*ತೋರಿಕೆಯ ಸಂಭಾವಿತರು!
ಹೆಣ್ಣುಗಳನ್ನು ಕಂಡಾಗ ಜೊಲ್ಲು ಸುರಿಸುವ ಚಪಲಚೆನ್ನಿಗರಾಯರನ್ನು ಕಂಡಾಗ “ಅವನ ಬಗ್ಗೆ ತುಂಬಾ ಹುಷಾರು, ಅರ್ಜುನ ಸನ್ಯಾಸಿ ಅವನು” ಎಂದು ಹಿಂದುಗಡೆಯಿಂದ ಅವನ ಬಗ್ಗೆ ಎಚ್ಚರಿಕೆಯನ್ನು ನೀಡುವುದಿದೆ. ಶ್ರೀಕೃಷ್ಣನ ಕತೆ, ಮಹಾಭಾರತದ ಕತೆ ಗೊತ್ತಿದ್ದವರಿಗೆ ಈ ಅರ್ಜುನ ಸನ್ಯಾಸಿಯ ಪರಿಚಯ ಇದ್ದೇ ಇರುತ್ತದೆ.
ಪಾಂಡವರು ಇಂದ್ರಪ್ರಸ್ಥದಲ್ಲಿ ರಾಜ್ಯವಾಳುತ್ತಿದ್ದರು. ರಾಕ್ಷಸನೊಬ್ಬ ರಾತ್ರಿ ವೇಳೆ ಬಂದು ತುಂಬಾ ಉಪಟಳವನ್ನು ನೀಡುತ್ತಿದ್ದಾಗ ಅವನನ್ನು ಕೊಲ್ಲಲು ಅರ್ಜುವ ತನ್ನ ಗಾಂಡೀವವನ್ನು ಹುಡುಕುತ್ತಾನೆ. ಅದು ಅಂತಃಪುರದಲ್ಲಿ ಇರುತ್ತದೆ. ಈ ಸಮಯದಲ್ಲಿ ಧರ್ಮರಾಯ ಮತ್ತು ದ್ರೌಪದಿ ಏಕಾಂತದಲ್ಲಿರುತ್ತಾರೆ. ಅನಿವಾರ್ಯವಾಗಿ ಆತ ಅಂತಃಪುರವನ್ನು ಪ್ರವೇಶಿಸುತ್ತಾನೆ. ಇದು ಸಹೋದರರು ಪರಸ್ಪರ ಮಾಡಿಕೊಂಡ ಒಪ್ಪಂದದ ಉಲ್ಲಂಘನೆಯಾಗುತ್ತದೆ. ಇದರಿಂದ ಅರ್ಜುನ ತೀರ್ಥಯಾತ್ರೆಗೆ ಹೋಗಬೇಕಾಗುತ್ತದೆ.
ಹಾಗೆ ಹೋದಾಗ ಆತ ದ್ವಾರಕೆಗೂ ಭೇಟಿ ನೀಡುತ್ತಾನೆ. ಅಲ್ಲಿ ಕೃಷ್ಣನ ತಂಗಿ ಸುಭದ್ರೆಯನ್ನು ಕಂಡು ಮೋಹಿಸುತ್ತಾನೆ. ಕೃಷ್ಣನಿಗೆ ಸುಭದ್ರೆಯನ್ನು ಅರ್ಜುನನಿಗೆ ಕೊಟ್ಟು ಮದುವೆ ಮಾಡಬೇಕು ಎಂಬ ಇಚ್ಛೆ. ಆದರೆ ಬಲರಾಮನಿಗೆ ಆಕೆಯನ್ನು ಕೌರವರಿಗೆ ಕೊಟ್ಟು ಮದುವೆ ಮಾಡಬೇಕು ಎಂಬ ಮನಸ್ಸು. ಕೃಷ್ಣನಿಗೆ ಅದು ಇಷ್ಟವಿಲ್ಲ. ಈ ಸಂಬಂಧ ರಾಜಕೀಯವಾಗಿಯೂ ಮಹತ್ವದ ಪರಿಣಾಮ ಬೀರುವಂಥದ್ದಾಗಿತ್ತು.
ಕೃಷ್ಣನ ಸೂಚನೆಯ ಮೇರೆಗೆ ಅರ್ಜುನ ಸನ್ಯಾಸಿಯ ವೇಷ ತಳೆದು ದ್ವಾರಕೆಯ ಅರಮನೆಯನ್ನು ಪ್ರವೇಶಿಸುತ್ತಾನೆ. ತನ್ನ ಪೂಜಾ ಕಾರ್ಯದಲ್ಲಿ ಸೇವೆಯನ್ನು ಒದಗಿಸಿದ ಸುಭದ್ರೆಯನ್ನು ಅವನು ಮರಳು ಮಾಡಿ ಅಪಹರಿಸುತ್ತಾನೆ.
ಹೀಗೆ, ಸನ್ಯಾಸಿಯ ರೂಪದಲ್ಲಿ ಬಂದು ಹೆಣ್ಣನ್ನು ಅಪಹರಿಸಿದ ಅರ್ಜುನ ಪುರಾಣದಲ್ಲಿ ಪ್ರಸಿದ್ಧನಾಗಿದ್ದಾನೆ. ಕೆಲವರು ತೋರಿಕೆಗೆ ಸಂಭಾವಿತರಂತೆ ಕಾಣಿಸಿಕೊಂಡರೂ ಆಂತರ್ಯದಲ್ಲಿ ಹಾಗೆ ಇರುವುದಿಲ್ಲ ಎನ್ನುವುದನ್ನು ಹೇಳುವುದಕ್ಕೆ ಅರ್ಜುನನ ರೂಪಕವನ್ನು ಕೊಡುತ್ತಾರೆ.
ನಿಮ್ಮ ಮೇಲ್ಕಂಡ “ಅರ್ಜುನ ಸನ್ಯಾಸಿ” ವಿಷಯ
ವನ್ನು ಚೆನ್ನಾಗಿ ನಿರೂಪಿಸಿದ್ದೀರಿ. ಅಚ್ಚುಕಟ್ಟಾಗಿ
ಬಂದಿದೆ. ಅನಾವಶ್ಯಕವಾದ ಗೊಂದಲ, ವಿವರಣೆ
ಇಲ್ಲ.
ಧನ್ಯವಾದಗಳು.
ಡಾ. ಎಂ ಜೆ ಸುಬ್ರಹ್ಮಣ್ಯಂ
ಧನ್ಯವಾದಗಳು