ಹೆಸರಿಲ್ಲದವನು ಹೆಸರುವಾಸಿಯಾಗಿದ್ದು

ನಾನು ಈ ಊರಿಗೆ ಮದುವೆಯಾಗಿ ಬಂದಾಗ ಅವನು ಸುಮಾರು ಹದಿನೈದು ವರ್ಷದವನಿರಬಹುದು. ತನ್ನ ಅಣ್ಣನ ಜೊತೆ ನಮ್ಮ ತೋಟಕ್ಕೆ ಬರುತ್ತಿದ್ದ. ಏನೋ ನಿನ್ನ ಹೆಸರು ಅಂದ್ರೆ, ನನ್ಗೆ ಹೆಸ್ರಿಲ್ಲ ಅಂತಿದ್ದ. ನಮ್ಮನೆಯ ಕೆಲಸಕ್ಕೆ ಬರುವವರೆಲ್ಲ ಅವನಿಗೆ ಗೊಂಯ ಅಂತಿದ್ದರು. ಹಾಗಂದರೆ ಏನು ಅರ್ಥ ಎಂದು ನನಗಂತೂ ಗೊತ್ತಿರಲಿಲ್ಲ. ಅವನಿಗೆ ಮಾತು ಬರುವುದಕ್ಕೆ ಸ್ವಲ್ಪ ಹೆಚ್ಚು ಸಮಯ ಹಿಡಿದಿತ್ತಂತೆ. ಮಾತು ಬರುವುದಕ್ಕೆ ಮೊದಲು ಏನಾದರೂ ಕೇಳಿದರೆ ಗೊಂಯ್ ಎಂದು ಸದ್ದು ಮಾಡುತ್ತಿದ್ದನಂತೆ. ಹೀಗಾಗಿ ಅವನಿಗೆ ಗೊಂಯ ಎಂದು ಅವನ...