕಿಡಿ ಈ ರೀತಿಯಲ್ಲಿ ಸುದ್ದಿಯನ್ನು ಲಘುವಾಗಿ ಟೀಕಿಸುವ ಕಾಲಂಗಳು, ನಗೆಹನಿಗಳು ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ವಾರದ ಸಾಪ್ತಾಹಿಕ ಪುಟಗಳಲ್ಲಿ ಕಥೆ, ಕವನಗಳೂ ಇರುತ್ತದೆ. ಇಲ್ಲಿಯ ಪುಸ್ತಕ ವಿಮರ್ಶೆಯಂತೂ ಕೇವಲ ಪರಿಚಯಾತ್ಮಕವಾಗಿ, ಪ್ರೊಫೆಶನಲ್ ವಿಮರ್ಶೆಯಾಗಿರುತ್ತದೆ. ಪುಸ್ತಕವೊಂದು ಹೊಸದಾಗಿ ಬಂದಾಗ ಮಾತ್ರಅವುಗಳ ಪರಿಚಯಕ್ಕಾಗಿ ಇಂಥ ವಿಮರ್ಶೆಗಳಿರುತ್ತವೆ. ಆದರೆ ಸಾಹಿತ್ಯಪತ್ರಿಕೆಗಳಲ್ಲಿ ಇವುಗಳದೇ ವಿಮರ್ಶೆ ಬಂದಾಗ ಅವುಗಳ ನಡುವಿನ ಅಂತರ ಕಣ್ಣಿಗೆ ಕಟ್ಟುವಂತೆ ಇರುತ್ತದೆ. ಸಾಹಿತ್ಯಪತ್ರಿಕೆಗಳಿಗೆ ಕೇವಲ ಹೊಸ ಪುಸ್ತಕಗಳ ವಿಮರ್ಶೆ ಮಾಡುವ ಚೌಕಟ್ಟೇನೂ ಇಲ್ಲ. ಹಳೆಯ ಪುಸ್ತಕಗಳನ್ನು ಹೊಸ ಕಾಲದ ಸಂದರ್ಭದಲ್ಲಿ ಅದು ಪರಿಶೀಲಿಸಬಹುದು. ಹಳೆಯ ಪುಸ್ತಕಗಳ ಪುನರ್ ಮೌಲ್ಯಮಾಪನವನ್ನು ಅದು ಮಾಡಬಹುದು. ಹಳೆಯ ಸಾಹಿತ್ಯಕ್ಕೆ ಹೊಸ ಮಾನದಂಡಗಳನ್ನು ಅನ್ವಯಿಸಿ ಆಗಾಗ ಸಾಹಿತ್ಯಪತ್ರಿಕೆಗಳಲ್ಲಿ ವಿಮರ್ಶೆಗಳು ಬರುತ್ತವೆ. ಉದಾ: ಭಾರತೀಯ ಭಕ್ತಿ ಪಂಥ ಮತ್ತು ಮಹಿಳೆಯರು- ಬಿ.ಗಂಗಾಧರ ಮೂರ್ತಿ (ಸಂಕ್ರಮಣ ಸಂಪುಟ ೩೦, ಸಂ.೭), ಅಮೃತಮತಿ- ಸ್ತ್ರೀವಾದಿ ನೆಲೆಯಲ್ಲಿ- ಡಾ.ಕಮಲಾ ಹಂಪನಾ (ಸಂಕ್ರಮಣ, ಸಂಪುಟ ೩೦, ಸಂಚಿಕೆ ೭), ಬೇಂದ್ರೆ ಕಾವ್ಯ: ಅವೈದಿಕ ನೆಲೆಗಳಲ್ಲಿ- ಡಾ.ರಹಮತ್ ತರೀಕೆರೆ- ಸಾಹಿತ್ಯ ಸಂವಾದ ೫೦), ಇವರದೇ ಸಂಕ್ರಮಣದಲ್ಲಿಯ (ಸಂಪುಟ ೩೦, ಸಂ.೧೦-೧೧) ಕುವೆಂಪು ಸಾಂಸ್ಕೃತಿಕ ವೈರುದ್ಧ್ಯಗಳ ಪಯಣಿಗನಾಗಿ; ಹೀಗೆ ಹೆಸರಿಸುತ್ತ ಹೋಗಬಹುದು. ಸಾಹಿತ್ಯಪತ್ರಿಕೆಗಳು ಮಾಡುತ್ತಿರುವ ಇನ್ನೊಂದು ಮಹತ್ವದ ಕಾರ್ಯವೆಂದರೆ, ಬೇರೆ ಬೇರೆ ಕಡೆಗಳಲ್ಲಿ ಸಭೆ, ಉಪನ್ಯಾಸ ಕಾರ್ಯಕ್ರಮ, ವಿಚಾರಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳನ್ನು ಮುದ್ರಿಸುತ್ತಿರುವುದು. ಇದರಿಂದ ಇಲ್ಲಿ ಮಂಡಿತವಾದ ವಿಚಾರಗಳನ್ನು ಸೀಮಿತ ವಲಯದಿಂದ ಸಮುದಾಯಕ್ಕೆ ತಲುಪಿಸುವ ಕೆಲಸ ಮಾಡಿದಂತೆ ಆಗುತ್ತದೆ. ಕೆಲವು ಸಾಹಿತ್ಯಪತ್ರಿಕೆಗಳೇ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಅವುಗಳನ್ನು ಪ್ರಕಟಿಸಿವೆ. ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದದಲಿತ- ಬಂಡಾಯ ಸ್ಥಗಿತತೆ: ಒಂದು ಸಂವಾದ’ ಎಂಬ ಗೋಷ್ಠಿಯನ್ನು ಸಾಹಿತ್ಯ ಸಂವಾದ' ತನ್ನ ಸಂಚಿಕೆಯಲ್ಲಿ ಪ್ರಕಟಿಸಿತ್ತು.4 ವಿಶೇಷ ಸಂಚಿಕೆಗಳು: ಇದಲ್ಲದೆ ಸಾಹಿತ್ಯಪತ್ರಿಕೆಗಳು ಕೆಲವು ಸಾಹಿತಿಗಳ ಬಗ್ಗೆ ವಿಶೇಷ ಸನ್ನಿವೇಶಗಳಲ್ಲಿ ವಿಶೇಷ ಸಂಚಿಕೆಗಳನ್ನು ಹೊರಡಿಸಿವೆ. ಇದರಿಂದ ಸಾಹಿತಿಯೊಬ್ಬರನ್ನು ಹಲವು ನಿಟ್ಟಿನಿಂದ ಅಭ್ಯಾಸ ಮಾಡುವುದಕ್ಕೆ ಅನುಕೂಲವಾಗುವುದು. ಸಂಕ್ರಮಣ’ವು ಕುವೆಂಪು ವಿಶೇಷಾಂಕವನ್ನು ಹೊರತಂದಿದೆ.5 ಕುವೆಂಪು ಸಾಹಿತ್ಯ: ಮರು ಅಧ್ಯಯನ' ಸಂಕ್ರಮಣ ಪತ್ರಿಕೆಯಲ್ಲಿ ಒಂದು ವಿಶೇಷಾಂಕವಾಗಿ ತರಲು ಕುವೆಂಪು ಜೀವಂತವಿಲ್ಲ ಎನ್ನುವುದು ಒಂದು ಆಕಸ್ಮಿಕ ಕಾರಣವಾದರೆ, ಚಾರಿತ್ರಿಕವಾಗಿ ಒಬ್ಬ ವ್ಯಕ್ತಿ ಜೀವಂತ ಇರುವುದಕ್ಕೂ ಜೀವಂತ ಇಲ್ಲದಿರುವಾಗ ನಡೆಯುವ ಸಂಗತಿಗಳಿಗೂ ವ್ಯತ್ಯಾಸವಿರುತ್ತದೆ. ಈ ಹಿನ್ನೆಲೆಯಲ್ಲಿ ಕುವೆಂಪು ಸಾಹಿತ್ಯದ ಬಗ್ಗೆ ಪುನರ್ ಚರ್ಚೆಯಾಗಬೇಕೆಂದು ಆ ಪತ್ರಿಕೆಯ ಸಂಪಾದಕರು ಬಯಸಿದ ಕಾರಣ ಕುವೆಂಪು ವಿಶೇಷಾಂಕ ಹೊರ ಬಂತು. ಕುವೆಂಪು ಇರಲಿ ಅಥವಾ ಇನ್ನಾವುದೇ ಸಾಹಿತಿ ಇರಲಿ ಅವರು ಬದುಕಿದ್ದಾಗ ಅವರ ಸಾಹಿತ್ಯದ ಬಗೆಗೆ ಸಂಕೀರ್ತನ ರೂಪದ ವಿಮರ್ಶೆ ಹಾಗೂ ಪೂರ್ಣ ನಿರಾಕರಣೆ ರೂಪದ ವಿಮರ್ಶೆ ಬಂದಿರಬಹುದು. ಅದು ಅವರ ಸ್ಥಾನವನ್ನು ಸರಿಯಾಗಿ ನಿರ್ದೇಶನ ಮಾಡಲಾರದು. ಈ ಎರಡು ಸಾಧ್ಯತೆಗಳ ಆಚೆಗಿನ ಇನ್ನೊಂದು ಸಾಧ್ಯತೆ ಕಂಡುಕೊಳ್ಳುವ ಪ್ರಯತ್ನ ಇಂಥ ವಿಶೇಷ ಸಂಚಿಕೆಯ ಹಿಂದಿರುತ್ತದೆ. ಜೊತೆಯಲ್ಲಿ ಇಂದಿನ ಬರೆಹಗಾರರು ಹೇಗೆ ಆ ಸಾಹಿತಿಯ ಸಾಹಿತ್ಯ ಕುರಿತಂತೆ ಯೋಚಿಸುತ್ತಿದ್ದಾರೆ ಎಂಬುದನ್ನು ಸಂಕಲನಗೊಳಿಸಿ ಕೊಡಬೇಕು ಎಂಬ ಉದ್ದೇಶವೂ ಅದರ ಹಿಂದೆ ಇರುತ್ತದೆ. ಜಯಕರ್ನಾಟಕ, ಜಯಂತಿ ಮೊದಲಾದವುಗಳೂ ಇಂಥ ವಿಶೇಷ ಸಂಚಿಕೆಗಳನ್ನು ಆಗಾಗ ಪ್ರಕಟಿಸಿವೆ.ಸಂಚಯ’ ಪತ್ರಿಕೆಯು ಸು.ರಂ. ಎಕ್ಕುಂಡಿ ಸ್ಮರಣೆ ಸಂಚಿಕೆ (ಸಂಪುಟ , ಸಂಚಿಕೆ ೬) ರಾಮಣ್ಣನ ನೆನಪು (ಬೆಸಗರಹಳ್ಳಿ ರಾಮಣ್ಣ ಸಂಚಿಕೆ), (ಸಂಪುಟ ೯, ಸಂಚಿಕೆ ೩), ಕನ್ನಡ ಸಣ್ಣ ಕತೆಗಳು ವಿಶೇಷ ಸಂಚಿಕೆ (ಸಂಪುಟ ೭, ಸಂಚಿಕೆ ೨) ಹೀಗೆ ಪ್ರಕಟಿಸಿವೆ. ವಿವಿಧಸಾಹಿತ್ಯ ಪತ್ರಿಕೆಗಳಲ್ಲಿ ಬಂದಿರುವ ಲೇಖನಗಳ ಆಧಾರದ ಮೇಲೆಯೇ ಒಬ್ಬ ಲೇಖಕನ ಸಾಧನೆಯನ್ನು ರೇಖಿಸಬಹುದು. ಉದಾಹರಣೆಗೆ ಅಡಿಗರನ್ನು ಕೇಂದ್ರ ಮಾಡಿಕೊಂಡು ವಿವಿಧ ಸಾಹಿತ್ಯ ಪತ್ರಿಕೆಗಳ ಲೇಖನಗಳಲ್ಲಿ ಅವರ ಬಗ್ಗೆ ಏನೇನು ಬಂದಿವೆ ಎನ್ನುವುದನ್ನು ಕಲೆ ಹಾಕಿದರೆ ಹಲವು ನಿಟ್ಟಿನಿಂದ ಅವರು ನಿಕಷಕ್ಕೆ ಒಳಪಟ್ಟು ನಾವು ಒಂದು ನಿರ್ಣಯಕ್ಕೆ ತಲುಪುವುದು ಸಾಧ್ಯ.
ಸಾಹಿತ್ಯ ಪತ್ರಿಕೆಗಳ ವಿಶೇಷತೆ: ಸಾಹಿತ್ಯ ಪತ್ರಿಕೆಗಳಲ್ಲಿಯ ಇನ್ನೊಂದು ವಿಶೇಷವೆಂದರೆ ಪುಸ್ತಕಗಳನ್ನು ಧಾರಾವಾಹಿಯ ರೂಪದಲ್ಲಿ ನೀಡುವುದು. ಒಂದು ಸಂಚಿಕೆಯಲ್ಲಿ ಒಂದು ಧಾರಾವಾಹಿ ಆರಂಭವಾದಾಗ ಅದಕ್ಕೆ ಒಂದರಿಂದ ಪುಟಸಂಖ್ಯೆಯನ್ನು ನೀಡುವುದು. ಮುಂದಿನ ಸಂಚಿಕೆಯಲ್ಲಿ ಅದರ ಮುಂದಿನ ಪುಟಸಂಖ್ಯೆಯನ್ನು ನೀಡುವುದು. ಇದರಿಂದ ಓದುಗ ಅವೆಲ್ಲವನ್ನು ಸೇರಿಸಿ ತಾನೇ ಒಂದು ಪುಸ್ತಕವನ್ನು ಮಾಡಿಕೊಳ್ಳುವ ಅವಕಾಶ ಇರುತ್ತದೆ. ಇಂಥ ಪ್ರಯೋಗವನ್ನು ನಾವು ವಾಗ್ಭೂಷಣ'ದಲ್ಲಿ ಕಾಣಬಹುದು. ಹಳಕಟ್ಟಿ ಗುರುಬಸಪ್ಪ ಫಕೀರಪ್ಪ ಅವರನಿಜವಾದ ವೀರನು ಅಥವಾ ಜಗಮಲ್ಲ’, ಮಹಾದೇವ ಪ್ರಭಾಕರ ಪೂಜಾರಿ ಅವರ ಜೈನ ಧರ್ಮದ ಪರಿಭಾಷೆ', ಪಂ.ಹುಲಿಕವಿ ಅವರನರಗುಂದ ಬಂಡಾಯ’, ಅಶೋಕ ಅಥವಾ ಪ್ರಿಯದರ್ಶಿ' ಇವೆಲ್ಲ ಇದೇ ರೀತಿಯ ಪುಟ ಸಂಖ್ಯೆ ಹೊಂದಿರುವುದನ್ನು ಕಾಣಬಹುದು. ಸೀಮಿತ ವಲಯದಲ್ಲಿ ಪ್ರಸಾರದಲ್ಲಿರುವ ಸಾಹಿತ್ಯಪತ್ರಿಕೆಸಂಕ್ರಮಣ’ ಮತ್ತು ಭಿನ್ನ ಅಭಿರುಚಿಯ ಸಮೂಹವನ್ನು ಗಮನದಲ್ಲಿಟ್ಟುಕೊಂಡಿರುವ ಮಯೂರ' ಪತ್ರಿಕೆ ಸಿದ್ಧಗೊಳ್ಳುವ ರೀತಿಯಲ್ಲಿ ತಾಂತ್ರಿಕವಾಗಿ ಯಾವುದೇ ಅಂತರವಿಲ್ಲ.ಸಂಕ್ರಮಣ’ದ ಲೇಖನಗಳು ಕಂಪೋಸ್ ಆಗುವ, ಮುದ್ರಣ ಗೊಳ್ಳುವ ರೀತಿಯಲ್ಲಿಯೇ ಮಯೂರ'ದ ಲೇಖನಗಳೂ ಕಂಪೋಸ್‌ಗೊಳ್ಳುತ್ತವೆ, ಮುದ್ರಣ ಗೊಳ್ಳುತ್ತವೆ. ಆದರೆ ಇವೆರೆಡೂ ವಿಷಯಗಳನ್ನು ಆಯ್ದುಕೊಳ್ಳುವ ರೀತಿಯಲ್ಲಿ ವ್ಯತ್ಯಾಸವಿದೆ. ಸಂಕ್ರಮಣಕ್ಕೆ ತನ್ನ ಓದುಗರು ಯಾರು ಎನ್ನುವುದರ ಸ್ಪಷ್ಟ ಕಲ್ಪನೆಯಿದೆ. ಆದರೆ ಮಯೂರದ ಓದುಗರು ಸಮಾಜದ ಭಿನ್ನ ನೆಲೆಯಿಂದ ಬಂದವರು. ಅವರ ಅಗತ್ಯಗಳನ್ನು ಇಷ್ಟಗಳನ್ನು ಗಮನಿಸಬೇಕಾಗುತ್ತದೆ. ಅಲ್ಲದೆ ಮಯೂರ ಉದ್ಯಮ ಪತ್ರಿಕಾರಂಗದ ಉತ್ಪನ್ನ. ಹೀಗಾಗಿ ಅದು ಹಲವು ರೀತಿಯಲ್ಲಿ ಸಿಲೆಕ್ಟಿವ್ ಆಗುವ ಅನಿವಾರ್ಯತೆಗೆ ಒಳಗಾಗುತ್ತದೆ. ಆದರೆ ಸಂಕ್ರಮಣದ ಓದುಗರು ಒಂದು ನಿರ್ದಿಷ್ಟ ವರ್ಗದವರು. ಸಾರಾಸಗಟಾದ ಸಮಾಜದ ಎಲ್ಲ ವರ್ಗದವರನ್ನು ರಂಜಿಸಬೇಕೆಂಬ ಉದ್ದೇಶ ಅದರ ಸಂಪಾದಕರಿಗೆ ಇಲ್ಲ. ಅದರಲ್ಲಿ ಹತ್ತಿಪ್ಪತ್ತು ವರ್ಷಗಳ ಹಿಂದೆ ಪ್ರಕಟವಾದ ಒಂದು ಲೇಖನ ಅದರ ಮೌಲ್ಯದ ದೃಷ್ಟಿಯಿಂದ ಇವತ್ತಿಗೂ ಉಪಯುಕ್ತ ಆಗಿರಬಹುದು. ಇದು ಕೇವಲ ಸಂಕ್ರಮಣಕ್ಕೆ ಮಾತ್ರವಲ್ಲ. ಎಲ್ಲ ಸಾಹಿತ್ಯಪತ್ರಿಕೆಗಳಿಗೂ ಅನ್ವಯವಾಗುವ ಮಾತು. ಸಾಹಿತ್ಯಪತ್ರಿಕೆಗಳು ಸಮೂಹ ಮಾಧ್ಯಮದಿಂದ ಎಲ್ಲಿ ಪ್ರತ್ಯೇಕವಾಗುತ್ತವೆ ಎಂಬುದನ್ನು ಅರಿಯಲು ಮೇಲಿನದು ಚಿಕ್ಕ ಉದಾಹರಣೆ. ಸಾಹಿತ್ಯಪತ್ರಿಕೆಗಳಿಗೆ ಅದರದೇಆದ ಲಕ್ಷಣಗಳಿವೆ. ಸಾಹಿತ್ಯಪತ್ರಿಕೆಗಳು ಸಾಹಿತ್ಯಕ ಚರ್ಚೆ, ವಿಮರ್ಶೆ, ಸಿದ್ಧಾಂತಗಳ ಪ್ರಕಟಣೆಗೆ ಮೀಸಲಾದವು. ಸಮಾಜದಲ್ಲಿಯ ನಿರ್ದಿಷ್ಟ ವರ್ಗದವರು ಮಾತ್ರ ಇದರಓದುಗರು. ಇದು ನಮ್ಮ ಸಂಸ್ಕೃತಿಯ ದಾಖಲೆಯಾಗಿ ಉಳಿಯುತ್ತದೆ. ಪ್ರಸಾರದ ಸಂಖ್ಯೆಯನ್ನು ಗಮನಿಸಿದಾಗ ಸಾಹಿತ್ಯಪತ್ರಿಕೆಗಳ ಪ್ರಸಾರ ಸಂಖ್ಯೆ ಸಮಾನ್ಯವಾಗಿ ಕಡಿಮೆ ಇರುತ್ತದೆ. ಹೆಚ್ಚಾಗಿ ಮಾಸಿಕ, ತ್ರೈಮಾಸಿಕ, ದ್ವೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಸಂಚಿಕೆಗಳಾಗಿರುತ್ತವೆ. ಲೇಖಕರ ಅಭಿರುಚಿಯ ನಿರ್ಮಾಣದಲ್ಲಿ, ಸಂಸ್ಕೃತಿಯನ್ನು ಕಾಯ್ದುಕೊಳ್ಳುವಲ್ಲಿ ಮಾತ್ರ ಇವು ಪ್ರಮುಖ ಪಾತ್ರ ವಹಿಸುತ್ತವೆ. ಸಾಹಿತ್ಯಿಕ ಪತ್ರಿಕೆಗಳು ಅದಂದಿನ ಸಾಹಿತ್ಯ ಕೃತಿಗಳ, ಸಾಹಿತ್ಯಿಕ ಚಳವಳಿಗಳ ವಿವರಗಳನ್ನು ತಿಳಿಸುವ ಅಪರೂಪದ ದಾಖಲೆಗಳಾಗಿವೆ. ಅಲ್ಲದೆ ಸಾಹಿತ್ಯದ ಮುಖ್ಯ
ಮಾರ್ಗಸೂಚಿಗಳಾಗಿ ಕೆಲಸ ನಿರ್ವಹಿಸಿವೆ. ಅಂದಂದಿನ ಸಾಂಸ್ಕೃತಿಕ ಸಂದರ್ಭಗಳನ್ನು ಸಾಹಿತ್ಯಿಕ ವಾತಾವರಣವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿವೆ. ಕಾಲಕಾಲಕ್ಕೆ ಕನ್ನಡ ಸಾಹಿತ್ಯದ ನೆಲೆಬೆಲೆ ಕಟ್ಟುವುದರಲ್ಲಿ ವಿಮರ್ಶೆಯನ್ನು ಬೆಳೆಸುವುದರಲ್ಲಿ ಸಹಕಾರಿಯಾಗಿವೆ.- ಹೀಗೆ ಸಾಹಿತ್ಯ ಪತ್ರಿಕೆಗಳ ಹರವು ಇರುವುದರಿಂದ ಕನ್ನಡ ಸಾಹಿತ್ಯ ಪತ್ರಿಕೆಗಳ ಅಧ್ಯಯನ ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯ ಚಳುವಳಿಯ ಬೆಳವಣಿಗೆಯ ಅಧ್ಯಯನವೂ ಆಗಿ ಬಿಡುತ್ತದೆ.’6
ಸಾಮಾನ್ಯವಾಗಿ ಸಾಹಿತ್ಯಪತ್ರಿಕೆಗಳ ಪ್ರಸಾರ ಸಂಖ್ಯೆ ಕಡಿಮೆ. ಆದರೆ ಅವು ಪ್ರತಿಷ್ಠಿತವಾದವುಗಳು. ಲೇಖಕರು ಮನಸ್ಸು ಮಾಡಿ ಲೇಖನ ಕೊಟ್ಟರೆ ಅವು ನಡೆಯುತ್ತವೆ. ಲೇಖಕರಿಗೆ ಹಣ ಕೊಡುವುದು ಇವುಗಳಿಗೆ ಸಾಧ್ಯವಿರುವುದಿಲ್ಲ. ಇಂಥ ಪತ್ರಿಕೆಗಳಿಗೆ ಹಣದ ಮೇಲೆ ದೃಷ್ಟಿ ಇರುವ ಲೇಖಕರು ಲೇಖನ ಬರೆಯಲಾರರು. ತಮ್ಮ ಲೇಖನ ಸಾಹಿತ್ಯಕ ವಲಯದಲ್ಲಿ ಚರ್ಚೆಯಾಗಬೇಕು ಎಂದು ಬಯಸುವ ಲೇಖಕ ಈ ಪತ್ರಿಕೆಗಳಿಗೆ ಲೇಖನ ಬರೆಯುತ್ತಾರೆ. ಔಪಚಾರಿಕ ರೂಪದ ಗೌರವ ಧನವನ್ನು ಕೆಲವು ಪತ್ರಿಕೆಗಳು ನೀಡಬಹುದು ಅಷ್ಟೇ. ಆದರೆ ಸಾಹಿತ್ಯಪತ್ರಿಕೆಗಳು ಹೊಸ ಸೃಜನಾತ್ಮಕ ಬರೆಹಗಾರರಿಗೆ ಒಂದು ವೇದಿಕೆಯನ್ನು ಒದಗಿಸುತ್ತದೆ.
ಸಾಹಿತ್ಯಪತ್ರಿಕೆಗಳಿಗೆ ಅದರ ಚಂದಾದಾರರೇ ಜೀವಾಳ. ನಮ್ಮ ಆರಂಭದ ಸಾಹಿತ್ಯ ಪತ್ರಿಕೆಗಳಲ್ಲಿ ಒಂದಾದ ವಾಗ್ಭೂಷಣ'ದಲ್ಲಿ ಪ್ರಕಟವಾದ ಈ ಭಾಗವನ್ನು ಗಮನಿಸಬಹುದು.–ಸದ್ಯಕ್ಕೆ ವಾಗ್ಭೂಷಣದ ಪ್ರತಿಗಳು ಹೆಚ್ಚಾಗಿ ವೆಚ್ಚವಾಗಹತ್ತಿವೆ. ಕನ್ನಡಿಗರಲ್ಲಿ ಪ್ರೌಢ ವಿಷಯಗಳನ್ನು ಓದುವ ಯೋಗ್ಯತೆಯೂ, ಅಭಿರುಚಿಯೂ ಹೆಚ್ಚಾಗುತ್ತ ನಡೆದಿರುತ್ತದೆ. ನಮ್ಮಲ್ಲಿಯಾದರೂ ಹಲಕೆಲವು ಪ್ರಸಿದ್ಧ ಲೇಖಕರು ತಮ್ಮ ಲೇಖನಿಯನ್ನು ಹೆಚ್ಚು ಧೈರ್ಯದಿಂದ ಮುಂದೆ ಸಾಗಿಸಹತ್ತಿದ್ದಾರೆ. ಮುಂದಿನ ವರ್ಷ ಒಂದೆರಡು ಹೊಸ ಕಾದಂಬರಿಗಳನ್ನು ಪ್ರಸಿದ್ಧ ಪಡಿಸುವೆವು. ನಮ್ಮ ಜನರಲ್ಲಿ ಹೆಚ್ಚಿಗೆ ವಾಚನಾಭಿರುಚಿಯು ಬೆಳೆದಂತೆ ಇದರಲ್ಲಿ ಪ್ರಸಿದ್ಧಪಡಿಸಿದ ಗ್ರಂಥಗಳು ಹೆಚ್ಚು ವೆಚ್ಚವಾಗುವವೆಂದು ನಂಬಿಗೆಯುಂಟು. ಆರಂಭದಲ್ಲಿ ಇದರಲ್ಲಿ ಪ್ರಸಿದ್ಧವಾದ ಪುಸ್ತಕಗಳೆಲ್ಲ ವೆಚ್ಚವಾಗಿ ಮತ್ತೆ ಅವುಗಳನ್ನು ಅಚ್ಚು ಹಾಕಿಸುವ ಅವಶ್ಯಕತೆಯು ಬಂದಿರುವುದು. ಆದರೆ ಸ್ವತಂತ್ರವಾಗಿಭಾವಿಸಿಕೊಳ್ಳುವಷ್ಟು ಯೋಗ್ಯತೆಯು ವಾಗ್ಭೂಷಣ'ಕ್ಕೆ ಇನ್ನೂ ಬಂದಿಲ್ಲವೆಂದು ದುಃಖದಿಂದ ಹೇಳಬೇಕಾಗುತ್ತದೆ. ಆ ಯೋಗ್ಯತೆಯು ನಮ್ಮ ಕರ್ನಾಟಕ ಭಾಷಾಭಿಮಾನಿಗಳಾದ ವಾಚಕ ಮಹಾಶಯರಿಂದಲೇ ಪ್ರಾಪ್ತವಾಗತಕ್ಕದ್ದು. ಪ್ರತಿಯೊಬ್ಬ ಚಂದಾದಾರರು ತಮ್ಮ ಮಾತೃಭಾಷಾ ದೇವಿಯ ಸೇವೆಯನ್ನು ಮನಃಪೂರ್ವಕವಾಗಿ ಮಾಡಿ ತಮ್ಮ ಜನ್ಮ ಸಾರ್ಥಕ್ಯವನ್ನು ಮಾಡಿಕೊಳ್ಳಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ.7 ಈ ರೀತಿ ವಿನಂತಿ ಮಾಡಿಕೊಳ್ಳುವ ಅಗತ್ಯ ೮೦ ವರ್ಷಗಳ ನಂತರವೂ ಸಾಹಿತ್ಯಪತ್ರಿಕೆಗಳಿಗೆ ತಪ್ಪಿಲ್ಲ. ಅಷ್ಟಾಗಿಯೂ ಹೊಸ ಹೊಸ ಸಾಹಿತ್ಯಪತ್ರಿಕೆಗಳು ಹುಟ್ಟುಪಡೆದುಕೊಳ್ಳುತ್ತಲೇ ಇವೆ. ಸಾಹಿತ್ಯಪತ್ರಿಕೆಗಳ ಅಗತ್ಯ ಇದೆ: ಒಂದು ಭಾಷೆಯಲ್ಲಿ ಸಾಹಿತ್ಯಪತ್ರಿಕೆಗಳ ಅಗತ್ಯ ಖಂಡಿತವಾಗಿಯೂ ಇದೆ. ಕಾಲಕಾಲಕ್ಕೆ ಸಾಹಿತ್ಯಕ್ಕೆ ಒಂದು ನಿರ್ದಿಷ್ಟ ರೂಪವನ್ನು ನೀಡುವುದರಲ್ಲಿ ಸಾಹಿತ್ಯಪತ್ರಿಕೆಗಳ ಕೊಡುಗೆ ಗಮನಾರ್ಹವಾದದ್ದು. ಗೋಪಾಲಕೃಷ್ಣ ಅಡಿಗರುಸಾಕ್ಷಿ’ ಪತ್ರಿಕೆಯನ್ನು ಹೊರಡಿಸಿದರು. ಸಾಕ್ಷಿ' ಕ್ರಮೇಣ ಒಂದು ಕಾವ್ಯ ಪ್ರವಾಹವನ್ನು ಬದಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿತು ಎಂಬ ಅಭಿಪ್ರಾಯವಿದೆ.8 ಅನಂತರದಲ್ಲಿ ಬಂದ ಸಂಕ್ರಮಣ, ಕವಿತಾ, ಸಮೀಕ್ಪಕ, ಸಮನ್ವಯ, ಪ್ರತೀಕ, ಪ್ರಜ್ಞೆಇವುಗಳೂ ಹೊಸ ಸಾಹಿತ್ಯವನ್ನು ಬೆಳೆಸುವಲ್ಲಿ ಸಹಾಯಕವಾದವು. ಹಲವು ಹೊಸಬರನ್ನುಬೆಳಕಿಗೆ ತಂದ ಶ್ರೇಯಸ್ಸು ಸಂಕ್ರಮಣಕ್ಕಿದೆ. ಸಾಹಿತ್ಯಪತ್ರಿಕೆಗಳ ಒಂದೊಂದು ಸಂಚಿಕೆಯಲ್ಲಿ ಒಂದೋ ಎರಡೋ ಒಳ್ಳೆಯ ಕವಿತೆ, ಲೇಖನಗಳಿದ್ದರೂ ಅವು ಹೊಸಬರ ಆಸಕ್ತಿಯನ್ನು ಕೆರಳಿಸಿದರೆ ಸಾಹಿತ್ಯಪತ್ರಿಕೆಗಳ ಶ್ರಮ ಸಾರ್ಥಕವಾದಂತೆಯೇ. ಇಷ್ಟೊಂದು ಜವಾಬ್ದಾರಿಯಿಂದ ಪ್ರಕಟವಾಗುತ್ತಿದ್ದ ಸಾಹಿತ್ಯಪತ್ರಿಕೆಗಳಿಗೆ ಲೇಖನಗಳು ಅವು ಬಯಸಿದ ರೀತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿರಲಿಲ್ಲ. ಲೇಖನಗಳ ಕೊರತೆಯನ್ನು ಅನುಭವಿಸಿದಸಂಕ್ರಮಣ’ದ ಸಂಪಾದಕರ ಮಾತು ಇದು; ಸಂಕ್ರಮಣಕ್ಕೆ ಎಂಥ ಲೇಖನ ಕಳುಹಿಸಬೇಕು? ಯಾವ ಮಾನದಂಡದಿಂದ ಲೇಖನಗಳನ್ನು ಸ್ವೀಕರಿಸಲಾಗುತ್ತಿದೆ? ಎಂಬ ಪ್ರಶ್ನೆ ಅನೇಕ ಸಲ ನನಗೆದುರಾಗುತ್ತವೆ. ನಾನು ಮುಂದಿಡುವ ವಿಚಾರ ಎರಡೇ: ೧. ಲೇಖನಗಳ ಆಶಯ ಪ್ರಗತಿಪರವಾಗಿರಬೇಕು; ನಿಲುವು ವೈಚಾರಿಕವಾಗಿರಬೇಕು, ೨. ಬರವಣಿಗೆ ಕಲಾತ್ಮಕವಾಗಿ ಸಮರ್ಥವಾಗಿರಬೇಕು; ಬೋರು ಹೊಡೆಯಬಾರದು ಅಷ್ಟೇ ... ಇಂಥ ಮಿನಿಮಮ್ ಎನ್ನಬಹುದಾದ ಕೇಳಿಕೆಗಳಿಂದಾಗಿ ಸಂಕ್ರಮಣ ಕೇವಲ ಏರುಹುಬ್ಬಿನವರ, ತಮಗೆ ತಾವೇ ಶ್ರೇಷ್ಠತ್ವವನ್ನು ಆರೋಪಿಸಿಕೊಂಡವರ ಅಮೃತವಾಣಿಯಾಗುವ ಅಪಾಯದಿಂದ ಎಂದಿನಿಂದಲೂ ತಪ್ಪಿಸಿಕೊಳ್ಳುತ್ತಲೇ ಬಂದಿದೆ.''9 ಈ ಮೂಲಕ ಪತ್ರಿಕೆ ಹೊಸಹೊಸ ಪ್ರತಿಭೆಯನ್ನು ಪರಿಚಯಿಸಿದ್ದನ್ನು ಚಂಪಾ ಹೇಳುತ್ತಾರೆ. ಸಾಹಿತ್ಯ ಕೆಲವರದೇ ಗುತ್ತಿಗೆಯಾಗುವ ಅಪಾಯವನ್ನು ಸಂಕ್ರಮಣದಂಥ ಪತ್ರಿಕೆಗಳು ತಪ್ಪಿಸಿವೆ. ಒಂದು ಭಾಷೆಯ ಸಾಹಿತ್ಯದಲ್ಲಿ ಹೊಸದೊಂದು ಮಾರ್ಗ ತೆರೆದುಕೊಂಡಾಗ ಅದಕ್ಕೆ ಸುಲಭದಲ್ಲಿ ಸ್ವಾಗತವಂತೂ ದೊರೆಯುವುದಿಲ್ಲ. ತನ್ನ ಅಸ್ತಿತ್ವವನ್ನು ಸಿದ್ಧಿಸಿಕೊಳ್ಳಬೇಕಾದರೆ ಅದು ಹೋರಾಟವನ್ನೇ ಮಾಡಬೇಕಾಗುತ್ತದೆ. ಕನ್ನಡದ ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಈ ಸಾಹಿತ್ಯ ಮಾರ್ಗಗಳು ಸಾಹಿತ್ಯದ ಮೂಲ ಪ್ರವಾಹದಲ್ಲಿ ಸೇರುವಾಗ ಸಾಕಷ್ಟು ಪರಿಶ್ರಮಪಟ್ಟಿವೆ. ಈ ಎಲ್ಲ ಹೊಸ ಮಾರ್ಗಗಳ ಪ್ರವರ್ತಕರೆಲ್ಲ ಸಾಹಿತ್ಯಪತ್ರಿಕೆಗಳ ಮೂಲಕವೇ ತಮ್ಮ ಮಾರ್ಗಗಳ ಸಮರ್ಥನೆ ಮಾಡಿಕೊಂಡಿದ್ದಾರೆ. `ನವ್ಯ ಕಾವ್ಯದ ಆರಂಭದ ಕಾಲದಲ್ಲಿದ್ದ ಆಸ್ಥೆ, ಅಭಿರುಚಿ ಈಗ ಉಳಿದಿಲ್ಲ. ಇಂದಿನ ಕವಿ ತನ್ನ ಜವಾಬ್ದಾರಿಗಳೇನೆಂಬುದನ್ನು ಅರ್ಥಯಿಸಿಕೊಂಡು ಬರೆಯುವವನಾಗಿದ್ದಾನೆ. ಸಮಕಾಲೀನ ಸಂವೇದನೆ, ಆಡುಮಾತು, ಮಣ್ಣಿನ ವಾಸನೆ ಇವುಗಳಿಗೆ ಸಾಕಷ್ಟು ಮಹತ್ವ ಬಂದಿತಾದರೂ ಕಾವ್ಯ ಸಾಮಾನ್ಯ ಜನತೆಯನ್ನು ಮುಟ್ಟಲಿಲ್ಲ. ಸಾಮಾಜಿಕ ಸಂವೇದನೆಯನ್ನು ಒಳಗೊಳ್ಳಲಿಲ್ಲ. ಸಂಕೇತ, ಪ್ರತಿಮೆ ಹಾಗೂ ಅಭಿವ್ಯಕ್ತಿ ಕ್ರಮದಲ್ಲಿ ಹೊಸ ಪ್ರಯೋಗ ನಡೆಯಿತು. ಅಭಿವ್ಯಕ್ತಿ ಸೂಕ್ತ ಅನ್ನಿಸುವ ತಂತ್ರವನ್ನು ಯೋಜಿಸಿಕೊಂಡು ಹೊಸ ಕಾವ್ಯ ಜನ್ಮ ತಳೆಯಿತು. ಪ್ರಾರಂಭದಲ್ಲಿ ಇಂಥ ಪ್ರಯೋಗ ಕ್ಲಿಷ್ಟವೆನ್ನಿಸುತ್ತ ನವ್ಯ ಕಾವ್ಯವೆಂದರೆ ಒಂದು ಬಗೆಯ ತಿರಸ್ಕಾರ ಭಾವನೆ ಬೆಳೆಯುತ್ತ ಬಂತು. ಬಹುಶಃ ಇದಕ್ಕೆ ಕಾರಣ ಅಂಥ ಕೃತಿಗಳ ಬಗ್ಗೆ ವಿಮರ್ಶೆ, ವಿಶ್ಲೇಷಣೆ ಹಾಗೂ ಚರ್ಚೆ ನಡೆಯದೇ ಇರುವುದು. ನವ್ಯ ಕಾವ್ಯ ಧೋರಣೆಯನ್ನು ಅರ್ಥ ಮಾಡಿಕೊಂಡು ಅದರ ಮೂಲ ತತ್ವಗಳನ್ನು ಪರಿಚಯಿಸಿ ಕಾವ್ಯವನ್ನು ಹೇಗೆ ಪ್ರವೇಶಿಸಬೇಕು, ಬೆಲೆ ಕಟ್ಟಬೇಕು ಎಂಬ ಕುರಿತು ತೀವ್ರ ವಿಮರ್ಶೆ, ಆಲೋಚನೆ ನಡೆಯಲಿಲ್ಲ',10 ಎನ್ನುವ ಹಿಂಗಮಿರೆ ಈ ಕೊರತೆಯನ್ನು ಗ್ರಹಿಸಿರುವರು. ಒಂದು ಕಾವ್ಯ ಸಿದ್ಧಾಂತದ ಮೇಲೆ ಒಬ್ಬರು ಒಂದು ಗ್ರಂಥವನ್ನು ಬರೆಯುವುದು, ಅದನ್ನು ಬೆಂಬಲಿಸಲು ಅಥವಾ ಖಂಡಿಸಲು ಇನ್ನೊಬ್ಬರು ಇನ್ನೊಂದು ಗ್ರಂಥವನ್ನು ಬರೆಯುವುದು ಇವು ದುಬಾರಿಯಾದುದು. ಎಲ್ಲರಿಗೂ ಸಾಧ್ಯವಿಲ್ಲದ್ದು. ಅಲ್ಲದೆ ಎಷ್ಟೋ ವಿಚಾರಗಳು ಪ್ರಕಟಗೊಳ್ಳದೆ ಹಾಗೆಯೇ ಅಡಗಿ ಹೋಗುವ ಸಾಧ್ಯತೆಗಳು ಇರುತ್ತವೆ. ಇಂಥ ಸಂದರ್ಭದಲ್ಲಿ ಸಾಹಿತ್ಯ ಪತ್ರಿಕೆಗಳು ಆರೋಗ್ಯಕರ ವಾಗ್ವಾದಕ್ಕೆ ಒಂದು ವೇದಿಕೆ ಯಾಗುವುದನ್ನು ಕನ್ನಡದ ಸಂದರ್ಭದಲ್ಲಿ ಗಮನಿಸಿದ್ದೇವೆ. ಸಾಹಿತ್ಯದ ಯಾವುದೋ ಒಂದು ಪ್ರಕಾರದ, ಸಿದ್ಧಾಂತದ ವಕ್ತಾರನಾಗಿ ಸಾಹಿತ್ಯ ಪತ್ರಿಕೆಗಳು ಕೆಲಸಮಾಡಿಬಿಟ್ಟರೆ ಅವುಗಳ ಅಗತ್ಯ ಮುಗಿದುಬಿಡುತ್ತವೆಯೇ? ಸಾಹಿತ್ಯಪತ್ರಿಕೆ ತನ್ನ ಸಮಕಾಲೀನ ಲೇಖಕರ ಮೇಲೆ ಪ್ರಭಾವ ಬೀರುವುದಿಲ್ಲವೆ? ಹೀಗೆಯೇ ಬರೆಯ ಬೇಕು ಎಂದು ಒತ್ತಡ ತರುವುದಿಲ್ಲವೆ? ಖಂಡಿತವಾಗಿ ಒತ್ತಡ ತರುತ್ತವೆ. ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಖ್ಯಾತ ಕಾದಂಬರಿಕಾರರೊಬ್ಬರು ನನಗೆ ತುರ್ತು ಪರಿಸ್ಥಿತಿಯ ತುರ್ತು ತಟ್ಟಿಯೇ ಇಲ್ಲವಲ್ಲ! ಎಂದು ಹೇಳಿದ್ದನ್ನು ಹಾಗೂ ಇಥಿಯೋಪಿಯದಲ್ಲಿ ಅನೇಕ ವರ್ಷ ಇದ್ದು ಬಂದ ಖ್ಯಾತ ಕವಿಯೊಬ್ಬರಿಗೆ, ಅಲ್ಲಿಯ ಭೀಕರ ಬರದ ಬಗ್ಗೆ ನಿಮ್ಮ ಕಾವ್ಯದಲ್ಲಿಒಂದು ಸಾಲೂ ಇಲ್ಲವಲ್ಲ! ಎಂದು ಯಾರೋ ಕೇಳಿದಾಗ ಅವರು ಒಂದು ನವ್ಯ ನಗೆ ನಕ್ಕು ಸುಮ್ಮನಾದುದನ್ನು ಚಂಪಾ ಸಂಕ್ರಮಣದಲ್ಲಿ ಖಂಡಿಸಿದ್ದಾರೆ.11 ಹೀಗೆ ಸಾಹಿತಿಗಳ ಒಲವು ನಿಲುವುಗಳ ಬಗೆಗೆ ಸಾಹಿತ್ಯಪತ್ರಿಕೆಯ ಸಂಪಾದಕರು ಎಚ್ಚರಿಕೆಯನ್ನು ಕೊಡುವ ಮೂಲಕ ಅವರನ್ನು ತಿದ್ದಲು ಯತ್ನಿಸಿದ್ದನ್ನು ಇಲ್ಲಿ ಕಾಣಬಹುದು. ಸಾಹಿತ್ಯಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಅಭಿಪ್ರಾಯಗಳು ಪರಿಣಾಮಮುಖಿ ಆಗಬೇಕಾದುದು ಓದುಗ ವರ್ಗದ ಮೂಲಕವೇ. ಈ ಓದುಗ ವರ್ಗವೇ ಸಾಹಿತ್ಯಪತ್ರಿಕೆಗೆ ಒಂದು ದೊಡ್ಡ ಸವಾಲು ಎಂದು `ಸಾಹಿತ್ಯ ಸಂವಾದ'ದ ಸಂಪಾದಕ ರಾಘವೇಂದ್ರ ಪಾಟೀಲರು ಹೇಳುತ್ತಾರೆ.12 ಓದುಗ ಲೋಕದ ಮನಸ್ಸು ಮುಕ್ತವಾದುದ್ದಲ್ಲ. ಸಂವಾದಕ್ಕೆ ತೆರೆದುಕೊಳ್ಳುವಂಥದ್ದಲ್ಲ. ಒಳಗೆ ಮುಚ್ಚಿಕೊಳ್ಳುವ ಪರಿಯ ಇಂಥ ಮನಸ್ಸುಗಳಿಂದ ಯಾವ ಮಹತ್ವದ ಸಾಂಸ್ಕೃತಿಕವಾದ ಅಥವಾ ತಾತ್ವಿಕವಾದ ಚರ್ಚೆಗಳು ಏರ್ಪಡುವುದು ಸಾಧ್ಯವಿಲ್ಲ. ಪತ್ರಿಕೆಯಲ್ಲಿ ಒಂದು ಲೇಖನವನ್ನು ಪ್ರಕಟಿಸುವುದು ಎಂದರೆ ಒಂದು ನಿರ್ದಿಷ್ಟವಾದ ಅಂಶದ ಬಗೆಗೆ ಚರ್ಚೆಯನ್ನು ವಾಗ್ವಾದವನ್ನು ಅನಾವರಣಗೊಳಿಸುವ ಉದ್ದೇಶದ ಘೋಷಣೆ ಇದ್ದಂತೆ. ಆದರೆ ಸಣ್ಣ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಎಲ್ಲ ಲೇಖನಗಳೂ ಇಂಥ ವೇದಿಕೆಗೆ ಆಹ್ವಾನ ನೀಡುವ ಅರ್ಹತೆಯವು ಇರುವುದಿಲ್ಲ. ಆದರೆ ಕೆಲವಾದರೂ ಮಹತ್ವದ ಲೇಖನಗಳು ಚರ್ಚೆ- ಮಂಥನಗಳ ಮೂಲಕ ಬೆಳೆಯದೇ ಹಾಗೇ ಉಳಿದು ಬಿಡುವುದಕ್ಕೆ ಈ ಓದುಗ ಲೋಕದ ನಿರ್ಲಿಪ್ತತೆಯೇ ಕಾರಣ. ಇದು ಸಾಹಿತ್ಯಪತ್ರಿಕೆಗಳ ದೊಡ್ಡ ಸವಾಲೂ ಹೌದು. ಈ ನಿರ್ಲಿಪ್ತ ಮನಸ್ಸನ್ನು ತೊಡೆದು ಹಾಕುವುದು ಹೇಗೆ? ಸಾಹಿತ್ಯಪತ್ರಿಕೆಗಳು ಪ್ರಚೋದನಕಾರಿ ಭಾಷೆಯನ್ನು ಬಳಸುವುದರಿಂದ ಇದು ಸಾಧ್ಯವಾಗುತ್ತದೆ. ಸಾಹಿತ್ಯ ಪತ್ರಿಕೆಗಳು ಕೆಲವು ಲೇಖನಗಳನ್ನು ವಾಗ್ವಾದ, ಚರ್ಚೆ, ಚಿಂತನ, ಪ್ರತಿಕ್ರಿಯೆ ಇತ್ಯಾದಿ ಶೀರ್ಷಿಕೆಯಲ್ಲಿ ಪ್ರಕಟಿಸಿ ಅವುಗಳ ಬಗೆಗೆ ಚರ್ಚೆಯನ್ನು ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತವೆ. ಹಿಂದೆ ವಾಗ್ಭೂಷಣದಲ್ಲಿ ಪ್ರಾಸ ಸಂಬಂಧಿ ಚರ್ಚೆ ನಡೆದಾಗ ಸಂಪಾದಕರು ಈ ಸಂಬಂಧ ಚರ್ಚೆಯಾಗುವುದು ಅಗತ್ಯವಿರುವುದರಿಂದ ಲೇಖನಗಳನ್ನು ಕಳುಹಿಸಲು ಕೋರಿತ್ತು. `ಸಂಕ್ರಮಣ'ದಲ್ಲಿ ವಾಗ್ವಾದಕ್ಕೆ ಚಾಲನೆ ನೀಡುವಂಥ ಭಾಷೆ ಇರುವುದನ್ನು ಗುರುತಿಸಬಹುದು. ಸಾಹಿತ್ಯ-ಸಾಂಸ್ಕೃತಿಕ ಸಣ್ಣ ಪತ್ರಿಕೆಗಳ ಹಿನ್ನೆಲೆಯಲ್ಲಿ ಕೆಲಸ ಮಾಡುವ ಪ್ರಜ್ಞೆಯ ಬಗೆಗೆ `ಸಾಹಿತ್ಯಸಂವಾದ'ದ ರಾಘವೇಂದ್ರ ಪಾಟೀಲರು ಬರೆದಿದ್ದಾರೆ.13 ಇಂಥ ಪತ್ರಿಕೆಗಳ ಹಿಂದೆ ಕೆಲಸ ಮಾಡುವ ಮನಸನ್ನು ಅವರು ಡಾನ್ ಕ್ವಿಕ್ಸೋಟ್‌ನ ರೂಪಕದ ಮೂಲಕ ಗುರುತಿಸಲು ಯತ್ನಿಸಿದ್ದಾರೆ. ಈ ಡಾನ್ ಕ್ವಿಕ್ಸೋಟ್, ರಟ್ಟಿನ ಚಿಲಕತ್ತುಗಳನ್ನು ಧರಿಸಿ ಸಾಂಕೋಪಾಜಾನನ್ನು ಬೆಂಗಾವಲಿಗಿಟ್ಟುಕೊಂಡು ಹೊರಟು ಸುತ್ತಲಿನ ಜಗತ್ತಿನಲ್ಲಿ ಸುವ್ಯವಸ್ಥೆಯನ್ನು ಸ್ಥಾಪಿಸಲು ಉದ್ಯುಕ್ತನಾದವನು! ಇಂಥ ಮುಗ್ಧ ಪ್ರಜ್ಞೆಯಿಂದಲೇ ತನ್ನ ವರ್ಗ ಜಾತಿ ಮುಂತಾದ ಸಂಬಂಧಗಳನ್ನು ಮೀರಿ ಅವುಗಳಲ್ಲಿ ಬೆರೆತುಕೊಂಡಿರುವ ಕೊಳಕುಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಕೊಳಕುಗಳಿಲ್ಲದ ಚಂದದ ಸಂದರ್ಭವನ್ನು ಕನಸಿನ ಮಾರ್ಗವಾಗಿ ಕಂಡುಕೊಳ್ಳುತ್ತ, ಆ ದಿಕ್ಕಿನತ್ತಲಿನ ಪ್ರಯಾಣಕ್ಕೆ ಸಜ್ಜುಗೊಳ್ಳುವುದು ಸಾಧ್ಯವಾಗುತ್ತದೆ. ಸಂಬಂಧಗಳ ನೆಲೆಯಲ್ಲಿ ವೈಚಾರಿಕ ಮಾದರಿಗಳ ಪೆಡಸುತನದ ಗ್ರಹಿಕೆ ಸಾಧ್ಯವಾಗುತ್ತ ನಿರ್ಜೀವಕ್ಕೆ ಜೋತು ಬಿದ್ದ ಕಣ್ಣುಕಪ್ಪಡಿಗೆ ಬಿಡುಗಡೆ ದೊರೆತು, ಜೀವಂತಿಕೆಗೆ ಪ್ರವೇಶ ದೊರೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ. ಹುಂಬತನದಿಂದ ಬೇರೆಯಲ್ಲ ಈ ಮುಗ್ಧತೆ ಮತ್ತು ಆ ಮೂಲಕವೇ ಮಹತ್ವಾಕಾಂಕ್ಷೆಯ ನೆಗೆತಗಳು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯಕ್ಕೆ ಅವರು ಬರುತ್ತಾರೆ. ಇಂಥ ಪತ್ರಿಕೆಗಳ ಹಿಂದಿರಬೇಕಾದ ಅತ್ಯುತ್ಕೃಷ್ಟ ಕನಸು ಎಂದರೆ ಬಸವಣ್ಣ ಕಟ್ಟಿದ ಅನುಭವ ಮಂಟಪದ ಕನಸು ಎಂದು ಹೇಳುತ್ತ ಇವುಗಳನ್ನು ನಡೆಸುವವರ ಎದುರಿಗಿರುವ ಸವಾಲುಗಳತ್ತ ಗಮನ ಸೆಳೆಯುವರು. ಅವರೇ ಗುರುತಿಸುವ ದೊಡ್ಡ ಸವಾಲೆಂದರೆ ಮನಸ್ಸಿನ ಮುಗ್ಧತೆ ಕಳೆದು ಹೋಗುವುದು. `ಮುಗ್ಧತೆಯನ್ನು ಸ್ಥಾನಪಲ್ಲಟಗೊಳಿಸಿ ಅದರ ಸ್ಥಾನದಲ್ಲಿ ಬಂದು ಕುಳಿತುಕೊಳ್ಳುವ ವೈಯಕ್ತಿಕ ಆಸೆ ಆಕಾಂಕ್ಷೆಗಳು, ಪರಸ್ಪರ ದ್ವೇಷಗಳು, ಪ್ರೀತಿ ವ್ಯಾಮೋಹಗಳು- ಈ ಸಾಹಿತ್ಯಿಕ, ಸಾಂಸ್ಕೃತಿಕ ಪತ್ರಿಕೆಗಳನ್ನು ನಡೆಸತೊಡಗಿದಾಗ ಈ ಪತ್ರಿಕೆಗಳು ಸಾಂಸ್ಕೃತಿಕ ರೋಗಗಳನ್ನು ಹರಡತೊಡಗುತ್ತವೆ. ಹೀಗೆ ಬಿತ್ತಲಾಗುವ ಸಾಂಸ್ಕೃತಿಕ ರೋಗಗಳು - Cultural Plague- ತೀವ್ರವಾದ ಸಾಂಕ್ರಾಮಿಕವಾದವುಗಳು. ಅವು ಪರಿಣಾಮಗಳಾಗಿರುವಂತೆ ಪರಿಣಾಮವನ್ನುಂಟು ಮಾಡುವಂತಹ ಪರಿಣಾಮಕಾರಿಯಾದವುಗಳೂ ಆಗುತ್ತವೆ. ಅಂದರೆ ಅವು ಇತರ ಇಂಥ ಸಣ್ಣ ಪತ್ರಿಕೆಗಳ ಹಿನ್ನೆಲೆಯಲ್ಲಿರುವ ಮುಗ್ಧತೆ- ಆದರ್ಶಗಳನ್ನೂ ನಾಶಮಾಡಿಬಿಡಬಲ್ಲವು.'14 ಇಂಥ ಒಂದು ಪತ್ರಿಕೆ ಎಚ್ಚರ ತಪ್ಪಿದರೆ ಅದು ಇನ್ನೊಂದರ ಮೇಲೆಯೂ ಪರಿಣಾಮ ಬೀರುವ ಅಪಾಯದ ಕಡೆ ರಾಘವೇಂದ್ರ ಪಾಟೀಲರು ಇಲ್ಲಿ ಗಮನ ಸೆಳೆದಿದ್ದಾರೆ. ಸಂಶೋಧನೆಗೆ ನೆರವು: ಇಂಥ ಎಚ್ಚರವನ್ನು ಉಳಿಸಿಕೊಂಡು ಹೊರಬರುವ ಸಾಹಿತ್ಯಪತ್ರಿಕೆಯ ಹಲವು ಉಪಯುಕ್ತತೆಗಳನ್ನು ಈಗಾಗಲೆ ಗಮನಿಸಲಾಯಿತು. ಸಾಹಿತ್ಯಪತ್ರಿಕೆಗಳು ಸಾಹಿತ್ಯ ಸಂಶೋಧನೆಗೂ ನೆರವಾಗುತ್ತವೆ. ಅಂಥ ಒಂದು ಉದಾಹರಣೆ ೧೯೦೨ರ ನವೆಂಬರ ತಿಂಗಳ `ಸುವಾಸಿನೀ' ಪತ್ರಿಕೆಯಲ್ಲಿ (ಪುಟ-೧೧೬-೧೧೭) ದೊರೆಯುತ್ತದೆ. ಪತ್ರಿಕೆಯಲ್ಲಿ ಒಂದು ಜೋಗುಳದ ಹಾಡನ್ನು ಪ್ರಕಟಿಸುವುದಕ್ಕೆಂದು ಒಬ್ಬ `ಬಾತ್ಮಿದಾರರು' ಕಳುಹಿಸಿ ಕೊಡುತ್ತಾರೆ. ಅದನ್ನು ಪ್ರಕಟಿಸುವಂತೆ ಕೋರುವ ಅವರು, `ಸುವಾಸಿನೀ' ಸಂಪಾದಕರಿಗೆ,ಅಯ್ಯಾ ಪತ್ರಕರ್ತರೆ! ಈ ಜೋಗುಳದ ಹಾಡನ್ನು10 ವರ್ಷಗಳ ಹಿಂದೆ ನಾನು ಎಲ್ಲಿಯೋ ಸಂಪಾದಿಸಿಕೊಂಡೆನು… .. ಇಂತಹ ಜೋಗುಳ ಹಾಡು ಕನ್ನಡದಲ್ಲಿ ಬಹಳ ನೂತನವಾಗಿರುವುದರಿಂದಲೂ, ಬಿಟ್ಟುಹೋದ
ಪಾಠಾಂತರಗಳನ್ನು ಸುವಾಸಿನೀ ಪಾಠಕರಲ್ಲಿ ಯಾರಾದರೂ ಕಳುಹಿಸುವರೆಂಬ ಆಸೆಯಿಂದಲೂ ಇದನ್ನು ನಿಮ್ಮ ಬಳಿಗೆ ಕಳುಹಿಸಿರುತ್ತೇನೆ.. .. ಇದನ್ನು ಕುರಿತು ಏನೊಂದು ಪತ್ರವ್ಯವಹಾರ ನಡೆದರೆ ಅದನ್ನು ನನಗೆ ತಿಳಿಸಬೇಕಾಗಿ ಅಪೇಕ್ಪಿಸುತ್ತೇನೆ.”
ಆ ಪತ್ರಿಕೆಯ ಸಂಪಾದಕರು ಈ ಬಾತ್ಮಿದಾರರು' ಕಳುಹಿಸಿದ ಜೋಗುಳದ ಪದವನ್ನು ಪ್ರಕಟಿಸಿ ಜೊತೆಯಲ್ಲಿ ಈ ಪತ್ರವನ್ನೂ ಮುದ್ರಿಸಿರುವರು. ಈಬಾತ್ಮಿದಾರ’ ಬಹುಶಃ
ಮುದ್ದಣ ಇರಬಹುದು. ಸಾಮಾನ್ಯವಾಗಿ ಮುದ್ದಣ ಕವಿ ಉಪಯೋಗಿಸುತ್ತಿದ್ದ ಉಪಾಯ ಇದು ಎಂದು ಎಸ್.ಅನಂತನಾರಾಯಣ ಹೇಳುತ್ತಾರೆ.15
ವಿಶೇಷಾಂಕಗಳು: ಸಾಹಿತ್ಯಪತ್ರಿಕೆಯೊಂದೇ ಅಲ್ಲ, ಇತರ ಪತ್ರಿಕೆಗಳೂ ಕೆಲವು ವಿಶೇಷ ಸಂದರ್ಭಗಳಲ್ಲಿ ವಿಶೇಷಾಂಕಗಳನ್ನು ಪ್ರಕಟಿಸಿವೆ. ಇವು ಅತ್ಯುತ್ತಮ ಸಾಹಿತ್ಯಕ ಮೌಲ್ಯವನ್ನು ಹೊಂದಿವೆ. ವಿವಿಧ ದಿನ ಪತ್ರಿಕೆಗಳು, ವಾರಪತ್ರಿಕೆಗಳು ದೀಪಾವಳಿ, ಸಂಕ್ರಾಂತಿ, ಯುಗಾದಿ ವಿಶೇಷಾಂಕಗಳನ್ನು ಪ್ರಕಟಿಸುತ್ತಿವೆ. ಇವುಗಳಲ್ಲೆಲ್ಲ ಒಂದೆರಡು ಲೇಖನಗಳಲ್ಲಿ ಗಂಭೀರ ಸಾಹಿತ್ಯ ಚರ್ಚೆ ಇದೆ. ಆಯಾ ಕಾಲದ ಶ್ರೇಷ್ಠ ಕಥೆಗಾರರು, ಕವಿಗಳ ಕಥೆ, ಕವನಗಳು ಇದರಲ್ಲಿ ಇದ್ದುದನ್ನು ಕಾಣಬಹುದು. ಇಂಥ ವಿಶೇಷಾಂಕಗಳನ್ನು ಗಂಭೀರವಾಗಿ ತೆಗೆದುಕೊಂಡು ಸಾಹಿತ್ಯಪತ್ರಿಕೆಗಳಲ್ಲಿ ವಿಮರ್ಶಿಸಲಾಗಿದೆ. ಕುಮಟಾದಿಂದ ಹೊರಡುತ್ತಿದ್ದ ಕರ್ನಾಟಕ ಧುರೀಣ' ಪತ್ರಿಕೆಯು ದೀಪಾವಳಿ ವಿಶೇಷಾಂಕವನ್ನು ಹೊರಡಿಸಿದ್ದನ್ನುವಾಗ್ಭೂಷಣ’15ದಲ್ಲಿ ವಿಮರ್ಶಿಸಲಾಗಿದೆ.
ಕಾವ್ಯ-ಇತಿಹಾಸ -ಕಥೆ - ವ್ಯವಹಾರ- ಜೀವನ ಚರಿತ್ರೆ- ಕಾವ್ಯ ಪರಿಚಯ- ವಿದ್ಯಾಸುಧಾರಣೆ- ಪಾರಮಾರ್ಥಿಕ ವಿಚಾರಗಳು ಮುಂತಾದ ಬಹು ವಿಚಾರಗಳನ್ನು ಬಹುಶ್ರುತರಾದ ವಿದ್ವಾಂಸರಿಂದ ಬರೆಯಿಸಿ ಒಂದೆಡೆಯಲ್ಲಿ ಕಲೆ ಹಾಕಿ ಸುಂದರವಾಗಿ ಮುದ್ರಿಸಿ ಪ್ರಕಟಿಸಿದ ಪ್ರಶಂಸನೀಯವಾದ ಶ್ರೇಯಸ್ಸು ಸಂಪಾದಕರಿಗೆ ಸೇರಿದುದಾಗಿದೆ' ಎಂಬ ಮಾತು ಕೇವಲಕರ್ನಾಟಕ ಧುರೀಣ’ವಷ್ಟೇ ಅಲ್ಲ ಇಂಥ ವಿಶೇಷಾಂಕಗಳ ಸಾಮಾನ್ಯ ಲಕ್ಷಣವನ್ನು ಹೇಳಿದಂತಾಗಿದೆ. ಬಹುಶ್ರುತರಾದ ವಿದ್ವಾಂಸರಿಂದ ಬರೆಯಿಸಿ' ಎಂಬ ಮಾತು ವಿಶೇಷವಾದದ್ದು. ಇಂಥ ವಿಶೇಷಾಂಕಗಳಿಗೆ ಪ್ರಸಿದ್ಧ ಲೇಖಕರಿಗೆ ಪತ್ರ ಬರೆದು ಲೇಖನಗಳನ್ನು ಆಹ್ವಾನಿಸಿ ಪ್ರಕಟಿಸುವುದು ಹಿಂದಿನಿಂದಲೂ ಇದ್ದ ಪದ್ಧತಿಯನ್ನು ಇದು ತೋರಿಸುತ್ತದೆ. ಪತ್ರಿಕೆಗಳು ಇಂಥ ವಿಶೇಷಾಂಕಗಳನ್ನು ಏಕೆ ಹೊರಡಿಸುತ್ತವೆ ಎಂಬ ಬಗ್ಗೆವಾಗ್ಭೂಷಣ’ದಲ್ಲಿ ಬಂದಿರುವ ಈ ಮಾತುಗಳು ಮನನೀಯವಾಗಿವೆ. ವೃತ್ತ ಪತ್ರಿಕೆಗಳು ತಾತ್ಕಾಲಿಕಗಳು; ತಾತ್ಕಾಲಿಕ ವಿಷಯಗಳನ್ನು ಚರ್ಚಿಸಿ ಜನಜಾಗೃತಿಯನ್ನುಂಟುಮಾಡುವುದೇ ಅವುಗಳ ಧ್ಯೇಯವಾಗಿರುವುದರಿಂದ ಕಾವ್ಯೇತಿಹಾಸಾದಿ ನಿತ್ಯ ಸಾಹಿತ್ಯ ಪ್ರಕಟಣೆಗೆ ಅದರಲ್ಲಿ ಅವಕಾಶವಿರುವುದಿಲ್ಲ. ಈ ಕೊರತೆಯನ್ನು ಪೂರೈಸಿಕೊಳ್ಳುವುದಕ್ಕಾಗಿ ಸಂಪಾದಕರು ದೀವಳಿಗೆಯ ಹಬ್ಬದಂತಹ ವಿಶ್ರಾಂತಿಯ ಆನಂದದ ವೇಳೆಯನ್ನು ಕನ್ನಡಿಗರು ಇನ್ನಷ್ಟು ಆನಂದದಲ್ಲಿ ಕಳೆಯಲೆಂದು ಬಯಸಿ, ಈ ಸಂಚಿಕೆಯನ್ನು ಕನ್ನಡಿಗರಿಗೆ ಹಂಚಿದರು. ಹಬ್ಬದ ಹೋಳಿಗೆ, ಮಂಡಿಗೆಗಳಂತಹ ವಿಧವಿಧದ ಭಕ್ಪ್ಯಗಳ ಸೇವನೆಯಿಂದ ತೃಪ್ತರಾಗಿರುವಾಗ ಮನಸ್ಸಿನ ಭಕ್ಪ್ಯಗಳಾದ ಮನಸ್ಸಿಗೆ ಆನಂದದಾಯಕಗಳಾದ ಹಿತಕರವಾದ ಉತ್ತೇಜನಕರವಾದ ಲೇಖನಗಳನ್ನು ಜನತೆಗೆ ಒದಗಿಸಿಕೊಟ್ಟು ಆ ಜನತೆಯ ಸಂಸ್ಕಾರದ ಹೊಸ ಮಾರ್ಗವನ್ನು ಹೂಡಿ ಆ ಮಾರ್ಗದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿರುವುದು ತುಂಬಾ ಪ್ರಶಂಸನೀಯವಾಗಿದೆ. ಅನುಕರಣೀಯವಾಗಿದೆ. ಪ್ರೋತ್ಸಾಹಯೋಗ್ಯವಾಗಿದೆ. ಕರ್ನಾಟಕವು ಅವರಿಗೆ ಕೃತಜ್ಞವಾಗಬೇಕಾಗಿದೆ..' ವಿಶೇಷಾಂಕಗಳ ಅಗತ್ಯ ಮತ್ತು ಮಹತ್ವವನ್ನು ಈ ಮಾತುಗಳಲ್ಲಿ ಖಚಿತವಾಗಿ ಹೇಳಲಾಗಿದೆ. ಇಂಥ ವಿಶೇಷ ಸಂಚಿಕೆಗಳಿಗಾಗಿಯೇ ಕಥಾ ಸ್ಪರ್ಧೆ, ಕಾದಂಬರಿ ಸ್ಪರ್ಧೆ, ಕಾವ್ಯ ಸ್ಪರ್ಧೆಗಳು ನಡೆದು ಹೊಸ ಹೊಸ ಬರೆಹಗಾರರು ದಿನ ಬೆಳಗಾಗುವುದರಲ್ಲಿ ಪ್ರಸಿದ್ಧರಾಗಿದ್ದನ್ನ ಕಾಣುತ್ತೇವೆ. ೧೯೬೫ರಲ್ಲಿ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ತಮ್ಮಸುಗ್ಗಿ’ ಕಥೆಗೆ ಪ್ರಥಮ ಬಹುಮಾನ ಪಡೆದ ಬೆಸಗರಹಳ್ಳಿ ರಾಮಣ್ಣ ತಮಗಾದ ಆನಂದನ್ನು ವರ್ಣಿಸಿದ್ದು ಹೀಗೆ,- ಅಂದು ಬಹು ಕಣ್ಣುಗಳು ನನ್ನನ್ನು ಆಶ್ಚರ್ಯದಿಂದ ನೋಡುತ್ತಿದ್ದವು. ನಾನು ಧಿಮಾಕಿನಿಂದ ಸಿಗರೇಟು ಎಳೆಯುತ್ತ ಸುತ್ತಮುತ್ತ ಜಯಭೇರಿಯ ಗತ್ತಿನಲ್ಲಿ ಕತ್ತು ಕೊಂಕಿಸುತ್ತಾ, ಕಣ್ಣರಳಿಸುತ್ತಾ ಮೆರೆದೆ. ಹೀಗೆ ಅಂಬೆಗಾಲಿಡುತ್ತ ಅಡ್ಡಾಡುತ್ತಿದ್ದ ನಾನು ಧಿಗ್ಗನೆ ಎದ್ದುನಿಂತೆ.' ಇದು ಕೇವಲ ರಾಮಣ್ಣನವರ ಅನುಭವ ಮಾತ್ರವಲ್ಲ. ಇಂಥ ಸ್ಪರ್ಧೆಗಳಲ್ಲಿ ಗೆದ್ದ ಬಹುಶಃ ಎಲ್ಲರ ಅನುಭವವೂ ಹೌದು. ಪ್ರಜಾವಾಣಿ ಕಥಾ ಸ್ಪರ್ಧೆ (೧೯೯೯)ಯ ತೀರ್ಪುಗಾರರಾಗಿದ್ದ ಎಚ್.ಎಸ್. ರಾಘವೇಂದ್ರರಾವ್, ಓ.ಎಲ್.ನಾಗಭೂಷಣಸ್ವಾಮಿ ಆಡಿರುವ ಮಾತುಗಳನ್ನು ಇಲ್ಲಿ ಉಲ್ಲೇಖಿಸಬೇಕು, ``ಸುಮಾರು ನಾಲ್ಕು ದಶಕಗಳಿಂದ ಕನ್ನಡ ಸೃಜನಶೀಲತೆಯನ್ನು ರೂಪಿಸುತ್ತಿರುವ ಹಾಗೂ ನಿರ್ದೇಶಿಸುತ್ತಿರುವ ಶಕ್ತಿಗಳಲ್ಲಿ ಪತ್ರಿಕೋದ್ಯಮ ಕೂಡ ಒಂದು. ಅದರ ಆಕರ್ಷಣೆ, ಅದು ಒಡ್ಡುವ ಸವಾಲುಗಳ ಅನುಸಂಧಾನದಲ್ಲಿ ಹಲವು ಕಥೆಗಾರರು ರೂಪುಗೊಂಡಿದ್ದಾರೆ. ತನ್ನ ಚಿನ್ನದ ಹಬ್ಬದ ಸಡಗರದಲ್ಲಿರುವಪ್ರಜಾವಾಣಿ’ಯು ಸಾಪ್ತಾಹಿಕ ಪುರವಣಿಯಲ್ಲಿ ಮತ್ತು ದೀಪಾವಳಿ ಸಂಚಿಕೆಗಳಲ್ಲಿ ಅಂದಂದಿನ ಸಾಹಿತ್ಯಿಕ ಚಳವಳಿಗಳ ಬಗ್ಗೆ ತಳೆದಿರುವ ನಿಲುವುಗಳು ಹಾಗೂ ನೀಡಿರುವ ಅವಕಾಶಗಳು ಕುತೂಹಲಕಾರಿಯಾಗಿವೆ. ಜನಪ್ರಿಯ ಸಾಹಿತ್ಯದ ರೋಚಕತೆಗೆ ತಮ್ಮನ್ನು ತೆತ್ತುಕೊಳ್ಳದಿರುವ ಪ್ರಯತ್ನವನ್ನು ನಿಯತಕಾಲಿಕಗಳ ವಿಶೇಷ ಸಂಚಿಕೆಗಳಂತೂ ಮಾಡುತ್ತಲೇ ಬಂದಿವೆ. ಇಂಥ ಸಂಚಿಕೆಗಳಲ್ಲಿ ಬರವಣಿಗೆಯ ವಿವಿಧ ಸಾಧ್ಯತೆಗಳನ್ನು ಏಕ ಕಾಲದಲ್ಲಿ ಮಂಡಿಸುವುದರಿಂದ ಆಗುವ ಪರಿಣಾಮಗಳು ಅಧ್ಯಯನಯೋಗ್ಯವಾಗಿವೆ. ದೀಪಾವಳಿ ಕಥಾ ಸ್ಪರ್ಧೆಯೂ ಪ್ರತಿಭೆಯನ್ನು ಗುರುತಿಸುವ, ಕಾಪಾಡಿಕೊಳ್ಳುವ ಕೆಲಸದಲ್ಲಿ ತನ್ನದೇ ಕಾಣಿಕೆ ಸಲ್ಲಿಸಿದೆ.” ಇಲ್ಲಿ ವಾಗ್ಭೂಷಣ'ದಲ್ಲಿ ಬಂದಿರುವ ಅಭಿಪ್ರಾಯವೇ ಬೇರೆ ಮಾತುಗಳಲ್ಲಿ ವ್ಯಕ್ತವಾಗಿದೆ ಅಷ್ಟೇ. ಸಾಹಿತ್ಯಸ್ಪರ್ಧೆಗಳನ್ನು ನಡೆಸುವ ಪತ್ರಿಕೆಗಳ ಪರಿಪಾಠ ಬಹಳ ಹಳೆಯದು. ೧೯೦೨ನೆಯ ಇಸವಿಯಲ್ಲಿ ಮಂಗಳೂರಿನಸುವಾಸಿನೀ’ ಪತ್ರಿಕೆಯ ಸಂಪಾದಕರು ಶ್ರೀಕೃಷ್ಣರಾಜಶ್ರೇಯಃ ಪ್ರಾರ್ಥನೆ' ಎಂಬ ವಸ್ತುವಿನ ಮೇಲೆ ಕವಿತಾ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಇದರಲ್ಲಿಯ ವಿಶೇಷತೆ ಎಂದರೆ ವಿಷಯವನ್ನು ಕೊಟ್ಟು ಸ್ಪರ್ಧೆಯನ್ನು ನಡೆಸಿದ್ದು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮುಖವಾಣಿಯಾದವಾಗ್ಭೂಷಣ’ವು ಈ ರೀತಿ ಬಹುಮಾನ ಘೋಷಿಸಿ ಸ್ಪರ್ಧೆನಡೆಸಿದ ಮೊದಲ ಪತ್ರಿಕೆ. ಕನ್ನಡದಲ್ಲಿ ಕಾದಂಬರಿಗಳು ಅಪರೂಪವಾಗಿವೆ. ಅದು ಇನ್ನಷ್ಟು ಹೆಚ್ಚಬೇಕು ಎಂಬ ಉದ್ದೇಶದಿಂದ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿತ್ತು. ಇನಾಮಿನ ಆಸೆಯಿಂದಲೇ ಗಳಗನಾಥರು ತಮ್ಮ ಮೊದಲ ಸ್ವತಂತ್ರ ಕಾದಂಬರಿ ಪ್ರಬುದ್ಧ ಪದ್ಮ ನಯನೆ' ಬರೆದದ್ದು. ಇದನ್ನು ಪುಸ್ತಕದ ಪ್ರಸ್ತಾವನೆಯಲ್ಲಿ ಸ್ವತಃ ಗಳಗನಾಥರೇ ಹೇಳಿಕೊಂಡಿದ್ದಾರೆ.ಜಯಂತಿ’ ಮಾಸಿಕ ಉತ್ತಮ ಕಥೆ ಯಾವುದು ಎಂಬ ಬಗ್ಗೆ ವಿಮರ್ಶೆಯ ಸ್ಪರ್ಧೆಯನ್ನು ನಡೆಸುತ್ತಿತ್ತು. ಮಯೂರ ಮಾಸ ಪತ್ರಿಕೆಯೂ ಉತ್ತಮ ಕಥಾ ವಿಮರ್ಶೆಗೆ ಬಹುಮಾನ ನೀಡುತ್ತಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇವು ಉತ್ತಮ ವಿಮರ್ಶೆ ರೂಪುಗೊಳ್ಳುವಲ್ಲಿ ತಮ್ಮ ಕಾಣಿಕೆಯನ್ನು ಸಲ್ಲಿಸಿವೆ. ಕರ್ಮವೀರ, ಪ್ರಜಾವಾಣಿ, ಕನ್ನಡಪ್ರಭ, ಸುಧಾ ಮೊದಲಾದವೂ ಕಥಾ ಸ್ಪರ್ಧೆ, ಕಾದಂಬರಿ ಸ್ಪರ್ಧೆ ನಡೆಸಿವೆ, ನಡೆಸುತ್ತಿವೆ. ಈ ಬಹುಮಾನದ ಮೊತ್ತ ಕನ್ನಡಪ್ರಭ'ದಲ್ಲಿ ಹತ್ತು ಸಾವಿರ ರುಪಾಯಿಗೆ ಮುಟ್ಟಿದೆ. ಬಹುಮಾನ ನೀಡುವುದರಲ್ಲಿಯೂ ಸ್ಪರ್ಧೆ ಎಂಬಂತೆವಿಜಯ ಕರ್ನಾಟಕ’ವು ತನ್ನ ಯುಗಾದಿ ಕಥಾ ಸ್ಪರ್ಧೆ-೨೦೦೨ರ ಪ್ರಥಮ ಬಹುಮಾನದ ಮೊತ್ತ ಇಪ್ಪತ್ತೈದು ಸಾವಿರ
ರುಪಾಯಿಯೆಂದು ಘೋಷಿಸಿದೆ. ಇಲ್ಲಿ ಇನಾಮಿನ ಆಸೆ' ಕೆಲಸ ಮಾಡುತ್ತದೆ. ಕನ್ನಡದ ಉತ್ತಮ ಕಥೆಗಾರರು ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇಂಥ ಕಥಾ ಸ್ಪರ್ಧೆಗೆ ಈಗ ಸುಮಾರು ೫೦೦ ಕಥೆಗಳು ಬರುತ್ತಿವೆ. ಈ ಕಥೆಗಳ ಬಗ್ಗೆ ತೀರ್ಪುಗಾರರು ಆಡುವ ಒಟ್ಟಾರೆ ಮಾತುಗಳು ಖಂಡಿತವಾಗಿಯೂ ಪರಿಣಾಮ ಬೀರುತ್ತವೆ. ತಮ್ಮ ಕಥೆಯ ಶೈಲಿ, ವಸ್ತು, ದರ್ಶನ, ಬದ್ಧತೆಗಳನ್ನು ತೀರ್ಪುಗಾರರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಕಥೆಗಾರರು ಬದಲಿಸಿಕೊಂಡರೆ ಆಶ್ಚರ್ಯವೇನಲ್ಲ. ಸಾಹಿತ್ಯಪತ್ರಿಕೆಯಿಂದ ತಾವು ಪ್ರೇರಣೆ ಪಡೆದುದನ್ನು ಮಾಸ್ತಿಯವರೇ ಹೇಳಿಕೊಂಡಿದ್ದಾರೆ.ಸ್ಟ್ಟ್ರಾಂಡ್ ಮ್ಯಾಗಜಿನ್’ ಎಂಬ ಆಂಗ್ಲ ಮಾಸ ಪತ್ರಿಕೆಯನ್ನು ನೋಡಿದ್ದರಿಂದ ತಮಗೆ ಸಣ್ಣ ಕಥೆ ಬರೆಯುವುದಕ್ಕೆ ಪ್ರೇರಣೆ ದೊರೆಯಿತು ಎಂದು ಮಾಸ್ತಿಯವರು ಹೇಳಿದ್ದಾರೆ.17
ಸಾಹಿತ್ಯ ಕೃತಿಗೆ ವಸ್ತು: ಪತ್ರಿಕೆಗಳಲ್ಲಿ ಬರುವ ವರದಿಗಳೂ ಸಾಹಿತ್ಯದ ಮೇಲೆ ಪ್ರಭಾವ ಬೀರಿದ ಉದಾಹರಣೆಗಳಿವೆ. ರಂ.ಶ್ರೀ.ಮುಗಳಿಯವರು ತಮ್ಮ ಅನ್ನ' ಕಾದಂಬರಿಗೆಅನ್ನ’ವನ್ನು ಪಡೆದುಕೊಂಡದ್ದು ಸಂಯುಕ್ತ ಕರ್ನಾಟಕ' ದಿನಪತ್ರಿಕೆಯ ವರದಿಗಳಿಂದ. ಈ ಕಾದಂಬರಿಯ ಪ್ರಸ್ತಾವನೆಯಲ್ಲಿ ಮುಗಳಿಯವರೇ ಇದನ್ನು ಹೇಳಿಕೊಂಡಿದ್ದಾರೆ. ಈ ಕಾದಂಬರಿ ಬಂಗಾಲದ ಭೀಕರ ಬರಗಾಲವನ್ನು ವಸ್ತುವಾಗಿ ಹೊಂದಿದೆ. ಶಿವರಾಮ ಕಾರಂತರಮುಗಿದ ಯುದ್ಧ’ ಕಾದಂಬರಿಗೂ ಪತ್ರಿಕೆಗಳೇ ಪ್ರೇರಣೆ ನೀಡಿವೆ. ಅಸ್ಪೃಶ್ಯತೆ' ಮೊದಲಾದವುಗಳ ಬಗ್ಗೆ ಗಾಂಧೀಜಿಯವರು ಹೊಂದಿದ್ದ ಅಭಿಪ್ರಾಯಕ್ಕೆ ವಿರುದ್ಧವಾಗಿ ಆಲೂರ ವೆಂಕಟರಾಯರುಜಯಕರ್ನಾಟಕ’ದಲ್ಲಿ ಬರೆದ ಲೇಖನಗಳು ಗಳಗನಾಥರ ಕಾದಂಬರಿಗಳಲ್ಲಿ ಅಧ್ಯಾಯಗಳಾಗಿ ಮರುಕಳಿಸುತ್ತವೆ. ಎಷ್ಟೋ
ಬರೆಹಗಾರರು ಪತ್ರಿಕೆಗಳಿಂದ ಈ ರೀತಿಯಲ್ಲಿ ಪ್ರಭಾವ ಪಡೆದಿರುವುದಂತೂ ಸತ್ಯ. ಕೆಲವರು ಹೇಳುತ್ತಾರೆ, ಕೆಲವರು ಸುಮ್ಮನಿರುತ್ತಾರೆ. ಶಿವರುದ್ರ ಕಲ್ಲೋಳಿಕರ ಅವರ ಹೊಲಗೇರಿಯ ರಾಜಕುಮಾರ' ಕೃತಿಗೆಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಬಂದ ಒಂದು ವರದಿ ಕಾರಣ ಎಂದು ಅವರೇ ಹೇಳಿಕೊಂಡಿದ್ದಾರೆ.
ಕನ್ನಡ ಪತ್ರಿಕೋದ್ಯಮವು ಆಧುನಿಕ ಕನ್ನಡ ಸಾಹಿತ್ಯದ ಪ್ರಾರಂಭದಲ್ಲಿ ಗದ್ಯ ಸಾಹಿತ್ಯಕ್ಕೆ ಒಂದು ರೂಪ, ಪರಂಪರೆ ಒದಗಿಸಿ ಅದು ಬೆಳೆದು ಬರುವಲ್ಲಿ ಎಲ್ಲ ರೀತಿಯ ನೆರವು ನೀಡಿತು; ಕಾದಂಬರಿ, ಕಥೆ, ಕವನ, ಪ್ರಬಂಧ, ಹಾಸ್ಯ ಮೊದಲಾಗಿ ವಿವಿಧ ಸಾಹಿತ್ಯ ಪ್ರಕಾರಗಳು ತನ್ಮೂಲಕ ಪ್ರಚುರಗೊಳ್ಳುವಂತೆ ಮಾಡಿತು; ವೈದ್ಯಕೀಯ- ವಿಜ್ಞಾನ ಸಾಹಿತ್ಯದ ಬೆಳವಣಿಗೆಯಲ್ಲಿ ಮುಖ್ಯವಾದ ಪಾತ್ರವನ್ನು ನಿರ್ವಹಿಸಿತು. ಜನಸಾಮಾನ್ಯರಿಗೆ ತಿಳಿಸಿಕೊಡಬೇಕು ಎಂಬ ಅರಿವಿನಿಂದ ಬಂದ ಬರೆಹಗಳು ಪ್ರಾದೇಶಿಕ ಸಾಹಿತ್ಯದ ಬೆಳವಣಿಗೆಗೆ ಕಾರಣವಾಯಿತು. ಪುಸ್ತಕ ಪ್ರಕಟಣೆ ಕಷ್ಟಕರವಾಗಿದ್ದ ಕಾಲದಲ್ಲಿ ಪ್ರಕಾಶಕರ ಸ್ಥಾನವನ್ನು ಕನ್ನಡ ಪತ್ರಿಕೋದ್ಯಮವು ತುಂಬಿ ಜನತೆಗೆ ಸಾಹಿತ್ಯ ತಲುಪುವಂತೆ ಸಾಹಿತ್ಯ ಪ್ರಸಾರದ ಏಕಮೇವ ಸಾಧನವಾಗಿ ಪತ್ರಿಕೋದ್ಯಮ ಕೆಲಸ ಮಾಡಿತು.
ಕೇವಲ ಸಾಹಿತ್ಯಪತ್ರಿಕೆಗಳಲ್ಲ, ಇತರ ಪತ್ರಿಕೆಗಳೂ, ಒಟ್ಟಾರೆ ಪತ್ರಿಕೋದ್ಯಮವೇ ಸಾಹಿತ್ಯ ಪೋಷಣೆ ಮಾಡಿದ ರೀತಿ ಇದು. ದಿನ ಪತ್ರಿಕೆಗಳಲ್ಲಿ ಪ್ರಜಾವಾಣಿ' ಹೊಸತನವನ್ನು ತಂದಿತು. ಸಾಹಿತಿ ಬಿ.ಪುಟ್ಟಸ್ವಾಮಯ್ಯ, ಟಿ.ಎಸ್.ರಾಮಚಂದ್ರರಾವ್, ಇ.ಆರ್.ಸೇತುರಾಂ, ವೈ.ಎನ್.ಕೆ. ಮೊದಲಾದವರು ಇದಕ್ಕೆ ಕಾರಣರು. ಕಥೆಗಾರ ಜಿ.ಎಸ್.ಸದಾಶಿವ ಕೂಡ ಅಲ್ಲಿದ್ದೇ ನಂತರಕನ್ನಡಪ್ರಭ’ಕ್ಕೆ ಬಂದವರು. ಇವರೆಲ್ಲರಿಂದಾಗಿ ನವ್ಯ ಸಾಹಿತ್ಯದ ಆರಂಭ ಕಾಲದಲ್ಲಿ ಅದಕ್ಕೆ ಅಗತ್ಯವಾಗಿದ್ದ ಬೆಂಬಲ ದೊರೆಯಿತು. ಹೊಸಹೊಸ ವಾಗ್ವಾದ, ಚರ್ಚೆ ಇತ್ಯಾದಿಗಳನ್ನು ಪ್ರಜಾವಾಣಿ' ಹುಟ್ಟುಹಾಕಿತು. ಶೀಲ-ಅಶ್ಲೀಲದ ಬಗ್ಗೆ ಅನಕೃ- ನಿರಂಜನರ ನಡುವೆ ನಡೆದ ವಾಗ್ವಾದಕ್ಕೆ ಈ ಪತ್ರಿಕೆ ವೇದಿಕೆಯಾಯಿತು. ಇತ್ತೀಚೆಗೆ ಇದರಲ್ಲಿ ಬರುತ್ತಿರುವಸಾಹಿತ್ಯ ಸಂವಾದ’ ಸಾಹಿತ್ಯ ಕೃತಿಯ ಗಂಭೀರವಾದ ವಿಮರ್ಶೆಯನ್ನು ಒಳಗೊಂಡಿದೆ. ವಾರಪತ್ರಿಕೆಯಲ್ಲಿ ಒಂದಾದ ಜನಪ್ರಗತಿ'ಯಲ್ಲಿ ಗೌರೀಶ ಕಾಯ್ಕಿಣಿಯವರು ಗೋಪಾಲಕೃಷ್ಣ ಅಡಿಗರ ಒಂದೊಂದು ಕವನವನ್ನು ವಿಮರ್ಶಿಸಿರುವ ರೀತಿ ಅಡಿಗರ ಕಾವ್ಯಾಭ್ಯಾಸಕ್ಕೆ ಮೆಟ್ಟಿಲಾಗಿದೆ. ಟ್ಯಾಬೋಲಾಯ್ಡ್ ಪತ್ರಿಕೋದ್ಯಮಕ್ಕೆ ಹೊಸ ರೂಪವನ್ನು ನೀಡಿದಲಂಕೇಶ ಪತ್ರಿಕೆ’ ಹೊಸಬರೆಹಗಾರರ ದೊಡ್ಡ ಪಡೆಯನ್ನೇ ಪರಿಚಯಿಸಿತು. ಲಂಕೇಶ ಪತ್ರಿಕೆ'ಯ ದೊಡ್ಡ ಕೊರತೆ ಎಂದರೆ ಅದು ವಾಗ್ವಾದಗಳಿಗೆ ವಿಮುಖವಾದದ್ದು. ಅಲ್ಲಿ ಅಭಿಪ್ರಾಯ ಮಂಡನೆಯಾಗುತ್ತಿತ್ತೇ ಹೊರತು ಚರ್ಚೆ ನಡೆಯುತ್ತಿರಲಿಲ್ಲ. ಪತ್ರಿಕೆಯ ಹಲವು ಸಾಧ್ಯತೆಗಳಲ್ಲಿ ಕೈಬರೆಹದ ಪತ್ರಿಕೆಯೂ ಒಂದು. ಕನ್ನಡದ ಮೊದಲ ಪತ್ರಿಕೆಮಂಗಳೂರು ಸಮಾಚಾರ’ದ ಮೊದಲ ನಾಲ್ಕಾರು ಸಂಚಿಕೆಗಳು ಕೈ ಬರೆಹದಲ್ಲಿಯೇ ಬಂದಿದ್ದವು. ಇಂಥ ಪ್ರಯೋಗ ಈಗಲೂ ನಡೆಯುತ್ತಿವೆ. ಶಾಲೆ- ಕಾಲೇಜುಗಳಲ್ಲಿ ಮಕ್ಕಳ ಸೃಜನಾತ್ಮಕತೆಯನ್ನು ಹೊರಗೆಡವಲು ಇಂಥ ಕೈ ಬರೆಹದ ಪತ್ರಿಕೆಗಳನ್ನು ಹೊರತರುತ್ತಿದ್ದುದು ಇದೆ. ದ.ರಾ.ಬೇಂದ್ರೆಯವರೂ ಗೆಳೆಯ' ಎಂಬ ಕೈಬರೆಹದ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಬಸವರಾಜ ಕಟ್ಟಿಮನಿಯವರು ಬೆಳಗಾವಿಯಲ್ಲಿ ಕೆಲವು ಗೆಳೆಯರೊಂದಿಗೆ ಸೇರಿಕೊಂಡು ಒಂದು ಕೈ ಬರೆಹದ ಪತ್ರಿಕೆ ಹೊರಡಿಸುತ್ತಿದ್ದರು ಎನ್ನಲಾಗಿದೆ. (ಬಹುಶಃ ಇದರ ಹೆಸರುಬಾವುಟ’ಎಂದಿರಬೇಕು.) ಈ ಪತ್ರಿಕೆ ಹೊರಡಿಸುತ್ತಿದ್ದ ಸಂಘದ ಹೆಸರು ನಾಡ ನರಿಗಳ ಸಂಘ' ಎಂಬುದಾಗಿತ್ತು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಾವಿಗೀಡಾದ ಕನ್ನಡ ಸಾಹಿತ್ಯದ ಪ್ರತಿಭಾವಂತ ಲೇಖಕರಲ್ಲಿ ಒಬ್ಬರಾಗಿದ್ದ ಯರ್ಮುಂಜ ರಾಮಚಂದ್ರ(೧೯೩೩-೫೫) ಅವರೂ ಸುಮಾರು ಐದು ವರ್ಷಗಳ ಕಾಲಪಾಂಚಜನ್ಯ’ ಎಂಬ ಕೈ ಬರೆಹದ ಪತ್ರಿಕೆ ನಡೆಸುತ್ತಿದ್ದರು. ಇದು ಗೆರೆಗಳಿಲ್ಲದ ನೂರು ಪುಟಗಳ ಎಕ್ಸರ್‌ಸೈಜ್ ಪುಸ್ತಕದಲ್ಲಿ ಕೆಂಪು ಬಣ್ಣದ ಪೆನ್ಸಿಲ್ಲಿನಿಂದ, ಕೆಲವು ಸಲ ನೇರಳೆ ಬಣ್ಣದ ಪೆನ್ಸಿಲ್ಲಿನಿಂದ ಬಾರ್ಡರ್ ಕಟ್ಟಿ ಅದರಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಪತ್ರಿಕೆಯ ಬಹುಪಾಲು ರಾಮಚಂದ್ರರ ಅಕ್ಷರಗಳಲ್ಲಿಯೇ ಇದೆ. ಇದರ ಸಂಪಾದಕರು ಯರ್ಮುಂಜ ರಾಮಚಂದ್ರರು ಮತ್ತು ಪಿ.ಎಸ್.ರಾಮ. ಪಿ.ಎಸ್.ರಾಮ ಅವರ ಪೂರ್ತಿಹೆಸರು ಪಿ.ಎಸ್.ರಾಮಶಾಸ್ತ್ರಿ ಎಂದಾಗಿತ್ತು. ಮುಖಪುಟವನ್ನು ಆಕರ್ಷಕ ಮಾಡುವ ಉದ್ದೇಶದಿಂದ ಬೇರೆ ಹಾಳೆಯಲ್ಲಿ ಚಿತ್ರ ಬರೆದು ಅದಕ್ಕೆ ಅಂಟಿಸುತ್ತಿದ್ದರು. ಪತ್ರಿಕೆಯ ಹೆಸರು, ಪ್ರಕಟಣೆಯ ತಿಂಗಳು ಮತ್ತು ವರ್ಷ ಇವುಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ನಮೂದಿಸಲಾಗುತ್ತಿತ್ತು. ಹಿಂಬದಿಯ ಪುಟದಲ್ಲಿ ರಾಷ್ಟ್ರ ನಾಯಕರ ವ್ಯಂಗ್ಯಚಿತ್ರ, ಅವರ ಬಗ್ಗೆ ಒಂದೆರಡು ವಾಕ್ಯದ ವಿವರಣೆ ಇರುತ್ತಿತ್ತು. ಇವುಗಳನ್ನು ಶಂಕರ್ಸ್‌ ವೀಕ್ಲಿಯಿಂದ ಎತ್ತಿಕೊಳ್ಳಲಾಗುತ್ತಿತ್ತು. ಇವುಗಳನ್ನು ಎಷ್ಟು ಸಂಖ್ಯೆಯಲ್ಲಿ ಹೊರತರುತ್ತಿದ್ದರು ಎಂಬುದು ತಿಳಿದಿಲ್ಲ. ಇದಕ್ಕೆ ಕನ್ನಡದ ಅನೇಕ ಗಣ್ಯ ಲೇಖಕರು ಬರೆಹಗಳನ್ನು ನೀಡಿರುವುದು ಮಹತ್ವದ್ದು. ತೀರ ಇತ್ತೀಚೆಗೆ ನಾನು ಕಂಡದ್ದು ಹುಬ್ಬಳ್ಳಿಯ ಕೆಲವು ಗೆಳೆಯರು ಸೇರಿಕೊಂಡು ಹೊರಡಿಸುತ್ತಿರುವ ಒಡಲಾಳ'. ದಲಿತ ಸಂವೇದನೆಯ ಬರೆಹಗಳನ್ನು ಒಳಗೊಂಡಿರುವ ಈ ಪತ್ರಿಕೆ ಖಾಸಗಿ ಪ್ರಸಾರಕ್ಕಾಗಿ ಇದೆ. ಇದು ದಲಿತ ಬರೆಹಗಾರರಿಗೆ ಸೈದ್ಧಾಂತಿಕ ನೆಲೆಗಟ್ಟನ್ನು ಒದಗಿಸಲು ಯತ್ನಿಸುತ್ತಿದೆ. ಬೇಂದ್ರೆಯವರು ಧಾರವಾಡದ ರಾಷ್ಟ್ರೀಯ ವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾಗ ಶಾಲೆಯ ಬಾಲಕರೇಕಾವ್ಯಸೇವೆ’ ಎಂಬ ಕೈಬರೆಹದ ಪತ್ರಿಕೆ ಹೊರಡಿಸಲು ಪ್ರೋತ್ಸಾಹ ನೀಡಿದರು. ಆ ಮೂಲಕ ಮಕ್ಕಳು ಕವಿತೆಯ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಿದರು. ಹರ್ಡೆಕರ ಮಂಜಪ್ಪನವರೂ ಆಲಮಟ್ಟಿಯಿಂದ ವಿದ್ಯಾಲಯ' ಪತ್ರಿಕೆ ಎಂಬ ವಾರಪತ್ರಿಕೆ ಹಾಗೂಬಾಲ ಸಂಗಯ್ಯ’ ಎಂಬ ಮಾಸಿಕವನ್ನು ಕೈ ಬರೆಹದಲ್ಲಿ ಪ್ರಕಟಿಸುತ್ತಿದ್ದರು. ಹ.ಕ.ರಾಜೇಗೌಡ ಅವರು ಮೈಸೂರಿನಲ್ಲಿ ಲೇಖಕ' ಹೆಸರಿನ ಕೈಬರೆಹದ ಪತ್ರಿಕೆ ಪ್ರಕಟಿಸಿದ್ದರು. ಇದರಲ್ಲಿ ಅವರು ಏಕೀಕರಣಕ್ಕೆ ಎದುರಾದ ವಿರೋಧವನ್ನು ಖಂಡಿಸಿ ಸಂಪಾದಕೀಯವನ್ನು ಬರೆದಿದ್ದರು. ಪಿ.ಆರ್.ತಿಪ್ಪೇಸ್ವಾಮಿ ಮತ್ತು ಹೇಮದಳ ರಾಮದಾಸ ಅವರು ಸೇರಿಕೊಂಡುಕಲಾಕ್ಪೇತ್ರ’ ಎಂಬ ಕೈಬರೆಹದ ಪತ್ರಿಕೆಯನ್ನು ಮೈಸೂರಿನಲ್ಲಿಯೇ ಆರಂಭಿಸಿದ್ದರು. ಇವೆಲ್ಲ ಸೃಷ್ಟಿ ಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿಯೇ ಹೊರ ಬಂದ ಪತ್ರಿಕೆಗಳಾಗಿವೆ. ಇವುಗಳ ವ್ಯಾಪ್ತಿ ಕಿರಿದಾದರೂ ಅವನ್ನು ಚಾರಿತ್ರಿಕವಾಗಿ ನಿರ್ಲಕ್ಷಿಸಲು ಆಗದು.
ಪತ್ರಿಕೆಗಳು ತಮ್ಮ ಜವಾಬ್ದಾರಿಯನ್ನು ಎಲ್ಲ ಸಂದರ್ಭದಲ್ಲಿಯೂ ಸರಿಯಾಗಿ ನಿರ್ವಹಿಸಿವೆಯೇ ಎಂದರೆ ಇಲ್ಲವೆಂದೇ ಹೇಳಬೇಕು. ಕೆಲವೊಮ್ಮೆ ಇವು ಪಕ್ಪಪಾತದ ಹಾದಿ ಹಿಡಿದಿರುವುದು, ಗುಂಪುಗಾರಿಕೆಗೆ ಒಳಗಾದುದನ್ನು ಕಾಣಬಹುದಾಗಿದೆ. ಚರ್ಚೆ, ವಾಗ್ವಾದ, ಪ್ರತಿಕ್ರಿಯೆ ಮೊದಲಾದ ಅಂಕಣಗಳಲ್ಲಿ ಹೊಸ ವಿಚಾರಗಳ ಉಗಮಕ್ಕೆ ದಾರಿ ಮಾಡಿಕೊಡುತ್ತಿದ್ದ ಪತ್ರಿಕೆಗಳು ಕೆಲವೊಮ್ಮೆ ಮುಗ್ಗರಿಸಿದ್ದೂ ಇವೆ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ಕೊಡಬಹುದು. ಕುವೆಂಪು ಅವರು ತಮ್ಮ ಮಗ ತೇಜಸ್ವಿಯವರ ಅಂತರ್‌ಜಾತೀಯ ವಿವಾಹಕ್ಕೆ ವಿರೋಧವಾಗಿದ್ದರು ಎಂದು ಒಂದು ಮಾಸಿಕ ಪತ್ರಿಕೆಯಲ್ಲಿ ಒಬ್ಬರು ಬರೆದಿದ್ದರಂತೆ. ಇದು ಕುವೆಂಪು ಅವರು ನಿಧನರಾದ ನಂತರ ಬಂದ ಲೇಖನ. ಇದು ಸುಳ್ಳು, ಕುವೆಂಪು ಅವರೇ ಸ್ವತಃ ನಿಂತು, ಮಂತ್ರ ಮಾಂಗಲ್ಯ ಓದಿ, ತಾಳಿ ಕಟ್ಟಿಸಿದ್ದಕ್ಕೆ ನಾನೇ ಸಾಕ್ಪಿ. ಒಬ್ಬ ವ್ಯಕ್ತಿಯ ನಿಧನಾನಂತರ ಅವರ ಚಾರಿತ್ಯ್ರವಧೆ ಮಾಡುವುದು ಅತ್ಯಂತ ಹೀನ ಅಭಿರುಚಿ' ಎಂದು ಆ ಪತ್ರಿಕೆಗೆ ತೇಜಸ್ವಿಯವರ ಪತ್ನಿ ರಾಜೇಶ್ವರಿಯವರು ಬರೆಯುತ್ತಾರೆ. ಆ ಪತ್ರಿಕೆಯ ಸಂಪಾದಕರು ಅದನ್ನು ಪ್ರಕಟಿಸಲಿಲ್ಲವಂತೆ. ವಿಜಯ ಕರ್ನಾಟಕ ಪತ್ರಿಕೆಯ ೨೧-೭-೨೦೦೨ರ ಸಂಚಿಕೆಯ ಸಂದರ್ಶನವೊಂದರಲ್ಲಿ ಸ್ವತಃ ರಾಜೇಶ್ವರಿಯವರೇ ಇದನ್ನು ಹೇಳಿದ್ದಾರೆ. ಇದು ಕುವೆಂಪುರವರ ಮೇಲೆ ಕೆಲವರು ನಡೆಸುತ್ತಿರುವ ವ್ಯವಸ್ಥಿತ ಪಿತೂರಿಯ ಭಾಗವಲ್ಲದೆ ಮತ್ತೇನೂ ಅಲ್ಲ. ಕನ್ನಡದಲ್ಲಿ ಸಾಹಿತ್ಯ ವಿಮರ್ಶೆ ಈ ಮಟ್ಟಕ್ಕೆ ಇಳಿದಿರುವುದರಿಂದಲೇ ಬರೆಹಗಾರರು ಮತ್ತು ಓದುಗರು ಇಬ್ಬರೂ ವಿಮರ್ಶೆಯನ್ನು ಅಲಕ್ಪಿಸಿದ್ದಾರೆ. ಇಡೀ ಜೀವಮಾನವೆಲ್ಲ ಜಾತ್ಯತೀತ ಸಮಾಜಕ್ಕಾಗಿ ಹೋರಾಡಿದ ವ್ಯಕ್ತಿಯೊಬ್ಬರ ಮೇಲೆ ಇಂಥ ಸುಳ್ಳು ಸುದ್ದಿ ಹಬ್ಬಿಸಿದರೆ ಅವರನ್ನು ಸುಲಭವಾಗಿ ಅಪಮೌಲ್ಯಗೊಳಿಸಬಹುದು ಎಂಬುದು ಇವರ ಉದ್ದೇಶ ಎಂಬ ಅಭಿಪ್ರಾಯವನ್ನು ತಳ್ಳಿಹಾಕಲು ಆಗುವುದಿಲ್ಲ. ಕನ್ನಡಪ್ರಭದ ವಾರದ ಪುರವಣಿ(೨೧-೭-೨೦೦೨)ಯವಾಗ್ವಾದ’ ಅಂಕಣದಲ್ಲಿ ವೆಂಕಟರಮಣಗೌಡ ಅವರು ಪತ್ರಿಕೆಗಳಲ್ಲಿ ಲೇಖನಗಳು ಹೇಗೆ ಆಯ್ಕೆಗೊಳ್ಳುತ್ತವೆ ಎಂಬುದನ್ನು ವಿವರಿಸುತ್ತ, ಕೇವಲ ನಾಮಬಲದ ಮೇಲೆಯೇ ಕೆಲವು ಪ್ರಕಟಣೆಗೆ ಅರ್ಹವಾಗುತ್ತವೆ ಎಂದು ಹೇಳಿದ್ದಾರೆ. ಈ ವಾಗ್ವಾದ ಅಂಕಣದ ಭಾಷೆ ಬಹಳ ಪ್ರಚೋದನಕಾರಿಯಾಗಿದೆ. ಇದು ಒಂದು ವಿಷಯದಲ್ಲಿ ವಾಗ್ವಾದವನ್ನು ಮುಂದುವರಿಸುವ ಉದ್ದೇಶದಿಂದಲೇ ಉದ್ದೇಶಪೂರ್ವಕವಾಗಿ ಬಳಸಿದ ಭಾಷೆಯಾಗಿದೆ. `ನಾಡಿಗರು ಬರೆದದ್ದು ಅಂತ ತಿಳಿಯದೇ ಹೋದರೆ ಅವರ ಪಂಚಭೂತಗಳು ಕವನವನ್ನು ಯಾರಾದರೂ ಪ್ರಕಟಿಸುತ್ತಾರಾ? ಎಂಬ ಪ್ರಶ್ನೆ ಪತ್ರಿಕೆಗಳ ವಿಶ್ವಾಸಾರ್ಹತೆಯನ್ನೂ ಪ್ರಶ್ನಿಸುತ್ತದೆ.

೨. ಇತಿಹಾಸ: ಕನ್ನಡದ ಸಂದರ್ಭದಲ್ಲಿ ಸಾಹಿತ್ಯಪತ್ರಿಕೆಗಳ ಆರಂಭವನ್ನು ತಿಳಿಯಲು ಕನ್ನಡ ಪತ್ರಿಕೋದ್ಯಮದ ಆರಂಭಕ್ಕೇ ಹೋಗಬೇಕಾಗುತ್ತದೆ. ಹೊಸಗನ್ನಡದ ಉದಯ ಕಾಲದಲ್ಲಿ ಇದ್ದ ಪತ್ರಿಕೆಗಳೆಲ್ಲವೂ ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿಯೇ ಕೆಲಸ ಮಾಡಿದವು. ಮುದ್ರಣ ಯಂತ್ರವನ್ನು ಕಂಡು ಹಿಡಿಯುವ ಪೂರ್ವದಲ್ಲಿಯ ಸಾಹಿತ್ಯ ಸೃಷ್ಟಿಗೂ ಮುದ್ರಣ ಯಂತ್ರವನ್ನು ಕಂಡುಹಿಡಿದ ಮೇಲಿನ ಸಾಹಿತ್ಯ ಸೃಷ್ಟಿಗೂ ವ್ಯತ್ಯಾಸ ಇರುವುದನ್ನು ಗಮನಿಸಬಹುದು.
ರಾಜಾಶ್ರಯದಲ್ಲಿ ಬೆಳೆದ ಹಳಗನ್ನಡದ ಸಾಹಿತ್ಯದ ಶ್ರೋತೃವರ್ಗ ರಾಜಾಸ್ಥಾನದಲ್ಲಿಯ ಪಂಡಿತರುಗಳೇ ಆಗಿದ್ದರು. ಕಾವ್ಯ ರಚನಕಾರ ಉದ್ದೇಶ ಆ ಪಂಡಿತರನ್ನು ಮೆಚ್ಚಿಸುವ ನಿಟ್ಟಿನಲ್ಲಿ ಇರುತ್ತಿದ್ದವು. ಸಹೃದಯನು ರಚನಾಕಾರನಿಗೆ ಗೌಣ. ಆದರೆ ಯುರೋಪಿನ ಕೈಗಾರಿಕೆ ಕ್ರಾಂತಿಯ ಮಂಥನದ ನವನೀತ ಮುದ್ರಣ ಯಂತ್ರವು ಸಾಮಾನ್ಯ ಓದುಗನನ್ನು ರೂಪಿಸಿತು. ಯಾರೀತ ಸಾಮಾನ್ಯ ಓದುಗ? ಈತನಿಗೂ ಕೃತಿಕಾರನಿಗೂ ಎಂಥ ಸಂಬಂಧ? ಸಾಮಾನ್ಯ ಓದುಗ ಪಡೆ ಕಳೆದ ಶತಮಾನದಲ್ಲಿ ಹುಟ್ಟಿಕೊಂಡಿತು. ಬ್ರಿಟಿಷ್ ಆಡಳಿತದ ಬಳುವಳಿಯಾಗಿ ಬಂದ ಹೊಸ ಶಿಕ್ಪಣ ಕ್ರಮ, ಹೊಸ ಶಿಕ್ಪಣವನ್ನು ಪೆಡೆದುಕೊಂಡ ಕಾರಣಕ್ಕಾಗಿಯೇ ಗಳಿಸಿದ ನೌಕರಿ ಇವುಗಳಿಂದ ತಾವೇ ಮನೆಯಲ್ಲಿ ಓದಿಕೊಳ್ಳಬಲ್ಲ' ಓದುಗರ ಪಡೆಯೊಂದು ತಯಾರಾಗುತ್ತದೆ. ಇವರು ಮದ್ಯಮ ವರ್ಗದವರು. ನಗರವಾಸಿಗಳು. ನೌಕರಿ ಮುಗಿಸಿದ ಮೇಲೆ ಬಿಡುವಿನ ವೇಳೆಯನ್ನು ಓದಿನಲ್ಲಿ ಕಳೆಯಬೇಕು ಎಂಬ ಇಚ್ಛೆ ಹೊಂದಿದವರು ಇವರು. ಇಂಥವರಿಗೆ ಪದ್ಯಕ್ಕಿಂತ ಗದ್ಯದಲ್ಲಿಯೇ ಆಸಕ್ತಿ ಹೆಚ್ಚು. ಹೀಗಾಗಿ ಸಾಹಿತ್ಯ ರಚನೆಯಲ್ಲಿ ಗದ್ಯಕ್ಕೆ ಪ್ರಾಧಾನ್ಯ ಬಂದಿತು. ಹೊಸಗನ್ನಡದ ಆರಂಭ ಕಾಲದಲ್ಲಿ ಬದುಕಿದ್ದೂ ಹಳೆಗನ್ನಡದಲ್ಲಿ ಕೃತಿ ರಚಿಸಿದ ಮುದ್ದಣ ಕೂಡಗದ್ಯಂ ಹೃದ್ಯಂ ಪದ್ಯಂ ವದ್ಯಂ, ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು’ ಎಂದು ಮನೋರಮೆಯ ಮೂಲಕ ಗದ್ಯದ ಮೇಲ್ಮೆಯನ್ನು ಹೇಳಿರುವನು.
ಈ ಸಾಮಾನ್ಯ ಓದುಗನ ತೃಷೆಯನ್ನು ಹಿಂಗಿಸಲು ಹೊಸಗನ್ನಡದ ಆರಂಭದ ಕಾಲದ ಲೇಖಕರು ಪ್ರಯತ್ನಿಸಿದರು. ಸಂಸ್ಕೃತ- ಇಂಗ್ಲಿಷ್‌ಗಳಿಂದ ಭಾಷಾಂತರ, ರೂಪಾಂತರ ಮಾಡಿ ಕಥೆ, ಕಾದಂಬರಿ, ಕಾವ್ಯಗಳನ್ನು ಕನ್ನಡದಲ್ಲಿ ತಂದರು. ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಾಧ್ಯವಾಗದ್ದನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದರು. ಮಾಸಿಕ ಗ್ರಂಥಾವಳಿಗಳು, ಕಾವ್ಯಮಂಜರಿಗಳು ಪ್ರಕಟಗೊಳ್ಳುತ್ತಿದ್ದವು.
ಕನ್ನಡದ ಮೊದಲ ಪತ್ರಿಕೆಯೇ ಸಾಹಿತ್ಯವನ್ನು ಪೋಷಿಸುವ, ಪ್ರಚಾರಪಡಿಸುವ ಕಾರ್ಯವನ್ನು ನಡೆಸಿತು. ಪತ್ರಿಕೆ ಒಂದು ಉದ್ಯಮದ ರೂಪವನ್ನು ಪಡೆಯದೆ ಇದ್ದ ಆರಂಭದ
ಕಾಲದಲ್ಲಿ ಪತ್ರಿಕೆ ನಡೆಸಿ ಹಣ ಮಾಡಬೇಕು ಎನ್ನುವುದು ಪತ್ರಿಕೆ ನಡೆಸುವವರ ಉದ್ದೇಶವಾಗಿರಲಿಲ್ಲ. ಕೆಲವರಿಗೆ ಅಂದರೆ ಕ್ರೈಸ್ತ ಮಿಶಿನರಿಗಳಿಗೆ ತಮ್ಮ ಧರ್ಮದ ಪ್ರಸಾರ ನಡೆಸಬೇಕು ಎಂಬ ಬಯಕೆ. ಕ್ರೈಸ್ತ ಮಿಶಿನರಿಗಳು ತಮ್ಮ ಧರ್ಮದ ಪ್ರಚಾರ ಮಾಡುತ್ತ ಇನ್ನೊಂದು ಧರ್ಮವನ್ನು ಟೀಕಿಸತೊಡಗಿದಾಗ ಹಿಂದುಗಳೂ ತಮ್ಮ ಧರ್ಮದ ಸಮರ್ಥನೆಗೆ ಪತ್ರಿಕೆ ನಡೆಸಲು ಮುಂದಾದರು. ಪಾಶ್ಚಾತ್ಯ ಶಿಕ್ಪಣದ ಪ್ರಭಾವದಿಂದ ಸಮಾಜದಲ್ಲಿಯ ಮೂಢ ನಂಬಿಕೆಗಳು, ಕಂದಾಚಾರಗಳ ವಿರುದ್ಧ ಸಿಡಿದೆದ್ದ ಹೊಸ ಮನಸ್ಸು ಸಮಾಜ ಸುಧಾರಣೆಯ ಉದ್ದೇಶವನ್ನಿಟ್ಟುಕೊಂಡು ಪತ್ರಿಕೆ ನಡೆಸಲು ಮುಂದಾಯಿತು. ಬ್ರಿಟಿಷ್ ಆಡಳಿತದ ನ್ಯೂನತೆಗಳನ್ನು ಎತ್ತಿ ತೋರಿಸಲು ಕೆಲವು ಪತ್ರಿಕೆಗಳು ಹುಟ್ಟಿಕೊಂಡರೆ, ಸ್ವಾತಂತ್ಯ್ರ ಚಳವಳಿಯ ಪ್ರಚಾರಕ್ಕೆ ಇನ್ನೂ ಕೆಲವು ಪತ್ರಿಕೆಗಳು ಹುಟ್ಟಿಕೊಂಡವು. ಕ್ರೈಸ್ತ ಪಾದ್ರಿಗಳು ಕೇವಲ ಹಿಂದು ಧರ್ಮವನ್ನಷ್ಟೇ ಅಲ್ಲ ಮುಸ್ಲಿಂ ಧರ್ಮವನ್ನೂ ಖಂಡಿಸಿ ಬರೆದರು. ಹಿಂದೂ ಧರ್ಮದ ಸಮರ್ಥನೆಗೆ ಗ್ರಂಥಗಳು ಪತ್ರಿಕೆಗಳು ಹುಟ್ಟಿಕೊಂಡ ಹಾಗೆ ಜೈನ ಧರ್ಮದ
ಪತ್ರಿಕೆಗಳೂ ಬಂದವು. ವೀರಶೈವರೂ ತಮ್ಮ ತತ್ವ ಪ್ರಸಾರಕ್ಕೆ ಪ್ರಾಚೀನ ಗ್ರಂಥಗಳ ಪ್ರಕಟಣೆಗೆ ಪತ್ರಿಕೆಗಳನ್ನು ಹೊರಡಿಸಿದರು.
ಇಂಥ ಸಂದರ್ಭದಲ್ಲಿಯೂ ಕೇವಲ ಸಾಹಿತ್ಯದ ಪ್ರಕಟಣೆ ಪ್ರಚಾರಕ್ಕಾಗಿಯೇ ಕೆಲವು ಪತ್ರಿಕೆಗಳು ಹುಟ್ಟಿಕೊಂಡವು. ಸಾಹಿತ್ಯವನ್ನೂ ಸಾಂಸ್ಕೃತಿಕ ನೆಲೆಯಲ್ಲಿ ಪರಿಭಾವಿಸಿದಾಗ ಈ ಮೊದಲು ಹೇಳಿದ ಪತ್ರಿಕೆಗಳೆಲ್ಲವೂ ಸಮಾಜದಲ್ಲಿ ಒಂದು ಹೊಸ ಸಂವಾದವನ್ನು ಹುಟ್ಟುಹಾಕಿ ಹೊಸ ಚಿಂತನೆಗೆ ಇಂಬು ನೀಡಿದವು. ಇದು ಸಾಹಿತ್ಯದಲ್ಲಿ ಹೊಸ ಸಾಧ್ಯತೆಗಳ ಅನ್ವೇಷಣೆಗೆ ಕಾರಣವಾಯಿತು. ಕಾರಣ ಈ ಮೊದಲು ಹೇಳಿದ ಉದ್ದೇಶಗಳಿಗಾಗಿ ಹುಟ್ಟಿಕೊಂಡ ಪತ್ರಿಕೆಗಳೂ ಸಾಹಿತ್ಯವನ್ನು ಬೆಳೆಸಿದವು.
ಪಾಶ್ಚಾತ್ಯ ಶಿಕ್ಪಣ ಪಡೆದವರ ಮುಂದೆ ಹೊಸ ಲೋಕವೊಂದು ತೆರೆದುಕೊಂಡಿತ್ತು. ಮುದ್ರಣಯಂತ್ರದಿಂದಾಗಿ ಪತ್ರಿಕೆಗಳು ಪ್ರಾರಂಭವಾಗಿದ್ದವು. ಗ್ರಂಥ ಸಂಪಾದನೆ, ಹೊಸ ಪುಸ್ತಕಗಳ ಮುದ್ರಣದಿಂದಾಗಿ ವಾಗ್ವಾದಕ್ಕೆ ಅನುಕೂಲವಾಯಿತು. ಅಂದಿನ ಸಮಾಜ ಎಲ್ಲವನ್ನೂ ಒಪ್ಪಿಕೊಂಡು ಬಾಳುವ ಸಮಾಜ ಆಗಿರಲಿಲ್ಲ. ಕ್ರಿಶ್ಚಿಯಾನಿಟಿಯನ್ನು ಸಮರ್ಥಿಸಿ ಹಿಂದೂ ಧರ್ಮವನ್ನು ಟೀಕಿಸುವ ಕೆಲವು ಗ್ರಂಥಗಳು, ಪತ್ರಿಕೆಗಳು, ಅದಕ್ಕೆ ಪ್ರತಿಯಾಗಿ ಹಿಂದೂಧರ್ಮವನ್ನು ಸಮರ್ಥಿಸುವ ಗ್ರಂಥಗಳು, ಪತ್ರಿಕೆಗಳು ಬಂದದ್ದು ಸಮಾಜದ ಜೀವಂತಿಕೆಗೆ ಸಾಕ್ಷಿ. ಸಮಾಜದಲ್ಲಿಯೇ ಇದ್ದ ಸಂಘರ್ಷದ ಅಭಿವ್ಯಕ್ತಿ ಈ ಮಾಧ್ಯಮಗಳಿಂದ ಆಯಿತು. ಸಮಾಜದ ಜಡತನವನ್ನು ಕೊಡವಿಕೊಳ್ಳಲು ಪತ್ರಿಕೆ ಒಂದು ಸಾಧನವಾಯಿತು. ಸಮಾಜದ ಕಣ್ಣುಗಳು ಕಂಡುಣ್ಣಲು ಹೊಸ ಸಂಗತಿಗಳ ಗ್ರಾಸವನ್ನು ಅಂದಿನ ಪತ್ರಿಕೆಗಳು ಒದಗಿಸಿದವು. ಹೊಸ ವಿಚಾರಗಳ ಸಂವಾದದಿಂದ ಹೊಸ ರೀತಿಯ ಚಿಂತನೆ ಪ್ರಾರಂಭವಾಗಿ ಅವೂ ಸಾಹಿತ್ಯದಲ್ಲಿ ಒಡಮೂಡಿದವು.
ಕ್ರೈಸ್ತರಲ್ಲಿಯ ಪ್ರಾಟೆಸ್ಟಂಟರು ಎಲ್ಲವನ್ನೂ ಸುಲಭವಾಗಿ ಒಪ್ಪಿಕೊಳ್ಳುವವರಲ್ಲ. ಈ ಪ್ರಶ್ನಿಸುವ ಮನೋಭಾವ ನಿಶ್ಚಿತವಾಗಿ ಕನ್ನಡ ಗದ್ಯದ ಬೆಳವಣಿಗೆಯಲ್ಲಿ ಸಹಾಯಕವಾಗಿದೆ. ಬಾಸೆಲ್ ಮಿಶನ್‌ದ ಪ್ರಾಟೆಸ್ಟಂಟರೇ ತಾವು ಆರಂಭಿಸಿದ ಪತ್ರಿಕೆಗಳಲ್ಲಿ ಗದ್ಯವನ್ನು ಬೆಳೆಸಿದರು. ಇಲ್ಲಿ ಆದ ಗದ್ಯದ ವಿವಿಧ ಸಾಧ್ಯತೆಗಳ ಪ್ರಯೋಗ ಕಾದಂಬರಿ ಪ್ರಕಾರಕ್ಕೆ ಬೇಕಾದ ಗದ್ಯವನ್ನು ಬೆಳೆಸಿತು.
ಹೊಸ ಶಿಕ್ಪಣ ಕ್ರಮ ಬಂದದ್ದು ಆಡಳಿತದ ಅನುಕೂಲತೆಗಾಗಿ. ಇದು ಮಿಶಿನರಿಗಳ ಮತಾಂತರ ಕಾರ್ಯಕ್ಕೂ ಸಾಧನವಾಗಿ ಬಳಕೆಯಾಯಿತು. ಇಂದಿರಾಬಾಯಿ' ಕಾದಂಬರಿ ಹೊಸ ಶಿಕ್ಪಣ ಕಲಿತವರು ಧರ್ಮಾಂತರ ಹೊಂದುತ್ತಾರೆ ಎಂಬ ಭಾವನೆ ಅಂದಿನ ಸಮಾಜದಲ್ಲಿ ಇದ್ದುದನ್ನು ಹೇಳುತ್ತದೆ. ಹೊಸ ಶಿಕ್ಪಣ ನೀಡುವ ಉದ್ದೇಶದಿಂದ ಶಾಲೆ ಕಾಲೇಜುಗಳು ಹುಟ್ಟಕೊಂಡವು. ಬೆನ್ನಲ್ಲೇ ಮುದ್ರಣ ಕಾರ್ಯ, ಪುಸ್ತಕ ಪ್ರಕಟಣೆ, ಪತ್ರಿಕಾ ಪ್ರಕಟಣೆಗಳು ಆದವು. ಸಮಾಜದಲ್ಲಿ ಏಕಕಾಲಕ್ಕೆ ಸಂಭವಿಸಿದ ಇಷ್ಟೆಲ್ಲ ಬದಲಾವಣೆಗಳು ಸಹಜವಾಗಿಯೇ ಸಾಂಸ್ಕೃತಿಕ ಸಂಘರ್ಷಕ್ಕೆ ಕಾರಣವಾದವು. ಕನ್ನಡ ಸಾಹಿತ್ಯದಲ್ಲಿ ಆಧುನಿಕ ಚಿಂತನ ಕ್ರಮ ಇಂಗ್ಲಿಷ್‌ನಿಂದ ಬಂದ ಹಾಗೆಯೇ ಸಾಹಿತ್ಯ ಮತ್ತು ವಿಮರ್ಶೆಗಾಗಿಯೇ ಮೀಸಲಿಟ್ಟ ಪತ್ರಿಕೆಗಳನ್ನು ಹೊರಡಿಸಬೇಕೆಂಬ ವಿಚಾರವೂ ಇಂಗ್ಲಿಷ್‌ನಿಂದಲೇ ಬಂತು. ಏಶಿಯಾಟಿಕ್ ರಿಸರ್ಚಸ್ (Asiatic Researches) ಇಂಡಿಯನ್ ಎಂಟಿಕ್ವರಿ (Indian Antiquary), ಲಿಟರರಿ ರಿವ್ಯೂ (Literary Review), ಮಾಡರ್ನ್ ರಿವ್ಯೂ (Modern Review) ಮೊದಲಾದ ಸಾಹಿತ್ಯಪತ್ರಿಕೆಗಳು ಇಂಗ್ಲಿಷಿನಲ್ಲಿವೆ. ೧೭೮೫ರಲ್ಲಿ ಹುಟ್ಟಿದಟೈಮ್ಸ್’ ಪತ್ರಿಕೆಯ T.L.S. (Times Literary Supliment) ಇವೆಲ್ಲವೂ ಸಾಹಿತ್ಯಪತ್ರಿಕೆಗಳು. ನವೋದಯದ ಸಂದರ್ಭದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಜಯ ಕರ್ನಾಟಕ' ಬಳಗದ ಶೇ.ಗೋ. ಕುಲಕರ್ಣಿ,ಜಯಕರ್ನಾಟಕವನ್ನು ಆಗಿದ್ದ ಮಾಡರ್ನ್ ರಿವ್ಯೂದ ಮಟ್ಟಕ್ಕೆ ಮುಟ್ಟಿಸಬೇಕೆಂದು ನಾವೆಲ್ಲರೂ ಅಂದಕೊಳ್ಳುತ್ತಿದ್ದೆವು’೧೮ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಕನ್ನಡ ಸಾಹಿತ್ಯಪತ್ರಿಕೆಗಳ ಮೇಲೆ ಅನ್ಯ ಪ್ರಭಾವವನ್ನು ಗುರುತಿಸಲು ನೆರವಾಗುವ ಇನ್ನೊಂದು ಅಂಶವನ್ನು ಇಲ್ಲಿ ಉಲ್ಲೇಖಿಸಬೇಕು. ಅದೆಂದರೆ, ಬೆಟಗೇರಿ ಕೃಷ್ಣಶರ್ಮರ ಜಯಂತಿ'. ಇದು ನವೋದಯದ ಸಂದರ್ಭದ ಇನ್ನೊಂದು ಮಹತ್ವದ ಪತ್ರಿಕೆ. ಇದರ ಉಗಮಕ್ಕೆ ಮಹಾರಾಷ್ಟ್ರದಕಿರ್ಲೋಸ್ಕರ್’ ಮಾಸಪತ್ರಿಕೆ ಮಾದರಿ. ಈ ಕಿಲೋಸ್ಕರ್ ಮಾದರಿ' ಶಂ.ಬಾ. ಜೋಶಿಯವರ ಮಿದುಳಿನ ಕೂಸು. ಬೆಟಗೇರಿ ಕೃಷ್ಣ ಶರ್ಮರು ಜಯಕರ್ನಾಟಕವನ್ನು ಬಿಟ್ಟು ತಮ್ಮ ಊರಿಗೆ ಬಂದಿದ್ದರು. ಅವರನ್ನು ಪುನಃ ಪತ್ರಿಕಾ ರಂಗಕ್ಕೆ ತಂದವರು ಶಂ.ಬಾ.ಜೋಶಿಯವರೇ. ಧಾರವಾಡದಲ್ಲಿ ನಿಮಗೊಂದು ಪತ್ರಿಕೆ ಕಾದಿದೆ. ನೀವು ಬಂದು ಅದನ್ನು ವಹಿಸಿಕೊಳ್ಳಬೇಕು ಎಂದು ಕೃಷ್ಣ ಶರ್ಮರಿಗೆ ಶಂ.ಬಾ. ಜೋಶಿ ಆಗ ಪತ್ರಬರೆದರು.19 ಮರಾಠಿಯಕಿರ್ಲೋಸ್ಕರ್‌’ ಪತ್ರಿಕೆಯ ರೀತಿಯಲ್ಲಿ ಹೊಸ ಪತ್ರಿಕೆಯನ್ನು ಆರಂಭಿಸಬೇಕು ಎಂಬುದು ಶಂ.ಬಾ.ಜೋಶಿಯವರ
ವಿಚಾರವಾಗಿತ್ತು. ಅದೇ ಮುಂದೆ ಜಯಂತಿ'ಯಾಗಿ ಹೊರ ಬಂತು. ಹೀಗೆ ಸಾಹಿತ್ಯಪತ್ರಿಕೆಗಳ ಕಲ್ಪನೆಯೂ ನಮಗೆ ಎರವಲಾಗಿ ಬಂದದ್ದೇ ಆಗಿದೆ. ಹೊಸಗನ್ನಡದ ಆರಂಭದ ಕಾಲದಲ್ಲಿ ಪ್ರಭಾತ, ವಾಗ್ಭೂಷಣ, ಗ್ರಂಥಮಾಲಾ, ಕಾವ್ಯಮಂಜರಿ ಮೊದಲಾದ ಶುದ್ಧ ಸಾಹಿತ್ಯಪತ್ರಿಕೆಗಳನ್ನು ಹೊರತುಪಡಿಸಿದರೆ ಉಳಿದ ಪತ್ರಿಕೆಗಳಲ್ಲೂ ಸಾಹಿತ್ಯಕ್ಕೆ ಪ್ರೋತ್ಸಾಹ ವಿಫುಲವಾಗಿಯೇ ದೊರೆಯಿತು. ಉಳಿದವು ಶುದ್ಧ ಸಾಹಿತ್ಯಕ ಉದ್ದೇಶ ಹೊಂದಿಲ್ಲದಿದ್ದರೂ ಆನುಷಂಗಿಕವಾಗಿ ಸಾಹಿತ್ಯವನ್ನು ಪೋಷಿಸಿದವು. ಏಕೆಂದರೆ ಅವು ಸಾಮಾನ್ಯ ಓದುಗನನ್ನು ಗಮನದಲ್ಲಿಟ್ಟಿದ್ದವು. ಪಾಶ್ಚಾತ್ಯ ವಿದ್ವಾಂಸರು ಹುಟ್ಟುಹಾಕಿದ ಕೆಲವು ಪತ್ರಿಕೆಗಳು ಮತಬೋಧನೆಯ ಜೊತೆಯಲ್ಲಿಯೇ ಹೊಸಗನ್ನಡ ಗದ್ಯ ಮತ್ತು ಪದ್ಯದ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟವು. ಅವರು ಅದರ ಜೊತೆಯಲ್ಲಿಯೇ ಈ ನೆಲದ ಹಳೆಯ ಸಾಹಿತ್ಯವನ್ನು ಶೋಧಿಸಿದರು. ಅವನ್ನೆಲ್ಲ ಐತಿಹಾಸಿಕವಾಗಿ ವಿಂಗಡಿಸಿದರು. ತಮ್ಮ ಪತ್ರಿಕೆಗಳಲ್ಲಿ ಅವುಗಳ ಬಗೆಗೆ ಲೇಖನಗಳನ್ನು ಬರೆದರು. ಕನ್ನಡ ಮೊದಲಾದ ಭಾಷೆಗಳಿಗೆ ಸಂಸ್ಕೃತವೇ ತಾಯಿ ಭಾಷೆ ಎಂದು ನಂಬಿದ್ದ ಕಾಲದಲ್ಲಿ ಪ್ರತ್ಯೇಕ ದ್ರಾವಿಡ ಭಾಷಾ ಸಮೂಹವನ್ನು ಪತ್ತೆ ಮಾಡಿದರು. ಶಬ್ದ ಕೋಶವನ್ನು ಕೊಟ್ಟರು. ವ್ಯಾಕರಣವನ್ನು ನೀಡಿದರು. ಸಾಹಿತ್ಯ ಚರಿತ್ರೆಯನ್ನು ಬರೆದರು. ಇವೆಲ್ಲ ಅವರ ಪತ್ರಿಕೆಗಳಲ್ಲಿಯೇ ಪ್ರಕಟವಾಗಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ ಸಾಹಿತ್ಯೇತರ ಉದ್ದೇಶಗಳಿಗಾಗಿ ಹುಟ್ಟಿಕೊಂಡ ಅವರ ಪತ್ರಿಕೆಗಳು ಸಾಹಿತ್ಯದ ಉದ್ಧಾರದ ಕೆಲಸವನ್ನೂ ಮಾಡಿದವು. ಶುದ್ಧ ಸಾಹಿತ್ಯಪತ್ರಿಕೆಗಳು ಮಾಡಿದ ಕೆಲಸಕ್ಕೆ ಇವು ಊನವಾದುದೇನಲ್ಲ. ಈ ಹಿನ್ನೆಲೆಯಲ್ಲಿ ಅವನ್ನೂ ಸಾಹಿತ್ಯಪತ್ರಿಕೆಗಳೇ ಎಂದು ಕರೆಯುವುದು ಉಚಿತವಾಗುತ್ತದೆ. ಇನ್ನು, ನಾವು ರಾಮಾಯಣ, ಮಹಾಭಾರತಗಳನ್ನು ಸಾಹಿತ್ಯ ಎಂದು ಪರಿಗಣಿಸುತ್ತೇವೆ. ಹಾಗಿದ್ದಾಗ ಬೈಬಲ್ ಸಾಹಿತ್ಯ ಆಗಲಾರದೆ ಎಂಬ ಮಹತ್ವದ ಪ್ರಶ್ನೆ ಉದ್ಭವಿಸುತ್ತದೆ. ಬೈಬಲ್ ಸಾಹಿತ್ಯ ಎಂದು ಒಪ್ಪಿಕೊಂಡಾಗ ಅದರ ಪ್ರಚಾರಕ್ಕಾಗಿ ಹುಟ್ಟಿಕೊಂಡ ಪತ್ರಿಕೆಗಳನ್ನೂ ಸಾಹಿತ್ಯಪತ್ರಿಕೆಗಳೇ ಎನ್ನಬೇಕು. ಆ ಹಿನ್ನೆಲೆಯಲ್ಲಿಯೇ ಕನ್ನಡದ ಮೊದಲ ಪತ್ರಿಕೆಯೇ ಸಾಹಿತ್ಯಪತ್ರಿಕೆ ಎಂಬ ಮಾತು ಔಚಿತ್ಯಪೂರ್ಣವಾಗುತ್ತದೆ. ಆರಂಭ ಕಾಲದಲ್ಲಿ ಹುಟ್ಟಿಕೊಂಡ ಪತ್ರಿಕೆಗಳನ್ನು ಸಾಹಿತ್ಯಕ- ಅಸಾಹಿತ್ಯಕ ಎಂದು ವಿಂಗಡಿಸದೆ ಒಟ್ಟಾರೆಯಾಗಿ ಅವುಗಳು ಕನ್ನಡ ಸಾಹಿತ್ಯದ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಗಮನಿಸುವುದೇ ಸರಿ. ಹೊಸಗನ್ನಡದ ಶೈಶವ ಸ್ಥಿತಿಯಲ್ಲಿ ಈ ಪತ್ರಿಕೆಗಳು ಭಾಷೆಯನ್ನು ದುಡಿಸಿಕೊಂಡು ಅದಕ್ಕೊಂದು ಗಟ್ಟಿ ಸ್ವರೂಪವನ್ನು ನೀಡಿದವು ಎಂಬುದನ್ನು ಗಮನಿಸಬೇಕು. ಪತ್ರಿಕೆಯು ಆಗ ವ್ಯಾಪಾರಿ ದೃಷ್ಟಿಯನ್ನು ಪಡೆಯದೆ ಇದ್ದುದನ್ನು ಮತ್ತು ಪತ್ರಿಕೆಗಳು ಅಲ್ಪ ಸಂಖ್ಯೆಯಲ್ಲಿ ಇದ್ದುದನ್ನು ಮತ್ತು ಪತ್ರಿಕಾ ಕ್ಪೇತ್ರಕ್ಕೆ ಬಂದವರು ಸಾಹಿತಿಗಳೂ ಸಂಶೋಧಕರೂ ಆಗಿದ್ದನ್ನು ಗಮನಕ್ಕೆ ತಂದುಕೊಂಡಾಗ ಆರಂಭ ಕಾಲದ ಪತ್ರಿಕೆಗಳನ್ನು ಸಮಗ್ರವಾಗಿ ಪರಿಗಣಿಸುವುದು ಸೂಕ್ತ ಎನ್ನಿಸುತ್ತದೆ. ಭಾರತದ ಮೊದಲ ಸಾಹಿತ್ಯಪತ್ರಿಕೆ: ಕನ್ನಡದ ಸಾಹಿತ್ಯಪತ್ರಿಕೆಗಳಿಗೆ ಇಂಗ್ಲಿಷ್‌ದಲ್ಲಿಯ ಅಂಥ ಪತ್ರಿಕೆಗಳು ಕಾರಣ ಎಂಬುದನ್ನು ಗಮನಿಸಲಾಯಿತು. ಐತಿಹಾಸಿಕವಾಗಿ ಭಾರತದ ಪ್ರಥಮ ಸಾಹಿತ್ಯಪತ್ರಿಕೆ ಇಂಗ್ಲಿಷ್ ಭಾಷೆಯ ಏಶಿಯಾಟಿಕ್ ಮಿಸೆಲನಿ (Asiatic Miscellany) ೧೭೮೪ರ ಜನವರಿಯಲ್ಲಿ ಹುಟ್ಟಿಕೊಂಡಿತು. ಸಾಹಿತ್ಯಕ ಮತ್ತು ರಾಜಕೀಯ ವಿಷಯಗಳನ್ನು ಒಳಗೊಂಡು ಇದು ಹೊರಬರುತ್ತಿತ್ತು. ೧೭೯೩ರಿಂದ ಇದೇ ಪತ್ರಿಕೆ ಅತ್ಯಂತ ಪ್ರಸಿದ್ಧವಾದ ಏಶಿಯಾಟಿಕ್ ರಿಸರ್ಚಸ್ (Asiatic Researches) ಎಂದು ಬದಲಾಯಿತು. ಇದು ೧೮೩೯ರ ವರೆಗೂ ಪ್ರಕಟವಾಗುತ್ತಿತ್ತು. ಆ ಕಾಲದ ಶ್ರೇಷ್ಠ ವಿದ್ವಾಂಸರೆಲ್ಲ ಈ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು. ಒಂದು ಶಾಸ್ತ್ರೀಯ ಪತ್ರಿಕೆ ಹೇಗಿರಬೇಕು ಎಂಬುದಕ್ಕೆ ೨೦೦ ವರ್ಷಗಳ ಹಿಂದಿನ ಈ ಪತ್ರಿಕೆ ಒಂದು ಅತ್ಯುತ್ತಮ ಉದಾಹರಣೆ. ಸಾಹಿತ್ಯಕ ಮತ್ತು ಚಾರಿತ್ರಿಕ ಅಂಶಗಳನ್ನು ಒಳಗೊಂಡ ಈ ಪತ್ರಿಕೆ ದೇಶ ಮತ್ತು ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ, ಸಾಹಿತ್ಯಗಳ ಬಗ್ಗೆ ಅರಿವು ಮೂಡಿಸಿತು. ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯದಲ್ಲಿ ಅಪಾರವಾದ ಕಾಳಜಿ ಹೊಂದಿದ್ದ ಭಾರತದ ಮೊದಲ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್‌ನಿಂದ ಪ್ರಭಾವಿತನಾದ ಸರ್ ವಿಲಿಯಂ ಜೋನ್ಸ್ (Sir William Jones) ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಪ್ರಚಾರ ಮಾಡಲು ಉದ್ದೇಶಿಸಿ ಒಂದು ಸಂಸ್ಥೆಯನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಮನಗಂಡನು. ಹೇಸ್ಟಿಂಗ್ಸ್ ಮತ್ತು ಜೋನ್ಸ್, ಇತರ ಮೂವತ್ತು ಜನ ಯುರೋಪಿಯನ್ ವಿದ್ವಾಂಸರೊಂದಿಗೆ ಸೇರಿ ರಾಯಲ್ ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ (Royal Asiatic Society of Bengal ) ಸ್ಥಾಪಿಸಿದರು. ಕ್ರಮೇಣ ‘of Bengal’ ಕೈಬಿಟ್ಟು ಕೇವಲ ರಾಯಲ್ ಏಶಿಯಾಟಿಕ್ ಸೊಸೈಟಿ ಅಷ್ಟೇ ಉಳಿಯಿತು. ಈ ಸಂಸ್ಥೆಯ ಜೊತೆಯಲ್ಲಿಯೇ ಏಶಿಯಾಟಿಕ್ ಮಿಸೆಲನಿ (Asiatic Miscelany) ಎಂಬ ಪತ್ರಿಕೆಯನ್ನೂ ಆರಂಭಿಸಿದರು. ಈ ಸಂಸ್ಥೆಯ ಮತ್ತು ಸಾಹಿತ್ಯಪತ್ರಿಕೆಯ ಪೋಷಕ ವರ್ಗವು ಆ ಸಂದರ್ಭದಲ್ಲಿ ಹೀಗೆ ಹೇಳಿತು... .. ``ಏಶಿಯಾದ ಇತಿಹಾಸ, ನಾಗರಿಕ ಮತ್ತು ನಿಸರ್ಗ, ಪ್ರಾಚೀನ ಅವಶೇಷಗಳು, ಕಲೆ, ವಿಜ್ಞಾನ ಮತ್ತು ಸಾಹಿತ್ಯವನ್ನು ಸಂಶೋಧನೆ ಮಾಡುವ ಉದ್ದೇಶದಿಂದ ನಾವೆಲ್ಲರೂ ಸದಸ್ಯರಾಗಿರುವ ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡಿದ್ದೇವೆ. ನಾವು ಈ ಸಂಸ್ಥೆಯ ಪೋಷಕರಾಗಲು ತಾವು ಒಪ್ಪಿ ಗೌರವಿಸುವಿರಿ ಎಂದು ತಿಳಿದಿದ್ದೇವೆ... ..'' ಇದಕ್ಕೆ ಉತ್ತರವಾಗಿ ಕಂಪನಿ ಸರಕಾರದ ಆಡಳಿತದಲ್ಲಿದ್ದ ಗವರ್ನರ್ ಜನರಲ್ ಹೇಸ್ಟಿಂಗ್ಸ್ (Hastings) ಎಡ್ವರ್ಡ್ ವ್ಹೀಲರ್ (Edward Wheeler), ಜಾನ್ ಮೆಫರ್‌ಸನ್ (John Mepherson) ಮತ್ತು ಜಾನ್ ಸ್ಟೇಬಲ್ಸ್ (John Stables) ಇವರು ಅಧಿಕೃತ ಪೋಷಕರಾಗಲು ಒಪ್ಪಿ ಹೀಗೆಂದರು: ಜ್ಞಾನದ ಕ್ಷಿತಿಜವನ್ನು ವಿಸ್ತರಿಸುವಲ್ಲಿ ನೀವು ಕೈಗೊಂಡ ಸಾಹಸಕ್ಕೆ ನಮ್ಮ ಒಪ್ಪಿಗೆ ಮತ್ತು ಮೆಚ್ಚುಗೆ ಇದೆ. ಸ್ಥಳೀಯವಾಗಿ ನಿಮಗಿರುವ ಅನುಕೂಲತೆಗಳು ನಿಮಗೊಂದು ಸ್ಥಾನವನ್ನು ದೊರಕಿಸುವುದು. ಇದನ್ನು ನೀವು ಜಗತ್ತಿನ ಯಾವುದೇ ಮೂಲೆಗೂ ವಿಸ್ತರಿಸಬಹುದು. ಈ ಮಹಾಶಯರ ಸಾಮರ್ಥ್ಯ ಮತ್ತು ಪ್ರತಿಭೆಯ ಬಗ್ಗೆ ನಮಗಿರುವ ವೈಯಕ್ತಿಕ ಅರಿವಿನಿಂದ ಈ ಒಂದು ಮಹಾನ್ ಸಾಧನೆ ಸಾಧ್ಯವೆಂದು ನಾವು ಆಸೆ ತಳೆದಿದ್ದೇವೆ.’
ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಇದರ ಸ್ಥಾಪನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರಲ್ಲಿ ಹಿಂದೂ ನ್ಯಾಯ ಶಾಸ್ತ್ರವನ್ನೆಲ್ಲ ಸಮೀಕರಿಸಿ ದಿ ಕೋಡ್ ಆಫ್ ಹಿಂದೂ ಲಾಸ್ (The code of Hindu Laws) ಎಂಬ ಗ್ರಂಥ ಪ್ರಕಟಿಸಿದ ಹಾಲ್ಹೆಡ್ (Nathaniel B. Halhed) ಮತ್ತು ಸಾಹಿತಿ ಚಾರ್ಲ್ಸ್ ವಿಲ್ಕಿನ್ಸ್ (Charls Wilkins) ಕೂಡ ಇದ್ದಾರೆ.
ರಾಯಲ್ ಏಶಿಯಾಟಿಕ್ ಸೊಸೈಟಿಯ ಮೊದಲ ಅಧ್ಯಕ್ಷ ವಾರೆನ್ ಹೇಸ್ಟಿಂಗ್ಸ್‌ನೇ ಆಗಿದ್ದನು. ಅವನ ಬಳಿಕ ೧೭೮೫ರಿಂದ ತನ್ನ ಕಡೆಯ ದಿನದ ವರೆಗೂ ವಿಲಿಯಂ ಜೋನ್ಸ್ ಅದರ ಅಧ್ಯಕ್ಷನಾಗಿದ್ದನು. ರಾಯಲ್ ಏಶಿಯಾಟಿಕ್ ಸೊಸೈಟಿಯ ಸ್ಥಾಪನೆಯಿಂದ ಬರಿ ಭಾರತವಷ್ಟೇ ಅಲ್ಲ ಏಶಿಯಾ ಖಂಡದ ಸಾಹಿತ್ಯ ಪ್ರಪಂಚದಲ್ಲಿ ಅರುಣೋದಯವಾಯಿತು. ... ೧೭೮೪ರ ಜನವರಿಯಲ್ಲಿ ರಾಯಲ್ ಏಶಿಯಾಟಿಕ್ ಸೊಸೈಟಿ ಸ್ಥಾಪನೆಯಾದುದು ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ಮೈಲಿಗಲ್ಲು.' ಏಶಿಯಾಟಿಕ್ ಸೊಸೈಟಿಯ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಸರ್ ವಿಲಿಯಂ ಜೋನ್ಸ್,ಸಂಸ್ಕೃತದ ಖಜಾನೆ ಕೀಲಿ ಈಗ ತೆರೆಯುವುದೆಂದು ನಾವು ಆಶಿಸಬಹುದು’ ಎಂದು ಹೇಳಿದ್ದು ಗಮನಾರ್ಹ. ಇದು ಕೇವಲ ಸಂಸ್ಕೃತ ಭಾಷೆಯ ಖಜಾನೆಯ ಕೀಲಿ ತೆರೆಯಲಿಲ್ಲ. ಭಾರತದ ಎಲ್ಲ ಭಾಷೆಗಳ ಖಜಾನೆಯ ಕೀಲಿ ತೆರೆಯಿತು.
ರಾಯಲ್ ಏಶಿಯಾಟಿಕ್ ಸೊಸೈಟಿಯು ಏಶಿಯಾಟಿಕ್ ರಿಸರ್ಚಸ್ ಪತ್ರಿಕೆಯಲ್ಲದೆ ದಿ ಜರ್ನಲ್ ಆಫ್ ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ (೧೮೩೨-೧೮೭೨) (The Journal of Asiatic Society of Bengal) ಎಂಬ ಪತ್ರಿಕೆಯನ್ನೂ ಹೊರಡಿಸಿತು. ಇದೂ ತುಂಬಾ ಜನಪ್ರಿಯವಾಗಿತ್ತು. ಅದಲ್ಲದೆ ೧೮೩೨ರಿಂದ ವಿಜ್ಞಾನ ವಿಷಯಗಳನ್ನು ಪ್ರಕಟಿಸುವ ಒಂದು ಮಾಸಿಕವನ್ನು ಹೊರಡಿಸಿತು. ಸೊಸೈಟಿಯ ಸ್ಥಾಪಕರಲ್ಲೊಬ್ಬನಾದ ಸರ್ ವಿಲಿಯಂ ಜೋನ್ಸ್ ಅಂದಿನ ಪಾಶ್ಚಾತ್ಯ ಸಾಹಿತಿಗಳಿಗೆ, ಕಲಾವಿದರಿಗೆ ಮತ್ತು ಸಂಶೋಧಕರಿಗೆ ನೀಡಿದ ಕರೆಯಿಂದ ಅದರ ಧೋರಣೆಯನ್ನೂ ತಿಳಿದುಕೊಳ್ಳಬಹುದು. ``ನಿಸರ್ಗದ ವಿಶಾಲವಾದ ಚೌಕಟ್ಟಿನಲ್ಲಿ ಯಾವುದು ಅಪರೂಪದ್ದೋ ಅದನ್ನು ನೀವು ಸಂಶೋಧನೆ ಮಾಡಿರಿ. ಹೊಸದಾದ ನಿರೀಕ್ಪಣೆಗಳು ಮತ್ತು ಶೋಧಗಳಿಂದ ಏಶಿಯಾದ ಭೂಗೋಳವನ್ನು ಸರಿಪಡಿಸಿರಿ. ಯಾವ ದೇಶಗಳ ಜನರು ಕಾಲಕಾಲಕ್ಕೆ ತಮ್ಮ ಪೂರ್ವ ಕಥೆಗಳು, ಸಂಪ್ರದಾಯಗಳನ್ನು ನಿರ್ಲಕ್ಪ್ಯ ಮಾಡಿದ್ದಾರೋ ಅವುಗಳನ್ನು ಹುಡುಕಿ ತೆಗೆಯಿರಿ. ಅವರ ವಿವಿಧ ನಾಗರಿಕ ಧಾರ್ಮಿಕ ಸಂಸ್ಥೆಗಳು, ಅವರ ವಿವಿಧ ಸರಕಾರಗಳ ಸ್ವರೂಪಗಳ ಮೇಲೆ ಬೆಳಕನ್ನು ಚೆಲ್ಲಿರಿ. ಅವರು ಅಂಕ ಗಣಿತ ಮತ್ತು ಜ್ಯಾಮಿತಿ, ತ್ರಿಕೋನಮಿತಿ, ಕ್ಪೇತ್ರ ಗಣಿತ, ಯಾಂತ್ರಿಕತೆ, ಪ್ರಕಾಶ ವಿಜ್ಞಾನ, ಖಗೋಳ ಶಾಸ್ತ್ರ ಮತ್ತು ಭೌತ ಶಾಸ್ತ್ರಗಳಲ್ಲಿ ಸಾಧಿಸಿರುವ ಹೆಚ್ಚುಗಾರಿಕೆಯನ್ನು ನೀವು ಪರೀಕ್ಪಿಸಿ. ಅವರ ನ್ಯಾಯಶಾಸ್ತ್ರ, ವ್ಯಾಕರಣ, ಸಾಹಿತ್ಯ, ಅಲಂಕಾರ ಮತ್ತು ಉಪಭಾಷೆ ಪದ್ಧತಿಯನ್ನು, ಶಸ್ತ್ರ ಚಿಕಿತ್ಸೆ, ಔಷಧಗಳಲ್ಲಿ ಅವರಿಗಿರುವ ಪರಿಣತಿ, ಅದು ಶರೀರ ಕ್ರಿಯಾ ಶಾಸ್ತ್ರ ಮತ್ತು ರಸಾಯನ ಶಾಸ್ತ್ರಗಳೇ ಇರಬಹುದು ಅವರು ಎಷ್ಟು ಮುಂದುವರಿದಿದ್ದಾರೆ ಎಂಬುದನ್ನು ಗುರುತಿಸಿ'' ``ಅವರ ಕೃಷಿ, ಉತ್ಪಾದನೆ ಮತ್ತು ವ್ಯಾಪಾರ ಇವುಗಳ ಬಗ್ಗೆ ನೀವು ಸಂಶೋಧನೆ ಮಾಡಿ. ಅವರ ಸಂಗೀತ, ವಾಸ್ತು, ಕಲೆ, ಚಿತ್ರಕಲೆ ಮತ್ತು ಕಾವ್ಯಗಳ ಬಗ್ಗೆ ವಿಚಾರಿಸುವಾಗ ಅವರ ಕ್ಷುಲ್ಲಕವೆನಿಸುವ ಕಲೆಗಳನ್ನೂ ನಿರ್ಲಕ್ಷಿಸಬೇಡಿ. ಏಕೆಂದರೆ ಅವುಗಳೇ ಸಾಮಾಜಿಕ ಬದುಕಿಗೆ ಲಾಲಿತ್ಯ, ನೆಮ್ಮದಿಗಳನ್ನು ತರಬಲ್ಲವು, ಉತ್ತಮಪಡಿಸಬಲ್ಲವು.'' ವಿಲಿಯಂ ಜೋನ್ಸ್ ನೀಡಿದ ಕರೆ ಹುಸಿಯಾಗಲಿಲ್ಲ. ಪತ್ರಿಕೆಯು ಹೆಸರಿಗೆ ತಕ್ಕಂತೆ ಅದು ಏಶಿಯಾದ ಸಾಂಸ್ಕೃತಿಕ ಆಯಾಮಗಳ ಅಪರಿಚಿತ ಮುಖವನ್ನು ಅನಾವರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಈ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳೂ ಸೇರಿದಂತೆ ಸೊಸೈಟಿಯು ಅನೇಕ ಮಹತ್ವದ ಗ್ರಂಥಗಳನ್ನು ಪ್ರಕಟಿಸಿತು.ಏಶಿಯಾಟಿಕ್ ರಿಸರ್ಚಸ್’ ಕೇವಲ ಸಾಹಿತ್ಯಪತ್ರಿಕೆಯಾಗದೆ ಸಾಂಸ್ಕೃತಿಕ ನೆಲೆಯಲ್ಲಿಯೂ ತೆರೆದುಕೊಂಡಿತು. ಇದೇ ತರದ ಕಾರ್ಯ ಕನ್ನಡದ ಸಂದರ್ಭದಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘ ಮತ್ತು ಅದರ ವಾಗ್ಭೂಷಣ' ಪತ್ರಿಕೆ, ಮೈಸೂರಿನಲ್ಲಿಪ್ರಬುದ್ಧ ಕರ್ನಾಟಕ’ಗಳು ಮಾಡಿದ್ದನ್ನು ಗಮನಿಸಬಹುದು.
ರಾಯಲ್ ಏಶಿಯಾಟಿಕ್ ಸೊಸೈಟಿ'ಯ ಶಾಖೆಗಳು ಮುಂಬಯಿಯಲ್ಲಿ ೧೮೩೯ರಲ್ಲೂ, ಸಿಲೋನಿನಲ್ಲಿ ೧೮೪೫ರಲ್ಲೂ ಆರಂಭವಾದವು. ಚೀನಿ ಸಾಹಿತ್ಯದ ಪ್ರತಿಭಾವಂತ ವಿದ್ವಾಂಸ ಸರ್ ಜೆ.ಎಫ್. ಡೇವಿಸ್ (Sir J.F. Davies) ಇವನು ೧೮೪೭ರಲ್ಲಿ ಹಾಂಗ್‌ಕಾಂಗ್‌ನಲ್ಲಿ ಇದರ ಶಾಖೆ ಆರಂಭಿಸಿದನು. ಏಶಿಯಾಟಿಕ್ ರಿಸರ್ಚಸ್ ಮಾದರಿಯಲ್ಲಿಯೇ ಕೆಲವು ಸಾಹಿತ್ಯಪತ್ರಿಕೆಗಳು ಅಂದಿನ ಕಾಲದಲ್ಲಿಯೇ ಹುಟ್ಟಿಕೊಂಡವು. ಇಂಗ್ಲಂಡಿನಲ್ಲಿರಾಯಲ್ ಏಶಿಯಾಟಿಕ್‌ ಸೊಸೈಟಿ ಆಫ್ ಗ್ರೇಟ್ ಬ್ರಿಟನ್ ಆ್ಯಂಡ್ ಐರ್ಲಂಡ್’ ಸಂಸ್ಥೆಯನ್ನು ೧೮೨೩ರಲ್ಲಿಆರಂಭಿದ ಸರ್ ಹೆನ್ರಿ ಕೂಲ್‌ಬ್ರೂಕ್ (Sir Henry Cole brooke) ಏಶಿಯಾಟಿಕ್ ರಿಸರ್ಚಸ್ ಪತ್ರಿಕೆಯ ಮಾದರಿ ಮತ್ತು ಫೋಲಿಯೋ (folio) ಪುಟಗಳಲ್ಲಿ ಭಾರತೀಯ ಸಾಹಿತ್ಯ ಪ್ರಚಾರಕ್ಕಾಗಿಯೇ ಪತ್ರಿಕೆಯೊಂದನ್ನು ಹೊರ ತಂದನು. ಇದು ವಿದೇಶದಿಂದ ಭಾರತೀಯ ಸಾಹಿತ್ಯ ಪ್ರಚಾರಕ್ಕಾಗಿ ತಂದ ಪತ್ರಿಕೆ.
ಮದ್ರಾಸು, ಕಲ್ಕತ್ತಾಗಳಿಂದ ಲಿಟರರಿ ರಿವ್ಹ್ಯೂ (Literary Review)' ಇತ್ಯಾದಿ ಸಾಹಿತ್ಯಪತ್ರಿಕೆಗಳು ಹೊರಟಿದ್ದವು. ಇದೇ ಮಾರ್ಗದಲ್ಲಿಯೇ ಜೇಮ್ಸ್ ಬರ್ಜೆಸ್ (James Burgess) ಇವನಇಂಡಿಯನ್ ಎಂಟಿಕ್ವರಿ’ (Indian Antiquary) ಹೊರಬಂತು. ಇದು ೧೮೭೨ರ ಜನವರಿ ತಿಂಗಳಲ್ಲಿ ಪ್ರಾರಂಭವಾಯಿತು. ಇದರಲ್ಲಿ ಸಾಹಿತ್ಯಕ ಹಾಗೂ ಇತರ
ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಲಾಗುತ್ತಿತ್ತು. ಇದರ ಮೊದಲ ಸಂಚಿಕೆಯಲ್ಲಿ ಜೇಮ್ಸ್ ಬರ್ಜೆಸ್, ವಿವಿಧ ಏಶಿಯಾಟಿಕ್ ಸೊಸೈಟಿಗಳು ಹೊರಡಿಸಿರುವ ಪತ್ರಿಕೆಗಳಲ್ಲಿ ಓದುಗರಿಗೆ ಕಾಣಲು ಸಿಗದೆ ಇರುವಂಥ ಅತ್ಯುತ್ತಮ ಲೇಖನಗಳು, ಟಿಪ್ಪಣಿಗಳು, ಜ್ಞಾಪಕ ಪತ್ರಗಳು ಇದರಲ್ಲಿ ದೊರೆಯುವ ಕಾರಣ ಆ ಎಲ್ಲ ಪತ್ರಿಕೆಗಳಿಗೆ `ಇಂಡಿಯನ್ ಎಂಟಿಕ್ವರಿ' ಒಂದು ಪೂರಕ ಪತ್ರಿಕೆಯಾಗಲಿದೆ. ಭಾರತದ ವಿವಿಧೆಡೆಯ ಖಾಸಗಿಯಾದ ಸಮಾಚಾರಗಳ ಮೂಲಕವೇ ಇಂಥದೊಂದು ಪತ್ರಿಕೆಯ ಅಗತ್ಯವನ್ನು ಅರಿಯಲಾಗಿದೆ'', ಎಂದು ಬರೆದನು. ಸದ್ಯ ಇರುವ ಪತ್ರಿಕೆಗಳಿಗಿಂತ ಭಿನ್ನವಾಗಿ ಆದರೆ ಅವುಗಳಿಗೆ ಪೂರಕವಾಗಿ ತನ್ನ ಪತ್ರಿಕೆಯನ್ನು ತರಬೇಕೆಂಬ ಬರ್ಜೆಸ್‌ನ ವಿಚಾರವನ್ನು ಇಲ್ಲಿ ತಿಳಿದುಕೊಳ್ಳಬಹುದು. ಈ ಪತ್ರಿಕೆಯಲ್ಲಿ ಬರ್ಜೆಸ್ ಓರ್ವನೆ ಈ ದೇಶದ ಸಾಹಿತ್ಯ, ಚರಿತ್ರೆ, ವಾಸ್ತು ಶಿಲ್ಪ ಮೊದಲಾದವುಗಳ ಕುರಿತು ೫೦೦ಕ್ಕೂ ಅಧಿಕ ಲೇಖನಗಳನ್ನು ಬರೆದು ಪ್ರಕಟಿಸಿದನು. `ಇಂಡಿಯನ್ ಎಂಟಿಕ್ವರಿ' ಪತ್ರಿಕೆಯ ಸ್ಥಾಪನೆಯ ಉದ್ದೇಶದ ಬಗ್ಗೆ ಬರ್ಜೆಸ್ ಹೇಳಿದ ಮಾತುಗಳು ಮಹತ್ವದ್ದು. ಭಾರತೀಯ ಮತ್ತು ಐರೋಪ್ಯ ವಿದ್ವಾಂಸರು ಭಾರತೀಯ ಪ್ರಾಚೀನ ಅವಶೇಷಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ತೋರಿಸುತ್ತಿರುವ ಅತ್ಯಂತ ಆಸಕ್ತಿಯು ನಿಯೋಜಕರಿಗೆ (ಪತ್ರಿಕೆ ಆರಂಭಿಸುವವರಿಗೆ) ಪತ್ರಿಕೆಯೊಂದನ್ನು ಪ್ರಕಟಿಸುವುದಕ್ಕೆ ಪ್ರೇರಣೆ ನೀಡಿದೆ. ಇದರಿಂದ ಭಾರತ, ಯುರೋಪ, ಅಮೆರಿಕಗಳ ವಿವಿಧ ಪ್ರಾಂತ್ಯಗಳಲ್ಲಿರುವ ಪ್ರಾಚ್ಯ ಶಾಸ್ತ್ರಜ್ಞರು, ಪ್ರಾಕ್ತನ ತಜ್ಞರ ನಡುವೆ ಸೂಕ್ತ ಸಂಪರ್ಕ ಮಾಧ್ಯಮವೊಂದನ್ನು ಒದಗಿಸಿದಂತೆ ಆಗುವುದು ಎಂಬ ಮಾತುಗಳಲ್ಲಿ ಬರ್ಜೆಸ್‌ನ ದೂರಗಾಮಿ ಚಿಂತನೆಯನ್ನು ನಾವಿಲ್ಲಿ ಗುರುತಿಸಬಹುದು. ಪಾಶ್ಚಾತ್ಯ ವಿದ್ವಾಂಸರು ಕೈಗೊಂಡ ಈ ಕ್ರಮಗಳಿಂದಾಗಿ ಭಾರತೀಯ ಸಾಹಿತ್ಯ ಸಂಸ್ಕೃತಿಯ ಬಗೆಗೆ ಜಗತ್ತಿನ ಎಲ್ಲೆಡೆ ಅರಿವು ಮೂಡಿಸುವುದು ಸಾಧ್ಯವಾಯಿತು. ಕನ್ನಡದಲ್ಲಿ: ಕನ್ನಡದ ಆರಂಭದ ಪತ್ರಿಕೆಯನ್ನು ಹೊರಡಿಸಿದವರು ಮಂಗಳೂರಿನ ಬಾಸೆಲ್ ಮಿಶನ್ ಸಂಸ್ಥೆಯಲ್ಲಿ ಮತ ಪ್ರಚಾರಕನಾಗಿದ್ದ ರೆವರೆಂಡ್ ಹರ್ಮನ್‌ ಮೋಗ್ಲಿಂಗ್‌. ೧೮೪೨ರಲ್ಲಿ ಪ್ರಾರಂಭವಾದ `ಮಂಗಳೂರು ಸಮಾಚಾರ'ವು ೧೫ ದಿನಗಳಿಗೊಮ್ಮೆ ನಾಲ್ಕಾರು folio ಪುಟಗಳಲ್ಲಿ ಪ್ರಕಟವಾಗುತ್ತಿತ್ತು. ಆರಂಭದಲ್ಲಿ ಕೈ ಬರೆಹದಲ್ಲೇ ಬರುತ್ತಿತ್ತು. ನಂತರ ಶಿಲಾ ಮುದ್ರಣ ಯಂತ್ರ (cyclostyle)ದಲ್ಲಿ ಮುದ್ರಣಗೊಳ್ಳುತ್ತಿತ್ತು. ಕೆಲವೊಮ್ಮೆ ಇದು ಚಿತ್ರಗಳನ್ನು ಒಳಗೊಂಡಿರುತ್ತಿತ್ತು. ಬೈಬಲ್ಲಿನ ಹೊಸ ಒಡಂಬಡಿಕೆ(New Testament)ಯ ಕನ್ನಡ ಭಾಷಾಂತರ ಇದರಲ್ಲಿ ಧಾರಾವಾಹಿಯಾಗಿ ಬಂದಿದೆ. ಬೈಬಲ್ ಪ್ರಕಟವಾದ ಮಾತ್ರಕ್ಕೇ `ಮಂಗಳೂರು ಸಮಾಚಾರ'ಕ್ಕೆ ಸಾಹಿತ್ಯಪತ್ರಿಕೆಯ ಸ್ಥಾನವನ್ನು ಕೊಡುವುದು ಸಾಧ್ಯವಿಲ್ಲ. ಮಂಗಳೂರು ಸಮಾಚಾರದಂಥ `ಪತ್ರಿಕೆಗಳ ಮುದ್ರಣಕ್ಕೆ ಮತ್ತು ಪ್ರಕಟಣೆಗೆ ದೇಶದ ಎಲ್ಲ ಕ್ರೈಸ್ತ ಮತ ಪ್ರಚಾರ ಸಂಸ್ಥೆಗಳೂ ಹಣ ಸಹಾಯವನ್ನೊದಗಿಸಿದ್ದಲ್ಲದೆ ಕ್ರೈಸ್ತ ಮುದ್ರಣಾಲಯಗಳು ಹಲವು ಸಂದರ್ಭಗಳಲ್ಲಿ ಉಚಿತವಾಗಿಯೇ ಅವನ್ನು ಅಚ್ಚು ಹಾಕಿಸಿ ಹೊರತರುತ್ತಿದ್ದವು. ಅಂದಿನ ಧರ್ಮಗುರುಗಳ ಪೈಕಿ ಪ್ರಬಲ ಸಾಹಿತಿಗಳಾದವರು ಅಂಥ ನೂರಾರು ಪತ್ರಿಕೆಗಳಿಗೆ ಇಂಗ್ಲಿಷ್‌ನಲ್ಲೂ ಕನ್ನಡದಲ್ಲೂ ಲೇಖನಗಳನ್ನು ಬರೆಯುತ್ತಿದ್ದರು. ಆದರೆ ಅವರ ಬರೆವಣಿಗೆಗಳೆಲ್ಲವೂ ತಮ್ಮ ಮತದ ಮೇಲ್ಮೆಯನ್ನೂ ಪ್ರಭಾವವನ್ನೂ ಮೇಲೆತ್ತಿ ಜನಕ್ಕೆ ತಿಳಿಸುವುದರಲ್ಲೇ ಕೇಂದ್ರೀಕೃತವಾಗಿತ್ತೆಂಬುದನ್ನು ನೆನಪಿಡಬೇಕಾಗಿದೆ'.20 ಕ್ರೈಸ್ತ ಮಿಶನರಿಗಳು ಹೊರಡಿಸುತ್ತಿದ್ದ ಪತ್ರಿಕೆಗಳ ಕೇಂದ್ರ ಭಾವ ಮತ ಪ್ರಚಾರ ಆಗಿದ್ದ ಕಾರಣ ಅವರಿಗೆ ತಾವು ಹೇಳುವುದೇ ಮುಖ್ಯವಾಗಿತ್ತು. ಮತ್ತು ಮತಗಳ ಖಂಡನೆಯೂ ಅವರ ಹವ್ಯಾಸವಾಗಿತ್ತು. ಹೀಗಾಗಿ ಕನ್ನಡ ಭಾಷೆಯನ್ನು ಬೆಳೆಸಬೇಕು, ಸ್ಥಳೀಯ ಸಾಹಿತ್ಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂಬ ವಿಚಾರ ಅವರಲ್ಲಿ ಇರಲಿಲ್ಲ. ಇಂಥ ಭಾವಗಳು ಸಾಹಿತ್ಯಪತ್ರಿಕೆಗಳ ಹಿಂದೆ ಇರಬೇಕಾದುದು ಅಗತ್ಯ. ೧೮೫೯ರಲ್ಲಿ ಮಂಗಳೂರಿನಲ್ಲಿದ್ದ ರೆ.ಜಾನ್ ಮ್ಯಾಕ್ (Rev. John Mack) ಎಂಬವರು ಆರಂಭಿಸಿದ `ಸಚಿತ್ರ ಕನ್ನಡ ಸಾಹಿತ್ಯ ಪತ್ರಿಕೆ' ಐತಿಹಾಸಿಕವಾಗಿ ಕನ್ನಡದ ಮೊದಲ ಸಾಹಿತ್ಯ ಪತ್ರಿಕೆ. ೧೮೬೩ರ ವರೆಗೂ ನಡೆದ ಈ ಪತ್ರಿಕೆಯು ತನ್ನನ್ನು `ಸಾಹಿತ್ಯಪತ್ರಿಕೆ' ಎಂದು ಮೊದಲು ಕರೆದುಕೊಂಡಿದೆ. ಹೀಗಾಗಿ ಇದಕ್ಕೆ ಐತಿಹಾಸಿಕ ಮಹತ್ವವಿದೆ. ರೆ.ಜಾನ್ ಮ್ಯಾಕ್‌ಗೆ ಸಹಾಯಕರಾಗಿ ರೆ.ಎಫ್. ಕಿಟ್ಟೆಲ್ ಇದ್ದರು. ಕಿಟ್ಟೆಲ್ ಈ ಪತ್ರಿಕೆಯ ಸಂಪಾದಕರೂ ಹೌದು. ಈ ಪತ್ರಿಕೆಯನ್ನು ಅವರು `ಬಾಂಬೆ ಕೆನರೀಸ್ ವರ್ನಾಕ್ಯುಲರ್ ಸೊಸೈಟಿ' (Bombay Canarese Vernacular Society) ಇದರ ಆಶ್ರಯದಲ್ಲಿ ನಡೆಸುತ್ತಿದ್ದರು. ಪ್ರತಿ ತಿಂಗಳೂ ಪ್ರಕಟವಾಗುತ್ತಿದ್ದ ಅದು ೧೦-೧೨ ಫೂಲ್ ಸ್ಕೇಪ್ (foolscap) ಪುಟಗಳಿಂದ ಹೊರಬರುತ್ತಿತು. ಬೈಬಲ್ ಮತ್ತು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಇದರಲ್ಲಿ ಇರುತ್ತಿದ್ದವು. ಬಣ್ಣದ ಚಿತ್ರಗಳೂ ಇರುತ್ತಿದ್ದವು. ಈ ಪತ್ರಿಕೆಯನ್ನು ದಿ ಇಲ್‌ಸ್ಟ್ರೇಟೆಡ್ ಕೆನರೀಸ್ ಜರ್ನಲ್ (The Illustrated Canarese Journal) `ವಿಚಿತ್ರ ವರ್ತಮಾನ ಸಂಗ್ರಹ' ಎಂಬುದಾಗಿಯೂ ಕರೆಯಲಾಗುತ್ತಿತ್ತು. ಈ ಪತ್ರಿಕೆಯ ೧೮೬೨ರ ಸಂಚಿಕೆಯೊಂದರಲ್ಲಿ ಜಾನ್ ಮ್ಯಾಕ್ ಮತ್ತು ಎಫ್. ಕಿಟ್ಟೆಲ್ ಅವರುಕನ್ನಡ ವಿಚಿತ್ರ ವರ್ತಮಾನ ಸಂಗ್ರಹ ಎಂಬ ಈ ಪತ್ರಿಕೆಯಲ್ಲಿ ಪರದೇಶಗಳಲ್ಲಿಯೂ ಇಂಡಿಯಾದಲ್ಲಿಯೂ ನಡೆದ ಮುಖ್ಯ ವರ್ತಮಾನವೂ ರಾಜ ಸಂಬಂಧವಾದ ಮತ್ತು ಸಾಧಾರಣವಾದ ಹಲ ಬಗೆಯ ಮುಖ್ಯವಾದ ಸಂಗತಿಗಳ ವೃತ್ತಾಂತವೂ, ನವಕೃತ ರಚಿಸುವಿಕೆಗಳೂ, ಶೋಧನೆಗಳೂ ಬೋಧನೆಗಳೂ ತಿಳುವಳಿಕೆಗಳೂ ಪದ್ಯಗಳೂ ವಿದ್ಯೆ ವ್ಯಾಪಾರ ಇತ್ಯಾದಿಗಳ ವರ್ತಮಾನವೂ ವಾಡಿಕೆಯಾಗಿ ನಡಿಯುವ ಸ್ಥಿತಿಗಳ ಸಮಾಚಾರವೂ, ಗಣಿತ, ಚರಿತ್ರೆ, ಭೂಗೋಳ ಶಾಸ್ತ್ರ, ಸೃಷ್ಟಿ, ವಸ್ತು ವರ್ಣನೆ, ಮನುಷ್ಯ ದೇಹ ಲಕ್ಷಣ ಇತ್ಯಾದಿ ಶಾಲಾ ಪ್ರಯೋಜನಾರ್ಥಕವಾದ ಪುಸ್ತಕಗಳಿಂದ ಸಹ ಸ್ವಲ್ಪ ಸ್ವಲ್ಪವೂ ಪ್ರಖ್ಯಾತಿ ಪಟ್ಟವರು ಬರೆದ ಪುಸ್ತಕಗಳಿಂದ ತೆಗೆದ ಆರೈಯ್ಯವೂ, ಶ್ರೇಷ್ಠರ ವೃತ್ತಾಂತವೂ, ಸಂಚಾರ, ಸಮುದ್ರ ಪಯಣ, ಯುದ್ಧ ಪ್ರಯಾಣ ಇತ್ಯಾದಿ ಸಂಗತಿಗಳೂ, ಎಲ್ಲಾ ಜನಾಂಗಗಳಲ್ಲಿಯೂ ಪೂರ್ವದಲ್ಲಿ ನಡೆದ ಅಪರೂಪ ಸಂಗತಿಗಳ ವಿಷಯವೂ.. .. ..” ಎಲ್ಲವನ್ನೂ ಒಳಗೊಂಡಿರುವುದೆಂದು ಹೇಳಿದರು. ಗಂಭೀರ ಉದ್ದೇಶದ ಈ ಪತ್ರಿಕೆಯನ್ನು ಗಮನಿಸಿದಾಗ ಇದು ಶಾಸ್ತ್ರ- ಸಾಹಿತ್ಯದ ಪತ್ರಿಕೆ ಎಂದು ನಿಶ್ಚಯವಾಗಿ ಹೇಳಬಹುದು. ನವಕೃತ ರಚಿಸುವಿಕೆಗಳೂ… ಕತೆಗಳೂ, ನೀತಿ ಕತೆಗಳೂ, ಪದ್ಯಗಳೂ…. ಇತ್ಯಾದಿಗಳನ್ನು ಪ್ರಕಟಿಸುವ ಮೂಲಕ ಅದು ಸಾಹಿತ್ಯದ ಪೋಷಣೆ ಮಾಡಿತು. ಇಲ್ಲಿ ಜಾನ್ ಮ್ಯಾಕ್ ಮತ್ತು ಎಫ್.ಕಿಟ್ಟೆಲ್ ಅವರು ಬರೆದಿರುವ ಮಾತುಗಳಿಗೂ ರಾಯಲ್ ಏಶಿಯಾಟಿಕ್ ಸೊಸಾಯಿಟಿ'ಯನ್ನು ಆರಂಭಿಸಿದ ಸರ್ ವಿಲಿಯಂ ಜೋನ್ಸ್ ಅಂದಿನ ಪಾಶ್ಚಾತ್ಯ ಸಾಹಿತಿಗಳಿಗೆ, ಕಲಾವಿದರಿಗೆ ಮತ್ತು ಸಂಶೋಧಕರಿಗೆ ನೀಡಿದ ಕರೆಗೂ ಸಾಮ್ಯ ಕಂಡುಬರುತ್ತದೆ. ಇವನ್ನೆಲ್ಲ ಗಮನಿಸಿದಾಗಕನ್ನಡ ವಿಚಿತ್ರ ವರ್ತಮಾನ ಸಂಗ್ರಹ’ವೇ ಕನ್ನಡದ ಮೊದಲ ಶಾಸ್ತ್ರೀಯ ಸಾಹಿತ್ಯಪತ್ರಿಕೆ ಎಂದು ಕರೆಯಿಸಿಕೊಳ್ಳುವ ಅರ್ಹತೆ ಪಡೆದಿದೆ.
ಇದೇ ಸುಮಾರಿನಲ್ಲಿದ್ದ ಬೆಂಜಮಿನ್ ರೈಸ್ ಅವರ ಅರುಣೋದಯ'ದಲ್ಲಿಕನ್ನಡ ಕಾವ್ಯ, ದಾಸರ ಪದಗಳು ಇತ್ಯಾದಿಗಳನ್ನು ಅನುಕರಿಸಿದ ಹಲವು ಪದ್ಯಗಳು ಹಾಗೂ ಆಂಗ್ಲ ಭಾಷೆಯಿಂದ ಅನುವಾದಗೊಂಡ ಹಲವು ಪದ್ಯಗಳು ದೊರೆಯುತ್ತವೆ. ಇದೆಲ್ಲ ಮತಪ್ರಚಾರದ ದೃಷ್ಟಿಯಿಂದ ಮಾಡಿರುವ ಕಾರಣ ಅದನ್ನು ಸಾಹಿತ್ಯಪತ್ರಿಕೆ ಎಂದು ಕರೆಯುವ ಹಾಗಿಲ್ಲ. ಇದೇ ಕಾಲಕ್ಕೆ ಹುಟ್ಟಿದ್ದಕರ್ನಾಟಕ ವಾಗ್ವಿಧಾಯಿನೀ’ ಪತ್ರಿಕೆಯು ಪ್ರಬಲವಾದ ಒಂದು ಸಾಹಿತ್ಯಪತ್ರಿಕೆಯಾಗಿತ್ತು ಎಂಬ ಮಾತನ್ನು ಐ.ಮಾ. ಮುತ್ತಣ್ಣ ಹೇಳಿದ್ದಾರೆ.21 ಮೈಸೂರಿನಿಂದ ಹೊರಡುತ್ತಿದ್ದ ಈ ಪತ್ರಿಕೆಯಲ್ಲಿ ರೆ.ಎಫ್.ಕಿಟ್ಟೆಲ್ ಅವರೂ ಕೆಲಸ ಮಾಡಿದ್ದಾರೆ. ಇದರಲ್ಲಿ ಕಿಟ್ಟೆಲ್ ಅವರು ರೆ.ಡಾ.ಸ್ಯಾಂಡರ್‌ಸನ್ ಮತ್ತು ಜಾನ್‌ ಗ್ಯಾರೆಟ್ ಅವರೊಂದಿಗೆ ಸೇರಿಕೊಂಡು ಕನ್ನಡ ವ್ಯಾಕರಣವನ್ನು ಧಾರಾವಾಹಿಯಾಗಿ ಪ್ರಕಟಿಸಿದರು. ೧೮೫೯ರಲ್ಲಿ ಪ್ರಾರಂಭವಾದ ವೃತ್ತಾಂತ ಬೋಧಿನಿ'ಯಲ್ಲಿ ಕಿಟ್ಟೆಲ್ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತು ಲೇಖನವನ್ನು ಬರೆದರು. ಕನ್ನಡಿಗರೇ ಆರಂಭಿಸಿದ ಸಾಹಿತ್ಯಪತ್ರಿಕೆ ಯಾವುದು ಎಂಬುದನ್ನು ಗಮನಿಸುವಾಗ ಹಲವು ಗೊಂದಲಗಳು ಎದುರಾಗುತ್ತವೆ. ಇದಕ್ಕೆ ಮುಖ್ಯ ಕಾರಣ ಎಂದರೆ ಆ ಕಾಲದ ಹಲವು ಪತ್ರಿಕೆಗಳು ಇಂದು ನೋಡುವುದಕ್ಕೂ ಲಭ್ಯವಿಲ್ಲದಿರುವುದು. ಬೇರೆಬೇರೆ ಗ್ರಂಥಗಳಲ್ಲಿ ಬಂದಿರುವ ಉಲ್ಲೇಖಗಳು, ಕೆಲವು ಪ್ರಕಟವಾಗಿರುವ ಲೇಖನಗಳ ನೆಲೆಯಿಂದಲೇ ಅವುಗಳ ಸ್ವರೂಪವನ್ನು ನಿರ್ಧರಿಸಬೇಕಾಗಿದೆ. ಇದಕ್ಕೊಂದು ಸಣ್ಣ ಉದಾಹರಣೆ ಇಲ್ಲಿದೆ. ಚಿನ್ನದ ಗರಿ’ಯಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಹಾಗೂ ಪತ್ರಿಕೋದ್ಯಮ' ಎಂಬ ಲೇಖನ ಬರೆದಿರುವ ಶಂಕರ ಪಾಟೀಲರು, ``ಉತ್ತರ ಕರ್ನಾಟಕದಲ್ಲಿಯ ಈ ಕಾಲದಲ್ಲಿಯ ಮುಖ್ಯವಾದ ಸಾಹಿತ್ಯಿಕ ಪತ್ರಿಕೆಗಳೆಂದರೆ ಕಲಾದಗಿಯಿಂದ ಹೊರಡುತ್ತಿದ್ದಹಿತೇಚ್ಛು’, ಧಾರವಾಡದಿಂದ ಹೊರಡುತ್ತಿದ್ದ ವಾಗ್ಭೂಷಣ' (೧೮೯೬),ರಾಜಹಂಸ’ (೧೮೯೪) ಮತ್ತು ಬೆಳಗಾವಿಯಿಂದ
ಪ್ರಕಟವಾಗುತ್ತಿದ್ದ ಶಾಲಾ ಪತ್ರಿಕಾ' (೧೮೬೪) ಹಾಗೂಸತ್ಯವಾದಿ’ ಇವನ್ನು ತೆಗೆದುಕೊಳ್ಳಬಹುದು” ಎನ್ನುತ್ತಾರೆ. ಇದೇ ಲೇಖನದಲ್ಲಿಯೇ ಅವರು ಹೇಳಿರುವ ಪ್ರಕಾರ ಹಿತೇಚ್ಛುವಿನ ಕಾಲ ೧೮೭೦. ಆದರೆಹಿತೇಚ್ಛು’ ಕನ್ನಡ ಪತ್ರಿಕೆಯೋ ಮರಾಠಿ ಪತ್ರಿಕೆಯೋ ಎಂಬ ಅನುಮಾನ ಬರುತ್ತದೆ. ಕಾರಣವೆಂದರೆ ದ.ರಾ. ಬೇಂದ್ರೆಯವರ ಅಭಿಪ್ರಾಯ. ಸುಮಾರು ೧೮೮೦ರಲ್ಲಿ ಅಸ್ತ ಮನ್ವಂತರ ಅಸ್ತವಾಗಿ ಅನುಕರಣ ಮನ್ವಂತರ ಉದಯವಾಯಿತು. ಈ ಹೊತ್ತಿಗೆ ೩-೪ ಕನ್ನಡ ಪತ್ರಿಕೆಗಳು ಹೊರಡುತ್ತಿದ್ದವು. ಆದರೆ `ಧಾರವಾಡ ವೃತ್ತ' (ಧಾರವಾಡ), `ಬೆಳಗಾಂವ ಸಮಾಚಾರ' (ಬೆಳಗಾಂವ), `ಹಿತೇಚ್ಛು' (ಕಲಾದಗಿ, ಈಗಿನ ಬಿಜಾಪುರ ಜಿಲ್ಲೆ) ಮುಂತಾದ ಮಹಾರಾಷ್ಟ್ರ ಪತ್ರಿಕೆಗಳಿಗಿದ್ದ ಮಾನವು ನಮ್ಮ ಪತ್ರಿಕೆಗಳಿಗಿದ್ದಿಲ್ಲ. ಈ ಅನುಕರಣದ ಲಕ್ಷಣವೇ ಇದು... ..''22 ಎಂದು ಬೇಂದ್ರೆ ಹೇಳುವಾಗ `ಹಿತೇಚ್ಛು' ಮರಾಠಿ ಪತ್ರಿಕೆಯಾಗುತ್ತದೆ. ಇಲ್ಲಿ ಮಹಾರಾಷ್ಟ್ರ ಎಂದರೆ ಮರಾಠಿಯಲ್ಲದೆ ಬೇರೆಯಲ್ಲ. ಸದ್ಯಕ್ಕೆ ಬೇಂದ್ರೆಯವರ ಮಾತನ್ನು ಅನುಮೋದಿಸಬಹುದು. ನಂತರ `ರಾಜಹಂಸ'ದ ವಿಚಾರ. ಶಂಕರ ಪಾಟೀಲರು ಇದೇ ಲೇಖನದಲ್ಲಿಯೇಉತ್ತರ ಕರ್ನಾಟಕದ ಕರ್ನಾಟಕ ವೃತ್ತ' ಮತ್ತುಧನಂಜಯ’ ಕರ್ನಾಟಕ ಪತ್ರ' ಹಾಗೂರಾಜಹಂಸ’ಗಳು ಕೆಲ ಮಟ್ಟಿಗೆ ರಾಜಕೀಯ ವಿಚಾರಗಳನ್ನು ಪ್ರಕಟಿಸುತ್ತಿದ್ದವು”, ಎಂಬ ಮಾತನ್ನು ಹೇಳುತ್ತಾರೆ. ಅಂದರೆ ರಾಜಹಂಸ ಶುದ್ಧ ಸಾಹಿತ್ಯ ಪತ್ರಿಕೆ ಅಲ್ಲ ಅಂದಾಯಿತು. ಶಾಲಾ ಪತ್ರಿಕೆ' ಶಿಕ್ಪಣ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಹೆಚ್ಚಾಗಿ ಪ್ರಕಟಿಸುತ್ತಿದ್ದರೂ ನಿಬಂಧ, ಚರಿತ್ರೆ, ವಿಮರ್ಶೆ, ಸಣ್ಣಕತೆಗಳನ್ನು ಪ್ರಕಟಿಸುತ್ತಿತ್ತು ಎಂದು ಶಂಕರ ಪಾಟೀಲರು ಹೇಳುವ ಮೂಲಕ ಇದೂ ಶುದ್ಧ ಸಾಹಿತ್ಯ ಪತ್ರಿಕೆ ಅಲ್ಲ ಎಂಬುದರತ್ತ ಬೆರಳು ತೋರಿಸುವರು. ೧೮೭೪ರಿಂದ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದಕರ್ನಾಟಕ ಜ್ಞಾನ ಮಂಜರಿ’ ಅದು ಒಳಗೊಂಡಿರುವ ವಿಷಯಗಳ ಆಧಾರದ ಮೇಲಿಂದ ಸಾಹಿತ್ಯಪತ್ರಿಕೆ ಎನ್ನಿಸಿಕೊಳ್ಳುವ ಅರ್ಹತೆ ಪಡೆದಿದೆ. ಅದೇ ರೀತಿಯಲ್ಲಿ ಬೆಂಗಳೂರಿನಿಂದ ೧೮೮೩ರಲ್ಲಿ ಹೊರಟ ಹಿತಬೋಧಿನಿ'ಯೂ ಸಾಹಿತ್ಯಪತ್ರಿಕೆಯೇ. ೧೮೯೪ರಿಂದ ಉಡುಪಿಯಿಂದ ಪ್ರಕಟಗೊಳ್ಳುತ್ತಿದ್ದಸುದರ್ಶನ’ ಧರ್ಮ ಸಂಸ್ಕೃತಿ ಮೊದಲಾದವುಗಳ ಜೊತೆ ಪ್ರತಿ ಸಂಚಿಕೆಯಲ್ಲೂ ಸಾಹಿತ್ಯ ವಿಮರ್ಶೆಯನ್ನು ಪ್ರಕಟಿಸುತ್ತಿದ್ದ ಕಾರಣ ಅದನ್ನೂ ಸಾಹಿತ್ಯಪತ್ರಿಕೆ
ಎಂದು ಕರೆಯಬಹುದು. ೧೮೯೨ರಲ್ಲಿ ಮೈಸೂರಿನಲ್ಲಿ ಗ್ಯ್ರಾಜುಯೇಟ್ ಟ್ರೇಡಿಂಗ್ ಅಸೋಸಿಯೇಶನ್' (ಜಿಟಿಎ)ದವರು ಆರಂಭಿಸಿದಕರ್ನಾಟಕ ಗ್ರಂಥ ಮಾಲೆ’ ಅಪ್ಪಟ ಸಾಹಿತ್ಯಪತ್ರಿಕೆ. ಇವರದೇ ಕಾವ್ಯ ಮಂಜರಿ'ಯೂ ಇದೇ ಸಂಘಕ್ಕೆ ಸೇರಿದ ಕೊಮಾಂಡೂರು ಶ್ರೀನಿವಾಸ ಅಯ್ಯಂಗಾರ ಆರಂಭಿಸಿದಕಾವ್ಯಕಲ್ಪದ್ರುಮಮ್’ ಕೂಡ ಕನ್ನಡ ಸಾಹಿತ್ಯಪತ್ರಿಕೆಯೇ. ಆನಂತರದ ದೊಡ್ಡ ಹೆಸರು ಧಾರವಾಡದ ವಿದ್ಯಾವರ್ಧಕ ಸಂಘದವರು ಆರಂಭಿಸಿದ ವಾಗ್ಭೂಷಣ'. ೧೮೯೬ರಲ್ಲಿ ಆರಂಭವಾದ ಇದು ಮಾಡಿದ ಸೇವೆ ಪ್ರತ್ಯೇಕ ಅಧ್ಯಯನಕ್ಕೇ ಒಳಪಡುವಷ್ಟು ವಿಸ್ತಾರವಾದ್ದು. ಅದೇ ವರ್ಷ ಮಂಗಳೂರಿನಿಂದ ಹೊರಟಸತ್ಯ ದೀಪಿಕೆ’ಯೂ ಸಾಹಿತ್ಯಪತ್ರಿಕೆಯೇ. ೧೯೦೦ರ ಸುವಾಸಿನಿ' ಉಡುಪಿಯಿಂದ ೧೯೦೫ರಲ್ಲಿ ಹೊರಟಶ್ರೀಕೃಷ್ಣ ಸೂಕ್ತಿ’ ಕೂಡ ಸಾಹಿತ್ಯ ಪತ್ರಿಕೆ ಎನ್ನಿಸಿಕೊಂಡು ಹಲವು ರೀತಿಯಲ್ಲಿ ಕೆಲಸ ಮಾಡಿವೆ. ಈ ಎಲ್ಲ ಪತ್ರಿಕೆಗಳು ಯಾವ ರೀತಿಯಲ್ಲಿ ಸಾಹಿತ್ಯದ ಬೆಳವಣಿಗೆಗೆ ತಮ್ಮ ಕಾಣಿಕೆ ಸಲ್ಲಿಸಿದವು ಎಂಬುದನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಲಾಗಿದೆ.

ಅಡಿ ಟಿಪ್ಪಣಿ-

೧.ಎಸ್.ಚಂದ್ರಶೇಖರ: ಸಮೂಹ ಮಾಧ್ಯಮಗಳು, ಪುಟ ೧೪೦-೧೪೧
೨. ನೋಡಿ-ಡಿವಿಜಿ: ವೃತ್ತಪತ್ರಿಕೆ
೩. ಬೆಳಗಾವಿಯ `ಕನ್ನಡಮ್ಮ’ ದಿನಪತ್ರಿಕೆಯಲ್ಲಿ ಈ ರೀತಿ ೞಪಂಚಾಯಿತಿ ಕಟ್ಟೆ ಇತ್ತು.
೪. ಸಾಹಿತ್ಯ ಸಂವಾದ ೪೯, ಸಂಪುಟ ೯, ಸಂಚಿಕೆ ೧
೫. ಸಂಕ್ರಮಣ ಸುಪುಟ ೩೦, ಸಂಚಿಕೆ ೧೦-೧೧
೬.ಕನ್ನಡ ಸಾಹಿತ್ಯ ಪತ್ರಿಕೆಗಳು- ಇತಿಹಾಸ- ವರ್ತಮಾನ; ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪುಟ ೧೭, ಇತ್ತಿನ
ಸಾಹಿತ್ಯ ಪತ್ರಿಕೆಗಳು- ಒಂದು ಸಮೀಕ್ಪೆ.
೭.ವಾಗ್ಭೂಷಣ, ಸಂಪುಟ ೨೫, ಸಂಚಿಕೆ ೧, ಎಪ್ರಿಲ್ ೧೯೨೦
೮.ಬುದ್ದಣ್ಣ ಹಿಂಗಮಿರೆ: ಹೊಸಕಾವ್ಯ ಹೊಸದಿಕ್ಕು
೯. ಸಂಕ್ರಮಣ -ಸಂಪುಟ ೨೫, ಸಂಚಿಕೆ ೧, ಜನವರಿ ೧೯೯೦, ಚಂಪಾಕಾಲಂ
೧೦. ಬುದ್ದಣ್ಣ ಹಿಂಗಮಿರೆ; ಹೊಸಕಾವ್ಯ ಹೊಸದಿಕ್ಕು
೧೧.ಸಂಕ್ರಮಣ, ಸಂಪುಟ ಸಂಚಿಕೆ
೧೨.ನಿರಂತರ ಸವಾಲುಗಳು ನಿರಂತರ ಸಂವಾದ- ಒಂದಿಷ್ಟು ಟಿಪ್ಪಣಿಗಳು, ರಾಘವೇಂದ್ರ ಪಾಟೀಲ, ಸಾಹಿತ್ಯ ಸಂವಾದ,
ಸಂಪುಟ ೭, ಸಂಚಿಕೆ ೩೮, ಮಾರ್ಚ್-ಎಪ್ರಿಲ್ ೧೯೯೪
೧೩. ಸಾಹಿತ್ಯ ಸಂವಾದ, ಸಂಪುಟ ೭, ಸಂಚಿಕೆ ೩೮, ಮಾರ್ಚ್-ಎಪ್ರಿಲ್ ೧೯೯೪
೧೪. ಸಾಹಿತ್ಯ ಸಂವಾದ- ಸಂಪುಟ ೭, ಸಂಚಿಕೆ ೩೮
೧೫. ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ ಕಾವ್ಯದ ಪ್ರಭಾವ- ಪುಟ ೧೨೫-೧೨೬
೧೬. ವಾಗ್ಭೂಷಣ; ಸಂಪುಟ ೩೩, ಸಂಚಿಕೆ ೪, ಡಿಸೆಂ. ೧೯೨೯
೧೭.ಸಾಹಿತ್ಯ ಪ್ರೇರಣೆ- ೧೯೭೫- ಪುಟ ೧೭
೧೮. ನಾನು ಕಂಡ ಗೆಳೆಯರ ಗುಂಪು- ಶೇ.ಗೋ.ಕುಲಕರ್ಣಿ
೧೯. ಆನಂದಕಂದ- ಪುಟ ೪೩
೨೦. ಪಾ.ವಿ.ಕ.ಸೇವೆ. ಪುಟ- ೩೦೮, .ಮಾ. ಮುತ್ತಣ್ಣ
೨೧.ಪಾ.ವಿ.ಕ.ಸೇ. ಪುಟ ೩೧೦, ಐ.ಮಾ.ಮುತ್ತಣ್ಣ
೨೨. ಬೇಂದ್ರೆ- ಸಾಹಿತ್ಯ ಸಂಶೋಧನೆ- ಪುಟ ೧೭೬