ಪ್ರಸ್ತಾವನೆ

ಅಧ್ಯಯನದ ವ್ಯಾಪ್ತಿ ಮತ್ತು ಉದ್ದೇಶ: ಕನ್ನಡ ಸಾಹಿತ್ಯ ಹಲವು ಘಟ್ಟಗಳಲ್ಲಿ ಹಾಯ್ದು ಬರುವಾಗ ವಿಭಿನ್ನ ರೀತಿಯ ಪ್ರಭಾವಗಳಿಗೆ ಒಳಗಾಗುತ್ತ, ಅದರಿಂದ ಪುಷ್ಟಗೊಳ್ಳುತ್ತ ಬಂದಿದೆ. ಇಂಥ ಪ್ರಭಾವಗಳನ್ನು ಕಾಲಕಾಲಕ್ಕೆ ವಿದ್ವಾಂಸರು ಗುರುತಿಸುತ್ತ ದಾಖಲಿಸುತ್ತ ಬಂದಿದ್ದಾರೆ. ಸಾಹಿತ್ಯಕ್ಕೆ ಸಮಾಜವು ಪ್ರತಿಸ್ಪಂದಿಸಿದುದರ ಪರಿಣಾಮವಿದು ಎಂದು ಹೇಳಬಹುದು. ಇಂತಹ ಪ್ರತಿಸ್ಪಂದನ ಪತ್ರಿಕೆಗಳ ಮೂಲಕವೇ ಹೆಚ್ಚು ಪ್ರಕಟವಾಗಿ ಸಾಹಿತ್ಯವನ್ನು ಪೋಷಿಸಿವೆ. ಆಧುನಿಕ ಕಾಲದಲ್ಲಿ ಪತ್ರಿಕೆಗಳು ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿವೆ. ಬದುಕಿನ ಆಗುಹೋಗುಗಳನ್ನು ದಾಖಲಿಸುತ್ತ ವರದಿ ಮಾಡುವ ಪತ್ರಿಕೆಗಳು ಒಂದು ಅರ್ಥದಲ್ಲಿ ಜೀವನದ ಪ್ರತಿಬಿಂಬ, ಇನ್ನೊಂದು ಅರ್ಥದಲ್ಲಿ ಜೀವನದ ವಿಮರ್ಶಕ. ಸಾಹಿತ್ಯವನ್ನೂ ಬದುಕಿನ ಪ್ರತಿಬಿಂಬ, ವಿಮರ್ಶಕ ಎಂದೂ ಕರೆದದ್ದಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಮತ್ತು ಪತ್ರಿಕೆ ಅವಳಿಜವಳಿ ಎನ್ನಬಹುದು. ಒಂದು ಇನ್ನೊಂದರ ಮೇಲೆ ಪ್ರಭಾವ ಬೀರಿರಬಹುದು. ಈ ಪ್ರಭಾವಗಳನ್ನು ದಾಖಲಿಸುವುದೂ ಸಾಹಿತ್ಯಾಧ್ಯಯನ ಸಂದರ್ಭದಲ್ಲಿ ಅತ್ಯಂತ ಮುಖ್ಯವಾಗಿದೆ. ಆಧುನಿಕ ಕನ್ನಡ ಸಾಹಿತ್ಯ ಪುಷ್ಟಗೊಳ್ಳುವಲ್ಲಿ ಪತ್ರಿಕೆಗಳ ಪಾತ್ರ ವಿಶಿಷ್ಟವಾದದ್ದು. ಬಹುಶಃ ಇದುವರೆಗೆ ಆ ಬಗ್ಗೆ ವಿವರವಾದ ಅಧ್ಯಯನ ನಡೆದಿಲ್ಲ. ಕೆಲವು ವಿದ್ವಾಂಸರು ಸಾಂದರ್ಭಿಕವಾಗಿ ಪತ್ರಿಕೆ ಮತ್ತು ಸಾಹಿತ್ಯದ ಸಂಬಂಧದ ಬಗೆಗೆ ಉಲ್ಲೇಖಿಸಿದ್ದಾರೆ. ರಾ.ಯ. ಧಾರವಾಡಕರ ಅವರ ‘ಹೊಸಗನ್ನಡದ ಉದಯ ಕಾಲ’, ಶ್ರೀನಿವಾಸ ಹಾವನೂರ ಅವರ ‘ಹೊಸಗನ್ನಡದ ಅರುಣೋದಯ’, ಐ.ಮಾ. ಮುತ್ತಣ್ಣ ಅವರ ‘ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ’, ಇಲ್ಲೆಲ್ಲ ಪ್ರಾಸಂಗಿಕವಾಗಿ ಪತ್ರಿಕೆಗಳ ಬಗೆಗೆ ಮಾತುಗಳು ಬಂದಿವೆ. ಪ್ರಸ್ತುತ ಅಧ್ಯಯನದಲ್ಲಿ ಸಾಹಿತ್ಯದ ದಿಕ್ಕು ದೆಸೆಗಳನ್ನು ನಿರ್ಧರಿಸುವಲ್ಲಿ ಸಾಹಿತ್ಯಪತ್ರಿಕೆಗಳು ವಹಿಸಿದ ಪಾತ್ರವನ್ನು ವಿಶ್ಲೇಷಿಸಲಾಗಿದೆ. ಜೊತೆಯಲ್ಲಿಯೇ ಸಾಹಿತ್ಯಪತ್ರಿಕೆಗಳ ಪರಂಪರೆ ಹಾಗೂ ಅವುಗಳ ಸಂಕ್ಷಿಪ್ತ ಪರಿಚಯವನ್ನು ಕೊಡಲು ಉದ್ದೇಶಿಸಲಾಗಿದೆ. ಪತ್ರಿಕೆಗಳು ಹೇಗೆ ಕನ್ನಡಕ್ಕೆ ಪಾಶ್ಚಾತ್ಯ ವಿದ್ವಾಂಸರ ಕೊಡುಗೆಯೋ ಹಾಗೆಯೇ ಸಾಹಿತ್ಯದ ಪ್ರಸಾರಕ್ಕಾಗಿಯೇ ಪತ್ರಿಕೆಯನ್ನು ನಡೆಸುವ ಆಲೋಚನೆಯೂ ಪಾಶ್ಚಾತ್ಯರ ಕೊಡುಗೆಯೇ ಆಗಿದೆ. ಕನ್ನಡದಲ್ಲಿ ಸಾಹಿತ್ಯಪತ್ರಿಕೆಯನ್ನು ಮೊದಲು ಆರಂಭಿಸಿದವರು ಪಾಶ್ಚಾತ್ಯ ವಿದ್ವಾಂಸರೇ. ಕನ್ನಡದ ಮೊದಲ ಸಾಹಿತ್ಯ ಪತ್ರಿಕೆ ಯಾವುದು ಎಂಬದರ ಚರ್ಚೆ ಇಲ್ಲಿದೆ.
ಹೊಸಗನ್ನಡದ ಉದಯ ಕಾಲದಲ್ಲಿಯೇ ಕನ್ನಡ ಪತ್ರಿಕೋದ್ಯಮವೂ ಹುಟ್ಟಿಕೊಂಡಿತು. ಪರಸ್ಪರ ಒಂದಕ್ಕೊಂದು ನೆರವಾಗುತ್ತ ಬೆಳೆದವು. ಸಾಹಿತ್ಯದ ವಿವಿಧ ಪ್ರಕಾರಗಳ ಪ್ರಚಾರಕ್ಕಾಗಿಯೇ ಜನ್ಮ ತಳೆದ ಪತ್ರಿಕೆಗಳಿವೆ. ಸಾಹಿತ್ಯ ಕ್ಷೇತ್ರ ಹೊರಳುತ್ತಿರುವ ಚಿಂತನೆಗಳನ್ನು ಪ್ರೋತ್ಸಾಹಿಸಿದ ಅನೇಕ ಪತ್ರಿಕೆಗಳಿವೆ. ಸಾಹಿತ್ಯ ಕ್ಷೇತ್ರ ಕಂಡುಕೊಂಡ ಅನೇಕ ಆಯಾಮಗಳಲ್ಲಿ ಪತ್ರಿಕೆಗಳು ನಿರ್ದಿಷ್ಟ ಪಾತ್ರ ವಹಿಸಿರುವುದನ್ನು ಗಮನಿಸಬಹುದು.
ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದ ವಿವಿಧ ಹಂತಗಳಲ್ಲಿ ಪತ್ರಿಕೆಗಳು ವಹಿಸಿದ ಪಾತ್ರವನ್ನು ಗಮನಿಸಬೇಕಾಗಿದೆ. ಸಾಹಿತ್ಯದ ನೆಲೆ ಬೆಲೆಗಳನ್ನು ನಿರ್ಧರಿಸುವಲ್ಲಿ ಅಂದಂದಿನ ಪತ್ರಿಕೆಗಳು ತಮ್ಮ ಕೊಡುಗೆಗಳನ್ನು ನೀಡಿವೆ. ಕಾದಂಬರಿಯಂಥ ನೂತನ ಪ್ರಕಾರವೊಂದು ನಮ್ಮಲ್ಲಿ ರೂಪು ತಳೆಯುತ್ತಿದ್ದಾಗ ಅದರ ಸ್ವರೂಪದ ಚರ್ಚೆ ಅಂದಿನ ಪತ್ರಿಕೆಗಳಲ್ಲಿ ಮೂಡಿ ಬಂದಿದೆ. ‘ಸುವಾಸಿನಿ’ ಪತ್ರಿಕೆಯ ೧೯೦೦ರ ಸೆಪ್ಟೆಂಬರ್ ಸಂಚಿಕೆಯಲ್ಲಿ ‘ಕಾದಂಬರಿ’ ಪದವನ್ನು ಕುರಿತ ಚರ್ಚೆ ನಡೆದಿದೆ. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಈ ಸಾಹಿತ್ಯ ಪಂಥಗಳು ನೆಲೆಗೊಳ್ಳುವಾಗ ಅವುಗಳ ಸ್ವರೂಪ ನಿರ್ಣಯ ಸಾಹಿತ್ಯಪತ್ರಿಕೆಗಳಿಂದಲೇ ಆಗಿವೆ. ಸಾಹಿತ್ಯ ಕೃತಿ, ಸಾಹಿತ್ಯ ಪ್ರಕಾರ, ಸಾಹಿತ್ಯ ಪಂಥ ಇವುಗಳ ಪ್ರತಿಪಾದನೆಯಲ್ಲಿ ಸಾಹಿತ್ಯಪತ್ರಿಕೆಗಳ ಪಾತ್ರ ನಿರ್ಣಾಯಕ ಸ್ವರೂಪದ್ದು. ಭಾಷಾಂತರ ರೂಪಾಂತರಗಳ ಸ್ವರೂಪ ಕನ್ನಡದಲ್ಲಿ ಹೇಗಿರಬೇಕು ಎಂಬ ಚರ್ಚೆ ಈ ಶತಮಾನದ ಆದಿಯಲ್ಲಿಯೇ ಸಾಹಿತ್ಯಪತ್ರಿಕೆಗಳಲ್ಲಿ ನಡೆಯಿತು. ಪಂಪ ಭಾರತದ ‘ಭಾನುಮತಿ ನೆತ್ತಮನಾಡಿ ಸೋಲ್ತಡೆ …’ ಎಂಬ ಈ ಒಂದು ಪದ್ಯದ ಬಗೆಗೆಯೇ ಅರ್ಧ ಶತಮಾನ ಕಾಲ ವಿದ್ವಾಂಸರು ಸಾಹಿತ್ಯಪತ್ರಿಕೆಗಳಲ್ಲಿ ವಾದ ಪ್ರತಿವಾದಗಳ ಮಂಡನೆ ಮಾಡಿದ್ದರು. ಇಂದಿಗೂ ಆ ಚರ್ಚೆ ಮುಂದುವರಿದಿದೆ. ಪ್ರಾಸ ಬೇಕೆ ಬೇಡವೆ ಎಂಬ ಬಗೆಗೆ ಚರ್ಚೆ ನಡೆದಿದೆ. ಕನ್ನಡದ ಪ್ರಮುಖ ಸಾಹಿತಿಗಳೆಲ್ಲ ಒಂದೊಂದು ಪತ್ರಿಕೆಯ ಜೊತೆಯಲ್ಲಿ ಸಂಬಂಧ ಹೊಂದಿದ್ದರು. ಬೇಂದ್ರೆ ‘ಜಯಕರ್ನಾಟಕ’, ಬೆಟಗೇರಿ ಕೃಷ್ಣಶರ್ಮ ‘ಜಯಂತಿ’, ಮಾಸ್ತಿ ‘ಜೀವನ’, ಬಸವರಾಜ ಕಟ್ಟೀಮನಿ ‘ಉಷಾ’, ಗೋಪಾಲಕೃಷ್ಣ ಅಡಿಗರು ‘ಸಾಕ್ಷಿ’, ಅನಂತಮೂರ್ತಿ ‘ರುಜುವಾತು’, ಚಂದ್ರಶೇಖರ ಪಾಟೀಲ ‘ಸಂಕ್ರಮಣ’. ಇವು ಆಯಾ ಕಾಲದ ಸಾಹಿತ್ಯದ ಮುಖವಾಣಿಯಾಗಿದ್ದವು. ಶಿವರಾಮ ಕಾರಂತರ ‘ವಸಂತ’ ಮಹತ್ವದ ಪತ್ರಿಕೆ. ಅವರ ‘ಭೂತ’, ‘ವಿಚಿತ್ರ ಕೂಟ’ಗಳನ್ನು ‘ವಸಂತ’ದ ಹಳೆಯ ಸಂಚಿಕೆಗಳಲ್ಲಿ ಮಾತ್ರ ನೋಡಬಹುದು. ಹೀಗೆ ಸಾಹಿತ್ಯದ ಬೆಳವಣಿಗೆಯನ್ನು ಪತ್ರಿಕೆಗಳು ಎಚ್ಚರದಿಂದ ಗಮನಿಸಿವೆ. ಪ್ರತಿಕ್ರಿಯಿಸಿವೆ. ಪರಿಣಾಮವಾಗಿ ಅನೇಕ ಓದುಗರು, ಲೇಖಕರು ಸಾಹಿತ್ಯ ಚರ್ಚೆಯಲ್ಲಿ ಮುಕ್ತವಾಗಿ ಪಾಲುಗೊಳ್ಳುವಲ್ಲಿ ನೆರವಾಗಿವೆ. ಮುಕ್ತ ಚರ್ಚೆಗೆ ವೇದಿಕೆಯೊದಗಿಸಿವೆ.
೧೯ನೇ ಶತಮಾನದ ಉತ್ತರಾರ್ಧದಲ್ಲಿ ಮುಂಬಯಿಯಲ್ಲಿ ಕರ್ಕಿಯ ಸೂರಿ ವೆಂಕಟರಮಣ ಶಾಸ್ತ್ರಿ ಪತ್ರಿಕೆಗಳ ಮೂಲಕ ಭ್ರಷ್ಟಾಚಾರವನ್ನು ಖಂಡಿಸಿದರು. ಸಾಮಾಜಿಕ ಬದಲಾವಣೆಗಳ ಕಹಳೆ ಮೊಳಗಿಸಿದರು. ಶ್ರೀಮಂತರು ಎಳೆಯ ಹೆಣ್ಣುಗಳನ್ನು ಮದುವೆಯಾಗುವುದು ಇಂದಿಗೂ ಇದೆ. ವಿಧವಾ ವಪನ ೨೦ನೇ ಶತಮಾನದ ಕೊನೆಯ ಕಥೆಗಳಲ್ಲೂ ವಸ್ತುವಾಗಿ ಮೂಡಿದೆ. ವಿಧವೆಯರ ಮರು ವಿವಾಹ ಇಂದಿಗೂ ಸಮಾಜದಲ್ಲಿ ಪ್ರತಿಪಾದನೆಯಾಗಬೇಕಾದ ವಿಷಯ. ವಿಷಮ ಜೋಡಿಯ ಕೆಡುಕು ಕುವೆಂಪು ಅವರ ‘ಕಾನೂರು ಹೆಗ್ಗಡಿತಿ’ಯಲ್ಲಿದ್ದರೆ ‘ಫಣಿಯಮ್ಮ’ ‘ಘಟಶ್ರಾದ್ಧ’ಗಳಲ್ಲಿ ವಿಧವೆಯ ಸಮಸ್ಯೆ ಇದೆ. ೧೯ನೇ ಶತಮಾನದ ಕೊನೆಯಲ್ಲಿ ವಿಧವೆಯರ ಮರುವಿವಾಹ ಪತ್ರಿಕೆಗಳಲ್ಲಿ ಚರ್ಚೆಯ ವಿಷಯವಾಗಿತ್ತು. ಅದೇ ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’ ಕಾದಂಬರಿಯಲ್ಲಿ ಮೂಡಿಬಂದಿದೆ. ಪತ್ರಿಕೆಗಳು ಸಾಹಿತ್ಯ ಕೃತಿಗಳ ಸಾಮಾಜಿಕ ಆಶಯಗಳ ಮೇಲೂ ಒಂದು ತೆರನ ಹಿಡಿತ ಸಾಧಿಸಿದೆ ಎಂಬುದನ್ನು ಇವುಗಳಿಂದ ತಿಳಿದುಕೊಳ್ಳಬಹುದು.
ಪತ್ರಿಕೆಯ ಪ್ರಕಟಣೆಯು ಅಂದು ಸಾಂಸ್ಕೃತಿಕ ಬದುಕಿನ ಒಂದು ಅಂಗವಾಗಿದ್ದಿತು. ಈ ಸಾಂಸ್ಕೃತಿಕ ಕೇಂದ್ರವು ಕನ್ನಡ ನಾಡಿನ ಯಾವುದೋ ಒಂದು ಮೂಲೆಯಲ್ಲಿ ಕೇಂದ್ರೀಕೃತವಾಗಿರಲಿಲ್ಲ. ನಾಡಿನ ವಿವಿಧ ಮೂಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆದುದು ಕಂಡು ಬರುತ್ತದೆ. ರಾಜಾಶ್ರಯದ ಮೈಸೂರು ಒಂದೆಡೆ ಇದ್ದರೆ ಜನಾಶ್ರಯವನ್ನೇ ನೆಚ್ಚಿಕೊಂಡು ಬೆಂಗಳೂರು, ಮಂಗಳೂರು, ಧಾರವಾಡಗಳಲ್ಲಿಯೂ ಸಾಹಿತ್ಯಕ ಚಟುವಟಿಕೆಗಳು ನಡೆಯುತ್ತಿದ್ದವು. ದೂರದ ಮುಂಬಯಿಯಲ್ಲಿ ಶಿಕ್ಷಣಕ್ಕೆ, ಉದ್ಯೋಗಕ್ಕೆ ತೆರಳುತ್ತಿದ್ದ ಉತ್ತರ ಕನ್ನಡ, ಧಾರವಾಡ ಕಡೆಯ ಕನ್ನಡಿಗರು ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದುದನ್ನು ಗಮನಿಸಬಹುದು. ಧಾರವಾಡದ ವಿದ್ಯಾವರ್ಧಕ ಸಂಘ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಸ್ಥಾನಗಳಲ್ಲಿ ಒಂದಾಗಿತ್ತು. ಅದು ಆರಂಭಿಸಿದ ‘ವಾಗ್ಭೂಷಣ’ ಕನ್ನಡವನ್ನು ಹಲವು ರೀತಿಯಲ್ಲಿ ಬೆಳೆಸಿತು. ಮಂಗಳೂರಿನಲ್ಲಿಯೇ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಹೊರಟಿದ್ದು. ಇಲ್ಲಿಯ ಚಟುವಟಿಕೆಗಳು ಹೆಚ್ಚಾಗಿ ಕ್ರೈಸ್ತ ಮಿಷನರಿಗಳಿಗೆ ಸಂಬಂಧಿಸಿದ್ದು. ಆದರೂ ಇಲ್ಲಿ ‘ಸುವಾಸಿನಿ’ಯಂಥ ಸಾಹಿತ್ಯಪತ್ರಿಕೆ ಹೊರಟಿದೆ. ಕೆ.ಶಿವರಾಮ ಕಾರಂತರ ‘ವಸಂತ’ ಮೊದಲು ಕುಂದಾಪುರ ನಂತರ ಮಂಗಳೂರಿನಿಂದ ಹೊರಟಿತು. ಮುಂಬಯಿಯಿಂದ ‘ಹವ್ಯಕ ಸುಬೋಧ’, ‘ಕನ್ನಡ ಸುವಾರ್ತೆ’ ಪ್ರಕಟವಾಗುತ್ತಿದ್ದವು. ೨೦ನೆ ಶತಮಾನದ ಎರಡನೆ ದಶಕದಲ್ಲಿ ಧಾರವಾಡದಲ್ಲಿ ಯಶವಂತರಾವ ಜಠಾರರು ‘ಪ್ರಭಾತ’ದಲ್ಲಿ ಕೇವಲ ಕವಿತೆಗಳನ್ನಷ್ಟೇ ಪ್ರಕಟಿಸುತ್ತಿದ್ದರು. ಎಂ.ಕೆ.ಹುಬ್ಬಳ್ಳಿಯ ರಾಜೇಂದ್ರ ಪಾಟೀಲರು ‘ಕಾವ್ಯಶ್ರೀ’ ಮಾಸಿಕವನ್ನು ಕಾವ್ಯ ಪ್ರಕಟಣೆಗಾಗಿಯೇ ೧೯೭೫ರಿಂದ ೮೦ರ ವರೆಗೆ ನಡೆಸಿದ್ದರು. ಧಾರವಾಡದ ‘ಚಂದ್ರೋದಯ’ ಬೆಂಗಳೂರಿನ ‘ಹಿತಬೋಧಿನಿ’ ಇದೇ ಉದ್ದೇಶದ ಆರಂಭಿಕ ಪತ್ರಿಕೆಗಳು. ಇಂದು ಈ ಸಾಲಿಗೆ ಧಾರವಾಡದಿಂದ ‘ಸಂಕ್ರಮಣ’, ಬೆಂಗಳೂರಿನಿಂದ ‘ಶೂದ್ರ’, ಚಿತ್ರದುರ್ಗದಿಂದ ‘ಸಾಹಿತ್ಯ ಸಂವಾದ’ …. ಹೀಗೆ ಸೇರುತ್ತವೆ. ಸಾಕ್ಷಿ, ರುಜುವಾತುಗಳು ಇಂದು ನಿಲುಗಡೆಯಾಗಿದ್ದರೂ ಅವು ಮಾಡಿದ ಪ್ರಭಾವ ದಾಖಲಾರ್ಹವಾದದ್ದು. ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ ಸ್ತರದಲ್ಲಿ ಪಿ.ಲಂಕೇಶರ ‘ಲಂಕೇಶ ಪತ್ರಿಕೆ’ ವಹಿಸಿರುವ ಪಾತ್ರವೂ ಗಮನಾರ್ಹವಾದದ್ದು. ಅನೇಕ ಹೊಸ ಲೇಖಕರ ಪೀಳಿಗೆಯನ್ನು ಸೃಷ್ಟಿಸಿದ ಕೀರ್ತಿ ಅದಕ್ಕೆ ಸಲ್ಲಬೇಕು. ಜನಪ್ರಿಯ ಪತ್ರಿಕೆಯಾಗಿದ್ದುಕೊಂಡೂ ಗಂಭೀರ ಸಾಹಿತ್ಯ ಪ್ರಕಟಿಸಿ ಪ್ರೋತ್ಸಾಹಿಸಿದ್ದು, ಅದಕ್ಕೊಂದು ಓದುಗ ವರ್ಗವನ್ನು ಸೃಷ್ಟಿಸಿದ್ದು ಮುಖ್ಯ ಸಾಧನೆ. ಇವುಗಳನ್ನೆಲ್ಲ ಗಮನಿಸಿದರೆ ಸಾಹಿತ್ಯ ಬೆಳವಣಿಗೆಯನ್ನು ಸಾಮಾಜಿಕ ಸಂವಾದದ ಮುಖ್ಯಭಾಗವಾಗಿ ಪರಿಗಣಿಸಲು ಬರೆಹಗಾರರು ಯತ್ನಿಸಿದರೆಂಬ ಸಂಗತಿ ವೇದ್ಯವಾಗುತ್ತದೆ.
ಸಾಹಿತ್ಯಪತ್ರಿಕೆಗಳನ್ನು ಇಂದೂ ಕೆಲವು ವ್ಯಕ್ತಿಗಳು ನಡೆಸುತ್ತಿದ್ದಾರೆ. ವಿದ್ಯಾವರ್ಧಕ ಸಂಘವು ೧೯ನೆ ಶತಮಾನದ ಕೊನೆಯಲ್ಲಿಯೇ ‘ವಾಗ್ಭೂಷಣ’ ಪತ್ರಿಕೆ ಆರಂಭಿಸಿತು. ವ್ಯಕ್ತಿಗಳು ನಡೆಸುವ ಪತ್ರಿಕೆಗಳು ಸಾಮಾನ್ಯವಾಗಿ ಅಲ್ಪಾಯುಷಿಯಾದುದು. ದೀರ್ಘಕಾಲದ ವರೆಗೆ ಲಾಭವಿಲ್ಲದ ದಂಧೆ ನಡೆಸುವುದು, ಆರಂಭದ ಉತ್ಸಾಹವನ್ನು ಕೊನೆಯ ತನಕ ಇಟ್ಟುಕೊಳ್ಳುವುದು ಕಷ್ಟ. ಇದಕ್ಕೆ ‘ಸಂಕ್ರಮಣ’, ‘ಶೂದ್ರ’ ಅಪವಾದವಿರಬಹುದು. ಹಿಂದೆ ಬೆಟಗೇರಿ ಕೃಷ್ಣಶರ್ಮರು ‘ಜಯಂತಿ’ಯನ್ನು ದೀರ್ಘ ಕಾಲದ ವರೆಗೆ ನಡೆಸಿದ್ದರು. ಆದರೂ ಸಾಹಿತ್ಯಪತ್ರಿಕೆಗಳಿಗೆ ಸಂಘ, ಸಂಸ್ಥೆಗಳ ಆಸರೆ ಇದ್ದರೆ ಅನುಕೂಲ. ಇಂದು ವಿಶ್ವವಿದ್ಯಾಲಯಗಳು ಇಂಥ ಸಾಹಿತ್ಯಪತ್ರಿಕೆಗಳನ್ನು ನಡೆಸುತ್ತಿವೆ. ಹೀಗೆ ಸಾಹಿತ್ಯಪತ್ರಿಕೆಗಳು ವ್ಯಕ್ತಿಗಳಿಂದ ಸಂಘ ಸಂಸ್ಥೆಗಳ ಅಧೀನಕ್ಕೊಳಗಾಗುತ್ತ ಬಂದ ಹಾಗೆ ಅವುಗಳಿಗೆ ಒಂದು ಸಾಮಾಜಿಕ ಜವಾಬ್ದಾರಿಯೂ ಪ್ರಾಪ್ತವಾಗಿರುವುದು ಕಂಡುಬರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ‘ಸಾಹಿತ್ಯ ಪರಿಷತ್ಪತ್ರಿಕೆ’ ‘ಕನ್ನಡ ನುಡಿ’ ಹೊರಡಿಸುತ್ತಿದೆ. ‘ಕರ್ನಾಟಕ ಭಾರತಿ’, ‘ಸಾಧನೆ’, ‘ಪ್ರಬುದ್ಧ ಕರ್ನಾಟಕ’, ‘ಕನ್ನಡ ಅಧ್ಯಯ’ನಗಳು ವಿಶ್ವವಿದ್ಯಾಲಯಗಳಿಂದ ಬರುತ್ತಿವೆ. ಇಂತಹ ಅನೇಕ ಸಾಂಸ್ಥಿಕ ಪತ್ರಿಕೆಗಳೂ ತಮ್ಮ ಮಿತಿಯಲ್ಲಿ ಸಾಹಿತ್ಯ ಕೈಂಕರ್ಯ ನಡೆಸಿವೆ. ಸಾಹಿತ್ಯಪತ್ರಿಕೆಗಳ ಪ್ರಮುಖ ಕಾಳಜಿಗಳನ್ನು ಉದ್ದಕ್ಕೂ ನಾವು ಗಮನಿಸಿದಾಗ ಆದಿಯಿಂದ ಇಂದಿನವರೆಗೆ ಅವು ಒಂದೇ ಆಗಿವೆ. ನಾಡು, ನುಡಿ, ಸಮಾಜ, ಸಾಮಾಜಿಕ ನ್ಯಾಯ, ಧರ್ಮ, ಪರಂಪರೆಯ ಪ್ರೀತಿ, ಜೊತೆಯಲ್ಲಿ ಭವ್ಯತೆಯ ಕನಸು. ಹಲವು ಸಾಹಿತ್ಯಕ ಚಳವಳಿಗೆ ಸಾಹಿತ್ಯಪತ್ರಿಕೆಗಳು ವೇದಿಕೆಯಾಗಿವೆ. ನೂತನ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಯಲ್ಲಿಯೇ ಹೊಸ ಫಸಲನ್ನು ತೂಗಿ ನೋಡಿ ಸಾಹಿತ್ಯ ಮೀಮಾಂಸೆಯನ್ನು ಸಾಹಿತ್ಯಪತ್ರಿಕೆಗಳು ಕಟ್ಟಿಕೊಟ್ಟಿವೆ. ಹೊಸ ಪಾರಿಭಾಷಿಕಗಳನ್ನು ಸೃಷ್ಟಿಸಿವೆ. ಇವೆಲ್ಲವುಗಳನ್ನು ಪ್ರಸ್ತುತ ಪ್ರಬಂಧದಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ.
ಪತ್ರಿಕೆಗಳು ಹುಟ್ಟಿಕೊಂಡ ಆರಂಭ ಕಾಲದಲ್ಲಿ ಸಂಪೂರ್ಣವಾದ ಸಾಹಿತ್ಯಪತ್ರಿಕೆಗಳು ಕನ್ನಡದಲ್ಲಿ ಇರಲಿಲ್ಲ. ಆರಂಭದ ಪತ್ರಿಕೆಗಳು ಸಾಹಿತ್ಯ ಪ್ರಕಟಣೆ ಮಾಡಿ ಆ ಮೂಲಕ ಹೊಸ ಪೈರನ್ನು ಪರಿಚಯಿಸುವುದಷ್ಟಕ್ಕೆ ಸೀಮಿತವಾಗಿದ್ದವು. ಅಂಥದ್ದರಲ್ಲೂ ಸಾಹಿತ್ಯದ ಕೆಲವು ತೊಡಕುಗಳ ಬಗ್ಗೆ ವಿವರವಾದ ಚರ್ಚೆ ಇವುಗಳಲ್ಲಿ ನಡೆದಿವೆ. ಆರಂಭ ಕಾಲದ ಪತ್ರಕರ್ತರ ಎದುರು ಅವರು ಉತ್ತರಿಸಲೇಬೇಕಾದ ಕೆಲವು ಸವಾಲುಗಳಿದ್ದವು. ಅವುಗಳಲ್ಲಿ ಒಂದು ಸ್ವಧರ್ಮದ ಮೇಲೆ ಅನ್ಯಾಕ್ರಮಣ, ಇನ್ನೊಂದು ಸಮಾಜ ಸುಧಾರಣೆ. ಇವುಗಳ ಜೊತೆಯಲ್ಲಿ ನಾಡಿನ ಏಕೀಕರಣ, ನುಡಿಯ ಬೆಳವಣಿಗೆ. ಸಮಾಜ ಸುಧಾರಣೆಯಲ್ಲಿ ಸ್ತ್ರೀ ಸಮಸ್ಯೆ ಪ್ರಮುಖವಾದದ್ದು. ಇದು ಆ ಕಾಲದ ಸಾಹಿತ್ಯದಲ್ಲಿ ಒಡಮೂಡಿದ ಹಾಗೆ ಪತ್ರಿಕೆಗಳಲ್ಲೂ ಚರ್ಚಿತವಾಗಿದೆ. ಇಷ್ಟಾಗಿಯೂ ಪ್ರಕಟಿತ ಸಾಹಿತ್ಯ ಗಮನಿಸಿ ಸಿದ್ಧಾಂತವನ್ನು, ಸಾಹಿತ್ಯ ವಿಮರ್ಶೆಯನ್ನು, ಮೀಮಾಂಸೆಯನ್ನು ರೂಪಿಸುವಲ್ಲಿ ನಡೆದ ಪ್ರಯತ್ನ ಗೌಣ. ಅದೇ ನವೋದಯ ಸಂದರ್ಭದಲ್ಲಿ ಸಾಹಿತ್ಯಪತ್ರಿಕೆಗಳು ಹೊಸ ಸಾಹಿತ್ಯವನ್ನು ಪ್ರಕಟಿಸುವುದರ ಜೊತೆಯಲ್ಲಿಯೇ ನವೋದಯ ವಿಮರ್ಶೆಯನ್ನೂ ರೂಪಿಸಿದವು. ಒಂದು ಸಾಹಿತ್ಯ ಮಾರ್ಗ ನೆಲೆಗೊಳ್ಳುವಲ್ಲಿ ನಿರ್ದಿಷ್ಟ ಪಾತ್ರ ವಹಿಸಿದವು. ನವೋದಯ ಕಾವ್ಯ ಮೀಮಾಂಸೆ ಹುಟ್ಟಿಕೊಂಡಿತು. ಮುಂದೆ ಪ್ರಗತಿಶೀಲರ ಹಾಗೂ ನವ್ಯರ ಕಾಲದಲ್ಲಿ ಆ ಸಾಹಿತ್ಯ ಪಂಥಗಳಿಗೆ ಬಂದ ಟೀಕೆಗಳಿಗೆ ಉತ್ತರಿಸಲು ಪತ್ರಿಕೆಗಳು ನೆರವಾದವು. ಪ್ರಗತಿಶೀಲ ಚಳವಳಿ ಹಾದಿ ತಪ್ಪುತ್ತಿದೆ ಎಂದು ಅನ್ನಿಸಿದಾಗ ಅದನ್ನು ಸರಿದಾರಿಯಲ್ಲಿ ತರಲು ಪತ್ರಿಕೆಗಳಲ್ಲಿ ಚರ್ಚೆಗಳು ನಡೆದವು. ನವ್ಯ ವೈಯಕ್ತಿಕ ಪ್ರಯೋಗಶೀಲತೆಯ ಫಲವಾಗಿ ಹುಟ್ಟು ಪಡೆದರೂ ಅದನ್ನು ಸಮರ್ಥಿಸಿಕೊಳ್ಳಲು ಪತ್ರಿಕೆಗಳನ್ನು ಬಳಸಿಕೊಳ್ಳಲಾಯಿತು. ನವ್ಯೋತ್ತರ ಸಂದರ್ಭದಲ್ಲಿ ಸಾಹಿತ್ಯ ಸಿದ್ಧಾಂತ ಮಂಡನೆಗೆ, ಅವುಗಳ ವಿಮರ್ಶೆ ರೂಪಿಸಲು ಮೀಮಾಂಸೆಯ ಹೊಳಹು ಹಾಕಲೂ ಪತ್ರಿಕೆಗಳು ವಾಹಕವಾದವು. ಇದರಿಂದ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಆಯಾ ಕಾಲಘಟ್ಟದಲ್ಲಿ ಪತ್ರಿಕೆಗಳಲ್ಲಿ ನಡೆದ ಚರ್ಚೆಗಳು ಪೂರಕವಾದ ಹಿನ್ನೆಲೆಯನ್ನು ಒದಗಿಸಿವೆ ಎಂಬುದು ತಿಳಿಯುತ್ತದೆ.
ಒಟ್ಟಾರೆ ಆಧುನಿಕ ಕನ್ನಡ ಸಾಹಿತ್ಯದ ಆರಂಭದಿಂದ ಇಂದಿನ ವರೆಗೆ ಸಾಹಿತ್ಯದಲ್ಲಿ ಹೊಸ ಚಿಂತನೆಗಳು ಕಾಣಿಸಿಕೊಂಡಾಗಲೆಲ್ಲ ಅಲ್ಲಿ ಪತ್ರಿಕೆಗಳ ಪಾತ್ರವಿದೆ. ಆ ಪಾತ್ರ ಎಂಥದ್ದು ಎಂಬುದರ ವಿವೇಚನೆಯ ಯತ್ನ ಇಲ್ಲಿಯದು. ಆರಂಭ ಕಾಲದಲ್ಲಿ ಕರ್ನಾಟಕತ್ವ ಅಭಿಮಾನದ ಸಂಗತಿಯಾದರೆ ನವೋದಯ ಸಂದರ್ಭದಲ್ಲಿ ಕರ್ನಾಟಕತ್ವದ ಜೊತೆಯಲ್ಲಿ ರಾಷ್ಟ್ರೀಯ ಮನೋಭಾವವೂ ಸೇರಿತು. ಸ್ವಾತಂತ್ಯ್ರದ ಕನಸು ಅಲ್ಲಿ ಮೂಡಿತ್ತು. ಅದೇ ನವ್ಯದಲ್ಲಿ ಅಷ್ಟೊಂದು ಹಂಬಲಿಸಿ ಪಡೆದ ಸ್ವಾತಂತ್ಯ್ರದ ಬಗೆಗೆ ಹಳಹಳಿಕೆ ಕಂಡು ಬರುತ್ತದೆ. ಬಂಡಾಯದಲ್ಲಿ ಸ್ಥಾಪಿತ ಮೌಲ್ಯಗಳೆಲ್ಲವನ್ನು ಸಾಮಾಜಿಕ ನೆಲೆಯಲ್ಲಿ ಪ್ರಶ್ನಿಸುವ ಮನೋಭಾವ ಮುಖ್ಯವಾಗಿ ಕಾಣುತ್ತದೆ. ಬಂಡಾಯದ್ದೇ ವಿಶಿಷ್ಟ ಕವಲು ಎಂಬಂತಿರುವ ದಲಿತ ಸಾಹಿತ್ಯದಲ್ಲಿ ಹೊಸದೊಂದು ಪ್ರಪಂಚ ತೆರೆದುಕೊಳ್ಳುತ್ತದೆ. ಬಂಡಾಯದ ಆಶಯವನ್ನು ನಾವು ಪ್ರಗತಿಶೀಲರಲ್ಲಿಯೇ ಕಾಣಬಹುದು.
ಈ ಎಲ್ಲ ಸಾಹಿತ್ಯ ಮಾರ್ಗಗಳಲ್ಲೂ ನಾಡು, ನುಡಿ, ಸ್ತ್ರೀ ಸಮಸ್ಯೆಗಳೇ ಪ್ರಧಾನವಾಗಿ ಕಾಣುತ್ತದೆ. ನಾಡಿನ ಬಗೆಗೆ ಪ್ರೀತಿ, ನಾಡಿನ ಅಖಂಡತೆ, ನುಡಿ ಪ್ರೇಮ, ಮಹಿಳೆಯರ ಸಮಸ್ಯೆಗಳು ಸ್ಥಾಯಿಯಾಗಿವೆ. ಕರ್ನಾಟಕ ಏಕೀಕರಣ ಚಳವಳಿ, ಸ್ತ್ರೀವಾದಿ ಹೋರಾಟಗಳಲ್ಲಿ ಸಾಹಿತ್ಯಪತ್ರಿಕೆಗಳು ನಿರ್ವಹಿಸಿದ ಪಾತ್ರ ದಾಖಲಿಸಲೇ ಬೇಕಾಗಿರುವಂಥದ್ದು. ಸಾಹಿತ್ಯ ಪಂಥಗಳು ಬದಲಾಗುತ್ತ ಹೋದರೂ ಸಾಹಿತ್ಯದ ವಸ್ತು ಅದೇ ಆಗಿರುವುದನ್ನು ಕಾಣಬಹುದು. ಆದರೆ ವಿಷಯಗಳು ಪ್ರಕಟಗೊಂಡ ರೀತಿ ಮಾತ್ರ ಬೇರೆ ಬೇರೆಯಾಗಿವೆ. ಅದು ಆಯಾ ಕಾಲದ ಸಾಹಿತ್ಯಕ ಚಳವಳಿಗಳ ಧೋರಣೆಗೆ ಅನುಗುಣವಾಗಿವೆ. ಅದು ಯಾವ ರೀತಿಯಲ್ಲಿ ಅಭಿವ್ಯಕ್ತಗೊಂಡಿತು, ಅದಕ್ಕೆ ಸಾಹಿತ್ಯಪತ್ರಿಕೆಗಳು ಯಾವ ರೀತಿ ಪೋಷಕವಾದವು ಎಂಬುದು ಈ ಅಧ್ಯಯನದ ಮುಖ್ಯ ಕಾಳಜಿಯಾಗಿದೆ.
ಒಂದೂವರೆ ಶತಮಾನ ಕಾಲ ಪ್ರಕಟಗೊಂಡಿರುವ ಪತ್ರಿಕೆಗಳಲ್ಲಿ ಚರ್ಚೆಯಾಗಿರುವ ವಿಷಯಗಳ ವ್ಯಾಪ್ತಿ ಒಂದು ಅಧ್ಯಯನಕ್ಕೆ ಸೀಮಿತಗೊಳ್ಳುವಂಥದಲ್ಲ. ಈ ಅರಿವಿನೊಂದಿಗೆ ಪ್ರಮುಖ ಸಾಹಿತ್ಯಪತ್ರಿಕೆಗಳನ್ನು ಮಾತ್ರ ಅಧ್ಯಯನದ ವ್ಯಾಪ್ತಿಗೆ ಸೀಮಿತಗೊಳಿಸಿಕೊಳ್ಳಲಾಗಿದೆ. ಈ ಸಾಹಿತ್ಯಪತ್ರಿಕೆಗಳಲ್ಲಿ ಚರ್ಚಿತವಾಗಿರುವ ವಿಷಯಗಳನ್ನು ಅಧ್ಯಯನದ ಸಂದರ್ಭದಲ್ಲಿ ಈ ರೀತಿ ವಿಂಗಡಿಸಿಕೊಳ್ಳಲಾಗಿದೆ.
ಅಧ್ಯಾಯ ಒಂದು: ಪ್ರಸ್ತಾವನೆ- ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿ.
ಅಧ್ಯಾಯ ಎರಡು: ಸಾಹಿತ್ಯಪತ್ರಿಕೆಗಳ ಸ್ವರೂಪ ಮತ್ತು ಇತಿಹಾಸ
ಅಧ್ಯಾಯ ಮೂರು: ಆರಂಭಕಾಲದ ಪತ್ರಿಕೆಗಳು ಮತ್ತು ಸಾಹಿತ್ಯ
ಅಧ್ಯಾಯ ನಾಲ್ಕು: ಏಕೀಕರಣದ ವರೆಗಿನ ಪತ್ರಿಕೆಗಳು ಮತ್ತು ಸಾಹಿತ್ಯ
ಅಧ್ಯಾಯ ಐದು: ಏಕೀಕರಣದ ನಂತರದ ಪತ್ರಿಕೆಗಳು ಮತ್ತು ಸಾಹಿತ್ಯ
ಅಧ್ಯಾಯ ಆರು: ಸಮಾರೋಪ
ಈ ಕಾಲಘಟ್ಟಗಳು ಈ ಅಧ್ಯಯನದಲ್ಲಿ ಸೂಕ್ತ ಎನ್ನಿಸುವುದು. ಆರಂಭ ಕಾಲದ ವ್ಯಾಪ್ತಿಯನ್ನು ೧೯೦೫ರ ವರೆಗೆ ಎಂದು ಪರಿಗಣಿಸಲಾಗಿದೆ. ೧೯೦೫ ಭಾರತೀಯ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದು. ಏಕೆಂದರೆ ೧೯೦೫ರಲ್ಲಿ ಬಂಗಾಳ ವಿಭಜನೆಯಾಯಿತು. ಬಂಗಾಳ ವಿಭಜನೆಯ ವ್ಯಾಪಕ ಪ್ರತಿಕ್ರಿಯೆ ದೇಶದ ಮತ್ತು ಕನ್ನಡ ನಾಡಿನ ರಾಜಕೀಯದ ಮೇಲಾಗುತ್ತದೆ. ಅದುವರೆಗಿನ ಅವಧಿಯಲ್ಲಿ ಕನ್ನಡ ನಾಡಿನಲ್ಲಿ ಬ್ರಿಟಿಷರ ವಿಷಯದಲ್ಲಿ ಅಂಥ ವಿರೋಧದ ಭಾವನೆ ಏನಿರಲಿಲ್ಲ. ಬ್ರಿಟಿಷರು ಸಾಮಾಜಿಕ ಸುಧಾರಣೆಯ ಹರಿಕಾರರಾಗಿ ಕಂಡಿದ್ದರು. ಇಂದಿರಾಬಾಯಿ' ಕಾದಂಬರಿಯಲ್ಲಿ ಈ ಬಗೆಗೆ ಪುರಾವೆ ದೊರೆಯುತ್ತದೆ. ಪತ್ರಿಕೆಗಳು ಬ್ರಿಟಿಷ್ ಆಡಳಿತದ ಭ್ರಷ್ಟಾಚಾರವನ್ನು ಖಂಡಿಸಿದ್ದವೇ ಹೊರತು ಅವರ ಸುಧಾರಣೆ ಕ್ರಮಗಳನ್ನು ಟೀಕಿಸಿರಲಿಲ್ಲ. ದೇಶೀ ಆಳರಸರಿಗಿಂತ ಬ್ರಿಟಿಷ್ ಆಡಳಿತವೇ ಉತ್ತಮ ಎಂಬ ಭಾವನೆ ಮೂಡಿತ್ತು. ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಕನ್ನಡ ನಾಡಿನಲ್ಲಿ ಧ್ವನಿ ಕೇಳಿಬಂದದ್ದು ಬಂಗಾಳ ವಿಭಜನೆಯ ಸಂದರ್ಭದಲ್ಲಿಯೇ. ದೇಶದ ರಾಜಕೀಯದೊಂದಿಗೆ ಕನ್ನಡ ನಾಡಿನ ಸಾಹಿತಿಗಳು ಗುರುತಿಸಿಕೊಂಡ ಸಂದರ್ಭ ಅದು. ಹೀಗಾಗಿ ಅಲ್ಲಿಂದ ಮುಂದೆ ಕನ್ನಡದ ಪತ್ರಿಕೆಗಳು ಮತ್ತು ಸಾಹಿತ್ಯದಲ್ಲಿ ದೇಶದ ಸ್ವಾತಂತ್ಯ್ರದ ಬಗೆಗಿನ ಕಾಳಜಿಯೂ ಕಾಣಿಸಿಕೊಳ್ಳತೊಡಗಿದವು. ಆರಂಭ ಕಾಲದ ಪತ್ರಕರ್ತರಿಗೆ ನಾಡಿನ ವ್ಯಾಪ್ತಿಯ ಪರಿಚಯ ಇತ್ತು. ನುಡಿಯ ಶ್ರೀಮಂತಿಕೆಯ ಅರಿವಿತ್ತು. ಆದರೆ ದೇಶದ ಪರಿಕಲ್ಪನೆ ಇರಲಿಲ್ಲ. ದೇಶ ಎಂಬ ಪದವನ್ನು ನಾಡಿಗೂ ಅವರು ಬಳಸಿದ್ದು ಕಂಡು ಬರುತ್ತದೆ. ಆದರೆ ೧೯೦೫ರ ತರುವಾಯ ದೇಶದ ಸ್ವಾತಂತ್ಯ್ರ ಮತ್ತು ಕನ್ನಡ ನಾಡಿನ ಏಕೀಕರಣ ಇವುಗಳ ಕುರಿತು ಅಭಿಪ್ರಾಯಗಳು ಜೊತೆಜೊತೆಯಾಗಿ ಅಭಿವ್ಯಕ್ತಿ ಪಡೆದಿವೆ. ದೇಶ ತಾಯಿ, ನಾಡು ಮಗಳು ಎಂಬ ಕಲ್ಪನೆ ಅಲ್ಲಿದ್ದದ್ದು ಕಾಣುತ್ತದೆ. ಕುವೆಂಪು ಅವರಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ..’ ಕವಿತೆಯಲ್ಲಿ ಇದನ್ನು ಗುರುತಿಸಬಹುದು.
ಏಕೀಕರಣದ ವರೆಗಿನ ಕಾಲಘಟ್ಟದಲ್ಲಿಯ ಸಾಹಿತ್ಯಕ ಕಾಳಜಿಗಳು ಮತ್ತು ನಂತರದ ಸಾಹಿತ್ಯಕ ಕಾಳಜಿಗಳು ಬೇರೆಬೇರೆಯಾಗಿದ್ದನ್ನು ಪತ್ರಿಕೆ ಮತ್ತು ಸಾಹಿತ್ಯ ಎರಡರಲ್ಲೂ ಗುರುತಿಸ ಬಹುದು. ಈ ಕಾರಣಕ್ಕಾಗಿ ಏಕೀಕರಣದ ವರೆಗೆ ಒಂದು ಘಟ್ಟವನ್ನು ಪ್ರತ್ಯೇಕ ಅಧ್ಯಾಯದಲ್ಲಿ ಅಧ್ಯಯನ ಮಾಡಲಾಗಿದೆ. ಈ ಅವಧಿಯಲ್ಲಿ ನವೋದಯ ಕಾಲದ ಸಾಹಿತ್ಯವನ್ನು ರೂಪಿಸಿದ ಅಂಶಗಳ ಬಗೆಗೆ ವಿಶ್ಲೇಷಿಸಲಾಗಿದೆ. ಆರಂಭ ಕಾಲದ ಸಾಹಿತ್ಯದ ಮುಖ್ಯ ಕಾಳಜಿ ನಾಡು ನುಡಿಯ ಸುತ್ತ ಗಿರಕಿಹೊಡೆಯುತ್ತಿತ್ತು. ಅದು ಕನ್ನಡ ಧರ್ಮವಾಗಿ ಇಲ್ಲಿ ಪರಿಗಣಿತವಾಗಿದೆ. ನಾಡಿನ ಏಕೀಕರಣ, ನುಡಿಯ ಬೆಳವಣಿಗೆಯ ಬಗೆಗೆ ಅಂದಿನ ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ಪತ್ರಿಕೆಗಳಲ್ಲಿಯೇ ಮಂಡಿಸಿದ್ದರು. ಅದೇ ಮುಂದೆ ಕೃತಿಗಳ ಮೂಲಕ ಅಭಿವ್ಯಕ್ತಿ ಪಡೆದು ಸಾರ್ವಜನಿಕ ಅಭಿಪ್ರಾಯವನ್ನು ಸಶಕ್ತವಾಗಿಯೇ ಮೂಡಿಸುವಲ್ಲಿ ಯಶಸ್ವಿಯಾಯಿತು. ಕನ್ನಡ ನಾಡಿನ ಏಕೀಕರಣದ ವರೆಗಿನ ಅವಧಿಯಲ್ಲಿಯೇ ಕನ್ನಡ ಸಾಹಿತ್ಯದಲ್ಲಿ ನವೋದಯದ ಜೊತೆಯಲ್ಲಿ ಪ್ರಗತಿಶೀಲ ಮತ್ತು ನವ್ಯ ಪಂಥಗಳು ಕಾಣಿಸಿಕೊಂಡಿವೆ. ಪ್ರಗತಿಶೀಲರು ಮತ್ತು ನವ್ಯರು ಇಬ್ಬರೂ ನವೋದಯದವರನ್ನು ಖಂಡಿಸಿದ್ದಾರೆ. ಪ್ರಗತಿಶೀಲರ ತಾತ್ವಿಕತೆ ರಷ್ಯ ಪ್ರೇರಿತ ಕಮ್ಯುನಿಸಂನಲ್ಲಿತ್ತು. ಸರ್ವರಿಗೂ ಸಮಾನತೆಯನ್ನು ಒದಗಿಸುವ ಆದರ್ಶ ಸ್ವಾತಂತ್ಯ್ರದ ಹೋರಾಟಕ್ಕೆ ವಿರುದ್ಧವಾದದ್ದೇನೂ ಆಗಿರಲಿಲ್ಲ. ಆದರೆ ನವ್ಯರ ಪ್ರೇರಣೆಗಳು ದೊರೆತ ಸ್ವಾತಂತ್ಯ್ರದ ಬಗೆಗೆ ತಳೆದ ನಿರಾಶೆಯಲ್ಲಿ ಇದೆ. ಆದರೆ ಇವರು ನಾಡಿನ ಏಕೀಕರಣಕ್ಕೆ ವಿರೋಧಿಗಳೇನಾಗಿರಲಿಲ್ಲ. ನಾಡು ಏಕೀಕರಣಹೊಂದಿದ ಸಂದರ್ಭದಲ್ಲಿಯೇ ಪತ್ರಿಕೋದ್ಯಮದ ಸ್ವರೂಪ ಬದಲಾಯಿತು. ಪತ್ರಿಕೆ ಹೊರಡಿಸುವುದರ ಹಿಂದಿನ ಉದ್ದೇಶವೂ ಬದಲಾಯಿತು. ಆದರ್ಶದ ಪ್ರತಿಪಾದನೆಗಾಗಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಗಳು ಉದ್ಯಮವಾಗಿ ಮಾರ್ಪಾಟಾದವು. ಆಗ ಸಹಜವಾಗಿಯೇ ಸಾಹಿತ್ಯದ ಕಾಳಜಿಗಳನ್ನು ಪ್ರತಿಪಾದಿಸುವ ಉದ್ದೇಶದಿಂದಲೇ ಪತ್ರಿಕೆಗಳು ಬಂದವು. ಅವುಗಳ ಅಧ್ಯಯನ ಇಲ್ಲಿ ಪ್ರತ್ಯೇಕ ಅಧ್ಯಾಯದಲ್ಲಿದೆ.
ಸಾಹಿತ್ಯಪತ್ರಿಕೆಗಳ ಸ್ವರೂಪ ಮತ್ತು ಇತಿಹಾಸ- ಈ ಅಧ್ಯಾಯದಲ್ಲಿ ಪತ್ರಿಕೆ ಇಲ್ಲದ ಕಾಲದಲ್ಲಿ ಪತ್ರಿಕೆಗಳಿಂದಾಗುವ ಕಾರ್ಯ ಯಾವ ರೀತಿಯಲ್ಲಿ ನಡೆಯುತ್ತಿತ್ತು, ಪತ್ರಿಕೋದ್ಯಮದ ಸಮೂಹ ಸಂವಹನದ ಸ್ವರೂಪ, ಸಾಹಿತ್ಯ ಪತ್ರಿಕೆಗಳಿಗೂ ಇತರ ಪತ್ರಿಕೆಗಳಿಗೂ ಇರುವ ವ್ಯತ್ಯಾಸ, ಪತ್ರಿಕೆಗಳ ವಿಶೇಷ ಸಂಚಿಕೆಗಳು, ವಿಶೇಷಾಂಕಗಳು, ಪತ್ರಿಕೆಗಳು ಸಾಹಿತ್ಯ ಕೃತಿಗೆ ವಸ್ತುವಾಗುವ ಪರಿ ಇತ್ಯಾದಿಗಳನ್ನು ಪರಿಶೀಲಿಸಲಾಗಿದೆ. ಸಾಹಿತ್ಯ ಪತ್ರಿಕೆಗಳ ಇತಿಹಾಸ ಭಾಗದಲ್ಲಿ ಭಾರತದ ಮೊದಲ ಸಾಹಿತ್ಯಪತ್ರಿಕೆ, ಅದು ಉಗಮಗೊಂಡ ಸಂದರ್ಭ, ಅದರ ಪ್ರೇರಣೆಗಳು, ಕನ್ನಡ ಸಾಹಿತ್ಯ ಪತ್ರಿಕೆಗಳ ಹಿಂದಿನ ಪ್ರೇರಣೆಗಳು, ಕನ್ನಡದ ಮೊದಲ ಸಾಹಿತ್ಯ ಪತ್ರಿಕೆ ಇವುಗಳ ಬಗೆಗೆ ವಿವರಗಳನ್ನು ನೀಡಲಾಗಿದೆ.
ಆರಂಭದ ಕಾಲದಿಂದ ಬಂಗಾಳ ವಿಭಜನೆಯ ವರೆಗಿನ ಪತ್ರಿಕೆ ಮತ್ತು ಸಾಹಿತ್ಯ- ಈ ಅಧ್ಯಾಯದಲ್ಲಿ ಆ ಕಾಲದ ಪತ್ರಿಕೆ ಮತ್ತು ಸಾಹಿತ್ಯದ ವಿಶೇಷತೆಗಳನ್ನು ಪಟ್ಟಿ ಮಾಡಲಾಗಿದೆ. ಈ ಅವಧಿಯಲ್ಲಿ ಪತ್ರಿಕೆಗಳು ನಿರ್ದಿಷ್ಟ ಉದ್ದೇಶದೊಂದಿಗೆ ಹುಟ್ಟು ಪಡೆದಿವೆ. ಸಮಾಜ ಸುಧಾರಣೆ, ಸ್ವಧರ್ಮ ರಕ್ಷಣೆ, ಹಳೆಯ ಸಾಹಿತ್ಯಗಳ ಪ್ರಕಟಣೆ, ಹೊಸ ಸಾಹಿತ್ಯ ಬೆಳೆಸುವ ಉದ್ದೇಶದಿಂದಲೇ ಪತ್ರಿಕೆಗಳು ಪ್ರಕಟಗೊಂಡವು. ಸಾಹಿತ್ಯ ರಾಜಾಶ್ರಯದಿಂದ ಜನಾಶ್ರಯದ ಕಡೆಗೆ ಹೊರಳಿತು. ಪತ್ರಿಕೆಗಳು ನಾಡು ನುಡಿಯ ಬಗೆಗೆ ಅಭಿಮಾನ ಕಳಕಳಿಯನ್ನು ವ್ಯಕ್ತಪಡಿಸಿವೆ. ಪತ್ರಿಕೆಗಳ ಹೆಸರುಗಳೇ ಇದಕ್ಕೆ ಉದಾಹರಣೆ. ಕರ್ನಾಟಕತ್ವ ಜೀವಂತವಾಗಿತ್ತು. ಅನ್ಯಭಾಷೆಯ ದುಷ್ಪರಿಣಾಮಗಳ ಬಗೆಗೆ ನಡೆದ ಚರ್ಚೆ, ಕನ್ನಡ ಬೆಳೆಸಲು ಕನ್ನಡಿಗರಾದವರು ಮಾಡಬೇಕಾದ ಕರ್ತವ್ಯ, ಮುದ್ರಣ ದೋಷ ನಿವಾರಣೆಗೆ ಕಂಡುಕೊಂಡ ಉಪಾಯ, ಪತ್ರಿಕೆಗಳಿಂದ ಸಾಹಿತ್ಯದ ಮೇಲಾದ ಪ್ರಭಾವ, ಹೊಸ ಸಾಹಿತ್ಯ ಮಾರ್ಗವನ್ನು ರೂಪಿಸಿಕೊಳ್ಳುವಾಗಿನ ವಾಗ್ವಾದ, ಚರ್ಚೆ ಇತ್ಯಾದಿಗಳನ್ನು ಗಮನಿಸಲಾಗಿದೆ. ಬಂಗಾಳ ವಿಭಜನೆಯಿಂದ ಏಕೀಕರಣದ ವರೆಗಿನ ಕಾಲಘಟ್ಟದ ವ್ಯಾಪ್ತಿ ದೊಡ್ಡದು. ದೇಶದ ಸ್ವಾತಂತ್ಯ್ರ, ನಾಡಿನ ಏಕೀಕರಣದ ಬಗೆಗಿನ ಕಾಳಜಿ ಪತ್ರಿಕೆ ಮತ್ತು ಸಾಹಿತ್ಯದಲ್ಲಿ ವ್ಯಕ್ತವಾಗಿದೆ. ಜೊತೆಯಲ್ಲಿ ಕನ್ನಡ ಭಾಷೆಯ ಬಗೆಗೂ ಕಾಳಜಿ ಉಳಿದುಕೊಂಡು ಬಂದಿದೆ. ಪರಭಾಷೆಯ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಲಾಗಿದೆ. ಮಹಾರಾಷ್ಟ್ರದ ಕೇಸರಿ ಪತ್ರಿಕೆಯ ಪ್ರಭಾವ ಗುರುತಿಸಲಾಗಿದೆ. ಗೆಳೆಯರ ಗುಂಪು, ಜಯ ಕರ್ನಾಟಕ, ಪ್ರಬುದ್ಧ ಕರ್ನಾಟಕ, ವಸಂತ, ಸದ್ಭೋಧ ಚಂದ್ರಿಕೆ, ಪರಿಷತ್ಪತ್ರಿಕೆ, ವಿಶ್ವಕರ್ನಾಟಕ, ಜೀವನ, ಜಯಂತಿ, ವಾಣಿ, ಉಷಾ ಮೊದಲಾದ ಪತ್ರಿಕೆಗಳ ವಿಶೇಷತೆ ಗುರುತಿಸಲಾಗಿದೆ. ಏಕೀಕರಣ- ಪತ್ರಿಕೆ- ಸಾಹಿತ್ಯ ಇವು ಒಂದಕ್ಕೊಂದು ಕೊಂಡಿಯಾಗಿದ್ದವು. ನುಡಿ ಸೇವೆ ನಾಡ ಸೇವೆಗೆ ಕಡಿಮೆಯಾದುದಲ್ಲ ಎಂಬ ಅರಿವು ಇತ್ತು. ಪ್ರಗತಿಪರ ವಿಚಾರಧಾರೆಗೆ ಸನಾತನಿಗಳ ವಿರೋಧ, `ಶೂದ್ರ ತಪಸ್ವಿ ಮತ್ತು ಶೂದ್ರ ಪ್ರಜ್ಞೆ’ ಇಲ್ಲಿ ಚರ್ಚೆಗೆ ಒಳಗಾಗಿದೆ. ಈ ಅವಧಿಯ ಪ್ರಮುಖ ವಾಗ್ವಾದ ಪ್ರಾಸ ತ್ಯಾಗಕ್ಕೆ ಮತ್ತು ಅನುವಾದಕ್ಕೆ ಸಂಬಂಧಿಸಿದ್ದು. ನಾಡು ನುಡಿಯೇ ಕನ್ನಡ ಧರ್ಮವಾಯಿತು. ಪ್ರಾದೇಶಿಕ ಭಾಷಾ ಭಿನ್ನತೆ ದೂರ ಮಾಡಲು ಪ್ರಯತ್ನಗಳು ನಡೆದವು. ಕನ್ನಡ ಜಾಗೃತಿ ನಾಡಿನ ತುಂಬೆಲ್ಲ ಏಕ ಕಾಲದಲ್ಲಿ ಉಂಟಾಯಿತು. ಧಾರವಾಡ- ಮಂಗಳೂರು – ಮೈಸೂರು ಕೇಂದ್ರಗಳಲ್ಲಿ ನಡೆದ ಚಟುವಟಿಕೆಗಳು, ಕೃತಿಗಳ ಬೆನ್ನು ತಟ್ಟಿ ಪ್ರೋತ್ಸಾಹಿಸುವ, ಬೆಲೆಕಟ್ಟುವ ಹಂತಗಳೆಲ್ಲ ಇಲ್ಲಿ ದಾಖಲಾಗಿವೆ. ಏಕೀಕರಣದ ಅವಧಿಯಲ್ಲಿಯೇ ಸಾಹಿತ್ಯ ಸಮಾಜಮುಖಿಯಾದದ್ದನ್ನು ಪ್ರಗತಿಶೀಲರ ಕಾಲದಲ್ಲಿ ಗುರುತಿಸಬಹುದು. ಪ್ರಗತಿಶೀಲರ ಪೂರ್ವದಲ್ಲಿಯೂ ಪ್ರಗತಿಶೀಲ ಧೋರಣೆಯ ಸಾಹಿತ್ಯ ಸೃಷ್ಟಿಯಾಗಿತ್ತು. ಪ್ರಗತಿಶೀಲರ ಕಾಲದಲ್ಲಿ ರಷ್ಯಾದ ಕಮ್ಯುನಿಸಂ ಪ್ರಭಾವದಿಂದ ಸಾಹಿತ್ಯ ಸೃಷ್ಟಿಯಾಗಿತ್ತು. ಸಾಹಿತ್ಯ ಕೂಡ ಚಳವಳಿಯಾಗಬಹುದು ಎಂಬ ಮಾತು ಪ್ರಗತಿಶೀಲರ ಕಾಲದಲ್ಲಿ ಕೇಳಿಬಂತು. ಬಯಸಿ ಗಳಿಸಿದ ಸ್ವಾತಂತ್ಯ್ರದ ಬಗೆಗಿನ ಭ್ರಮ ನಿರಸನ ನವ್ಯ ಸಾಹಿತ್ಯದಲ್ಲಿ ದಾಖಲಾಗುವಾಗ ಪತ್ರಿಕೆಗಳಲ್ಲಿ ಅದರ ಬಗೆಗೆ ನಡೆದ ಚರ್ಚೆಯನ್ನು ಗಮನಿಸಲಾಗಿದೆ.
ಏಕೀಕರಣೋತ್ತರ ಸಾಹಿತ್ಯ ಮತ್ತು ಪತ್ರಿಕೆಯ ಸಂಬಂಧದ ಕುರಿತ ಅಧ್ಯಾಯದಲ್ಲಿ ನವ್ಯ ಸಾಹಿತ್ಯದ ಪ್ರತಿಷ್ಠಾಪನೆಗೆ ನಡೆದ ಪ್ರಯತ್ನಗಳು, ಈ ಸಂಬಂಧ ಸಾಹಿತ್ಯಪತ್ರಿಕೆಗಳಲ್ಲಿ ನಡೆದ ಚರ್ಚೆ, ಗಣ್ಯರ ಅಭಿಪ್ರಾಯಗಳನ್ನು ಲಕ್ಷಿಸಲಾಗಿದೆ. ನವ್ಯದ ಸಂದರ್ಭದಲ್ಲಿ ಮೊಕಾಶಿಯವರ ಚಿಂತನೆ, ಶಾಂತಿನಾಥ ದೇಸಾಯಿ ಮತ್ತು ಗಿರೀಶ ಕಾರ್ನಾಡರ ನಡುವಿನ ವಾಗ್ವಾದ, ಬಿ.ಟಿ.ದೇಸಾಯಿವರ ಅಭಿಪ್ರಾಯ ಎಲ್ಲವನ್ನೂ ಗಮನಿಸಲಾಗಿದೆ. ನವ್ಯ ಸಾಹಿತ್ಯದ ಪ್ರಮುಖ ಚರ್ಚೆ ಶ್ರೇಷ್ಠತೆಯನ್ನು ಕುರಿತದ್ದು. ಇದು ನವ್ಯೋತ್ತರದಲ್ಲಿ ಹೇಗೆ ಚಿಂತನೆಯನ್ನು ಬೆಳೆಸಿತು ಎಂಬುದರ ವಿಶ್ಲೇಷಣೆ ಇದೆ. ಎಂಥ ಶ್ರೇಷ್ಠತೆ ಬೇಕು, ಯಾವುದು ಬೇಡ, ಶ್ರೇಷ್ಠತೆಯ ಕಲ್ಪನೆ ದಲಿತ ಸಾಹಿತ್ಯದ ಸಂದರ್ಭದಲ್ಲಿ ಯಾವ ರೀತಿ ಇದೆ ಎಂಬುದು ಮತ್ತು ದಲಿತ – ಬಂಡಾಯ ಬೇರೆ ಬೇರೆಯೇ ಅಥವಾ ಒಂದೆಯೇ ಎಂಬ ಬಗೆಗಿನ ಚರ್ಚೆಯೂ ದಾಖಲಾಗಿದೆ.
ಹೊಸಗನ್ನಡದ ಎಲ್ಲ ಸಾಹಿತ್ಯ ಪಂಥಗಳು ಬೇರು ಬಿಡುವ ಸಂದರ್ಭದಲ್ಲಿ ಸಾಹಿತ್ಯಪತ್ರಿಕೆಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ. ಒಂದು ರೀತಿಯಲ್ಲಿ ಪತ್ರಿಕೆಗಳು ಸಾಹಿತ್ಯ ಬೆಳವಣಿಗೆಯನ್ನು ತಮ್ಮ ಕಣ್ಗಾವಲಿನಲ್ಲಿ ನಿರಂತರ ಇರಿಸಿವೆ. ಹಾಗೆಯೇ ಸಾಹಿತ್ಯ ಮತ್ತು ಸಮಾಜದ ನಡುವೆ ಬೆಸೆಯುವ ನಿಯಂತ್ರಿಸುವ ಕೊಂಡಿಯಂತೆ ಕೆಲಸ ನಿರ್ವಹಿಸಿವೆ. ಇದು ನೇರವಾಗಿ ಮತ್ತು ಮೂರ್ತವಾಗಿ ಕಾಣಿಸಿಕೊಳ್ಳದಿದ್ದರೂ ಪತ್ರಿಕೆಗಳು ಆಧುನಿಕ ಸಾಹಿತ್ಯ ಬೆಳವಣಿಗೆಯಲ್ಲಿ ಸ್ಪಷ್ಟವಾದ ಪ್ರಭಾವಗಳನ್ನು ಬೀರಿವೆ. ಇದರ ಸ್ವರೂಪ ಮತ್ತು ನೆಲೆಗಳನ್ನು ಮುಂದಿನ ಅಧ್ಯಾಯಗಳಲ್ಲಿ ಕಂಡುಕೊಳ್ಳಲು ಯತ್ನಿಸಲಾಗಿದೆ.