ಸಮಾರೋಪ

`ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ’ ಮಹತ್ವದ್ದಾಗಿದೆ. ಪತ್ರಿಕೆ ಮತ್ತು ಸಾಹಿತ್ಯವನ್ನು ಜೊತೆ ಜೊತೆಯಲ್ಲಿ ಇಟ್ಟು ಅಧ್ಯಯನ ಮಾಡಿದಾಗ ಹಲವು
ಹೊಸ ಅಂಶಗಳನ್ನು ಕಾಣುವುದು ಸಾಧ್ಯವಾದವು. ಆಧುನಿಕ ಕನ್ನಡ ಸಾಹಿತ್ಯ ಮತ್ತು ಪತ್ರಿಕೆ
ಏಕ ಕಾಲದಲ್ಲಿ ಹುಟ್ಟು ಪಡೆದು ಬೆಳೆಯುತ್ತ ಬಂದಿದ್ದನ್ನು ಇಲ್ಲಿ ಗುರುತಿಸಲಾಗಿದೆ.
ಪತ್ರಿಕೆಗಳಲ್ಲಿ ಬಳಕೆಯಾದ ಗದ್ಯವು ಹೊಸಗನ್ನಡ ಸಾಹಿತ್ಯಕ್ಕೆ ಪುಷ್ಟಿಯನ್ನು ಒದಗಿಸಿದವು.
ಸ್ವತಂತ್ರವಾಗಿ ಪುಸ್ತಕಗಳನ್ನು ಪ್ರಕಟಿಸಲು ಸಾಮರ್ಥ್ಯವಿಲ್ಲದ ಲೇಖಕರಿಗೆ ಅವರ ಕೃತಿಗಳು
ಬೆಳಕು ಕಂಡು ಜನರನ್ನು ತಲುಪುದಕ್ಕೆ ಇವು ವಾಹಕವಾದವು.
ಕನ್ನಡದಲ್ಲಿ ಪತ್ರಿಕೆಗಳನ್ನು ಹೇಗೆ ಪಾಶ್ಚಾತ್ಯ ವಿದ್ವಾಂಸರು ಮೊದಲಿಗರಾಗಿ
ಪ್ರಕಟಿಸಿದರೋ ಅದೇ ರೀತಿ ಸಾಹಿತ್ಯಪತ್ರಿಕೆಯನ್ನೂ ಪಾಶ್ಚಾತ್ಯ ವಿದ್ವಾಂಸರೇ
ಆರಂಭಿಸಿದರು. ಮಂಗಳೂರಿನಿಂದ ಹೊರಟ ಸಚಿತ್ರ ಕನ್ನಡ ಸಾಹಿತ್ಯಪತ್ರಿಕೆ' ಕನ್ನಡದ ಮೊದಲ ಸಾಹಿತ್ಯಪತ್ರಿಕೆ ಎಂಬುದನ್ನು ಈ ಅಧ್ಯಯನದಲ್ಲಿ ಗುರುತಿಸಲಾಗಿದೆ. ಇದಕ್ಕೆ ವಿಚಿತ್ರ ವರ್ತಮಾನ ಸಂಗ್ರಹ’ ಎಂಬ ಹೆಸರೂ ಇತ್ತು.
ಬಂಗಾಳ ವಿಭಜನೆಯ ವರೆಗಿನ ಕಾಲಘಟ್ಟದ ಪತ್ರಿಕೆಗಳಲ್ಲಿ ಕನ್ನಡ ಸಾಹಿತ್ಯವನ್ನು
ಹೇಗಾದರೂ ಮಾಡಿ ಸಂಪುಷ್ಟಗೊಳಿಸಬೇಕೆಂಬ ಕಳಕಳಿ ಕಂಡುಬರುತ್ತದೆ. ಅನ್ಯಭಾಷೆಗಳಿಂದ
ಅನುವಾದಗಳು, ರೂಪಾಂತರಗಳು ದೊಡ್ಡ ಪ್ರಮಾಣದಲ್ಲಿಯೇ ನಡೆದವು. ಸಾಹಿತ್ಯವನ್ನು
ಬೆಳೆಸಬೇಕೆಂಬ ಹಂಬಲದ ಕರೆಗಳು ಅಂದಿನ ಪತ್ರಿಕೆಗಳಲ್ಲಿವೆ. ಇಂಗ್ಲಿಷ್, ಮರಾಠಿ ಇತ್ಯಾದಿ
ಅನ್ಯ ಭಾಷೆಗಳ ವಿರುದ್ಧ ಕನ್ನಡ ಹೇಗೆ ಸೆಣೆಸಬೇಕು ಎಂದು ನಿರ್ದೇಶನ ನೀಡಿದ್ದು ಕಂಡು
ಬರುತ್ತದೆ. ಶೋಧಕ'ದ ಸಂಪಾದಕೀಯದಲ್ಲಿ ಕನ್ನಡವನ್ನು ಮರಾಠಿಯೊಂದಿಗೆ ಇರಿಸಿ ತೂಗಿ ನೋಡಿದ್ದು ಇದಕ್ಕೆ ಉದಾಹರಣೆ. ವಲ್ಲಭ ಮಹಾಲಿಂಗ ತಟ್ಟಿಯವರ ಕನ್ನಡದ ಬಗೆಗಿನ ಕಳಕಳಿಯೂ ಅನನ್ಯವಾದುದು. ಬಹುಮಾನ ಘೋಷಿಸಿ ಸಾಹಿತ್ಯದ ಸ್ಪರ್ಧೆಗಳನ್ನು ಆರಂಭ ಕಾಲದ ಪತ್ರಿಕೆಗಳು ಮಾಡಿವೆ. ಆರಂಭ ಕಾಲದ ಪತ್ರಿಕೆಗಳು ಭಾಷೆಯನ್ನು ಶ್ರೀಮಂತಗೊಳಿಸುವುದರ ಜೊತೆಯಲ್ಲಿ ಸಮಾಜ ಸುಧಾರಣೆಯ ಕೆಲಸವನ್ನೂ ಮಾಡಿದವು. ಸಮಾಜ ಸುಧಾರಣೆ ವಿಷಯದಲ್ಲಿ ಅವರು ತೋರಿಸಿದ ಪ್ರತಿಕ್ರಿಯೆಯು ಮುಂದೆ ಅದೇ ವಿಷಯಗಳು ಇರುವ ಸಾಹಿತ್ಯ ಕೃತಿಗಳ ರಚನೆಗೆ ಕಾರಣವಾದವು. ಕನ್ನಡವನ್ನು ಶ್ರೀಮಂತಗೊಳಿಸಬೇಕು ಎಂಬ ಅಭಿಲಾಷೆ, ಕನ್ನಡ ನಾಡು ಬೇರೆ ಬೇರೆ ಆಡಳಿತಗಳಲ್ಲಿ ಹರಿದು ಹಂಚಿಹೋಗಿದೆ ಎಂಬ ಚಿಂತೆ ಈ ಕಾಲದ ಪತ್ರಿಕೆಗಳಲ್ಲಿ ವ್ಯಕ್ತವಾಗಿವೆ. ಆದರೆ ದೇಶವನ್ನು ಇಡಿಯಾಗಿ ಕಲ್ಪಿಸಿಕೊಳ್ಳುವ ದೃಷ್ಟಿ ವೈಶಾಲ್ಯ ಇವುಗಳಿಗೆ ಬಂದಿರಲಿಲ್ಲ. ರಾಷ್ಟ್ರೀಯ ಕಾಂಗ್ರೆಸ್ಸು ಆಗಷ್ಟೇ ಹುಟ್ಟಿಕೊಂಡಿತ್ತು. ಸಮಾಜದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಬ್ರಿಟಿಷ್ ಸತ್ತೆ ನೆರವಾಗುತ್ತಿದ್ದ ಕಾರಣ ಪತ್ರಿಕೆ ನಡೆಸುವ ವಿದ್ಯಾವಂತ ಜನರಿಗೆ ಬ್ರಿಟಿಷ್ ಆಡಳಿತ ಕೆಟ್ಟದ್ದಾಗಿ ಕಂಡಿರಲಿಲ್ಲ. ಆದರೆ ಬಂಗಾಳ ವಿಭಜನೆಯ ನಂತರದ ಪತ್ರಿಕೆಗಳಲ್ಲಿ ಕನ್ನಡ ನಾಡಿನ ಏಕೀಕರಣದ ಜೊತೆಯಲ್ಲಿಯೇ ದೇಶದ ಸ್ವಾತಂತ್ಯ್ರವೂ ಪ್ರತಿಪಾದನೆಯಾಗತೊಡಗಿತು. ಟಿಳಕರ ಕೇಸರಿ ಪತ್ರಿಕೆಯ ಪ್ರಭಾವ ಕನ್ನಡದ ಕೆಲವು ಪತ್ರಿಕೆಗಳ ಮೇಲಾಗಿದ್ದನ್ನು ಇಲ್ಲಿ ಗುರುತಿಸಲಾಗಿದೆ. ಬಂಗಾಳದ ವಿಭಜನೆಯನ್ನು ಖಂಡಿಸಿ ಕನ್ನಡ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಸ್ವಾತಂತ್ಯ್ರದ ಜೊತೆಯಲ್ಲಿಯೇ ಕರ್ನಾಟಕ ಏಕೀಕರಣದ ಬಗೆಗಿನ ಕಳಕಳಿ ಏಕೀಕರಣದ ವರೆಗಿನ ಘಟ್ಟದ ಪತ್ರಿಕೆಗಳಲ್ಲಿ ವ್ಯಕ್ತವಾಗಿದೆ. ಏಕೀಕರಣದ ಬಗೆಗಿನ ಈ ಕಾಲದ ಸಾಹಿತ್ಯ ಕೃತಿಗಳು ಮತ್ತು ಪತ್ರಿಕೆಗಳ ಲೇಖನಗಳನ್ನು ಜೊತೆ ಜೊತೆಯಾಗಿ ಅಧ್ಯಯನ ಮಾಡಿದಾಗ ಸಾಹಿತ್ಯದ ಆಶಯಕ್ಕೆ ಪತ್ರಿಕೆಗಳು ಪೂರಕವಾಗಿ ಕೆಲಸ ಮಾಡಿದ್ದು ಕಂಡು ಬರುತ್ತದೆ. ಈ ಕಾಲದ ಪತ್ರಿಕೆಗಳಲ್ಲಿಯೂ ಸಾಮಾಜಿಕ ಅಸಮಾನತೆಯ ಬಗೆಗೆ ಚರ್ಚೆಯಾಗಿದೆ. ವಿಚಿತ್ರದ ಸಂಗತಿ ಎಂದರೆ ಗಾಂಧೀಜಿಯವರು ಕೈಗೊಂಡ ಸಮಾಜ ಸುಧಾರಣೆ, ಹರಿಜನೋದ್ಧಾರ ಇತ್ಯಾದಿಗಳಿಗೆ ಸನಾತನ ಸಂಪ್ರದಾಯವಾದಿಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಇಂದಿರಾಬಾಯಿ’ಯ ಸುಧಾರಣಪರ ಆಶಯಗಳಿಗೆ
ಪ್ರತಿಕ್ರಿಯಾತ್ಮಕವಾಗಿ ಇಂದಿರಾ' ಕಾದಂಬರಿ ಬಂದುದನ್ನು ಇಲ್ಲಿ ಗಮನಿಸಲಾಗಿದೆ. ಕುವೆಂಪು ಅವರಶೂದ್ರ ತಪಸ್ವಿ’ ಬಂದಾಗಲೂ ಸಂಪ್ರದಾಯವಾದಿ ಮನಸ್ಸು ಇದೇ
ರೀತಿ ಪ್ರತಿಕ್ರಿಯಿಸಿದ್ದನ್ನೂ ಇಲ್ಲಿ ದಾಖಲಿಸಲಾಗಿದೆ.
ಏಕೀಕರಣದ ವರೆಗಿನ ಕಾಲ ಘಟ್ಟದ ಪತ್ರಿಕೆಗಳಲ್ಲಿ ಸಾಹಿತ್ಯಕವಾಗಿ ಆಮೂಲಾಗ್ರ
ಬದಲಾವಣೆ ತಂದ ಸಾಹಿತ್ಯದ ಚರ್ಚೆಗಳಿಗೆ ಪತ್ರಿಕೆಗಳು ವೇದಿಕೆಯಾದವು. ಅವುಗಳಲ್ಲಿ
ಒಂದು ಪ್ರಾಸ ತ್ಯಾಗ. ಪ್ರಾಸ ತ್ಯಾಗ ಹೊಸಗನ್ನಡ ಸಾಹಿತ್ಯಕ್ಕೆ ಹೊಸ ದಿಸೆಯನ್ನು ನೀಡಿತು.
ಈ ಬಗೆಗೆ ವಿವಿಧ ಪತ್ರಿಕೆಗಳಲ್ಲಿ ಬಂದ ವಾದಗಳನ್ನು ವಿವರವಾಗಿ ದಾಖಲಿಸಲಾಗಿದೆ.
ಅದೇ ರೀತಿ ಸಾಹಿತ್ಯವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಸಹಾಯಕವಾದ ಅನುವಾದದ
ಬಗೆಗಿನ ವಾಗ್ವಾದವನ್ನು ಇಲ್ಲಿ ಪರಿಶೀಲಿಸಲಾಗಿದೆ.
ಸ್ವಾತಂತ್ಯ್ರ ಚಳವಳಿಯ ಕಾಲದಲ್ಲಿಯೇ ರಷ್ಯಾದ ಕಮ್ಯುನಿಸಂನ ಪರಿಚಯವಾಗಿದೆ.
ಕಮ್ಯುನಿಸಂ ತತ್ವಗಳು ನಮ್ಮ ಸಾಹಿತ್ಯಪತ್ರಿಕೆಗಳಲ್ಲಿ ಪ್ರತಿಪಾದಿತವಾಗಿವೆ. ವಿಶೇಷ ಸಂಗತಿ
ಎಂದರೆ ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯ ಚಳವಳಿಯ ಸಂಘಟನೆ ಹುಟ್ಟು ಪಡೆದುಕೊಳ್ಳುವ
ಪೂರ್ವದಲ್ಲಿಯೇ ಪ್ರಗತಿಶೀಲ ತತ್ವಗಳು ಸಾಹಿತ್ಯದ ವಸ್ತುವಾಗಬೇಕೆಂದು ನಮ್ಮ ಸಾಹಿತ್ಯ
ಪತ್ರಿಕೆಗಳು ಪ್ರತಿಪಾದಿಸಿದ್ದವು. ಈ ಸಂಬಂಧದಲ್ಲಿ `ಜಯಕರ್ನಾಟಕ’ದಲ್ಲಿ ಬಂದಿರುವ
ಲೇಖನವನ್ನು ಇಲ್ಲಿ ಪರಿಶೀಲಿಸಲಾಗಿದೆ. ಸ್ವಾತಂತ್ಯ್ರಪಡೆದ ಬಳಿಕ ಸಾಹಿತಿಗಳಲ್ಲಿ
ಸ್ವಾತಂತ್ಯ್ರದ ಬಗೆಗೆ ಇದ್ದ ಭ್ರಮೆ ನಿರಸನವಾಗಿದೆ. ಹೊಸ ಅರಿವು ಪಡೆದವರಂತೆ ಹೊಸ
ಸಾಹಿತ್ಯದ ಸೃಷ್ಟಿಗೆ ಕೆಲವರು ಮುಂದಾದರು. ಕನ್ನಡದ ಕೆಲವು ಸಾಹಿತಿಗಳು ಇಂಗ್ಲಿಷ್‌ನಿಂದ
ಪ್ರೇರಣೆ ಪಡೆದು ಕಾವ್ಯದಲ್ಲಿ ಬದಲಾವಣೆಯಾಗಬೇಕು ಎಂದು ಪ್ರತಿಪಾದಿಸಿ ನವ್ಯ
ಸಾಹಿತ್ಯವನ್ನು ಪ್ರಚುರಪಡಿಸಿದರು. ಸ್ವಾತಂತ್ಯ್ರಾನಂತರದ ನಿರಾಶೆ, ನೋವು, ಹತಾಶೆಗಳು
ಇಲ್ಲಿ ಕಾವ್ಯ ವಿಡಂಬನೆಗೆ ವಸ್ತುವಾದವು. ಹೊಸ ಸಾಹಿತ್ಯದ ಪ್ರತಿಪಾದನೆ ಪತ್ರಿಕೆಗಳಲ್ಲಿಯೇ
ನಡೆಯಿತು. ನವ್ಯ ಸಾಹಿತ್ಯ ಹುಟ್ಟಿಕೊಂಡಾಗ ಅದನ್ನು ಸಮರ್ಥಿಸಲು ಸಾಹಿತ್ಯಪತ್ರಿಕೆಗಳು
ಇರಲಿಲ್ಲ. ಇರುವ ದಿನ ಪತ್ರಿಕೆ, ವಾರ ಪತ್ರಿಕೆಗಳಲ್ಲಿಯೇ ನವ್ಯದ ಪ್ರವರ್ತಕರು ಸಮರ್ಥನೆ
ಮಾಡಿಕೊಂಡರು. ಪ್ರಜಾವಾಣಿ, ಜನಪ್ರಗತಿ ಮೊದಲಾದ ಪತ್ರಿಕೆಗಳು ಇವರಿಗೆ ವೇದಿಕೆ
ಒದಗಿಸಿದ್ದನ್ನು ಇಲ್ಲಿ ಗುರುತಿಸಲಾಗಿದೆ.
ಏಕೀಕರಣದ ನಂತರದ ಸಾಹಿತ್ಯಪತ್ರಿಕೆಗಳಲ್ಲಿ ನವ್ಯದ ಸಮರ್ಥನೆ ಅದರ ಖಂಡನೆ
ವ್ಯಾಪಕವಾಗಿ ಬಂದವು. ಶ್ರೇಷ್ಠತೆಯನ್ನು ಪ್ರತಿಪಾದಿಸಿದ ನವ್ಯಸಾಹಿತ್ಯ ಅಂತರ್ಮುಖಿಯಾಗಿ
ಜನವಿರೋಧಿ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿತು. ನವ್ಯವನ್ನು ತಿರಸ್ಕರಿಸುವ ಮತ್ತು
ಸಮಾಜಮುಖಿ ಸಾಹಿತ್ಯವನ್ನು ಪ್ರತಿಪಾದಿಸುವ ಕೆಲಸ ಸಾಹಿತ್ಯಪತ್ರಿಕೆಗಳಲ್ಲಿಯೇ ನಡೆಯಿತು.
ಸಾಹಿತ್ಯ ಸರಳವಾಗಿರಬಾರದು, ಅದು ಕ್ಲಿಷ್ಟವಾಗಿರಬೇಕು, ಶ್ರೇಷ್ಠವಾಗಿರಬೇಕು ಎಂಬ
ಚಿಂತನೆಗಳು ನವ್ಯ ಸಾಹಿತ್ಯದ ಕಾಲಕ್ಕೆ ಕಾಣಿಸಿಕೊಂಡವು. ಈ ನವ್ಯ ಸಾಹಿತ್ಯ ಕ್ಲಿಷ್ಟ ಅನ್ನಿಸಿದಾಗ
ಅದನ್ನು ವಿವರಿಸುವುದಕ್ಕೆ ಪತ್ರಿಕೆಗಳು ಬೇಕಾದವು. ನವ್ಯ ಸಾಹಿತ್ಯವನ್ನು ವಿವರಿಸಲು, ನವ್ಯ
ಮೀಮಾಂಸೆಯನ್ನು ಕಟ್ಟಲು, ವಿಮರ್ಶೆಯನ್ನು ಬೆಳೆಸಲು ಪತ್ರಿಕೆಗಳು ನೆರವಾದವು. ಲಹರಿ,
ಸಂಕ್ರಮಣ, ಸಾಕ್ಷಿ, ರುಜುವಾತು, ಶೂದ್ರ ಮೊದಲಾದ ಪತ್ರಿಕೆಗಳು ಹುಟ್ಟಿಕೊಂಡವು.
ನವ್ಯ ಸಾಹಿತ್ಯ ಸಿದ್ಧಾಂತ ಮಂಡನೆ, ಆ ಕಾವ್ಯವನ್ನು ಯಾವ ರೀತಿಯಲ್ಲಿ ಅನುಸಂಧಾನ
ಮಾಡಬೇಕು ಎಂಬುದನ್ನು ವಿವರಿಸಲು ಅವು ಯತ್ನಿಸಿದವು.
ನವ್ಯೋತ್ತರ ಕಾಲದಲ್ಲಿ ಬ್ರಾಹ್ಮಣ ವಿರೋಧಿ ಭಾವನೆಯನ್ನು ಸಾಹಿತ್ಯಪತ್ರಿಕೆಗಳು
ಪ್ರತಿಪಾದಿಸಿದವು. ವ್ಯವಸ್ಥೆಯ ಎಲ್ಲ ಅನಿಷ್ಟಗಳಿಗೆ ಬ್ರಾಹ್ಮಣರೇ ಕಾರಣ ಎನ್ನುವ ರೀತಿಯಲ್ಲಿ
ಅಲ್ಲಿ ವಿಷಯ ಮಂಡನೆಯಾಗಿದೆ. ಸಂಕ್ರಮಣ ಪತ್ರಿಕೆ ಅದರಲ್ಲಿ ಪ್ರಮುಖ ಪಾತ್ರವನ್ನು
ವಹಿಸಿದೆ. ಬ್ರಾಹ್ಮಣ ವಿರೋಧಿ ನಿಲುವನ್ನು ಲಂಕೇಶ ಪತ್ರಿಕೆ ಕೂಡ ಮುಂದುವರಿಸಿತು.
ಬ್ರಾಹ್ಮಣರಿಂದ ಬ್ರಾಹ್ಮಣೇತರರಿಗೆ ಯಾವ ರೀತಿಯಲ್ಲಿ ಅನ್ಯಾಯಗಳಾಗಿವೆ ಎಂಬುದನ್ನು
ತೋರಿಸುವಂಥ ಸಾವಿರಾರು ಲೇಖನಗಳು ಸಾಹಿತ್ಯಪತ್ರಿಕೆಗಳಲ್ಲಿ ಪ್ರಕಟಗೊಂಡವು.
ಬಂಡಾಯ ಚಳವಳಿಯೊಂದಿಗೇ ಬೆಳಕಿಗೆ ಬಂದ ದಲಿತರು ತಮ್ಮದು ಪ್ರತ್ಯೇಕ
ಸಾಹಿತ್ಯ ಎಂಬುದನ್ನು ಪ್ರತಿಪಾದಿಸಿದರು. ದಲಿತ ಚಿಂತನೆಗೆ ಬೆಂಬಲ ನೀಡುವ ದಲಿತ,
ಪಂಚಮ, ಒಡಲಾಳ ಮೊದಲಾದ ಸಾಹಿತ್ಯಪತ್ರಿಕೆಗಳು ಬಂದವು.
ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಸಂದರ್ಭದಲ್ಲಿ ಪತ್ರಿಕೆಗಳು ವಹಿಸಿದ
ವಿವಿಧ ಆಯಾಮಗಳನ್ನು ಕುರಿತು ಅಧ್ಯಯನ ಮಾಡುವ ಅವಕಾಶ ಇಲ್ಲಿ ಲಭ್ಯವಾಗಿದೆ.
ಕನ್ನಡ ಸಾಹಿತ್ಯದ ಯಾವುದೇ ಕಾಲಘಟ್ಟದಲ್ಲಿ ಇಷ್ಟೊಂದು ವಿಭಿನ್ನ ಆಶಯಗಳ ನೆಲೆಯಿಂದ
ಸಾಹಿತ್ಯ ರಚನೆಯಾಗಿರಲಿಲ್ಲ. ೨೦ನೆ ಶತಮಾನದ ಅವಧಿಯಲ್ಲಿ ವೈವಿಧ್ಯಮಯವಾದ ಸಾಹಿತ್ಯ
ಪ್ರಕಾರಗಳ ರಚನೆ, ವಿಭಿನ್ನ ಆಶಯಗಳ ಪ್ರತಿಪಾದನೆ ಸಾಹಿತ್ಯದ ಮೂಲಕ ನಡೆದಿದೆ.
ಸಾಮಾಜಿಕವಾಗಿ ಸಾಹಿತ್ಯವು ನೇರವಾದ ಸಂಬಂಧವನ್ನು ಉಳಿಸಿಕೊಂಡುದು ಈ
ಶತಮಾನದ ವೈಶಿಷ್ಟ್ಯ. ಸಾಹಿತ್ಯ ಸಮಾಜ ವಿಮುಖವಾಗಿದ್ದಾಗ ಅದನ್ನು ಮತ್ತೆ ಎಚ್ಚರಿಸಿ
ಸಮಾಜಮುಖಿಯಾಗಿಸುವ ಪ್ರಕ್ರಿಯೆ ಈ ಶತಮಾನದುದ್ದಕ್ಕೂ ನಡೆದಿದೆ. ಸಾಹಿತ್ಯ
ರಚನೆಯನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿಗಳನ್ನು ಪತ್ರಿಕೆಗಳು ವಹಿಸಿಕೊಂಡಂತೆ
ಧ್ವನಿಯೆತ್ತಿವೆ. ಸಾರ್ವಜನಿಕವಾಗಿ ಸಾಹಿತ್ಯದ ಅಭಿಪ್ರಾಯಗಳ ಕ್ರೋಡೀಕರಣವನ್ನು
ಪತ್ರಿಕೆಗಳು ಮಾಡಿವೆ. ಇವುಗಳ ಮೂಲಕ ಜನಾಭಿಪ್ರಾಯಗಳು ಪ್ರಕಟವಾಗಿ ಸಾಹಿತ್ಯದಲ್ಲಿ
ನಿರ್ದಿಷ್ಟವಾದ ಧೋರಣೆಗಳ ಸಮರ್ಥನೆ ಅಥವಾ ಖಂಡನೆ ಸಾಧ್ಯವಾಗಿದೆ. ಸಾಹಿತ್ಯವು
ಜನರ ಮನಸ್ಸಿನ ಪ್ರತಿಛಾಯೆಯಾಗಿಯೇ ರೂಪುಗೊಂಡು ಸಮಾಜವನ್ನು ಪ್ರಗತಿಪರವಾಗಿ
ಚಿಂತಿಸುವಂತೆ ಮಾಡಿದೆ. ಪ್ರಗತಿಪರವಾದ ನಿಲುವುಗಳನ್ನು ಪ್ರೇರಿಸುವಲ್ಲಿ ಪತ್ರಿಕೆಗಳ ಕಾಳಜಿ
ಇಪ್ಪತ್ತನೆ ಶತಮಾನದ ಒಂದು ಬಹುಮುಖ್ಯ ಪ್ರವೃತ್ತಿಯೆನಿಸಿದೆ. ಇದು ಒಂದು ರೀತಿಯಲ್ಲಿ ಆರೋಗ್ಯಕರವಾದ ಪ್ರವೃತ್ತಿಯೇ ಹೌದು.


ಪರಾಮರ್ಶನ ಗ್ರಂಥಗಳು:

೧)ಅ.ನ.ಕೃ., ೧೯೯೪ (ಮ.ಮು) ಕನ್ನಡ ಕುಲರಸಿಕರು, ಕರ್ನಾಟಕ ಬುಕ್ ಏಜನ್ಸಿ, ಬೆಂಗಳೂರು
೨)ಅನಂತರಂಗಾಚಾರ ಎನ್. (ಎಂ.ಎ., ಬಿ.ಟಿ.) ೧೯೭೦ ಸಾಹಿತ್ಯ ಭಾರತೀ, ಪ್ರಸಾರಾಂಗ, ಮೈಸೂರು
ವಿಶ್ವವಿದ್ಯಾಲಯ
೩)ಅನಂತನಾರಾಯಣ ಎಸ್. ೧೯೬೨, ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ,ಗಂಗಾತರಂಗ ಮೈಸೂರು.
೪)ಕನ್ನಡ ಗ್ರಂಥಸೂಚಿ, ಸಂ.೩, ೧೯೭೪ (ಸಂ) ಜವರೇಗೌಡ, ಪ್ರಸಾರಾಂಗ ಮೈಸೂರು ವಿ.ವಿ.
೫)ಕುಲಕರ್ಣಿ ಶೇ.ಗೋ. – ನಾನು ಕಂಡ ಗೆಳೆಯರ ಗುಂಪು
೬)ಕುರ್ತಕೋಟಿ ಕೀರ್ತಿನಾಥ, ೧೯೬೨ ಯುಗಧರ್ಮ ಮತ್ತು ಕನ್ನಡ ಸಾಹಿತ್ಯ, ಮನೋಹರ ಗ್ರಂಥಮಾಲೆ, ಧಾರವಾಡ.
೭)ಕುವೆಂಪು- ೧೯೭೬ ವಿಚಾರ ಕ್ರಾಂತಿಗೆ ಆಹ್ವಾನ, ಉದಯರವಿ ಪ್ರಕಾಶನ, ಮೈಸೂರು.
೮)ಕೆರೂರು ವಾಸುದೇವಾಚಾರ್ಯ, ೧೯೮೪ (ಮ.ಮು) ಇಂದಿರಾ, ಉಷಾ ಸಾಹಿತ್ಯ ಮಾಲೆ, ಮೈಸೂರು.
೯)ಕೋದಂಡರಾಮ ಎನ್.ಕೆ.(ಡಾ.) ೧೯೯೬ ಕನ್ನಡ ಕಥಾ ಸಾಹಿತ್ಯದಲ್ಲಿ ಸಾಂಸ್ಕೃತಿಕ ಸಂಘರ್ಷ, ಗಾಯತ್ರಿ ಸ್ಮಾರಕ ಗ್ರಂಥಮಾಲೆ, ಮೈಸೂರು.
೧೦) ಗುಲ್ವಾಡಿ ವೆಂಕಟರಾವ್, (೧೯೬೨) ದ್ವಿ.ಮು. ಇಂದಿರಾಬಾಯಿ, ಕನ್ನಡ ಪ್ರಪಂಚ ಪ್ರಕಾಶನ, ಕದ್ರಿ,
ಮಂಗಳೂರು.
೧೧)ಗೋಕಾಕ ವಿ.ಕೃ. ೧೯೪೪ ಸಾಹಿತ್ಯದಲ್ಲಿ ಪ್ರಗತಿ.
೧೨)ಚಂದ್ರಶೇಖರ ಬಿ.ಎಸ್.೧೯೭೬, ಸಮೂಹ ಮಾಧ್ಯಮಗಳು, ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿ.ವಿ.
೧೩)ಜವರಯ್ಯ ಮ.ನ.(ಡಾ.) ೧೯೯೪ ಪರಂಪರೆ ಹಾಗೂ ದಲಿತ ಬಂಡಾಯ ಸಾಹಿತ್ಯ ಸಮಗ್ರ ಅಧ್ಯಯನ, ಸಿದ್ಧಾರ್ಥ ಗ್ರಂಥಮಾಲೆ, ಮೈಸೂರು.
೧೪)ಡಿವಿಜಿ- ೧೯೬೮, ವೃತ್ತಪತ್ರಿಕೆ, ಕಾವ್ಯಾಲಯ, ಮೈಸೂರು
೧೫)ಧಾರವಾಡಕರ ( ಡಾ.) ರಾ.ಯ. ೧೯೭೫, ಹೊಸಗನ್ನಡ ಸಾಹಿತ್ಯದ ಉದಯಕಾಲ, ಪ್ರಸಾರಾಂಗ, ಕವಿವಿ, ಧಾರವಾಡ.
೧೬)ದೇಜಗೌ, ಸಿಪಿಕೆ (ಸಂ) ೧೯೬೯ ಕಟ್ಟಿಮನಿ ಬದುಕು ಬರೆಹ- ಅಭಿನಂದನ ಗ್ರಂಥ, ಗೀತಾ ಬುಕ್ ಹೌಸ್ ಮೈಸೂರು.
೧೭)ತಟ್ಟಿ ವಲ್ಲಭ ಮಹಾಲಿಂಗ, ೧೯೯೪ (ದ್ವಿ.ಮು) ಕನ್ನಡಿಗರ ಜನ್ಮಸಾರ್ಥಕತೆ, ವಿದ್ಯಾವರ್ಧಕ ಸಂಘ,
ಧಾರವಾಡ.
೧೮)ನಾಗರಾಜ ಡಿ.ಆರ್. ೧೯೮೩ ಅಮೃತ ಮತ್ತು ಗರುಡ, ಪುಸ್ತಕ ಚಂದನ, ಬೆಂಗಳೂರು.
೧೯)ನಾಗರಾಜ ಡಿ.ಆರ್. ೧೯೮೭ ಶಕ್ತಿ ಶಾರದೆಯ ಮೇಳ, ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ
೨೦)ನಾಡಿಗ ಕೃಷ್ಣಮೂರ್ತಿ, ೧೯೫೯, ಪತ್ರಿಕೋದ್ಯಮ ಶಾಸ್ತ್ರ, ಪ್ರಸಾರಾಂಗ, ಮೈಸೂರು ವಿ.ವಿ. ಮೈಸೂರು
೨೧)ನಾಯಕ ಹಾ.ಮಾ., ತಿಪ್ಪೇರುದ್ರಸ್ವಾಮಿ, (ಸಂ.) ೧೯೭೧,ಎ.ಆರ್.ಕೃ. ಜೀವನ, ಸಾಧನೆ , ಪ್ರಸಾರಾಂಗ, ಮೈಸೂರು ವಿ.ವಿ.
೨೨)ನಾಯಕ ಹಾ.ಮಾ., ೧೯೭೨, ಸಾಹಿತ್ಯ ಸಲ್ಲಾಪ, ಸುರುಚಿ ಪ್ರಕಾಶನ, ಮೈಸೂರು
೨೩)ನಿರಂಜನ ೧೯೮೩, ಬುದ್ಧಿ ಭಾವ ಬದುಕು, ರಶ್ಮಿ ಪಬ್ಲಿಶರ್ಸ್, ಜಯನಗರ, ಬೆಂಗಳೂರು.
೨೪)ಪುಟ್ಟಣ್ಣ ಎಂ.ಎಸ್.೧೯೨೮, ಮುಸುಗು ತೆಗೆಯೇ ಮಾಯಾಂಗನೆ
೨೫)ಬುರ್ಲಿ ಬಿಂದು ಮಾಧವ ಮತ್ತು ತಡಸ ಅನಂತ, ೧೯೬೦. ಆನಂದಕಂದ, ಮಿಂಚಿನಬಳ್ಳಿ ಪ್ರಕಾಶನ, ಧಾರವಾಡ.
೨೬) ಬೇಂದ್ರೆ ದ.ರಾ. ೧೯೭೪, ಸಾಹಿತ್ಯದ ವಿರಾಟ್ ಸ್ವರೂಪ,
೨೭)ಮಣಿಪಾಲ ಆರ್ಕೆ, ೧೯೮೮, ಸಾಹಿತ್ಯ- ಆಶಯ ಮತ್ತು ವಿನ್ಯಾಸ, ಸಂಕ್ರಮಣ ಪ್ರಕಾಶನ, ಧಾರವಾಡ
೨೮)ಮಾಲಗತ್ತಿ ಅರವಿಂದ ೧೯೯೩, ಕನ್ನಡ ಸಾಹಿತ್ಯದಲ್ಲಿ ಅಸ್ಪೃಶ್ಯತೆಯ ಪರಿಕಲ್ಪನೆ,
೨೯)ಮಾಸ್ತಿ ವೆಂಕಟೇಶ ಅಯ್ಯಂಗಾರ್, ೧೯೬೭, ಜೀವನ ಸಂಪಾದಕೀಯ -೨, ಜೀವನ ಕಾಯಾಲಯ,
ಬೆಂಗಳೂರು
೩೦)ಮುಗಳಿ ರಂ.ಶ್ರೀ. ೧೯೭೧, ಕನ್ನಡ ಸಾಹಿತ್ಯ ಚರಿತ್ರೆ, ಉಷಾ ಸಾಹಿತ್ಯ ಮಾಲೆ ಮೈಸೂರು
೩೧)ಮುತ್ತಣ್ಣ ಐ.ಮಾ., ೧೯೬೯, ೧೯ನೆ ಶ.ಮಾ.ದಲ್ಲಿ ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ
೩೨)ಮುತ್ತಣ್ಣ ಐ.ಮಾ., ೧೯೮೭, ಭಾರತ ಸಾಹಿತ್ಯ ಸಂಸ್ಕೃತಿಗೆ ಪಾಶ್ಚಾತ್ಯ ವಿದ್ವಾಂಸರ ಸೇವೆ ಭಾಗ-೧
೩೩)ಮುದಗಲ್ ಪ್ರಹ್ಲಾದ (ಡಾ.) ೧೯೯೩ ಕೆರೂರು ವಾಸುದೇವಾಚಾರ್ಯರು, ಮುಂಬಯಿ
ವಿಶ್ವವಿದ್ಯಾನಿಲಯ ಮುಂಬಯಿ,
೩೪)ರಹಮತ ತರಿಕೆರೆ ( ಡಾ.) ೧೯೯೬ ಮರದೊಳಗಣ ಕಿಚ್ಚು, ಕನ್ನಡ ವಿ.ವಿ. ಹಂಪಿ.
೩೫) ರೊದ್ದ ವ್ಯಾಸರಾವ, ೧೯೯೮,ಚಂದ್ರಮುಖಿಯ ಘಾತವು, ಮನೋಹರ ಗ್ರಂಥಮಾಲಾ, ಧಾರವಾಡ
೩೬)ರಂಗನಾಥನ್ ಮಾವಿನಕೆರೆ (ಸಂ) ೧೯೮೭ ಮಾಸ್ತಿ ಅವರ ಸಮಗ್ರ ಕತೆಗಳು, ಸಂಪುಟ ೧, ಪುರೋಗಾಮಿ, ಬೆಂಗಳೂರು.
೩೭)ವಸಂತಲಕ್ಷ್ಮಿ ಕೋ., (ಡಾ.) ವಿಶ್ವಕರ್ನಾಟಕದ ತಿ.ತಾ.ಶರ್ಮರು,
೩೮)ವಿವೇಕ ರೈ (ಡಾ.) ಸಂ.೧೯೮೯ ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು- ಮಂಗಳೂರು ವಿ.ವಿ.
ಪ್ರಕಟಣೆ,
೩೯) ವಿವಿಧ ಲೇಖಕರು, ೧೯೯೩, ಕನ್ನಡ ಸಾಹಿತ್ಯ ಪತ್ರಿಕೆಗಳು: ಇತಿಹಾಸ, ವರ್ತಮಾನ ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು,
೪೦)ವಿವಿಧ ಲೇಖಕರು ೧೯೯೩ ಕನ್ನಡ ಸಾಹಿತ್ಯದಲ್ಲಿ ಅಸ್ಪೃಶ್ಯತೆಯ ಪರಿಕಲ್ಪನೆ, ಕ.ಸಾ.ಅ. ಬೆಂಗಳೂರು.
೪೧)ವಿವಿಧ ಲೇಖಕರು, ೨೦೦೦, ನವೋದಯ ಕಾವ್ಯ- ಮಂಗಳೂರು ಕೇಂದ್ರ, ಕ.ಸಾ.ಅ. ಬೆಂಗಳೂರು
೪೨)ವಿವಿಧ ಲೇಖಕರು, ೧೯೭೧ಚಿನ್ನದ ಗರಿ- ಪ್ರಸಾರಾಂಗ, ಮೈಸೂರು ವಿ.ವಿ.
೪೩)ವಿವಿಧ ಲೇಖಕರು, ೧೯೮೮,ರಾಷ್ಟ್ರೀಯತೆ ಮತ್ತು ಆಧುನಿಕ ಕನ್ನಡ ಸಾಹಿತ್ಯ, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು.
೪೪)ಶಿವರುದ್ರಪ್ಪ ಜಿ.ಎಸ್. (ಸಂ) ೧೯೮೯, ಕನ್ನಡ ಸಾಹಿತ್ಯ ಮತ್ತು ಪ್ರತಿಭಟನೆ, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು.
೪೫)ಸರಜೂ ಕಾಟ್ಕರ್ (ಡಾ.) ೧೯೯೬, ಕನ್ನಡ ಮರಾಠಿ ದಲಿತ ಸಾಹಿತ್ಯ, ವಿಮೋಚನಾ ಪ್ರಕಾಶನ, ಅಥಣಿ.
೪೬)ಹಾವನೂರ ಶ್ರೀನಿವಾಸ (ಡಾ.) ೧೯೬೮, ಹೊಸಗನ್ನಡದ ಅರುಣೋದಯ, ಮೈಸೂರು ವಿ.ವಿ.
೪೬)ಹಿಂಗಮಿರೆ ಬುದ್ಧಣ್ಣ, ೧೯೭೬, ಹೊಸಕಾವ್ಯ ಹೊಸ ದಿಕ್ಕು, ಯುಗಧ್ವನಿ ಪ್ರಕಾಶನ ಧಾರವಾಡ
ಪತ್ರಿಕೆಗಳು:
೧) ಅನಿಕೇತನ, ೨) ಅನ್ವೇಷಣೆ, ೩)ಅಂಕಣ, ೪) ಆಂದೋಲನ, ೫) ಅಂತರ, ೬) ಆಲೋಕ, ೭) ಉದಯ
ಭಾರತ, ೮)ಒಡಲಾಳ- ಕೈ ಬರೆಹದ ಪತ್ರಿಕೆ, ೯) ಕರ್ನಾಟಕ ಭಾರತಿ, ೧೦)ಕರ್ನಾಟಕ ಸಾಹಿತ್ಯ ಪರಿಷತ್ಪತ್ರಿಕೆ, ೧೧)ಕನ್ನಡ ನುಡಿ, ೧೨)ಕರ್ನಾಟಕ ನಂದಿನಿ, ೧೩)ಕನ್ನಡಪ್ರಭ, ೧೪)ಗಾಂಧಿಬಜಾರ್, ೧೫)ಜಯಕರ್ನಾಟಕ, ೧೬)ಜಯಂತಿ, ೧೭)ಜನಪ್ರಗತಿ, ೧೮)ಜೀವನ , ೧೯)ದಲಿತ, ೨೦)ಪ್ರಬುದ್ಧ ಕರ್ನಾಟಕ, ೨೧)ಪ್ರಭಾತ, ೨೨)ಪ್ರಜಾವಾಣಿ, ೨೩) ಪಂಚಮ, ೨೪) ಮಧುರವಾಣಿ, ೨೫) ಬದುಕು, ೨೬)ರುಜುವಾತು, ೨೭)ವಾಗ್ಭೂಷಣ, ೨೮)ಶೂದ್ರ, ೨೯)ಶ್ರೀಕೃಷ್ಣ ಸೂಕ್ತಿ ೩೦)ಸಾಹಿತ್ಯ ಸಂವಾದ, ೩೧)ಸಾಕ್ಷಿ, ೩೨) ಸುವಾಸಿನಿ, ೩೩)ಸಂಕ್ರಮಣ, ೩೪)ಸಂಚಯ, ೩೫)ಹಿತಬೋಧಿನಿ
ಈ ಎಲ್ಲ ಪತ್ರಿಕೆಗಳ ಯಾವ ಯಾವ ಸಂಚಿಕೆಗಳನ್ನು ಬಳಸಿಕೊಳ್ಳಲಾಗಿದೆ ಎಂಬುದನ್ನು
ಅಡಿ ಟಿಪ್ಪಣಿಗಳಲ್ಲಿ ನಮೂದಿಸಲಾಗಿದೆ.